(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ಕಾಲ್ಪನಿಕ ಕತೆ)
(ಕೆಲ ತಿಂಗಳ ನಂತರ..)
ನಿನ್ನ ಆಗಮನಕ್ಕೇ ಕಾಯುತ್ತಿದ್ದೆ ಸಿದ್ದ. ನಾನೇ ಹೇಳಿ ಕಳುಹಿಸಬೇಕು ಎಂದೆಣಿಸಿದ್ದೆ. ನಿನ್ನ ಕಾರ್ಯ ಮುಗಿಯುವ ಹಂತ ಬಂದಾಗ ನೀನೇ ಬರುವೆಯೆಂದು ತಿಳಿದು ಸುಮ್ಮನಾದೆ. ಹೇಳು.. ಒಪ್ಪಿಸಿದ ಕಾರ್ಯ ಏನಾಯಿತು.?
ಒಡೆಯಾ.. ಎಲ್ಲವೂ ಸಾಂಗವಾಗಿ ಆಗಿದೆ. ಎಲ್ಲಿಯೂ ವಿಘ್ನಗಳು ಬಂದಿಲ್ಲ. ನಾ ಆದೇಶಿಸಿದ ಹಾಗೆ ಎಲ್ಲಾ ಮಾಹಿತಿ ಕಲೆ ಹಾಕಿದ್ದಾರೆ. ವ್ಯಾಪಾರಿಗಳ ಮಾರುವೇಶದವರು ಮರಳಿಯಾಯಿತು. “ಅವರಿಗೆ ಮೊದಲೇ ನಿಶ್ಚಯಿಸಿದ ಹಾಗೆ ಯಥೋಚಿತ ಸತ್ಕಾರ ಮಾಡಿ ಕಳುಹಿಸಿಯಾಯಿತು”.
ಇನ್ನು ಬ್ರಾಹ್ಮಣ ಮಾರುವೇಷದವರು ಈಗತಾನೇ ತಲುಪಿದ್ದಾರೆ.
ಸಿದ್ದಾ.. ಇವರ ಬಗ್ಗೇ ಹೆಚ್ಚು ಜಾಗ್ರತೆ ಇರಬೇಕಾದದ್ದು. ಇವರ ನಡುವಳಿಕೆಯಿಂದ ಅಲ್ಲಿನವರಿಗೆ ಯಾವ ಅನುಮಾನವೇನಾದರೂ ಬಂದಿತಾ ತಿಳಿದುಕೊಳ್ಳಬೇಕಾಗಿತ್ತು.
ಇಲ್ಲ ಒಡೆಯಾ.. ಇವರ ಮೇಲೆ ಹದ್ದಿನ ಕಣ್ಣಿಡಲು ಗುಪ್ತಚರರನ್ನು ಬಿಡಲಾಗಿತ್ತು. ನಾವು ಹೇಳಿದ ಹಾಗೆ ಕೇವಲ ಯಾತ್ರಾರ್ಥಿಗಳ ಹಾಗೆ ಹೋಗಿ ನಾವು ಹೇಳಿದ ಮಾಹಿತಿ ಕಲೆಹಾಕಿ ಬಂದಿದ್ದಾರೆ.
ಒಡೆಯಾ.. ಅದರಲ್ಲಿ ಒಬ್ಬನು ಮಾತ್ರ ಮಾರ್ಗಮಧ್ಯೆ ಯಾರದ್ದೋ ಮನೆಗೆ ಹೋಗಿದ್ದನಂತೆ. ಅವನನ್ನು ಅಲ್ಲೇ ನಮ್ಮವರು ವಿಚಾರಿಸಿ ಜೊತೆಯಲ್ಲೇ ಕರೆದುತಂದಿದ್ದಾರೆ.
ಅವನು ನಾಟೀವೈದ್ಯನಂತೆ. ಹಾಗಾಗಿ ಮಾರ್ಗಮಧ್ಯೆ ತಮ್ಮ ಮಗುವಿನ ಸಲುವಾಗಿ ಪರಿತಪಿಸುತ್ತಿರುವ ಗಂಡಹೆಂಡತಿಯರನ್ನು ನೋಡಿ ಸಮಸ್ಯೆ ತಿಳಿದು ಔಷಧ ನೀಡಿದನಂತೆ. ಅವನನ್ನು ಹಿಂಬಾಲಿಸುತ್ತಿದ್ದ ನಮ್ಮವರು ಅವನಿಗೆ ಹೆಚ್ಚು ಸಮಯ ನೀಡದೆ ಅಲ್ಲಿಂದ ಕರೆತಂದಿದ್ದಾರೆ. ಹಾಗೆಯೇ ಅಲ್ಲಿ ನಿಜವಾಗಿಯೂ ಬಾಲಕನು ರೋಗದಿಂದ ನರಳುತ್ತಿದ್ದನೇ ಎಂದು ಗುಪ್ತವಾಗಿ ಪರೀಕ್ಷಿಸಿದ್ದಾರೆ. ಹೌದಂತೆ.. ಅವರ ಮಗ ಕಾಮಾಲೆಯಿಂದ ನರಳುತ್ತಿದ್ದನಂತೆ. ಎಂತಹ ವೈದ್ಯರ ಬಳಿಯಲ್ಲೂ ರೋಗ ವಾಸಿಯಾಗಿರಲಿಲ್ಲವಂತೆ. ಮರಣದ ಹಂತದಲ್ಲಿದ್ದ ಅವನಿಗೆ ಅದೆಂತದೋ ಬೇರುನಾರುಗಳನ್ನು ಕೊಟ್ಟು ಬಂದನಂತೆ ಈತ. ಇವನು ಬಂದು ಎರಡು ದಿನದಲ್ಲಿ ರೋಗ ಪೂರ್ತಿ ವಾಸಿಯಾಯಿತಂತೆ. ಇಷ್ಟೂ ಮಾಹಿತಿ ಗುಪ್ತಚರರು ನೀಡಿದ್ದು.
ಜೊತೆಗೆ ಇವನ ಊರಲ್ಲಿ ವಿಚಾರಿಸಿದಾಗ ಇವನ ಕುಲದವರು ತಲೆತಲಾಂತರದಿಂದ ಕೆಲ ರೋಗಗಳಿಗೆ ನಾರುಬೇರುಗಳ ಔಷಧಿ ನೀಡುತ್ತಾರೆಂದೂ ಅದರಿಂದ ಕೆಲವರು ಗುಣಹೊಂದಿದ್ದಾರೆಂದೂ ತಿಳಿಯಿತು.
ಜೊತೆಗೆ ಇಲ್ಲಿಗೆ ಅವನನ್ನು ಕರೆತಂದಮೇಲೆ ಮತ್ತೊಮ್ಮೆ ಅವನನ್ನು ವಿಚಾರಣೆ ಮಾಡಲು ಆದೇಶಿಸಿದ್ದೆ. ಅವನನ್ನು ಎಲ್ಲ ರೀತಿಯಲ್ಲೂ ವಿಚಾರಿಸಿ ನೋಡಿದ್ದೇವೆ. ಅವನು ಔಷಧ ನೀಡಿ ಬಂದಿದ್ದಾನೆ ಹೊರತು ತನ್ನ ಬಗ್ಗೆಯಾಗಲೀ ಅಥವಾ ಅವನು ಅಲ್ಲಿಗೆ ಹೋದ ಉದ್ದೇಶದ ಬಗ್ಗೆಯಾಗಲೀ ಏನು ಹೇಳಿಲ್ಲವೆಂದೇ ನಂಬಬಹುದು.
ಸರಿ ಮತ್ತೊಮ್ಮೆ ಇದನ್ನು ಖಚಿತಪಡಿಸಿಕೊಂಡು ನಮಗೆ ಬೇಕಾದ ಮಾಹಿತಿಗಳನ್ನೆಲ್ಲಾ ತಿಳಿದುಕೊಂಡಮೇಲೆ “ಅವರಿಗೆ ಮೊದಲೇ ನಿರ್ಧರಿಸಿದ ಹಾಗೆ ಬೀಳ್ಕೊಡುಗೆ ನೀಡಿ”.
ಆಗಲಿ ಒಡೆಯಾ.. ಇನ್ನೊಂದು ವಿಷಯ.. ನಾನೂ ಅಲ್ಲಿಗೆ ಖುದ್ದಾಗಿ ಭೇಟಿನೀಡಿ ಬಂದಿರುವೆ. ಹಲವು ಮಾಹಿತಿಗಳನ್ನು ಕಲೆಹಾಕಿದ್ದೇನೆ.
ಹೌದೇ.. ಸರಿ ಜೋಯಿಸರ ಬಳಿ ಚರ್ಚಿಸಿ ತಿಳಿಸುವೆ. ಮುಂದಿನ ಯೋಜನೆಗೆ ತಾಯಾರಾಗು.
ಅಪ್ಪಣೆ ಒಡೆಯಾ..
**************
ಜೋಯಿಸರೇ.. ನಮ್ಮ ಕಾರ್ಯಕ್ಕೆ ಬೇಕಾದ ಎಲ್ಲ ಮಾಹಿತಿ ಕಲೆಹಾಕಿದ್ದೇವೆ. ಇನ್ನು ನಮ್ಮ ಯೋಜನೆ ಕಾರ್ಯಗತಗೊಳಿಸುವುದೊಂದೇ ಬಾಕಿ ಉಳಿದದ್ದು. ಅದಕ್ಕಾಗಿ ನಿಮ್ಮ ಸಲಹೆ ಕೇಳಿ ಬಂದಿದ್ದೇವೆ.
ಯುವರಾಜರೇ.. ನೀವು ಎಂತಹ ಕಾರ್ಯವನ್ನಾದರೂ ಶೀಘ್ರವಾಗಿ, ಯಾವುದೇ ಲೋಪವಿಲ್ಲದೆಯೆ ಮಾಡಬಲ್ಲೆರು ಎಂಬುದು ನನಗೆ ತಿಳಿದಿದೆ. ಈಗ ನನ್ನಿಂದ ಯಾವ ಸಲಹೆ ಬಯಸುವಿರಾ?
ಜೋಯಿಸರೇ.. ಅಪಹರಿಸಲು ಯಾವ ದಿನ ಉತ್ತಮವೆಂದು ತಾವು ಶಾಸ್ತ್ರ ಮುಖೇನ ತಿಳಿಸಿದರೆ ನಮಗೆ ಅದು ಶ್ರೀರಕ್ಷೆಯಾಗುವುದು. ಅಪಹರಿಸಲು ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿದ್ದರೂ ಅದಕ್ಕೂ ದೈವಬಲವು ಬೇಕಲ್ಲವೇ? ಅದು ತಮ್ಮಂತಹ ಜ್ಞಾನಿಗಳಿಂದ ನಮಗೆ ತಿಳಿಯಬೇಕು.
(ಮುಂದುವರೆಯುವುದು..)
Facebook ಕಾಮೆಂಟ್ಸ್