X
    Categories: ಕಥೆ

ವಶವಾಗದ ವಂಶಿ – 7

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ನನ್ನ ಕಾಲ್ಪನಿಕ ಕತೆ)

ವಶವಾಗದ ವಂಶಿ – 6ವಶವಾಗದ ವಂಶಿ – 6

ಸಿದ್ದ.. ಜೋಯಿಸರ ಹತ್ತಿರ ಮಾತನಾಡಿಯಾಯಿತು. ನಾ ಮೊದಲೇ ಹೇಳಿದಂತೆ ಅಪಹರಿಸುವುದಕ್ಕೆ ಅವರ ವಿರೋಧವಿಲ್ಲ. ಇನ್ನೇನಿದ್ದರೂ ಅಪಹರಣವೊಂದೇ ಬಾಕಿ ಇರುವುದು. ಅದರ ಜವಾಬ್ದಾರಿ ನಿನಗೆ ಹೊರಿಸಿದ್ದೆ.

ಹೌದು ಒಡೆಯಾ.. ಎಲ್ಲದರ ಸಿದ್ಧತೆ ನಡೆದಿದೆ. ತಮ್ಮ ಆದೇಶಕ್ಕಾಗಿ ಕಾಯುತ್ತಿದ್ದೇನೆ. ಶಿವಳ್ಳಿಗೆ ಹೋಗಲು, ಅಲ್ಲಿಯ ದೇವಸ್ಥಾನವನ್ನು, ಜನರ ನಡುವಳಿಕೆಯನ್ನು, ಇನ್ನಿತರ ಅನುಕೂಲ ಅನಾನುಕೂಲಗಳನ್ನು ಸೂಕ್ಷ್ಮವಾಗಿ ಗಮನಿಸಲು ಮಾರುವೇಶದ ಪಡೆ ಸಿದ್ಧವಾಗಿದೆ.

ಒಡೆಯಾ.. ಎರಡು ಪ್ರತ್ಯೇಕ ಪಡೆ ಮಾಡಿದ್ದೇನೆ. ಒಂದು ಪಡೆ ಬ್ರಾಹ್ಮಣ ವೇಶ ಹಾಕಿ ದೇವಸ್ಥಾನದ ಕಟ್ಟಡದ ಮಾಹಿತಿ, ದೇವಾಲಯದ ಸುತ್ತಮುತ್ತಲಿನ ಪ್ರದೇಶ, ಹಬ್ಬಹರಿದಿನಗಳ ಆಚಾರಣೆ, ಕ್ರಮಗಳ ಬಗ್ಗೆ, ಯತಿಗಳ ಬಗ್ಗೆ ಮಾಹಿತಿ ಕಲೆ ಹಾಕಲು ತಯ್ಯಾರಿದೆ.

ಇನ್ನೊಂದು ಪಡೆ ಅಲ್ಲಿಯ ಜನ, ರಸ್ತೆಗಳು, ಸುತ್ತಮುತ್ತಲ ಊರುಗಳ ಸಂಪರ್ಕ, ನದಿ,ಕೆರೆ, ಕೋಟೆ ಕೊತ್ತಲ, ಮೈದಾನ, ಜನರ ಆಚಾರ ವ್ಯವಹಾರಗಳ ಬಗ್ಗೆ ತಿಳಿಯಲು ವ್ಯಾಪಾರಿಗಳ ವೇಷದಲ್ಲಿ ಹೊರಡಲು ತಯಾರಿದ್ದಾರೆ. ಒಬ್ಬರ ವಿಷಯ ಇನ್ನೊಬ್ಬರಿಗೆ ತಿಳಿದಿಲ್ಲ. ಇಬ್ಬರನ್ನೂ ಬೇರೆಬೇರೆಯಾಗಿಯೇ ಕಳುಹಿಸಲು ಯೋಚಿಸಿದ್ದೇನೆ.

ನಾವು ಕಳುಹಿಸುತ್ತಿರುವ ಉದ್ದೇಶದ ಬಗ್ಗೆ?

ಇಲ್ಲ ಒಡೆಯಾ.. ಯಾರಿಗೂ ನಮ್ಮ‌ ಉದ್ದೇಶ ತಿಳಿಯದು. ವ್ಯಾಪಾರಿಗಳ ಮಾರುವೇಶದವರಿಗೆ ದೇವಸ್ಥಾನದ ಹತ್ತಿರವೂ ಹೋಗಲು ಆದೇಶಿಸಿಲ್ಲ. ಬೇರೆ ಯಾವುದೋ ರಾಜತಾಂತ್ರಿಕ ವಿಷಯಗಳಿಗೆ ಇರಬೇಕು ಎಂದುಕೊಳ್ಳುತ್ತಾರೆ. ನಮ್ಮ ರಾಜ್ಯದ ಗಡಿಯ ಭಾಗದಿಂದ ಹಿಡಿದು ಈ ಮಾರ್ಗದಲ್ಲಿರುವ ಆಳಪರರ ರಾಜ್ಯದ ಪ್ರಮುಖ ಊರುಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅವರಿಗೆ ಹೇಳಲಾಗಿದೆ. ಜೊತೆಗೆ ಇವರು ತೆಲುಗು ರಾಜ್ಯದವರು. ಇವರ ಕಾರ್ಯವಾದ ನಂತರ ಇವರು ತಮ್ತಮ್ಮ ಊರುಗಳಿಗೆ ತೆರಳುತ್ತಾರೆ. ಕಾರ್ಯ ಮುಗಿಸಿ ಬಂದಮೇಲೆ ಇವರಿಗೆ ತಿಳಿಯದಂತೆ ಊಟದಲ್ಲಿ ನಿಧಾನವಾಗಿ ನಂಜಾಗುವ, ಕೆಲದಿನಗಳು ಕಳೆದ ಮೇಲೆ ಹಂತಹಂತವಾಗಿ ಸ್ವಲ್ಪಸ್ವಲ್ಪವೇ ಮಾರಣಾಂತಿಕವಾಗುವ, ಯಾವುದೇ ಔಷಧಿ ಮದ್ದು ಇರದ, ವಿಷಪ್ರಾಶನ ಮಾಡಲಾಗುವುದು.

ಭಲೇ ಸಿದ್ದ.. ಮೆಚ್ಚಿದ್ದೇವೆ. ಹಾಗೆಯೇ ಬ್ರಾಹ್ಮಣ ವೇಶಧಾರಿಗಳಿಗೆ?

ಒಡೆಯಾ.. ಅವರು ನಮ್ಮ ಕಾರಾಗೃಹದಲ್ಲಿರುವವರು. ಸಂಸಾರ ಸಮೇತವಾಗಿ ರಾಜ್ಯದ್ರೋಹ ಮಾಡಿದವರು. ನಾವು ಹೇಳಿದ ಕಾರ್ಯ ಯಶಸ್ವಿಯಾಗಿ ಪೂರೈಸಿದರೆ ಇಬ್ಬರನ್ನೂ ಬಿಡುತ್ತೇವೆಂದು ಆಮಿಶ ಒಡ್ಡಿ, ಹೆಂಡತಿಯರನ್ನು ಒತ್ತೆಯಾಳಾಗಿರಿಸಿಕೊಂಡು ಗಂಡಂದಿರನ್ನು ಈ ಕಾರ್ಯಕ್ಕೆ ನೇಮಿಸಿದ್ದೇನೆ. ಇಷ್ಟು ದಿನ ಕಾರಾಗೃಹದಲ್ಲಿ ನೀಡಿದ ಶಿಕ್ಷೆಗಳಿಂದ ಮುಕ್ತಿ ದೊರೆತರೆ ಸಾಕು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೂ ಮೀರಿ ಅಲ್ಲೇ ತಪ್ಪಸಿಕೊಳ್ಳಲು ಪ್ರಯತ್ನಪಟ್ಟರೆ ಅವರ ಮೇಲೆ ಕಣ್ಣಿಡಲು ಗುಪ್ತಚರರನ್ನು ನೇಮಿಸಿದ್ದೇನೆ. ಹಾಗೇನಾದರು ಅವರು ಪ್ರಯತ್ನ ಪಟ್ಟರೆ ಅಲ್ಲೇ ಅವರನ್ನು ಕಣ್ಮರೆ ಮಾಡುವರು. ಹೇಗಿದ್ದರೂ ಅವರು ರಾಜದ್ರೋಹದ ಅಡಿಯಲ್ಲಿ ಶಿಕ್ಷೆ ಅನುಭವಿಸುತ್ತಿರುವವರಾದ್ದರಿಂದ ವಾಪಾಸು ಬಂದಮೇಲೂ ಸಂಸಾರ ಸಮೇತ ಶಾಶ್ವತವಾಗಿ ಕಣ್ಮರೆಯಾಗುತ್ತಾರೆ.

ಮೆಚ್ಚಿದೆ ಸಿದ್ದ ನಿನ್ನ ಬುದ್ಧಿವಂತಿಕೆಗೆ. ಭಲೇ..

ಒಡೆಯಾ.. ಇವರುಗಳು ಕೇವಲ ಮಾಹಿತಿ ಸಂಗ್ರಹಿಸುತ್ತಾರೆ. ಇವರಿಂದ ಸಂಗ್ರಹವಾದ ಮಾಹಿತಿ ದೊರಕಿದ ನಂತರ ನಾನೂ ಒಮ್ಮೆ ಮಾರುವೇಷದಲ್ಲಿ ಹೋಗಿ ಮಾಹಿತಿಯಲ್ಲಿ ನೈಜಾಂಶವಿದೆಯೇ ಎಂದು ಖುದ್ದಾಗಿ ಪರೀಕ್ಷಿಸಿ ಬರುತ್ತೇನೆ. ಈ ಎಲ್ಲದಕ್ಕೂ ಬೇಕಿರುವ ನಿಮ್ಮ ಅನುಮತಿಗಷ್ಟೇ ಕಾಯುತ್ತಿದ್ದೇನೆ.

ಹೂಂ..ಖಂಡಿತವಾಗಿಯೂ ಆದಷ್ಟು ಶೀಘ್ರವಾಗಿ ಕಾರ್ಯ ಆರಂಭಿಸು. ಆದರೆ ಜಾಗ್ರತೆ. ಈ ಕಾರ್ಯ ಎಲ್ಲಿಯೂ ಬಹಿರಂಗವಾಗಕೂಡದು. ಗೌಪ್ಯತೆ ಕಾಪಾಡಲು ಯಾವ ನಿರ್ಧಾರ ತೆಗೆದುಕೊಂಡರೂ ಸರಿ. ವಿವೇಚನೆ ಮಾಡಿ ಕೆಲಸ ಮಾಡು.

ಸರಿ ಒಡೆಯಾ ಬರುತ್ತೇನೆ.

(ಮುಂದುವರೆಯುವುದು..)

Facebook ಕಾಮೆಂಟ್ಸ್

Vikram Jois:
Related Post