X

ಹಳ್ಳಿಜೀವನದಲ್ಲಿದೆ ನಿತ್ಯ ಪರಿಸರ ದಿನ

ಚುಮು ಚುಮು ಬೆಳಗು,  ಹಕ್ಕಿಗಳ ಕಲರವ, ದೂರದಲ್ಲಿ ನವಿಲ ಕೂಗು, ಮರಕುಟಿಗ ಹಕ್ಕಿಯ ಕುಟು ಕುಟು ಸದ್ದು.  ಅಂಬಾ ಎಂದು ಕರೆಯುವ ಹಸು. ಮತ್ಯಾವ ಸದ್ದೂ ಅಲ್ಲಿಲ್ಲ.  ಪ್ರತಿದಿನ ಏಳುವಾಗ ಇವಿಷ್ಟೇ ನನ್ನ ಕಿವಿಗೆ ಬೀಳುವ ಶಬ್ದಗಳಾಗಿತ್ತು. ಹೌದು.  ಊರಿಗೆ ಬಂದು ಒಂದು ವಾರವಷ್ಟೇ ಆಗಿತ್ತು.  ಅಲ್ಲಿ ಇರುವಷ್ಟೂ ದಿನ ಬೆಳಗಿನ ವಾಯು ವಿಹಾರ ಒಂಟಿ ಪಯಣಿಗನ ಚಾರಣದಂತಿತ್ತು.  ಭಯ ಎನ್ನುವುದು ನನ್ನ ಹತ್ತಿರ ಸುಳಿಯಲೇ ಇಲ್ಲ.  ಬೆಳಗಾಗುವುದನ್ನೇ ಕಾಯುತ್ತಿತ್ತು ನನ್ನ ಮನ.  ರವಿ ತನ್ನ ತಾಣದಲ್ಲಿ ಮೂಡುವ ಮೊದಲೇ ಎದ್ದು ರೆಡಿಯಾಗುತ್ತಿದ್ದೆ ದಿನವೂ ಒಂದೊಂದು ದಿಕ್ಕಿಗೆ ಸಾಗಿ ಸುತ್ತಾಡಿ ಬರಲು.

ಚಿಕ್ಕವಳಿರುವಾಗ ಮನಸೋ ಇಚ್ಛೆ ಗುಡ್ಡ-ಬೆಟ್ಟ ಹತ್ತಿ ಇಳಿದು ಸ್ನೇಹಿತರ ಜೊತೆ ಕುಣಿದು ಕುಪ್ಪಳಿಸಿದ ಜಾಗಗಳಲ್ಲವೇ?  ಒಬ್ಬಳೇ ಆ ಒಣಗಿದ ಎಲೆಗಳ ನಡುವೆ ಸರಪರ ಸದ್ದು ಕಾಲ್ನಡಿಗೆ ನಾನು ಬರುತ್ತಿರುವ ಸೂಚನೆ ನೀಡುತ್ತ “ಅದೋ ಆ ಅದೇ ಗಿಡ ಮರವಾಗಿದೆ ತನ್ನ ಸುತ್ತ ಬೀಜ ಬಿತ್ತಿ ಮತ್ತಷ್ಟು ಸಂತಾನ ಬೆಳೆಸಿದೆ”  ಖುಷಿ.   ಎಲ್ಲಿ ನೋಡಿದರಲ್ಲಿ ಪುಟ್ಟ, ಸ್ವಲ್ಪ ದೊಡ್ಡ, ದೊಡ್ಡ ಹೀಗೆ ಹಲವಾರು ಗಿಡಗಳು ಸೊಂಪಾಗಿ ಬೆಳೆದು ನಿಂತು ಸುತ್ತ ಚಂದದ ರಾಶಿಯನ್ನೇ ಚೆಲ್ಲಿವೆ.  ಹೇಗೆ ವರ್ಣಿಸಲಿ ಅದರ ಅಂದವಾ?

ನನ್ನೂರು ಕಲ್ಮನೆ ಅಡಿಕೆ ತೆಂಗುಗಳ ಬೀಡು; ನಾಲ್ಕೈದು ಮನೆಗಳ ಪುಟ್ಟ ಹಳ್ಳಿ.  ಎಲ್ಲಾ ಆಧುನಿಕ ಸವಲತ್ತುಗಳು ಎಲ್ಲರ ಮನೆಯಲ್ಲಿ ಇವೆ.  ದೊಡ್ಡ ದೊಡ್ಡ ಹೆಂಚಿನ ಮನೆಗಳು.  ಕನಿಷ್ಠ ಎಂದರೂ ಐವತ್ತು ವರ್ಷದ ಹಿಂದಿನ ಮನೆಗಳೇ. ಸುಂದರವಾದ ಕೆತ್ತನೆಯ ಮರದ ಕುಸುರಿ ಪ್ರತಿ ಮನೆಯಲ್ಲೂ ಕಾಣಬಹುದು.  ಆಗಿನ ಕಾಲವೇ ಹಾಗಿತ್ತು.  ಮಣ್ಣಿನ ಗೋಡೆ,ಮಿಕ್ಕೆಲ್ಲ ಗಟ್ಟಿ ಮರದ ಕೆತ್ತನೆಯ ಆಸರೆ.  ಯಾರ ಮನೆ ಒಳಗೆ ಕಾಲಿಟ್ಟರೂ ಸಾಕು ಹಾಯ್! ಅನ್ನುವಷ್ಟು ಸದಾ ತಂಪು ವಾತಾವರಣ. ಸಿಟಿಯಂತೆ ಕಸ, ಶಬ್ದ ಮಾಲಿನ್ಯ ಯಾವುದೂ ಇಲ್ಲ.  ಉರುವಲಿಗೆ,ಹಸುಗಳ ಕೊಟ್ಟಿಗೆಗೆ ಮೊದಲೆಲ್ಲ ಸದಾ ಗಿಡ ಮರಗಳನ್ನು ಕಡಿಯುತ್ತಿದ್ದರು.  ಆದರೆ ಈಗ ಗೋಬರ್ ಗ್ಯಾಸ್ ಎಲ್ಲಾ ಮನೆಯಲ್ಲಿ.  ಜೊತೆಗೆ ಸಿಲಿಂಡರ್ ಗ್ಯಾಸ್ ಕೂಡಾ ಇದೆ.  ಹಸುವಿನ ಕೊಟ್ಟಿಗೆ ಮೊದಲಿನಂತೆ ಮಣ್ಣು ಇಲ್ಲ, ಎಲ್ಲಾ ಸಿಮೆಂಟ್ ಮಯ.  ಹಸಿ ಸೊಪ್ಪು ದಿನವೂ ತಂದು ಕೊಟ್ಟಿಗೆಗೆ ಹಾಸಿ ದನಗಳಿಗೆ ಮಲಗಲು ಅನುವು ಮಾಡಿಕೊಡುತ್ತಿದ್ದರು.  ಈಗ ಸಿಮೆಂಟ್ ನೆಲ ಹಾಸು ಆಗಿರೋದರಿಂದ ಆಗಾಗ ಸಗಣಿ ಬಾಚಿ ನೀರಿಂದ ತೊಳೆಯುವ ಪದ್ಧತಿ ರೂಢಿಯಾಗಿದೆ.  ಹೀಗಾಗಿ ಅರಣ್ಯ ಅಡಿಕೆ ತೋಟದ ಸುತ್ತಮುತ್ತ ತನ್ನಷ್ಟಕ್ಕೇ ಬೆಳೆಯುತ್ತಿದೆ.

ಇನ್ನು ಮನೆಯಲ್ಲಿ ಉತ್ಪನ್ನವಾಗುವ ಹಸಿ ಕಸ ಗೊಬ್ಬರದ ಗುಂಡಿ ಸೇರಿದರೆ ಒಣ ಕಸ ಹಂಡೆಯ ಒಲೆಯ ಉರುವಲಾಗಿ ಬಳಸುತ್ತಾರೆ.  ಅಲ್ಲಿ ಕೂಡಾ ಸಿಟಿಯಂತೆ ಪ್ಲಾಸ್ಟಿಕ್ ಅದೂ ಇದೂ ಹಳೆಯ ಸಾಮಾನುಗಳನ್ನು ಖರೀದಿಸಲು ಮನೆ ಬಾಗಿಲಿಗೆ ಬರುತ್ತಾರೆ.  ಹಾಗಾಗಿ ಅಲ್ಲಿಯ ಜನ ಒಂದು ಕಡೆ ಇಂತಹ ಸಾಮಾನುಗಳನ್ನು ಪೇರಿಸಿಟ್ಟಿರುತ್ತಾರೆ. ಊರಲ್ಲಿ ಯಾವುದೇ ಬೆಕ್ಕು, ನಾಯಿ, ಹಸು,ಎಮ್ಮೆ ಸತ್ತರೂ ಅವುಗಳನ್ನು ದೂರದಲ್ಲಿ ಹೊಂಡ ತೋಡಿ ಹೂಳುತ್ತಾರೆ.

ಊರ ಕೊನೆಯಲ್ಲಿ ಒಂದು ಸ್ವಲ್ಪ ವಿಸ್ತೀರ್ಣದ ಜಾಗ ರಸ್ತೆಯ ಪಕ್ಕ.  ಊರವರೆಲ್ಲ ಅಲ್ಲಿ ತಂದು ಹಾಕುವ ಒಂದಷ್ಟು ಉರುವಲು ಕಸ ಅಕ್ಕ ಪಕ್ಕ ಎಲ್ಲ ಗುಡಿಸಿ ಒಂದಷ್ಟು ಮಣ್ಣು ಅದರ ಮೇಲೆ ಹಾಕಿ ಆಗಾಗ ಬೆಂಕಿ ಹಾಕುತ್ತಾರೆ.  ಅಲ್ಲಿ ಸುಡು ಮಣ್ಣು ತಯಾರಾಗುತ್ತದೆ.  ಊರ ಮಂದಿ ತಮಗೆ ಬೇಕಾದಷ್ಟು ತಮ್ಮ ಗದ್ದೆ ತೋಟಕ್ಕೆ ಸುರುವಿಕೊಳ್ಳುತ್ತಾರೆ.  ಇದು ಫಲವತ್ತಾದ ಮಣ್ಣು.

ವಾತಾವರಣ ಕಲ್ಮಶವಿಲ್ಲದ ಕುರುಹು ಅಲ್ಲಿ ಹೋಗಿ ಉಳಿದಷ್ಟೂ ದಿನ ದೇಹ ಸವರಲು ಯಾವ ಎಣ್ಣೆಯೂ ಬೇಡ ಯಾವ ಮುಲಾಮಿನ ಅಗತ್ಯ ಇಲ್ಲವೇ ಇಲ್ಲ.  ಇಲ್ಲಿ ಆದ ಒಣ ಚರ್ಮ ಅಲ್ಲಿ ಹೋದ ಒಂದೆರಡು ದಿನದಲ್ಲಿ ಎಷ್ಟು ಮೃದುವಾಗುವುದು ಗಮನಕ್ಕೆ ಬರದೇ ಇರುವುದಿಲ್ಲ.  ಇಲ್ಲಿ ಮಿನರಲ್ ವಾಟರ್ ಅಥವಾ ಕಾಯಿಸಿಕೊಂಡೋ ಇಲ್ಲಾ ಫಿಲ್ಟರ್ ನೀರು ಕುಡಿದರೆ ಗಂಟಲ ಆರೋಗ್ಯ ಬಚಾವ್.  ಆದರೆ ಅಲ್ಲಿದ್ದಷ್ಟೂ ದಿನ ಬಾವಿಯ ನೀರು ಲೀಲಾಜಾಲವಾಗಿ ಗಂಟಲು ಇಳಿದರೂ ಗಂಟಲು ಕಿರಿ ಕಿರಿ, ನೆಗಡಿ ಕೇಳ್ಬೇಡಿ.  ಅಷ್ಟು ಶುದ್ಧ ಬಾವಿಯ ನೀರು.

ಅಡಿಕೆ ತೋಟದ ಕೊನೆಯಲ್ಲಿ ಬೇಸಿಗೆಯಲ್ಲೂ ಬತ್ತದ ಸಮೃದ್ಧ ಎರಡು ಕೆರೆ ಇದೆ.  ಊರವರೆಲ್ಲ ಸೇರಿ ಹೂಳೆತ್ತಿ ತೋಟಕ್ಕೆ ಸ್ಪಿಂಕ್ಲರ್ ನೀರಿನ ವ್ಯವಸ್ಥೆ ಮಾಡಿಕೊಂಡರೆ ಇದೇ ಕೆರೆಗಳಿಂದ ಊರ ಎಲ್ಲಾ ಮನೆಗಳಿಗೂ ಪೈಪ್ ಅಳವಡಿಸಿಕೊಂಡು ನಲ್ಲಿ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ.  ಕರೆಂಟಿನ ಅಗತ್ಯ ಇಲ್ಲ.  ಸರಕಾರದಿಂದ ಸಿಕ್ಕ ಸಬ್ಸಿಡಿ ಒಂದಷ್ಟು ಬಿಟ್ಟರೆ ಊರ ಜನರೆ ಹಣ ಹಾಕಿ 365 ದಿನ 24 ಗಂಟೆ ನೀರು ಹರಿದು ಬರುವಂತೆ ಅನುಕೂಲ ಮಾಡಿಕೊಂಡಿದ್ದಾರೆ.  ಮನೆಯ ಸುತ್ತ ಮುತ್ತ ತೆಂಗು, ಹಣ್ಣಿನ ಗಿಡಗಳು, ಹೂಗಿಡಗಳು ಬಿರು ಬೇಸಿಗೆಯಲ್ಲೂ ನಳನಳಿಸುತ್ತಿವೆ.   ಎಲ್ಲಿ ನೋಡಿದರಲ್ಲಿ ಊರು, ತೋಟ ಭೂತಾಯಿಯು ಕಳೆ ಕಳೆಯಾಗಿ ಕಾಣುವಾಗ ಮನಕೆಷ್ಟಾನಂದ!  ಅಲ್ಲಿಯೇ ಇದ್ದುಬಿಡುವಾ ಅಂದನಿಸುವುದು ಅತಿಶಯೋಕ್ತಿಯಲ್ಲ.  ಕಣ್ಣು ಮನ ತಣಿಯುವಷ್ಟು ತಿರುಗಾಡಿ ಆ ಸೌಂದರ್ಯ ಒಂದಷ್ಟು ಮೊಬೈಲಲ್ಲಿ ಸೆರೆ ಹಿಡಿದೆ.

ಕಲಿತು ಬೆಂಗಳೂರು ಸೇರಿದ ಕೆಲವು ರೈತ ಕುಟುಂಬದವರು ಹಳ್ಳಿಯತ್ತ ಮುಖ ಮಾಡಿದ್ದು, ನಮ್ಮ ಹಳ್ಳಿಗೆ ಸಮೀಪದಲ್ಲಿ ಹತ್ತಾರು ಎಕರೆ ಜಮೀನು ಖರೀದಿಸಿ ಅನೇಕ ಹೊಸ ತಳಿಯ ಅಪರೂಪದ ಹಸುಗಳ ತಂದು ಹೈನುಗಾರಿಕೆ ಮಾಡುತ್ತಿರುವುದು ಕಣ್ಣಾರೆ ಕಂಡು ಬಂದೆ
ನಮ್ಮ ಮೋದೀಜಿಯವರು ಕಂಡ ಕನಸು ಅಕ್ಷರಶಃ ಮಲೆನಾಡಿನ ಹಳ್ಳಿಗಳಲ್ಲಿ ಮೊದಲಿಂದಲೂ ರೂಢಿಸಿಕೊಂಡು ಬಂದಿದ್ದಾರೆ ಎಂದರೆ ತಪ್ಪಾಗಲಾರದು.  ಈಗಂತೂ ಸರಕಾರದಿಂದ ಸಿಗುವ ಸವಲತ್ತು ಹಳ್ಳಿ ಹಳ್ಳಿಗಳಲ್ಲಿ ಕಾಣಬಹುದು.  ಮೊದಲೆಲ್ಲ ಮಣ್ಣಿನ ರಸ್ತೆ ಇದ್ದವು.  ಈಗ ಊರ ಬಾಗಿಲವರೆಗೂ ಸಿಮೆಂಟ್, ಟಾರು ರಸ್ತೆಗಳಾಗಿವೆ.  ಊರ ಹೆಬ್ಬಾಗಿಲಲ್ಲಿ ಬೀದಿಯ ದೀಪ ಕತ್ತಲಾವರಿಸುತ್ತಿದ್ದಂತೆ ಮಿನುಗುತ್ತವೆ.  ಸುತ್ತಮುತ್ತಲಿನ ಹಳ್ಳಿಗಳ ಸೆಂಟರ್ ಜಾಗದಲ್ಲಿ ಹಾಲಿನ ಡೈರಿ ಇತ್ತೀಚಿನ ವರ್ಷದಲ್ಲಿ ತೆರೆದಿದ್ದು ಹಳ್ಳಿಯ ಪ್ರತೀ ಮನೆಗಳಲ್ಲಿ ಹೈನುಗಾರಿಕೆ ಸಮೃದ್ಧವಾಗಿದೆ.  ಆಯಾ ದಿನದ ಹಾಲಿನ ರಖಂ ಅವರವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.  ಹಳ್ಳಿಗಳಲ್ಲಿ ಕೆಲಸದಾಳುಗಳ ಕೊರತೆ ತುಂಬಾ ಇದೆ.  ಪ್ರತಿ ಮನೆಯ ಹೆಂಗಸರು ಗಂಡಸರು ಎನ್ನದೆ ಮಕ್ಕಳಾದಿಯಾಗಿ ತಮಗಾದ ಕೆಲಸ ಮಾಡಲೇ ಬೇಕು.  ಗತ್ಯಂತರವಿಲ್ಲ.  ಸಾರಿಗೆ ಸೌಲಭ್ಯಗಳ ಅನುಕೂಲ ಸಾಕಷ್ಟಿದೆ.  ರೈತಾಪಿ ಜೀವನಕ್ಕೆ ಬೇಕಾದ ಸಾಧನ ಸಲಕರಣೆಗಳನ್ನು ಎಲ್ಲಾ ಮನೆಗಳಲ್ಲಿ ಖರೀದಿಸುತ್ತಿದ್ದಾರೆ.  ಆಯಾ ಸಮಯಕ್ಕೆ ತಕ್ಕಂತೆ ವ್ಯವಸಾಯ ಮಾಡಲು ಆದಷ್ಟು ಅನುವು ಮಾಡಿಕೊಳ್ಳುತ್ತಿದ್ದಾರೆ.

ಹೀಗೆ ಪರಿಸರದ ಬಗ್ಗೆ ಕಾಳಜಿ ತೋರಿಸುತ್ತ ದಿನವೆಲ್ಲ ಮೈ ಮುರಿದು ದುಡಿಯುವ ಅವರ ಜೀವನ ಕಂಡಾಗ, ಅವರ ಆರೋಗ್ಯ ಸುಸ್ಥಿತಿಯಲ್ಲಿ ಇರುವುದು ನೋಡಿದರೆ ಬಹಳ ಖುಷಿಯಾಗುತ್ತದೆ.  ಇಂತಹ ಒಂದು ಮನೋಭಾವ, ಒಗ್ಗಟ್ಟು, ತನ್ನ ಊರು,ತನ್ನ ಪರಿಸರ ಚೆನ್ನಾಗಿ ಇಟ್ಟುಕೊಳ್ಳಬೇಕೆಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಿದರೆ ಬಹುಶಃ ಎಷ್ಟೇ ಜನ ಸಂಖ್ಯೆ ಇರುವ ಷಹರವೇ ಆಗಲಿ ಸ್ವಚ್ಛತೆಯಿಂದ ಕೂಡಿರುತ್ತಿತ್ತು ಅನಿಸುತ್ತದೆ.  ಎಲ್ಲೆಂದರಲ್ಲಿ ಕಸ ಒಗೆದು ಹೋಗುವ ಕೆಟ್ಟ ಚಾಳಿ ಮನುಷ್ಯ ಮೊದಲು ಬಿಡಬೇಕು.   ತಮ್ಮ ತಪ್ಪನ್ನು ತಿದ್ದಿಕೊಂಡು ಸ್ವಲ್ಪವಾದರೂ ಪರಿಸರ ಸ್ವಚ್ಛವಾಗಿರಿಸಿಕೊಳ್ಳಲು ಕಾಳಜಿ ವಹಿಸಬೇಕು. ಹಸಿವು ನೀಗಿಸಿಕೊಳ್ಳಲು ಬರುವ ಮುಖ್ಯವಾಗಿ ಬೀಡಾಡಿ ಹಸುಗಳ ಬಾಯಿ ಪ್ಲಾಸ್ಟಿಕ್ ನುಂಗದಂತೆ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಬೇಕು.   ಈ ಒಂದು ದಿನವೊಂದೇ ಅಲ್ಲ ಪ್ರತೀ ದಿನವೂ ನಮ್ಮ ಪರಿಸರ ಸ್ವಚ್ಛವಾಗಿರಿಸಿಕೊಳ್ಳುವತ್ತ ಪಣ ತೊಡೋಣ.

ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.

  • Geetha Hegde

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post