ರೊಟ್ಟಿ ಬೇಕೆಂದು ಹಟಹಿಡಿದಿದೆ ಮಗು,
ಹಿಟ್ಟನ್ನು ಎಲ್ಲಿಂದ ತರುವುದು?
ಬರಗಾಲ ಬಿದ್ದಿದೆ.
ಬಿಗಡಾಯಿಸಿದ ಬಿಸಿಲು ಬೆಂಕಿಯನ್ನೆಬ್ಬಿಸಿದೆ,
ಬೆಂದ ಓತೀಕ್ಯಾತ ಹಸಿವು ತಣಿಸಲು ಸಾಲದು.
ವಲಸೆ ಹೊರಟಿಹುದು ಕೋಟಿ ಜನ,
ಹೋಗುವ ಹಾದಿಯುದ್ದಕ್ಕೂ ಕಾದಾಟ,
ರಕ್ತ ಕುಡಿದೇ ದಾಹ ತೀರಿಸಿಕೊಳ್ಳುತ್ತಿದೆ ಗುಂಪು.
ಗುಳೆ ಹೋಗಲಾಗದೇ ನರಳುತ ಬಿದ್ದಿವೆ
ಹತ್ತಾರು ಬಿಳಿ ತಲೆಗಳು,
ಕಳೇಬರ ಕೊಳೆಯುವ ಮುನ್ನವೇ
ಹದ್ದುಗಳಿಗೆ ಹಬ್ಬದೂಟ.
ಪ್ರಾಣಿ ಪಕ್ಷಿಗಳ ಕುರುಹೂ ಇಲ್ಲ,
ಹಸಿರು ಬಣ್ಣವನ್ನೇ ಮರೆತಂತಿದೆ ಆ ಊರು.
ಸುಡುಗಾಡಿಗಿಂತ ಕಡೆ
ಯಾರೂ ಸುಳಿಯರು ಆ ಕಡೆ!
ಒಣಗಿರುವ ಮರಗಳ ಕವಲುಗಳೊಳಗೆ
ಸಿಕ್ಕಿ ಹಾಕಿಕೊಂಡಿವೆ ಎಂತೆಂಥದೋ ಬೀಜಗಳು-
ನೆಲದ ಬಿರುಕಿನಲ್ಲಷ್ಟು ಬೇರುಗಳು-
ಕಂಗೆಡದೆ ಭದ್ರವಾಗಿ ಕುಳಿತಿವೆ
ಮಳೆ ಬರುವುದನ್ನೇ ಕಾಯುತ್ತ.
- ಶ್ರೀಕಲಾ ಹೆಗಡೆ ಕಂಬ್ಳಿಸರ
Facebook ಕಾಮೆಂಟ್ಸ್