ನಮ್ಮಲ್ಲಿ ಜನ ನಾಯಕರಿಗೆ ಏನೂ ಕೊರತೆಯಿಲ್ಲ. ಅವರನ್ನ ಅಭಿಮಾನದಿಂದ ಕಾಣುವ ಅಭಿಮಾನಿಗಳಿಗೂ ಕೊರತೆಯಿಲ್ಲ . ಅಂತಹ ಮಹಾನ್ ನಾಯಕರ ನಂತರ ಆತನ ಸಂತಾನ ನಾಯಕನಾಗಿ ಮುಂದುವರಿಯಲಿ ಎನ್ನುವ ಆಸೆ ಕೂಡ ನಮ್ಮ ಸಮಾಜದಲ್ಲಿ ಒಂದು ಕೈ ಜಾಸ್ತಿಯೇ ಎನ್ನಬಹುದು . ತಂದೆಯ ನಂತರ ಹೀಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಆತನ ತಂದೆಯಂತೆಯೇ ದಕ್ಷನಾಗಿದ್ದರೆ ಕೇಳುವುದಿನ್ನೇನು? ತನ್ನ ನೆಚ್ಚಿನ ನಾಯಕನ ಸಂತಾನವನ್ನ ಹೊಗಳಲು ಉಪಮೆಯಾಗಿ ಇಲ್ಲಿ ಹುಲಿ ಬಳಕೆಯಾಗಿದೆ ಅಷ್ಟೇ! ತಂದೆಗೆ ತಕ್ಕ ಮಗ, ಅಂತಹ ನಾಯಕ ಗುಣ ಹೊಂದಿದ್ದ ದಕ್ಷ ವ್ಯಕ್ತಿಯ ಸಂತಾನ ಕೂಡ ಅಷ್ಟೇ ಪ್ರಬಲವಾಗಿದೆ ಎನ್ನುವುದನ್ನ ಹೇಳುವುದಕ್ಕೆ – ‘ಹುಲಿಯ ಹೊಟ್ಟೆಯಲ್ಲಿ ಹುಲ್ಲೆ (ಜಿಂಕೆ) ಹುಟ್ಟಿತೇ? ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುವುದು’ ಎನ್ನುವ ಮಾತುಗಳಲ್ಲಿ ಜನಜನಿತವಾಗಿವೆ . ಬೇವಿನ ಸಸಿ ನೆಟ್ಟ ಮೇಲೆ ಮಾವು ಹೇಗೆತಾನೆ ಬಂದಿತು? ಎನ್ನುವುದು ಸಾರಾಂಶ .
ಜಗತ್ತು ಪೂಜಿಸುವುದು ಶಕ್ತಿಯನ್ನ ! ಹುಲಿ ಶಕ್ತಿಶಾಲಿ ಹಾಗಾಗಿ ಅದನ್ನ ತಮ್ಮ ನಾಯಕನ ಶಕ್ತಿ ಸಾಮರ್ಥ್ಯಕ್ಕೆ ಉಪಮೆಯಾಗಿ ಅಂದಿನ ಜನ ಬಳಸಿರಬಹದು . ಆತನ ಸಂತಾನ ಎಂದ ಮೇಲೆ ಅದು ಹೇಗೆ ತಾನೆ ದುರ್ಬಲನಾಗಲು ಸಾಧ್ಯ ? ಎನ್ನುವ ಜನರ ಸಾಮೂಹಿಕ ನಂಬಿಕೆ ಇಂತಹ ಆಡುಮಾತು ಹುಟ್ಟಲು ಸಹಕಾರಿಯಾಗಿರಬಹದು . ಇಂದಿನ ಸಂಕೀರ್ಣ ಸಮಯದಲ್ಲಿ ತಂದೆಗೆ ತಕ್ಕ ಮಗ, ತಾಯಿಯಂತೆ ಮಗಳು, ನೂಲಿನಂತೆ ಸೀರೆ ಎನ್ನುವ ಮಾತುಗಳು ಮಾತ್ರ ಕ್ರಮೇಣ ಬಣ್ಣ ಕಳೆದುಕೊಳ್ಳುತ್ತಿವೆ . ಅಂದಿನ ದಿನದಲ್ಲಿ ಉಳಿವಿಗಾಗಿ ಮತ್ತು ತಮ್ಮ ಇರುವಿಕೆಯ ಸಾರುವುದಕ್ಕಾಗಿ ಹೊಡೆದಾಟ ಮತ್ತು ಪ್ರಭಲರಾಗಿರುವುದು ಅವಶ್ಯಕವಾಗಿತ್ತು . ಇಂದಿನ ದಿನಗಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿಯ ಮಕ್ಕಳು ಯಾವುದೇ ತೆರನಾದ ಜಂಜಾಟ ಬೇಡ ಎಂದು ತಮ್ಮದೇ ಆದ ದಾರಿಯನ್ನ ಹಿಡಿದ ಉದಾಹರಣೆಗಳು ಬಹಳಷ್ಟಿದೆ .
ಜಗತ್ತು ಒಂದು ಪುಟ್ಟ ಹಳ್ಳಿ ಎನ್ನುವ ವ್ಯಾಖ್ಯೆ ಗ್ಲೋಬಲೈಸೇಶನ್ ನಂತರ ಹುಟ್ಟಿದ ಪದವಾದರೂ ಆಡುಮಾತುಗಳ , ಗಾದೆಗಳ ಜಾಡು ಹಿಡಿದು ಹೋದರೆ ಹೌದಲ್ಲ ನಿಜವಾಗಿಯೂ ಪ್ರಪಂಚ ಒಂದು ಪುಟ್ಟ ಹಳ್ಳಿ ಎನ್ನುವಂತೆ ಮಾಡುತ್ತದೆ . ಸ್ಪೇನ್ ದೇಶದಲ್ಲಿ ‘ De tal palo, tal astilla.’ (ದೆ ತಾಲ್ ಪಾಲೊ , ತಾಲ್ ಅಸ್ತಿಯಾ )ಮರದ ತುಂಡು ಎಷ್ಟು ಬಲಿಷ್ಠ ಅದನ್ನ ವಿಭಜಿಸುವುದು (ಕಡಿಯುವುದು ) ಅಷ್ಟೇ ಕಷ್ಟ ಎನ್ನುವ ಅರ್ಥ ಕೊಡುತ್ತದೆ . ಅಂದರೆ ಮರ ಕ್ಷೀಣವಾಗಿದ್ದರೆ ಅದರ ತುಂಡು ಕೂಡ ಕ್ಷೀಣ ಅದನ್ನ ವಿಭಜಿಸುವುದು ಸುಲಭ ಎನ್ನುವ ಅರ್ಥದಲ್ಲಿ ಹೇಳಲಾಗಿದೆ .
ಇನ್ನು ಇಂಗ್ಲಿಷರು “From such a branch, such a twig, The apple doesn’t fall far from the tree”. ಜೊತೆಗೆ ‘Like father like son’ ಎನ್ನುವ ಮಾತುಗಳನ್ನ ಬಳಸುತ್ತಾರೆ . ಬಿತ್ತಿದಂತೆ ಬೆಳೆ ಸುಳ್ಳಲ್ಲ ಎನ್ನುವ ಗಾದೆ ಮಾತು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. ಬೇವಿನ ಮರದಲ್ಲಿ ಮಾವು ಹುಟ್ಟುವುದಿಲ್ಲ ಎನ್ನುವ ಅರ್ಥ ಇಲ್ಲಿ ಕೂಡ ಧ್ವನಿತವಾಗಿದೆ .
ಮೇಲಿನ ಸಾಲುಗಳಲ್ಲಿ ಹೇಳಿದಂತೆ ಬದಲಾದ ಇಂದಿನ ಸನ್ನಿವೇಶದಲ್ಲಿ ಈ ಮಾತನ್ನ ಗುಣಕ್ಕಿಂತ ಹೆಚ್ಚಾಗಿ ದೈಹಿಕ ನೋಟಕ್ಕೆ ಸೀಮಿತವಾಗಿಸಿಕೊಳ್ಳುವುದು ಸೂಕ್ತ .
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ .
De tal palo : From such a branch, ಮರದ ಕೊಂಬೆಯಷ್ಟು . ದೆ ತಾಲ್ ಪಾಲೊ ಉಚ್ಚಾರಣೆ
tal astilla : such a twig. ಕಡ್ಡಿ ಎನ್ನುವ ಅರ್ಥ ಕೊಡುತ್ತದೆ. ತಾಲ್ ಅಸ್ತಿಯಾ ಎನ್ನುವುದು ಉಚ್ಚಾರಣೆ.
Facebook ಕಾಮೆಂಟ್ಸ್