ಭವಿಷ್ಯದಲ್ಲಿ ಕೆಲ ಚೆಲುವಾದ ನೆನಪುಗಳನ್ನು ಆನ್’ಲೈನ್ ಮೂಲಕ ಆರ್ಡರ್ ಮಾಡಿ, ಕರಾಳ ನೆನಪುಗಳ ಅಳಿಸುವಿಕೆಗೆ ಯಾವುದಾದರೊಂದು ಕಾಲ್’ಸೆಂಟರ್’ಗೆ ಕಾಲ್ ಮಾಡಿ, ಅಲ್ಲಿಂದ ತಜ್ಞರು ನಮ್ಮ ಮನೆಗಳಿಗೆ ಬಂದು ಬೇಡವಾದ ಭೀತಿ ಹುಟ್ಟಿಸುವ ನೆನಪುಗಳನ್ನು ಅಳಿಸಿ ನಮ್ಮ ಮೆದುಳಿನ ಕಸಗೂಡಿಸಿ, ನೆನಪುಗಳೊಂದಿಗೆ ಆಟವಾಡುವ ವಿಸ್ಮಯಕಾರಿ ಸಂಗತಿಗಳು ಸಾಧ್ಯವಾಗಬಹುದೆ? ಈ ಕುರಿತು ವಿಜ್ಞಾನಿಗಳು ಹಲ್ವು ಪ್ರಯೋಗಗಳನ್ನು ಕೈಗೊಂಡಿದ್ದಾರೆ.
ನೆನಪುಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮಹತ್ವಪೂರ್ಣ ಭಾಗವಾಗಿವೆ, ಸುಂದರ ನೆನಪುಗಳನ್ನು ಮೆಲುಕುಹಾಕುತ್ತಾ ಇಡೀ ಜೀವನವನ್ನು ಕಳೆಯವುದು ನಮ್ಮೆಲ್ಲರ ಅಪೇಕ್ಷೆ. ಅದೇ ಬೆಂಬಿಡದ ಭೂತದಂತಿರುವ ಮನದಾಳದಲ್ಲಿ ಕೊರೆಯುತ್ತ, ಪುಟ್ಟ ಹೃದಯಕ್ಕೆ ಘಾಸಿಮಾಡುವ ಯಾತನಾಮಯ ನೆನಪುಗಳು ನಮ್ಮ ಜೀವ ಹಿಂಡುತ್ತವೆ. ಕೆಲ ಕಹಿ/ಅಹಿತಕರ ನೆನಪುಗಳ ಪೀಡೆಯಂತೂ ಅಸಹನೀಯವಾಗಿರುತ್ತದೆ. ಇಂತಹ ಕಹಿ ನೆನಪುಗಳನ್ನು ಮರೆಯುವ ಅಥವಾ ಅಳಿಸಿ ಹಾಕುವ ಉಪಾಯವೇನಾದರೂ ಉಂಟಾ? ಮುಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ನಮ್ಮ ಮೆದುಳಿನಲ್ಲಿ ಸಂಗ್ರಹಿಸಲ್ಪಟ್ಟ ಕಹಿ ನೆನಪುಗಳನ್ನು ಒಂದೊಂದಾಗಿ ಆಯ್ಕೆಮಾಡಿ ಕಾಯ೦ ಆಗಿ ಅಳಿಸುವ ಸಾಧ್ಯತೆ ನಿಚ್ಚಳವಾಗಿದೆ.
ಈ ನಿಟ್ಟಿನಲ್ಲಿ ಕೆನಡಾದ ವಿಜ್ಞಾನಿಗಳು ಇಲಿಗಳಲ್ಲಿ ಭಯ ಹುಟ್ಟಿಸುವ ನೆನಪುಗಳನ್ನು ಅಳಿಸುವಲ್ಲಿ ಮಾಡಿದ ಪ್ರಯೋಗ ಯಶಸ್ವಿಯಾಗಿದೆ. ಈ ತಂತ್ರಜ್ಞಾನ ‘ಪೋಸ್ಟ್ ಟ್ರೌಮ್ಯಾಟಿಕ್ ಸ್ಟ್ರೆಸ್ ಡಿಸ್’ಆರ್ಡರ್’ಗೆ ತುತ್ತಾದ ರೋಗಿಗಳ ಚಿಕಿತ್ಸೆ ಹಾಗೂ ಮಾದಕ ವ್ಯಸನಿಗಳ ಉಪಚಾರದಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದು ಹೇಳಲಾಗುತ್ತಿದೆ. ಟೋರಾ೦ಟೋ ಯುನಿವರ್ಸಿಟಿಯ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಮೆದುಳಿನಲ್ಲಿರುವ ಕೆಲ ನ್ಯೂರಾನ್’ಗಳೇ ಹೆದರಿಕೆ ಅಥವಾ ಭಯದ ಕುರಿತಾದ ಆಘಾತಕಾರಿ ನೆನಪುಗಳಿಗೆ ಕಾರಣ. ವಿಜ್ಞಾನಿಗಳ ಪ್ರಕಾರ ಮೆದುಳಿನಲ್ಲಿ ಒಂದು ವಿಶಿಷ್ಟವಾದ ಪ್ರೊಟೀನ್’ನ್ನು ಉತ್ಪಾದಿಸಿ ಇಂತಹ ನ್ಯೂರಾನ್’ಗಳನ್ನು ನಿಷ್ಕ್ರಿಯಗೊಳಿಸಬಹುದು! ಒಮ್ಮೆ ಭಯ ಸೃಸ್ಟಿಸುವ ಈ ನ್ಯೂರಾನ್’ಗಳನ್ನು ನಾಶಪಡಿಸಿದರೆ, ಇದರೊಂದಿಗಿನ ಕಹಿ ನೆನಪುಗಳನ್ನೂ ಅಳಿಸುವದು ಅಸಾಧ್ಯವಲ್ಲ. ಈ ಪ್ರಯೋಗದಿಂದ ಹೊರಬಿದ್ದ ಫಲಿತಾಂಶದ ಇನ್ನೊಂದು ಮುಖ್ಯ ಅಂಶವೆಂದರೆ, ಕೇವಲ ಬೇಡವಾದ ಕಹಿ ನೆನಪುಗಳನ್ನು ಅಳಿಸುವಾಗ ಬೇರೆ ಸುನೆನಪುಗಳ ಮೇಲೆ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಈ ಪ್ರಯೋಗದ ಭಾಗವಾಗಿ ಕೆಲ ಇಲಿಗಳಿಗೆ ಮೊದಲು ಕೊಕೇನ್’ನ ರುಚಿತೋರಿಸಿ ಅದರ ವ್ಯಸನಿಯಾಗುವಂತೆ ಮಾಡಲಾಯಿತು. ಆನಂತರ ಇಲಿಗಳ ಮೆದುಳಿನಿಂದ ಈ ಮಾದಕ ವ್ಯಸನಕ್ಕೆ ಸಂಬಧಿಸಿದ ನೆನಪುಗಳನ್ನು ಅಳಿಸಿಹಾಕಲಾಯಿತು. ಇದರಿಂದ ಇಲಿಗಳ ಕೊಕೇನ್’ನ ಚಟ ಕಳಚಿಹೋಯಿತು.
ಅಮೇರಿಕಾದಲ್ಲಿ ಕಳೆದ ವರ್ಷ ವಿಜ್ಞಾನಾಧರಿತ ಟಿ.ವಿ. ಕಾರ್ಯಕ್ರಮ ನೋವಾದಲ್ಲಿ ‘ಮೆಮೋರಿ ಹ್ಯಾಕರ್ಸ್’ ಎಂಬ ಎಪಿಸೋಡ್’ನ ಪ್ರಸಾರಣವಾಗಿತ್ತು. ಈ ಧಾರವಾಹಿಯಲ್ಲಿ ತೋರಿಸಿದಂತೆ ಬರೀ ಆಯ್ದ ಕಹಿ ನೆನಪುಗಳನ್ನು ಅಳಿಸುವದಷ್ಟೇ ಅಲ್ಲದೇ, ಕೆಲ ನೆನಪುಗಳನ್ನು ಮಾನವನ ಮೆದುಳಿನಲ್ಲಿ ಕಸಿಮಾಡಬಹುದೆಂದು ವಿಜ್ಞಾನಿಗಳು ನಂಬುತ್ತಾರೆ. ಇದೇ ರೀತಿಯಲ್ಲಿ ಆಮ್’ಸ್ಟ್ರಾಡ್ಯಾಮ್ ವಿಶ್ವವಿದ್ಯಾಲಯದಲ್ಲಿ ಜೇಡರ ಹುಳುವಿಗೆ ಭಯಪಡುವ ಜನರ ಮೇಲೆ ಪ್ರಯೋಗ ನಡೆಸಲಾಯಿತು. ಈ ಜನರಿಗೆ ಒಂದು ವಿಶಿಷ್ಟ ಔಷದಿ ನೀಡಿ ಮೆದುಳಿನಿಂದ ಜೇಡರ ಹುಳುವಿನ ಭಯವನ್ನು ನಿವಾರಿಸಲಾಯಿತು. ಲಂಡನ್’ನ ಸೌತ್’ಬ್ಯಾಂಕ್ ವಿಶ್ವವಿದ್ಯಾಲಯದಲ್ಲಿ ಇವೇ ಪ್ರಯೋಗಗಳ ಅಂಗವಾಗಿ ಕೆಲ ಜನರ ಮನಸ್ಸಿನಲ್ಲಿ ವಿಶೇಷವಾದ ನೆನಪುಗಳನ್ನು ಕಸಿ ಮಾಡಿದರು. ಈ ಪ್ರಯೋಗಕ್ಕೊಳಪಟ್ಟ ಜನರೆಲ್ಲೆರು ಒಂದಿಲ್ಲೊಂದು ಅಪರಾಧದಲ್ಲಿ ಶ್ಯಾಮೀಲಾಗಿದ್ದಾರೆಂಬ ನಂಬಿಕೆ ಹುಟ್ಟುವಂತೆ ಮಾಡಲಾಯಿತು. ಆದರೆ ನಿಜವಾಗಿ ಇವರ್ಯಾರೂ ಎಂದಿಗೂ ಯಾವುದೇ ಅಪರಾಧದಲ್ಲಿ ಭಾಗಿಯಾಗಿರಲಿಲ್ಲ. ಇದು ‘ಎಟರ್ನಲ್ ಸನ್ ಶೈನ್ ಫಾರ್ ದಿ ಸ್ಪಾಟ್’ಲೆಸ್ ಮೈಂಡ್’ ಹಾಗೂ ‘ಟೋಟಲ್ ರಿಕಾಲ್’ದಂಥ ಕಾಲ್ಪನಿಕ ವೈಜ್ಞಾನಿಕ ಚಲನಚಿತ್ರಗಳ೦ತೆ ಭಾಸವಾಗುತ್ತಿದೆಯಲ್ಲವೇ? ಮಾನವನ ಮೆದುಳು ನೆನಪು ಮತ್ತು ಅನುಭವಗಳ ಅನಂತ ದತ್ತಾಂಶಗಳನ್ನು ತನ್ನಲ್ಲಿ ಶೇಖರಿಸುವ ಸಾಮರ್ಥ್ಯ ಹೊಂದಿದೆ. ನೆನಪುಗಳು ಅರಿವು/ಸೃಷ್ಟಿ ಮತ್ತು ಅಳಿಸುವಿಕೆ ಒಂದು ನೈಸರ್ಗಿಕ ಪ್ರಕ್ರಿಯೆ. ಪ್ರಯೋಗಾಲಯಗಳಲ್ಲಿ ನೆನಪುಗಳನ್ನು ಹುಟ್ಟಿಸುವ ಹಾಗೂ ಅಳಿಸುವ ಕಾಲ ಇನ್ನು ಬಹಳ ದೂರವಿಲ್ಲ!
ಮನಸೊಡೆಯುವ ಘಟನೆಯೊಂದು ಜೀವನ ಪೂರ್ತಿ ನೆನಪಿನ ರೂಪದಲ್ಲಿ ನಮ್ಮನ್ನು ಕಾಡಬಹುದು. ಇಂಥ ನೆನಪುಗಳು ಅಪರಾತ್ರಿಯೆಲ್ಲಿ ಎಚ್ಚರವಾಗಿಸಿ, ಬೆಳ್ಳ೦ ಬೆಳಿಗ್ಗೆ ಬೆದರಿಸಿ, ಒಬ್ಬಂಟಿಯಾದಾಗ ಅಳಿಸಲೂ ಬಹುದು. ನೆನಪುಗಳು ಮುಖದ ಮೇಲೆ ಮುಗುಳ್ನಗೆ ಮೂಡಿಸಿದರೆ ಅದು ಉಡುಗರೆಯಾಗಬಹುದು, ಹೃದಯ ಹಿಂಡುವ ನೋವು ತಂದರೆ ಕಣ್ಣೀರ ಕಂಬನಿಯಾಗಬಹುದು. ಈ ಕಹಿ ನೆನಪುಗಳೊಂದಿಗೆ ಬದುಕುವುದು ದುಸ್ತರವಾಗಬಹುದು. ಆದರೆ ವಿಜ್ಞಾನ ಅಸಂಭವವೆನ್ನಬಹುದಾದ, ನಮಗೆ ಬೇಕಾದಾಗ, ಬೇಡದಿರುವ ಕಹಿ ನೆನಪುಗಳನ್ನು ಮನಸ್ಸಿನಿಂದ ಅಳಿಸಿ ಭವಿಷ್ಯದಲ್ಲಿ ಜೀವಭಾರವನ್ನು ಕಡಿಮೆಮಾಡುವ ವಾಗ್ದಾನ ನೀಡುತ್ತಿದೆ!! ಅದೇ ವೇಳೆ ವಿಜ್ಞಾನಿಗಳನ್ನು ಸೈದ್ಧಾಂತಿಕ ಮತ್ತು ನೈತಿಕತೆಯ ಪ್ರಶ್ನೆ ಕಾಡುತ್ತಿದೆ. ಪ್ರಕೃತಿದತ್ತ ಪ್ರಕ್ರಿಯೆಗೆ ಅಡ್ಡಲಾಗಿ ಗೋಡೆ ನಿರ್ಮಿಸುವದು ಎಷ್ಟರ ಮಟ್ಟಿಗೆ ಸರಿ? ಮಾನವನ ಮೆದುಳಿನಲ್ಲಿ ನೆನಪುಗಳು ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ನೆನಪಿನ ಸ್ವರೂಪದಲ್ಲಿ ಸಂಗ್ರಹಿಸಲ್ಪಡುತ್ತವೆ. ಶಾರ್ಟ್ ಟರ್ಮ್ ಮೆಮೋರಿಯಲ್ಲಿ ಒಂದು ಬಾರಿಗೆ 8 ರಿಂದ 10 ವಸ್ತುಗಳನ್ನು 20 ರಿಂದ 30 ಸೆಕಂಡ್’ಗಳ ಕಾಲ ನೆನಪಿಟ್ಟುಕೊಳ್ಳಬಹುದು. ಇವುಗಳಲ್ಲಿ ಯಾವುದಾದರೊಂದು ಮಹತ್ವಪೂರ್ಣ ಮಾಹಿತಿ ಇದ್ದಲ್ಲಿ ನಾವು ಅನೇಕ ಬಾರಿ ಪುನರುಚ್ಚರಿಸಿದಾಗ ಮೆದುಳು ಅದನ್ನು ದೀರ್ಘಕಾಲಿಕ ನೆನಪಿನಲ್ಲಿ ಸಂಗ್ರಹ ಮಾಡಿ ಸದಾಕಾಲ ನೆನಪಿನಲ್ಲಿರುವಂತೆ ಮಾಡುತ್ತದೆ. ಲಾಂಗ್ ಟರ್ಮ್ ಮೆಮೋರಿ ಮೆದುಳಿನ ವಿವಿಧ ಭಾಗಗಳಲ್ಲಿ ಸಂಗ್ರಹವಾಗಿರುತ್ತದೆ. ಈ ಭಾಗಗಳಿಗೆ ‘ಕೋಟೆಕ್ಸ್’ ಎಂದು ಕರೆಯಲಾಗುತ್ತದೆ, ನೆನಪುಗಳು ಗಟ್ಟಿಯಾದ ನಂತರ ಚಿಕ್ಕ ಚಿಕ್ಕ ನ್ಯೂರಾನ್’ಗಳ ಸಮೂಹಗಳಾಗಿ ಮೆದುಳಿನಲ್ಲಿ ಶೇಖರಿಲ್ಪಡುತ್ತವೆ. ಯಾವಾಗ ಇಂತಹ ನ್ಯೂರಾನ್’ಗಳ ವಿವಿಧ ಸಮೂಹಗಳು ಒಮ್ಮಿಲೇ ವಿದ್ಯುತ್ ತರಂಗಗಳನ್ನು ಉತ್ಪಾದಿಸಿ ಬಿಡುಗಡೆ ಮಾಡುತ್ತವೆಯೋ, ಆಗ ನಮಗೆ ನೆನಪು ಮತ್ತು ಅನುಭವದ ಅನುಭೂತಿಯ ಸದೃಶ್ಯ ಸಾಕ್ಷಾತ್ಕಾರವಾಗಿ, ವಾಸ್ತವಿಕವಾಗಿ ನಡೆದ ಘಟನೆಗಳು ಕಣ್ಣು ಮುಂದೆ ಹಾದು ಹೋದಂತೆ ಭಾಸವಾಗುತ್ತದೆ. ನೆನಪಿಗೆ ಮೂಲಭೂತವಾಗಿ ಕಾರಣವಾದ ಈ ನ್ಯೂರಾನ್’ಗಳನ್ನು ನಾನಾ ಪರಿಣಾಮಕ್ಕೊಳಪಡಿಸುವ ಮೂಲಕ ಬೇಸರ ತರಿಸುವ ನೆನಪುಗಳನ್ನು ಅಳಿಸಲೂಬಹುದು, ಪರಿಷ್ಕರಿಸಲೂಬಹುದು ಹಾಗೂ ಪುನಃಸ್ಥಾಪಿಸಲೂಬಹುದು. ಈ ತಂತ್ರಜ್ಞಾನಕ್ಕೆ ‘ಆಪ್ಟೋ ಜೆನೆಟಿಕ್ಸ್’ ಎನ್ನುತ್ತಾರೆ.
2012ರಲ್ಲಿ ‘ಆಪ್ಟೋ ಜೆನೆಟಿಕ್ಸ್’ನ ಸಹಾಯದಿಂದ ‘ಅಮ್ನೆಶಿಯಾ’ (ಸ್ಮೃತಿಭ್ರಂಶ/ವಿಸ್ಮೃತಿ) ಎಂಬ ರೋಗವನ್ನು ಗುಣಪಡಿಸಲು ವಿಜ್ಞಾನಿಗಳು ಪ್ರಯತ್ನಿಸಿದ್ದರು. ಈ ಚಿಕಿತ್ಸಾ ವಿಧಾನದಲ್ಲಿ ಮೆದುಳಿನ ನ್ಯೂರಾನ್’ಗಳಿಗೆ ವಿಶೇಷವಾದ ಪ್ರೊಟೀನ್’ಗಳನ್ನು ತಲುಪಿಸಿದಾಗ, ನ್ಯೂರಾನ್’ಗಳ ಮೇಲೆ ನೀಲಿ ಬೆಳಕು ಬಿದ್ದು ಅವು ಕ್ರಿಯಾಶೀಲವಾಗುತ್ತವೆ. ಈ ತಂತ್ರಜ್ಞಾನದಿಂದ ಮಾನವನ ನೆನಪಿನ ಧಾರಣ ಶಕ್ತಿಯನ್ನು ಹೆಚ್ಚಿಸಲೂ ಬಹುದು. ಈ ಎಲ್ಲ ಪ್ರಯೋಗಗಳು ಸಫಲವಾಗಿ ನೆನಪುಗಳ ಅಳಿಸುವ ಕನಸು ನನಸಾಗಲು ಇನ್ನೂ ಸಾಕಷ್ಟು ಸಮಯ ಬೇಕಾಗಬಹುದು. ಆದರೆ ಮಾನವನ ಮೆದುಳನ್ನು ದಿಕೋಡ್(ವಿಸಂಕೇತಿಸುವ) ಮಾಡುವ ಕೆಲಸ ಭರ್ಜರಿಯಾಗಿಯೇ ಸಾಗಿದೆ. ಹಾಗಾದಲ್ಲಿ ಕರಾಳ ನೆನಪುಗಳ ಶಾಕ್’ನಿಂದ ಹೊರಬಾರದೇ ಒದ್ದಾಡುವ, ನೆನಪುಗಳನ್ನು ಕಳೆದುಕೊಂಡ ಗಝನಿಯರ ಇಲಾಜನ್ನು ಮಾಡಲು ಅನುಕೂಲವಾಗುವದು.
ವಿಜ್ಞಾನದ ಹೊರತಾಗಿಯೂ ಕಹಿ ನೆನಪುಗಳ ಅಳಿಸುವ ಮಾರ್ಗೋಪಾಯಗಳನ್ನು ಮಾನವ ಕಂಡುಕೊಂಡಿದ್ದಾನೆ! ‘ಮ್ಯೂಸಿಯಮ್ ಆಫ್ ಬ್ರೋಕನ್ ರಿಲೇಷನ್’ಶಿಪ್’ ಇಂತಹ ಉಪಾಯಗಳಲ್ಲೊಂದು! ಮೊತ್ತಮೊದಲು ಈ ಮ್ಯೂಸಿಯಮ್’ನ್ನು ಕ್ರೂವೇಶಿಯಾದ ಜಕ್ರೇಬ್ ನಗರದಲ್ಲಿ ಸ್ಥಾಪಿಸಲಾಯಿತು. ಜನರು ತಮ್ಮ ಮರೆಯ ಬಯಸುವ ನೆನಪುಗಳನ್ನು ಕಲಾಕೃತಿಯ ರೂಪದಲ್ಲಿ ಈ ಮ್ಯೂಸಿಯಮ್’ನಲ್ಲಿ ಜಮಾ ಮಾಡುತ್ತಾರೆ. ಅಷ್ಟೇ ಅಲ್ಲ ಸಂಬಂಧಗಳ ಪರ್ವಕಾಲದಲ್ಲಿ ಪರಸ್ಪರರಿಗೆ ಕಾಣಿಕೆ ರೂಪದಲ್ಲಿ ನೀಡಿದ ಟೆಡ್ಡಿ ಬೇಯರ್, ಮದುವೆಯ ಉಡುಪುಗಳನ್ನು ,ವರ್ಣಚಿತ್ರಗಳನ್ನು ಹಾಗೂ ಗ್ರೀಟಿಂಗ್ ಕಾರ್ಡ್’ಗಳನ್ನೊಳಗೊಂಡ ವಸ್ತುಗಳನ್ನೂ ಈ ಮ್ಯೂಸಿಯಮ್’ನಲ್ಲಿ ಇಡಲಾಗುತ್ತದೆ. ಇಂಥ ಮ್ಯೂಸಿಯಮ್’ನ್ನು ಅಮೇರಿಕಾದ ಲಾಸ್’ಎಂಜಿಲಿಸ್’ನ;ಲ್ಲಿಯೂ ತೆರೆಯಲಾಗಿದೆ ಮತ್ತು ಇದು ಅತ್ಯಂತ ವೇಗವಾಗಿ ಜನಫ್ರೀಯವಾಗುತ್ತಿದೆ. ಮುರಿದ ಸಂಬಂಧಗಳ ಪ್ರತೀಕವಾಗಿರುವ ವಸ್ತುಗಳನ್ನು ಭೌತಿಕವಾಗಿ ಇಲ್ಲವಾಗಿಸಿದಲ್ಲಿ ಬಹುಶಃ ಅದರೊಂದಿಗಿನ ನೋವಿನ ನೆನಪುಗಳನ್ನು ಮರೆಯಬಹುದೇನೋ ಎಂಬುದು ಇದರ ಹಿಂದಡಗಿದ ತತ್ವ /ಮರ್ಮ. ಮನದಾಳದ ಎಲ್ಲಾ ನೆನಪುಗಳನ್ನು ಅಳಿಸುವುದೂ ಅಷ್ಟು ಸುಲಭವಲ್ಲ, ಬಯಸಿದರೂ ಅಳಸಲು ಸಾಧ್ಯವಾಗದ ಕೆಲ ನೆನಪುಗಳು ಕನಸಾಗಿ ಕಾಡುತ್ತವೆ!
ಮುಂಬರುವ ಯುಗದಲ್ಲಿ ಪ್ರಾಯಶಃ ನಮ್ಮ ಮೆದುಳು, ಸರ್ವಿಸ್ ಸೆಂಟರ್’ಗೆ ಹೊಗೆ ದುರಸ್ತಿ ಮಾಡಿಸಬಲ್ಲ ಲ್ಯಾಪ್ಟಾಪ್’ ಅಥವಾ ಮೊಬೈಲ್’ನಂತೆ ಕೇವಲ ಒಂದು ಯಂತ್ರವಾದರೂ ಅಚ್ಚರಿಪಡಬೇಕಿಲ್ಲ!! ಆದರೆ ಅಸಲಿಗೆ ಮಾನವನ ಮನಸ್ಸು ಮತ್ತು ಮೆದುಳು ಭಾವನೆಗಳ ಕೇಂದ್ರ. ಈ ಭಾವನೆಗಳ ಕಡಲಿನಲ್ಲಿ ಮುಳುಗಿ ನೆನಪಿನ ದೋಣಿಯಲ್ಲಿ ತೇಲುವ ಪ್ರಕೃತಿಯ ಕಾಣಿಕೆಯನ್ನು ಸಲೀಸಾಗಿ ಬದಲಿಸುವುದು ಅಷ್ಟು ಸುಲಭವಲ್ಲ. ಇಂದಿಗೂ ಮೆದುಳಿನ ಬಹುದೊಡ್ಡ ಭಾಗ ವಿಜ್ಞಾನಿಗಳಿಗೆ ನಿಲುಕದೇ ರಹಸ್ಯವಾಗಿಯೇ ಉಳಿದಿದೆ. ಒಂದು ವೇಳೆ ವಿಜ್ಞಾನಿಗಳು ತಮ್ಮ ಈ ಕಾರ್ಯದಲ್ಲಿ ಸಫಲರಾದರೆ ಇದು ವೈಜ್ಞಾನಿಕ ಚಮತ್ಕಾರವೇ ಸರಿ!
ಶ್ರೀನಿವಾಸ.ನಾ.ಪಂಚಮುಖಿ
Facebook ಕಾಮೆಂಟ್ಸ್