ಆಚಾರ ಹೇಳುವುದಕ್ಕೆ – ಬದನೇಕಾಯಿ ತಿನ್ನುವುದಕ್ಕೆ ಅಂತ ನಮ್ಮಲ್ಲಿ ಒಂದು ಗಾದೆಯಿದೆ. ಇದರ ಅರ್ಥ ನುಡಿದಂತೆ ನುಡಿಯುವರು ಕಡಿಮೆ ಎನ್ನುವುದು. ನಮ್ಮಲ್ಲಿ ಅಂತಲ್ಲ ಜಗತ್ತಿನ ಬಹುಸಂಖ್ಯೆಯ ಜನ ಈ ಒಂದು ಕೆಟಗರಿಯಲ್ಲಿ ಬರುತ್ತಾರೆ. ಇಂದಿನ ದಿನದಲ್ಲಿ ೯೯ ಪ್ರತಿಶತ ಜನ ಹೀಗೆ ಅಂದರೂ ತಪ್ಪಾಗುತ್ತದೆ. ಏಕೆಂದರೆ ಉಳಿದ ಒಂದು ಪ್ರತಿಶತ ಜನರೂ ಕೂಡ ಸಮಯ ಬಂದರೆ ಹೇಗೆ ಬೇಕಾದರೂ ಬದಲಾಗಬಹುದು. ಜನಸಾಮಾನ್ಯರ ವಿಷಯವೇ ಹೀಗಿರುವಾಗ ಇನ್ನು ರಾಜಕಾರಣಿಗಳ ವಿಷಯ ಕೇಳುವುದಿನ್ನೇನು? ಇದೀಗ ತಾನೇ ಕರ್ನಾಟಕ ಚುನಾವಣೆ ಮುಗಿದು ಫಲಿತಾಂಶ ಬಂದಿದೆ. ನಿನ್ನೆಯ ತನಕ ಒಬ್ಬರ ಮೇಲೊಬ್ಬರು ಅವ್ಯಾಚ ಶಬ್ದದಿಂದ ನಿಂದಿಸುತ್ತಿದವರು ಇಂದು ಮಿತ್ರರಾಗಿ ಹೆಗಲ ಮೇಲೆ ಕೈಹಾಕಿ ಹೊರಟಿದ್ದಾರೆ. ಇವೆಲ್ಲಾ ತಮ್ಮ ಅನುಕೂಲಕ್ಕೆ ಮತ್ತು ಸಮಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡಿರುವ ಸಂಬಂಧಗಳು. ಕೇವಲ ವಾರದ ಹಿಂದೆ ಆಡಿದ ಮಾತನ್ನು ಗಾಳಿಗೆ ತೂರಿ ಅದಕ್ಕೆ ತದ್ವಿರುದ್ದ ನಿರ್ಧಾರ ತೆಗೆದುಕೊಳ್ಳುತ್ತಾರೆ ‘ಲಾಭವಿದೆ ‘ ಎಂದು ತಿಳಿದರೆ.
ಇದು ಕೇವಲ ಭಾರತಕ್ಕೆ ಅಥವಾ ಭಾರತೀಯ ರಾಜಕಾರಣಿಗಳಿಗೆ ಮಾತ್ರ ಅನ್ವಯಿಸುತ್ತೆ ಅಂದು ಕೊಂಡರೆ ಅದು ತಪ್ಪು. ಜಗತ್ತಿನ ಜನರೆಲ್ಲಾ ಮೂಲಭೂತವಾಗಿ ಸೇಮ್. ಅಳು ನಗು, ಆಕಳಿಕೆ -ಬಿಕ್ಕಳಿಕೆಗಳಿದ್ದಂತೆ ಹಲವು ಹತ್ತು ಗುಣಗಳು ಜಗತ್ತಿನಾದ್ಯಂತ ಸೇಮ್. ತಮ್ಮ ಲಾಭಕ್ಕೆ ತಾವಾಡಿದ ಮಾತನ್ನು ನಂಬಿದ ಸಿದ್ಧಾಂತವನ್ನು ಗಾಳಿಗೆ ತೂರುವುದು ಕೂಡ ಇಂತಹ ಗುಣಗಳಲ್ಲಿ ಒಂದು. ಮನುಷ್ಯನ ಈ ಮೂಲಭೂತ ಗುಣವನ್ನು ಅರಿತ ನಮ್ಮ ಹಿರಿಯರು ‘ಆಚಾರ ಹೇಳುವುದಕ್ಕೆ ಬದನೇಕಾಯಿ ತಿನ್ನುವುದಕ್ಕೆ’ ಎಂದರು. ಬಾಯಲ್ಲಿ ಹೇಳುವುದಕ್ಕೆ ಏನು ಬೇಕಾದರೂ ಹೇಳಬಹದು ಹೇಳಿದ್ದ ಮಾಡಬೇಕಾದ ಸಮಯದಲ್ಲಿ ನಮಗೇನು ಬೇಕು ಅದನ್ನು ಮಾಡಿದರಾಯಿತು ಎನ್ನುವ ಮನುಷ್ಯ ಗುಣವನ್ನು ಈ ಗಾದೆ ಎತ್ತಿ ಹಿಡಿಯುತ್ತದೆ.
ಇನ್ನು ಸ್ಪಾನಿಶರು ಇದನ್ನು Del dicho al hecho hay un buen trecho (ದೆಲ್ ದಿಚೊ ಅಲ್ ಹೆಚೋ ಹಾಯ್ ಉನ್ ಬ್ವೆನ್ ತ್ರೇಚೊ ) ಎಂದರು.’ಹೇಳಿದಕ್ಕೂ ಮಾಡಿದಕ್ಕೂ ಅಂತರ ಸಾಕಷ್ಟಿದೆ’ ಎನ್ನುವುದು ಅರ್ಥ. ಅನುವಾದದ ಅರ್ಥ ಇದರ ಒಳಾರ್ಥ ಎರಡೂ ಈ ಗಾದೆಯಲ್ಲಿ ಒಂದೇ ಆಗಿದೆ. ಇಲ್ಲಿನ ರಾಜಕಾರಿಣಿಗಳು ಕೂಡ ಭಾರತೀಯ ರಾಜಕಾರಿಣಿಗಳಂತೆ ಸಮಯ ಸಾಧಕರು. ಕುತಂತ್ರಿಗಳು, ಹಣದಾಹಿಗಳು. ಒಂದು ವ್ಯತ್ಯಾಸವೆಂದರೆ ಇಲ್ಲಿ ಜನರಲ್ಲಿ ವಿಷಯದ ಆಗು ಹೋಗುಗಳ ಬಗ್ಗೆ ತಿಳುವಳಿಕೆ ಹೆಚ್ಚಾಗಿದೆ. ಹೀಗಾಗಿ ಮೀಸಲು ನಿಧಿಯನ್ನು ಆಯಾ ಕೆಲಸಕ್ಕೆ ಉಪಯೋಗಿಸದೆ ವಿಧಿಯಿಲ್ಲ.
ಬ್ರಿಟಿಷರು ನಮಗಿಂತ ಹೇಗೆ ತಾನೇ ಭಿನ್ನವಾದಾರು? ’From speech to deed there is a good stretch’ ಎನ್ನುತ್ತಾರೆ . ಇದನ್ನ Talk is cheap ಎನ್ನುವ ಅರ್ಥದಲ್ಲಿ ಬಳಸುತ್ತಾರೆ. ಹಾಗೆಯೇ “talking the talk and walking the walk.” ಎನ್ನುವುದು ಕೂಡ ಇವರಲ್ಲಿ ಬಹಳವಾಗಿ ಬಳಸುತ್ತಾರೆ. ಅಂದರೆ ಆಡುವುದು ಆಡ್ತಾ ಇರೋದು ಮಾಡೋದು ಮಾಡ್ತಾ ಇರೋದು ಅಂದಹಾಗೆ. ನಮ್ಮ ಆಚಾರ ಹೇಳೋಕೆ ಬದನೇಕಾಯಿ ತಿನ್ನೋಕೆ ಗಾದೆಗೆ ನೂರಕ್ಕೆ ನೂರು ಮ್ಯಾಚ್ ಆಗುವ ಇಂಗ್ಲಿಷ್ ಗಾದೆಯಿದು.
ಲೋಕದ ಜನರ ನಡತೆ- ಹಣವಿದ್ದಾಗ ಅಧಿಕಾರವಿದ್ದಾಗ ಇರುವ ರೀತಿಯೇ ಬೇರೆ ಅವರೆಡೂ ಜೊತೆಯಾಗುತ್ತವೆ ಎಂದಾಗ ಆಗುವ ರೀತಿಯೇ ಬೇರೆ. ಇವತ್ತಿನ ದಿನದಲ್ಲಿ ಈ ಗಾದೆ ಹಿಂದಿಗಿಂತಲೂ ಹೆಚ್ಚು ಪ್ರಸ್ತುತ.
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ:
Del : of the ಎನ್ನುವ ಅರ್ಥ. ದೆಲ್ ಎನ್ನುವುದು ಉಚ್ಚಾರಣೆ.
dicho : ಹೇಳು,ಹೇಳಿದೆ. ಎನ್ನುವ ಅರ್ಥ. ದಿಚೊ ಎನ್ನುವುದು ಉಚ್ಚಾರಣೆ.
al hecho : ಟು ದಿ ಫ್ಯಾಕ್ಟ್ ಅಥವಾ ಮಾಡಿದಕ್ಕೆ , ಮಾಡು ಎನ್ನುವ ಅರ್ಥ. ಅಲ್ ಹೆಚೋ ಎನ್ನುವುದು ಉಚ್ಚಾರಣೆ.
hay : ಇದೆ ಎನ್ನುವ ಅರ್ಥ. ಹಾಯ್ ಎನ್ನುವುದು ಉಚ್ಚಾರಣೆ.
un buen : ಒಂದೊಳ್ಳೆ ಎನ್ನುವ ಅರ್ಥ, ಸಾಕಷ್ಟು ಎನ್ನುವ ಅರ್ಥದಲ್ಲಿ ಕೂಡ ಉಪಯೋಗಿಸಬಹದು. ಉನ್ ಬ್ವೆನ್ ಎನ್ನುವುದು ಉಚ್ಚಾರಣೆ.
trecho: ಅಂತರ. ಡಿಸ್ಟೆನ್ಸ್ ಅಥವಾ ಗ್ಯಾಪ್ ಎನ್ನುವ ಅರ್ಥ ಕೊಡುತ್ತದೆ. ತ್ರೇಚೊ ಎನ್ನುವುದು ಉಚ್ಚಾರಣೆ.
Facebook ಕಾಮೆಂಟ್ಸ್