X

ಇದೇ ನಮ್ಮ ಸಂಸ್ಕೃತಿ – ಇದೇ ನಮ್ಮ ಪರಂಪರೆ.

ಪ್ರೀತಿಯ ಕಾರ್ಯಕರ್ತ ಬಂಧುಗಳೇ,

ಹೌದು, ನೀವು ಯೋಚಿಸುತ್ತಿರುವುದು ಸರಿಯಾಗಿಯೇ ಇದೆ.

ಎಲ್ಲರೊಂದಿಗೆ ಮಾತನಾಡಿದ ನಂತರ ನಿಮ್ಮತ್ತ ತಿರುಗಿದ್ದೇನೆ. ಏಕೆಂದರೆ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಎಂದೂ ಕೂಡ “ನಾನು” ಎಂದು ಯೋಚಿಸಿದವನಲ್ಲ; ತನ್ನನ್ನು ಮಾತನಾಡಿಸಲಿಲ್ಲ ಎಂದು ದುಃಖಿಸಿದವನೂ ಅಲ್ಲ. ಆತ ಕುಟುಂಬ ಜೀವನದ ಸಮಯವನ್ನು ಪಕ್ಷ ಹಾಗೂ ರಾಷ್ಟ್ರಕ್ಕಾಗಿ ಕೊಡುತ್ತಾನೆಯೇ ಹೊರತು, ರಾಜಕೀಯ ಕ್ಷೇತ್ರದ ಮೂಲಕ ತನ್ನ ವೈಯಕ್ತಿಕ ಜೀವನದ ಶ್ರೇಯೋಭಿವೃದ್ಧಿ ಬಯಸುವವನಲ್ಲ.

ಡಾ.ಶಾಮಪ್ರಸಾದ್ ಮುಖರ್ಜೀ, ಪಂ.ದೀನದಯಾಳ್ ಉಪಾಧ್ಯಾಯ ಹಾಗೂ ಹಲವಾರು ಕಾರ್ಯಕರ್ಯರ ಬಲಿದಾನಗಳು ಪಕ್ಷದ ಕಾರ್ಯಕರ್ತರಲ್ಲಿ ತ್ಯಾಗಭಾವವನ್ನು ತುಂಬಿವೆ. ಬೇರಿನಲ್ಲೇ ತ್ಯಾಗವಿರುವಾಗ ಚಿಗುರಿನಲ್ಲಿ ಇಲ್ಲವಾದೀತೇ… ?

“ಬೆರಳೆಣಿಕೆಯಷ್ಟೇ ಜನರು ನಾಳೆ ಚುನಾವಣೆ ಗೆದ್ದು ಶಾಸಕರು, ಮಂತ್ರಿಗಳು ಆಗುತ್ತಾರೆ. ಅದರಿಂದ ನಮಗೇನು ಸಿಗುತ್ತದೆ” ಎಂದು ನಮ್ಮ ಕಾರ್ಯಕರ್ತರು ಎಂದೂ ಯೋಚಿಸುವುದಿಲ್ಲ. ಏಕೆಂದರೆ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ “ರಾಜಕೀಯವಿರುವುದು ಸಾಮಾಜಿಕ ಬದಲಾವಣೆಗೇ ಹೊರತು ಅಧಿಕಾರ ಅನುಭವಿಸುತ್ತಾ ಐಷಾರಾಮಿ ಜೀವನ ನಡೆಸಲು ಅಲ್ಲ” ಎಂದು ನಂಬಿದ್ದಾನೆ.

ಭಾರತವು ವಂಶಪಾರಂಪರಿಕ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಬಂದು 70 ವರ್ಷಗಳೇ ಕಳೆದಿದ್ದರೂ, ಪ್ರತಿ ಚುನಾವಣೆಯನ್ನೂ “ರಣಾಂಗಣ” ಎಂದೇ ಮಾಧ್ಯಮಗಳು ಬಣ್ಣಿಸುವತ್ತವೆ. ಆದರೆ ಭಾರತೀಯ ಜನತಾ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಪಾಲಿಗೂ ಚುನಾವಣೆಯೆಂಬುದು “ಪ್ರಜಾಪ್ರಭುತ್ವದ ಹಬ್ಬ”ವೇ ಹೊರತು ಹೋರಾಟವಲ್ಲ. ಹಬ್ಬವು ನಮ್ಮನ್ನು ಸಂಭ್ರಮಿಸುವಂತೆ ಮಾಡುತ್ತದೆಯೇ ಹೊರತು ಕತ್ತಿ ಹಿಡಿಯಲು ಪ್ರೇರೇಪಿಸುವುದಿಲ್ಲ.

ದೇಶವನ್ನು ಕುಟುಂಬ ರಾಜಕಾರಣದ ಆಧಾರದಲ್ಲಿ, ಮೂಲಭೂತವಾದದ ಆಧಾರದಲ್ಲಿ ವಶಪಡಿಸಿಕೊಳ್ಳಲು ಯತ್ನಿಸುವ ರಾಕ್ಷಸರಿಗೆ ಬಿಜೆಪಿ ಕಾರ್ಯಕರ್ತರು ವೈರಿಗಳಂತೆ ಕಾಣುತ್ತಾರೆ. ಈ ಕಾರಣದಿಂದಾಗಿಯೇ ದೇಶದ ಉದ್ದಗಲಕ್ಕೂ ನಮ್ಮ ಬಹಳಷ್ಟು ಕಾರ್ಯಕರ್ತರು ಪ್ರಾಣಕಳೆದುಕೊಂಡು ವೀರಸ್ವರ್ಗವನ್ನಪ್ಪಿದರು. ಬಿಜೆಪಿಯನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಹೇಡಿಗಳ ರಕ್ತದಾಹದಿಂದಾಗಿ ಕಳೆದ 5 ವರ್ಷಗಳಲ್ಲಿ ಕರ್ನಾಟಕದ ಬಹಳಷ್ಟು ಕಾರ್ಯಕರ್ತರನ್ನು ನಾವು ಕಳೆದುಕೊಳ್ಳಬೇಕಾಯಿತು.

ಆದರೆ ನಮ್ಮ ಕಾರ್ಯಕರ್ತರೊಬ್ಬರೂ ಪ್ರತೀಕಾರದ ಹೆಸರಿನಲ್ಲಿ ಹಿಂಸೆಗೆ ಇಳಿಯಲಿಲ್ಲ. ನಿಮ್ಮ ಅಂತರ್ ಶಕ್ತಿ ಪ್ರೇರಣಾದಾಯಿಯಾದದ್ದು.
ಹಣಬಲ, ಅಧಿಕಾರ ಬಲದಿಂದ ಹೂಂಕರಿಸುತ್ತಿದ್ದ ಆಡಳಿತ ಪಕ್ಷವನ್ನು ಮೌಲ್ಯಗಳ ಆಧಾರದ ಮೇಲೆ ಎದುರಿಸಿದಿರಿ, ಮುಗಿಬಿದ್ದ ದುಷ್ಟಕೂಟಕ್ಕೆ ಸಂವಿಧಾನದ ಭಾಷೆಯಲ್ಲಿ ಉತ್ತರಿಸಿದ್ದೀರಿ.

ಇದೇ ನಮ್ಮ ಸಂಸ್ಕೃತಿ!

ಇದೇ ನಮ್ಮ ಪರಂಪರೆ,

ಇದೇ ಭಾರತೀಯತೆ!

ಗೆಳೆಯರೇ, ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದೆ ಕೆಲಸ ಮಾಡಿದ್ದೀರಿ. ನೂರಾರು ಜನ ಕಾರ್ಯಕರ್ತರು ಒಂದು ವರ್ಷದಿಂದ ವಿಸ್ತಾರಕರಾಗಿ ಬೆವರು ಹರಿಸಿದ್ದೀರಿ. ನಮ್ಮಲ್ಲಿ ಬಹಳಷ್ಟು ಜನರು ಕಳೆದ ಒಂದು ತಿಂಗಳಲ್ಲಿ 5 ಗಂಟೆಗಿಂತ ಹೆಚ್ಚು ನಿದ್ರಿಸಿಲ್ಲ, ಕುಟುಂಬದೊಂದಿಗೆ ಕಾಲ ಕಳೆದಿಲ್ಲ, ಮನೆಯ ಕಡೆ ಗಮನ ಕೊಟ್ಟಿಲ್ಲ, ಗೆಳೆಯರೊಂದಿಗೆ ಸುತ್ತಾಡಿಲ್ಲ. ಅವೆಲ್ಲ ಬಿಡಿ, ದಿನ್ಕಕೆ ಮೂರು ಹೊತ್ತು ಸರಿಯಾಗಿ ಊಟವನ್ನೇ ಮಾಡಿಲ್ಲ.

ಇಂದು ನಿಮ್ಮ ಕುಟುಂಬದೊಂದಿಗೆ ಅರ್ಧಗಂಟೆ ಟಿವಿ ನೋಡಿ, ಮಕ್ಕಳೊಂದಿಗೆ ಆಟವಾಡಿ, ವೃದ್ಧ ತಂದೆ-ತಾಯಿಗಳೊಂದಿಗೆ ಹರಟೆ ಹೊಡೆಯಿರಿ, ಆತ್ಮೀಯ ಸ್ನೇಹಿತನಿಗೆ ಫೋನ್ ಮಾಡಿ. ಎಲ್ಲ ಮುಗಿದ ಮೇಲೆ ಕನಿಷ್ಟ 8 ಗಂಟೆ ನಿದ್ದೆ ಮಾಡಿ.

ನಿಮ್ಮ ತ್ಯಾಗಕ್ಕೆ ಧನ್ಯವಾದ ಹೇಳಿದರೆ ನಿಮ್ಮನ್ನೇ ಅವಮಾನಿಸಿದಂತೆ. ಏಕೆಂದರೆ ನಿಮ್ಮದು ಪ್ರತಿಫಲಾಪೇಕ್ಷೆಯಿಲ್ಲದ ಕೆಲಸ.
ಶಹಬ್ಬಾಸ್ ಎನ್ನೋಣವೆಂದರೆ ನಿಮ್ಮ ತ್ಯಾಗವನ್ನು ಅಳೆದಂತೆ. ಅದು ಅಸಾಧು.

ಹಾಗಾಗಿ ಮೂರೇ ಮೂರು ಪದಗಳಲ್ಲಿ ಮುಗಿಸುತ್ತೇನೆ…..

“ಮತ್ತೆ ಕೆಲಸ ಮಾಡೋಣ”

– ಬಿ.ಎಲ್.ಸಂತೋಷ್

#KarnatakaVotes4BJP

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post