ಕಳೆದ ಮೂರ್ನಾಲ್ಕು ದಿನಗಳ ಹಿಂದೆ ರಾಜ್ಯದ ಮಾಜಿ ಮಂತ್ರಿ, ಮುಧೋಳದ ಮುರುಘೇಶ್ ನಿರಾಣಿಯವರ ಕಡೆಯವರಿಂದ ಹಲ್ಲೆಗೊಳಗಾದ ನನ್ನ ಸ್ನೇಹಿತನ ಬಗ್ಗೆ ಒಂದು ಪೋಸ್ಟ್ ಹಾಕಿದ್ದೆ. ಆ ಘಟನೆಯ ನಂತರ ತುಂಬ ಡಿಸ್ಟರ್ಬ್ ಆಗಿದ್ದೀನಿ. ನನ್ನ ನೋವು, ಕಳವಳಗಳನ್ನು ಹಂಚಿಕೊಳ್ಳಲು ಕೆಲವು ಸಾಲುಗಳನ್ನು ಬರೆಯುತ್ತಿದ್ದೇನೆ.
ನನ್ನ ಸ್ನೇಹಿತ, ರೈತ ಮತ್ತು ಕೃಷಿ ಸಲಕರಣೆಗಳ ವ್ಯಾಪಾರಸ್ಥ ವಿಶ್ವನಾಥ ಉದಗಟ್ಟಿಯೊಂದಿಗೆ ನಾನು ನಡೆಸಿದ ಸಂಭಾಷಣೆಯ ಆಧಾರದ ಮೇಲೆ ಘಟನೆಯ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಬರೆಯುತ್ತಿದ್ದೇನೆ. ಘಟನೆಯ ನೈಜತೆ ನಾನು ವಿವರಿಸಿರುವುದಕ್ಕಿಂತ ಹೆಚ್ಚು ಘೋರ ಮತ್ತು ಅಮಾನವೀಯವಾಗಿರುತ್ತದೆ. ಮುರುಘೇಶ್ ನಿರಾಣಿ ಮಾಲೀಕತ್ವದ, ಸಂಗಮೇಶ್ ನಿರಾಣಿ ನಿರ್ವಾಹಕತ್ವದಲ್ಲಿ ನಡೆಯುತ್ತಿರುವ ನಿರಾಣಿ ಸಕ್ಕರೆ ಕಾರ್ಖಾನೆ ಬಾಗಲಕೋಟೆ ಜಿಲ್ಲೆಯ ಮುಧೋಳ್ ನಗರ ವ್ಯಾಪ್ತಿಯಲ್ಲಿ ಬರುತ್ತದೆ. ಈ ಸಕ್ಕರೆ ಕಾರ್ಖಾನೆಯಿಂದ ನಗರದಲ್ಲಿ ಆಗುತ್ತಿರುವ ವಾಯುಮಾಲಿನ್ಯ ಮತ್ತು ಮುಧೋಳದ ಭಾಗದ ಜನರ ಕುಡಿಯುವ ನೀರಿನ ಸಂಪನ್ಮೂಲವಾದ ಘಟಪ್ರಭಾ ನದಿ ಮಾಲಿನ್ಯಗಳ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ (Pollution board) ವಿಶ್ವನಾಥ್ ದೂರುದಾಖಲಿಸಿದ್ದರು. ದೂರು ಕೊಟ್ಟಿದ್ದನ್ನೂ ಲೆಕ್ಕಿಸದೇ ಕಾರ್ಖಾನೆಯ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡಿ, ದೇಶದಲ್ಲೇ ಅತೀ ಹೆಚ್ಚು ಕಬ್ಬನ್ನು ನುರಿಸಿದ ಕಾರ್ಖಾನೆಯನ್ನಾಗಿ ಮಾಡಿದರು. “ಯಾರು ದೂರು ಕೊಟ್ಟರೆ ಏನು? ನಮ್ಮನ್ಯಾರು ಕೇಳುತ್ತಾರೋ ನೋಡೋಣ” ಅನ್ನುವ ದುರಹಂಕಾರವಲ್ಲವೇ ಇದು? ದೂರಿನನ್ವಯ ತಪಾಸಣೆ ನಡೆಸಿದ ಮಂಡಳಿ, ಸಕ್ಕರೆ ಕಾರ್ಖಾನೆಯಿಂದ ಆಗುತ್ತಿರುವ ಮಾಲಿನ್ಯ, ಮಿತಿಗಿಂತ ಹಲವಾರು ಪಟ್ಟು ಹೆಚ್ಚಿರುವುದನ್ನು ಕಂಡು, ಕಾರ್ಖಾನೆಗೆ ನೋಟೀಸ್ ಜಾರಿ ಮಾಡಿದೆ. ವಿಶ್ವನಾಥ್ ನೀಡಿದ ದೂರಿನಿಂದಲೇ ಇಷ್ಟೆಲ್ಲ ಆಗುತ್ತಿದೆ ಎಂದು ಅರಿತ ನಿರಾಣಿ ಸಹೋದರರು ತಮ್ಮ ಅಳಿಯನೊಂದಿಗೆ ರೌಡಿಗಳನ್ನು ಕಳುಹಿಸಿ, ಕೃಷಿ ಸಲಕರಣೆಗಳನ್ನು ವ್ಯಾಪಾರ ಮಾಡುತ್ತಿದ ವಿಶ್ವನಾಥ್-ರನ್ನು ಅಂಗಡಿಯಿಂದ ಕಿಡ್ನಾಪ್ ಮಾಡಿಸುತ್ತಾರೆ. ವಿಶ್ವನಾಥ್-ರನ್ನು ಎಳೆದು ಕರೆದೊಯ್ಯುವ ದೃಶ್ಯಗಳು CCTV ಯಲ್ಲಿ ರೆಕಾರ್ಡ್ ಆಗಿವೆ. ಕಿಡ್ನಾಪ್-ಮಾಡಿ ಯಾವುದೋ ಅಜ್ಞಾತ ಸ್ಥಳಕ್ಕೆ ಕರೆದೊಯ್ಯುತ್ತಿರುವಾಗ, “ನೀವು ನನ್ನನ್ನು ಬಲವಂತವಾಗಿ ಎಳೆದೊಯ್ಯುವ ದೃಶ್ಯಗಳು ನನ್ನ ಅಂಗಡಿಯ CCTVಯಲ್ಲಿ ರೆಕಾರ್ಡ್ ಆಗಿವೆ. ನೀವೇನೇ ಮಾಡಿದರೂ ಸಿಕ್ಕಿಬೀಳುತ್ತೀರಿ” ಎಂದು ವಿಶ್ವನಾಥ್ ತಿಳಿಸುತ್ತಾರೆ. ಬಹುಶಃ ಆ ಮಾತನ್ನು ವಿಶ್ವನಾಥ್ ಹೇಳದಿದ್ದರೆ ಅವರು ಜೀವಂತವಾಗಿ ಮರಳಿ ಬರುತ್ತಿರಲಿಲ್ಲವೇನೋ. ಆಗ ವಿಚಲಿತರಾದ ರೌಡಿಗಳು, ನಿರಾಣಿ ಸಹೋದರರಿಗೆ ಕರೆ ಮಾಡುತ್ತಾರೆ. ನಿರಾಣಿ ಸಹೋದರರ ದೂರವಾಣಿ ನಿರ್ದೇಶನದಂತೆ, ವಿಶ್ವನಾಥ್-ರನ್ನು ನಿರಾಣಿ ಸಕ್ಕರೆ ಕಾರ್ಖಾನೆಯಲ್ಲಿಯೇ ಒಂದು ಅಜ್ಞಾತ ಸ್ಥಳಕ್ಕೆ ಎಳೆದೊಯ್ಯಲಾಗುತ್ತದೆ.
ಇಷ್ಟರಲ್ಲಾಗಲೇ ಅಲ್ಲಿ ವಿಶ್ವನಾಥ್-ರ ಸಹೋದನಿಗೆ, ವಿಶ್ವನಾಥ್ ಅಪಹರಣವಾದ ವಿಷಯ ತಿಳಿದು, ಪೋಲೀಸರಿಗೆ ದೂರು ನೀಡಲು ಠಾಣೆಗೆ ಹೋಗುತ್ತಾರೆ. ಆಗ ಪೋಲಿಸರು ಸರಿಯಾಗಿ ಸ್ಪಂದಿಸುವುದಿಲ್ಲ. “ಕುಳಿತುಕೊಳ್ಳಿ, PSI ಬರಲಿ, ಕಾಯಿರಿ” ಎಂದೆಲ್ಲಾ ಸಬೂಬು ಹೇಳುತ್ತ್ತಾ ಯಾವುದೇ ದೂರನ್ನು ದಾಖಲಿಸಿಕೊಳ್ಳದೇ ಎರಡು ಘಂಟೆಗಳವರೆಗೆ ವಿಶ್ವನಾಥ್-ರ ಸಹೋದರನನ್ನು ಸತಾಯಿಸುತ್ತಾರೆ. ಆಗ ಬೇಸತ್ತ ವಿಶ್ವನಾಥ್-ರ ಸಹೋದರ ಹಲವರ ಸಹಾಯದಿಂದ DYSP ಮತ್ತು CPI ಅವರೊಂದಿಗೆ ಸಂಪರ್ಕ ಸಾಧಿಸಿ, ನಿರಾಣಿ ಸಹೋದರರಿಗೆ ಕರೆ ಮಾಡಿಸಿ, ವಿಶ್ವನಾಥ್-ನನ್ನು ಬಿಟ್ಟು ಕಳುಹಿಸುವಂತೆ ವಾರ್ನಿಂಗ್ ಮಾಡಿಸುತ್ತಾರೆ.
.
ಏಕಕಾಲದಲ್ಲೇ ಇತ್ತಕಡೆ ನಿರಾಣಿ ಸಹೋದರರ ನಿರ್ದೇಶನದಂತೆ, ರೌಡಿಗಳು, “ವಿಶ್ವನಾಥ್, ಕಾರ್ಖಾನೆಯ ಮಾಲಿನ್ಯದ ವಿರುದ್ಧ ಕೊಟ್ಟ ದೂರನ್ನು ಹಿಂದಕ್ಕೆ ಪಡೆದು, ನಿರಾಣಿ ಸಹೋದರರ ಕಾಲಿಗೆರಗಿ ಕ್ಷಮೆ ಯಾಚಿಸಬೇಕು” ಎಂದು ಒತ್ತಾಯ ಹೇರುತ್ತಾರೆ. ವಿಶ್ವನಾಥ್ ಒಪ್ಪದಿದ್ದಾಗ ಮತ್ತೆ ನಿರಾಣಿ ಸಹೋದರರ ದೂರವಾಣಿ ನಿರ್ದೇಶನದಂತೆ ದೈಹಿಕವಾಗಿ ಹಲ್ಲೆ ಮಾಡಲು ಶುರು ಮಾಡುತ್ತಾರೆ. ಮುಖ, ಬೆನ್ನು, ಕಾಲು ಎಲ್ಲ ಕಡೆ ರಕ್ತ ಹೆಪ್ಪುಗಟ್ಟುವ ಹಾಗೆ ಬಾರಿಸುತ್ತಾರೆ. ಪ್ರತೀ ಏಟು ಕೊಟ್ಟ ನಂತರವೂ ನಿರ್ಧಾರ ಬದಲಾಗುತ್ತದೆಯೇನೋ ಎಂದು ಅಪೇಕ್ಷಿಸುತ್ತಾ ಪ್ರಶ್ನೆ ಮಾಡುತ್ತಲೇ ಏಟು ಕೊಡುತ್ತಾರೆ. ತೀವ್ರವಾಗಿ ಹಲ್ಲೆಗೊಳಗಾದಮೇಲೂ ವಿಶ್ವನಾಥ್ ದೂರನ್ನು ಹಿಂಪಡೆಯಲು ಒಪ್ಪುವುದಿಲ್ಲ. “ನನ್ನ ಪ್ರಾಣ ಹೋದರೂ ಸರಿಯೇ, ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ” ಎಂಬುದನ್ನು ಸ್ಪಷ್ಟವಾಗಿ ವಿಶ್ವನಾಥ್ ಹಲ್ಲೆಕೋರರ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಮುಂದೇನು ಮಾಡಬೇಕೋ ತೋಚದ ಹಲ್ಲೆಕೋರರು ಕಾರ್ಖಾನೆಯ ವ್ಯವಸ್ಥಾಪಕರೊಬ್ಬರಿಗೆ ವಿಶ್ವನಾಥ್-ನನ್ನು ಒಪ್ಪಿಸಿ ಜಾಗ ಖಾಲಿ ಮಾಡುತ್ತಾರೆ. ಕಾರ್ಖಾನೆಯ ವ್ಯವಸ್ಥಾಪಕ ಮತ್ತೆ ವಿಶ್ವನಾಥ್-ನನ್ನು ದೂರು ಹಿಂಪಡೆಯು ಒತ್ತಾಯಿಸುತ್ತಾರೆ. ಅದಕ್ಕೆ ವಿಶ್ವನಾಥ್ ಜಗ್ಗದಿದ್ದಾಗ, ಅಲ್ಲಿಯೇ ಇದ್ದ ಮುಗ್ಧ ರೈತನಿಗೆ ವಿಶ್ವನಾಥ್ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ, ರೈತನ ಕಡೆಯಿಂದ ಹಲ್ಲೆ ಮಾಡಿಸುತ್ತಾನೆ. ಎಲ್ಲ ರೀತಿಯ ದೈಹಿಕ ಹಲ್ಲೆಗಳಿಗೂ ವಿಶ್ವನಾಥ್ ಜಗ್ಗದಿದ್ದಾಗ, ವ್ಯವಸ್ಥಾಪಕ ಮುಂದಿನ ನಿರ್ದೇಶನಕ್ಕಾಗಿ ನಿರಾಣಿ ಸಹೋದರರನ್ನು ಸಂಪರ್ಕಿಸುತ್ತಾರೆ. ವಿಶ್ವನಾಥರನ್ನು ಕಾರ್ಖಾನೆಯಲ್ಲಿಯೇ ಬಂಧಿಸಿಟ್ಟಿರಬಹುದು ಎಂಬ ಸುಳಿವಿನೊಂದಿಗೆ, ಅವರ ಕೆಲವು ಸಂಬಂಧೀಕರು ಕಾರ್ಖಾನೆಗೇ ಬಂದು, ವಿಶ್ವನಾಥರನ್ನು ಬಿಡುವಂತೆ ಬೇಡಿಕೊಳ್ಳುತ್ತಿರುತ್ತಾರೆ. ಅತ್ತ ವಿಶ್ವನಾಥರ ಸಂಬಂಧೀಕರ ಕಡೆಯಿಂದಲೂ, ಪೋಲೀಸ್-ಮೇಲಧಿಕಾರಿಗಳ ಕಡೆಯಿಂದಲೂ ವಿಶ್ವನಾಥ್-ರನ್ನು ಬಿಟ್ಟು ಕಳುಹಿಸುವಂತೆ ಒತ್ತಡ ಹೆಚ್ಚುತ್ತಿರುವುದನ್ನು ಗಮನಿಸಿ, ವಿಶ್ವನಾಥ್-ರನ್ನು ಬಿಟ್ಟು ಕಳುಹಿಸುವಂತೆ ವ್ಯವಸ್ಥಾಪಕನಿಗೆ ನಿರಾಣಿ ಸಹೋದರರು ನಿರ್ದೇಶನ ನೀಡುತ್ತಾರೆ.
ಇಷ್ಟೆಲ್ಲ ಆದಮೇಲೆ ದೈಹಿಕವಾಗಿ ಹಲ್ಲೆಗೊಳಗಾದ ವಿಶ್ವನಾಥ್, ಸಂಬಧಿಕರೊಂದಿಗೆ ದೂರು ಕೊಡಲು ಠಾಣೆಗೆ ಹೋಗುತ್ತಾರೆ. ಆಗ ಪೋಲೀಸ್ ಅಧಿಕಾರಿಗಳು, CCTVಯಲ್ಲಿ ರೆಕಾರ್ಡ್ ಆಗಿದೆ ಎನ್ನುವ ಕಾರಣಕ್ಕಾಗಿ ನಿರಾಣಿ ಸಹೋದರರ ಅಳಿಯನ ಹೆಸರನ್ನು ಉಳಿಸಿಕೊಂಡು, ನಿರಾಣಿ ಸಹೋದರರ ಹೆಸರನ್ನು ದೂರಿನಿಂದ ಅಳಿಸಿ ಹಾಕುತ್ತಾರೆ. ತೀವ್ರ ಹಲ್ಲೆಗೊಳಗಾದ ವಿಶ್ವನಾಥ್-ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹಲ್ಲೆಯ ವಿಷಯ ತಿಳಿದ ರೈತಸಂಘದವರು ನಿರಾಣಿ ಸಹೋದರರ ವಿರುದ್ಧ ಮುಧೋಳದ ಜದಗಾ ಬಾಳಾ ಸರ್ಕಲ್ ಎದುರು ಧರಣಿಗೆ ಕುಳಿತುಕೊಳ್ಳುತ್ತಾರೆ. ಈ ರೈತರ ಹೋರಾಟವನ್ನು ಹತ್ತಿಕ್ಕಲು, ಮುಷ್ಕರದಿಂದ ರಸ್ತೆಯಲ್ಲಿ ವಾಹನ ಸಂಚರಿಸಲಾಗದೇ ಜನಜೀವನ ಅಸ್ಥವ್ಯಸ್ತಗೊಂಡಿದೆ, ಹೋರಾಟ ಹಿಂಪಡೆಯಲು ಕೇಳಿಕೊಂಡರೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ರೈತಸಂಘದ ಮೇಲೂ ಇಲ್ಲಸಲ್ಲದ ಆಪಾದನೆ ಹೊರಿಸಿ ನಿರಾಣಿ ಸಹೋದರರ ಚಮಚಾಗಳ ಕಡೆಯಿಂದ ಪೋಲೀಸ್ ದೂರು ದಾಖಲಿಸಲಾಗುತ್ತದೆ. ಈ ಹೋರಾಟದಲ್ಲಿ ಏಕಾಂಗಿಯಾಗಿದ್ದ ರೈತ ವಿಶ್ವನಾಥರಿಗೆ, ರೈತಸಂಘದವರ ನೀಡಿದ ಬೆಂಬಲ ನಿಜವಾಗಿಯೂ ಪ್ರಶಂಸನೀಯ. ಆದರೆ ರಾಜಕಾರಣಿಗಳು ಯಾವ ಧರಣಿಗೆ ಜಗ್ಗುತ್ತಾರೆ ಹೇಳಿ. ಹೋರಾಟವನ್ನು ಬಗ್ಗುಬಡಿಯುವುದು ಅವರಿಗೇನು ಹೊಸತೇ?
ಕಾರ್ಖಾನೆಯ ಮಾಲಿನ್ಯದ ವಿಷಯವಾಗಿ, ವಿಶ್ವನಾಥ್ ಈ ಮೊದಲು ಕೂಡ ಹಲವು ಮಾಧ್ಯಮದ ವರದಿಗಾರರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ವರದಿ ಬರೆಯುವಂತೆ ಕೇಳಿಕೊಂಡಿದ್ದಾರೆ. ಮಾಧ್ಯಮದವರ ಕಡೆಯಿಂದ ಯಾವುದೇ ಧನಾತ್ಮಕ ಸ್ಪಂದನೆ ದೊರಕಿಲ್ಲ. ಇಷ್ಟೆಲ್ಲ ದೌರ್ಜನ್ಯ ಆದಮೇಲೂ ಕೂಡ, “ರೈತ ಸಂಘದಿಂದ ಖಾಸಗೀ ಕಾರ್ಖಾನೆಯ ವಿರುದ್ಧ ಪ್ರತಿಭಟನೆ” ಅಂತ ಒಂದು ಪತ್ರಿಕೆಯವರು ಒಂದು ಮೂಲೆಯಲ್ಲಿ ಪುಟ್ಟ ವರದಿ ಬರೆದು ಕೈತೊಳೆದುಕೊಳ್ಳುತ್ತದೆ. “ನಿರಾಣಿ ಕಾರ್ಖಾನೆ” ಅಂತ ಹೆಸರು ಬರೆಯಲು ಅವರಿಗೆ ಭಯವೋ ಏನೋ ಗೊತ್ತಿಲ್ಲ. ಇನ್ನೊಂದು ಪತ್ರಿಕೆ ಹೆಸರನ್ನು ಪ್ರಸ್ತಾಪಿಸಿ ವಿಷಯವನ್ನು ಸ್ಪಷ್ಟವಾಗಿ ಪ್ರಸ್ತಾಪಿಸಿ ಪ್ರಾಮಾಣಿಕತೆ ಮೆರೆದಿದೆ. ಈ ಘಟನೆ ಆದ ನಂತರ ನಾನೂ ಕೂಡ ಕೆಲವು ಮಾಧ್ಯಮದವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಯಾವ ಪ್ರಯೋಜನವೂ ಆಗಲಿಲ್ಲ. TV5 ವಾಹಿನಿಯನ್ನು ಯಾರು ಸಂಪರ್ಕಿಸಿದ್ದರೋ ಗೊತ್ತಿಲ್ಲ, ಅದು ಒಂದು ವರದಿ ಪ್ರಸಾರ ಮಾಡಿತು. ಲೈವ್ ವಾರ್ತೆಯಲ್ಲಿ ವಿಶ್ವನಾಥರಿಗೆ ಕರೆ ಮಾಡಿ, ಪ್ರಕರಣದ ವಿವರಣೆಯನ್ನು ಹೇಳಲು ಅವಕಾಶ ಮಾಡಿಕೊಟ್ಟಿತು. ಅದಕ್ಕಾಗಿ TV5ಗೆ ಧನ್ಯವಾದಗಳು.
ನನ್ನ ಸ್ನೇಹಿತನೇ ಹೇಳುವಂತೆ, ರಾಜಕಾರಣಿಗಳು, ಬಲಾಢ್ಯರು, ದುಡ್ಡು ಮತ್ತು ಅಧಿಕಾರದ ಬಲದಿಂದ ವ್ಯವಸ್ಥೆಯನ್ನು, ಕಾನೂನನ್ನು, ಮಾಧ್ಯಮವನ್ನು ಹೇಗೆ ತಮ್ಮ ಕೈಗೊಂಬೆ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಈ ಪ್ರಕರಣ ಒಂದು ನಿದರ್ಶನ. ಈ ಹೋರಾಟದಲ್ಲಿ ನನ್ನ ಸ್ನೇಹಿತ ಏಕಾಂಗಿ. ಪೆಟ್ಟು ತಿಂದಮೇಲೆ ನೈತಿಕವಾಗಿ ನನ್ನಂಥ ಕೆಲವು ಸ್ನೇಹಿತರು ಬೆಂಬಲಕ್ಕೆ ನಿಂತರೂ ಕೂಡ ನೇರವಾಗಿ ಜೀವದ ಹಂಗನ್ನು ತೊರೆದು ಹೋರಾಟಕ್ಕಿಳಿದು ನೋವನ್ನು ಅನುಭವಿಸುತ್ತಿರುವವನು ಅವನೊಬ್ಬನೇ. ನಮ್ಮ ಸಮಾಜದಲ್ಲಿ ಅನ್ಯಾಯದ ವಿರುದ್ಧ ಹೋರಾಡುವವರನ್ನು ಏಕಾಂಗಿಗಳನ್ನಾಗಿ ಮಾಡಲಾಗುತ್ತದೆ. ಯಾವುದಾರರೂ ಒಂದು ಪಕ್ಷದ ರಾಜಕಾರಣಿಯ ಅನಾಚಾರದ ವಿರುದ್ಧ ಹೋರಾಟ ಮಾಡಬೇಕಾದರೆ ಇನ್ನೊಂದು ರಾಜಕೀಯ ಪಕ್ಷದ ಸದಸ್ಯನಾಗಲೇಬೇಕು. ಎಲ್ಲ ರಾಜಕೀಯ ಪಕ್ಷದಲ್ಲೂ ಕಳ್ಳರು, ಸಮಾಜದ್ರೋಹಿಗಳು, ದರೋಡೆಕೋರರೇ ತುಂಬಿರುವುದನ್ನು ಅರಿತ ವಿಶ್ವನಾಥರಂಥವರು ಪಕ್ಷಾತೀತವಾಗಿ ಪ್ರಾಮಾಣಿಕವಾಗಿ ಏನಾದ್ರೂ ಹೋರಾಟಕ್ಕೇ ಇಳಿದ್ರೋ.. ಪಕ್ಷಾತೀತವಾಗೇ ಅವರ ಬೆನ್ನುಮೂಳೆ ಮುರಿಯುತ್ತಾರೆ.
ಇದನ್ನು ರಾಜಕೀಯ ವಿಷಯವಾಗಿ ಮಾತನಾಡಲು ನಾನು ಇಷ್ಟ ಪಡುವುದಿಲ್ಲ. ಕಾಂಗ್ರೆಸ್ಸ್-ಬಿಜೆಪಿ-ಜೆಡಿಎಸ್ ಎಲ್ಲ ಪಕ್ಷದಲ್ಲಿಯೂ ದರೋಡೆಕೋರ ರಾಜಕಾರಣಿಗಳು ತುಂಬಿಕೊಂಡಿದ್ದಾರೆ ಎಂಬುದರಲ್ಲಿ ಸಂಶಯವೇ ಬೇಡ. ರಾಜಕಾರಣಿಗಳನ್ನು ದರೋಡೆಕೋರರನ್ನಾಗಿ, ಗೂಂಡಾಗಳನ್ನಾಗಿ ಮಾಡಿದವರು ನಾವೇ. ಈ ದುರ್ಗತಿಯ ಪರಿಪೂರ್ಣ ಶ್ರೇಯಸ್ಸು ನಮಗೇ ಸಲ್ಲಬೇಕು. ಚುನಾವಣೆ ಬಂತೆಂದರೆ ಹಣ, ಹೆಂಡದಾಸೆಗೆ ರಾಜಕಾರಣಿಗಳ ಚಮಚಾಗಿರಿ ಮಾಡಿ ಓಟು ಒತ್ತುವವರು ನಾವೇ. ರಾಜಕಾರಣಿಗಳು ಎಷ್ಟೇ ಕೊಳ್ಳೆ ಹೊಡೆದರೂ, ಸಿದ್ಧಾಂತದ ಹೆಸರಿನಲ್ಲಿ, ಜಾತಿ-ಧರ್ಮದ ಹೆಸರಿನಲ್ಲಿ, ಮತಿಹೀನರಾಗಿ ನಮ್ಮತನವನ್ನು ಅಡಕ್ಕಿಟ್ಟು ಓಟು ಒತ್ತುವವರು ನಾವೇ. ಒಬ್ಬ ರಾಜಕಾರಣಿ ಸಮಾಜಮುಖಿಯಾಗಿ, ಭ್ರಷ್ಟನಲ್ಲದೇ ಸಮಾಜಮುಖಿಯಾಗಿ ಕೆಲಸಮಾಡುವಂಥವನೇ ಆಗಿರಬೇಕು ಎಂದು ನಾವು ಯಾವತ್ತೂ ಅಪೇಕ್ಷಿಸುವುದೇ ಇಲ್ಲ. ಯಾವ ರಾಜಕಾರಣಿ ಗೆದ್ದರೆ ನನಗೆ ವೈಯಕ್ತಿಕವಾಗಿ ಏನು ಸಿಗಬಹುದು ಎಂಬ ಸ್ವಾರ್ಥದ ಲೆಕ್ಕಾಚಾರದಲ್ಲಿ ಓಟು ಒತ್ತುವವರು ನಾವೇ. ನಿಜವಾಗಿಯೂ ನಾವು ನಿರ್ವೀರ್ಯರು, ನಮ್ಮನ್ನೇ ಮಾಡಿಕೊಂಡವರು, ಮತಿಹೀನರು ಅಂತ ಹೇಳಿಕೊಳ್ಳಲು ನನಗೆ ಯಾವುದೇ ನಾಚಿಕೆ, ಸಂಕೋಚ ಇಲ್ಲ. ದೇಶ ಕೊಳ್ಳೆ ಹೊಡೆಯುವವರನ್ನು, ರೌಡಿಗಳನ್ನು ಪಕ್ಷದಲ್ಲಿ ತುಂಬಿಕೊಂಡು ವಿಶ್ವಗುರು ಭಾರತ ಮಾಡಲು ಹೊರಟಿದೆ ಬಿಜೆಪಿ. ಈ ಬರಹವನ್ನು ಓದಿದ ಯಾವುದಾದರೂ ಒಬ್ಬ ಬಿಜೆಪಿಯ ದೇಶಪ್ರೇಮಿ ಪುಣ್ಯಾತ್ಮ ನಿರಾಣಿ ಸಹೋದರರಿಗೆ ಬೆಂಬಲಿಸುವುದನ್ನು ನಿಲ್ಲಿಸಿತ್ತಾನೋ ನೋಡೋಣ. ಈ ಪ್ರಕರಣದ ಬಗ್ಗೆ ತಿಳಿದುಕೊಂಡು, ರಾಜ್ಯ ಬಿಜೆಪಿ ನಾಯಕರು ಇಂಥ ಗೂಂಡಾಗಳಿಗೆ ಚುನಾವಣೆಯಲ್ಲಿ ಟಿಕೇಟ್ ಕೊಡುವುದೇ ಬೇಡ ಅಂತ ನಿರ್ಧರಿಸುತ್ತಾರೋ ಏನೋ ಕಾಯ್ದು ನೋಡೋಣ..
ತುಂಬಾ ನೋವಾಗುತ್ತಿದೆ. ಇಂಥ ದುಸ್ಥಿತಿಯಲ್ಲಿ ಏನು ಹೇಳಬೇಕು ನನ್ನ ಸ್ನೇಹಿತನಿಗೆ?. “ಕಾರ್ಖಾನೆಯ ಮಲಿನ, ಗೊಬ್ಬು ವಾಸನೆ ಕುಡಿದು ನಾನಾ ರೋಗಗಳು ಬಂದು ಜನ ಸತ್ತು ಹೋಗಲಿ. ಅದೇ ವಾಸನೆಗೆ ರೋಗಗ್ರಸ್ಥರಾಗಿ ನಿರಾಣಿ ವಂಶವೂ ನಿರ್ವಂಶವಾಗಲಿ, ನಿರ್ವೀರ್ಯವಾದ ಸಮಾಜಕ್ಕೆ ದುರ್ಗತಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ; ನಿನ್ನ ಪಾಡಿಗೆ ನೀನು ಸುಮ್ಮನಿದ್ದು ಬಿಡು, ನಿನ್ನ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಊರನ್ನು ಬಿಡು.. ನಿನಗ್ಯಾಕೆ ಬೇಕು ಜೀವದ ಹಂಗು ತೊರೆದು ಹೋರಾಡುವ ಇಲ್ಲದ ಉಸಾಬರಿ” ಎಂದು ಹೇಳಿ ಕೈತೊಳೆದುಕೊಳ್ಳಲೇ? ಅಥವಾ “ಗೆಳೆಯಾ ನೀನು ಮುನ್ನುಗ್ಗು, ಕೈಕಾಲು, ಬೆನ್ನು ಮೂಳೆ ಮುರಿದರೂ ಜಗ್ಗಬೇಡ, ಪ್ರಾಣದ ಹಂಗು ತೊರೆದು ಮುನ್ನುಗ್ಗು. ನಾನು ದೂರ ಇದ್ದು ನಿನ್ನನ್ನು ಬೆಂಬಲಿಸುತ್ತೇನೆ; ಸುರಕ್ಷಿತವಾದ ಸ್ಥಳದಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಾ ಉತ್ತರನ ಪೌರುಷ ತೋರಿಸುತ್ತಿರುತ್ತೇನೆ” ಎಂದು ಧೈರ್ಯ ಹೇಳಲೇ? ಏನೂ ಹೇಳಲಾರೆ.. ನನ್ನಂಥ ಬಲಹೀನರಿಂದ ನಿನ್ನಂಥ ಧೈರ್ಯಶಾಲಿಗಳಿಗೆ ಸಿಗುವ ಬೆಂಬಲ ಇಷ್ಟೇ..
ನನ್ನಷ್ಟೇ ಬಲಹೀನರು ಯಾರಾದರೂ ಇದ್ದರೆ, ಅಲ್ಪಸ್ವಲ್ಪ ಸಾಮಾಜಿಕ ಕಾಳಜಿ ನಿಮ್ಮಲ್ಲಿ ಉಳಿದಿದ್ದರೆ ದಯವಿಟ್ಟು ಈ ಪೋಸ್ಟನ್ನು ಶೇರ್-ಮಾಡಿ. ಬಲಶಾಲಿಗಳು ಅಂತ ಯಾರಾದರು ಇದ್ದರೆ ಈ ಬಗ್ಗೆ ಹೆಚ್ಚಿನದನ್ನು ನೀವೇನು ಮಾಡಬಲ್ಲಿರಿ ಎಂಬುದನ್ನು ವಿಚಾರಿಸಿ, ನಿಮ್ಮ ಕೈಲಾದ ಹೋರಾಟಕ್ಕಿಳಿಯಿರಿ. ಒಳ್ಳೆಯವರ ನಿರ್ವೀರ್ಯತೆಯೇ ಕೆಟ್ಟವರ ಅಟ್ಟಹಾಸಕ್ಕೆ ಕಾರಣ. ಸಮಾಜ ದುರ್ಗತಿಗೆ ಬರಲು ಕೆಟ್ಟವರ ಕುಕೃತ್ಯಗಳಿಗಿಂತಲೂ ಒಳ್ಳೆಯವರ ಮೌನವೇ ಹೆಚ್ಚು ಕಾರಣ.
- ವೀರಣ್ಣ ಹಾಲಣ್ಣನವರ್
Facebook ಕಾಮೆಂಟ್ಸ್