1973ರ ಎಪ್ರಿಲ್ ಇಪ್ಪತ್ತನಾಲ್ಕನೆಯ ದಿನವದು. ಮುಂಬೈನ ಗದ್ದಲ, ಗಲಾಟೆಗಳು ಜನಮಾನಸವನ್ನು ಎಂದಿನಂತೆಯೇ ಆವರಿಸಿದ್ದವು. ಜನಜಂಗುಳಿಯಲ್ಲಿ ನೂರಾರು ತರಾತುರಿಗಳನ್ನು ತಮ್ಮದಾಗಿಸಿಕೊಂಡು ಜನ ಏಗುತ್ತಿದ್ದರು. ನಗರ ಎಂದರೆ ಸುಮ್ಮನೆಯೇ ಹೊಟ್ಟೆಪಾಡಿಗಾಗಿ ದುಡಿದು ತಿನ್ನುವವರು ಒಂದೆಡೆ, ನಾಳಿನ ಬುತ್ತಿಯನ್ನರಸಿ ಕನಸು ಕಾಣುವವರು ಒಂದೆಡೆ, ಸಾಕಿನ್ನು ಬದುಕು ಎಂದು ಮರಳಿ ಊರಿನ ಬಂಡಿ ಹತ್ತುವ ಜನರೊಂದೆಡೆ ಈ ಸಾವಿರಾರು ತಲ್ಲಣ, ತವಕಗಳ ನಡುವೆ ಕಾದಂಬರಿಕಾರರೊಬ್ಬರು ನಿರ್ಮಲಾ ನರ್ಸಿಂಗ್ ಹೋಮ್‍ನಲ್ಲಿ ಶತಪಥ ತಿರುಗುತ್ತಿದ್ದರು. ಹೆಂಡತಿ ರಜನಿ ತುಂಬು ಗರ್ಭಿಣಿಯಾದುದರಿಂದ ಅವರಿಗೆ ಗಾಬರಿಗಳು ದಶದಿಕ್ಕುಗಳಲ್ಲೂ ಮನೆ ಮಾಡಿದ್ದವು. ಅವರು ಕಾದಂಬರಿ ಬರೆದು ಸಾಹಿತ್ಯಾಸಕ್ತರ ಮನವನ್ನೇನೋ ಗೆದ್ದಿದ್ದರು. ಆದರೆ ಬದುಕು ಗೆಲ್ಲುವ ಪರೀಕ್ಷೆ ಆ ದಿನ ಅವರದಾಗಿತ್ತು. ಆದರೆ ಅವರ ಧರ್ಮಪತ್ನಿ ಕಾದಂಬರಿಕಾರನಿಗೆ ಬರೇ ಮಗುವನ್ನು ಹೆತ್ತಕೊಡಲಿಲ್ಲ ಬದಲಾಗಿ ದಂತಕತೆಯನ್ನೇ ಮಡಿಲಿಗೆ ಹಾಕಿದಳು. ‘ಭಾರತದ ನಭೋಮಂಡಲದಲ್ಲಿ ಸದಾ ಪ್ರಜ್ವಲಿಸುವೆ’ ಅನ್ನುವಂತೆ ಮಗು ಕಾಲುಗಳನ್ನು ಅಲ್ಲಾಡಿಸಿ ಕೇಕೆ ಹಾಕಿದಾಗ ರಮೇಶ್ ಖುಷಿ ಪಟ್ಟಿದ್ದರು. ಅವರ ಖುಷಿಯನ್ನು ಪ್ರಪಂಚದಾದ್ಯಂತ ಪಸರಿಸುವ ಮಟ್ಟಿಗೆ ಮಗ ಬೆಳೆದು ನಿಂತ. ‘ತಾನು ಓಡಿ ನಿಂತದ್ದೆಲ್ಲವೂ ಚರಿತ್ರೆ’ ಎನ್ನುವಂತೆ ಆತ ಬದುಕಿದ. ಆ ಮಹಾನುಭಾವ ಬೇರಾರೂ ಅಲ್ಲ, ಸಚಿನ್ ರಮೇಶ್ ತೆಂಡೂಲ್ಕರ್!!
ದೇಶವನ್ನು ಗೆಲ್ಲಿಸುವುದಕ್ಕೆ ನಾನಾ ಬಗೆಯ ದಾರಿಗಳಿವೆ. ಒಂದೋ ಸಮರಶೂರನಂತೆ ನಾವೇ ಅಖಾಡಕ್ಕೆ ಧುಮುಕಬೇಕು ಇಲ್ಲದಿದ್ದರೆ ಯಾರು ದೇಶಕ್ಕಾಗಿ ಹೆಣಗುತ್ತಾನೋ ಅವನಿಗೆ ಹೆಗಲನ್ನೀಯಬೇಕು. ಊಹ್ಞೂ ನಾವೆಲ್ಲ ಪಂಡಿತ ಶಿಖಾಮಣಿಗಳಲ್ಲವೇ ಅದಕ್ಕಾಗಿ ಯಾರನ್ನೂ ಮುಂದೆ ಹೋಗಲು ಬಿಡುವವರಲ್ಲ, ತಾವೇ ಖುದ್ದಾಗಿ ಮಾಡುವವರಂತೂ ಅಲ್ಲವೇ ಅಲ್ಲ. ರಾಜ್ಯಸಭೆಯಲ್ಲಿ ಸಚಿನ್ ತೆಂಡೂಲ್ಕರ್ ಮಾತನಾಡಲು ಚಡಪಡಿಸಿದಾಗ ಅವರ ಪಾಲಿಗೆ ಅವಕಾಶ ದಕ್ಕದೇ ಹೋದಾಗ ರಾಜಕಾರಣಿಗಳ ಮೇಲೆ ಕೆಟ್ಟ ಕೋಪವೊಂದು ಮನದೊಳಗೆ ಬುಸುಗುಡುತ್ತಲಿತ್ತು. ರಾಜ್ಯಸಭೆ ಎನ್ನುವುದು ಈ ದೇಶದ ಪ್ರಾಜ್ಞರ ಸದನ. ಭೌದ್ದಿಕವಾದ ಮೇರುತನಕ್ಕೆ ಅದು ಕಲಶಪ್ರಾಯದಂತೆ ಇರಬೇಕು. ವಿಜ್ಞಾನಿಗಳು, ಆರ್ಥಿಕ ತಜ್ಞರುಗಳು, ಕ್ರಾಂತಿ ನಿರ್ಮಿಸಿದವರು ಬದುಕನ್ನು ದೇಶಸೇವೆಗೆ ಮುಡಿಪಿಟ್ಟವರ ಮನೆಯದು. ಮೇಲ್ಪಂಕ್ತಿ ಎನ್ನುವುದಕ್ಕೆ ಮತ್ತೊಂದು ಮೇರುಗಿರಿ ಇದ್ದರೆ ಅದು ಭಾರತದ ಪಾಲಿಗೆ ರಾಜ್ಯಸಭೆ. ಅದರ ಅಷ್ಟೂ ಘನತೆಗಳನ್ನು ಸಚಿನ್ ಮೂಖನಂತೆ ನೋಡುತ್ತ ನಿಲ್ಲುವ ದೌರ್ಭಾಗ್ಯ ಮೊನ್ನೆ ಎದುರಾಯಿತು.
ಸಚಿನ್ ರಾಜಕಾರಣಕ್ಕೆ ಗಂಟು ಕೂಡಿಡಲು ಬಂದವರಲ್ಲ. ಹೆಸರು ಮಾಡುವ ಹಂಬಲಗಳೂ ಅವರಿಗಿರಲಿಲ್ಲ. ಅವರನ್ನು ಕಾಂಗ್ರೆಸ್ ರಾಜ್ಯಸಭೆಗೆ ಆರಿಸಿದಾಗ ಜನ , ಅವರ ಅಭಿಮಾನಿಗಳು, ಇಡೀಯ ಭಾರತವೇ ಲಿಟಲ್ ಮಾಸ್ಟರ್‍ಗೆ ಗೌರವ ಸಂದಿತು ಅಂದುಕೊಂಡಿದ್ದರು. ಆದರೆ ಸಚಿನ್‍ರ ಸಾಧನೆಯನ್ನು ಬಾಯಿಬಡುಕತನವೇ ಅಣಕಿಸಿತಲ್ಲ ಅನ್ನುವುದೇ ದುರಂತ!
1999ರ ವಿಶ್ವಕಪ್‍ನಲ್ಲಿ ಜಿಂಬಾಬ್ವೆ ವಿರುದ್ದದ ಪಂದ್ಯಕ್ಕೆ ಭಾರತ ಅಣಿಯಾಗುತ್ತಿತ್ತು. ಇದ್ದಕ್ಕಿದ್ದಂತೆ ಭಾರತದಿಂದ ಬರಸಿಡಿಲಿನಂತೆ ಸುದ್ದಿಯೊಂದು ರವಾನೆಯಾಯಿತು. ಲಿಟ್ಲ್‍ಮಾಸ್ಟರ ತಂದೆ ರಮೇಶ್ ತೆಂಡೂಲ್ಕರ್ ಇಹಲೋಕ ತ್ಯಜಿಸಿದ್ದರು. ತಂದೆ ದೂರವಾದ ಸನ್ನಿವೇಶವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಚಿನ್ ಕೈಲಾಗಲಿಲ್ಲ. ವಿಮಾನ ಹತ್ತಿ ಶೋಕತಪ್ತರಾಗಿ ಮುಂಬೈಗೆ ಬಂದಿಳಿದರು. ಟೀಮ್ ಮ್ಯಾನೇಜರ್ ಆಗಿದ್ದ ಬ್ರಿಜೇಷ್ ಪಟೇಲ್ ತಂಡದ ಆಟಗಾರರಿಗೆ ಧೈರ್ಯ ತುಂಬುವ ವೇಳೆ ‘ಸಚಿನ್ ತಂದೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರಿನ್ನೂ ಚೇತರಿಸಲು ಸಮಯ ಹಿಡಿಯಬಹುದು, ಕೀನ್ಯಾ ವಿರುದ್ದದ ಪಂದ್ಯದಲ್ಲಿಯೂ ಅವರನ್ನು ನಾನು ಅಪೇಕ್ಷೆ ಮಾಡಲಾರೆ’ ಅಂದಿದ್ದರು. ವಾಸ್ತವ ಹೀಗಿದ್ದರೂ ಭಾರತದ ಪಾಲಿಗೆ ಕೀನ್ಯಾದ ಪಂದ್ಯ ಅತ್ಯಂತ ಮಹತ್ವದ್ದಾಗಿತ್ತು. ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲುಂಟಾಗಿತ್ತು. ದೇಶವೇ ನಿರೀಕ್ಷಿಸದ ವೇಳೆಯಲ್ಲಿ ಸಚಿನ್ ಬ್ರಿಸ್ಟಲ್‍ಹಾದಿ ಹಿಡಿದಿದ್ದರು.
‘ಅವತ್ತು ಮನೆಯಲ್ಲಿ ತಂದೆಯಿಲ್ಲದೆ ನನ್ನ ಸುತ್ತಲೂ ಕತ್ತಲೆ ಕವಿದಿತ್ತು’ ಅನ್ನುವ ಸಚಿನ್ ಬ್ರಿಸ್ಟಲ್‍ನ ಕಂಟ್ರಿ ಗ್ರೌಂಡಿನ ಮೂಲೆಮೂಲೆಗೂ ಚೆಂಡನ್ನು ಆ ದಿನ ಬಡಿದಟ್ಟಿದರು. 140ರ ಆ ಅಮೋಘ ಇನ್ನಿಂಗ್ಸಿನಲ್ಲಿ ಭಾರತದ ಬಗೆಗಿನ ಉತ್ಕಟ ಪ್ರೇಮಗಳು ಜ್ವಾಲೆಗಳಾಗಿ ಮಾರ್ಪಟ್ಟಿದ್ದವು. ಅಂತಿಮವಾಗಿ ಸಚಿನ್ ಅಜೇಯರಾಗಿಯೇ ಉಳಿದರು.
ಇಂತಹ ಸಾಧನೆಗಳನ್ನು ಪ್ರಾಜ್ಞರ ಸದನದಲ್ಲಿ ಅವಮಾನ ಮಾಡಿದಂತಾಗಲಿಲ್ಲವೇ? ಎಂದಿಗೂ ಮಣಿಯದ ಸಚಿನ್ ಭ್ರಮನಿರಸನಕ್ಕೆ ಒಳಗಾಗುವಂತಾಯಿತು. ಆನಂದ್ ಶರ್ಮರಂತಹ ಹಿರಿಯರನ್ನು ವೆಂಕಯ್ಯ ನಾಯ್ಡುರವರು ಪರಿಪರಿಯಾಗಿ ಬೇಡಿಕೊಂಡರೂ ಅದು ಸಫಲವಾಗಲಿಲ್ಲ. ಕ್ರೀಡಾಪಟುವಿನ ನೋವುಗಳು, ಸಮಸ್ಯೆಗಳ ಕುರಿತಾಗಿ ಸಚಿನ್ ಮಾತನಾಡುವವರಿದ್ದರು ಆದರೆ ಸದನ ರಾಜಕೀಯದಲ್ಲಿ ಅದನ್ನು ಮುಕ್ಕಾಗಿಸಿತು.
ಸಚಿನ್ ಈ ಮೇರುಶಿಖರ ತಲುಪಲು ಯಾವ ಪ್ರಭಾವಗಳನ್ನೂ ಬಳಸಿಕೊಳ್ಳಲಿಲ್ಲ. ಪರಿಶ್ರಮವನ್ನು ಮಾತ್ರವೇ ತನ್ನ ಪಥವಾಗಿ ಮಾರ್ಪಡಿಸಿದರು. ಅವರ ಕೋಚ್ ರಮಾಕಾಂತ್ ಅಚ್ರೇಕರ್ ಸಚಿನ್ ಅಭ್ಯಾಸದ ಸಮಯದಲ್ಲಿ ವಿಕೆಟ್ ಮೇಲೆ ಒಂದು ರೂಪಾಯಿ ನಾಣ್ಯವಿಡುತ್ತಿದ್ದರಂತೆ. ಸಚಿನ್ ನಿರ್ಗಮನಕ್ಕೆ ಯಾರು ಕಾರಣರಾಗುತ್ತಾರೋ ಅವರಿಗೆ ಆ ನಾಣ್ಯ ಸಲ್ಲುತ್ತಿತ್ತಂತೆ. ಆ ನಾಣ್ಯಗಳನ್ನು ಅನೇಕ ಬಾರಿ ಸಚಿನ್ ಅವರೇ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರೆಂದರೆ ಅವರ ಏಕಾಗ್ರತೆಯ, ಪರಿಶ್ರಮದ ಮಟ್ಟವನ್ನು ನಾವು ಅರ್ಥೈಸಿಕೊಳ್ಳಬೇಕು. ವೇಗದ ಬೌಲರ್ ಆಗಬೇಕೆಂಬ ಕನಸು ಹೊತ್ತಿದ್ದ ತೆಂಡೂಲ್ಕರ್‍ಗೆ ಡೆನಿಸ್‍ಲಿಲ್ಲಿ ನಿರಾಸೆ ಮಾಡಿದ್ದರು. ಬೌಲಿಂಗ್ ಬದಲಾಗಿ ಬ್ಯಾಟಿಂಗ್ ನಡೆಸುವಂತೆ ಹೇಳಿದ್ದರಂತೆ. 1987ರಲ್ಲಿ ಮುಂಬಯಿನಲ್ಲಿ ಕ್ರಿಕೆಟ್ ಜರುಗುತ್ತಿದ್ದಾಗ ಇದೇ ಸಚಿನ್ ಬಾಲ್ ಬಾಯ್ ಆಗಿದ್ದರೆನ್ನುವುದನ್ನೂ ಇತಿಹಾಸ ದಾಖಲಿಸುತ್ತದೆ. ಇನ್ನು ಟೆನಿಸ್ ಎಲ್ಬೋ ಸಮಸ್ಯೆಯಿಂದ ಬಲಳುತ್ತಿದ್ದ ಸಚಿನ್ ಅನೇಕ ಸಂಕಷ್ಟಗಳನ್ನು ಎದುರಿಸುತ್ತಲೇ ಮುನ್ನುಗಿದವರು. ಚೆಂಡು ವಿರೂಪದಂತಹ ವೃಥಾ ಆರೋಪಗಳನ್ನು ದಿಟ್ಟವಾಗಿಯೇ ಎದುರಿಸಿದವರವರು. ಅಂತಹವರು ಈ ದೇಶದ ಕ್ರೀಡೆಯ ರಾಯಭಾರಿಯಾಗಬೇಕಿತ್ತು ಆದರೆ ನಮ್ಮ ರಾಜ್ಯಸಭೆ ಮಾತ್ರ ಅವಮಾನ ಮಾಡಿತೆಂಬುದೇ ಬೇಸರದ ಸಂಗತಿ.
ಅವರ ಮೇಲಿನ ಅಭಿಮಾನಗಳೇನಾದರೂ ಕಡಿಮೆಯಾ? ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಹೇಳುತ್ತಿದ್ದರು “ನಾನು ದೇವರನ್ನು ನೋಡಿದ್ದೇನೆ ಅವರು ನಾಲ್ಕನೆಯ ಕ್ರಮಾಂಕದಲ್ಲಿ ಆಡಲು ಬರುತ್ತಾರೆ” ಎಂಬುದಾಗಿ, ಅದೇ ಸಚಿನ್‍ಗಾಗಿ ಅಭಿಮಾನ ಪಟ್ಟು ದೇಶವಿದೇಶ ಸುತ್ತಿ ಭಾರತದ ಬಾವುಟ ಬೀಸುತ್ತಿದ್ದ ಸುಧೀರ್ ಕುಮಾರ್ ಚೌದರಿ “ಕ್ರಿಕೆಟ್ ನನ್ನ ಧರ್ಮ ಸಚಿನ್ ನನ್ನ ದೇವರು” ಎನ್ನುತ್ತ ಭಾವುಕರಾಗುತ್ತಿದ್ದರು. ಅವರ ವಿಕೆಟ್ ಪಡೆದ ಬಾಲ್‍ಗಳು ಅನೇಕರ ಬೀರುಗಳಲ್ಲಿ ಇಂದಿಗೂ ಭದ್ರವಾಗಿದೆ. ಅದೇ ಒಂದು ದಂತಕತೆ . ಅದಕ್ಕಾಗಿಯೇ ಅವರಿಗೆ ಭಾರತರತ್ನ ಕೊಟ್ಟು ಗೌರವಿಸಲಾಗಿದೆ. ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮಶ್ರೀ, ಪದ್ಮವಿಭೂಷಣ, ವಾಯುಪಡೆಯ ವಿಶಿಷ್ಟ ಹುದ್ದೆಗಳನ್ನು ಅವರ ಸಾಧನೆಗಾಗಿ ನೀಡಲಾಗಿದೆ. ಆದರೆ ಸಚಿನ್ ಮಾತ್ರ ‘ ನಾನು ದೇವರಲ್ಲ ದೇವರು ತಪ್ಪು ಮಾಡುವುದಿಲ್ಲ’ ಎಂದು ವಿನಮ್ರರಾಗುತ್ತಿದ್ದರು. ಇಂತಹವರ ಬದುಕನ್ನು ನೋಡಿದರೆ ಅಲ್ಲಿ ಭಾರತದ ಬೆಳಕುಗಳು ಗೋಚರಿಸುತ್ತದೆ. ಆದರೆ ನಮ್ಮ ರಾಜಕಾರಣಕ್ಕೆ ಆ ವ್ಯವಧಾನಗಳಿಲ್ಲ. ದೇಶ ನೋಡುತ್ತಿದೆ ಅಂದರೂ ಕೇಳುವ ಸಹನೆಗಳಿಲ್ಲ.
ಸಾಮಾನ್ಯವಾಗಿ ಕ್ರಿಕೆಟ್ ಆಡಲು ಪ್ರಾರಂಭ ಮಾಡುವಾಗ ದೇಶದ ಎಲ್ಲ ಬಾಲರಿಗೂ ಒಂದು ಕಹಿ ಅನುಭವವಾಗುತ್ತದೆ. ಕಿಟಕಿ ಗಾಜುಗಳನ್ನು ಒಡೆದಾಗ ತಪರಾಕಿಯೂ ಲಭಿಸುತ್ತದೆ. ಆದರೆ ಬಡತನ ಇದ್ದಾಗಲೂ ಆಟದ ಮೋಹದಲ್ಲಿ ಚೆಂಡು ಕೊಳ್ಳುವ ಶ್ರೀಮಂತಿಕೆ ಇರುತ್ತದೆ. ಎಲ್ಲರೂ ಆಡಿಕೊಂಡು ಬೈದಾಗಲೂ ಖುಷಿ ಅನ್ನಿಸುತ್ತದೆ. ಅದು ನಮ್ಮ ಆತ್ಮವಿಶ್ವಾಸ ಅದನ್ನು ಕ್ರಿಕೆಟ್ ಅನೇಕರಿಗೆ ಕಲಿಸಿಕೊಟ್ಟಿದೆ.
ಇಷ್ಟೆಲ್ಲ ರಾದ್ದಾಂತದ ನಡುವೆಯೂ ಸಚಿನ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವ್ಯಥೆಗಳನ್ನು ತೋಡಿಕೊಂಡಿದ್ದಾರೆ. ಈಶಾನ್ಯ ಭಾರತದ ಬಗೆಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಇವತ್ತು ನರೇಂದ್ರ ಮೋದಿ ಬಿಟ್ಟರೆ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಸರ್ಚ್ ಮಾಡಲಾದ ಎರಡನೆಯ ರಾಜಕಾರಣಿ ಸಚಿನ್ ತೆಂಡೂಲ್ಕರ್. ದೇಶಕ್ಕಾಗಿ ಅವರು ಬ್ಯಾಟ್ ಬೀಸುತ್ತಲೇ ಇರಲಿ. ಪ್ರೇರಣೆ ದೇಶದ ಮೂಲೆಮೂಲೆ ಪಸರಿಸಲಿ. ಬಾಯಿಬಡುಕರರೆಂದಾದರೂ ಭಾರತರತ್ನವಾಗಲು ಸಾಧ್ಯವೇ?
Facebook ಕಾಮೆಂಟ್ಸ್