X

ಅತ್ತರಷ್ಟೇ ಹಾಲು ! ಇಲ್ಲದಿದ್ದರೆ ಬರಿ ನೋವು !!

ಬದಲಾಗುತ್ತಿರುವ ಕಾಲ ಮತ್ತು ಜನರ ನಡವಳಿಕೆಯನ್ನ ಗಮನಿಸಿ ನಮ್ಮಲ್ಲಿ  ಒಂದು ನಾಣ್ನುಡಿ ಹೆಚ್ಚಾಗಿ ಪ್ರಚಲಿತವಾಗಿದೆ  .ಮಗು ಅಳದಿದ್ದರೆ ತಾಯಿ ಕೂಡ ಹಾಲುಣಿಸುವುದಿಲ್ಲ ಎನ್ನುವುದು ಆ ಮಾತು . ! ತಾಯಿಯಂತ ತಾಯಿಯೇ ಮಗು ಅಳದೆ ಸುಮ್ಮನೆ ಇದ್ದರೆ ಅದಕ್ಕೆ ಹೊಟ್ಟೆ ತುಂಬಿದೆ ಎಂದುಕೊಂಡು ಹಾಲು ಕೊಡುವುದಿಲ್ಲ ಎಂದ ಮೇಲೆ ಬೇರೆಯವರ ಬಗ್ಗೆ ಹೇಳುವುದಿನ್ನೇನು ? ಇದರ ಅರ್ಥವಿಷ್ಟೆ, ನಮಗೇನು ಬೇಕು ಅದನ್ನ ಕೇಳಿ ಪಡೆಯಬೇಕು . ನಮ್ಮ ಹಕ್ಕಿಗಾಗಿ ನಾವು ಧ್ವನಿಯೆತ್ತದೆ ಹೋದರೆ ಇನ್ನ್ಯಾರು ಕೂಡ ನಮ್ಮ ಪರವಾಗಿ ಧ್ವನಿಯೆತ್ತುವುದಿಲ್ಲ ಎನ್ನುವುದನ್ನ ಮಾರ್ಮಿಕವಾಗಿ ಹೇಳಲಾಗಿದೆ .

ಸ್ಪೇನ್ ದೇಶದಲ್ಲಿನ ಜನರು ನಮಗಿಂತ ಬಿನ್ನರೆನಲ್ಲ! ಅಲ್ಲಿಯೂ ಇದೆ ಇಂತಹುದೇ ಮಾತು. ಜನರ ನಡುವೆ ಹೆಚ್ಚು ಪ್ರಸಿದ್ದಿಯಾಗಿದೆ . El que no llora, no mama.( ಎಲ್ ಕೆ ನೋ ಯೋರಾ ನೋ ಮಮಾ ) ಅಳದಿದ್ದರೆ ತಾಯಿಯೂ ಎದೆಯುಣಿಸುವುದಿಲ್ಲ ಎನ್ನುವುದು ಪದಕೋಶದ ಅರ್ಥ. ಭಾವಾರ್ಥ ನಮ್ಮ ಆಡು ಮಾತಿನ ಭಾವಾರ್ಥವನ್ನೇ ಬಿಂಬಿಸುತ್ತದೆ . ನಮ್ಮ ಕೆಲಸ ಆಗಬೇಕಿದ್ದರೆ ಅದಕ್ಕೆ ನಾವೇ ಸಾರಥ್ಯ ವಹಿಸಬೇಕು . ನಮ್ಮ ಹಕ್ಕಿಗಾಗಿ ನಾವು ಧ್ವನಿಯೆತ್ತಬೇಕು ಎನ್ನುವ ಅರ್ಥವೇ ಇಲ್ಲೂ ಲಾಗೂ ಆಗುತ್ತದೆ .

ಇನ್ನು ಇಂಗ್ಲಿಷ್ ಭಾಷಿಕರಲ್ಲಿ ಯಾವ ಚಕ್ರ ಕೀರಲು ಶಬ್ದ ಹೊರಡಿಸುತ್ತೋ ಆ ಚಕ್ರಕ್ಕೆ ಎಣ್ಣೆ ಹಾಕುತ್ತಾರೆ ಎನ್ನುವ ಅರ್ಥ ಕೊಡುವ  “the squeaky wheel gets the grease.”ಎನ್ನುವ ಗಾದೆ ಹೆಚ್ಚು ಜನ ಮನ್ನಣೆ ಪಡೆದಿದೆ . ಇಲ್ಲೂ ಭಾವಾರ್ಥ ಮಾತ್ರ ಸೇಮ್ ! .

ಭಾಷೆ ಯಾವುದೇ ಇರಲಿ ಗಾದೆಗಳ ಭಾವ ಮಾತ್ರ ಬದಲಾಗುವುದಿಲ್ಲ . ನಮ್ಮ ಬೇಕು ಬೇಡಗಳ ಜವಾಬ್ಧಾರಿ ನಮ್ಮದು . ನಮಗೇನು ಬೇಕು ಅದಕ್ಕೆ ನಾವು ಹೋರಾಟ ಮಾಡದಿದ್ದರೆ ಪಕ್ಕದ ಮನೆಯವರು ನಮ್ಮ ಪರವಾಗಿ ಏಕೆ ಹೋರಾಟ ಮಾಡಿಯಾರು? ಎನ್ನವುದು ಎಲ್ಲಾ ಭಾಷೆಗಳ ಗಾದೆಯ ಸಾರಾಂಶ .

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :

EL  : ಇಂಗ್ಲಿಷ್ ಭಾಷೆಯ he ಎನ್ನುವ ಅರ್ಥ . ಅವನು ಅಥವಾ . ಎಲ್ ಎನ್ನುವುದು ಉಚ್ಚಾರಣೆ .

que  : ಇಂಗ್ಲಿಷ್ ಭಾಷೆಯ ವಾಟ್ (ಏನು )  ಎನ್ನುವ ಅರ್ಥ . ಎಲ್ ಮತ್ತು ಕೆ ಎರಡೂ ಸೇರಿ  ಸಂದರ್ಭಕ್ಕೆ ತಕ್ಕಂತೆ ಯಾರು ಎನ್ನುವ ಅರ್ಥ ಕೊಡುತ್ತದೆ. ಕೆ ಎನ್ನುವುದು ಉಚ್ಚಾರಣೆ.

No   : ಇಲ್ಲ ಎನ್ನುವ ಅರ್ಥ . ನೋ ಎನ್ನುವುದು ಉಚ್ಚಾರಣೆ .

llora  : ಅಳು… ಅಳುವುದು ಎನ್ನುವ ಅರ್ಥ ಕೊಡುತ್ತದೆ . ಯೋರಾ ಎನ್ನುವುದು ಉಚ್ಚಾರಣೆ .  ಎರಡು ಬಾರಿ ಎಲ್ ಪದವನ್ನ ಸೇರಿಸಿದರೆ ಅದು ಸ್ಪಾನಿಷ್’ನಲ್ಲಿ ‘ಯ ‘ ಎನ್ನುವ ಉಚ್ಚಾರಣೆ ಪಡೆಯುತ್ತದೆ .

mama  :  ಮಮಾ ಅಥವಾ ಮಮಾರ್ ಎಂದರೆ ಎದೆಯುಣಿಸುವುದು ಎನ್ನುವ ಅರ್ಥ ಕೊಡುತ್ತದೆ . ಮಮಾ ಎನ್ನುವುದು ಉಚ್ಚಾರಣೆ .

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post