X

ಕಡಿಮೆ ಮಾತು ಎಲ್ಲರಿಗೂ ಒಳಿತು ! 

ಸ್ಪಾನಿಷ್ ಜನರಲ್ಲಿ ಮಾತು ಕಡಿಮೆ ಆಡುವ ಬಗ್ಗೆ ಒಂದು ಗಾದೆಯಿದೆ . ಹೆಚ್ಚು ಮಾತನಾಡಿದಷ್ಟು ಅದು ಕೆಲವೊಮ್ಮೆ ಮತ್ತಷ್ಟು ಮಾತು ಬೆಳೆಸುತ್ತದೆ . ಅತಿರೇಕದ ಸನ್ನಿವೇಶಗಳಲ್ಲಿ ಮಾತು ಉತ್ತಮ ಸ್ನೇಹಿತರನ್ನು ಶತ್ರುಗಳನ್ನಾಗಿ ಮಾಡುತ್ತದೆ . ಯಾವ ಮಾತು ಎಲ್ಲಿ ಆಡಬೇಕು ಎನ್ನುವ ಕನಿಷ್ಠ ಜ್ಞಾನವಿರಲೇಬೇಕು. ಆಡಬಾರದ ಮಾತನ್ನು ಆಡಬಾರದ ಸ್ಥಳದಲ್ಲಿ ಆಡಿದರೆ ಆಗುವ ಅನಾಹುತದ ಪಟ್ಟಿ ಮಾಡಿದರೆ ಅದೇ ಒಂದು ಗ್ರಂಥವಾದೀತು! ಅಲ್ಲದೆ ಒಮ್ಮೆ  ಆಡಿದ ಮಾತನ್ನು ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ ಕೂಡ.  ಹೀಗೆ ಆಡಿದ ಮಾತು ಅವಘಡವನ್ನು ಸೃಷ್ಟಿಸಿದರೆ ಅದಕ್ಕೆ ಎಷ್ಟೇ ಬೆಲೆ ಕೊಟ್ಟರು ಮರಳಿ ಮೊದಲಿನ ಸ್ಥಿತಿಗೆ ತರಲು ಸಾಧ್ಯವಿಲ್ಲ. ಮೈ ಕೈಗೆ ಗಾಯವಾದರೆ ಅದು ಸಮಯದ ಜೊತೆಗೆ ವಾಸಿಯಾಗುತ್ತದೆ . ಅದೇ ಮಾತಿನಿಂದ ಮನಸ್ಸಿಗೆ ಮಾಡಿದ ಘಾಸಿ ಜೀವನ ಪೂರ್ತಿ ವಾಸಿಯಾಗದೆ ಹಾಗೆ ಉಳಿದು ಬಿಡುತ್ತದೆ.  ಹಾಗಾದರೆ ಮಾತಿನಿಂದ ಒಳ್ಳೆಯದು ಆಗುವುದೇ ಇಲ್ಲವೇ? ಎನ್ನುವ ಪ್ರಶ್ನೆ ಉದ್ಭವಿಸದೆ ಇರದು. ಹೌದು ಮಾತಿನಿಂದ ಯಾವಾಗಲೂ ಕೆಟ್ಟದೆ ಆಗಬೇಕೆಂದಿಲ್ಲ. ಒಬ್ಬ ಉತ್ತಮ ಮಾತುಗಾರ ತನ್ನ ಮಾತಿನಿಂದ ಹಲವು ಜನರಿಗೆ ಪ್ರೇರಣೆಯಾಗಬಹದು. ಆದರೇನು ನಮ್ಮಲ್ಲಿ ಎಷ್ಟು ಜನಕ್ಕೆ ಯಾವಾಗ ಯಾವ ಮಾತು ಆಡಬೇಕು, ಸಂದರ್ಭದ ಹಿರಿಮೆ, ಸೇರಿದ ಜನರ ಸ್ವಭಾವ, ಸಂಸ್ಕಾರ ಇವುಗಳ ಅರಿವು ಉಂಟು?  ಹೀಗಾಗಿ ಕಡಿಮೆ ಮಾತನಾಡುವುದು ಎಲ್ಲಾ  ರೀತಿಯಲ್ಲೂ ಒಳ್ಳೆಯದು ಎನ್ನುವ ಅರ್ಥ ನೀಡುವ ಸ್ಪಾನಿಷ್ ಗಾದೆಯೇ  Cuanto menos se diga, mejor. (ಕ್ವಾನ್ತೊ ಮೆನೋಸ್ ಸೆ ದಿಗ , ಮೆಹೂರ್.) 

ನಮ್ಮಲ್ಲಿ  ಕೂಡ ‘ಮಾತು ಬೆಳ್ಳಿ ಮೌನ ಬಂಗಾರ ‘ ಎನ್ನುವ ಮಾತಿಗೆ ಎರಡನೇ ಸ್ಥಾನ, ಮೌನಕ್ಕೆ ಮೊದಲನೇ ಸ್ಥಾನ ನೀಡುವ ಗಾದೆಯಿದೆ.  ಇದರ ಜೊತೆಗೆ  ‘ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ‘ ಎನ್ನುವ ಗಾದೆ ಕೂಡ ನಮ್ಮಲ್ಲಿ ಜನಜನಿತ. ಇವುಗಳ ಜೊತೆಗೆ ಅಷ್ಟೇನೂ ಪ್ರಸಿದ್ಧವಲ್ಲದ ‘ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.’  ‘ಮಾಟ ಮಾಡಿ ಮನೆ ಹಾಳು ಮಾಡಬಹದು ಮಾತನಾಡಿ ಊರೇ ಹಾಳು  ಮಾಡಬಹದು’,   ‘ಮಾತು ಮನೆ ಮುರಿತು, ತೂತು ಓಲೆ ಕೆಡಿಸಿತು.’ ‘ ಮಾಡಿದವನ ಪಾಪ ಆಡಿದವನ ಬಾಯಲ್ಲಿ ‘ ಎನ್ನುವ ಹಲವು ಗಾದೆಗಳು ನಮ್ಮಲಿವೆ.  ಈ ಎಲ್ಲಾ ಗಾದೆಗಳು  ಸಾರುವ ಸಂದೇಶ ಮಾತ್ರ ಸೇಮ್! ಮಾತು ಕಡಿಮೆ ಮಾಡಬೇಕು ಅಥವಾ ಅನವಶ್ಯಕ ಮಾತನಾಡಬಾರದು ಎನ್ನುವುದು .

ಅನವಶ್ಯಕ ಮಾತಿನಿಂದ ಆಗುವ ತೊಂದರೆಗಳನ್ನು ಕಂಡ ನಮ್ಮ ಹಿರಿಯರು ಅದನ್ನು ಮುಂದಿನ ಪೀಳಿಗೆಗೆ ತಿಳಹೇಳಲು ಸರಳವಾಗಿ ಹತ್ತಾರು ಗಾದೆಗಳನ್ನು ಹೆಣೆದಿದ್ದಾರೆ. ಮಾತಿನ ಬಗ್ಗೆ ಇಷ್ಟೊಂದು ಗಾದೆ ಇರುವುದು ಅದು ಎಷ್ಟು ಮುಖ್ಯ ಎನ್ನುವುದನ್ನು ತೋರಿಸುತ್ತದೆ .

ಇಂಗ್ಲಿಷ್ ಭಾಷಿಕರಲ್ಲಿ ಕೂಡ ಕಡಿಮೆ ಮಾತಿಗೆ ಹೆಚ್ಚು ಪ್ರಾಶಸ್ತ್ಯ ! ಅವರಲ್ಲಿ Least said, soonest mended. ಎನ್ನುವುದು ಬಹಳ ಪ್ರಖ್ಯಾತ ಗಾದೆ . ಕಡಿಮೆ ಮಾತನಾಡುವುದರಿಂದ ಸಮಸ್ಯೆ ಬಹಳ ಬೇಗ ತಹಬದಿಗೆ ಬರುತ್ತದೆ ಎನ್ನುತ್ತದೆ ಅವರ ಗಾದೆ . ಇವರಲ್ಲಿ ಕೂಡ ಮಾತಿಗಿಂತ ಮೌನಕ್ಕೆ ಹೆಚ್ಚು ಮನ್ನಣೆ .

ಮಾತು ಕಡಿಮೆ ಮಾಡಿ ಕೆಲಸಕ್ಕೆ ಹೆಚ್ಚು ಒತ್ತು  ನೀಡೋಣವೇ ?

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ:

Cuanto   : ಎಷ್ಟು ಎನ್ನುವ ಅರ್ಥ ಕೊಡುತ್ತದೆ . ಕ್ವಾನ್ತೊ ಎನ್ನುವುದು ಉಚ್ಚಾರಣೆ .

menos   : ಕಡಿಮೆ ಎನ್ನುವುದು ಸಂಧರ್ಭದ ಅರ್ಥ . ಕಳಿ , ಕಳೆಯುವುದು ಎನ್ನುವುದು ನಿಘಂಟಿನ ಅರ್ಥ . ಮೆನೋಸ್ ಎನ್ನುವುದು ಉಚ್ಚಾರಣೆ .

se  diga  : ಹೇಳು , ಮಾತನಾಡು ಎನ್ನುವ ಅರ್ಥ . ಸೆ ದಿಗ ಎನ್ನುವುದು ಉಚ್ಚಾರಣೆ .

mejor  : ಉತ್ತಮ , ಬೆಟರ್ ಅಥವಾ ಒಳ್ಳೆಯದು ಎನ್ನುವ ಅರ್ಥ ಕೊಡುತ್ತದೆ . ಮೆಹೂರ್ ಎನ್ನುವುದು ಉಚ್ಚಾರಣೆ .

ಕಡಿಮೆ ಮಾತು ಎಲ್ಲರಿಗೂ ಒಳಿತು

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post