X

ಆದರವಲ್ಲ ‘ಆಧಾರ’ ಇರಬೇಕಂತೆ!!

ಚಿಕ್ಕಂದಿನಲ್ಲಿ ನಮಗೆ, ಸುಮ್ಮನೆ ಏನೇನೋ ಮಾತನಾಡುವುದಕ್ಕಿಂತ ದೇವರ ನಾಮ ಸ್ಮರಣೆಯನ್ನಾದರೂ ಮಾಡಬಾರದೇ ಎಂದು ಹಿರಿಯರು ಸೂಚಿಸುತ್ತಿದ್ದರು. ಅವರು ಕೂಡಾ ಅದನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಈಗ ಬಿಡಿ ಮನೆಗಳಲ್ಲಿ ಮಾತೇ ಕಡಿಮೆಯಾಗಿಬಿಟ್ಟಿದೆ. ಒಂದೋ ಟಿ.ವಿ ಒದರುತ್ತಿರುತ್ತದೆ ಇಲ್ಲವೇ ಮೊಬೈಲ್  ಪರದೆ ಜನರ ನಡುವೆಯೇ ಪರದೆ ಎಳೆದುಬಿಟ್ಟಿರುತ್ತದೆ. ಏನೇ ಆದರೂ ದೇವರ ಸ್ಮರಣೆ ಮಾಡಿದರೆ ಒಳಿತಾಗುತ್ತದೆಂಬ ನಂಬಿಕೆಯಂತೂ ಆಪ್ಯಾಯ. ಇದಕ್ಕೆ ಪೂರಕವೆಂಬಂತೆ ಇಂದಿಗೂ ಕೆಲವರು ಎಡೆಬಿಡದೆ ರಾಮ, ಕೃಷ್ಣ ಎನ್ನುತ್ತಾ ದೇವರ ನಾಮಸ್ಮರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನನ್ನು ಭಜಿಸುವವರಿಗೆ ಆ ಪರಮಾತ್ಮ ಸದಾ ಒಳಿತನ್ನೇ ಮಾಡುತ್ತಾನೆ ಎಂಬ ನಂಬಿಕೆಯಂತೆ ಇವರಿಗೂ ಆಗಾಗ ಒಂದಷ್ಟು ಪ್ರಶಸ್ತಿ, ಪ್ರಚಾರ, ಒಂದಿಲ್ಲೊಂದು ಆಯೋಗ ಸಮಿತಿಗಳಲ್ಲಿ ಸ್ಥಾನಮಾನ ಹೀಗೆ ಬೇರೆ ಬೇರೆ ಸೌಲಭ್ಯಗಳು ದೊರಕುತ್ತಿವೆ. ಆದ್ದರಿಂದಲೇ ಇವರು ವಿವಾದದ ರೂಪದಲ್ಲೂ ದೇವರನ್ನು ನನೆಸಿಕೊಳ್ಳುತ್ತಿರುತ್ತಾರೆ.

ಅದಕ್ಕೆ ದ್ವಾರಕನಾಥರ ವಿವಾದಿತ ಹೇಳಿಕೆಯೊಂದು ಇತ್ತೀಚಿನ ಸೇರ್ಪಡೆ. ರಾಮನ ಅಸ್ತಿತ್ವಕ್ಕೆ ಆಧಾರವಿಲ್ಲ ಹಾಗೂ ಹುಟ್ಟಿಗೆ ದಾಖಲೆಗಳಿಲ್ಲ ಎಂದು ಹಳಹಳಿಸುವ ಮೂಲಕ ಎಂದಿನಂತೆ ತಮ್ಮ  ಅಸ್ತಿತ್ವವನ್ನು ಸಾಧಿಸಿಕೊಳ್ಳಲು ಹವಣಿಸಿದ್ದಾರೆ. ಹೀಗೆ ಒಂದಷ್ಟು ಹೇಳಿಕೆಗಳನ್ನು ಆಗಾಗ ಒಗಾಯಿಸುತ್ತಿದ್ದರೆ ಅವರ ಅದೃಷ್ಟದ ದ್ವಾರ ತೆರೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ದ್ವಾರಕನಾಥ್ ಇಂಥ  ಸ್ಟೇಟ್ಮೆಂಟ್ ನೀಡುತ್ತಾರೆ ಎನ್ನುವುದು ಅರ್ಥವಾಗಲು ನಮಗ್ಯಾವ ಆಧಾರವೂ ಬೇಕಾಗಿಲ್ಲ.

ಕಳ್ಳನ ಮುಖ ಹುಳ್ಳ ಹುಳ್ಳಗೆ ಎಂಬಂತೆ ಸಾಮಾನ್ಯವಾಗಿ ಯಾರು ಹೆಚ್ಚೆಚ್ಚು ನಿರಾಧಾರ ಮಾತುಗಳನ್ನಾಡುತ್ತಾರೋ ಅಂಥವರೇ ಎಲ್ಲದಕ್ಕೂ ಆಧಾರ ನಿರೀಕ್ಷಿಸುತ್ತಾರೆ. ಕೆಲವರಂತೂ ಅದರಲ್ಲಿ ಪ್ರವೀಣರೇ ಸರಿ. ಚರ್ಚೆಯೇ ಇರಲಿ, ಒಂದು ಸಾಮಾನ್ಯ ಮಾತುಕತೆಯೇ ಆಗಲಿ ಉತ್ತರಿಸಲಾಗದ ಪ್ರಶ್ನೆ ಕೇಳಲ್ಪಟ್ಟರೆ ಹಾಗೂ ಇನ್ನೇನು ತಮ್ಮ ಮುಖವಾಡ ಬಯಲಾಗುತ್ತದೆ ಎನ್ನುವುದು ನಿಕ್ಕಿಯಾಗುತ್ತಿದ್ದಂತೆ ಆಧಾರಗಳನ್ನು ಕೇಳಲಾರಂಭಿಸುತ್ತಾರೆ. ಆಧಾರ ಕೇಳುವುದು ಒಂದು ರೀತಿಯಲ್ಲಿ ಅವರ ಎಡಬಿಡಂಗಿತನದ ಆಧಾರಸ್ತಂಭವೇ ಆಗಿಹೋಗಿದೆ.

ಈ  ಬಗ್ಗೆ ಕೇವಲ ದ್ವಾರಕನಾಥ್ ರನ್ನು ದೂಷಿಸಿದರೆ ಪ್ರಯೋಜನವಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ನೀತಿಯೂ ಕಾರಣವೇ ಎನ್ನುವುದು ಕೆಲವರ ಅಭಿಪ್ರಾಯ. ಅವರೇ ತಾನೆ ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ್ದು.  ಆದ್ದರಿಂದಲೇ ಶ್ರೀರಾಮನ ಇರುವಿಕೆಯ ಬಗ್ಗೆ ‘ಆಧಾರ್’ವಿಲ್ಲ ಎಂದು ಅರಚುತ್ತಿರುವುದು ಎಂದು ಸಮರ್ಥಿಸಿಕೊಂಡರೂ ಅಚ್ಚರಿಯೇನಿಲ್ಲ. ಕನಿಷ್ಠ ಈ ಮೂಲಕವಾದರೂ ತಾವು ಕೇಂದ್ರದ ಪರವಾಗಿದ್ದೇವೆ ಎನ್ನುವುದನ್ನು ತೋರಿಸಿಕೊಳ್ಳಲು ಹೀಗೆ ಕೇಳಿದ್ದಾರೋ ಗೊತ್ತಿಲ್ಲ. ಸಕಲ ಜೀವ ಚರಾಚರಗಳನ್ನು ಸೃಷ್ಟಿಸಿದಾತ ಆ ಪರಮಾತ್ಮ ಎಂಬ ನಂಬಿಕೆ ನಮ್ಮಲ್ಲಿದೆ. ಆದರೆ ಈಗ “ಅಯ್ಯೋ, ಅದೆಲ್ಲಾ ಮತ್ತೆ ಮೊದಲು ಆ ದೇವರು ಇದ್ದಾರೆನ್ನುವುದಕ್ಕೆ ಆಧಾರವಿದೆಯೇ, ದಾಖಲೆಯಿದೆಯೇ” ಎಂದು ಪ್ರಶ್ನಿಸಲು ಈ ಮನುಜರು ಮುಂದಾಗುತ್ತಿದ್ದಾರೆಂದರೆ ಇದು ನಿಶ್ಚಿತವಾಗಿಯೂ ಕಲಿಯುಗವೇ ಹೌದು. ದೇವರುಗಳೂ ಆಧಾರವಿಟ್ಟುಕೊಂಡು ತಿರುಗಾಡಬೇಕಾದ ಕಾಲವಿದು. ಇವರ ಪ್ರಕಾರ ಪುರಾಣದ ಕಥೆಗಳಲ್ಲಿ ಬರುವಂತೆ, “ತಥಾಸ್ತು, ಏನು ವರಬೇಕು ಕೇಳು” ಎಂದರೆ ಸಾಲದು. ತಥಾಸ್ತು ಎನ್ನುವುದರ ಜೊತೆ ಜೊತೆಗೇ ತಾನೇ ದೇವರು ಎನ್ನುವುದಕ್ಕೆ ಆಧಾರವನ್ನೂ ಮುಂದೊಡ್ಡಬೇಕಾಗಿತ್ತೇನೋ?!

ಹೀಗೆ ದೇವರು, ಜನರ ನಂಬಿಕೆಗಳ ಬಗ್ಗೆ ಬೇಕಾಬಿಟ್ಟಿಯಾಗಿ ನಾಲಗೆ ಹರಿಬಿಡುವ ಇವರು ನಾಸ್ತಿಕರಲ್ಲ ಬದಲಾಗಿ ಅಪ್ಪಟ ಆಸ್ತಿಕರೇ ಇರಬೇಕು. ಅದನ್ನು ಮುಕ್ತವಾಗಿ ವ್ಯಕ್ತಪಡಿಸಿದರೆ, ದೇವರ ನಾಮ ಸ್ಮರಣೆ ಮಾಡಿದರೆ, ‘ನುಡಿಸಿರಿಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತೇನೆ ಎನ್ನುವ ಎಡಪಂಥೀಯರನ್ನು ಅವರ ಆಪ್ತೇಷ್ಟರು ತಡೆಯುವಂತೆ’ ಅವರ ಸಹವರ್ತಿಗಳು ಇವರನ್ನು ತಡೆಯುತ್ತಾರೆ, ದೂಷಿಸುತ್ತಾರೆ, ಇವರು ನಮ್ಮ ಗುಂಪಿಗೆ ಸೇರಿದವರಲ್ಲ ಎಂದು ದೂರ ಮಾಡಿದರೂ ಮಾಡಿಯಾರೆಂಬ ಆತಂಕ ಅವರದ್ದು. ಅದರಿಂದ ಪಾರಾಗಲು ಈ ಪರೋಕ್ಷ ಮಾರ್ಗವನ್ನು ಅನುಸರಿಸುತ್ತಿದ್ದಾರಷ್ಟೆ. ಆ ಮೂಲಕವಾದರೂ ಅವರು ದೇವರ ಕೃಪೆಗೆ ಪಾತ್ರರಾಗಲಿ ಬಿಡಿ. ಪಾಪ!

ಓವರ್ ಡೋಸ್: ಹಾಗೆ ಎಲ್ಲದಕ್ಕೂ ಆಧಾರ ಬೇಕು, ಎಲ್ಲವೂ ದಾಖಲೆ ಸಮೇತವಾಗಿದ್ದರಷ್ಟೇ ಒಪ್ಪಬಹುದು ಎನ್ನುವಂತಿದ್ದರೆ ಇವರು ತಮ್ಮನ್ನು ತಾವು ಬುದ್ಧಿಜೀವಿ, ವಿಚಾರವಾದಿಗಳು, ಪ್ರಗತಿಪರ ಎಂದೆಲ್ಲಾ ಕರೆಯಿಸಿಕೊಳ್ಳುವಂತೆಯೇ ಇರಲಿಲ್ಲ.

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post