ಡೇನಿಯಲ್ ಜಾಕೊಬ್ ಬಾಕ್ಸಿಂಗ್ ಜಗತ್ತಿನ ದಿಗ್ಗಜ. ಬಾಕ್ಸಿಂಗ್’ನಲ್ಲಿ ಇಲ್ಲಿಯ ತನಕ ೧೩೭ಕ್ಕಿಂತ ಹೆಚ್ಚು ಬಾರಿ ಜಯ ಸಾಧಿಸಿರುವ ಡೇನಿಯಲ್ ಗಳಿಸಿರುವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಶಾಲೆಯಲ್ಲಿ ಈತನನ್ನು ಕೆಲವರು ರ್ಯಾಗಿಂಗ್ ಮಾಡುವಾಗ ಸ್ವರಕ್ಷಣೆಗೆಂದು ಆರಂಭಗೊಂಡಿದ್ದ ಬಾಕ್ಸಿಂಗ್ ನಂತರ ಆತನ ವೃತ್ತಿ ಪ್ರೀತಿ ಎಲ್ಲವೂ ಆಯಿತು. ಡೇನಿಯಲ್ ಬದುಕಿನಲ್ಲಿ ಏನಾದರೂ ಕಲಿತಿದ್ದಾನೆಂದರೆ ಅದು ಫೈಟ್ ಮಾಡುವುದು. ಎದುರಾಳಿ ಯಾರೇ ಆಗಿರಲಿ, ಅಥವಾ ಕ್ಯಾನ್ಸರ್’ನಂತಹ ಸವಾಲೇ ಆಗಿರಲಿ ಆತ ಸುಲಭವಾಗಿ ಸೊಲೊಪ್ಪಿಕೊಳ್ಳುವುದಿಲ್ಲ! ಹಾಗಾಗಿಯೇ ಇಂದು ಡೇನಿಯಲ್’ ವರ್ಲ್ಡ್ ಬಾಕ್ಸಿಂಗ್ ಟೈಟಲ್’ನ್ನು ಗೆದ್ದ ಮೊದಲ ಹಾಗೂ ಏಕೈಕ ಕ್ಯಾನ್ಸರ್ ಸರ್ವೈವರ್ ಆಗಿದ್ದಾನೆ. ಇಂದು ಕೆಲವರು ಆತನನ್ನು ಮಿರಾಕಲ್ ಮ್ಯಾನ್ ಎಂದು ಕೂಡ ಕರೆಯುತ್ತಾರೆ.
೨೦೧೧, ಡೇನಿಯಲ್ ಸಾಧನೆಯ ಉತ್ತುಂಗಕ್ಕೆ ಏರುತ್ತಿದ್ದ ಸಮಯ. ಅದಾಗಲೇ ಆತ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದ. ಆದರೆ ಆತನ ಅದೆಲ್ಲ ಶ್ರಮ, ಕನಸುಗಳನ್ನು ನುಂಗಿ ಹಾಕುವಂತೆ ಆತನ ಇಡೀ ಬದುಕನ್ನೇ ಬುಡಮೇಲಾಗಿ ಮಾಡಿದ್ದು ಕ್ಯಾನ್ಸರ್! ಡೇನಿಯಲ್ ಇತರ ಕೆಲ ಬಾಕ್ಸರ್’ಗಳೊಂದಿಗೆ ಇರಾಕ್’ಗೆ ತೆರಳಿದ್ದಾಗ ತನ್ನ ಕಾಲು ಮೊದಲಿನಂತಿಲ್ಲ, ಶಕ್ತಿ ಕಳೆದುಕೊಳ್ಳುತ್ತಿದೆ ಎನ್ನಿಸಲು ಶುರುವಾಗಿತ್ತು. ನ್ಯೂಯಾರ್ಕ್’ಗೆ ವಾಪಾಸ್ಸಾದ ನಂತರ ಆತನನ್ನು ಪರೀಕ್ಷಿಸಿದ ಡಾಕ್ಟರ್, ನರದ ಸಮಸ್ಯೆ ಇರಬಹುದು ಎಂದಿದ್ದರು. ಅಷ್ಟರಲ್ಲಾಗಲೇ ಆತ ಓಡಾಡಲು ವಾಕಿಂಗ್ ಸ್ಟಿಕ್ ಬಳಸುವಂತಾಗಿತ್ತು. ಇದಾಗಿ ಎರಡೇ ವಾರಗಳಲ್ಲಿ ಆತ ನಡೆಯುವುದೂ ಕೂಡ ಅಸಾಧ್ಯವಾಯಿತು. ಎಮ್.ಆರ್.ಐ’ನಲ್ಲಿ ಆತನ ಬೆನ್ನುಹುರಿಯಲ್ಲಿ ಟ್ಯೂಮರ್ ಕಾಣಿಸಿಕೊಂಡಿತ್ತು. ಆಸ್ಟಿಯೋಸರ್ಕೋಮ ಎಂಬ ಬೋನ್ ಕ್ಯಾನ್ಸರ್ ತುತ್ತಾಗಿದ್ದ ಡೇನಿಯಲ್.
ಸುಮಾರು ೨೫ ರೇಡಿಯೇಷನ್ ಹಾಗೂ ಮೇಜರ್ ಸರ್ಜರಿ ಮಾಡಿ ಆ ಟ್ಯೂಮರ್’ನ್ನು ತೆಗೆಯಲಾಯಿತು. ಡೇನಿಯಲ್ ಕ್ಯಾನ್ಸರ್ ಮುಕ್ತನೇನೋ ಆದ. ಆದರೆ ಡಾಕ್ಟರ್ ಆತನಿಗೆ ‘ಇನ್ನು ಮುಂದೆ ಬಾಕ್ಸಿಂಗ್’ನ್ನು ಮರೆತುಬಿಡಿ’ ಎಂದೇ ಹೇಳಿದ್ದರು. ಆದರೆ ಡೇನಿಯಲ್ ಮಾತ್ರ ತಾನು ಅಷ್ಟೊಂದು ಪ್ರೀತಿಸುತ್ತಿದ್ದ ಬಾಕ್ಸಿಂಗ್’ನ್ನು ಬಿಡಲು ತಯಾರಿರಲಿಲ್ಲ. ಡೇನಿಯಲ್’ನ ಮುಂದಿದ್ದ ಸವಾಲು ಕೇವಲ ಬಾಕ್ಸಿಂಗ್ ಅಷ್ಟೇ ಆಗಿರಲಿಲ್ಲ, ಬಾಕ್ಸಿಂಗ್’ಗೂ ಮೊದಲು ಆತ ನಡೆಯುವುದನ್ನು ಕಲಿಯಬೇಕಿತ್ತು!
ಡೇನಿಯಲ್ ಫಿಸಿಯೋ ಥೆರಪಿ ತೆಗೆದುಕೊಳ್ಳಲು ಆರಂಭಿಸಿದ್ದ. ಆದರೆ ಅದೆಲ್ಲ ಸುಲಭವಾಗಿರಲಿಲ್ಲ. ಡೇನಿಯಲ್’ಗೆ ತನ್ನ ಅಸಹಾಯಕತೆಯ ಪರಿಚಯವಾಗಲಾರಂಭಿಸಿತ್ತು. ಆತನಿಂದ ಡಂಬೆಲ್ ಎತ್ತುವುದು ಕೂಡ ಕಷ್ಟವಾಗಿತ್ತು. ವರ್ಲ್ಡ್ ಕ್ಲಾಸ್ ಅಥ್ಲೀಟ್, ಅಷ್ಟೊಂದು ದೃಢ, ಅದೂ ಕೂಡ ಬಾಕ್ಸರ್ ಆಗಿದ್ದ ಡೇನಿಯಲ್’ಗೆ ೫ ಪೌಂಡ್’ನ ಡಂಬೆಲ್ ಎತ್ತಲು ಆಗುತ್ತಿರಲಿಲ್ಲ ಎಂದರೆ ಊಹಿಸಿಕೊಳ್ಳಿ ಆತನಿಗೆ ಅದನ್ನು ಅರಗಿಸಿಕೊಳ್ಳಲು ಎಷ್ಟು ಕಷ್ಟವಾಗಿರಬಹುದು ಎಂದು!
ಆದರೆ ಆತ ಎಂದೂ ಕೂಡ ತನ್ನ ಪ್ರಯತ್ನವನ್ನು ಬಿಡಲಿಲ್ಲ. ಆತ ಅದನ್ನೂ ಕೂಡ ಒಬ್ಬ ಎದುರಾಳಿಯಂತೆಯೇ ನೋಡಿದ. ರಿಂಗ್’ನ ಒಳಗೆ ಇದ್ದಿದ್ದರೆ ಆತ ಹೇಗೆ ಎದುರಾಳಿಯನ್ನು ಎದುರಿಸುತ್ತಿದ್ದನೋ ಅದೇ ರೀತಿ ಈ ಸವಾಲುಗಳನ್ನು ಸ್ವೀಕರಿಸಿದ. “ಬಾಕ್ಸಿಂಗ್, ಎಲ್ಲದಕ್ಕಿಂತ ಮುಖ್ಯ ಮನಸ್ಸು ಎನ್ನುವುದನ್ನ ಹೇಳಿ ಕೊಡುತ್ತದೆ. ಆ ಮನೋಶಕ್ತಿಯೇ ಈ ಸವಾಲುಗಳನ್ನು ಎದುರಿಸಲು ಹಾಗೂ ಅವನ್ನು ಮೀರಿ ಬೆಳೆಯಲು ಸಹಾಯ ಮಾಡಿತು” ಎನ್ನುತ್ತಾನೆ ಡೇನಿಯಲ್.
ಕ್ಯಾನ್ಸರ್’ನ ನಂತರ ಬಾಕ್ಸಿಂಗ್’ಗೆ ಮರಳುವಾಗ ಭಯವಿರಲಿಲ್ಲ ಎಂದೇನಲ್ಲ. ಆದರೆ ಆ ಭಯಕ್ಕಿಂತ ಆತನಿಗೆ ತನ್ನ ಬಗ್ಗೆ ವಿಶ್ವಾಸವಿತ್ತು. “ನೀವು ಕಷ್ಟಕರವಾದ ಸವಾಲುಗಳನ್ನ ಎಸುರಿಸದೇ ಹೋದರೆ, ನೀವು ಯಾವುದರಿಂದ ಮಾಡಲ್ಪಟ್ಟಿದ್ದೀರಿ ಎನ್ನುವುದರ ಅರಿವಾಗುವುದೇ ಇಲ್ಲ” ಎಂದು ಹೇಳುತ್ತಾನೆ ಆತ. ತನ್ನ ಭಯವನ್ನೆಲ್ಲ ಮೀರಿ ಸುಮಾರು ಎರಡು ವರ್ಷಗಳ ನಂತರ ಆತ ಮತ್ತೆ ರಿಂಗ್’ನ ಒಳಗೆ ಕಾಲಿಟ್ಟಿದ್ದ. ಅಂದು ಆತ ಕೇವಲ ಮರಳಲಿಲ್ಲ, ಮತ್ತೆ ಜಯ ಗಳಿಸಿದ್ದ. ಗೆಲುವಿನ ಹಾದಿ ಮತ್ತೆ ಆತನದಾಗಿತ್ತು, ಇನ್ನಷ್ಟು ಪ್ರಶಸ್ತಿಗಳು ಆತನ ಕೈ ಸೇರಿದ್ದವು. ಹಾಗೆಯೇ ಆತ ವರ್ಲ್ಡ್ ಬಾಕ್ಸಿಂಗ್ ಟೈಟಲ್’ನ್ನು ಕೂಡ ಗೆದ್ದನು.
ಕ್ಯಾನ್ಸರ್ ನಂತರ ಡೇನಿಯಲ್ ಒಬ್ಬ ಬೇರೆಯದೇ ವ್ಯಕ್ತಿಯಾಗಿದ್ದಾನೆ. ಬದುಕಿನ ಪ್ರತಿ ಸಣ್ಣ ಸಣ್ಣ ಕ್ಷಣಗಳನ್ನು ಆಸ್ವಾದಿಸಲಾರಂಭಿಸಿದ್ದಾನೆ. ಪ್ರತಿ ದಿನವೂ ಆತನಿಗೆ ಮುಖ್ಯವಾಗಿದೆ. ಈ ದಿನ, ಈ ಕ್ಷಣ ಬದುಕುವುದರಲ್ಲಿ ನಂಬಿಕೆ ಇಟ್ಟಿದ್ದಾನೆ. ಹಾಗಂತ ಭವಿಷ್ಯದ ಬಗ್ಗೆ ಕನಸುಗಳಿಲ್ಲ ಅಂತಲ್ಲ. ಬೆಟ್ಟದಷ್ಟು ಕನಸುಗಳಿವೆ. ಆದರೆ ಬದುಕು ಭವಿಷ್ಯದಲ್ಲಿಲ್ಲ, ಅದಿರುವುದು ಇಂದು ಎಂದು ಅರಿತಿದ್ದಾನೆ. ಕ್ಯಾನ್ಸರ್ ಬಗ್ಗೆ ಹೇಳುತ್ತಾ, “ಅದು ಸಾವು ಬದುಕಿನ ಫೈಟ್ ಆಗಿತ್ತು, ಬದುಕಿನ ಅತ್ಯಂತ ಕಠಿಣ ಸವಾಲಾಗಿದ್ದ ಕ್ಯಾನ್ಸರ್’ನ್ನು ಎದುರಿಸಿದ್ದೇನೆ. ಅದು ನೀಡಿದ ಮನೋದೃಢತೆ ಬೆಲೆಕಟ್ಟಲಾಗದ್ದು” ಎನ್ನುತ್ತಾನೆ ಡೇನಿಯಲ್.
ಡೇನಿಯಲ್ ೨೦೧೩ರಲ್ಲಿ ‘ಗೆಟ್ ಇನ್ ದ ರಿಂಗ್’ ಎಂಬ ಫೌಂಡೇಷನ್’ನ್ನು ಸ್ಥಾಪಿಸಿದ್ದಾನೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟವರು ಹಾಗೂ ಸ್ಥಳೀಯ ಬ್ಯುಸಿನೆಸ್’ಮನ್’ಗಳನ್ನು ಒಳಗೊಂಡಿರುವ ಈ ಸಂಸ್ಥೆ ಕ್ಯಾನ್ಸರ್ ಪೀಡಿತರಿಗೆ ಸಹಾಯ ಮಾಡುತ್ತಿದೆ. ಅದರ ಜೊತೆಗೆ ಜನರಲ್ಲಿ ಕ್ಯಾನ್ಸರ್ ಹಾಗೂ ಒಬೆಸಿಟಿ ಕುರಿತು ಜಾಗೃತಿ ಮೂಡಿಸುತ್ತಿದೆ.
ಡೇನಿಯಲ್ ಆಸ್ಪತ್ರೆಗೆ ಸೇರಿದ ಮೊದಲ ದಿನದಿಂದ ಹಿಡಿದು ಇಲ್ಲಿಯ ತನಕ ಅರಿತುಕೊಂಡಿದ್ದು ಏನೆಂದರೆ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದು ಎಷ್ಟು ಮುಖ್ಯ ಎನ್ನುವುದು. ಆತ ಆಸ್ಪತ್ರೆಯಲ್ಲಿದ್ದಾಗ, ಇತರರು ತನ್ನಲ್ಲಿ ಸ್ವಲ್ಪ ಧೈರ್ಯ ತುಂಬಲಿ, ತನಗೆ ತನ್ನಲ್ಲಿ ಮತ್ತೆ ಭರವಸೆಯನ್ನು ಮೂಡಿಸಲಿ ಎಂದು ಅಪೇಕ್ಷಿಸುತ್ತಿದ್ದ. ಹಾಗಾಗಿಯೇ ಇಂದು ತನ್ನ ಈ ಫೌಂಡೇಷನ್ ಮೂಲಕ ಅನೇಕ ಕ್ಯಾನ್ಸರ್ ರೋಗಿಗಳಲ್ಲಿ ಭರವಸೆಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾನೆ.
ಡೇನಿಯಲ್ ಜಾಕೊಬ್ ತನ್ನ ಬದುಕಿನಲ್ಲಿ ಕಲಿತ ದೊಡ್ಡ ಪಾಠ ಫೈಟ್ ಮಾಡುವುದು. ಅದು ರಿಂಗ್ ಒಳಗೆ ಒಬ್ಬ ಬಾಕ್ಸರ್ ಆಗಿ ಇರಬಹುದು ಅಥವಾ ಬದುಕನ್ನು ಮುಗಿಸಲು ಹೊರಟಿದ್ದ ಕ್ಯಾನ್ಸರ್’ನಂತಹ ಸವಾಲು ಇರಬಹುದು. ಆತ ಎಂದೂ ಕೂಡ ಫೈಟ್ ಮಾಡುವುದನ್ನ ಬಿಡಲಿಲ್ಲ. ಭರವಸೆಯನ್ನು ಕಳೆದುಕೊಳ್ಳಲಿಲ್ಲ. ಇಂದೂ ಕೂಡ ಆತ ಬಾಕ್ಸಿಂಗ್ ಮಾಡುತ್ತಿದ್ದಾನೆ. ರಿಂಗ್’ನೊಳಗೆ ಎದುರಾಳಿಯೊಂದಿಗೆ ಫೈಟ್ ಮಾಡಿದರೆ, ರಿಂಗ್ ಹೊರಗೆ ಕ್ಯಾನ್ಸರ್ ರೋಗಿಗಳಿಗೆ ಭರವಸೆಯನ್ನು ತುಂಬುತ್ತಾ ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತಾ ಅವರಿಗಾಗಿ ಫೈಟ್ ಮಾಡುತ್ತಿದ್ದಾನೆ. ‘ಮಿರಾಕಲ್ ಮ್ಯಾನ್’ ಎಂದೇ ಖ್ಯಾತವಾಗಿರುವ ಡೇನಿಯಲ್’ನ ಈ ಹೋರಾಟ ಎಲ್ಲರಿಗೂ ಸ್ಪೂರ್ತಿ ತುಂಬುವಂತಾಗಲಿ!
Facebook ಕಾಮೆಂಟ್ಸ್