ಆತ ಪ್ರಪಂಚದ ಅತಿರಥ ಶ್ರೀಮಂತ. ಆಸ್ತಿಯ ಮೊತ್ತ ಸುಮಾರು ಐದುಕಾಲು ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು! ಕಾಲೇಜಿನಿಂದ ಹೊರ ಬಿದ್ದು ಮುಂದೆ ಇನ್ನೇನೂ ಸಾಧ್ಯವಿಲ್ಲ ಎಂಬಂತಿದ್ದ ಹುಡುಗನೊಬ್ಬನಿಂದ ಈ ಮಟ್ಟಿನ ಬೆಳವಣಿಗೆ ಸಾಧ್ಯವೆ ಎಂಬುದು ಇಂದಿಗೂ ಹಲವರಲ್ಲಿ ಕಾಡುತ್ತಿರುವ ಜಟಿಲ ಪ್ರಶ್ನೆ. ಇವನೊಟ್ಟಿಗೆ ಮತ್ತೊಬ್ಬನಿದ್ದಾನೆ. ಇಂದಿಗೂ ಕೀಲಿಮಣೆಯ ದಶಕದಷ್ಟು ಹಳೆಯ ಮೊಬೈಲ್ ಫೋನನ್ನೇ ಉಪಯೋಗಿಸುವ ಈತ ಸುಮಾರು ನಾಲ್ಕುವರೆ ಲಕ್ಷ ಕೋಟಿ ರೂಪಾಯಿಗಳ ಒಡೆಯ! ಕೋಕಾ ಕೋಲಾ, ವೀಕ್ಲಿ ಮ್ಯಾಗಜಿನ್, ಚ್ಯೂಯಿಂಗ್-ಗಮ್’ಗಳನ್ನು ಮಾರುತ್ತಿದ್ದ ಈ ಪೋರ ‘ಲಕ್ಷ ಗಳಿಕೆಗಿರುವ ಸಾವಿರ ಮಾರ್ಗಗಳು’ ಎಂಬಂತಹ ಒಂದು ಪುಸ್ತಕದಿಂದ ಪ್ರೇರಣೆ ಪಡೆದು ಈ ಮಟ್ಟಿಗೆ ಬೆಳೆದ ಎಂದರೆ ನೀವು ನಂಬಲೇಬೇಕು!
ಕಳೆದ ಹಲವು ದಶಕಗಳಿಂದ ಪ್ರಪಂಚದ ಅತಿ ದೊಡ್ಡ ಶ್ರೀಮಂತರ ಪಟ್ಟಿಯ ಅಗ್ರಸ್ಥಾನದಲ್ಲಿ ರಾರಾಜಿಸುವ ಇವರಿಬ್ಬರ ಹೆಸರನ್ನು ಕೇಳದಿರುವವರು ಅತಿ ವಿರಳ ಎನ್ನಬಹದು. ಮೊದಲನೆಯವ ದೈತ್ಯ ಮೈಕ್ರೋಸಾಫ್ಟ್ ಕಂಪನಿಯ ಸಂಸ್ಥಾಪಕ ಬಿಲ್ ಗೇಟ್ಸ್ ಎಂದಾದರೆ ಇನ್ನೊಬ್ಬ ಷೇರು ಮಾರುಕಟ್ಟೆಯ ಪ್ರಚಂಡ ಹೂಡಿಕೆದಾರ ವಾರೆನ್ ಬಫೆಟ್. ಇಂದು ಇವರಿಬ್ಬರ ಹೆಸರನ್ನು ಇಲ್ಲಿ ಪ್ರಸ್ತಾಪಿಸುತ್ತಿರಲು ಕಾರಣವಿದೆ. ಗಳಿಕೆಯ ಸಾರ್ಥಕತೆಯ ಶೃಂಗವನ್ನು ಇಲ್ಲಿ ಕಾಣಬಹುದಾಗಿದೆ. ವಿಶ್ವದ ಹಿರಿಯ ಶ್ರೀಮಂತದ್ವಯರು ಎಂಬ ವಿಶೇಷಣವಷ್ಟೇ ಅಲ್ಲದೆ ಮತ್ತೊಂದು ಬಹು ಮುಖ್ಯ ಗುಣ ಇವರಿಬ್ಬರನ್ನು ಒಂದಾಗಿ ಬೆಸೆದಿದೆ. ಇದು ವಿಶ್ವದ ಹಲವು ದೊಡ್ಡ ಕುಳಗಳ ತನು-ಮನದಲ್ಲೂ ಅಷ್ಟಾಗಿ ಚಿಗುರದ ಆಲೋಚನೆ. ಗಳಿಸುವ ಸಂಪತ್ತೂ ಹೆಮ್ಮೆಯಿಂದ ಸಂಭ್ರಮಿಸುವ ನಡೆ. ಅದೇ ಫಿಲಾಂತ್ರೋಫಿ / ಲೋಕೋಪಕಾರಿಕೆ. ಇಂದು ಫಿಲಾಂತ್ರೋಫಿ ಎಂಬ ಹೆಸರಿನಲ್ಲಿ ನೂರಾರು ಕಂಪನಿಗಳು ತಮ್ಮ ಕೈಲಾದ ಸಮಾಜ ಕಲ್ಯಾಣ ಕಾರ್ಯಗಳನ್ನು ಮಾಡುತ್ತಿರುವುದು ನಮಗೆ ಕಾಣ ಸಿಗುವ ವಿಷಯವೇ. ಆದರೆ ಈ ಇಬ್ಬರು ಮಹಾಶಯರ ಕಲ್ಯಾಣಕಾರ್ಯ ಇಂತಹ ದಿನನಿತ್ಯದ ನೂರಾರು ಫಿಲಾಂತ್ರೋಫರ್ಸ್’ಗಳಿಂಗಿಂತ ಸಾವಿರ ಪಟ್ಟು ಮಿಗಿಲಾದುದು ಎನ್ನಬಹುದು. ಸಮಾಜ ಕಲ್ಯಾಣವೆಂದರೆ ಮೂಗು ಮುರಿಯುವ ಪ್ರಸ್ತುತ ಕಾಲದಲ್ಲಿ ಲೋಕೋಪಯೋಗಿ ಕಾರ್ಯಗಳನ್ನು ಹೀಗೆ ಸಣ್ಣ ಅಥವ ದೊಡ್ಡ ಎಂಬ ಅಳತೆಗೋಲುಗಳಿಂದ ಅಳೆಯುವುದು ಸಮಂಜಸವಲ್ಲದಾದರೂ ಇವರಿಬ್ಬರ ವಿಷಯದಲ್ಲಿ ಅದು ಕೊಂಚ ಗೌಣವಾಗುತ್ತದೆ.
2010ರಲ್ಲಿ ಈ ನಿಟ್ಟಿನಲ್ಲಿ ಕೈಜೋಡಿಸಿದ ಈ ದಿಗ್ಗಜರು ತಮ್ಮ ಆಸ್ತಿಯ ಸುಮಾರು ಅರ್ಧದಷ್ಟು ಹಣವನ್ನು ಸಮಾಜ ಕಲ್ಯಾಣ ಸೇವೆಗಳಿಗಾಗಿ ಮುಡಿಪಾಗಿಡುವ ಪ್ರತಿಜ್ಞೆಯನ್ನು (Pledge )ಮಾಡಿದರು! ಇದರ ಬೆನ್ನಲ್ಲೇ ‘ದಿ ಗಿವಿಂಗ್ ಪ್ಲೆಡ್ಜ್’ ಎಂಬ ಚಾರಿಟಬಲ್ ಸಂಸ್ಥೆಯನ್ನು ಸ್ಥಾಪಿಸಿದ ಜೋಡಿ ವಿಶ್ವದ ಶ್ರೀಮಂತರೆಲ್ಲರೂ ತಮ್ಮ ಆಸ್ತಿಯ ಅರ್ದದಷ್ಟು ಹಣವನ್ನು ಲೋಕೋಪಯೋಗಿ ಕಾರ್ಯಗಳಿಗೆ ವಿನಿಯೋಗಿಸಬೇಕೆಂದು ಕೇಳಿಕೊಂಡರು. ವಾರೆನ್ ಬಫೆಟ್ ಇನ್ನೂ ಒಂದೆಜ್ಜೆ ಮುಂದೆ ಹೋಗಿ ತನ್ನ ಸಂಪತ್ತಿನ ಶೇಕಡಾ 99ರಷ್ಟನ್ನು ಇಂತಹ ಕಾರ್ಯಗಳಿಗೆ ವಿನಿಯೋಗಿಸಲು ಮುಂದಾಗುತ್ತಾನೆ! ಹೀಗೆ ಶುರುವಾದ ‘ದಿ ಗಿವಿಂಗ್ ಪ್ಲೆಡ್ಜ್’ ಸಂಸ್ಥೆ ಇಂದು ವಿಶ್ವದ ಸುಮಾರು 158 ಶ್ರೀಮಂತರ ಮನ ಒಲಿಸುವಲ್ಲಿ ಯಶಸ್ವಿಯಾಗಿದೆ. ತಮ್ಮ ಅರ್ಧಕ್ಕಿಂತಲೂ ಹೆಚ್ಚಿನ ಸಂಪತ್ತನ್ನು ಲೋಕ ಕಲ್ಯಾಣ ಕಾರ್ಯಗಳಿಗೆ ಮುಡಿಪಾಗಿಡಲು ಪ್ರೇರೇಪಿಸಿದೆ. ಇಷ್ಟೆಲ್ಲಾ ಜನರನ್ನು ಒಲಿಸಿ, ಒಪ್ಪಿಸಿದರೆ ಎಷ್ಟೆಲ್ಲಾ ಮೊತ್ತದ ಸಂಪತ್ತು ಬಂದಿರಬಹುದು ಎಂಬ ಗುಣಸಹಜ ಪ್ರಶ್ನೆ ಸಾಮಾನ್ಯರಾದ ನಮ್ಮಲ್ಲಿ ಬಾರದೆ ಇರದು. ಅದರ ಮೊತ್ತ ಸುಮಾರು ಇಪ್ಪತೈದು ಲಕ್ಷ ಕೋಟಿ ರೂಪಾಯಿಗಳು! (2017-18ನೇ ಸಾಲಿನ ಕರ್ನಾಟಕ ಸರ್ಕಾರದ ಆಯವ್ಯಯದ ಒಟ್ಟು ಮೊತ್ತವೇ ಹತ್ತಿರ ಹತ್ತಿರ ಎರಡು ಲಕ್ಷ ಕೋಟಿ ರೂಪಾಯಿಗಳು.)’ಜೋಕ್ ಮಾಡ್ಬೇಡಿ ಸುಮ್ನಿರಿ ಸಾರ್’ ಎಂಬ ಒಬ್ಬ ಸಾಮಾನ್ಯನ ಅಲಕ್ಷಿಸುವ ಮಾತಿಗೆ ಮತ್ತಷ್ಟು ವಿಸ್ಮಯವನ್ನು ಮೂಡಿಸುವ ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ನಂದನ್ ನೀಲೆಕಣಿ. ಕಳೆದ ತಿಂಗಳು ನೀಲೆಕಣಿ ದಂಪತಿ ತಮ್ಮ ಸಂಪತ್ತಿನ ಅರ್ಧದಷ್ಟು ಅಂದರೆ ಸುಮಾರು 5500 ಕೋಟಿ ರೂಪಾಯಿಗಳಷ್ಟನ್ನು ಸಮಾಜಸೇವಾ ಕಾರ್ಯಗಳಿಗೆ ಮುಡಿಪಾಗಿಡುವರೆಂದು ಘೋಷಿಸಿಕೊಂಡಿದ್ದಾರೆ. ಅಲ್ಲದೆ ವಿಪ್ರೋ ಸಂಸ್ಥೆಯ ಅಜೀಮ್ ಪ್ರೇಮ್ಜಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಶೋಭಾ ಡೆವೆಲಪರ್ಸ್ನ PNC ಮೆನನ್ ಹಾಗು ಭಾರತಿ ಏರ್ಟೆಲ್’ನ ಸುನಿಲ್ ಮಿತ್ತಲ್ ಕುಟುಂಬ ಈ ಒಪ್ಪಂದಕ್ಕೆ ಸಹಿ ಹಾಕಿರುವ ಇತರ ಭಾರತೀಯರು.
ನೂರಾರು, ಸಾವಿರಾರು ಸರ್ಕಾರಗಳು ನಾಯಕರುಗಳು ಸಮಾಜದ ಸರ್ವ ಕಾರ್ಪಣ್ಯಗಳನ್ನು ನಿವಾರಿಸಬಲ್ಲವರೆಂದು ಅರಚಿ, ಬಂದು, ಬೆಳಗಿ ಮರೆಯಾದರೂ ಇಂದಿಗೂ ಅಪೌಷ್ಟಿಕತೆ, ಆಹಾರದ ಕೊರತೆ, ಕುಡಿಯುವ ನೀರಿನ ಕೊರತೆ, ಮೂಲಭೂತ ಶಿಕ್ಷಣದ ಅಭಾವ, ಕನಿಷ್ಠ ಸೂರಿನ ಅಭಾವ ಎಂಬಂತಹ ಬೇಸಿಕ್ ಅವಶ್ಯಕತೆಗಳೇ ವಿಶ್ವದ ಕೋಟಿ ಕೋಟಿ ಜನರಿಗೆ ಸಿಗದಿರುವದು ದುರದೃಷ್ಟಕರ. ಕಾರಣ ಒಂದೆಡೆ ಸರ್ಕಾರಗಳ ಬಾಯ್ಬಡಿಕೆಯ ತೋರಿಕೆಯಾದರೆ ಇನ್ನೊಂದೆಡೆ ಹೊಟ್ಟೆ ತುಂಬಿ ಮಿಕ್ಕುವುದನ್ನೂ ಮುಕ್ಕುವ ಮನಸ್ಥಿತಿಯ ಜನರ ಗುಂಪು. ಒಂದು ವರದಿಯ ಪ್ರಕಾರ ವಿಶ್ವದ ಅರ್ಧದಷ್ಟು ಸಂಪತ್ತು ಇಂದು ಕೇವಲ ಕೇವಲ 1% ನಷ್ಟು ಜನರ/ಶ್ರೀಮಂತರ ಬೊಗಸೆಯೊಳಗಿದೆಯಂತೆ! ಅಂದರೆ ಭೂಮಿಯನ್ನು ಸರಿಯಾಗಿ ಎರಡು ಭಾಗಗಳಾಗಿ ವಿಂಗಡಿಸಿ ಒಂದು ಭಾಗದಲ್ಲಿ ಈ ಎಲ್ಲಾ ಶ್ರೀಮಂತರನ್ನು ಹಾಗು ಇನ್ನೊಂದೆಡೆ ಉಳಿದ ಇತರರನ್ನು ಬಿಟ್ಟರೆ ಏಳುವರೆ ಕೋಟಿಯಷ್ಟು ಜನ ಸಂಪೂರ್ಣ ಒಂದು ಭಾಗವನ್ನು ಆಕ್ರಮಿಸಿದರೆ ಉಳಿದ ಭಾಗವನ್ನು ತುಂಬಿಕೊಳ್ಳುವವರು ಬರೋಬ್ಬರಿ ಏಳುನೂರ ಐವತ್ತು ಕೋಟಿ ಜನ!! ಈ ಮಟ್ಟಿನ ಮಹಾವ್ಯತ್ಯಾಸವನ್ನು ಅರಿತೋ ಏನೋ ಎಂಬಂತೆ ಬಿಲ್ ಗೇಟ್ಸ್ ಹಾಗು ವಾರೆನ್ ಬಫೆಟ್ ಒಟ್ಟುಗೂಡಿ ಒಂದು ಹೊಸ ಇತಿಹಾಸವನ್ನು ಬರೆಯಲು ಮುಂದಾಗಿರುವುದು. ತುಂಬು ಹೃದಯದಿಂದ ಕೊಟ್ಟು ಸಾರ್ಥಕತೆಯ ಹಾಗು ಅರ್ಥಪೂರ್ಣ ಜೀವನವನ್ನು ನಡೆಸಲು ಪ್ರೇರೇಪಿಸುತ್ತಿರುವುದು. ದಿ ಗಿವಿಂಗ್ ಪ್ಲೆಡ್ಜ್ ಸಂಸ್ಥೆ ವಿಶ್ವದ ಇಂತಹ ಹಲವಾರು ಮೂಲಭೂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಮನುಷತ್ವ ಎಂಬ ಮರೆಯಾಗುತ್ತಿರುವ ಚಿಗುರನ್ನು ಬೆಳೆಸಲು ಪಣತೊಟ್ಟಿದೆ.
ಇನ್ನು ನಮ್ಮ ದೇಶದ ವಿಚಾರಕ್ಕೆ ಬಂದರೆ ಒಂದು ಪಕ್ಷ ಈ ಸಂಸ್ಥೆ ಏನಾದರೂ ನಮ್ಮ ದೇಶದ ಮೊದಲ ಇಪ್ಪತ್ತರಿಂದ ಇಪ್ಪತೈದು ಶ್ರೀಮಂತರ ಮನ ಒಲಿಸಿದರೂ ಸಾಕು, ಅದರಿಂದ ಬರುವ ಮೊತ್ತವೇ ಸುಮಾರು ಹದಿನೈದು ಲಕ್ಷ ಕೋಟಿ ರೂಪಾಯಿಗಳು!! (ಪ್ರತಿಯೊಬ್ಬರು ತಮ್ಮ ಸಂಪತ್ತಿನ ಅರ್ಧದಷ್ಟು ಮೊತ್ತವನ್ನು ವಿನಿಯೋಗಿಸಲು ಮುಂದಾದರೆ ಮಾತ್ರ). ನಮ್ಮ ದೇಶದ ಒಂದು ವರ್ಷದ ಆಯವ್ಯಯವೇ ಸುಮಾರು ಇಪ್ಪತ್ತರಿಂದ ಇಪ್ಪತ್ತೆರೆಡು ಲಕ್ಷ ಕೋಟಿಗಳಿರುವಾಗ ನಮ್ಮೆಲ್ಲ ದೊಡ್ಡ ಮಹಾನುಭಾವರುಗಳೇನಾದರೂ ಇಂತಹದೊಂದು ಮನೋವೈಶಾಲ್ಯತೆಯನ್ನು ಮೆರೆದರೆ ಖಂಡಿತವಾಗಿಯೂ ಆಳುವ ಸರ್ಕಾರಗಳು ತಮ್ಮ ನೂರಾರು ವರುಷಗಳ ‘ವೃತ್ತಿಜೀವನ’ದಲ್ಲಿ ಸಾಧಿಸದ್ದನ್ನು ಒಂದೇ ವರ್ಷದಲ್ಲಿ ಇಂತಹ ಕಾರ್ಯಗಳು ಮಾಡಿ ತೋರಿಸಬಲ್ಲವೇನೋ?!
ಇನ್ನು ಸಮಾಜಸೇವೆ ಎನ್ನುವ ಬಣ್ಣದ ಮಾತುಗಳಿಂದ ರಾಜಕಾರಣ ಮಾಡುವ ನಮ್ಮ ನಾಯಕರು ಹಾಗು ಅವರ ಪಕ್ಷಗಳು’ನಿಜವಾದ’ ಸಮಾಜಸೇವೆಯ ಹೆಸರಿನಲ್ಲಿ ತಮ್ಮ/ಪಕ್ಷದ ಅರ್ಧದಷ್ಟು ಹಣವನ್ನು ಬಿಟ್ಟು ಕೊಡುವ ಒಂದು ಕರಾರಿನ ಮೇಲೆ ಒಂದು ಪಕ್ಷ ಸಹಿ ಮಾಡಲಿ ನೋಡುವ! ಪ್ರಸ್ತುತ ಸ್ಥಿತಿಗತಿಗಳನ್ನು ಗಮನಿಸಿದರೆ ನಮ್ಮ ಕನಸ್ಸಿನಲ್ಲೂ ಇಂತಹದೊಂದು ಘಟನೆ ನಡೆಯುತ್ತದೆ ಎಂದು ಊಹಿಸಲಾಗುವುದಿಲ್ಲ ಬಿಡಿ.
ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು ದಿನದಿಂದ ದಿನಕ್ಕೆ ಒಂದಿಲ್ಲೊಂದು ಶತಕೋಟಿಗಳ ವಹಿವಾಟನ್ನು ನಡೆಸುವ ‘ಇವರು’, ಮಿತ್ತಲ್, ಟಾಟಾ, ಪ್ರೇಮ್ಜಿಯವರಂತಹ ಮಹಾನುಭಾವರೇ ತಮ್ಮ ಬಹುಪಾಲು ಮೊತ್ತದ ಹಣವನ್ನು ಇಂತಹ ಒಂದು ಸದುದ್ದೇಶದ ಕಾರ್ಯಗಳಿಗೆ ಮುಡಿಪಾಗಿಡುವಾಗ ಗುಲಗಂಜಿಯಷ್ಟು ಹಣವನ್ನಷ್ಟೇ ಎಲ್ಲೋ ಒಂದೆಡೆ ಕೊಟ್ಟು ನಾನೂ ಸಮಾಜಸೇವಕ ಎಂಬಂತೆ ಪೋಸು ಕೊಟ್ಟು ಇಷ್ಟೆಲ್ಲಾ ಬೆಳೆಯಲು ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಕಾರಣರಾದ ದೇಶ ಹಾಗು ದೇಶದ ಜನತೆಗೆ ಮರಳಿಸುವ ಕಾರ್ಯವನ್ನು ಮಾಡುವುದೆಂದು?ಬಿಟ್ಟಿ ಇಂಟರ್ನೆಟ್ಟನು ಬಿಸಿನೆಸ್’ನ ಒಳಯೋಚನೆಯಲ್ಲೇ ಕೊಟ್ಟರು ಅವರನ್ನು ಸಮಾಜಸೇವಕರಂತೆ ಕಾಣುವುದು ಮಾತ್ರ ನಮ್ಮ ದುರದೃಷ್ಟ.
ಖ್ಯಾತ ಬರಹಗಾರ್ತಿ ಸುಧಾಮೂರ್ತಿಯವರು ಒಂದೆಡೆ ತಮ್ಮ ವೃತ್ತಿ ಜೀವನದ ಆರಂಭದ ಕಾಲದಲ್ಲಿ ಟಾಟಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ನಡೆದ ಒಂದು ಘಟನೆಯನ್ನು ಮೆಲುಕು ಹಾಕಿಕೊಳ್ಳುತ್ತಾರೆ. ಟಾಟಾ ಗುಂಪಿನ ಅಂಗಸಂಸ್ಥೆಯಾಗಿದ್ದ ಟೆಲ್ಕೊ ಕಂಪನಿಯ ಮೊದಲ ಮಹಿಳಾ ತಾಂತ್ರಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಕೆಲವರ್ಷಗಳ ನಂತರ ನಿರ್ಗಮಿಸುವ ಸಮಯದಲ್ಲಿ ಟಾಟಾ ಸಂಸ್ಥೆಯ ಮುಕುಟಮಣಿ JRD ಟಾಟಾರನ್ನು ಕಾಣುವ ಸಂಧರ್ಭವೊಂದು ಒದಗಿ ಬಂದು ಆಕೆ ತನ್ನ ಪತಿ ಹೊಸದೊಂದು (ಇನ್ಫೋಸಿಸ್) ಕಂಪನಿಯನ್ನು ಹುಟ್ಟು ಹಾಕಲು ಮುಂದಾಗಿದ್ದಾರೆ, ತಾನು ಅವರ ಸಹಾಯಕ್ಕಾಗಿ ಇಲ್ಲಿಯ ಕೆಲಸವನ್ನು ಬಿಡುತ್ತಿದ್ದೇನೆ ಎಂದಾಗ ಅವರು ಮಂದಹಾಸದ ನಗೆಯೊಂದನ್ನು ಬೀರುತ್ತಾ ‘ನೀನು ನಿಮ್ಮ ಹೊಸ ಕಂಪನಿಯಿಂದ ಅದೆಷ್ಟೇ ಸಂಪತ್ತನ್ನು ಗಳಿಸು, ಆದರೆ ಖಂಡಿತವಾಗಿಯೂ ನೀನು ಗಳಿಸಿದ್ದನು ಸಮಾಜಕ್ಕೆ ಹಿಂದುರಿಗಿಸುವಳಂತಾಗು, ಏಕೆಂದರೆ ಸಮಾಜ ನಿನಗೆ ಹೆಚ್ಚೆಚ್ಚು ನೀಡಿದರಿಂದಲೇ ನೀನು ಹೆಚ್ಚೆಚ್ಚು ಬೆಳೆಯಬಹುದು. ಹೀಗೆ ಸಮಾಜದಿಂದ ಪಡೆದದ್ದನ್ನು ಹಿಂದಿರುಗಿಸಲು ಮಾತ್ರ ಮರೆಯಬೇಡ’ ಎಂದಿದ್ದರಂತೆ. JRD ಯವರನ್ನು ಗುರುವಿನಂತೆ ಪೂಜಿಸುತ್ತಿದ್ದ ಸುಧಾಮೂರ್ತಿ ಅವರ ಆ ಮಾತನ್ನು ಇಂದು ಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ಎಂಬ ಲೋಕೋಪಯೋಗಿ ಸಂಸ್ಥೆಯನ್ನು ಹುಟ್ಟುಹಾಕಿ ದಕ್ಷಿಣ ಭಾರತದಾದ್ಯಂತ ತಮಗಾದ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿಕೊಂಡು ಬಂದಿದ್ದಾರೆ.ನೂರಾರು ಸಂಸ್ಥೆಗಳಿಗೆ ಆದರ್ಶಪ್ರಾಯರಾಗಿದ್ದರೆ.
ಇಂತಹ ಜನೋಪಕಾರಿ ಮನೋಭಾವ ಮರಿಮಕ್ಕಳ ಮೊಮ್ಮಕ್ಕಳಿಗೆ ಕೂಡಿಡುವ ಇಂದಿನ ಕಾಲದಲ್ಲಿ ಹಲವರಲ್ಲಿ ಮೂಡಬೇಕಿದೆ. ಭೂಮಿಯ ಮೇಲಿನ ಯಾವೊಂದು ಜೀವಿಗಳಲ್ಲೂ ಕಾಣದ ಭೇದ-ಭಾವ, ಮೇಲು-ಕೀಳು ಹಾಗು ಬಡವ-ಬಲ್ಲಿದನೆಂಬ ನೀಚ ಪಿಡುಗುಗಳನ್ನು ಮಾನವ ಬುಡಸಮೇತ ಕಿತ್ತೆಸೆಯುವ ಸಮಯ ಬಂದಿದೆ. ಬಿಲ್ ಗೇಟ್ಸ್ ಹಾಗು ವಾರೆನ್ ಬಫೆಟ್’ರ ಈ ನಿಟ್ಟಿನ ಕಾರ್ಯ ಇನ್ನಷ್ಟು ಯಶಸ್ಸು ಕಾಣಲಿ, ಸಕಲರಲ್ಲೂ ಇಂತಹ ಲೋಕೋಪಯೋಗಿ ಮನೋಭಾವ ಬೆಳೆಯುವಂತಾಗಲಿ ಎಂದು ಸದ್ಯಕ್ಕೆ ಹಾರೈಸೋಣ.
ದಿ ಗಿವಿಂಗ್ ಪ್ಲೆಡ್ಜ್’ನ ಹೆಚ್ಚಿನ ಮಾಹಿತಿಗಾಗಿ,
https://givingpledge.org/
Facebook ಕಾಮೆಂಟ್ಸ್