X

‘ಸ್ಪೋಟ’ಕ ಸಂದರ್ಶನ!!!

‘ಸೃಷ್ಟಿ-ಸ್ಥಿತಿ-ಲಯ’ ಎನ್ನುವುದು ಹುಲುಮಾನವರಾದ ನಮ್ಮ ಕೈಯಲ್ಲಿಲ್ಲ, ಅದೇನಿದ್ದರೂ ಮೇಲೊಬ್ಬ ಕೂತಿದ್ದಾನಲ್ಲಾ ಅವನ ಕೈಯಲ್ಲಿದೆ ಎಂದು ಒಂದಿಲ್ಲೊಂದು ಸಂದರ್ಭದಲ್ಲಿ ಹಲುಬುತ್ತಿರುತ್ತೇವೆ. ಭೂಮಿಯ ಅಂತ್ಯ ಸಮೀಪಿಸಿದೆ ಎಂಬ ವರದಿ ಪ್ರಸಾರ ಮಾಡುವ ಮೂಲಕ, ಸೃಷ್ಟಿ ಗೊತ್ತಿಲ್ಲ, ಸ್ಥಿತಿ ಮತ್ತು ಲಯ ಮಾತ್ರ ತಮ್ಮ ಕೈಯಲ್ಲಿಯೇ ಇದೆಯೇನೊ ಎಂಬಂತೆ ನಡೆದುಕೊಳ್ಳುತ್ತಿವೆ ಕೆಲವು ದೃಶ್ಯಮಾಧ್ಯಮಗಳು.  ಹಾಗಾಗಿ ಅವರ ಎಂದಿನ ವರ್ತನೆಯಂತೆ ‘ತಾವೂ ಒಂದು ರೀತಿಯಲ್ಲಿ ಮೇಲಿನಿಂದ ಇಳಿದು ಬಂದವರೇ’ ಎನ್ನುವುದನ್ನು ಸಾಬೀತುಪಡಿಸಿದಂತಾಗಿದೆ. ಅಯ್ಯೋ ಅದೆಲ್ಲಾ ಅದೃಶ್ಯ ಶಕ್ತಿಯ ಆಟ ಎನ್ನುತ್ತಿದ್ದವರೆಲ್ಲಾ ಇದೇನಿದು ಈ ಬಗ್ಗೆಯೂ ದೃಶ್ಯ ಮಾಧ್ಯಮದವರ ಅರಚಾಟ  ಎಂದು ಹಲ್ಲುಕಡಿಯುತ್ತಿದ್ದಾರೆ.

‘ಇದೊಂದು ಕಾಲ್ಪನಿಕ ಸುದ್ದಿ’ ಎಂಬ ಡಿಸ್ ಕ್ಲೇಮರ್ ಗೆ ಸೂಕ್ತವೆನಿಸುವ ವರದಿಯನ್ನು ಹಲವು ಬಾರಿ ಪ್ರಸಾರ ಮಾಡುವ ಮೂಲಕ ಇವು ಜನರ ‘ಫನ್’ಕಾ ಸಂಗತಿಗಳಾಗಿವೆ. ಅಂದ ಮೇಲೆ ಇದರ ಬಗ್ಗೆ ಫನ್‌ಗಾಗಿ ಕೆಲವು ವ್ಯಕ್ತಿಗಳ ಹೇಳಿಕೆ ಪಡೆದರೆ ಹೇಗೆ? ಭೂಮಿಯ ಅಂತ್ಯದ ಬಗ್ಗೆ ಕೆಲವರ ಅಭಿಪ್ರಾಯ ಇಲ್ಲಿದೆ, ಓದ್ಕೊಳ್ಳಿ. ಇದು ಕಾಲ್ಪನಿಕ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ?

ಮುಕೇಶ್ ಅಂಬಾನಿ: ಕಡಿಮೆ ರೇಟ್ ಗೆ ಅನ್‌ಲಿಮಿಟೆಡ್ ಕಾಲ್ ಇಂಟರ್‌ನೆಟ್ ಕೊಟ್ಟು ಉಳಿದ ಕಂಪೆನಿಗಳನ್ನು ಮುಳುಗಿಸಿಬೇಕೆಂದುಕೊಂಡಿದ್ದೆ. ಈಗ ನೋಡಿದರೆ ಜಿಯೋ ನಂಬರ್ ಗ್ರಾಹಕರ ನೆನಪಲ್ಲುಳಿಯುವ ಮುನ್ನವೇ ಭೂಮಿ ಮುಳುಗುವ ಸುದ್ದಿ ಬಂತಲ್ಲ!!?

ಮುಖ್ಯಮಂತ್ರಿ: ನೋಡ್ರೀ ಇನ್ನೂ ಹಲವಾರು ಭಾಗ್ಯಗಳು ಬಾಕಿ ಉಳಿದಿವೆ. ಅದ್ಹೆಂಗ್ರೀ ಅವುಗಳೆಲ್ಲಾ ಜಾರಿಗೆ ಬರದೆ ಭೂಮಿ ಮುಳುಗೋಗುತ್ತೆ? ನೋ.. ನೋ.. ಇಟ್ಸ್ ಇಂಪಾಸಿಬಲ್ ಐ ಸೇ..!

‘ಪುಟ್ಟಗೌರಿ’ ಸೀರಿಯಲ್ ನಿರ್ದೇಶಕ: ಅದೆಲ್ಲಾ ಸುಮ್ನೆ ಅಪಪ್ರಚಾರ ಅಷ್ಟೇ. ಒಂದೊಮ್ಮೆ ಹಾಗಾದ್ರೂ ನಮ್ಮ  ಪುಟ್ಟಗೌರಿ ಮಾತ್ರ ಖಂಡಿತಾ ಬಚಾವಾಗಿ ಬರ್ತಾಳೆ ನೋಡ್ತಾ ಇರಿ.

ಉಪೇಂದ್ರ: ಸಿನಿಮಾನೇ ಬೇರೆ, ಜೀವನಾನೇ ಬೇರೆ ಅನ್ನೋದನ್ನ ಅರ್ಥ ಮಾಡ್ಕೊಳ್ಳೋ ಪ್ರಯತ್ನದಲ್ಲಿ ಬ್ಯುಸಿ ಇದೀನಿ. ಇದು ರಾಜಕೀಯ ಅಲ್ಲ ಪ್ರಜಾಕೀಯದ ಕಾಲ, ಸೋ.. ಅಂತದ್ದೇನೂ ಆಗಲ್ಲ. ಪ್ರಾಮಿಸ್!

ಪ್ರಧಾನಿ: ಅಚ್ಚೇ ದಿನ್ ಆನೆವಾಲಾ ಹೇ. ಅಲ್ಲಿಯವರೆಗೆ ಅಪಾಯವೇನಿಲ್ಲ. ಆದಾಗ್ಯೂ ಅಗತ್ಯ ಬಿದ್ರೆ ಈ ಬಗ್ಗೆ ಚರ್ಚಿಸೋಕೆ ಒಂದು ವಿದೇಶ ಪ್ರವಾಸ ಕೂಡಾ ಮಾಡೋಣ ಬಿಡಿ.

ಹುಚ್ಚ ವೆಂಕಟ್: ನನ್ ಮಗಂದ್. ಇದೆಲ್ಲಾ ಬ್ಯಾನ್ ಆಗ್ಬೇಕ್. ನಂದ್ ಇನ್ನೂ ಮೂರ್ ನಾಲ್ಕ್ ಸ್ಕ್ರಿಪ್ಟ್ಸ್ ರೆಡಿ ಇದಾವೆ. ಅದೆಲ್ಲಾ ಸಿನಿಮಾ ಆಗೋದ್ ಬೇಡ್ವಾ. ಅಂದ್ ಮೇಲೆ ಭೂಮಿ ಮುಳುಗೋಗುತ್ತಾ ಅಂತ ಹೇಂಗ್ರೀ ಕೇಳ್ತೀರಾ ನೀವು, ಹ್ಞಾಂ!!

ಯಾವುದಕ್ಕೂ ಇರಲಿ ಅಂತ, ಆ ವರದಿ ಪ್ರಸಾರ ಮಾಡಿದ ಚಾನೆಲ್‌ನವರನ್ನು ಮಾತನಾಡಿಸಿದ್ದಕ್ಕೆ ಅವರೇನಂದ್ರು ಗೊತ್ತಾ?

ಚಾನೆಲ್ ಹೆಡ್: ನೋಡ್ರೀ, ಜಗತ್ತು ಅಂತ್ಯ ಆಗಲ್ಲ ಅನ್ನೋದ್ ನಮಗೂ ಗೊತ್ತು. ನಿಮಗೆ ಡೌಟೇನ್ರೀ? ನೋಡ್ರೀ ಇಲ್ಲಿ ಅದೇ ಟಾಪಿಕ್ ಮೇಲೆ ಇನ್ನೂ ಐದಾರು ಎಪಿಸೋಡ್ಸ್ ರೆಡಿ ಇವೆ. ಅದೆಲ್ಲಾ ಪ್ರಸಾರ ಆಗೋದ್ ಬೇಡ್ವಾ. ಅಷ್ಟ್ ಕನ್ಫರ್ಮ್ ಇಲ್ದೇನೆ ರೆಡಿ ಮಾಡಿಟ್ಟಿದೀವಾ ನಾವು?

ಇವರನ್ನೆಲ್ಲಾ ಮಾತನಾಡಿಸಿದ ಮೇಲೆ ನಮ್ಮ ಬುದ್ಧಿಜೀವಿಗಳನ್ನು ಬಿಡುವುದು ಸರಿಯಲ್ಲ ಎಂದು  ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ಅದಾಗಲೇ ಈ ಸಂಬಂಧ ಮೋದಿ, ಆರ್‌ಎಸ್‌ಎಸ್ ವಿರುದ್ಧ ಘೋಷಣೆ ಕೂಗುತ್ತಾ ಟೌನ್‌ಹಾಲ್ ಮುಂದೆ ಧರಣಿ ಕುಳಿತಿದ್ದಾರೆಂದು ತಿಳಿಯಿತು. ಅಂದಮೇಲೆ ಹೇಳಿಕೆ ಪಡೆಯುವ ಅಗತ್ಯ ಇಲ್ಲವಾದ್ದರಿಂದ ಅದನ್ನು ಕೈ ಬಿಡಲಾಯಿತು!

ಓವರ್‌ಡೋಸ್: ಭೂಮಿಯ ಅಂತ್ಯ ಸಮೀಪಿಸಿದೆ ಎಂಬ ಸುಳ್ಳು ಸುದ್ಧಿಯನ್ನು ಮತ್ತೆ ಮತ್ತೆ ಬಿತ್ತರಿಸುತ್ತಿದ್ದರೂ ಜನ ಚಾನೆಲ್‌ಗಳ ವಿರುದ್ಧ ತಿರುಗಿ ಬೀಳಲಿಲ್ಲ ಏಕೆಂದರೆ ಇವರ ಈ ಕಾಟ ಸಹಿಸಿಕೊಳ್ಳುವುದಕ್ಕಿಂತ ಅದೇ ವಾಸಿ ಎಂದೆನಿಸಿರಬೇಕು.

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post