X

ಕ್ವಾರಂಟೈನ್ ಟೈಮಲ್ಲಿ ವ್ಯಾಲೆಂಟೈನ್ ಕೊಟ್ಟ ಕ್ವಾಟ್ಲೆ

ನಮ್ಮಾಕಿ ಹುಟ್ಟಾ ತಿನುಸ್ಬುರುಕಿ. ವಟ್ಟ ಮೂರೊತ್ತು ಬಾಯಾಡುಸ್ತಿರಬೇಕ. ಏನ್ ಸಿಗ್ಲಿಲ್ಲ ಅಂದ್ರು ಹೇರ್ ಬ್ಯಾಂಡ್ ತಿನ್ನುದು ಇಲ್ಲಾ ಮೊಬೈಲ್ ಹೆಡ್ಫೋನ್ ವೈರ್ ಕಡಿಯುದು ಮಾಡ್ತಾಳನನ್ನ ತಲಿ ತಿನ್ತಾಳು ಅದು ಬ್ಯಾರೆ ಲೆಕ್ಕ. ಏನ ಅಂದ್ರು ತಿನ್ನು ವಿಚಾರಕ್ಕ್ ಬಂದ್ರ ನಮ್ಮಕ್ಕಿನ ಮೆಚ್ಚಲೇಬೇಕ. ಹಂಗ ಹಿಂಗ ಮಾಮೂಲ್ ಐಟಂ ಕೊಟ್ರ – ಉಹುಂ, ಸುತಾರಾಂ ಮುಟ್ಟಂಗಿಲ್ಲ. ಏಗದಮ್ ಬರೋಬ್ಬರ ಜಾಗಾದಾಗ ಇರು ಹೋಟೆಲ್, ಧೂಳ ಇಲ್ದೇಇರು ಟೇಬಲ್ಸ್ವಚ್ಚ ಕೈಯಲೆ ಇಲ್ಲಿ ಅಡುಗಿ ಮಾಡ್ತಾರಪಾ ಅಂತ ಅಕಿ ಮನಸ್ಸಿಗ್ ಬಂದ್ರ ಅಷ್ಟ ಹೋಟೆಲ್ ಒಳಗ ಕಾಲ್ ಹಾಕ್ಕಾಳು. ಬಾಯಾಗ್ ತುತ್ತ ಇಡ್ತಿದ್ದಂತ ಕಾಯಿಪಲ್ಲೆ ಉಪ್ಪಿನ ನೀರನ್ಯಾಗ್ ತೋಳದಾರೋ ಇಲ್ಲ ಹಂಗ ಸುಮ್ಮ ನೀರ್`ನ್ಯಾಗ ಎದ್ದಿ ತಂದಾರೋ ಅಂತ ಗೆಸ್ ಮಾಡು ಅಷ್ಟ ಶಾಣ್ಯಾ ಅದಾಳ್ ನಮ್ಮಾಕಿ. ಆದರೆ ಏನ್ ಮಾಡೋದು, ಈ ಲಾಕ್`ಡೌನ್ ವ್ಯಾಳೆದಾಗ ನಾವೆಲ್ಲೂ ಹೊರಗ ತಿನ್ನಾಕ್ ಹೋಗೆ ಇಲ್ಲ

ಕ್ವಾರಂಟೈನ್ ಟೈಮ್`ದಾಗ ಎಲ್ಲರೂ ಮನ್ಯಾಗ್ ಇರ್ರಿ ಪಾ ಅಂತ ಮೋದಿ ಕಾಕಾ ಆರ್ಡರ್ ಮಾಡ್ಯಾರ. ಅಪ್ಪಿ ತಪ್ಪಿ ಮನಿ ಹೊರಗ್ ಹೆಜ್ಜಿ ಇಟ್ಟರ ಬ್ಯಾಕ್`ಯೆಲ್ಲ ರೆಡ್ ಆಗೋ ರೇಂಜ್`ಗೆ ಪೊಲೀಸ್`ರು ಫ್ರೀ ಗಿಫ್ಟ್ ಕೊಡ್ತಾರ. ಈ ಭಯಕ್ಕೆ ಎಲ್ಲೂ ಹೋಗದೇ, ಮನೇಲೇ ಖಾಲಿ ಕುಂತು ಬ್ಯಾಸರ ಆಗಿರೋ ಇವತ್ತಿನ ಜನರೇಷನ್`  ಬಾಯ್ಸ್ ಅಂಡ್ ಗರ್ಲ್ಸ್, ಅಡುಗಿಮನಿ ಒಳಗ ಸೈಂಟಿಸ್ಟ್ ಆಗ್ಯಾರ. ಅವರುಗಳು ಮಾಡೋ ಎಲ್ಲ ಪ್ರಯೋಗಗಳನ್ನ ವಾಟ್ಸಪ್ಪ್ ಸ್ಟೇಟಸ್`ದಾಗ ಫೋಟೋ ತೆಗಿದ ಹಾಕ್ತಾರ. ಇವನ್ನೆಲ್ಲ ಚಾಚೂ ತಪ್ಪದೇ ನಮ್ಮಾಕ್ಕಿ ಚೆಕ್ ಮಾಡ್ತಾಳ. ಅಂದಂಗ, ನಮ್ಮಾಕಿಗೆ ಹೀರೆಕಾಯಿ ಯಾವ್ದು ಹಾಗಲಕಾಯಿ ಯಾವ್ದು ಅಂತ ನೋಡಿದ್ರೆ ಗೊತ್ತಾಕ್ತಿರ್ಲಿಲ್ಲ. ಬರಿ ರುಚಿಯಿಂದಲೇ ಗುರ್ತು ಹಿಡಿತಿದ್ಲು. ಹಂತಾಕ್ಕಿ, ಈ ಕ್ವಾರೆಂಟಿನ್ ಟೈಮ್`ನಾಗ್ನಾನು ಅಡುಗಿ ಮಾಡಕ್ಕಿಅಂತ ದಿನ ಮೂರ್`ಹೊತ್ತು ನೂರು ವೆರೈಟಿ ಅಡುಗಿ ಮಾಡಿ, ನನ್ನ ಮ್ಯಾಲೆ ಪ್ರಯೋಗ ಮಾಡಿ, “ವ್ಹಾರೆವ್ಹಾಅಂತ ಸರ್ಟಿಫಿಕೇಟ್ ತಗೊಂಡ್ಲು. ಬೆಂಡಿಕಾಯಿ ಚಟ್ನಿ, ಬದನಿಕಾಯಿ ಭರತ, ಆಲೂ ಕಬಾಬ್ ಮಂಚೂರಿ, ಕೇಕು, ಜಿಲೇಬಿ, ಶೇಂಗಾ ಚಿಕ್ಕಿ, ಬದನಿಕಾಯಿ ಎಣಗಾಯಿಇವೆಲ್ಲ ಅನಾಹುತ ಮಾಡ್ತಾಳ್ ದೋಸ್ತ.. ಖರೆಗೂ.. ನೋ ಮಶ್ಗಿರಿ. ಇಕಿ ಮಾಡು ವೆರೈಟಿ ಐಟೆಮ್ಸ ನೋಡಿ, ಫುಲ್ ದಂಗ್ ಆಗೇನಿ ನಾ

ನಮ್ಮಾಕ್ಕಿ  ತಿನ್ನು ವಿಷಯಕ್ಕ ಭಾಳ್ ಮೊಂಡ ಅದಾಳ. ತಲ್ಯಾಗ ಬೇಕು ಅನ್ನಿಸಿದ್ದ  ಬಾಯಾಗ ಬೀಳಬೇಕು. ನಂಗ್  ಈಗ ಇದ ತಿನ್ನುಹಂಗ್ ಆಗೇತಿಅನ್ನುದೂ, ಪಟ್ಟನೆ ಐಟಂ ಮಾಡೂದು, ತಿನ್ನುದು. ಒಂದೆರಡು ಸಲ ನಂಗು ಮಸ್ತ್ ಅನ್ನುಸ್ತು ಖರೆ ಆಮ್ಯಾಗ್ ಡೌಟ್ ಬಂತುಏನ್ ಇಕಿಗ  ಹಿಂಗ್ ಬಸುರಿ ಬಯಕೆ ಆಗೇತಿ. ಅಕಿದು ನಂದು ಲಗ್ನ ಮೊನ್ನೆ ಮೊನ್ನೆ ಆಗೇತಿ – ಹಂಗಾಗಿ ಏನರ ಗುಡ್ ಸೈನ್ ಇರ್ಬೇಕು ಅಂತ. ಲಾಸ್ಟ ಟು ಡೇಸ್ ಹಿಂದ ಹೊಟ್ಟಿನೋವು ಅಂತ ನಮ್ಮಾಕ್ಕಿ ಮಕ್ಕೊಂಡಾಗ ಗೊತ್ತಾತು  “ಏಹ್, ಗುಡ್ ನ್ಯೂಸ್ ಬರಾಕ್ ಇನ್ನು ಟೈಮ್ ಐತಿ ಅಂತ. ಅದರ ಜೊತಿಜೊತಿ ನನಗ ಹೊಸ ಟೆನ್ಶನ್ ಬೇರೆ ಚಾಲೂ ಆಗೇತಿನಾರ್ಮಲ್ ಇದ್ದಾಗ ಇಷ್ಟೆಲ್ಲ ವೆರೈಟಿ ಬೇಕು ಅನ್ನು ನಮ್ಮಾಕಿ ನಾಳೆ ಹೊಟ್ಟೀಲೇ ಇದ್ದಾಗ  ಏನೆಲ್ಲಾ ಕೇಳತಾಳ್ ಇಕಿ ಅಂತ.

ಹೋಗ್ಲಿ ಬಿಡಿ.. ಮುಂದಿಂದ ಮುಂದಕ್ಕ.. ಈಗಿಂದ ಕಥಿ ಕೇಳಿರಿ.    

ಇವತ್ತ ಹಂಗ ಸುಮ್ಮ ಎಲ್ಲಾರದೂ ವಾಟ್ಸಪ್ಪ್ ಸ್ಟೇಟಸ್ ಚೆಕ್ ಮಾಡ್ಕೋತ ಕುಂತಾಳ. ಎಲ್ಲಾ ಕಿಚನ್ ಸೈಂಟಿಸ್ಟ್`ಗಳ ಎಕ್ಸ್ಪೆರಿಮೆಂಟ್ ನೋಡಿವ್ಹಾ ವ್ಹಾಅನ್ನಾಕತ್ತಾಳ. ನಡುಕ ಬಂತ ನೋಡಪಾ ಒಂದು ಫೋಟೋ. ಅಕಿ ಖಾಸಾ ಮಾಮಾನ ಮಗಳು ಅಪ್ಲೋಡ್ ಮಾಡಿದ್ಳು. ಏನ್ ಗೊತ್ತೇನ? ಉಪ್ಪ ಖಾರ..ಅಷ್ಟ ಅಲ್ಲ.. ಉಪ್ಪ ಖಾರ ಹಚ್ಚಿದ್ದ ತೋತಾಪುರಿ ಮಾವಿನಕಾಯಿ. ಫೋಟೋ ನಂಗ ತೋರ್ಸಿದ್ಲುನಂಗಂತೂ ಬಾಯೆಲ್ಲ ನೀರ ಬಂತ.. ಖರೆ ಇಕೀಗ.. ಕಣ್ಣಾಗ ನೀರ ಬಂದ್ವು. “ನಾ ಸಣ್ಣಕ್ಕಿ ಇದ್ದಾಗ ಅಜ್ಜಿ ಮನ್ಯಾಗ ಉಪ್ಪ ಖಾರ ಹಚ್ಚಿದ್ದ ದೊಡ್ದು ದೊಡ್ದು ಮಾವಿನಕಾಯಿ, ಎಡಗಯ್ಯಾಗೊಂದು ಬಲಗಯ್ಯಾಗೊಂದು ಹಿಡ್ಕೊಂಡು ತಿಂತಿದ್ದೆ..ಅಂತ ಚಾಲೂ ಮಾಡಿದಕ್ಕಿ ಮುಂದಿನ ಎರಡ ತಾಸ್  ಫುಲ್ ಮಾವಿನಕಾಯಿ ಹಿಸ್ಟರಿ ಹೇಳಕೊಂಡ್ಲು. ಅಷ್ಟೆಲ್ಲ ಕೇಳಿ ನಂಗು ಅನ್ನಿಸ್ತುಅಯ್ಯೋ ಪಾಪ, ಎಷ್ಟರ ಮಿಸ್ ಮಾಡ್ಕೊಳಾತಾಳ್ ಮಾವಿನಕಾಯಿ ಇಕಿ. ಅದಕ್ಕ ನಾ ವಿಚಾರ ಮಾಡಿ ಹೇಳಿದೆ ಕ್ವಾರೆಂಟಿನ್ ಮುಗಿಲಿ, ಮಾವಿನತೋಪಿಗ ಹೋಗುಣ ಅಂತ, ಬೇಕಾದಷ್ಟ್ ತಿನ್ನುವಂತಿ“. 

ಅಷ್ಟ ಅಂದಿದ್ದ ತಡ ಕಣ್ಣಾಗ ಖಾರ ಬಿದ್ದಂಗ, ಕೆಂಪ್ ಮಾಡ್ಕೊಂಡುನೀ ಈಗ ತಂದಕೊಡು ನಂಗಅನ್ನಬೇಕಾ?..
ಹೋಗ್ಯಾ, ಈಗ್ಯಾರ್ ತರ್ತಾರ್ ಅಂದೆ.
ಅಷ್ಟಕ್ಕ ಕಣ್ಣಿನಿಂದಲೇ ಉಪ್ಪಿನ ನೀರ ಹರಿಸಿದ್ಲು.
ಅವಾಗ ನಂಗ ಅನ್ನಿಸ್ತು – ‘ನೋಡಪಾ, ಉಪ್ಪು ಖಾರ ರೆಡಿ ಮಾಡ್ಕೊಂಡಾಳ ಇಕಿ, ಈಗೇನಾರ ನಾ ಮಾವಿನಕಾಯಿ ತಂದು ಕೊಡ್ಲಿಲ್ಲ ಅಂದ್ರ ನನ್ನ ತಲಿನ ಹೋಳ್ ಮಾಡಿ ಉಪ್ಪಿನಕಾಯಿ ಹಾಕ್ತಾಳ್ ಇಕಿ’ ಅಂತ. ಭಯಕ್ಕ ನಾ ಉಟ್ಟ ಅರವಿ ಮ್ಯಾಗ್ ಹೊಂಟೆ, ಮಾವಿನಕಾಯಿ ತರಾಕ್.

ನಮ್ಮನಿ ಇಂದ ಮುಂದ ಹೋಗಿ, ಮೂರನೇ ಕ್ರಾಸ್`ಲಿ ಎಡಕ್ಕ ಹೊರಳಿದ್ರ ಅಲ್ಲೊಂದು ಕಾಯಿಪಲ್ಲೆ ಅಂಗಡಿ ಐತಿ. ಪರಿಚಯಸ್ತ ಹುಡುಗ ಅವ. “ ತಮ್ಮ, ನಂಗ್ ಮಾವಿನಕಾಯಿ ಬೇಕೋ. ಅದಾವ್ ಏನ್?ಅಂದೆ. “ ಕ್ವಾರೆಂಟಿನ್ ಟೈಮ್ ನಾಗ್ ಅದೆಲ್ಲಾ ಯಾವ್ದು ಸಪ್ಲೈ ಇಲ್ಲಣ್ಣಅಂತ ಅವಾ ಹೇಳ್ತಿದ್ದಂಗ ನಾ ಮಾರಿ ಕೆಳಗ ಮಾಡ್ಕೊಂಡ್ ನಿಂತೆ. ಇಲ್ಲಪಾ ಮನ್ಯಾಗ್ ಪರಿಸ್ಥಿತಿ ಭಾಳ್  ನಾಜೂಕ್ ಐತಿ, ಈಗ ನಾ ಮಾವಿನಕಾಯಿ ಹಿಡ್ಕೊಂಡ್ ಹೋದ್ರನ ನಾಳೆ ನನ್ನ ಮುಖ ನೀ ನೋಡ್ತಿ ಅಂತೆಲ್ಲ ಹೇಳ್ಕೊಂಡೆ. ನನ್ನ ಕತಿ ಕೇಳಿ ಏನ್ ಅನ್ನುಸ್ತೋ ಏನೋ ಅವ್ನಿಗೆಅಣ್ಣ ಒಂದ ಮಿನಿಟ್. ಹಿಂಗ್ ಹೋಗಿ ಹಾಂಗ್ ಬಂದೆಅಂದಾವ್ನ, ಎದುರಿಗಿನ ಮನಿ ಕಾಂಪೌಂಡ್ ಹಾರಿ ಒಳಗ್ ಹೋಗಿ, ಅವ್ರ ಮನ್ಯಾಗ ಇದ್ದ ಮರ ಹತ್ತಿ ಜೋಡಿ ಮಾವಿನಕಾಯಿ ಕಿತ್ಕೊಂಡ್ ತಂದ್ ಕೊಟ್ಟಾ. “ಬಪ್ಪರೇ ಮಗನೆ, ನನ್ನ ಪಾಲಿಗೆ ದೇವರ ತರ ಬಂದು ಕೇಳಿದ್ದ ವರ ಕೊಟ್ಟೆ ಅಂತ ಅಂಗಡಿಯವ್ನಿಗೆ ಮನಸಲ್ಲೇ ದೀಡ್ನಮಸ್ಕಾರ ಹಾಕಿ ಮನಿಗ್ ಬಂದೆ.

ನಾ ಹೊಸ್ತಿಲ ಒಳಗ ಕಾಲ್ ಹಾಕುಕು ಮೊದ್ಲ ನಮ್ಮಾಕಿ ಕೈಯಾಗ ಚಾಕು ಹಿಡ್ಕೊಂಡ್ ಬಾಗಿಲ ಕಡೆ ನಿಂತ ಕಾಯತಿದ್ಲ. ನನ್ನ ಸಲುವಾಗಿ ಅಲ್ಲ.. ಮಾವಿನಕಾಯಿ ಸಲ್ವಾಗಿ (ಬಹುತೇಕ ನಾ ಕಾಯಿ ತಂದಿರಲಿಲ್ಲ ಅಂದ್ರನೂ ಅಕಿ ಚಾಕು ಬಳುಸ್ತೀದ್ಲೇನೋ).

ಎಳೆ ಕೂಸಿಗೆ ಎಣ್ಣಿ ಹಚ್ಚಿ ಮಸಾಜ್ ಮಾಡಿ ನೀರ ಹನಿಸ್ತಾರಲಾ ಹಂಗ ನಮ್ಮಾಕಿ ಜೋಡಿ ಮಾವಿನಕಾಯಿನ ಅಮಾತಲೇ ತಿಕ್ಕಿ ತೊಳೆದ್ಲು. ಅಡುಗಿಮನಿ ಕಟ್ಟಿ ಮ್ಯಾಲೆ ಮಾವಿನಕಾಯಿ ಇಟ್ಟು, ಮ್ಯಾಗಿಂದ ಕೆಳಗ ಚಾಕೂಲೆ ಸೀಳಿ, ಬೀಜ ಎತ್ತಿ ಪಕ್ಕಕ್ಕಿಟ್ಟು, ನಡೂಕ ಉಪ್ಪ ಖಾರ ಹಚ್ಚಿ ತಿಂದ್ಳು, ತಿಂದ್ಳು, ತಿಂದ್ಳು.. ಪರಿ ಎಂಜಾಯ್ ಮಾಡ್ಕೊಂಡ ಹುಳಿ ಕಾಯಿ ತಿಂದಕ್ಕಿ ನಮ್ಮಾಕ್ಕಿನ ಫಸ್ಟ್ ಇರಬೇಕು.

ತಿನ್ನುದೆಲ್ಲ ಮುಗಿಸಿ, ಕೈ ತೊಳಕೊಂಡು, ಬಾಯಿ ಒರೆಸಿಕೊಂಡು ನನ್ನ ಬಾಜು ಬಂದ ಕುಂತ್ಲು. ಅಕಿ ಎರಡು ಕೈಯಿಂದ ನನ್ನ ಕೈ ಹಿಡಕೊಂಡ್ಲು. ಅಕಿ ಕಣ್ಣ್ ಒಳಗ ಸಂತೃಪ್ತ ಭಾವನೆ ಎದ್ದು ಕಾಣಿಸ್ತಾ ಇತ್ತು. “ಏಹ್ ಹೋಗವಾ, ಥ್ಯಾಂಕ್ಸ್ ಎಲ್ಲ ಹೇಳಬ್ಯಾಡ ಇದ್ರಾಗ ಏನ್ ಐತಿಅಂತ ನಾನು ಅಕಿ ಕೈ ಬಿಡಿಸಿಕೊಂಡೆ. “ನಿನಗ್ಯಾವ ಥ್ಯಾಂಕ್ಸ್ ಓ ಮಾರಾಯಾ, ದಿನ ಮೂರ ಹೊತ್ತು ಬಿಸಿದು ಮಾಡಿ ಹಾಕಾಂಗಿಲ್ಲೇನ ನಾ ನಿನಗಅಂತ ಅಂದ್ಲು ನಮ್ಮಕ್ಕಿ. ಮಾವಿನ ಕಾಯಿ ಬೀಜ ತಗೋ. ಇದನ್ನ ಹಿತ್ತಲಾಗ್ ಹೋಗಿ ನೆಡು. ಮುಂದಿನ ವರ್ಷಕ್ಕ ಇದ ಬೀಜ ಮರ ಆಗಿ ಕಾಯಿ ಕೊಡಬೇಕ ನೋಡಅಂತ ಅನ್ಕೋತ ನನ್ನ ಕೈಯಾಗ್ ಮಾವಿನಕಾಯಿ ಬೀಜ ಇಟ್ಟ, ‘ಥ್ಯಾಂಕ್ಸ್ ಅಂತ ಥ್ಯಾಂಕ್ಸ್, ಮುಖ ನೋಡ ಇವನದ ಅಂತ ಗೊಣಕೋತ ಒಳಗ ಹೋದ್ಲು. ನಾ ಈಗ ಗುದ್ದುಲಿ ಹಿಡ್ಕೊಂಡ ಹಿತ್ತಲಮನಿಗೆ ಹೊಂಟೀನಿ. 

ಪ್ರತೀಕ ಸೊಲ್ಲಾಪುರ (prateek.sit@gmail.com)

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post