X

ಸಂತೆಯಲ್ಲಿ ಬದುಕು ಕಟ್ಟಿಕೊಂಡವರು

ಸುಡುವ ಬಿಸಿಲೇ ಕಣ್ಣಿಗೆ ರಾಚುತ್ತಿದೆ..

ಧೂಳು ರಪ್ಪೆಂದು ಮತ್ತೆ ಕಣ್ಣಿಗೆ ಹೊಡೆಯುತ್ತಿದೆ

ಬಣ್ಣ ಬಣ್ಣದ ಬಲೂನು, ಬಳೆಗಳು, ಜುಮುಕಿ

ನೋಡುತ್ತಾ ಸಾಗುವ ಮಂದಿಗೆ ಸಂಭ್ರಮ, ಸಡಗರ

ಜನರು, ಜನಜಂಗುಳಿಯ ನಡುವೆ

ಹತಾಶೆಯ ನಿಟ್ಟುಸಿರು ಯಾರಿಗೂ ಕೇಳಿಸುತ್ತಿಲ್ಲ..

 

ಎಲ್ಲೆಲ್ಲಿಂದಲೋ ಕೊಳ್ಳಲು ಬಂದವರು

ಅಳೆದೂ, ತೂಗಿ ಕೊಳ್ಳದೆ ಮುಂದೆ ಸಾಗುವರು..

ಇವತ್ತಿನ ತುತ್ತಿಗಾಯ್ತು ಅನ್ನೋ ಆಸೆಗೂ ತಣ್ಣೀರು

ಮನೆ, ಕುಟುಂಬ ಎಲ್ಲವೂ ಇದ್ದರೂ

ನಾವು ಒಂಥರಾ ಅಲೆಮಾರಿಗಳು..

 

ನಿದಿರೆ ಬರುವ ಕ್ಷಣಿಕ ಹೊತ್ತಿಗೂ ಧೂಳಿನ ಮಣ್ಣೇ

ಹಾಸಿಗೆ, ಆಕಾಶವೇ ಬೆಚ್ಚನೆಯ ಹೊದಿಕೆ..

ನಾವು, ಸಂತೆಯಲ್ಲಿ ಬದುಕು ಕಟ್ಟಿಕೊಂಡವರು

ಬೆಳಗಾಗಿ, ಜನ ಸೇರಿದರೆ ವ್ಯಾಪಾರದ ಧಾವಂತ

ಕಡಿಮೆ, ಹೆಚ್ಚು ಅನ್ನೋ ಚೌಕಾಸಿಯಲ್ಲಿ ದಕ್ಕಿದ್ದೆಷ್ಟೋ

ಲಾಭವಾಯ್ತೋ..ನಷ್ಟವಾಯ್ತೋ ಅನ್ನೋ ಗೊಂದಲದಲ್ಲೇ ಬದುಕು

ಆ ಯೋಚನೆಗಳ ನಡುವೆಯೇ, ಮತ್ತೆ ಹೊರಡಬೇಕು

ನಾಳೆ, ಪಕ್ಕದ ಊರಲ್ಲಿ ಸಂತೆಯಿದೆಯಂತೆ..

Facebook ಕಾಮೆಂಟ್ಸ್

vinutha perla: ವೃತ್ತಿ ಪತ್ರ್ರಿಕೋದ್ಯಮ. ಪ್ರವೃತ್ತಿ ಬರವಣಿಗೆ. ಹಾಗೆಯೇ ಸುಮ್ಮನೆ ಮನದಲ್ಲಿ ಮೂಡಿದ ಭಾವನೆಗಳನ್ನು ಅಕ್ಷರಕ್ಕಿಳಿಸುವುದು ಹವ್ಯಾಸ. ನಿಜವಾದ ಅನುಭವದ ಬುತ್ತಿಯೇ ಕಥೆ, ಕವನ, ಲೇಖನಗಳ ಜೀವಾಳ. ಸದ್ಯಕ್ಕೆ ಇರುವ ಊರು ಸಿಲಿಕಾನ್ ಸಿಟಿ ಬೆಂಗಳೂರು. ಹುಟ್ಟಿ ಬೆಳೆದಿದ ಸ್ಥಳ ದೇವರ ಸ್ವಂತ ನಾಡು.
Related Post