X

ಮೀಸೆ: ಗಂಡಿಗೆ ಕೇಶ, ಹೆಣ್ಣಿಗೆ ಕ್ಲೇಶ!

ಹೆಂಗಸರಿಗೇಕೆ ಮೀಸೆ ಬೆಳೆಯುವುದಿಲ್ಲ?

“ಅವಳೇ ನನ್ನ ಹೆಂಡ್ತಿ” ಸಿನೆಮಾದಲ್ಲಿ “ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು” ಎಂಬ ಹಾಡು ಕೇಳಿದ ಮೊದಮೊದಲ ದಿನಗಳಲ್ಲಿ “ಮೀಸೆ ಹೊತ್ತ ಹೆಂಗಸಿಗೆ” ಅಂತ ಯಾಕಿಲ್ಲ ಎಂಬ ಪ್ರಶ್ನೆ ತಲೆ ತುಂಬಿಕೊಂಡದ್ದು ಹೌದು. ಆದರೆ ಯಾರನ್ನು ಕೇಳುವುದು? ಮನೆಯಲ್ಲಿ ಅಮ್ಮನ ಬಳಿ ಇಂಥ ಪ್ರಶ್ನೆಗಳನ್ನೆಲ್ಲ ಕೇಳಬಹುದೋ ಬಾರದೋ ಎಂಬುದು ಸ್ಪಷ್ಟವಿರಲಿಲ್ಲ. ಶಾಲೆಯಲ್ಲಿ ಕೇಳೋಣವೆಂದರೆ, ನಮ್ಮ ವಿಜ್ಞಾನ ಮಾಸ್ಟ್ರಿಗೇ ಮೀಸೆ ಇರಲಿಲ್ಲ! ಯಕ್ಷಗಾನದಲ್ಲಿ ಆಗಾಗ ಸ್ತ್ರೀವೇಷ ಧರಿಸುತ್ತಿದ್ದ ಅವರು ಆಟವಿದ್ದಾಗೆಲ್ಲ ಮೀಸೆ ಬೋಳಿಸಬೇಕಿದ್ದುದರಿಂದ, ಮೀಸೆ ಬೋಳಿಸುವ ಕಾಯಕವನ್ನು ಖಾಯಂಗೊಳಿಸಿ ಮೂಗು-ತುಟಿಗಳ ನಡುವಿನ ಗಡಿರೇಖೆಯನ್ನು “ನೋ ಮ್ಯಾನ್ಸ್ ಲ್ಯಾಂಡ್” ಮಾಡಿಬಿಟ್ಟಿದ್ದರು. ಹೋಗಿ ಹೋಗಿ ಅವರಲ್ಲಿ ಮೀಸೆಯ ಪ್ರಶ್ನೆ ಕೇಳಿದರೆ, ತನ್ನನ್ನು ಗೇಲಿ ಮಾಡಲಿಕ್ಕೆಂದೇ ಹುಡುಗ ಹೀಗೆ ಕೇಳಿದನೆಂದು ಬಗೆದು ಉತ್ತರದ ಬದಲು ಬಾಸುಂಡೆ ಬರುವಂತೆ ಏಟು ಕೊಟ್ಟರೆ ಏನು ಗತಿ ಎಂದು ಸುಮ್ಮನಿದ್ದೆ. ಆದರೂ ಸಂಶಯ, ಕುತೂಹಲ ತಣಿಯಲಿಲ್ಲ. ಒಮ್ಮೆ ನಮ್ಮ ಮನೆಯಲ್ಲಿ ಬೆಕ್ಕೊಂದು ಮೂರು ಮರಿ ಹಾಕಿತು. “ಅಮ್ಮಾ ಗಂಡು ಬೆಕ್ಕುಗಳೂ ಮರಿ ಹಾಕುತ್ತವಾ?” ಎಂದು ಕೇಳಿದಾಗ ಅಮ್ಮ, “ಅದು ಹೆಣ್ಣಲ್ಲವೇನೋ!” ಎಂದು ನಕ್ಕಿದ್ದರು. ಹೆಣ್ಣು ಬೆಕ್ಕಿಗೂ ಮೀಸೆ ಇರುತ್ತದೆ ಎಂಬ ಜ್ಞಾನ ಅದುವರೆಗೆ ನನಗೆ ಇರಲಿಲ್ಲವಲ್ಲ ಎಂಬ ಬೇಸರದಲ್ಲಿ ಮೂರು ದಿನ ಊಟವೇ ಸೇರಲಿಲ್ಲ. ಪ್ರಪಂಚದ ಸರ್ವಜೀವರಾಶಿಯಲ್ಲೂ ಗಂಡಸು ಜನ್ಮಕ್ಕಷ್ಟೇ ಮೀಸೆ ಇರುತ್ತದೆ ಎಂಬ ಮೂಢನಂಬಿಕೆ, ಆ ಹೆಣ್ಣು ಬೆಕ್ಕಿನ ಮೋಹಕ ಮೀಸೆಯಿಂದಾಗಿ ಮುರಿದು ಬಿದ್ದಿತ್ತು. ಆದರೆ, ಮನುಷ್ಯರಲ್ಲಿ ಮೀಸೆ ಹೆಂಗಸರಿಗೆ ಬರುವುದಿಲ್ಲ ಏಕೆ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿಯಿತು.

ಮೀಸೆ ಎಂಬುದು ಗಂಡಸರ ಮುಖಾಭರಣ. ಪ್ರಭಾವೀ ರಾಜಕಾರಣಿಗಳು ತಾವು ಹೋದಲ್ಲೆಲ್ಲ ಬೌನ್ಸರುಗಳಂಥ ಬಾಡಿಗಾರ್ಡುಗಳನ್ನು ಜೊತೆಯಾಗಿಯೇ ಕರೆದೊಯ್ಯುವಂತೆ ಮೀಸೆ, ಬರುವಾಗ ತನ್ನ ಜೊತೆ ಗಡ್ಡವೆಂಬ ದಾಯಾದಿಯನ್ನೂ ಕರೆತರುತ್ತದೆ. ಹುಡುಗರ ಮುಖದಲ್ಲಿ ಮೀಸೆ, ಗಡ್ಡಗಳು ಮೊಳೆಯತೊಡಗುವುದು ಹದಿಮೂರು-ಹದಿನಾಲ್ಕರ ವಯಸ್ಸಲ್ಲಿ. ಗಂಡಸಿಗೆ ಸ್ವಪ್ರಯತ್ನವಿಲ್ಲದೆ ಬೆಳೆಯುವುದು ವಯಸ್ಸು ಮತ್ತು ಗಡ್ಡ-ಮೀಸೆ ಮಾತ್ರ ಎಂಬ ಮಾತೇ ಉಂಟು. ಆದರೆ, ಟೀನೇಜಿನ ಆಸೆ ಮತ್ತು ಗಡಿಬಿಡಿಗಳು ಹೇಗಿರುತ್ತವೆಂದರೆ, ಇನ್ನೊಂದೆರಡು ವರ್ಷ ಕಾದರೆ ಗಡ್ಡ ಮೀಸೆ ತಾವಾಗಿ ಬೆಳೆಯುತ್ತವೆಂಬುದು ಗೊತ್ತಿದ್ದರೂ ಹುಡುಗರು ಅಪ್ಪನ ಶೇವಿಂಗ್ ಕಿಟ್ಟಿನಿಂದ ಬ್ಲೇಡು ಹಾರಿಸಿ ಕೆನ್ನೆ ಹೆರೆದುಕೊಳ್ಳುವುದನ್ನು ಧಾರ್ಮಿಕ ವಿಧಿಯೆಂಬಷ್ಟು ನಿಷ್ಠೆಯಿಂದ ಗುಟ್ಟಾಗಿ ಮಾಡುತ್ತಾರೆ. ನುಣುಪು ಕೆನ್ನೆಯನ್ನು ಬ್ಲೇಡಿನಿಂದ ಹೆರೆದುಕೊಂಡರೆ ಗಡ್ಡ ಪೊಗದಸ್ತಾಗಿ ಬೆಳೆಯುತ್ತದೆಂಬುದು ಹುಡುಗರ ವಲಯದಲ್ಲಿ ಹುಟ್ಟಿ ಹಬ್ಬುವ ಹಲವು ಮೌಢ್ಯಗಳಲ್ಲಿ ಒಂದು. ಬೆಳೆ ಚೆನ್ನಾಗಿ ಬರಲು ಉಳುಮೆ ಚೆನ್ನಾಗಿ ಮಾಡಬೇಕು ಎಂಬುದನ್ನು ಹುಡುಗರು ಸೀರಿಯಸ್ ಆಗಿ ಪರಿಗಣಿಸುವುದೇ ಬಹುಶಃ ಈ ಗಡ್ಡ ಹೆರೆತಕ್ಕೆ ಕಾರಣವಿದ್ದೀತು.

ಇರಲಿ, ಈ ಮೀಸೆ ಗಡ್ಡಗಳು ಮನುಷ್ಯನಿಗೆ ಯಾಕೆ ಬರುತ್ತವೆ? ಎಂಬುದರ ಕುರಿತು ಜೀವವಿಜ್ಞಾನಿಗಳು ಬಹಳಷ್ಟು ಗಡ್ಡ ಕೆರೆದು ಮೀಸೆ ತಿರುವಿ ಯೋಚಿಸಿದ್ದಾರೆ. ಗಂಡಸುತನವೆನ್ನಬಹುದಾದ ಎಲ್ಲ ಗಂಡು ಲಕ್ಷಣಗಳನ್ನೂ ದಯಪಾಲಿಸುವುದು ಟೆಸ್ಟಾಸ್ಟಿರಾನ್ ಎಂಬ ಚೋದಕ (ಹಾರ್ಮೋನ್). ಆಂಡ್ರೋಜನ್ ಎಂಬ ಲೈಂಗಿಕ ಹಾರ್ಮೋನ್ ಸಮೂಹದ ಒಂದು ಸದಸ್ಯ ಇದು. ಹುಡುಗರಲ್ಲಿ ಪುರುಷ ಲಕ್ಷಣಗಳಾದ ಪ್ರೌಢಕೇಶ, ಗಡ್ಡ, ಮೀಸೆ, ಧ್ವನಿ ಒಡೆಯುವುದು – ಇವೆಲ್ಲ ಕಾಣಿಸಿಕೊಳ್ಳಲು ಲೈಂಗಿಕ ಚೋದಕಗಳೇ ಕಾರಣ. ಹಾಗೆಂದ ಮಾತ್ರಕ್ಕೆ ಹೆಚ್ಚು ಪ್ರಮಾಣದ ಟೆಸ್ಟಾಸ್ಟಿರಾನ್ ಇದ್ದರೆ ಅವರಿಗೆ ಹೆಚ್ಚು ದಪ್ಪದ ಗಡ್ಡ-ಮೀಸೆಗಳು ಬೆಳೆಯುತ್ತವೆ ಎಂದೇನೂ ಇಲ್ಲ. ಹಾರ್ಮೋನುಗಳ ಸ್ರಾವದ ಜೊತೆಗೇ ಮನುಷ್ಯನ ದೇಹದೊಳಗಿನ ಉಳಿದ ಅಂಶಗಳೂ ಈ ಸಂದರ್ಭದಲ್ಲಿ ಮುಖ್ಯವಾಗುತ್ತವೆ. ಅನುವಂಶೀಯತೆ ಕೂಡ ಪರಿಗಣ ಸಬೇಕಾದ ಸಂಗತಿಯೇ. ಮನುಷ್ಯನ ಗಡ್ಡ-ಮೀಸೆಗಳ ವಿಷಯದಲ್ಲಿ ಲೈಂಗಿಕ ಚೋದಕಗಳ ಪೈಕಿ ಹೆಚ್ಚು ಕೆಲಸ ಮಾಡುವುದು ಡೀಹೈಡ್ರೋಟೆಸ್ಟಾಸ್ಟಿರಾನ್ (ಸಂಕ್ಷಿಪ್ತವಾಗಿ ಡಿಎಚ್‍ಟಿ) ಎಂಬ ಚೋದಕ. ಇದು ಕ್ರಿಯಾಶೀಲವಾಗಬೇಕಾದರೆ ಮನುಷ್ಯನ ದೇಹದಲ್ಲಿ 5-ಆಲ್ಫಾ-ರೆಡಕ್ಟೇಸ್ ಎಂಬ ಕಿಣ್ವ ಪಟುವಾಗಿರಬೇಕು. ಗಂಡು ದೇಹದಲ್ಲಿ ಒಂದು ನಿರ್ದಿಷ್ಟ ವಯಸ್ಸು ದಾಟಿದ ಮೇಲೆ ಪಟುವಾಗುವ ಈ ಕಿಣ್ವ, ಹೆಂಗಸರ ದೇಹಗಳಲ್ಲಿ ಮಾತ್ರ ತಟಸ್ಥವಾಗಿರುತ್ತದೆ. (ಯಾರಲ್ಲಿ ಇದು ಪಟುವಾಗುತ್ತದೋ ಅವರ ಮುಖದಲ್ಲಿ ಅನಗತ್ಯ ಕೇಶ ಮೂಡುವುದೂ ಉಂಟು. ಗಂಡಸರಿಗೆ ಹೆಮ್ಮೆ ತರುವ ಕೇಶವೇ ಮಹಿಳೆಯರಿಗೆ ಕಿರಿಕಿರಿ, ಮಾನಸಿಕ ಕ್ಲೇಶಕ್ಕೂ ಕಾರಣವಾಗುತ್ತದೆ) ತಮಾಷೆ ಮತ್ತು ದುರಂತದ ಸಂಗತಿ ಎಂದರೆ ಡೀಹೈಡ್ರೋಟೆಸ್ಟಾಸ್ಟಿರಾನ್ ರಾಸಾಯನಿಕ ಯಾವ ಗಂಡಸರಲ್ಲಿ ಹೆಚ್ಚು ಪಟುವಾಗಿರುತ್ತದೋ ಅವರಿಗೆ ನಲವತ್ತರ ಗಡಿ ದಾಟಿದ ಮೇಲೆ ಗಡ್ಡ ಹುಲುಸಾಗಿ ಬೆಳೆದರೂ ತಲೆ ಮೇಲಿನ ಕೂದಲು ಅಷ್ಟೇ ವೇಗವಾಗಿ ಕಾಣೆಯಾಗುತ್ತದೆ! ಅಂದರೆ ಗಡ್ಡದ ಸೊಂಪುತನಕ್ಕೆ ಕಾರಣವಾಗುವ ರಾಸಾಯನಿಕವೇ ಶಿರೋಭಾಗದ ಬಕ್ಕತನಕ್ಕೂ ಕಾರಣವಾಗುತ್ತದೆ! ಡಿಎಚ್‍ಟಿ, ಒಂದೆಡೆಯ ಸಂಪತ್ತನ್ನು ಕಿತ್ತುಕೊಂಡು ಇನ್ನೊಂದೆಡೆ ಧಾರಾಳವಾಗಿ ಧಾರೆ ಎರೆಯುತ್ತದೆ! ಬೇಕಿದ್ದಲ್ಲಿ ಕಿತ್ತು ಬೇಡವಾದಲ್ಲಿ ಕೊಡುಗೈದಾನಿಯಾಗುವ ಪ್ರಕೃತಿಯ ಈ ವೈಚಿತ್ರ್ಯದ ರಹಸ್ಯವೇನೋ ವಿಜ್ಞಾನಿಗಳಗಂತೂ ಇನ್ನೂ ಗೊತ್ತಾಗಿಲ್ಲ.

ಏನೇ ಇರಲಿ, ಗಂಡಸಿಗಾದರೂ ಈ ಗಡ್ಡ ಮೀಸೆಗಳೆಲ್ಲ ಯಾಕೆ ಬೆಳೆಯಬೇಕು? ಬಾಲಿವುಡ್ಡಿನ ಚಾಕೊಲೇಟ್ ಹೀರೋಗಳಂತೆ ಮೀಸೆ-ದಾಡಿಗಳಿಲ್ಲದ ಮುಖಾರವಿಂದ ಕರುಣ ಸಲು ಪ್ರಕೃತಿಗೇನು ದಾಡಿ? ಜೀವವಿಜ್ಞಾನಿಗಳು ಹೇಳುವ ಪ್ರಕಾರ, ಅವೆರಡು ಕೇಶಕೂಪಗಳು ಗಂಡಸರಿಗೆ ಒಂದು ಬಗೆಯ ಘನತೆ, ಗೌರವ, ಗಡಸುತನ ದಯಪಾಲಿಸುತ್ತವೆ. ಗಡ್ಡ-ಮೀಸೆ ಹೊತ್ತ ಗಂಡಸರನ್ನು ಉಳಿದವರು ಸ್ವಲ್ಪ ಭಯಭಕ್ತಿಯಿಂದ ನಡೆಸಿಕೊಳ್ಳುತ್ತಾರೆ. ಅವರ ತಂಟೆಗೆ ಹೋಗುವುದನ್ನು ತಪ್ಪಿಸುತ್ತಾರೆ. ಈಗಲೂ ನಮ್ಮ ಎಣ ಕೆ ಹಾಗೇ ಅಲ್ಲವೆ? ಋಷಿಮುನಿಗಳು ಎಂದಾಗೆಲ್ಲ ಅವರ ಮುಖಕ್ಕೆ ಗಡ್ಡ-ಮೀಸೆಗಳನ್ನು ಅಂಟಿಸಿಯೇ ಅಂಟಿಸುತ್ತೇವೆ. ಮಹಾಭಾರತದ ಭೀಷ್ಮನಿಗೆ, ಪಾಂಡವರ ಹಿರಿಯಣ್ಣನಾದ ಯುಧಿಷ್ಠಿರನಿಗೆ, ರಾಮಾಯಣದ ದಶರಥನಿಗೆ ಮೀಸೆ-ಗಡ್ಡ ಇವೆ. ಆದರೆ ರಾಮ, ಅರ್ಜುನರಿಗೆ ಇಲ್ಲ. ಗಡ್ಡ ಬಿಟ್ಟಿದ್ದವರು ತಮ್ಮ ಗಡ್ಡಗಳನ್ನು ಹೇಗೆ ಟ್ರಿಮ್ ಮಾಡಿಕೊಳ್ಳುತ್ತಿದ್ದರು; ಗಡ್ಡ ಬೋಳಿಸಿದ್ದವರು ತಮ್ಮ ಕೇಶವನ್ನು ಹೇಗೆ ಅಷ್ಟು ನುಣುಪಾಗಿ ಬೋಳಿಸಿಕೊಂಡಿದ್ದರು ಎಂಬ ಬಗ್ಗೆ ಚಿತ್ರಕಾರರು ತಲೆಕೆಡಿಸಿಕೊಂಡಂತಿಲ್ಲ. ಗಂಡಸು ಒರಟ. ಕೈಬಾಯಿ ಜೋರು. ಯುದ್ಧಕ್ಕೆ, ಹೊಡೆದಾಟಕ್ಕೆ ಸದಾ ಮುಂದು. ಪ್ರಾಚೀನ ಕಾಲದಲ್ಲಿ ಬೇಟೆಯಾಡುವ, ಹೆಣ್ಣಿಗಾಗಿ ಉಳಿದ ಸ್ಪರ್ಧಿಗಳ ಜೊತೆ ಕಾದು ಗೆಲ್ಲುವ ಅನಿವಾರ್ಯತೆ ಇದ್ದದ್ದು ಗಂಡಸಿಗೆ. ಮೀಸೆ ಬಂದವನಿಗೆ ದೇಶ ಕಾಣುವುದಿಲ್ಲ ಎಂಬ ಗಾದೆ ಮಾತೇ ಇಲ್ಲವೇ? ಅಂಥ ಪೌರುಷಕ್ಕೆ ಮತ್ತೊಂದು ಸಂಕೇತವೇ ಗಡ್ಡ-ಮೀಸೆಗಳ ಹುಲುಸಾದ ಕೃಷಿ. ಮಾತ್ರವಲ್ಲ, ಮೀಸೆ ಜವಾಬ್ದಾರಿಯ ಸಂಕೇತವೂ ಹೌದು. “ಮೀಸುತ್ತವಂಗೆ ಮೀಸೆ ಭಾರ ಅಕ್ಕೋ?” ಎಂಬ ಮಾತಿನಲ್ಲಿ ಗಂಡಸಿನ ಹೊಣೆಗಾರಿಕೆಯ ಧ್ವನಿ ಅಡಗಿದೆ. ಮೀಸೆಯಿಲ್ಲದ ಗಂಡಸನ್ನು ಗಂಡಸುತನ ಕಡಿಮೆ, ಜವಾಬ್ದಾರಿ ಇನ್ನೂ ಬಂದಿಲ್ಲ ಎಂದು ಆ ಕಾಲದ ಅರಣ್ಯವಾಸಿ ಯುವತಿಯರು ಕೂಡ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲವೋ ಏನೋ!

ಮೀಸೆಗಳಲ್ಲಿ ಹಲವು ವಿಧ. ಸೂಜಿಯಂಥ ಡಾಲಿ ಮೀಸೆ, ಹಿಟ್ಲರನ ಚೌಕ ಮೀಸೆ, ಚಾಪ್ಲಿನ್‍ನ ಚುಟುಕು ಮೀಸೆ, ಸ್ಟಾಲಿನ್‍ನ ಗರಿ ಮೀಸೆ, ವೀರಪ್ಪನ್‍ನ ಪೊದೆ ಮೀಸೆ, ಪೊಲೀಸರ ಗಿರಿಜಾಮೀಸೆ… ಹೀಗೆ ಅದರ ಶಿಸ್ತುವೈವಿಧ್ಯ. ಹೆಂಗಸಿಗೆ, ಅದ್ಯಾವ ಕಾರಣಕ್ಕೋ ಏನೋ, ಪ್ರಕೃತಿ ಕೇಶವನ್ನು ತಲೆ ಮೇಲಷ್ಟೇ ಉಳಿಸಿ ಉಳಿದ ಭಾಗಗಳಿಂದ ವಿನಾಯಿತಿ ಕೊಟ್ಟಿದೆ; ಮೀಸೆಯ ಮೀಸಲಾತಿಯನ್ನು ಗಂಡಿಗಷ್ಟೇ ಬಿಟ್ಟಿದೆ. ಆದರೆ, ಅಡಿಗರು ಹೇಳುವಂತೆ, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ನೋಡಿ. ಅಮೆರಿಕಾದ ಟೆಕ್ಸಾಸ್‍ನಲ್ಲಿ ವರ್ಷಕ್ಕೊಮ್ಮೆ ನಡೆಸುವ ಗಡ್ಡ-ಮೀಸೆಯ ಸ್ಪರ್ಧೆಯಲ್ಲಿ ಇಲ್ಲದ ತರಹೇವಾರಿ ಕೇಶರಾಶಿಯನ್ನು ಮುಖದ ಮೇಲೆಲ್ಲ ಅಂಟಿಸಿಕೊಂಡು ಬಂದು ಭಾಗವಹಿಸುವವರೆಲ್ಲರೂ ರಂಭೆ-ಮೇನಕೆಯರಂಥ ನುಣುಪು ಮೈಯ ಹೆಂಗಸರೇ ಅಂತೆ!

ಮೀಸೆಯಡಿ ಉತ್ತರಿಸಿದವರು:

“ಮೀಸೆ ಹೊತ್ತ ಗಂಡಸಿಗೇ ಡಿಮ್ಯಾಂಡಪ್ಪೋ ಡಿಮ್ಯಾಂಡು” – ಈ ಸಾಲು ಅರ್ಥ ಕಳ್ಕೋಬಾರದು ಅಂತ.

– ವಿಜಯ ಎಸ್.ಪಿ.

ಬಂದ್ರೆ ಅದನ್ನು ಅವರ ಸ್ಟೈಲ್‍ಗೆ ಬದಲಾಯಿಸಿ ಮೀಸೆಗೆ ಮೋಸ ಮಾಡ್ತಾರೆ ಅನ್ನೋ ಕಾರಣಕ್ಕೆ ಹೆಂಗಸರಿಗೆ ಮೀಸೆ ಬರಲ್ಲ.

– ದೇವ್ ಮಾದೇವನ್

ಗಂಡ/ಡಿನ ಜುಟ್ಟು ಕೈಲಿರುವಾಗ ಹೆಣ್ಣಿಗೆ ಮೀಸೆಯ ಹಂಗ್ಯಾಕೆ?

– ಆರ್.ವಿ. ಮೂರ್ತಿ, ಮೈಸೂರು

ಲಿಪ್‍ಸ್ಟಿಕ್ ಹಾಕುವಾಗ ಮೀಸೆ ಇದ್ದರೆ ಚೆನ್ನಾಗಿರೋಲ್ಲ ಎಂದು ದೇವರೇ ಅದೊಂದನ್ನು ಮೈನಸ್ ಮಾಡಿದ್ದಾನೆ.

– ಮಲ್ಲಿಕಾರ್ಜುನ ಶರ್ಮ

ಇದ್ದಿದ್ದರೆ, ಬ್ಯೂಟಿ ಪಾರ್ಲರ್‍ನ ಬಿಲ್ಲಿನ ಮೊತ್ತ ಸಣ್ಣ ಏರಿಕೆ ಕಾಣುತ್ತಿತ್ತು.

– ಸಂದೇಶ್

ಥ್ರೆಡಿಂಗ್ ಮಾಡಿಸಿ ಅದನ್ನು ಸಣ್ಣದು ಮಾಡ್ತಾರೆ ಅಂತ ದೇವರು ಮೀಸೆ ಕೊಟ್ಟಿಲ್ಲ.

– ಧನಂಜಯ ಸಿಂಹ

ಸಜಾತೀಯ ಧ್ರುವಗಳು ವಿಕರ್ಷಿಸುತ್ತವೆ. ಎರಡು ಮೀಸೆಗಳು ವಿಕರ್ಷಿಸಿ ಬ್ರಹ್ಮಾಂಡ ಬರಡಾಗದಿರಲಿ ಎಂದು…

– ವಿನಾಯಕ್ ಕಾಮತ್

ಹೆಣ್ಣಿಗೆ ಜಡೆ ಭಾಗ್ಯ, ಗಂಡಿಗೆ ಮೀಸೆ ಭಾಗ್ಯ ದೇವರೇ ಕೊಟ್ಟು ಕಳಿಸಿದ್ದಾನೆ.

– ಕುಮಾರ ಸುಬ್ರಹ್ಮಣ್ಯ

ಬ್ಯೂಟಿ ಪಾರ್ಲರ್‍ನವರ ಹೊಟ್ಟೆ ಮೇಲೆ ಹೊಡೆಯುವ ಪ್ರಶ್ನೆ.

– ರಮೇಶ್ ಭಟ್ ಬೆಳಗೋಡು

ಅವರಿಗೆ ಮೀಸೆ ತೋರಿಸಿ ಹೆದರಿಸೋ ಅವಶ್ಯಕತೆ ಇರೋಲ್ಲ ಗಂಡಸರ ತರ.

– ಸೊನ್ನಪ್ಪ ರೆಡ್ಡಿ

ಮಿಸೆಸ್‍ಗೆ ಮೀಸೆ ಬಂದರೆ ಜೀವನ ಮಿಸ್ಲೀಡ್ ಆಗಬಹುದೇನೋ ಎಂಬ ಭಯಕ್ಕೆ.

– ನಮ್ರತಾ ಭಟ್

ಮೀಸೆ ಇದ್ದರೆ ಮೀಸಲಾತಿ ಮಿಸ್ ಆದೀತು ಅಂತ!

– ಮಧುಸೂದನ್ ರಾವ್

 

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post