“ಆಮ್ ಐ ಕರ್ಸಡ್” ಎಂಬ ಪ್ರಶ್ನೆಯನ್ನ ಓದಿ ನಿಟ್ಟುಸಿರಿಟ್ಟೆ. ಕ್ಯಾನ್ಸರ್ ಅಂದಾಕ್ಷಣ ಸೋಶಿಯಲ್ ಡಿಸ್ಕ್ರಿಮಿನೇಷನ್, ಸೋಶಿಯಲ್ ಐಸೋಲೇಷನ್ ಎಂಬಂತಹ ಪದಗಳು ಕೂಡ ಸಾಮಾನ್ಯವಾಗಿ ಕೇಳಿ ಬರುತ್ತದೆ. ಕ್ಯಾನ್ಸರ್ ಖಾಯಿಲೆಯ ಸೈಡ್ ಎಫೆಕ್ಟ್’ಗಳೇ ಇವೆಲ್ಲ. ಒಂದೆಡೆ ಕೀಮೋನಿಂದಾಗಿ ದೈಹಿಕ ಸೈಡ್ ಎಫೆಕ್ಟ್’ಗಳನ್ನು ಅನುಭವಿಸುವಂತಾದರೆ, ಇನ್ನೊಂದೆಡೆ ಸೋಶಿಯಲ್ ಐಸೋಲೇಷನ್ ಎಂಬಂತಹ ಮಾನಸಿಕ ಸೈಡ್ ಎಫೆಕ್ಟ್’ಗಳನ್ನು ತಡೆದುಕೊಳ್ಳಬೇಕು. ಕೀಮೋ ಸೈಡ್ ಎಫೆಕ್ಟ್’ಗಳು ಕೀಮೋ ನಿಲ್ಲಿಸಿದ ನಂತರ ಮುಗಿದು ಹೋಗಿಬಿಡುತ್ತದೆ. ಆದರೆ ಈ ಸೋಶಿಯಲ್ ಐಸೋಲೇಷನ್ ಹಾಗಲ್ಲ. ಕೆಲವೊಮ್ಮೆ ವರ್ಷಗಳವರೆಗೆ ಹಾಗೆಯೇ ಉಳಿದುಬಿಡುತ್ತದೆ. ವ್ಯಕ್ತಿ ಅದರಿಂದ ಹೊರ ಬರಲು ಬಹಳ ಕಷ್ಟಪಡಬೇಕಾಗುತ್ತದೆ.
“ನನಗೆ ಯಾರೂ ಗೆಳೆಯರು ಇಲ್ಲ, ಯಾರ ಬಳಿಯೂ ಏನೋ ಹೇಳಿಕೊಳ್ಳಲಾಗುವುದಿಲ್ಲ, ಮನೆಯವರೊಂದಿಗೆ ಇದೆಲ್ಲ ವಿಷಯವನ್ನು ಹಂಚಿಕೊಳ್ಳಲೂ ಆಗುವುದಿಲ್ಲ. ಕ್ಯಾನ್ಸರ್’ನ ನಂತರ ನಾನು ತುಂಬಾ ಒಂಟಿಯೇನೋ ಅಂತನಿಸಿಬಿಟ್ಟಿದೆ.” ಎಂದಿದ್ದ ಆ ವ್ಯಕ್ತಿ. ನಂತರ ಆತ ಕೇಳಿದ ಪ್ರಶ್ನೆ, “ಆಮ್ ಐ ಕರ್ಸಡ್?” ಎಂದು. ‘ನಾನು ಶಾಪಿತನೇ?’ ಎಂದು ಕೇಳಿದ ಪ್ರಶ್ನೆಯನ್ನ ಅರಗಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯವೇ ಬೇಕಾಯಿತು. ಕ್ಯಾನ್ಸರ್ ಅನುಭವಿಸುವವರೆಲ್ಲರಿಗೂ ಈ ರೀತಿ ಅನ್ನಿಸುವುದು ಸಹಜ. ಸಾಮಾನ್ಯವಾಗಿ ಎಲ್ಲ ಕ್ಯಾನ್ಸರ್ ರೋಗಿಗಳು ಇಂತಹ ಒಂದು ಸ್ಥಿತಿಯನ್ನು ಅನುಭವಿಸಿರುತ್ತಾರೆ. ಆ ಸಮಯವೇ ಹಾಗಿರುತ್ತದೆ, ಎಷ್ಟೋ ಪ್ರಶ್ನೆಗಳು, ಏನೋ ತಳಮಳ, ಹಾಗಂತ ಅದರ ಬಗ್ಗೆ ಮಾತನಾಡಲು ಮುಜುಗರ. ಅಥವಾ ಧೈರ್ಯ ಸಾಕಾಗುವುದಿಲ್ಲ ಎಂದರೂ ಎನ್ನಬಹುದು. ಎಷ್ಟೇ ಜನ ಜೊತೆಗಿದ್ದರೂ ಇದನ್ನೆಲ್ಲ ಹಂಚಿಕೊಳ್ಳಲಾಗದೇ ಒಂಟಿ ಎನ್ನಿಸುವುದು ಸಹಜವೇ.. ಆದರೆ ಎಲ್ಲಿಯವರೆಗೆ ಎನ್ನುವುದು ಮುಖ್ಯ?
ಸಾಮಾನ್ಯವಾಗಿ ಈ ಒಂಟಿ ಭಾವ ಕ್ಯಾನ್ಸರ್’ನೊಂದಿಗೆ ಆರಂಭವಾಗುತ್ತದೆ. ನಮ್ಮ ಆಸುಪಾಸಿನಲ್ಲಿ ಸಾಕಷ್ಟು ಜನರಿರುತ್ತಾರೆ. ಅವರಿಗೆ ನಮ್ಮ ಬಗ್ಗೆ ಕಾಳಜಿ ಇರುವುದಿಲ್ಲ ಎಂದೇನಲ್ಲ. ಬದಲಾಗಿ ಅವರಿಗೂ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವುದ ಅರ್ಥವಾಗದೇ ಗೋಜಲಿನಲ್ಲಿರುತ್ತಾರೆ. ಏನು ಹೇಳಬೇಕು? ಏನನ್ನು ಹೇಳಬಾರದು? ಯಾವುದಾದರೂ ಮಾತು ನೋವುಂಟು ಮಾಡಿದರೆ? ಏನೆಂದು ಸಮಾಧಾನ ಹೇಳಬೇಕು? ಎಲ್ಲ ಸರಿ ಹೋಗುವುದು ಎಂದರೆ ಅದು ಅವರಿಗೆ ಸಮಾಧಾನ ನೀಡುವುದಾ? ಇದೆಲ್ಲ ಪ್ರಶ್ನೆಗಳು ನಮ್ಮ ಆಸುಪಾಸು ಇರುವವರ ತಲೆಯಲ್ಲಿ ಇರುತ್ತದೆ. ಹಾಗಾಗಿ ಆದಷ್ಟು ಅವರು ಮೌನ ವಹಿಸಿ ಬಿಡುತ್ತಾರೆ. ‘ಹೇಗಿದ್ದೀಯಾ?’ ಎನ್ನುವ ಸರಳ ಮಾತು ಕೂಡ ಸ್ಟುಪಿಡ್ ಎನ್ನಿಸಲು ಶುರುವಾಗಿರುತ್ತದೆ. ಆರಾಮಾಗಿಲ್ಲ ಎಂದು ಗೊತ್ತಿದ್ದೂ ಅಂತಹ ಪ್ರಶ್ನೆ ಸಮಂಜಸ ಅಲ್ಲ ಅನ್ನುವುದು ಗೊತ್ತಿರುತ್ತದೆ. ಈ ಸಂದರ್ಭಗಳಲ್ಲಿ ಒಂದು ಸರಳ ಸಂಭಾಷಣೆ ಆರಂಭಿಸುವುದು ಕೂಡ ಕಷ್ಟವಾಗಿರುತ್ತದೆ. ಇದೆಲ್ಲದರ ನಡುವೆ ನಾವು ಏನನ್ನೂ ಮುಕ್ತವಾಗಿ ಹಂಚಿಕೊಳ್ಳಲಾಗದೇ ಒಂಟಿಯಾಗಿ ಬಿಟ್ಟಿರುತ್ತೇವೆ. ನಮ್ಮವರಿಂದ, ಸಮಾಜದಿಂದ ದೂರ ಆಗಲು ಆರಂಭಿಸಿರುತ್ತೇವೆ.
ಇನ್ನು ಕೆಲವೊಮ್ಮೆ ಕೆಲ ಜನರಿಗೆ ಸಿಂಪತಿಗೂ ಹಾಗೂ ಸಾಂತ್ವಾನಕ್ಕೂ ವ್ಯತ್ಯಾಸ ಗೊತ್ತಾಗುವುದೇ ಇಲ್ಲ. ಅವರೆಡಕ್ಕೂ ಬಹಳ ವ್ಯತ್ಯಾಸ ಇದೆ. ಯಾರೂ ಕೂಡ ಸಿಂಪತಿಯನ್ನು ಬಯಸುವುದಿಲ್ಲ. ಸಾಂತ್ವಾನವನ್ನು ಅಪೇಕ್ಷಿಸುತ್ತಿರುವ ಸಂದರ್ಭಗಳಲ್ಲಿ ಸಿಂಪತಿ ಸಿಗುವುದೇ ಹೆಚ್ಚು. ಸಿಂಪತಿ ಮನಸ್ಸಿಗೆ ಸಮಾಧಾನ ನೀಡುವುದಿಲ್ಲ ಬದಲಾಗಿ ಇನ್ನಷ್ಟು ಜರ್ಝರಿತಗೊಳಿಸುತ್ತದೆ ಅಷ್ಟೇ. ಕೆಲವೊಮ್ಮೆ ಅದು ಎಷ್ಟು ಘಾಸಿಗೊಳಿಸಿ ಬಿಡುತ್ತದೆ ಎಂದರೆ ಸಿಂಪತಿಯೂ ಬೇಡ, ಸಾಂತ್ವಾನವೂ ಬೇಡ. ಒಟ್ಟಿನಲ್ಲಿ ಜನರ ಸಹವಾಸವೇ ಬೇಡ ಎನಿಸಿ ಬಿಡುತ್ತದೆ. ಜನರ ಮಧ್ಯೆ ಇರುವುದಕ್ಕಿಂತ ಒಬ್ಬರೇ ಇರುವುದು ಲೇಸು ಎನಿಸಿಬಿಡುತ್ತದೆ. ಜನರಿಂದ, ಸಮಾಜದಿಂದ ಇನ್ನಷ್ಟು ದೂರ ಹೋಗಲು ಆರಂಭಿಸುತ್ತೇವೆ.
ಆ ಒಂಟಿತನ ನಮಗೆ ಎಷ್ಟು ಅಭ್ಯಾಸ ಆಗಿಬಿಟ್ಟಿರುತ್ತದೆ ಎಂದರೆ ಕ್ಯಾನ್ಸರ್ ಮುಗಿದರೂ ಅದರಿಂದ ಹೊರಬರಲು ಇಚ್ಛೆ ಪಡುವುದಿಲ್ಲ. ಸಮಾಜ ಹಾಗೂ ಜನರಿಂದ ದೂರ ಉಳಿಯುವುದು ಹಿತ ಅನ್ನಿಸಲು ಶುರುವಾಗಿ ಬಿಟ್ಟಿರುತ್ತದೆ. ಜನ ಜಂಗುಳಿ ಉಸಿರುಗಟ್ಟಿಸುವಂತಾಗಿ ಬಿಡುತ್ತದೆ. ಒಬ್ಬರೇ ಇರುವುದು ಸುಖ ಅಂತ ಅನ್ನಿಸಲು ಶುರುವಾಗಿ ಬಿಟ್ಟಿರುತ್ತದೆ. ಯಾರಾದರೂ ಹೆಚ್ಚು ಮಾತನಾಡಿಸಿದರೆ ‘ಇವರ್ಯಾಕೆ ನಮ್ಮನ್ನ ಒಂಟಿಯಾಗಿ ಬಿಟ್ಟು ಬಿಡಬಾರದು’ ಎನ್ನಿಸುತ್ತಿರುತ್ತದೆ. ಹಾಗಂತ ನಾವು ತುಂಬಾ ಖುಷಿಯಾಗಿರುತ್ತೇವೆ ಎಂದೇನಲ್ಲ. ಏನೋ ಒಂದು ರೀತಿಯ ತಳಮಳ ಇರುತ್ತದೆ. ಅದನ್ನ ಹೊರಹಾಕುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಆದರೆ ನಮ್ಮ ಅಕ್ಕ-ಪಕ್ಕ ಇರುವವರ ಬಳಿ ಅದು ಸಾಧ್ಯವೇ ಇಲ್ಲ ಎನಿಸುತ್ತಿದೆ. ನಮ್ಮ ಅಕ್ಕ ಪಕ್ಕ ಇರುವವರು ನಮ್ಮನ್ನ ಜಡ್ಜ್ ಮಾಡದೇ ಇರಲಿ ಎನ್ನುವುದು ಕಾರಣವಾದರೆ, ಇನ್ನೊಂದು ಹಿಂದಿನ ಕೆಲ ಕಹಿ ಅನುಭವಗಳು ಕೂಡ. ಆಸುಪಾಸಿನವರು ನಮ್ಮನ್ನ ಅರ್ಥ ಮಾಡಿಕೊಳ್ಳಲಿ ಎಂದೇ ಬಯಸುತ್ತಿರುತ್ತೇವೆ ಆದರೆ ಒಂದು ವೇಳೆ ಹಾಗಾಗದಿದ್ದರೆ? ಎಂಬ ಭಯ ಕೂಡ ಕಾಡುತ್ತಿರುತ್ತದೆ. ಮುಖ್ಯವಾಗಿ ಅವರ ಪ್ರಶ್ನೆಗಳನ್ನು ಎದುರಿಸಲು ನಾವು ತಯಾರಿರುವುದಿಲ್ಲ. ಅದರಲ್ಲೂ ಎಷ್ಟೋ ಅಸಂಬದ್ಧ ಪ್ರಶ್ನೆಗಳಿರುವುದೇ ಹೆಚ್ಚು. ಇದನ್ನ ನಿರ್ಲಕ್ಷಿಸುವ ಸುಲಭ ದಾರಿ ಸೋಷಿಯಲ್ ಐಸೋಲೇಷನ್. ಸಮಾಜದಿಂದಲೇ ದೂರ ಇರುವುದು. ಆದರೆ ಎಲ್ಲಿಯ ತನಕ ನಾವು ಹಾಗೆಯೇ ಇರುವುದಕ್ಕೆ ಸಾಧ್ಯ?!!
ಸೋಷಿಯಲ್ ಐಸೋಲೇಷನ್ ಎಂದಾಗ ಸಾಮಾನ್ಯವಾಗಿ ನಮಗೆ ಕಲ್ಪನೆ ಬರುವುದು ಸಮಾಜ ನಮ್ಮನ್ನ ದೂರವಿಡುವುದೇನೋ ಎಂದು. ಆದರೆ ಅದು ಯಾವಾಗಲೂ ಸಮಾಜ ಆಗಿರುವುದಿಲ್ಲ. ಕೆಲವೊಮ್ಮೆ ಅದಕ್ಕೆ ನಾವು ಕೂಡ ಕಾರಣ. ಎಲ್ಲೋ ಕೆಲವರನ್ನು ನಿರ್ಲಕ್ಷಿಸುವುದಕ್ಕಾಗಿ, ಅವರ ಅಸಂಬದ್ಧ ಪ್ರಶ್ನೆಗಳಿಂದ ದೂರ ಇರುವುದಕ್ಕಾಗಿ ನಮಗೆ ನಾವೇ ಬೇಲಿ ಹಾಕಿಕೊಂಡು ಬಿಡುತ್ತೇವೆ. ಎಷ್ಟರ ಮಟ್ಟಿಗೆ ಎಂದರೆ ನಮ್ಮ ಗೆಳೆಯರೊಂದಿಗೆ ಸಂಬಂಧಿಗಳೊಂದಿಗೆ ಮೊದಲಿನ ಆಪ್ಯಾಯತೆ ಇರುವುದಿಲ್ಲ, ಹೊಸ ಸಂಬಂಧಗಳನ್ನ ಕೂಡ ಮಾಡಿಕೊಳ್ಳುವುದಿಲ್ಲ. ಅದಕ್ಕೆ ಮೂಲ ಕಾರಣ ನಮ್ಮ ದೃಷ್ಟಿಕೋನ. ನಾವು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಿ ಬಿಡುತ್ತೇವೆ. ಬದುಕಿನಲ್ಲಿ ಸಾಕಷ್ಟು ಘಟನೆಗಳು ನಮ್ಮ ಕೈ ಮೀರಿದ್ದಾಗಿರುತ್ತದೆ. ಆದರೆ ನಾವು ಅದನ್ನ ಹೇಗೆ ತೆಗೆದುಕೊಳ್ಳುತ್ತೇವೆ, ಹೇಗೆ ನೋಡುತ್ತೇವೆ ಎನ್ನುವುದು ಮಾತ್ರ ನಮ್ಮ ಕೈಯ್ಯಲ್ಲೇ ಇರುತ್ತದೆ. ಅವರು ನಮ್ಮನ್ನ ಹೇಗೆ ಜಡ್ಜ್ ಮಾಡುತ್ತಾರೆ, ಎಂತಹ ಪ್ರಶ್ನೆಗಳನ್ನು ಕೇಳುತ್ತಾರೆ ಎನ್ನುವುದು ನಮ್ಮ ಕೈ ಮೀರಿದ್ದು. ಆದರೆ ನಾವು ಅದನ್ನ ಹೇಗೆ ಸ್ವೀಕರಿಸುತ್ತೇವೆ ಎನ್ನುವುದು ಮಾತ್ರ ನಮ್ಮ ಕೈಯ್ಯಲ್ಲಿರುತ್ತದೆ.
ಮೊದಮೊದಲು ಇದೆಲ್ಲ ಸುಲಭವಾಗಿರುವುದಿಲ್ಲ. ಆದರೂ ಕೂಡ ಮೊದಲ ಹೆಜ್ಜೆ ನಾವೇ ತೆಗೆದುಕೊಳ್ಳಬೇಕು ನಮ್ಮ ಬಗ್ಗೆ ಕಾಳಜಿ ಇದ್ದು, ಏನೋ ಕೇಳುವುದೋ ಎಂಬ ಗೋಜಲಿನಲ್ಲಿರುತ್ತಾರಲ್ಲ ಅಂತವರ ಬಳಿ ಹೇಳಿಕೊಳ್ಳಿ. ಸಂಭಾಷಣೆಯ ಆರಂಭ ನೀವು ಮಾಡಿ, ಮುಕ್ತವಾಗಿ ಹಂಚಿಕೊಳ್ಳಿ. ಒಮ್ಮೆ ನಮ್ಮ ಹತ್ತಿರದವರೊಂದಿಗೆ ಇದನ್ನ ಹಂಚಿಕೊಳ್ಳಲು ಆರಂಭಿಸಿದ ನಂತರ ‘ಆಮ್ ಐ ಕರ್ಸ್ಡ್’ ಎನ್ನುವಂತಹ ಪ್ರಶ್ನೆ ಕೇಳಿಕೊಳ್ಳುವ ಅವಶ್ಯಕತೆ ಬೀಳುವುದಿಲ್ಲ.
ನಾವು ಸಾಮಾನ್ಯವಾಗಿ ನಮ್ಮ ಅಸಹಾಯಕತೆಯನ್ನ, ಭಯವನ್ನ ಹಂಚಿಕೊಳ್ಳಲು ಮುಜುಗರ ಪಟ್ಟುಕೊಳ್ಳುತ್ತೇವೆ. ನಾವು ವೀಕ್ ಎಂದು ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಅದು ಸ್ವಾಭಾವಿಕ ಅನ್ನುವುದನ್ನ ಅರಿತುಕೊಳ್ಳಿ. ಎಂತಹ ಧೈರ್ಯವಂತನೂ ಕೂಡ ಈ ‘ಔಟ್ ಆಫ್ ಕಂಟ್ರೋಲ್’ ಎನ್ನುವಂತಹ ಸಂದರ್ಭಗಳಲ್ಲಿ ಅಸಹಾಯಕತೆಯನ್ನು ಅನುಭವಿಸಿರುತ್ತಾನೆ. ಅದನ್ನ ಹಂಚಿಕೊಳ್ಳುವುದರಿಂದ ನಾವು ಅಸಮರ್ಥರು ಎಂದೇನಾಗುವುದಿಲ್ಲ! ಕ್ಯಾನ್ಸರ್ ಸರ್ವೈವರ್’ಗಳ ಸಾಕಷ್ಟು ವೆಬ್’ಸೈಟ್’ಗಳಿವೆ, ಕ್ಲಬ್’ಗಳಿವೆ, ಫೇಸ್’ಬುಕ್ ಗ್ರೂಪ್’ಗಳು ಕೂಡ ಇವೆ. ಅವರೊಂದಿಗೆ ನಿಮ್ಮ ತಳಮಳವನ್ನು ಹಂಚಿಕೊಳ್ಳಿ. ಅಲ್ಲಿ ಯಾವುದೇ ರೀತಿಯ ಮುಜುಗರವೂ ಆಗುವುದಿಲ್ಲ, ಜೊತೆಗೆ ಅವರು ನಿಮ್ಮ ಯೋಚನೆಗಳನ್ನ, ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಇತರ ಕೆಲ ದೇಶಗಳ ಕ್ಯಾನ್ಸರ್ ರೋಗಿಗಳಿಗಾಗಿ ಸಪೋರ್ಟ್ ಗ್ರೂಪ್’ಗಳಿರುತ್ತದೆ. ಕ್ಯಾನ್ಸರ್ ರೋಗಿಗಳೆಲ್ಲ ಒಂದೆಡೆ ಸೇರಿ ತಮ್ಮ ಬದುಕಿನ ಬಗ್ಗೆ, ತಮ್ಮ ಬಗ್ಗೆ ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ. ಇದೆಲ್ಲಾ ಕ್ಯಾನ್ಸರ್ ರೋಗಿಯನ್ನ ಸಮಾಜದಿಂದ ದೂರಾಗಲು ಬಿಡದೇ, ಇನ್ನಷ್ಟು ಹತ್ತಿರಕ್ಕೆ ತರುತ್ತದೆ. ಆದರೆ ನೆನಪಿರಲಿ, ಎಷ್ಟೇ ಅಂತಹ ಗ್ರೂಪ್’ಗಳಿದ್ದರೂ ಸೋಷಿಯಲ್ ಐಸೋಲೇಷನ್ ಎಂಬ ಸೈಡ್ ಎಫೆಕ್ಟ್’ನಿಂದ ಹೊರ ಬರಲು ಮೊದಲ ಹೆಜ್ಜೆ ನಾವೇ ತೆಗೆದುಕೊಳ್ಳಬೇಕು!!
Facebook ಕಾಮೆಂಟ್ಸ್