X

ಮುಸಲ್ಮಾನಳಾಗಿ ಸ್ವಧರ್ಮಕ್ಕೆ ಮರಳಿದ ಹಿಂದುವಿನ ಕಥೆ

ಹೊಟ್ಟೆತುಂಬಿದ ಹಾಲುಗಲ್ಲದ ಮಗು ತನ್ನ ಪುಟ್ಟ ಕೈಗಳಿಂದ ಬೊಂಬೆಯನ್ನು ಹಿಡಿದು, ಮನಸ್ಸು ಬಂದಷ್ಟು ಹೊತ್ತು ಅದನ್ನು ತಿರುಗಿಸಿ ಮುರುಗಿಸಿ ನೋಡುತ್ತಾ, ಬಣ್ಣಬಣ್ಣದ ಆಟಿಕೆಗಳನ್ನು ಅತ್ಯುತ್ಸಾಹದಿಂದ ನೆಲಕ್ಕೆ ಬಡಿದು, ಹಾಗೆ ಬಡಿದಾಗ ಉಂಟಾದ ಸಣ್ಣ ಸದ್ದನ್ನೂ ಸಂಭ್ರಮಿಸುವ ಮನಸ್ಸು ಮಾಡುತ್ತದಲ್ಲಾ, ಆ ಸಮಯಕ್ಕೆ ಮಗುವಿಗೆ ಅಮ್ಮ, ಅಪ್ಪ, ಅಜ್ಜಿ, ತಾತ, ಅಕ್ಕ.. ಎಂಬ ಎರಡಕ್ಷರದ ಆಪ್ತ ಹೆಸರುಗಳನ್ನುಳಿದು ಉಳಿದದ್ದು ಬರದಿರುವಾಗಲೂ, ತಾನೇ ಎದ್ದು ನಿಂತು ನಾಲ್ಕು ಹೆಜ್ಜೆಯನ್ನು ಸಶಕ್ತವಾಗಿ ಇಡುವಷ್ಟು ಬೆಳೆದಿಲ್ಲದಿರುವಾಗಲೂ, ತನ್ನ ಹಸಿದ ಹೊಟ್ಟೆಗೆ ಬೇಕಾದ ಇಂತಿಷ್ಟು ಊಟವನ್ನು ತಾನಾಗೇ ಬಾಯಿಗೆ ಇಟ್ಟುಕೊಳ್ಳುವ ಅಭ್ಯಾಸವೇ ಇನ್ನೂ ಆಗದಿರುವಾಗಲೂ, ಪುಟ್ಟಾ, ಮಾಮಿ ಜೋತಾ ಮಾಡು.. ಎಂಬ ಹೆತ್ತಮ್ಮನ ದನಿ ಕೇಳಿದ ಕೂಡಲೇ ಅಪ್ರಯತ್ನವಾಗಿ ತನ್ನ ಎರಡೂ ಕೈಗಳನ್ನು ಒಟ್ಟಾಗಿ ಜೋಡಿಸಿ, ತಲೆಯ ಮೇಲ್ಭಾಗದವರೆಗೂ ತಂದು ಜೋತಾ ಮಾಡಿ ಅಮ್ಮನ ಮುಖವನ್ನು ನೋಡಿ ಕಿಲಕಿಲ ನಕ್ಕುಬಿಡುತ್ತದಲ್ಲಾ.. ಹಾಗೆ ನಕ್ಕಾಗ ಅಮ್ಮನ ಮುಖದಲ್ಲಿ ಮಗುವಿನ ಕುರಿತಾದ ಹೆಮ್ಮೆ ಮೂಡುವುದರೊಂದಿಗೆ, ಕೈ ಮುಗಿದ ಮಗುವಿನ ಎದುರಿಗೆ ಪುಟ್ಟ ಭಗವಂತನೇ ಸೃಷ್ಟಿಯಾಗಿಬಿಟ್ಟಿರುತ್ತಾನೆ. ಹೌದು. ಕಣಕಣವೂ ಬ್ರಹ್ಮ ಸ್ವರೂಪವೇ. ನಿರಂತರ ಚಲನೆಯಿರುವ ಇಡೀ ವಿಶ್ವವೂ ಶಿವ ಸ್ವರೂಪವೇ!

ಕೊಳಲಿನಿಂದ ಕೃಷ್ಣನನ್ನು, ಬಿಲ್ಲಿನಿಂದ ಶ್ರೀರಾಮನನ್ನು, ಮೂರನೆಯ ಕಣ್ಣಿನಿಂದ ಪರಮೇಶ್ವರನನ್ನು, ಆನೆಯ ಮೊಗದಿಂದ ವಿಘ್ನೇಶ್ವರನನ್ನು ಗುರುತಿಸುವುದನ್ನು ಅದಾಗಲೇ ಮಕ್ಕಳು ಕಲಿತುಬಿಟ್ಟಿರುತ್ತಾರೆ. ಸುಳ್ಳು ಹೇಳಬಾರದು, ಕದಿಯಬಾರದು, ದೊಡ್ಡವರಿಗೆ ಅಗೌರವ ತೋರಿಸಬಾರದು ಎಂಬೆಲ್ಲಾ ನೀತಿಯನ್ನು ಮಕ್ಕಳಿಗೆ, ಹಿರಿಯರು ಸಂದರ್ಭಕ್ಕೆ ಅನುಗುಣವಾಗಿ ಹೇಳಿಕೊಡುತ್ತಲೇ ಇರುತ್ತಾರೆ. ನಿಜ, ಪೂಜೆ – ಪುನಸ್ಕಾರ, ಜಪ – ತಪ, ಸಂಪ್ರದಾಯ – ಮಡಿವಂತಿಕೆ, ಹಬ್ಬಹರಿದಿನ – ಆಚರಣೆ ಎಲ್ಲವನ್ನೂ ನಾನೂ ಗಮನಿಸಿದ್ದೇನೆ. ಪಾಲಿಸಿದ್ದೇನೆ. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಬೆಳೆದು, ಹೆಜ್ಜೆಹೆಜ್ಜೆಗೂ ಮೌಲ್ಯಯುತವಾದ ಉಪದೇಶಗಳನ್ನು ಕೇಳುತ್ತಲೇ, ಹಣೆಗೆ ಗಂಧ ರಕ್ಷೆ ಕುಂಕುಮವಿಟ್ಟು, ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತಾ, ದೇವರಿಗೆ ನೈವೇದ್ಯವಾದ ಪ್ರಸಾದವನ್ನು ಕಣ್ಣಿಗೊತ್ತಿಕೊಂಡೇ ತಿನ್ನುತ್ತಿದ್ದ ನಾನು ಅದ್ಯಾವ ಭ್ರಾಂತಿಗೆ ಬಿದ್ದು ಮತಾಂತರ ಆಗಿಬಿಟ್ಟೆನೋ ಎಂದು ನೆನೆಯುವಾಗಲೆಲ್ಲಾ ಮನಸ್ಸು ಅರೆಕ್ಷಣ ಕಣ್ಣೀರಾಗುತ್ತದೆ.

ನಾನು ಏಕದೇವತಾರಾಧನೆಯಲ್ಲಿ ನಂಬಿಕೆಯಿರುವವಳು, ಕಡೆಯ ಉಸಿರಿರುವ ತನಕ ಇಸ್ಲಾಂ ಧರ್ಮದ ಪ್ರಚಾರಕ್ಕಾಗಿಯೇ ಬದುಕುತ್ತೇನೆ. ನನ್ನ ಜೀವನದ ಕಡೆಯ ಕ್ಷಣದವರೆಗೂ ಹಿಂದೂ ಧರ್ಮದವರನ್ನು ಇಸ್ಲಾಂ ಧರ್ಮಕ್ಕೆ ಬದಲಾಯಿಸಲು ಪ್ರಾಮಾಣಿಕ ಪ್ರಯತ್ನಪಡುತ್ತೇನೆ. ಈ ದಾರಿಯಲ್ಲಿ ನಡೆಯುವಾಗ ಯಾವ ಅಡ್ಡಿ ಆತಂಕಗಳು ಎದುರಾದರೂ ನಾನದನ್ನು ಧೈರ್ಯದಿಂದ ಎದುರಿಸುತ್ತೇನೆ.. ಹೀಗೆ ನನ್ನಿಡೀ ಅಸ್ತಿತ್ವವನ್ನು  ಮತಾಂತರಿಗಳ ಕೈಯೊಳಗಿಟ್ಟು ಪ್ರಮಾಣ ಮಾಡುವ ದಿನದಂದು ನಾನನುಭವಿಸಿದ್ದು ಅದಮ್ಯ ಹೆಮ್ಮೆಯನ್ನು, ಸಂಪೂರ್ಣ ತೃಪ್ತಿಯನ್ನು! ಹಿಂದೂ ಧರ್ಮದ ವಿರುದ್ಧವಾಗಿ ನನ್ನೊಳಗೆ ವ್ಯವಸ್ಥಿತವಾಗಿ ಬಿತ್ತಿದ್ದ ಅನಿಷ್ಟ ಬೀಜವೊಂದು ಕೆಲವೇ ದಿನಗಳಲ್ಲೇ ಫಲ ಬಿಡಲು ಶುರು ಮಾಡಿತ್ತು. ನಾಗಾಲೋಟದಿಂದ!

ನಾನೇನೂ ಅವಿದ್ಯಾವಂತೆಯಾಗಿರಲಿಲ್ಲ. ಪದವಿಯ ಶಿಕ್ಷಣ ಪಡೆಯುತ್ತಿದ್ದೆ. ನನಗಿದ್ದ ಸ್ನೇಹಿತೆಯರಲ್ಲಿ ಹೆಚ್ಚಿನವರು ಮುಸಲ್ಮಾನರು. ಅವರು ಆಗಾಗ ಧರ್ಮದ ಕುರಿತು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು. ನಮಗೆ ತಿಳಿದಿರದ ಯಾವುದೋ ವಿಚಾರವೊಂದು ಅತ್ಯುತ್ಸಾಹದಿಂದ ಚರ್ಚೆಯಾಗುವುದು ಕಂಡಾಗ, ನಮಗೂ ಅದನ್ನು ತಿಳಿಯಬೇಕೆಂಬ ಹಂಬಲ ಉಂಟಾಗುತ್ತದಲ್ಲಾ.. ಅದೇ ಭಾವನೆ ನನ್ನಲ್ಲಿ ಜಾಗೃತವಾಗಿ ನಾನೂ ಆ ಚರ್ಚೆಗಳಲ್ಲಿ ಭಾಗಿಯಾಗುವ ಮನಸ್ಸು ಮಾಡಿದೆ. ನಿಮ್ಮಲ್ಲಿ ಅಶ್ವತ್ಥ ಕಟ್ಟೆ ಯಾಕಿರುತ್ತದೆ? ಹಾವುಗಳನ್ನು ಅದ್ಯಾಕೆ ಪೂಜೆ ಮಾಡ್ತೀರ? ಗಣಪತಿಯ ತಲೆ ಆನೆಯದೇ ಯಾಕೆ? ಕೋತಿಗೂ ದೈವತ್ವ ಕೊಟ್ಟು  ಆಂಜನೇಯ ಅಂತ ಹೆಸರಿಸಿ ಆರಾಧನೆ ಮಾಡ್ತೀರಲ್ಲಾ ಯಾಕೆ? ನಿಮಗ್ಯಾಕೆ ಇಷ್ಟೊಂದು ದೇವರು? ನಿಮ್ಮ ದೇವಾನುದೇವತೆಗಳೆಲ್ಲಾ ಅದ್ಯಾಕೆ ಅಷ್ಟು ಮೈ ಕಾಣಿಸೋ ಹಾಗೆ ಬಟ್ಟೆ ಹಾಕ್ತಾರೆ? ಹೆಣ್ಣಿಗೆ ನಿಮ್ಮಲ್ಲಿ ಮರ್ಯಾದೇನೇ ಇಲ್ಲ. ಗೊತ್ತು ಗುರಿ ಇಲ್ದೇ, ಬೀಡಾಡಿ ದನ ತನಗೆ ಅದೆಲ್ಲಿ ಆಹಾರ ಸಿಕ್ಕತ್ತೋ ಅಲ್ಲೆಲ್ಲಾ ಹೋಗಿ ಅಲೆದು ಮೇಯುವ ಹಾಗೆ, ಹಿಂದೂಧರ್ಮದ ನೆರಳಿನಲ್ಲಿ ಬದುಕೋರು ನಿಮ್ಮ ನಿಮ್ಮ ಬದುಕನ್ನು ಕೇವಲವಾಗಿ ಕಳೀತಿದೀರ. ನಿಮಗೆ ಮೂವತ್ತ ಮೂರು ಕೋಟಿ ದೇವರುಗಳು ಯಾಕೆ? ಕಷ್ಟ ಬಂದ್ರೆ ಯಾರನ್ನ ಕರೀತೀರ?.. ಇತ್ಯಾದಿ ಪ್ರಶ್ನೆಗಳು ಎಗ್ಗಿಲ್ಲದೇ ಬಾಣದಂತೆ ಬಂದುಬಿಟ್ಟಿದ್ದವು. ಉತ್ತರ ಕೊಡೋದಕ್ಕೆ ನಾನು ತಡಬಡಾಯಿಸಿಬಿಟ್ಟ ಮರುಕ್ಷಣವೇ, ಅವರುಗಳು ಮತಾಂತರ ಪ್ರಕ್ರಿಯೆಯ ಮೊದಲ ಹಂತದಲ್ಲಿ ಪಾಸಾಗಿಬಿಟ್ಟಿದ್ದರು. ನನ್ನ ಅಧಃಪತನದ ಸೂಚನೆ ಲವಲೇಶದಷ್ಟೂ ಇಲ್ಲದೇ, ಅವರುಗಳ ಪ್ರಶ್ನೆಗೆ ಉತ್ತರವನ್ನೂ ನೀಡಲಾಗದೇ ನಾನಂತೂ ತತ್ತರಿಸಿಬಿಟ್ಟಿದ್ದೆ.

ಆನಂತರ ಇಸ್ಲಾಂ ಧರ್ಮದ ಉಪದೇಶಗಳು, ಸಿ.ಡಿ.ಗಳು, ಧರ್ಮಪ್ರಚಾರಕರ ಭಾಷಣಗಳು ಒಂದಾದ ನಂತರ ಮತ್ತೊಂದು ನನ್ನ ಕೈ ತಲುಪಲಾರಂಭಿಸಿದವು. ನಾವು ಏಕದೇವತಾರಾಧನೆಯಲ್ಲಿ ನಂಬಿಕೆ ಇಡುವವರು. ಅಲ್ಲಾನನ್ನು ಬಿಟ್ಟರೆ ಬೇರಾರೂ ಇಲ್ಲ.. ಎಂಬ ಘೋಷವಾಕ್ಯದ ಅಬ್ಬರದಲ್ಲಿ ನನ್ನದೇ ಮನೆಯಲ್ಲಿ ಕಲಿಸಿದ್ದ ವಸುಧೈವ ಕುಟುಂಬಕಂ ಎಂಬ ಪವಿತ್ರವಾದ ಭಾವನೆಯೂ, ದೇವನೊಬ್ಬ ನಾಮ ಹಲವು ಎಂಬ ವಿವೇಕ ವಾಣಿಯೂ ಮಸುಕಾಗಿಯೇ ಹೋಯಿತು.

ನಾನು ಕುಂಕುಮ ಇಡುವುದನ್ನು ಬಿಟ್ಟುಬಿಟ್ಟೆ. ಮಾತೆತ್ತಿದರೆ ಕುರಾನಿನಲ್ಲಿರುವ ಸಾಲುಗಳನ್ನು ಹೇಳುತ್ತಿದ್ದೆ. ಯಾವ ದೇವಸ್ಥಾನದ ಮೊದಲ ಮೆಟ್ಟಿಲನ್ನು ಕಣ್ಣಿಗೊತ್ತಿಕೊಂಡು ತಲೆತಗ್ಗಿಸಿ, ಕೈಜೋಡಿಸಿಕೊಂಡೇ ದೇಗುಲ ಪ್ರವೇಶಿಸುತ್ತಿದ್ದೆನೋ ಅದೇ ದೇಗುಲದ ಪ್ರಾಂಗಣದಲ್ಲಿ ಅಸಹನೆಯಿಂದ ಉಗಿಯುತ್ತಿದ್ದೆ. ದೇಗುಲವೂ, ದೇವನೂ, ಹಬ್ಬ ಹರಿದಿನಗಳೂ ನನಗೆ ಕೃತಕವಾಗಿ ತೋರುತ್ತಿತ್ತು. ಭಾರತ ನನ್ನ ರಾಷ್ಟ್ರವಲ್ಲ, ನಾನು ಇಸ್ಲಾಂ ರಾಷ್ಟ್ರಕ್ಕೆ ಸೇರಿದವಳೆಂದು ಪದೇ ಪದೇ ಅನ್ನಿಸುತ್ತಿತ್ತು. ದೇಶಭಕ್ತಿ, ಮಾತೃಭೂಮಿ, ವಂದೇ ಮಾತರಂನಂಥಾ ಶ್ರೇಷ್ಠ ಕಲ್ಪನೆಗಳೆಲ್ಲವೂ ಮಾಯವಾಗಿ, ಹಿಂದೂಗಳಿರುವ ಈ ಪ್ರದೇಶ ನಮ್ಮದಲ್ಲ, ಇದು ನಮ್ಮದಾಗಬೇಕೆಂದರೆ ವಿಗ್ರಹಾರಾಧಕರು ನಾಶವಾಗಬೇಕು ಇಲ್ಲವೇ ಇಸ್ಲಾಂಗೆ ಮತಾಂತರವಾಗಬೇಕು, ಈ ದೇಶವನ್ನು ಅಲ್ಲಾಹುವಿನ ಪವಿತ್ರ ಸ್ಥಳವನ್ನಾಗಿ ಮಾಡಿಬಿಡಬೇಕು, ನಾವು ಮೊದಲು ಧರ್ಮಕ್ಕೆ ಬದ್ಧರಾಗಬೇಕು, ದೇಶಭಕ್ತಿಯೆನ್ನುವುದೆಲ್ಲಾ ಸುಳ್ಳು, ಮಾತೃಭೂಮಿಯ ಕಲ್ಪನೆಯೇ ಹುಸಿ.. ಎಂದೆಲ್ಲಾ ನನ್ನ ತಲೆಗೆ ತುಂಬಲಾಗಿದ್ದನ್ನೇ ಅಕ್ಷರಶಃ ಪಾಲಿಸುತ್ತಿದ್ದೆ. ಇದು ಎಲ್ಲಿಯವರೆಗೆ ಮುಟ್ಟಿತೆಂದರೆ ನಾನು ನನ್ನ ಹೆತ್ತವರನ್ನೇ ಇಸ್ಲಾಂ ಮತಕ್ಕೆ ಮತಾಂತರಗೊಳಿಸಲು ಶತಾಯ ಗತಾಯ ಪ್ರಯತ್ನಿಸಿ, ಅವರು ಕೇಳದಿದ್ದಾಗ ಅವರ ಮೇಲೆಯೇ ಗುಡುಗಿ, ಕೈ ಮಾಡಲೂ ಹೋಗಿದ್ದೆ. ಸರ್ವೇ ಭವಂತು ಸುಖಿನಃ.. ಎಂದು ಜಪಿಸುತ್ತಿದ್ದ ಅಪ್ಪ ಕಂಗಾಲಾಗಿಬಿಟ್ಟಿದ್ದರೆ, ಆಹಾರದ ಮೊದಲ ತುತ್ತನ್ನು ಶ್ರದ್ಧಾಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಭಗವಂತನ ಪ್ರಸಾದವೆಂಬಂತೆಯೇ ಸೇವಿಸುವುದನ್ನು ಕಲಿಸಿದ್ದ ಅಮ್ಮನಂತೂ, ನನ್ನನ್ನು ಕಂಡು ಹೈರಾಣಾಗಿಬಿಟ್ಟಿದ್ದರು. ಅವರಿಗೆಲ್ಲಾ ತಾವೆಲ್ಲಿ ಎಡವಿದ್ದು ಎನ್ನುವುದೇ ಯಕ್ಷಪ್ರಶ್ನೆಯಾಗಿಬಿಟ್ಟಿತ್ತು.

ಆರ್ಶ ವಿದ್ಯಾ ಸಮಾಜ:

ಆಗ ನನ್ನನ್ನು ಕರೆತಂದಿದ್ದು ಕೇರಳದ ಎರ್ನಾಕುಲಂನಲ್ಲಿರುವ ಆರ್ಶ ವಿದ್ಯಾ ಸಮಾಜಕ್ಕೆ! ಅದಾಗಲೇ ನನ್ನ ಹೆಸರನ್ನು ಶ್ರುತಿ ಎನ್ನುವುದರಿಂದ ರೆಹಮತ್ ಎಂದು ಬದಲಿಸಿಬಿಟ್ಟಿದ್ದೆ. ಮನೆಯವರಿಗೆ ನಾನು ಮೊದಲಿನಂತಾದರೆ ಸಾಕು ಎಂದಿದ್ದರೆ, ನನಗಂತೂ ನನಗೆ ತಿಳಿದ ಕುರಾನ್ ಪಾಠವನ್ನು ಇನ್ನೊಂದಷ್ಟು ಹಿಂದೂಗಳಿಗೆ ತಿಳಿಸಿ, ಅವರ ಬಳಿ ವಾದ ಮಾಡಿಯಾದರೂ ಗೆದ್ದು, ಮತ್ತೊಂದಷ್ಟು ಜನರನ್ನು ಮತಾಂತರ ಮಾಡುವ ಉದ್ದೇಶವಿತ್ತು. ಅಲ್ಲಿ ನಾನು ಭೇಟಿಯಾದ ಓರ್ವ ಸಂತನೇ ಯೋಗಾಚಾರ್ಯ ಶ್ರೀ ಕೆ.ಆರ್. ಮನೋಜ್‌ರವರು. ನನ್ನ ಬದುಕು ಬದಲಿಸಿದ ಗುರುಗಳು.

ನನ್ನಂಥಾ ಮತಾಂತರಕ್ಕೊಳಗಾದವರನ್ನು ಪುನಃ ಸ್ವಧರ್ಮಕ್ಕೆ ಕರೆತರುವ ಸಲುವಾಗಿ ಅವಿರತ ಶ್ರಮಿಸುತ್ತಿರುವ ವ್ಯಕ್ತಿಯನ್ನು ಮೇಲ್ನೋಟಕ್ಕೇ ನಾನು ಅರ್ಥಮಾಡಿಕೊಂಡುಬಿಟ್ಟಿದ್ದೆ.. ಈ ವ್ಯಕ್ತಿ ವಾದ ಮಾಡಿಯಾದರೂ, ಬಲವಂತದಿಂದ ಒಪ್ಪಿಸಿಯಾದರೂ ನನ್ನನ್ನು ಹಿಂದೂ ಧರ್ಮಕ್ಕೆ ಮರಳುವಂತೆ ಮಾಡಿಬಿಡಬಹುದು ಎಂದು! ಆಗಲೇ ನಾನು ಅವರ ಮಾತುಗಳನ್ನು ನಂಬೇಬಿಟ್ಟೆ ಎನ್ನುವಂಥಾ ನಾಟಕ ಶುರು ಮಾಡಿದ್ದು.

ನಾವುಗಳೇನಾದರೂ ಹಿಂದೂ ಧರ್ಮಗುರುಗಳ ಕೈಗೆ ಸಿಕ್ಕಿಬಿದ್ದರೆ, ಅವರುಗಳು ಹೇಳಿದ ಹಾಗೆ ಕೇಳುತ್ತೇವೆ ಎಂದು ಮಾತುಕೊಟ್ಟು, ಅವರ ಕಪಿಮುಷ್ಠಿಯಿಂದ ಆಚೆ ಬರುವಂತೆ ನಮಗೆ ಮೊದಲೇ ಹೇಳಿಕೊಡಲಾಗಿರುತ್ತದೆ. ನೀವು ಹೇಳಿದ ಹಾಗೆ ಆಗಲಿ, ನಾನು ಬದಲಾಗುತ್ತೇನೆ, ಮತ್ತೆ ಮನೆಗೆ ಮರಳುತ್ತೇನೆ.. ಇತ್ಯಾದಿ ಮೂರು ನಾಲ್ಕು ಪೂರ್ವನಿರ್ಧಾರಿತ ವಾಕ್ಯಗಳನ್ನು ಹೇಳಿಬಿಟ್ಟರೆ ಅವರುಗಳ ಹಿಡಿತದಿಂದ ಪಾರಾಗಿಬಿಡಬಹುದೆಂಬುದು ಕಲಿಸಿದವರದೂ, ನನ್ನದೂ ಲೆಕ್ಕಾಚಾರ. ಆದರೆ ನಾನು ಬಂದ ಕಡೆ ಅಂಥದ್ದಕ್ಕೆಲ್ಲಾ ಆಸ್ಪದವೇ ಇರಲಿಲ್ಲ. ನಾನೂ ಸೋಲೊಪ್ಪಿಕೊಳ್ಳುವವಳಲ್ಲ. ತಲೆಗೆ ಸ್ಕಾರ್ಫ್ ಕಟ್ಟಿಕೊಂಡು, ಕೈಯಲ್ಲಿ ಕುರಾನ್ ಪ್ರತಿಯನ್ನು ಹಿಡಿದೇ ಯೋಗಾಚಾರ್ಯರೊಂದಿಗೆ ವಾದಕ್ಕೆ ನಿಂತುಬಿಟ್ಟಿದ್ದೆ! ಜೊತೆಗೆ ಒಂದು ಷರತ್ತಿನೊಂದಿಗೆ.. ನನ್ನ ಮಾತುಗಳಲ್ಲಿ ಸತ್ಯವಿದೆ ಎಂದು ತಿಳಿದರೆ, ಅವರೂ ಇಸ್ಲಾಂಗೆ ಮತಾಂತರವಾಗಬೇಕು! ಎಂಬ ಷರತ್ತದು. ಅದಕ್ಕೆ ಪ್ರತಿಯಾಗಿ ಅವರೂ ಷರತ್ತನ್ನಿಟ್ಟಿದ್ದರು. ನನ್ನ ಮಾತಿನಲ್ಲಿ ಸತ್ಯ ಕಂಡರೆ, ನಾನೂ ಸ್ವಧರ್ಮಕ್ಕೆ ವಾಪಸ್ಸಾಗಬೇಕೆಂದಾಗಿ!

ಮುಂದೆ ನಡೆದದ್ದು ಇತಿಹಾಸ. ನಾನು ಹುಟ್ಟಿ ಬೆಳೆದ ಧರ್ಮದ ಬಗ್ಗೆ ಸಂಪೂರ್ಣವಾಗಿ ತಿಳಿಯುವ ಅವಕಾಶ ಸಿಕ್ಕಿದ್ದೇ ಆಗ. ಜೀವೇ ಜೀವೇ ಶಿವ ಸ್ವರೂಪಂ.. ಎಂದು ಅರ್ಥ ಮಾಡಿಸಿದರು, ನನ್ನ ದೇಶ – ನನ್ನ ಧರ್ಮದ ಕುರಿತು ಹೆಮ್ಮೆ ಮೂಡಿಸಿದರು. ರಾಷ್ಟ್ರದ ಬಗ್ಗೆ ಅಭಿಮಾನ, ವೇದ ಉಪನಿಷತ್ತುಗಳ ಬಗ್ಗೆ ಸಮಯೋಚಿತವಾದ ಸುಜ್ಞಾನ ನೀಡಿದರು. ಕಡೆಗೆ ನನ್ನೊಳಗೆ ಹೆಮ್ಮರವಾಗಿ ಬೆಳೆದಿದ್ದ ಇಸ್ಲಾಂ ಬಿಟ್ಟು ಇನ್ಯಾವ ಧರ್ಮವೂ ಸತ್ಯವಲ್ಲ ಎಂಬ ನಂಬಿಕೆಯನ್ನು ಬುಡಸಮೇತ ಕಿತ್ತೊಗೆದುಬಿಟ್ಟರು.

ಇದೆಲ್ಲಾ ಒಂದೆರಡು ದಿನಗಳಲ್ಲಿ ಆಗಲಿಲ್ಲ. ಭರ್ತಿ ನೂರು ದಿನಗಳು ಚಿಂತನ ಮಂಥನಗಳು ನಡೆದವು. ನಾನು ಮನೆಗೆ ಹೋದರೆ ಮತ್ತೆ ನನ್ನ ಮನಸ್ಸು ಕೆಡುಕಿನ ಬಗ್ಗೆ ವಾಲುತ್ತದೆ ಎಂದು ಮೊದಲೇ ಅರಿವಿದ್ದ ನಮ್ಮ ಗುರುಗಳು ನನ್ನನ್ನು ಇದೇ ಸಂಸ್ಥೆಯಲ್ಲಿ ಉಳಿಸಿಕೊಂಡರು. ಕಡೆಗೂ ನಾನು ಭ್ರಮೆಯೆಂಬ ಪೊರೆ ಕಳಚಿ ಬಂದಿದ್ದೆ. ಇದಾಗಿ ಭರ್ತಿ ನಾಲ್ಕು ವರ್ಷಗಳೇ ಕಳೆದವೇನೋ. ಈಗಂತೂ ನಾನು ಮತಾಂತರ ಯಾರು ಮಾಡುತ್ತಾರೆ, ಹೇಗೆಲ್ಲಾ ಮಾಡುತ್ತಾರೆ, ಅದಕ್ಕಾಗಿ ಅವರುಗಳು ಅನುಸರಿಸುವ ತಂತ್ರಗಳೇನು, ಇದರ ತೀಕ್ಷ್ಣತೆ ಏನು, ಪರಿಣಾಮ ಎಂಥದ್ದು, ಪ್ರೀತಿಯ ಹೆಸರಿನಲ್ಲಿ ಇಸ್ಲಾಂಗೆ ಮತಾಂತರವಾದವರು ನಂತರ ಪಡುವ ಬವಣೆಗಳೇನು, ಹಣಕ್ಕಾಗಿ ಬದಲಾದವರ ಸ್ಥಿತಿಗತಿಗಳೇನು.. ಎಂಬುದನ್ನೆಲ್ಲಾ ತಿಳಿದುಕೊಂಡಿದ್ದೇನೆ.

ಒಮ್ಮೆ ಮತಾಂತರವಾದರೆ ಮುಗಿಯಿತು..

ಹಣವಿಲ್ಲದವನು ಮತಾಂತರಕ್ಕೆ ಬಲಿಯಾಗಿ ಹಣ ಪಡೆದ ನಂತರ ಅಲ್ಲಿಗೆ ಎಲ್ಲವೂ ಮುಗಿಯುವುದಿಲ್ಲ. ಅವನು ಮತ್ತೊಂದಷ್ಟು ಜನರನ್ನು ಮತಾಂತರಗೊಳಿಸಲು ಶ್ರಮಿಸಬೇಕು, ಅವನು ತನ್ನ ಹುಟ್ಟಿನ ಧರ್ಮವನ್ನೇ ತೆಗಳುತ್ತಾ, ರಾಷ್ಟ್ರಭಕ್ತಿಯನ್ನು ಸಂಪೂರ್ಣ ತೊಡೆದುಹಾಕಿ, ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿ ಸಂಪೂರ್ಣ ಜೀವವಿರೋಧಿಯಾಗಿ ಬದಲಾಗುವವರೆಗೂ ಕಾಣದ ಕೈಗಳು ವಿಶ್ರಮಿಸುವುದಿಲ್ಲ. ಮನುಕುಲದ ಒಳಿತಿಗೆ ಇದು ಪೂರಕವೋ ಮಾರಕವೋ ಎಂಬುದನ್ನು ಯೋಚಿಸಲೂ ಆಗದಷ್ಟೂ ಅವರ ಮನಸ್ಸು ಹಿಂದುತ್ವದ ವಿರೋಧಕ್ಕೇ ಒಗ್ಗಿಬಿಟ್ಟಿರುತ್ತದೆ. ಇವೆಲ್ಲಾ ಯಾಕಾಗಿ ಹೇಳಿ? ನಮ್ಮ ಸನಾತನ ಧರ್ಮವನ್ನು ನಾಶ ಮಾಡಿ, ತಮ್ಮ ಧರ್ಮವನ್ನು ಪ್ರತಿಷ್ಠಾಪಿಸಲು. ಇನ್ನೂ ನೇರವಾಗಿ ಹೇಳಬೇಕೆಂದರೆ ಈ ದೇಶವನ್ನು ಇಸ್ಲಾಂ ದೇಶವನ್ನಾಗಿ ಪರಿವರ್ತಿಸಲು!

ಉಡುಪಿಯ ಅಪ್ಪಟ ಸಂಪ್ರದಾಯಸ್ಥ ಮನೆತನದ ಹುಡುಗ ಇಸ್ಲಾಂ ಪ್ರಚಾರಕ್ಕಾಗಿ ನಾಲ್ಕು ವರ್ಷ ಊರೂರು ತಿರುಗಿದ್ದಾನೆ, ವಿದ್ಯೆ ಬುದ್ಧಿ ಇರುವ ಹೆಣ್ಣುಮಕ್ಕಳೇ ಮುಸಲ್ಮಾನ ಹುಡುಗನನ್ನು ಪ್ರೀತಿಸಿ ಅವನಿಗೆ ಸರ್ವಸ್ವವನ್ನೂ ಒಪ್ಪಿಸಿ, ಅವನ ಅಣತಿಯಂತೆ ತಂದೆ ತಾಯಿ ಕುಟುಂಬವನ್ನು ಧಿಕ್ಕರಿಸಿ ಅವನ ಹಿಂದೆ ಹೋಗಿ, ಮಗುವನ್ನೂ ಪಡೆದು.. ಅವನ ಕುಟುಂಬದವರು ಕೊಡುವ ಚಿತ್ರಹಿಂಸೆಯನ್ನು ಅನುಭವಿಸಲಾರದೇ ಜೀವಚ್ಛವವಾದದ್ದನ್ನೂ ನಾನು ಕಣ್ಣಾರೆ ಕಂಡಿದ್ದೇನೆ. ಅವರೆಲ್ಲರ ಬದುಕು ಇಷ್ಟೆಯೇ ಎಂದು ಯೋಚಿಸುವಾಗೆಲ್ಲಾ ಸಂಕಟವಾಗುತ್ತದೆ. ಧರ್ಮ ಜಿಜ್ಞಾಸೆಯಿಂದ ಮತಾಂತರವಾದವರನ್ನು ಸ್ವಧರ್ಮದ ಕುರಿತು ಬೋಧಿಸಿ ವಾಪಸ್ಸು ಕರೆತರಬಹುದೇನೋ, ಆದರೆ ಪ್ರೇಮದ ಹಸಿವಿಗೆ ಬಲಿಬಿದ್ದವರನ್ನು ವಾಪಸ್ಸು ಕರೆತರುವುದಾದರೂ ಹೇಗೆ? ಗಂಡ ನೀಡುವ ಚಿತ್ರ ಹಿಂಸೆಯನ್ನು ತಾಳಿಕೊಂಡು ಬದುಕುವುದು ಒಂದು ಕಥೆ.  ಅವನನ್ನು ಬಿಟ್ಟು ಸಣ್ಣ ಮಗುವಿನಿಂದಿಗೆ ಬದುಕುವುದೇ ಮತ್ತೊಂದು ವ್ಯಥೆ! ಆ ಹೆಣ್ಣಿನ ಬಾಳು ಹೇಗಿರಬಹುದು? ಅವರ ಜೀವನದ ವಸಂತಮಾಸವೆಂದರೆ ಅದಾವುದು? ಯೋಚಿಸಬೇಕಾದ್ದೇ! ಆದರೆ ಇವೆಲ್ಲವೂ ಉತ್ತರವಿಲ್ಲದ ಪ್ರಶ್ನೆಯಲ್ಲ. ಕೊರತೆಯಿಂದ ಬದುಕಿದರೂ ಘನತೆಯಿಂದ ಬದುಕುವುದನ್ನು ಕಲಿಸಬೇಕಾದ ಸಮಯವದು.

ನಿಜವಾದ ಇಸ್ಲಾಂ ಧರ್ಮದಲ್ಲಿ ಹೇಳಿರುವುದನ್ನು ಭಾರತದಲ್ಲಿ ಹೇಳಿಕೊಡುವುದೇ ಇಲ್ಲ. ಇಲ್ಲೇನಿದ್ದರೂ ಧರ್ಮ ಪ್ರಚಾರದ ಹೆಸರಲ್ಲಿ ಧರ್ಮದ ಅಫೀಮನ್ನು ತಲೆಗೆ ತುಂಬಿ, ಜೀವವಿರೋಧಿಯನ್ನಾಗಿ ಮಾರ್ಪಡಿಸುವುದಷ್ಟೇ. ಅದಕ್ಕಾಗಿಯೇ ಮತಾಂತರವೆಂಬ ಹುನ್ನಾರ. ಅದಲ್ಲದೇ ಹೋಗಿದ್ದರೆ, ಅವರುಗಳೂ ನಮ್ಮಂತೆ ಸರ್ವ ಧರ್ಮವನ್ನೂ ಸಮನ್ವಯದಿಂದ ಕಾಣುವವರಾಗಿದ್ದರೆ ಬಹುಸಂಖ್ಯೆಯಲ್ಲಿರುವ ಹಿಂದೂಧರ್ಮೀಯರನ್ನು ಮತಾಂತರಗೊಳಿಸುವ ಅಗತ್ಯವಾದರೂ ಏನಿದೆ ಹೇಳಿ?!

ನಿಜ. ಮತಾಂತರದಿಂದ ಉಂಟಾದ ಕ್ಷೋಭೆಯನ್ನೇ ಹೇಳುತ್ತಾ ಕುಳಿತರೆ ಅಕ್ಷರಗಳು ಸಾಲದೇ ಬಂದಾವು, ಹಾಗೆಂದೇ ಈ ಭಯಂಕರ ಪ್ರಕ್ರಿಯೆಯ ಪರಿಣಾಮಗಳನ್ನು ಹೇಳಿಬಿಡುತ್ತೇನೆ ಕೇಳಿ. ಮತಾಂತರಿಗಳು ನೀವು ಊಹಿಸಲೂ ಆಗದಷ್ಟು ವಿಸ್ತಾರಗೊಂಡಿದ್ದಾರೆ. ನಿಮಗೇ ತಿಳಿಯದಂತೆ ನಿಮ್ಮ ಮನೆಯ ಅಂಗಳದಲ್ಲೇ ಹೆಮ್ಮರವಾಗಿ ಬೆಳೆದು ನಿಮಗೇ ನೆಲೆ ಇಲ್ಲದಂತೆ ಮಾಡುವಷ್ಟು ಚಾಣಾಕ್ಷರು. ಹಾಗೆ ದಾಳ ಉರುಳಿಸುವವರು ಮದರಸಾದ ಶಿಕ್ಷಣ ಕೊಡುವವರೇ ಆಗಬೇಕಿಲ್ಲ; ಹಿಂದೂ ಧರ್ಮವನ್ನು ತೆಗಳಿ, ನಮ್ಮ ಆಚಾರ ವಿಚಾರ ಸಂಪ್ರದಾಯಗಳನ್ನು ಆಡಿಕೊಂಡು ನಗುತ್ತಾ, ಹೆಜ್ಜೆಹೆಜ್ಜೆಗೂ ಅವಮಾನ ಮಾಡುತ್ತಾ, ಸಂಪ್ರದಾಯಗಳನ್ನು ಬೇಕೆಂದೇ ಪ್ರಶ್ನಿಸುತ್ತಾ ಅಸಹನೆಯ ವಾತಾವರಣ ಸೃಷ್ಟಿಸುವ ಯಾರಾದರೂ ಆಗಿರಬಹುದು. ಒಟ್ಟಿನಲ್ಲಿ ಅವರುಗಳ ಇರಾದೆ ಹಿಂದೂ ಧರ್ಮವೆಂಬ ಆಲದ ಮರದ ಬುಡವನ್ನು ಅಲುಗಾಡಿಸುವುದು.

ಹಿಂದೂಗಳು ಎಚ್ಚೆತ್ತುಕೊಳ್ಳಬೇಕಿದೆ. ಮಕ್ಕಳಿಗೆ ಮನೆಯಲ್ಲಿಯೇ ಧರ್ಮದ ಕುರಿತಾದ ತಿಳಿವಳಿಕೆಯನ್ನು ನೀಡಬೇಕಿದೆ. ನಮ್ಮ ಧರ್ಮದ ಬಗ್ಗೆ ಹೆಮ್ಮೆಯನ್ನು ಬೆಳೆಸಬೇಕಿದೆ. ಇದೆಲ್ಲದಕ್ಕೂ ಮೀರಿ, ನಾಲ್ಕು ಜನರ ನಡುವೆ ತಲೆಯೆತ್ತಿ ನಿಂತು ನಮ್ಮ ಧರ್ಮದ ಕುರಿತಾದ ಪ್ರಶ್ನೆಗಳಿಗೆ ಸಂಶಯಕ್ಕೆ ಆಸ್ಪದವಿಲ್ಲದಂತೆ ಉತ್ತರಿಸುವಷ್ಟು ಗಟ್ಟಿತನವನ್ನು ಬೆಳೆಸಬೇಕಿದೆ. ಮತಾಂತರದಿಂದ ಕಂಗೆಟ್ಟಿದ್ದ ನಾನು ಈ ಆಶ್ರಯಧಾಮಕ್ಕೆ ಬಂದು, ಇಲ್ಲಿಯೇ ನೆಲೆನಿಂತು.. ಭಾರತದ ಮೂಲೆಮೂಲೆಗಳಿಂದ ಬಂದ ನನ್ನಂಥಾ ನೂರಾರು ಮಂದಿಗೆ ಮಾನಸಿಕವಾಗಿ ಧೈರ್ಯ ನೀಡುತ್ತಾ, ನಮ್ಮ ಗುರುಗಳ ಮಾರ್ಗದರ್ಶನದಲ್ಲಿ ಅವರಿಗೆ ಸ್ವಧರ್ಮದ ಸಂಸ್ಕಾರ ಕಲಿಸುತ್ತಾ ಸೇವೆಯನ್ನು ಮಾಡುತ್ತಿದ್ದೇನೆ. ಈ ಶ್ರೇಷ್ಠ ಕಾರ್ಯಕ್ಕೆ ನಿಯೋಜನೆಗೊಂಡ ಸಂತೃಪ್ತಿ ನನಗೆಂದಿಗೂ ಇರುತ್ತದೆ.

ನನ್ನ ಪ್ರಾರ್ಥನೆ ಇಷ್ಟೇ. ನಿಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿ. ಅಂತರಂಗದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುವುದರೊಂದಿಗೆ, ಆ ಜ್ಯೋತಿಗೆ ನಿರಂತರವಾಗಿ ತೈಲವನ್ನು ನೀಡಿ. ಆ ಮೂಲಕ ಜ್ಯೋತಿ ಆರದಂತೆ ಕಾಪಾಡಿ. ಈ ಜ್ಯೋತಿ ಸಾಮಾನ್ಯವಾದುದಲ್ಲ. ಸಹಸ್ರ ಸಹಸ್ರ ವರ್ಷಗಳಿಂದಲೂ ನಮ್ಮ ಹಿರಿಯರು ಕಾಪಿಟ್ಟುಕೊಂಡಿರುವ ಸದಾಚಾರದ ಜ್ಯೋತಿಯಿದು. ಇದು ಆರಬಾರದು.ಏಕೆಂದರೆ ಸನಾತನ ಧರ್ಮವೆನ್ನುವುದು ನಂದುವ ದೀಪವಲ್ಲ, ನಂದಾದೀಪ!

ಸರ್ವೇ ಭವಂತು ಸುಖಿನಃ…

-ಶೃತಿ

ನಿರೂಪಣೆ : ಅಂಬಿಕಾ ಸುಬ್ರಹ್ಮಣ್ಯ

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post