ಹಲವು ವರ್ಷಗಳ ಹಿಂದೆ ನಾವು ಮನೆಯ ಸಮೀಪದಲ್ಲಿರುತ್ತಿದ್ದ ಮಾವಿನ ಮರದಿಂದ ಹಣ್ಣುಗಳನ್ನು ತಂದು ಅವುಗಳನ್ನು ಹಿಂಡಿ, ಜೊತೆಗೆ ಬೆಲ್ಲ ಮತ್ತು ಸ್ವಲ್ಪ ಏಲಕ್ಕಿ ಸೇರಿಸಿ ನಮಗೆ ತೃಪ್ತಿಯಾಗುವವರೆಗೂ ಕುಡಿಯುತ್ತಿದ್ದೆವು. ಮನೆಗೆ ಬರುವ ಅತಿಥಿಗಳಿಗೂ ಮಾವಿನ ರಸವೇ ಪ್ರಧಾನ ಆತಿಥ್ಯ. ಮಾವಿನ ಹಣ್ಣುಗಳ ಸೀಸನ್ ಪ್ರಾರಂಭವಾಗಿ ಮುಗಿಯುವವರೆಗೂ ಅದೇ ನಮ್ಮ ಪ್ರಧಾನ ಪಾನೀಯವಾದರೆ ನಂತರ ನಮ್ಮದೇ ಊರಿನ ತೋಟಗಳಲ್ಲಿ ಬೆಳೆದಿರುತ್ತಿದ್ದ ಕಿತ್ತಳೆ ಹಣ್ಣಿನ,ನಿಂಬೆ ಹಣ್ಣಿನ ಪಾನಕ.ಹೆಚ್ಚೆಂದರೆ ಒಂದು ರೂಪಾಯಿ ಖರ್ಚಾಗುತ್ತಿದ್ದ ಆ ಪಾನಕಗಳಲ್ಲಿ ರಾಸಾಯನಿಕ ಪದಾರ್ಥಗಳ ಲವಲೇಶವೂ ಇರುತ್ತಿರಲಿಲ್ಲ.ನಂತರ ಶುರುವಾಗಿದ್ದೇ ಕೋಲಾ ಯುಗ!
ಪತ್ರಿಕೆಗಳಲ್ಲಿ,ರೇಡಿಯೋಗಳಲ್ಲಿ,ಟೀವಿಯಲ್ಲಿ,ಗೋಡೆಗಳಲ್ಲಿ… ಹೀಗೆ ಎಲ್ಲಿ ನೋಡಿದರಲ್ಲಿ ಕೋಲಾಗಳ ಜಾಹೀರಾತುಗಳು ಕಾಣಿಸಿಕೊಳ್ಳತೊಡಗಿದವು. ತಮ್ಮ ಜಾಹೀರಾತುಗಳ ಮೂಲಕ ಕೋಲಾಗಳನ್ನು ಕುಡಿಯುವುದೇ ಆಧುನೀಕತೆ ಎಂದು ಕಂಪನಿಗಳು ಬಿಂಬಿಸಿದವು.ದೊಡ್ಡ ದೊಡ್ಡ ನಗರಗಳಷ್ಟೇ ಅಲ್ಲದೆ ಚಿಕ್ಕ ಚಿಕ್ಕ ಪಟ್ಟಣ,ಹಳ್ಳಿಗಳಲ್ಲಿಯೂ ಕೋಲಾ ಬಾಟಲಿಗಳು ಬಂದು ಕುಳಿತವು. ಆಗ ನಮಗೆ ಮಾವಿನ ಮರದ ಬುಡಕ್ಕೆ ಹೋಗಿ ಮಾವಿನ ಹಣ್ಣುಗಳನ್ನು ಆಯ್ದು ತಂದು ಅದರ ಸಿಪ್ಪೆ ತೆಗೆದು ಹಿಂಡಿ,ಬೆಲ್ಲ ಸೇರಿಸಿ,ಏಲಕ್ಕಿ ಪುಡಿ ಮಾಡಿ ಸೇರಿಸಿ ಅಲ್ಲಾಡಿಸುವುದೇ ಕಷ್ಟದ ಕೆಲಸ ಎನಿಸತೊಡಗಿತು.ಮನೆಗೆ ಬಂದ ಅತಿಥಿಗಳಿಗೆ ನೇರವಾಗಿ ಬಾಟಲಿಯಿಂದ ಗ್ಲಾಸ್’ಗಳಿಗೆ ಬಗ್ಗಿಸಿ ಸರ್ವ್ ಮಾಡುವುದೇ ಸುಲಭ ಎನಿಸತೊಡಗಿತು. ಖಾಲಿ ಹೊಟ್ಟೆಯಿದ್ದಾಗಿಯೂ ಕೋಲಾ ಕುಡಿದು ಡರ್ ಎಂದು ತೇಗುವುದರಲ್ಲಿ ಏನೋ ಒಂದು ರೀತಿಯ ಖುಷಿ ಕಾಣತೊಡಗಿತು.
ಆದರೆ ಕೆಲವೇ ವರ್ಷಗಳಲ್ಲಿ ಒಂದೇ ರುಚಿಯ ಕೋಲಾ ಯಾಕೋ ಸಪ್ಪೆಯೆನಿಸತೊಡಗಿತು. ಅದನ್ನು ಅರ್ಥ ಮಾಡಿಕೊಂಡ ಕಂಪನಿಗಳು ಬಲು ಬೇಗ ಕಿತ್ತಳೆ ಹಣ್ಣಿನ,ನಿಂಬೆ ಹಣ್ಣಿನ ರುಚಿಯನ್ನು ಸೇರಿಸಿ ನಮ್ಮ ಕೈಗಿಟ್ಟವು. ಆದರೆ ಆ ಬಾಟಲಿಗಳ ಮೇಲೆ CONTAINS NO FRUIT ಎಂದು ಮುದ್ರಿಸಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಯಾವಾಗ ಅವುಗಳು ನಮ್ಮ ಆರೋಗ್ಯಕ್ಕೂ ಹಾನಿಕಾರಕ ಎನ್ನುವುದನ್ನು ನಾವು ಅರಿಯತೊಡಗಿದೆವೋ ಆಗ ಅದೇ ಕಂಪನಿಗಳು ನಿಜವಾದ ಮಾವಿನ,ಕಿತ್ತಳೆಯ,ನಿಂಬೆಯ ಹಣ್ಣಿನ ರಸಗಳನ್ನೇ ಬಾಟಲಿಗಳಲ್ಲಿ ತುಂಬಿ ನಮಗೆ ಮಾರತೊಡಗಿದವು!
ಅಲ್ಲಿಗೆ ನಮ್ಮದೇ ಊರಿನ ಹಿತ್ತಲಿನಲ್ಲಿ,ತೋಟದಲ್ಲಿ ಬೆಳೆಯುತ್ತಿದ್ದ ಹಣ್ಣುಗಳ ಪಾನಕವನ್ನು ಕುಡಿಯುವುದು ಬಿಟ್ಟು, ಹಾಗೆ ಕುಡಿಯುವವರನ್ನು ಓಡುತ್ತಿರುವ ಪ್ರಪಂಚದ ವೇಗಕ್ಕೆ ಹೊಂದಿಕೊಳ್ಳಲಾಗದವರು ಎಂದು ಹೀಯಾಳಿಸಿ, ನಂತರ ಪರೋಕ್ಷವಾಗಿ ಅದೇ ಹಣ್ಣುಗಳ ರಸವನ್ನು ಕುಡಿಯುವುದನ್ನು ಪ್ರಾರಂಭಿಸುವವರೆಗೆ ಸಂಪೂರ್ಣವಾಗಿ ಒಂದು ಸುತ್ತು ಪೂರ್ಣಗೊಂಡಿತ್ತು. ಆದರೆ ಇಲ್ಲಿಯವರೆಗೆ ಎಲ್ಲಿಯೋ,ಎಂದೋ ತಯಾರಿಸಿ ಇನ್ನೆಲ್ಲಿಗೋ ತಂದಿಟ್ಟು ಮಾರಿದ ಪಾನೀಯಗಳನ್ನು ಕುಡಿದು ಕೆಡಿಸಿಕೊಂಡ ನಮ್ಮ ಆರೋಗ್ಯ ನಮಗೆಂದಿಗೂ ಮರಳಿ ಸಿಗುವುದಿಲ್ಲ. ನಮ್ಮದೇ ಊರಿನಲ್ಲಿ ಸಿಗುತ್ತಿದ್ದ ಶುದ್ಧ ಪಾನೀಯವನ್ನು ಬಿಟ್ಟು ಯಾವುದೋ ಕೀಟನಾಶಕಗಳಿಂದ ಕೂಡಿದ ತಂಪು ಪಾನೀಯಗಳನ್ನು ಕುಡಿಯಲು ಖರ್ಚು ಮಾಡಿದ ಹಣ ನಮ್ಮ ಕೈ ಸೇರುವುದಿಲ್ಲ.ಈಗಲೂ ಮತ್ತೆ ಅದೇ ಹಣ್ಣಿನ ರಸಗಳನ್ನೇ ಸೇವಿಸುತ್ತಿದ್ದರೂ ಒಂದೆರಡು ರೂಪಾಯಿಯಲ್ಲಿ ಕುಡಿಯಬಹುದಾಗಿದ್ದ ಪಾನೀಯದ ಖರ್ಚು ಮಾತ್ರ ಈಗ ಹತ್ತು ಹದಿನೈದು ರೂಪಾಯಿಗಳಿಗೇರಿದೆ!
*************
ಹಲವು ವರ್ಷಗಳ ಹಿಂದೆ ನಮ್ಮೂರಿನಲ್ಲಿ ಬಹುತೇಕರು ಭತ್ತದ ಹೊಟ್ಟನ್ನು ಸುಟ್ಟು ಅದರ ಬೂದಿಗೆ ಸ್ವಲ್ಪ ಉಪ್ಪು ಮಿಶ್ರಣ ಮಾಡಿ ಅದನ್ನು ಹಲ್ಲುಜ್ಜಲು ಬಳಸುತ್ತಿದ್ದರು. ಇನ್ನು ಕೆಲವರು ಇದ್ದಿಲನ್ನು ಉಪಯೋಗಿಸಿದರೆ ಮತ್ತೊಂದಷ್ಟು ಮಂದಿ ಬೇವಿನ ಕಡ್ಡಿಯನ್ನು ಬಳಸುತ್ತಿದ್ದರು.ಇವೆಲ್ಲಾ ಬಹುತೇಕ ಉಚಿತವಾಗೇ ಸಿಗುತ್ತಿತ್ತು.ನಂತರ ಶುರುವಾಗಿದ್ದೇ ಕೋಲ್ಗೇಟ್ ಯುಗ!
ಪತ್ರಿಕೆಗಳಲ್ಲಿ,ರೇಡಿಯೋಗಳಲ್ಲಿ,ಟೀವಿಯಲ್ಲಿ,ಗೋಡೆಗಳಲ್ಲಿ… ಹೀಗೆ ಎಲ್ಲಿ ನೋಡಿದರಲ್ಲಿ ಕೋಲ್ಗೇಟ್ ಟೂತ್ ಪೇಸ್ಟ್’ನ ಜಾಹೀರಾತುಗಳು ಕಾಣಿಸಿಕೊಳ್ಳತೊಡಗಿದವು.ತಮ್ಮ ಜಾಹೀರಾತುಗಳ ಮೂಲಕ ನೀವಿನ್ನೂ ಇದ್ದಿಲಿನಲ್ಲೇ ಹಲ್ಲುಜ್ಜುತ್ತಿದ್ದೀರಾ ಎಂದು ನಮ್ಮನ್ನು ಗೇಲಿ ಮಾಡಿದರು.ನೀವಿನ್ನೂ ಬೇವನ್ನೇ ಉಪಯೋಗಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು.ಆಗ ನಮಗೆ ಭತ್ತದ ಹೊಟ್ಟನ್ನು ಒಂದು ಕಡೆ ರಾಶಿ ಹಾಕಿ ಅದನ್ನು ಸುಟ್ಟು,ಅದು ಬೂದಿಯಾದ ನಂತರ ಸಾಣಿಸಿ ಸಣ್ಣ ಪುಡಿಯನ್ನು ಬೇರ್ಪಡಿಸಿ ಅದಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡುವುದು,ಬೇವಿನ ಮರದ ಬುಡಕ್ಕೆ ಹೋಗಿ, ಸಣ್ಣ ಸಣ್ಣ ರೆಂಬೆಗಳನ್ನು ತುಂಡರಿಸಿ ಮನೆಗೆ ತಂದಿಟ್ಟುಕೊಂಳ್ಳುವುದು, ಕೈ ಎಲ್ಲಾ ಮಸಿ ಮಾಡಿಕೊಂಡು ಉರಿದ ಕಟ್ಟಿಗೆಯಿಂದ ಇದ್ದಿಲನ್ನು ಸಂಗ್ರಹಿಸಿ ಅದರಿಂದ ಹಲ್ಲುಜ್ಜುವುದೆಂದರೆ ಬಹಳ ಪ್ರಯಾಸದ ಕೆಲಸವೇನೋ ಎನ್ನಿಸತೊಡಗಿತು. ಮನೆಗೆ ಬಂದ ಅತಿಥಿಗಳ ಕೈಗೆ ಹಲ್ಲುಜ್ಜಲು ಬೂದಿಯನ್ನೋ, ಇದ್ದಿಲನ್ನೋ, ಬೇವಿನ ಕಡ್ಡಿಯನ್ನೋ ಕೊಟ್ಟರೆ ನಮ್ಮ ಮಾನ ಮೂರು ಕಾಸಿಗೆ ಹರಾಜಾಗಿಬಿಡುವುದೇನೋ ಎನ್ನುವ ಆತಂಕ ಶುರುವಾಯಿತು. ಟೂತ್’ಪೇಸ್ಟ್ ಉಪಯೋಗಿಸಲು ಒಪ್ಪದ ಅಜ್ಜನನ್ನು ಕೋಲ್ಗೇಟ್’ನವರ ಜೊತೆ ಸೇರಿ ನಾವೂ ಗೇಲಿ ಮಾಡಿದೆವು. ಅಜ್ಜ ಈ ಜನ್ಮದಲ್ಲಿ ಈಗಿನ ಕಾಲಕ್ಕೆ ತಕ್ಕಂತೆ ಅಪ್ ಡೇಟ್ ಆಗುವುದಿಲ್ಲ ಎನಿಸತೊಡಗಿತು.
ಕೆಲವೇ ವರ್ಷಗಳ ನಂತರ ನಮ್ಮ ಹಲ್ಲುಗಳಲ್ಲಿ ನೋವು ಕಾಣಿಸತೊಡಗಿತು.ಅವು ದುರ್ಬಲಗೊಂಡು ಉದುರಿ ಬೀಳತೊಡಗಿದವು. ಕೆಜಿಎಫ್’ನ ಆಳದ ಕುಳಿಗಳು ನಮ್ಮ ದವಡೆ ಹಲ್ಲುಗಳಲ್ಲೇ ಕಾಣಿಸತೊಡಗಿದವು. ಜಗುಲಿಯ ಮೇಲೆ ಕುಳಿತ ಎಂಬತ್ತು ವರ್ಷದ ಅಜ್ಜ ಕುಟುಂ ಕುಟುಂ ಎಂದು ಸದ್ದು ಮಾಡುತ್ತಾ ಇಡಿಯಾದ ಅಡಿಕೆ ಜಗಿಯುತ್ತಿದ್ದರೆ ಇಪ್ಪತ್ತೈದರ ಮೊಮ್ಮಗ ಅಂಗಳದಲ್ಲಿ ಪೇರಳೆ ಹಣ್ಣಿನ ಬೀಜ ಅಗಿಯಲಾಗದೆ ಸಿಪ್ಪೆಯನ್ನು ಮಾತ್ರ ಮೇಲಮೇಲಕ್ಕೆ ತಿಂದು ಬಿಸಾಡುತ್ತಿದ್ದ. ಆಗ ನಾವು ಉಪಯೋಗಿಸುವ ಟೂತ್’ಪೇಸ್ಟ್’ನಲ್ಲಿ ಏನೋ ಕೊರತೆ ಇದೆ ಎನ್ನಿಸತೊಡಗಿತು. ನಮ್ಮ ಭಾವನೆಯನ್ನು ಕೂಡಲೇ ಅರ್ಥ ಮಾಡಿಕೊಂಡ ಕೋಲ್ಗೇಟ್’ನವರು ತಡ ಮಾಡಲಿಲ್ಲ. ಆಗಾಗ ಹಲ್ಲು ನೋವು ಬಂದಾಗ ಅಜ್ಜ ಉಪಯೋಗಿಸುತ್ತಿದ್ದ ಲವಂಗವನ್ನು ತಮ್ಮ ಟೂತ್ ಪೇಸ್ಟ್’ನಲ್ಲಿ ಸೇರಿಸಿದರು. ಅಜ್ಜ ಉಪಯೋಗಿಸುತ್ತಿದ್ದ ಉಪ್ಪನ್ನು ತಮ್ಮ ಟೂತ್ ಪೇಸ್ಟ್’ನಲ್ಲಿ ಸೇರಿಸಿ “ನಿಮ್ಮ ಟೂತ್ ಪೇಸ್ಟ್ ನಲ್ಲಿ ಉಪ್ಪಿದೆಯೇ” ಎಂದು ನಮ್ಮನ್ನೇ ಪ್ರಶ್ನಿಸತೊಡಗಿದರು.
ವಿಷಯ ಅಲ್ಲಿಗೇ ಮುಗಿಯಲಿಲ್ಲ.ಟೂತ್ ಪೇಸ್ಟ್’ಗಳು ಯಾವುದೇ ಕಾರಣಕ್ಕೂ ನಮ್ಮ ಪಾರಂಪರಿಕ ಪದ್ಧತಿಗೆ ಸರಿಗಟ್ಟಲಾರವು ಎನ್ನುವುದು ನಮಗೆ ಯಾವಾಗ ತಿಳಿದು ಹೋಯಿತೋ, ಆಗ ಅದೇ ಕೋಲ್ಗೇಟ್ ಉಪ್ಪಷ್ಟೇ ಅಲ್ಲದೆ ಲವಂಗ, ನೀಲಗಿರಿ, ನಿಂಬೆ, ಬೇವು, ತುಳಸಿ, ಜೇನುತುಪ್ಪ, ಲೋಳೆಸರ, ನೆಲ್ಲಿಕಾಯಿ, ಕರ್ಪೂರ… ಹೀಗೆ ನಮ್ಮ ಮನೆಯಲ್ಲಿ ಹಿಂದಿನಿಂದಲೂ ಏನೆಲ್ಲಾ ಬಳಸುತ್ತಾ ಬಂದಿದ್ದೇವೋ ಆ ಪದಾರ್ಥಗಳೆಲ್ಲವನ್ನೂ ತನ್ನ ಟೂತ್ ಪೇಸ್ಟಿನೊಳಗೆ ತುಂಬಿಸಿಕೊಡತೊಡಗಿತು. ಆಗಲೂ ನಮಗೆ ಸಮಾಧಾನವಾಗದಿದ್ದಾಗ ಇದರಲ್ಲಿ ವೇದಗಳ ಸಾರ ಅಡಗಿದೆ ಎನ್ನುತ್ತಾ ಅದಕ್ಕೆ ‘ಕೋಲ್ಗೇಟ್ ಸ್ವರ್ಣ ವೇದಶಕ್ತಿ’ ಎನ್ನುವ ಹೆಸರಿಟ್ಟು ಮಾರುಕಟ್ಟೆಗೆ ಇಳಿಸಿತು! ಇಷ್ಟಕ್ಕೇ ಮುಗಿಯಲಿಲ್ಲ.ಯಾವುದನ್ನು ಹಳೆಯದೆಂದು ನಮ್ಮಿಂದ ದೂರವಿರಿಸಲಾಗಿತ್ತೋ ಅದೇ ಮಾಸ, ನಕ್ಷತ್ರಗಳಿಂದ ಕೂಡಿದ ಚಿಕ್ಕ ಪಂಚಾಂಗವೊಂದನ್ನು ಉಚಿತವಾಗಿ ಮುದ್ರಿಸಿ ತನ್ನ ಟೂತ್ ಪೇಸ್ಟ್’ನೊಂದಿಗೆ ನೀಡತೊಡಗಿತು!
ಅಲ್ಲಿಗೆ ನಮ್ಮದೇ ಉಪ್ಪು, ಬೇವು, ಲವಂಗ, ಇದ್ದಿಲು, ಭಸ್ಮ ಎಲ್ಲವನ್ನೂ ಬಿಟ್ಟು, ಅದನ್ನು ಬಳಸುವವರನ್ನೂ ಹೀಯಾಳಿಸಿ ನಂತರ ಪರೋಕ್ಷವಾಗಿ ಅದೇ ಉಪ್ಪು, ಬೇವು, ಲವಂಗ, ಇದ್ದಿಲು, ಬೂದಿಗಳನ್ನು ಬಳಸಲು ಪ್ರಾರಂಭಿಸುವಲ್ಲಿಯವರೆಗೆ ಸಂಪೂರ್ಣವಾಗಿ ಒಂದು ಸುತ್ತು ಪೂರ್ಣಗೊಂಡಿತ್ತು. ಆದರೆ ಇಲ್ಲಿಯವರೆಗೆ ಯಾವ್ಯಾವುದೋ ರಾಸಾಯನಿಕಯುಕ್ತ ಪೇಸ್ಟುಗಳನ್ನು ಬಳಸಿ ಉದುರಿ ಹೋದ ನಮ್ಮ ಹಲ್ಲುಗಳು ಮತ್ತೆ ಹುಟ್ಟಲಾರವು.ತೂತುಬಿದ್ದು ಬೆಳ್ಳಿ ತುಂಬಿಸಿಕೊಂಡ ಹಲ್ಲುಗಳು ಮತ್ತೆ ತುಂಬಲಾರವು. ಮೊದಲಿನಂತೆ ಈಗಲೂ ಮತ್ತೆ ಅದೇ ಉಪ್ಪು, ಬೇವು, ಲವಂಗ, ಇದ್ದಿಲು, ಭಸ್ಮಗಳನ್ನೇ ಹಲ್ಲುಜ್ಜಲು ಬಳಸುತ್ತಿದ್ದರೂ ಆಗ ಒಂದೋ ಎರಡೋ ರೂಪಾಯಿಯಲ್ಲಿ ಮುಗಿಯುತ್ತಿದ್ದ ನಮ್ಮ ಹಲ್ಲುಗಳ ಉಜ್ಜಾಟದ ಕಾರ್ಯಕ್ರಮ ಈಗ ನೂರು-ಇನ್ನೂರು ರೂಪಾಯಿಗಳಿಗೇರಿ ಕುಳಿತುಬಿಟ್ಟಿದೆ!
*************
ಹಲವು ವರ್ಷಗಳ ಹಿಂದೆ ನಮ್ಮೂರಿನಲ್ಲಿ ಒಂದಷ್ಟು ಜನ ಉಡುಪಿ ಕೃಷ್ಣನ ದೇವಸ್ಥಾನಕ್ಕೆ ಪ್ರವಾಸ ಹೊರಟಿದ್ದರು.ಅವರ ಸ್ನೇಹವಲಯದಲ್ಲಿದ್ದ ಇಬ್ಬರು ಹುಡುಗರು ಮಾತ್ರ ಧರ್ಮ ಪ್ರಚಾರಕರೊಬ್ಬರ ಉಪದೇಶದಂತೆ ಅವರ ಜೊತೆ ಉಡುಪಿಗೆ ಹೋಗಲು ನಿರಾಕರಿಸಿದ್ದರು. ‘ದೇವರು ಇದ್ದಾನೆ ಎಂದರೆ ಅವನು ನೇರವಾಗಿ ನಮಗೇಕೆ ಕಾಣಿಸುವುದಿಲ್ಲ? ಅಲ್ಲಿಗೆ ಹೋಗಿ ಕಲ್ಲಿಗೆ ಕೈ ಮುಗಿದರೆ ನಮ್ಮ ಕಷ್ಟಗಳು ಹೇಗೆ ಪರಿಹಾರವಾಗುತ್ತವೆ? ದೇವರು ಒಬ್ಬನೇ ಏಕಿಲ್ಲ? ಎಲ್ಲಾ ಕಡೆಯೂ ದೇವರಿದ್ದಾನೆ ಎಂದ ಮೇಲೆ ಉಡುಪಿಗೇ ಯಾಕೆ ಹೋಗಬೇಕು?’ ಎನ್ನುವಂಥಾ ಹಲವು ಪ್ರಶ್ನೆಗಳನ್ನು ಆ ಇಬ್ಬರ ಮೂಲಕ ಕೇಳಿಸಿದ್ದರು. ಅವರಿಗೆ ಸಮಾಧಾನ ತರುವ ರೀತಿಯ ಉತ್ತರ ಕೊಡಲಾಗದೇ ಕೊನೆಗೆ ಅವರಿಬ್ಬರನ್ನು ಬಿಟ್ಟು ಉಳಿದವರೆಲ್ಲಾ ಉಡುಪಿ ಕೃಷ್ಣನ ಸನ್ನಿಧಿಗೆ ಹೋಗಿ ದರ್ಶನ ಪಡೆದು, ಭಕ್ತಿಯಿಂದ ಕೈ ಮುಗಿದು ಪುನೀತ ಭಾವದೊಂದಿಗೆ ಮರಳಿ ಬಂದರು. ಆದರೆ ಆ ಹುಡುಗರಿಬ್ಬರು ಆ ಧರ್ಮ ಪ್ರಚಾರಕರ ಹಿಂದೆ ಹೋಗಿ ಮತಾಂತರವಾದರು!
ಆ ಧರ್ಮ ಪ್ರಚಾರಕರು ಮೊದಲು ದೇವರನ್ನು ನಂಬಬೇಡಿ ಎಂದವರು ನಂತರ ದೇವರೊಬ್ಬನೇ ಎಂದು ಹುಡುಗರನ್ನು ನಂಬಿಸಿದರು. ಮೊದಲು ಕಲ್ಲಿನ ವಿಗ್ರಹಕ್ಕೆ ಕೈ ಮುಗಿದರೆ ನಮ್ಮ ಕಷ್ಟಗಳು ಹೇಗೆ ಪರಿಹಾರವಾಗುತ್ತವೆ ಎಂದು ಕೇಳಿ ಎಂದು ಹೇಳಿಕೊಟ್ಟವರು ನಂತರ ತನ್ನ ದೇವರ ವಿಗ್ರಹದ ಬಳಿ ಕರೆದುಕೊಂಡು ಹೋಗಿ ಬತ್ತಿಯ ಬೆಳಕು ಹಚ್ಚಿಸಿ ತಲೆ ಬಾಗಿಸಿದರು. ಆಗಲೂ ಆ ಇಬ್ಬರು ಹುಡುಗರಿಗೆ ಏನೋ ಕೊರತೆ ಕಂಡುಬಂದಿದ್ದನ್ನು ಗಮನಿಸಿದ ಅವರು ಆರತಿ, ಬಲಿ ಪೂಜೆ ಮುಂತಾದವುಗಳನ್ನೂ ಮಾಡುವುದನ್ನು ತೋರಿಸಿದರು. ಮತ್ತೂ ಹುಡುಗರ ಮನಸ್ಸೇಕೋ ಚಂಚಲವೆನ್ನಿಸಿದಾಗ ಸ್ತೋತ್ರಗಳನ್ನು ಓದಿಸಿದರು, ತೀರ್ಥವನ್ನು ಕೊಟ್ಟು ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂದರು. ಅದ್ಯಾವುದೋ ನೀರಿನಲ್ಲಿ ಮಿಂದೆದ್ದರೆ ನಿಮ್ಮ ಖಾಯಿಲೆಗಳು ವಾಸಿಯಾಗುತ್ತವೆ ಎಂದರು. ಕೊನೆಗೂ ಮನಸ್ಸೇಕೋ ಒಪ್ಪಲು ಹಿಂಜರಿದಾಗ ದೇವಾಲಯದ ಗರುಡಗಂಬ, ಆನೆ, ರಥಬೀದಿಯಲ್ಲಿ ಎಳೆಯುವ ತೇರು, ಎಲ್ಲವನ್ನೂ ತೋರಿಸಿದರು. ಇಷ್ಟಾದರೂ ಆ ಹುಡುಗರಿಬ್ಬರ ಮನಸ್ಸು ಯಾವುದಕ್ಕೋ ಚಡಪಡಿಸುತ್ತಿರುವುದನ್ನು ಗಮನಿಸಿದ ಅವರು ಅಂತಿಮವಾಗಿ ನಮ್ಮ ದೇವರನ್ನು ನಂಬಿರಿ,ನಮ್ಮ ದೇವರು ಬೇರೆಯಲ್ಲ, ಕೃಷ್ಣ ಬೇರೆಯಲ್ಲ ಎನ್ನುವ ಉಪದೇಶ ಮಾಡಿ ಶ್ರೀಕೃಷ್ಣನ ವೇಷ ತೊಟ್ಟು ಅರ್ಜುನನಿಗೆ ಉಪದೇಶ ಮಾಡುತ್ತಿರುವ ಏಸುವನ್ನು ತೋರಿಸಿಬಿಟ್ಟರು!
ಅಲ್ಲಿಗೆ ಉಡುಪಿ ಕೃಷ್ಣನನ್ನು ದರ್ಶಿಸುವುದನ್ನು ಬಿಟ್ಟು, ಹಾಗೆ ದರ್ಶನ ಬಯಸಿ ಹೊರಟವರನ್ನು ಪ್ರಶ್ನಿಸಿ ನಂತರ ಅದೇ ಕೃಷ್ಣನನ್ನು ಪೂಜಿಸುವವರೆಗೆ ಸಂಪೂರ್ಣವಾಗಿ ಒಂದು ಸುತ್ತು ಪೂರ್ಣಗೊಂಡಿತ್ತು.ಆದರೆ ಇಲ್ಲಿಯವರೆಗೆ ಅವರು ಕಳೆದುಕೊಂಡ ಮಾನಸಿಕ ನೆಮ್ಮದಿ,ಧಾರ್ಮಿಕವಾಗಿ ಅವರು ಕಳೆದುಕೊಂಡ ಸ್ವಂತಿಕೆ,ತನ್ನದೇ ಸಮಾಜದಿಂದ ಬೇರ್ಪಟ್ಟಾಗ ಉಂಟಾದ ಖಾಲಿತನ ಇವೆಲ್ಲವೂ ಅವರಿಗೆ ಮರಳಿ ಸಿಗುವುದಿಲ್ಲ.ಈಗಲೂ ಪರೋಕ್ಷವಾಗಿ ಅದೇ ಕೃಷ್ಣನನ್ನು ಪೂಜಿಸುತ್ತಿದ್ದರೂ ನಾನು ಪೂಜಿಸುತ್ತಿರುವುದು ಕೃಷ್ಣನನ್ನೇ ಎಂದು ಬಾಯಿ ಬಿಟ್ಟು ಅವರು ಹೇಳುವಂತಿಲ್ಲ.
*******************
ಇಂತಹಾ ಪ್ರದಕ್ಷಿಣೆಗಳು ಇಲ್ಲಿಗೆ ಮುಗಿಯುವುದಿಲ್ಲ.ದಾಸವಾಳ,ಸೀಗೆ ಕಾಯಿಯನ್ನು ಬಳಸುತ್ತಿದ್ದ ಮಹಿಳೆಯರು ಶಾಂಪೂವಿನ ಸಹವಾಸ ಮಾಡಿ ಮತ್ತದೇ ದಾಸವಾಳ,ನೆಲ್ಲಿಕಾಯಿ,ಸೀಗೆ ಕಾಯಿಯ ಶಾಂಪೂವನ್ನು ಬಳಸತೊಡಗಿರುವುದರಿಂದ ಹಿಡಿದು, ಏನೆಲ್ಲಾ ತಿಂದು ಆರೋಗ್ಯ ಕೆಡಿಸಿಕೊಂಡು ಮತ್ತೆ ನಾವು ಕಳೆದುಕೊಂಡಿರುವ ನವಣೆ, ಅರ್ಕ ಕೊರಲೆ ಮುಂತಾದ ಸಿರಿಧಾನ್ಯಗಳು ಎಲ್ಲಿ ಸಿಗುತ್ತವೆ ಎಂದು ಹುಡುಕಲು ಪ್ರಾರಂಭಿಸಿರುವವರೆಗೆ,ಎಲ್ಲದಕ್ಕೂ ಔಷಧಗಳಿವೆ ಎಂದು ಬೀಗುತ್ತಿದ್ದ ನಾವು ಮತ್ತೆ ಯೋಗದ ಕಡೆ ಚಿತ್ತ ಹರಿಸಿರುವುದರಿಂದ ಹಿಡಿದು ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಮೊರೆ ಹೋಗಿದ್ದ ನಾವು ಮತ್ತೆ ಗೋ ಮೂತ್ರ,ಸಾವಯವ ಗೊಬ್ಬರಗಳ ಕಡೆಗೆ ಮುಖ ಮಾಡಿರುವವರೆಗೆ ನಮ್ಮ ಪ್ರದಕ್ಷಿಣೆಗಳು ಮುಂದುವರಿಯುತ್ತಲೇ ಇವೆ.
ಹೀಗೆ ಆಹಾರ, ಆರೋಗ್ಯ, ಆಚರಣೆ ಈ ಎಲ್ಲಾ ವಿಚಾರಗಳಲ್ಲೂ ನಾವು ಹಿಂದಿನಿಂದಲೂ ರೂಢಿಸಿಕೊಂಡು ಬಂದಿರುವ ಪದ್ಧತಿಯೇ ಶ್ರೇಷ್ಠ ಎನ್ನುವುದು ತಿಳಿದ ಮೇಲೂ ಮತ್ತೇಕೆ ನಾವದನ್ನು ಆಗಾಗ ಬದಲಾಯಿಸಬೇಕು?ದೇವರು ನಮ್ಮ ದೇಹಕ್ಕೆ ಸಾವಿರಾರು ವರ್ಷ ಆಯುಷ್ಯ ತುಂಬಿ ಕಳಿಸಿಲ್ಲ ಎನ್ನುವುದು ಗೊತ್ತಿದ್ದೂ ಮತ್ತೇಕೆ ನಮ್ಮ ಅಮೂಲ್ಯವಾದ ಸಮಯವನ್ನು ಇನ್ನೊಬ್ಬರ ಪ್ರಯೋಗಗಳಿಗೆ ಬಲಿ ಕೊಡಬೇಕು?
ಅದಕ್ಕೇ ಹೇಳಿದ್ದು.ನೀವು ಉಡುಪಿ ಕೃಷ್ಣನ ದರ್ಶನ ಮಾಡಬೇಕೆಂದಿದ್ದರೆ ಅಲ್ಲಿ, ಇಲ್ಲಿ ಎಂದು ದಾರಿ ತಪ್ಪಿಸಿಕೊಂಡು ಸುತ್ತಾಡಿ ನಿಮ್ಮ ಅಮೂಲ್ಯವಾದ ಸಮಯ,ಹಣ,ನೆಮ್ಮದಿ ಎಲ್ಲವನ್ನೂ ಕಳೆದುಕೊಂಡು ನಂತರ ಯಾರ ಮನೆಯಲ್ಲೋ ಕೃಷ್ಣನ ಫೋಟೋ ನೋಡಿ ಕೈ ಮುಗಿದು ಬರುವ ಬದಲು ನೇರವಾಗಿ ಉಡುಪಿಗೇ ಹೋಗಿ ದರ್ಶನ ಪಡೆದು, ಭಕ್ತಿಯಿಂದ ಕೈ ಮುಗಿದು ಪುನೀತ ಭಾವದೊಂದಿಗೆ ಮರಳಿ ಬಂದು ಬಿಡಿ.ಹೇಗೂ ನೀವಿರುವಲ್ಲಿಂದ ಅಲ್ಲಿಗೆ ತಲುಪುವ ಸುಲಭ ದಾರಿಗಳನ್ನು ತೋರಿಸಲು ಬೇಕಾದಷ್ಟು ಮಾರ್ಗದರ್ಶಕರು ಸಿಕ್ಕಿಯೇ ಸಿಗುತ್ತಾರೆ.
ಚಿತ್ರಕೃಪೆ: ಪ್ರಜಾವಾಣಿ
Facebook ಕಾಮೆಂಟ್ಸ್