X

ಬೆಂಗಳೂರಿಗೆ ಬೆಂಗಳೂರೇ ಶತ್ರು

ಬೆಂಗಳೂರಿಗೆ ಬೆಂಗಳೂರೇ ಶತ್ರು ಎಂದು ಹೇಳಿದರೆ ತಪ್ಪಾಗಲಾರದು. ಮಳೆಯ ಅಬ್ಬರ ಹೆಚ್ಚುತ್ತಿದೆ. ಮನೆ ಸೇರಲು ಜನರ ಪರದಾಟ ಗಮನೀಯ. ಪ್ರಶಾಂತವಾದ ಬೆಂಗಳೂರು ರಸ್ತೆಗಳು ಇಂದು ರಣರಂಗ ಆಗಿರುವುದರಲ್ಲಿ ಎಲ್ಲರ ಪಾತ್ರವಿದೆ! ಜಾಗತೀಕರಣದ ಹಾದಿಯಲ್ಲಿ ನಡೆದ ಭಾರತ ೧೯೯೨ರಲ್ಲಿ ಇಟ್ಟ ಒಂದು ದೊಡ್ಡ ಹೆಜ್ಜೆಯಿಂದಾಗಿ ಇಂದು ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಿ ಬೆಳೆದು ನಿಂತಿದೆ.

ತಪ್ಪು ಬೆಳವಣಿಗೆಯದ್ದಲ್ಲ. ಆ ಬೆಳವಣಿಗೆಯಲ್ಲಿ ನಾವು ಮರೆತ ನಮ್ಮ ಊರಿನ ಕ್ಷೇಮ ಅಷ್ಟೇ. ನಮ್ಮ ರಾಜ್ಯದಲ್ಲೇ ಅತಿ ಶ್ರೀಮಂತ ಕ್ಷೇತ್ರವಾಗಿರುವ ಕೋರಮಂಗಲ, ಸರ್ಜಾಪುರ, ಹೆಚ್.ಎಸ್.ಆರ್ ಇತ್ಯಾದಿ ಏರಿಯಾಗಳು ಇಂದಿಗೆ ನೀರುಪಾಲು. ಸರಕಾರ ಕಣ್ಣಮುಚ್ಚಿ ಕೂತಿದೆ, ಜೊತೆಗೆ ನಾವು ಇನ್ನೂ ಜಾಗೃತರಾಗಿಲ್ಲ, ನಾವು ನಿದ್ದೆ ಮಾಡಿ ಹಲವಾರು ವರ್ಷಗಳೇ ಆಗಿವೆ. ಉದಾಹರಣೆಗೆ ಇದೆ ಏರಿಯಾಗಳನ್ನು ತೆಗೆದುಕೊಂಡರೆ ಸಾಮಾನ್ಯವಾಗಿ ಇಲ್ಲಿ ಓಡಾಡುವರು ಬಹುಶಃ ನಮ್ಮ ದೇಶದ ಅತಿ ಬುದ್ಧಿವಂತರು, ಟೆಕ್ಕಿಗಳು ಹಾಗೂ ಬೇರೆ ದೇಶದ ಸಮಸ್ಯೆಗಳಿಗೆ ಕೂತು ಸಲಹೆಗಳನ್ನು ಕಂಡುಹಿಡಿಯುವರು; ಅದೇ ಏರಿಯಾದ ರಸ್ತೆಗಳಲ್ಲಿ ನಾವು  ಕಾಣುವುದು ಗುಂಡಿಗಳು, ಹರಿಯುತ್ತಿರುವ ಚರಂಡಿಗಳು ಹಾಗೂ ಪ್ರಾಣ ಹೋಗೋ ಹಂಪುಗಳು.

ಒಮ್ಮೆ ಆ ರಸ್ತೆಯಲ್ಲಿ ಓಡಾಡಿದರೆ ನಮಗೆ ನಮ್ಮ ದೇಶದ ಅತಿ ವಿದ್ಯಾವಂತ ಪ್ರಜೆಗಳು ಬಾಯಲ್ಲಿ ಅವಾಚ್ಯ ಶಬ್ದಗಳನ್ನು ಉಗುಳುತ್ತಾ one-way ನಲ್ಲಿ ಗಾಡಿ ಓಡಿಸುತ್ತ ಎಲ್ಲಿ ಆಫೀಸಿಗೆ ತಡವಾಗಿ ಬಿಡುತ್ತದೋ ಎನ್ನುವ ಭರಾಟೆಯಲ್ಲಿಯೇ ತಮನ್ನು ತಾವೇ ಮರೆತು ಮೈಮೇಲೆ ದೆವ್ವ ಬಂದ ಹಾಗೆ ಆಡುವವರು ಕಾಣಸಿಗುವುದು ಸಾಮಾನ್ಯ!

ಟ್ರಾಫಿಕ್ ರೂಲ್ಸ್ ಮನೆ ಹಾಳಾಯ್ತು, ‘ತನ್ನ ಕ್ಯಾಬ್ ಡ್ರೈವರ್ ರಸ್ತೇಲಿ ಉಗ್ಗುದ್ರೆ ಉಗಿಲಿ’ ತಮ್ಮ ಮನೆ ಅಂತೋ ಅಲ್ವಲ್ಲ ಅನ್ನೋ ನಿರಾಳ, ಚರಂಡಿ ಇದ್ದರೆ ಎಷ್ಟು ಬಿಟ್ಟರೆ ಎಷ್ಟು, ನೀರು ಬಂದ್ರೆ ಎಷ್ಟು ಬಿಟ್ಟ್ರೆ ಎಷ್ಟು ತಮ್ಮ ಬಾಟಲಿ ಫುಲ್ ಆದರೆ ಸಾಕು ಅನ್ನೋ ಭಾವನೆಗಳ ಮಧ್ಯೆ ಒಂದಿಬ್ಬರು “Bangalore is just Hell” ಅನ್ನೋ ಮುಖಪುಟದ ಸಾಮಾಜಿಕ ಕಳಕಳಿ ತೋರಿಸುವವರು.

ಇವತ್ತಿಗೆ ನಮಗೆ ನಮ್ಮ ನಿರಾಳತೆಯ ಉಡುಗೊರೆ ಸಿಕ್ಕಿದಂತಾಗಿದೆ. ನಾವು ಮಾನವರು ಅದರಲ್ಲೂ ಮೊಬೈಲ್ ಹಿಡಿದ ಮಾನವರು ನಮಗೆ ಜ್ಞಾಪಕ ಶಕ್ತಿ ಎನ್ನುವುದು ದುರ್ಬಲವಾದದ್ದು. ನಮ್ಮನ್ನು ಆಳುವವರು ನೆಪದ ಅಧಿಪತಿಯರು, ಇಂದಿನ ಸಾವು ನಾಳೆಯ ನೆಪ, ನಿರ್ಲಕ್ಷತೆ ನಮಗೆ ಹುಟ್ಟುಗುಣ. ಅಮೆರಿಕಾದ ಒಂದು ರಸ್ತೆಯಲ್ಲಿ ನೋಡಿಕೊಂಡು, ಹೆದರಿಕೊಂಡು, ಜೋಪಾನವಾಗಿ ಕಾಪಾಡಿಕೊಂಡು, ಎಲ್ಲೂ ಉಗುಳದೆ, ಕಣ್ಣಲಿ ಕಣ್ಣಿಟ್ಟು ಓಡಾಡುವ ನಾವು ನಮ್ಮ ಸ್ವಂತ ರಸ್ತೆ ‘ಯಾರ್ ಅಪ್ಪನ ಮನೆ ಆಸ್ತಿ’ ಅನ್ನೋ ಹಾಗೆ ನುಗ್ಗಿಸುತ್ತಾ, ಕೆಡವುತ್ತ, ಡಿವೈಡರ್’ಗಳನ್ನೂ ಸರಿಸುತ್ತ, ಇಷ್ಟ ಬಂದ ಹಾಗೆಗೆ ಕಟ್ಟುತ್ತಾ, ಇಂದು ಅದೇ ನಿರ್ಲಕ್ಷಣೆಗೆ ನಮ್ಮ ಮನೆಗಳು, ರಸ್ತೆಗಳು ಮುಳುಗುತ್ತಾ, ಪ್ರಕೃತಿ ನಮ್ಮನು ನೋಡಿ ವ್ಯಂಗ್ಯದಿಂದ ನಗುತ್ತಿದೆ.

ಬೆಂಗಳೂರು ಬದಲಾಗು ಚೂರು ಅನ್ನೋ ಕನಸು ನನಸಾಯ್ತು ಆದರೆ ಬೆಂಗಳೂರು ಇಂದಿಗೆ ನಮ್ಮ ಉಡಾಫೆಯ ಪ್ರತೀಕ! ಇದು ಎಚ್ಚರಿಕೆ ಇರಬಹುದು, ಇನ್ನು ಮುಂದೆ ನಮ್ಮ ಊರು ನಮ್ಮ ಜವಾಬ್ದಾರಿ!

 

– Abhishek Iyengar 

abhishek.iyengar@wemovetheatre.in

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post