ಮಹಿಳಾ ಸಬಲೀಕರಣ, ಲಿಂಗ ಸಮಾನತೆ, ಸ್ತ್ರೀವಾದ (Women Empowerment, Gender Equality, Feminism) ಮುಂತಾದವುಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಚಾರದಲ್ಲಿರುವ ಶಬ್ದಗಳು, ಈ ಎಲ್ಲಾ ಶಬ್ದಗಳಿಗೆ ಸ್ವಲ್ಪ ಹೊರಾರ್ಥವಿದ್ದರೆ ಹೆಚ್ಚು ಇರುವುದು ಒಳಾರ್ಥ (Little Objective but more Subjective), ಬದ್ಧತೆಗೂ ಭಾಷಣಕ್ಕೂ ನಡುವಿನ ಅಂತರ ಮಸುಕಾಗುತ್ತಿರುವಾಗ, ಭಾಷಣ-ಹೊರಗುರುತುಗಳೇ ಬದ್ಧತೆಗೆ ಮಾನದಂಡವಾಗಿರುವಾಗ ಈ ಎಲ್ಲಾ ಶಬ್ದಗಳು, ಅದರ ಅರ್ಥ, ಅದರ ಉಪಯೋಗದ ಹಿಂದಿನ ಭಾವದ ಕುರಿತು ನಮ್ಮ ಅರಿವು ಗಾಢವಾಗಬೇಕಾದ ದಿನಗಳಿವು. ನರೇಂದ್ರ ಮೋದಿ ಸಂಪುಟದಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗಿ ನಿಯುಕ್ತಿ ಆದ ನಂತರ, ದೇಶದ ಅತ್ಯುನ್ನತ ಸಮಿತಿಯಾದ CCS (Cabinet Committee on Security)ನಲ್ಲಿ ಇಬ್ಬರು ಮಹಿಳೆಯರಿರುವ ಈ ಸಂದರ್ಭದಲ್ಲಿ ಈ ಎಲ್ಲಾ ಶಬ್ದಗಳು ಮತ್ತೆ ಚರ್ಚೆಗೆ ಬರುತ್ತಿದೆ. ಶ್ರೀಮತಿ ಇಂದಿರಾ ಗಾಂಧಿ ಪ್ರಧಾನಿಯಾಗಿದಾಗ ಒಮ್ಮೆ ರಕ್ಷಣಾ ಖಾತೆಯೂ ಅವರ ಅಧೀನದಲ್ಲಿತ್ತು, ಸ್ವತಂತ್ರವಾಗಿ ಮೊದಲ ರಕ್ಷಣಾ ಸಚಿವರಾದ ಹೆಗ್ಗಳಿಕೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ರದ್ದು. ಅದರ ಜೊತೆಗೆ ಅವರು ಜಗತ್ತಿನ ವಿವಿಧ ದೇಶಗಳ 16 ರಕ್ಷಣಾ ಸಚಿವರಲ್ಲಿ ಒಬ್ಬರು. ದೊಡ್ಡ ದೇಶಗಳಲ್ಲಿ ಏಕೈಕ ಮಹಿಳಾ ರಕ್ಷಣಾ ಸಚಿವರು. ಜೆಎನ್‌ಯು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರರು. ಇಂದು ಈ ನಿಯುಕ್ತಿ ಜಗತ್ತಿನ ಗಮನ ಸೆಳೆದಿದೆ.
ಇದೇ ಸಂದರ್ಭದಲ್ಲಿ ಸ್ತ್ರೀವಾದ, ಲಿಂಗ ಸಮಾನತೆ, ಮಹಿಳಾ ಸಶಕ್ತೀಕರಣದ ಧ್ವನಿ ತಾವು ಮಾತ್ರ; ತಾವು ಹೇಳಿದ ರೀತಿಯಲ್ಲಿ ಮಾತ್ರ ಎಂದು ಬೊಬ್ಬೆ ಹಾಕುತ್ತಿರುವ ಒಬ್ಬರೇ ಒಬ್ಬರು ಸಹಾ ಈ ನೇಮಕವನ್ನು ಸ್ವಾಗತಿಸಲಿಲ್ಲ. ಶ್ರೀಮತಿ ಸುಷ್ಮಾ ಸ್ವರಾಜ್, ಶ್ರೀಮತಿ ನಿರ್ಮಲಾ ಸೀತಾರಾಮನ್, ಶ್ರೀಮತಿ ಸ್ಮೃತಿ ಇರಾನಿಯವರನ್ನು ರೋಲ್ ಮಾಡೆಲ್ ರೀತಿಯಲ್ಲಿ ಬಿಂಬಿಸಲಿಲ್ಲ. ಅನುಭವದ ಕೊರತೆ ಎಂದರು. ಆ ವಿಭಾಗದಲ್ಲಿ ಎಂದೂ ಕೆಲಸ ಮಾಡಲಿಲ್ಲ ಎಂದರು. ಹಿಂದಿನ ಖಾತೆಯಲ್ಲಿ, ಹಿಂದಿನ ಸರಕಾರದಲ್ಲಿ ಇವರುಗಳು ಹೊರಸೂಸಿದ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ವಿದ್ಯಾರ್ಹತೆಯನ್ನು ಗಮನಿಸಲಿಲ್ಲ. ಶಾಸಕರು, ಸಂಸದರಾಗಿ ಇವರ ನಡವಳಿಕೆಯನ್ನು ವಿಶ್ಲೇಷಣೆ ಮಾಡಲಿಲ್ಲ. ಏಕೆಂದರೆ ಇವರೆಲ್ಲಾ ಸ್ತ್ರೀವಾದಿ ಚಳುವಳಿಯಲ್ಲಿ ಘೋಷಣೆ ಕೂಗಿದವರಲ್ಲ. Feminism ಎಂದು ಬಡಿದಾಡಿದವರಲ್ಲ. ಮಹಿಳಾ ಸಶಕ್ತೀಕರಣ ಎಂದು ಸರಕಾರದ ದುಡ್ಡಿನ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದವರಲ್ಲ. ಕೈಯಲ್ಲಿ ಸಿಗರೇಟ್, ಗ್ಲಾಸು ಹಿಡಿದವರಲ್ಲ. ಅಂತರ್ಜಾತಿಯ ವಿವಾಹದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದವರಲ್ಲ. ವಿಶ್ವ ಬಂಧುತ್ವ, ವಿಶ್ವ ಭ್ರಾತೃತ್ವ (Universal Brotherhood-Sisterhood)ನ ಹೆಸರಿನಲ್ಲಿ ಭಾರತ ಎನ್ನುವ ಎಲ್ಲವನ್ನು ಹೀಗಳೆದವರಲ್ಲ. ಭಾರತೀಯತೆಯನ್ನು ಖಂಡಿಸಿದವರಲ್ಲ. ಭಾರತೀಯ ನಾರಿ ಎನ್ನುವುದಕ್ಕೆ ಅಂಜಿದವರಲ್ಲ. ಶ್ರೀಮತಿ ಸುಷ್ಮಾ ಸ್ವರಾಜ್ ವಿದೇಶಾಂಗ ಇಲಾಖೆಯನ್ನು ಸಮೂಲ ಬದಲಾಯಿಸಿದರು.
Elitist, high flying ಆಗಿದ್ದ ಇಲಾಖೆ ಸಾಮಾನ್ಯ ಜನರಿಗೆ ಸಹಕಾರ ನೀಡುವ ರೀತಿಯಲ್ಲಿ ಪರಿವರ್ತಿಸಿದವರು. ಪಾಸ್‌ಪೋರ್ಟ್ ಕಳೆದುಕೊಂಡವರು, ಮಾಲೀಕರ ದೌರ್ಜನ್ಯಕ್ಕೆ ಸಿಲುಕಿದವರು, ಮೆಡಿಕಲ್ ವೀಸಾದ ಅವಶ್ಯಕತೆ ಇದ್ದವರು, ಶಿಕ್ಷಣದ ಹೆಸರಿನಲ್ಲಿ ಮೋಸ ಹೋದವರು, ಸ್ಥಾನೀಯ ಭಯೋತ್ಪಾದನೆ-ಯುದ್ಧಗಳಲ್ಲಿ ಸಿಲುಕಿಕೊಂಡವರು ಇವರೆಲ್ಲರಿಗೆ ಹಿರಿಯಕ್ಕ’ನಾದರು. ತಾಯಿ’ಯಾದರು. ತನ್ನ ಅನಾರೋಗ್ಯದ ವಿವರವನ್ನು ‘Right to Privacy’ಯ ಹೆಸರಿನಲ್ಲಿ ಗೌಪ್ಯವಾಗಿಡಲಿಲ್ಲ. ‘ಕಿಡ್ನಿ ಬದಲಾವಣೆ’ಯ ಮೂರನೆಯ ದಿನವೇ ಸಾಮಾಜಿಕ ಜಾಲತಾಣಗಳ ಮುಖಾಂತರ ನೊಂದವರಿಗೆ ಸಹಕಾರಿಯಾದರು. She did not flaunt feminism card. But she displayed her mother like, women like concern in her every act.
ಶ್ರೀಮತಿ ನಿರ್ಮಲಾ ಸೀತಾರಾಮನ್ ಬಿಜೆಪಿಯ ವಕ್ತಾರೆಯಾಗಿ, ರಾಜ್ಯಸಭೆಯ ಸದಸ್ಯರಾಗಿ, ವಾಣಿಜ್ಯ ಮಂತ್ರಿಯಾಗಿ ತಮ್ಮ ಛಾಪನ್ನು ಮೂಡಿಸಿದವರು. ದೇಶದ ಹಿತಾಸಕ್ತಿಯನ್ನು ಜಾಗತಿಕ ವೇದಿಕೆಗಳಲ್ಲಿ, ಸಂಧಾನಗಳಲ್ಲಿ ಕಾಪಾಡಿದವರು. ಸಣ್ಣ-ಸಣ್ಣ ವ್ಯಾಪಾರಿಗಳು, ಉದ್ಯಮಶೀಲರ ನೋವಿಗೆ ಪರಿಹಾರ ನೀಡಿದವರು. ಇವರೂ ಸ್ತ್ರೀ ಸಮಾನತೆ ಎಂದು ಘೋಷಣೆ ಹಾಕಿದವರಲ್ಲ. ಮನೆಯ ಮಗಳಾಗಿ, ಆತ್ಮೀಯ ಸೊಸೆಯಾಗಿ, ಜನಪರ ಧ್ವನಿಯಾಗಿ ಬೆಳೆದವರು. ಅತ್ತೆಯೊಡನೆ ಉಪ್ಪಿನಕಾಯಿ ತಯಾರಿಸುವುದು ಅಪರಾಧ ಎಂದು ತಿಳಿದವರಲ್ಲ. ಕುಟುಂಬ ವ್ಯವಸ್ಥೆ ಎಂದರೆ ಸ್ತ್ರೀ ಶೋಷಣೆಯ ವ್ಯವಸ್ಥೆ ಎಂದವರಲ್ಲ.
ಇವರೆಲ್ಲಾ ತಮ್ಮ-ತಮ್ಮ ಸ್ವಸಾಮರ್ಥ್ಯದ ಮೇಲೆ ಉನ್ನತ ಸ್ಥಾನಗಳಿಗೆ ಬಂದವರು. ಸೋನಿಯಾ, ಡಿಂಪಲ್, ಅಪರ್ಣಾ, ಕನ್ನಿಮೋಳಿ, ಸುಪ್ರಿಯಾ ರೀತಿಯಲ್ಲಿ Birth Certificate, Marriage Certificate ಹಿಡಿದು ರಾಜಕೀಯ-ಸಾಮಾಜಿಕ ಜೀವನ ಪ್ರವೇಶ ಮಾಡಿದವರಲ್ಲ. ಪ್ರಬಂಧ ಮಂಡಿಸಲಿಲ್ಲ. ಟೌನ್‌ಹಾಲ್ ಎದುರು ಕ್ಯಾಂಡಲ್ ಹಿಡಿಯಲಿಲ್ಲ. ಗೋ ಹತ್ಯೆ ಪರ ವಾದಿಸಲಿಲ್ಲ. Right to Privacyಯ ಹೆಸರಿನಲ್ಲಿ Live in relationshipನ ಪ್ರತಿಪಾದಕರಾಗಲಿಲ್ಲ. ವ್ಯಸನಗಳಿಗೆ ಬಲಿಯಾಗಲಿಲ್ಲ. ‘ಹೀಗೆ ಬದುಕಬಾರದು’ ಎನ್ನುವುದಕ್ಕೆ ಉದಾಹರಣೆಯಾಗಲಿಲ್ಲ.
ಶುದ್ಧ ದೇಸೀ ಸಂಸ್ಕೃತಿಯ ವಾಹಕರಾದರು. ಹೆತ್ತಮಕ್ಕಳಿಗೆ ಒಳ್ಳೆಯ ತಾಯಿ ಎನಿಸಿಕೊಂಡರು. ಸಂಸಾರ ನಡೆಸುತ್ತಲೇ, ಉತ್ತಮ ಪತ್ನಿಯಾಗುತ್ತಲೇ ಸಾಮಾಜಿಕ ಕಾರ್ಯಕರ್ತೆಯಾಗಬಹುದು ಎಂದು ತೋರಿಸಿಕೊಟ್ಟರು. ವಿದ್ಯೆ ಎಂದರೆ ಪದವಿಯಲ್ಲ, ಬದುಕುವ ರೀತಿ ಎಂದು ಸಾಧಿಸಿತೋರಿದರು. ಅವಕಾಶಗಳಿಗೆ ಹೆಗಲು ಕೊಟ್ಟರು. ಸವಾಲುಗಳಿಗೆ ಎದೆಯೊಡ್ಡಿದರು. ನೊಂದವರಿಗೆ ಪರಿಹಾರವಾದರು. ಭಾರತ-ಭಾರತೀಯತೆ-ಭಾರತೀಯ ನಾರಿ ಯಾವುದನ್ನೂ ಹೀಗೆಳೆಯಲಿಲ್ಲ. ಸಮಾಜ-ಕುಟುಂಬ-ನೈತಿಕತೆಯ ಚೌಕಟ್ಟ್ಟನ್ನು ಬಂಧನ ಎಂಬ ವಿತಂಡವಾದವನ್ನು ಮುಂದಿಡಲಿಲ್ಲ. ಚೌಕಟ್ಟು ಚಿತ್ರದ ಅಂದವನ್ನು ಹೆಚ್ಚಿಸುತ್ತದೆ ಎಂಬ ಸತ್ಯ ತಿಳಿದವರು ಸುಷ್ಮಾ-ನಿರ್ಮಲಾ-ಸ್ಮೃತಿ ಮುಂತಾದವರು. ಇವರಿಗೆ ಬದ್ಧತೆ (Commitment) ಮುಖ್ಯವಾಯಿತೇ ಹೊರತು ತೋರುಗಾರಿಕೆ (Presentation) ಮುಖ್ಯವಾಗಲಿಲ್ಲ.
ಇವರೆಲ್ಲರಿಗೂ ಏಣಿಯಾಗಿದ್ದು ತಥಾಕಥಿತ ಬಲಪಂಥೀಯ ಸಂಘಟನೆಗಳೇ. ಕೋಮುವಾದಿ ಬಿಜೆಪಿಯೇ. ಇವರಿಗೆ ಬೆಂಬಲವಾಗಿ ನಿಂತವರು ತಥಾಕಥಿತ ಮನುವಾದಿಗಳೇ. ಸ್ತ್ರೀ ಸ್ವಾತಂತ್ರ್ಯ ವಿರೋಧಿಗಳೇ. ಬಿಜೆಪಿಯ ಗರಡಿಯಲ್ಲಿ, ಸಂಘಪರಿವಾರದ ನೈತಿಕ ಬೆಂಬಲದೊಂದಿಗೆ ಶ್ರೀ ಅಟಲ್‌ಜೀ, ಶ್ರೀ ನರೇಂದ್ರ ಮೋದಿ ಮುಂತಾದವರ ಪಾಲಕತ್ವದಲ್ಲಿ ಬೆಳೆದ ಸ್ತ್ರೀಯರು ಇವರು. ಹೇಗೆ ಇವರಿಗೆ ಬದ್ಧತೆ ಮುಖ್ಯವಾಯಿತೋ, ಹಾಗೆಯೇ ಬಿಜೆಪಿಗೂ ಸಹಾ ಮಹಿಳಾ ಸಶಕ್ತೀಕರಣ ನಂಬಿಕೆಯ ವಿಷಯವೇ ಹೊರತು, ಘೋಷಣೆ-ಭಾಷಣದ ವಿಷಯವಲ್ಲ. ಸಿದ್ಧಾಂತದ ಚೌಕಟ್ಟಿನಲ್ಲಿ, ನಂಬಿಕೆಗಳ ದಾರಿದೀಪದಲ್ಲಿ, ಸಂಘಟನೆಯ ಮಾರ್ಗದಲ್ಲಿ ನಡೆದವರು ಇವರು. ಹಾಗಾಗಿ ಬಿಜೆಪಿಯಲ್ಲಿ ಉಮಾಭಾರತಿ, ವಸುಂಧರಾ ರಾಜೆ ಮುಂತಾದವರು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತದೆ. ಏಕೆಂದರೆ, ಬಿಜೆಪಿಗೆ ಮಹಿಳಾ ಸಶಕ್ತೀಕರಣದ ಘೋಷಣೆ-ಲೇಖನ-ಪ್ರಬಂಧ-ಬಿರುದು-ಪ್ರಶಸ್ತಿ ಅಂತಿಮ ಗುರಿಯಲ್ಲ. ಸಶಕ್ತ ಮಹಿಳೆ ಅಂತಿಮ ಗುರಿ.
-ಬಿ.ಎಲ್.ಸಂತೋಷ್
ರಾಷ್ಟ್ರೀಯ ಸಹ-ಸಂಘಟನಾ ಕಾರ್ಯದರ್ಶಿ, ಬಿಜೆಪಿ
ಕೃಪೆ: ವಿಕ್ರಮ ವಾರಪತ್ರಿಕೆ
Facebook ಕಾಮೆಂಟ್ಸ್