ಬರೆವ ಹಲಗೆಯನೊಡೆದು ಬಾಲಕನು ತಾನದನು |
ಮರಳಿ ಜೋಡಿಪೆನೆನ್ನುತಾಯಾಸಗೊಳುತ ||
ಸರಿಚೌಕಗೈವಾಟದಲಿ ಜಗವ ಮರೆತಂತೆ |
ಪರಬೊಮ್ಮ ಸೃಷ್ಟಿಯಲಿ – ಮಂಕುತಿಮ್ಮ || ೦೭೯ ||
ಪರಬ್ರಹ್ಮನ ಸೃಷ್ಟಿ ನಿಗೂಢತೆ ಎಷ್ಟೆಲ್ಲಾ ಕಾಡಿದೆ ಕವಿ ಮನಸನ್ನ! ಕನ್ನಡಿಯಲ್ಲಿ ಮೈಮರೆತ ತರುಣಿಯ ಹಾಗೆ, ತನ್ನಂದಕೆ ತಾನೇ ಮರುಳಾದ ನವಿಲಿನ ಹಾಗೆ – ಅವನ ಸೃಷ್ಟಿಯಲೇನೆಲ್ಲಾ ಇದೆಯೊ ಅದೆಲ್ಲವೂ ಒಂದಲ್ಲಾ ಒಂದು ರೀತಿಯ ಪ್ರೇರಕವಾಗಿ ಅದರಡಿಯಲ್ಲಿ ಪರಬ್ರಹ್ಮನ ಗುಟ್ಟನು ಹುಡುಕುವಂತೆ ಮಾಡಿದೆ. ಆ ಯತ್ನದಲ್ಲಿ ತಾನು ಕಂಡುಕೊಂಡಿದ್ದೆಲ್ಲವು ಕಗ್ಗದ ರೂಪದಲ್ಲಿ ದಾಖಲಾಗುತ್ತ ಹೋಗಿದೆ. ಇದೂ ಅಂತದ್ದೇ ಒಂದು ಕಗ್ಗ – ಈ ಬಾರಿ, ‘ಸೃಷ್ಟಿಕರ್ತನ ಮನಸತ್ತ್ವ ಕುತೂಹಲಭರಿತ ಬಾಲಕನ ಮನಸಿನ ಹಾಗೆ’ ಎಂದು ಹೋಲಿಸುತ್ತ !
ಬರೆವ ಹಲಗೆ ಅಥವಾ ಸ್ಲೇಟು ಎಂದರೆ ಈ ಕಾಲದ ಎಷ್ಟು ಮಕ್ಕಳಿಗೆ ಗೊತ್ತಿದೆಯೊ ಹೇಳುವುದು ಕಷ್ಟ. ಆದರೆ ತಾಂತ್ರಿಕತೆಯ ಸೊಂಕಿನ್ನು ಮುಟ್ಟದ ಆ ಕಾಲದಲ್ಲಿ ಶಾಲೆಗೆ ಹೊರಟೆವೆಂದರೆ ಸ್ಲೇಟು – ಬಳಪದ ಜೊತೆಯಲ್ಲಿಯೆ. ಈ ಬರೆಯುವ ಹಲಗೆಯನ್ನು ಕೈಲಿ ಹಿಡಿದು ಬಳಪದಲ್ಲಿ ಬರೆಯುತ್ತಾ, ನಂತರ ಅಳಿಸಿ ಮತ್ತೆ ಬರೆಯಲು ಅದೇ ಹಲಗೆಯನ್ನು ಮರುಬಳಸುತ್ತಾ ಕಲಿಯುತ್ತಿದ್ದ ದಿನಗಳು… ನಮ್ಮ ಬಾಲ್ಯದಲ್ಲಿ ಕೆಲವಕ್ಕೆ ಮರದ ಚೌಕಟ್ಟಿದ್ದರೆ ಮಿಕ್ಕಿದವು ಬೆತ್ತಲೆ ಅಂಚಿನವು. ಒಂದೊಮ್ಮೊ ಇವೇನಾದರು ಕೆಳಗೆ, ನೆಲಕ್ಕೆ ಬಿದ್ದರೆ ಒಂದು ತರದ ಮೃದುವಾದ ಕಲ್ಲಿನಿಂದ ಮಾಡಿದ ಈ ಹಲಗೆಗಳು ಮುರಿದು ಹಲವು ಚೂರುಗಳಾಗುವ ಸಾಧ್ಯತೆಯಿರುತ್ತಿತ್ತು.
ಕೈಯಿಂದ ಜಾರಿದ ಬರೆವ ಹಲಗೆಯೊಂದು ಕೆಳಗೆ ಬಿದ್ದು ಮುರಿದು ಹೋದರೆ ಅದನ್ನು ಹಿಡಿದ ಮಗುವಿನ ಪ್ರತಿಕ್ರಿಯೆ ಹೇಗಿರುತ್ತದೆ ? ಮೊದಲಿಗೆ ಅದು ಬಿದ್ದ ತುಂಡುಗಳನ್ನೆತ್ತಿಕೊಂಡು ಮತ್ತೆ ಜೋಡಿಸಿ ಒಗ್ಗೂಡಿಸಲು ಯತ್ನಿಸುತ್ತದೆ. ಮುರಿದುಬಿದ್ದ ವಸ್ತುವನ್ನು ತಂತಾನೆ, ಹಾಗೆಯೇ ಜೋಡಿಸಲು ಅಸಾಧ್ಯವೆಂದು ಆಲೋಚಿಸಬರದ ಮುಗ್ದ ವಯಸದು. ಜೋಡಿಸಿದರೂ ಬೇರಾಗುವ ತುಂಡುಗಳನ್ನು ಹೇಗಾದರು ಮತ್ತೆ ಜೋಡಿಸಲೇಬೇಕೆನ್ನುವ ಹಠದಲ್ಲಿ , ಮತ್ತೆ ಮತ್ತೆ ಪ್ರಯತ್ನಿಸುತ್ತಿರುತ್ತದೆ. ಅಂಟಿಸುವ ವಸ್ತುವಿಲ್ಲದೆ ಇದು ಅಸಾಧ್ಯವಾದ ಕಾರಣ ಅದಕ್ಕೆ ಜೋಡಿಸಲು ಆಗುವುದಿಲ್ಲವಾದರು, ಅದರ ಪ್ರಯತ್ನ ಮಾತ್ರ ನಿರಂತರವಾಗಿ ನಡೆದಿರುತ್ತದೆ. ಮಿಕ್ಕೆಲ್ಲ ಜಗವನ್ನು ಮರೆತು ಅದರಲ್ಲೆ ಲೀನವಾಗಿ ಹೋಗಿ ಊಟ, ನಿದ್ದೆಯನ್ನೆಲ್ಲ ಬದಿಗಿಟ್ಟು ತನ್ನ ಯತ್ನದಲ್ಲಿ ತೊಡಗಿಕೊಂಡು ಆಯಾಸಗೊಂಡರೂ ಅದರ ಯತ್ನ ನಿಲ್ಲುವುದಿಲ್ಲ. ಸುತ್ತಮುತ್ತಲ ಪರಿಸರದ ಪರಿಗಣನೆಯೂ ಇಲ್ಲದೆ ತನ್ನ ಲೋಕದಲ್ಲಿ ತಲ್ಲೀನವಾಗಿ ಹೋದ ಮುಗ್ದಭಾವವದು – ಹೇಗಾದರೂ ಸರಿ ಆ ಹಲಗೆ ಮೊದಲಿನ ಹಾಗೆ ಚೌಕಾಕಾರವಾಗಬೇಕೆಂಬ ಯತ್ನದಲ್ಲಿ.
ಸೃಷ್ಟಿಕ್ರಿಯೆಯಲ್ಲಿ ತಲ್ಲೀನನಾದ ಪರಬ್ರಹ್ಮನೂ ಆ ಮಗುವಿನ ಹಾಗೆ ನಿಷ್ಕಳಂಕ ಮನದವನು. ತನ್ನ ಕಾರ್ಯದಲ್ಲಿ ನಿರತನಾದ ಅವನಿಗು ಅವನ ಬರಹದ ಹಲಗೆ (ಸೃಷ್ಟಿಯ ಪರಿಕರ, ಫಲಿತಗಳು) ಒಡೆದು ಹೋಗುವ, ಮುರಿದುಬೀಳುವ ಸಂಧರ್ಭಗಳು ಅಪರೂಪವೇನಲ್ಲ. ಆಗೆಲ್ಲ ಆ ಮಗುವಿನ ಮುಗ್ಧ ಮನಸಿನ ಹಾಗೆ ಅದರ ದುರಸ್ತಿಕಾರ್ಯದಲ್ಲಿ ತಲ್ಲೀನನಾಗಿ, ಅದೇ ಒಂದು ಆಟವೆಂಬಂತೆ ಅದರಲ್ಲೆ ಮುಳುಗಿಹೋಗುವವನಂತೆ ಪರಬ್ರಹ್ಮ. ಹೀಗಾಗಿ ಅವನೊಂದು ಮಗುವಾದರೆ ಸೃಷ್ಟಿಯೆ ಅವನ ಬರೆವ ಹಲಗೆ. ಅದರಲ್ಲಿನ ನಿರಂತರ ಪ್ರಯೋಗವೇ ಅವನ ಮಕ್ಕಳಾಟದ ಪರಿ. ತನ್ನ ಕಾರ್ಯದಲ್ಲಿ ಉಂಟಾಗುವ ಎಡರುತೊಡರುಗಳನ್ನು ಸಾಧ್ಯವೊ, ಅಸಾಧ್ಯವೊ ಯೋಚಿಸದೆ ನಿರಂತರವಾಗಿ ಸೃಜಿಸುತ್ತ, ಮುರಿದಾಗ ದುರಸ್ತಿಗೆ ತೊಡಗಿಕೊಳ್ಳುತ್ತ ತನ್ನ ಕಾರ್ಯವನ್ನು ಮುಂದುವರೆಸಿದ್ದಾನೆ. ತನ್ಮೂಲಕ ತನ್ನ ಸೃಷ್ಟಿಯ ಕುರಿತಾದ ತಲ್ಲೀನ ಮನೋಭಾವವನ್ನು ಸಾದರಪಡಿಸುತ್ತಾನೆ – ತನ್ನ ಕೃತಿಯಮೂಲಕ.
ಇಲ್ಲಿ ಎಷ್ಟೆಲ್ಲ ಸಂದೇಶಗಳು ಅಡಗಿವೆ ನೋಡಿ: ಮೊದಲಿಗೆ ತನ್ನ ಕಾರ್ಯದಲ್ಲಿ ತೊಡಗಿಸಿಕೊಳ್ಳುವಾಗ ಇರಬೇಕಾದ ಮಗುವಿನಂತಹ ಕುತೂಹಲ, ಹಠ, ತಲ್ಲೀನತೆ ಮತ್ತು ಪರವಶತೆ. ಯಾವುದನ್ನೆ ಸಾಧಿಸಬೇಕಾದರು ಇವುಗಳ ಸಹಾಯವಿಲ್ಲದೆ ಆ ಗುರಿ ಸಾಧನೆ ಅಸಾಧ್ಯ. ನಾವು ಮಾಡುವ ಮೊದಲೆ – ಇದು ನಮ್ಮಿಂದಾಗದು ಎನ್ನುವ ತೀರ್ಮಾನಕ್ಕೆ ಬಂದು ಕೈಬಿಡುವುದೆ ಹೆಚ್ಚು. ಅದಕ್ಕೆ ವ್ಯತಿರಿಕ್ತ ಚರ್ಯೆ ಬೊಮ್ಮನದು.
ಹಾಗೆಯೆ ಇಲ್ಲಡಗಿರುವ ಸೂಕ್ಷ್ಮ ಕರ್ಮ ಸಿದ್ಧಾಂತ ನೋಡಿ – ಮುರಿದ ಹಲಗೆ ಒಂದಾಗದಿದ್ದರು ಬಾಲಕ ಜೋಡಿಸುವ ಯತ್ನ ನಿಲ್ಲಿಸದೆ ತನ್ನ ಕೆಲಸ ಮುಂದುವರೆಸಿರುತ್ತಾನೆ. ಫಲಾಫಲದ ತುಲನೆ ಮಾಡದೆ ತನ್ನ ಕರ್ಮದಲ್ಲಿ ನಿರತನಾಗೆನ್ನುವ ಸಂದೇಶದ ಮತ್ತೊಂದು ಸ್ವರೂಪವಿದು.
ಹೊಸತ ಕಟ್ಟುತ್ತಾ ಮುರಿದದ್ದನ್ನು ಜೋಡಿಸುತ್ತ ನಮ್ಮ ಬದುಕು ಸಾಗಿಸುವ ಬಗೆಯನ್ನು ಕೂಡ ಸೂಕ್ಷ್ಮವಾಗಿ ಹೇಳುವ ಸಾಲುಗಳಿವು.
ಅದೆಲ್ಲಕ್ಕು ಮೀರಿದ ಆಧ್ಯಾತ್ಮಿಕ ಸ್ತರದಲ್ಲಿ ಪರಬೊಮ್ಮನ ಗುಟ್ಟನು ಬಿಡಿಸಲು ಯತ್ನಿಸುತ್ತ ಲೌಕಿಕಕ್ಕು ಪಾರಮಾರ್ಥಿಕಕ್ಕು ನಂಟು ಕಟ್ಟಿ ಅದರೆಡೆಗೊಂದು ಸಡಿಲ ಗಂಟುಹಾಕುವ ಈ ಕಗ್ಗ ಇತರ ಕಗ್ಗಗಳಂತೆ ಅರ್ಥಗರ್ಭಿತ ಮತ್ತು ಅರ್ಥಪೂರ್ಣ .
#ಕಗ್ಗ_ಟಿಪ್ಪಣಿ
#ಕಗ್ಗಕೊಂದು_ಹಗ್ಗ
Facebook ಕಾಮೆಂಟ್ಸ್