“ಇವತ್ತು ಏನೇ ಆಗಲಿ ಒಂದಾದರೂ ಡ್ಯು ಬಾಕಿ ಇರೋನನ್ನು ವಸೂಲಿ ಮಾಡಬೇಕು” ಎನ್ನುತ್ತಲೇ ಓಮ್ನಿಯನ್ನು ನಾಲ್ಕನೇ ಗೇರಿಗೆ ಬದಲಾಯಿಸಿದ ಕಿಶೋರ್,ನೋಡಲು ಅಮವಾಸ್ಯೆ ಕತ್ತಲು,ಒರಟ ಅಷ್ಟೇ ದಢೂತಿ ದೇಹ,ಯಾರಾದರೂ ಒಮ್ಮೆ ಜುಂ ಅನ್ನಬೇಕು ಅಂತಹ ದೇಹಕಾಯ…
‘ಹೌದು,ಎಲ್ಲಿಗೆ ಹೋಗೋಣ ಮೊದಲು ಪಟ್ಟಿಯಲ್ಲಿ ನಾಲ್ಕು ಹೆಸರಿದೆ,ಖಲೀಲ್,ರಫೀಕ್,ರಾಮಚಂದ್ರ,ಸುಭಾಷ್” ಓದುತ್ತಲೇ ಅವರ ಮನೆ ವಿಳಾಸಕ್ಕೆ ಕಣ್ಣೆಸೆಯುತ್ತಿದ್ದ ಜಾಬೀರ್,ಕಿಶೋರ್’ನ ಸಹಾಯಕ,ಸೌಮ್ಯ ಸ್ವಭಾವದ,ಕುಟುಂಬವನ್ನು ಸಲಹಲು ಅರಬಿಕ್ ಮರಳನ್ನು ಮೆಟ್ಟಿ ವಿಧಿ ಪಗಡೆಯಾಟಕ್ಕೆ,ಇಲ್ಲಿನ ಮಧ್ಯವರ್ತಿಗಳ ದುಡ್ಡಿನ ಲಾಲಸೆಗೆ ಬಿದ್ದು,ನೆತ್ತಿ ಒಡೆದು ಬೆವರು ಹರಿಸುವಂತಹ ಸುಡುಬಿಸಿಲು,ಬಾಣಲೆಯಲ್ಲಿಟ್ಟ ಎಣ್ಣೆಯಂತ ಮರಳುಗಾಡಿನಲ್ಲಿ ಆಡು ಮೇಯಿಸುವ ಕೆಲಸಕ್ಕೆ ಜೋತು ಬಿದ್ದವ,ಅಲ್ಲಿಂದ ತಪ್ಪಿಸಿ ಹಕಾಮ ಪಾಸ್’ಪೋರ್ಟ್ ಇಲ್ಲದೇ ಪೋಲೀಸ್ ಕೈಗೆ ಸಿಕ್ಕಿ ಬಿದ್ದು ರಂಝಾನಿನ ಹೊತ್ತು ವಿಶೇಷ ರಿಯಾಯಿತಿಯಲ್ಲಿ ಜೈಲಿಂದ ಬಿಡುಗಡೆಗೊಂಡು ಆ ದೇಶದಿಂದಾನೇ ಗಡಿಪಾರಾಗುವಾಗ ಎರಡು ವರ್ಷ ಜೈಲಿನಲ್ಲಿ ಕೊಳೆತಿದ್ದ,ತನಗೆ ಮೋಸ ಮಾಡಿದವರ ಮೇಲೆ ಸೇಡು ತೀರಿಸಲೆಂದರೆ ಆರ್ಥಿಕವಾಗಿ ಶೋಚನೀಯ ಸ್ಥಿತಿಯಲ್ಲಿರುವಾಗ ಹಳೇ ಗೆಳೆಯ ಕಿಶೋರ್,ಫೈನಾನ್ಸ್ ಕಂಪೆನಿಯ ಡ್ಯೂ ವಸೂಲಿ ಮಾಡಲು ಸಹಾಯಕನಾಗಿ ಇಟ್ಟು ಕೊಂಡದ್ದು.
ಕೆಲಸವೇನೂ ಇರಲಿಲ್ಲವಾದರೂ ಅಧಿಕ ಬಡ್ಡಿ ತಿಂದು,ಮಧ್ಯಮ ವರ್ಗದ ಜನ ಫೈನಾನ್ಸ್ ಸಾಲ ಕಟ್ಟಲಾಗದೇ ಎರಡು ಮೂರು ಡ್ಯೂ ಬಾಕಿಯಾದರೆ ಗೂಂಡ ಪಡೆಯಂತಿರುವ ಡ್ಯೂ ವಸೂಲಿಗಾರರನ್ನು ಇಟ್ಕೊಳ್ಳುವ ಪೈನಾನ್ಸ್ ಕಂಪೆನಿ ವಸೂಲಿಗೆ ಛೂ ಬಿಡುತ್ತವೆ,ಒಂದಾ ಡ್ಯೂ ಬಾಕಿ ಕಟ್ಟಬೇಕು ಇಲ್ಲಾ ವಾಹನದ ಜಪ್ತಿ ಕಾರ್ಯ ಕೈಗೊಳ್ಳುತ್ತಾರೆ,ಇದನ್ನು ನೋಡಿ ನೋಡಿ ಜಾಬೀರ್’ಗೆ ರೇಜಿಗೆ ಬಂದದ್ದು ಸತ್ಯ..!
“ರಫೀಕ್ ಮನೆಯೆಲ್ಲಿ!?”ಕಿಶೋರ್ ಸ್ಟೇರಿಂಗನ್ನು ಎಡಕ್ಕೆ ತಿರುಗಿಸುತ್ತಾ ಕೇಳಿದ,”ಕಬಕ” ತಟ್ಟನೇ ಏನೋ ನೆನಪು ಬಂದವನಂತೆ ಕಿಶೋರ್ “ಸರಿ” ಅಲ್ಲಿಗೇ ಹೋಗೋಣ ಸುರೇಶ್ ಅನ್ನೋನು ಕೂಡ ಅಲ್ಲಿಯವನೇ ಒಂದು ಹಳೇ ಸೆಟಲ್ಮೆಂಟ್ ಉಂಟು” ಎನ್ನುತ್ತ ಓಮ್ನಿಯನ್ನು ನೆಹರು ನಗರ ನೇತ್ರಾವತಿ ಸಂಕ ದಾಟಿಸಿದ.!
ಮಳೆಗಾಲ ಇನ್ನೇನೋ ಶುರುವಾಗಿತ್ತು,ನೇತ್ರಾವತಿ ತುಂಬುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದವು,ಹೊರಗಡೆ ಅಷ್ಟೇನು ಖಾರ ವಾತವರಣ ಇಲ್ಲದಿರುವುದರಿಂದ ಜಾಬೀರ್ ಓಮ್ನಿ ಸೀಟಿಗೆ ಹಾಗೆಯೇ ಒರಗಿಕೊಂಡ,ಕಣ್ಣೆದುರಿಗೆ ಬುದ್ಧನ ಚಿತ್ರ ಪ್ರತಿಷ್ಟಾಪಿಸಿತ್ತು,ಬುದ್ದ ಶಾಂತಿ,ಅಹಿಂಸೆ,ಮಾನವ ಪ್ರೀತಿ ಕಲಿಸಿಕೊಟ್ಟವ,ನಾವೋ ದಿನಂಪ್ರತಿ ದುಡಿದು ತಿನ್ನುವವರ ರಕ್ತದಲ್ಲಿ ಬದುಕುವವರು,ಎಲ್ಲಿಯ ಬುದ್ಧ?ಎಲ್ಲಿಯ ನಾವು!?ಜಾಬೀರ್’ಗೆ ನಗು ಬಂತು,ಹಿಂಸೆಯಂದರೇನು ಒಳ ಮನಸ್ಸು ತರ್ಕಕ್ಕೆ ತನ್ನ ತೊಳಲಾಟವನ್ನು ಇಟ್ಟಿದ್ದವು,ಕೊಲೆ,ದರೋಡೆ,ಅತ್ಯಾಚಾರವೇ ಹಿಂಸೆಯೇ!?
ಇಲ್ಲ,ಅವೆಲ್ಲ ದೈಹಿಕ ಹಿಂಸೆಯಾದರೆ ನಾವು ಮಾಡೋದು ಮಾನಸಿಕ ಹಿಂಸೆ,ಈ ಹುಣ್ಣಿಗೆ ಮುಲಾಮು ಕೂಡ ಇಲ್ಲ,..!.
ಆದರೆ ನಮಗೇನು!?ಜಾಬೀರ್ ಇನ್ನೂ ತನ್ನ ಮನಃಪಟಲದ ಗೊಂದಲಕ್ಕೆ ಸರಿ ಉತ್ತರ ಸಿಕ್ಕಿರದೆ ಒದ್ದಾಡುತ್ತಿದ್ದ,”ಹೌದು,ನಮಗೇನು,ನಮ್ಮದೇನೂ ಹಿಂಸೆಯಾಗಲ್ಲ,ದುಡಿಮೆ ಅಷ್ಟೇ ತಾನೇ?ನಮ್ಮ ಕೆಲಸ,ನಮ್ಮ ನೀಯತ್ತು ಕಂಪೆನಿಗೆ ತೋರಿಸಿದರೆ ನಮಗೆ ಇಂತಿಷ್ಟು ಕಮಿಶನ್ ಕೊಡುತ್ತೆ,ಅಷ್ಟಕ್ಕೂ ಫೈನಾನ್ಸ್ ಲೋನ್ ತೆಗಿಯೋರ ಮೂರ್ಖತನವಲ್ಲವೇ!?
ಏನೂ ಶ್ಯೂರಿಟಿ ಇಲ್ಲದೇ,ಹಳೆ ಗಿರಾಕಿಯ ಸಹಿ ಪಡೆದೋ, ಕೇವಲ ಒಂದು ಸಾವಿರ ಬ್ಯಾಂಕ್ ಬ್ಯಾಲನ್ಸ್ ಇಟ್ಟು ಪಡೆದ ಚೆಕ್ ಎಲೆಯನ್ನು ಕಂಡು ಲೋನ್ ವ್ಯವಸ್ಥೆ ಮಾಡುವುದಾದರೆ,ಅವರಿಗೆ ಎಲ್ಲಿ ಹೋಗಿರುತ್ತೆ ಬುದ್ದಿ,ಸುಲಭದಲ್ಲಿ ಲೋನ್ ಸಿಗುತ್ತೆ ಕಡಿಮೆ ಡೌನ್ ಪೇಮೆಂಟ್ ಹಾಕಿ ಗಾಡಿ ಹೊಡೆದು,ಈಗ ತಿರುಗಿ ಕಟ್ಟುವಾಗ ಹೇಡಿಗಳಂತೆ ಓಡಿ ಆಡೋದು ಅವರದೇ ತಪ್ಪು ಅದರಲ್ಲಿ ಫೈನಾನ್ಸ್’ನವರ ತಪ್ಪೇನೂ ಇಲ್ಲ..!
ಯಾವ ನೋಟೀಸ್’ಗೂ ಜಗ್ಗದ ಮೇಲೆ ನಮ್ಮಂತಹ ಕಮಿಶನ್ ಜಪ್ತಿದಾರರ ಮೋರೆ ಹೋಗೋದು ಸರಿ ತಾನೇ!?
ಒಂದು ನಿಕಟವಾದ ನಿರ್ಧಾರಕ್ಕೆ ಬರಲಾಗದೇ ಚಡಪಡಿಸ ತೊಡಗಿದ ಜಾಬೀರ್
ಎರಡು ಕೈ ಬಿಟ್ಟು ಚಲಿಸುತ್ತಿರುವ ಗಾಡಿಯಲ್ಲೇ ಕಿಶೋರ್ ಸಿಗರೇಟೊಂದನ್ನು ಹೊತ್ತಿಸಿದ ಹಾಗೆಯೇ ಓಮ್ನಿ ಮೆಲ್ಕಾರ್ ಅನ್ನೋ ಸಣ್ಣ ಪಟ್ಟಣವನ್ನು ಸಾಗಿ ಹೋಗುತ್ತಿತ್ತು,.!
“ಈ ಬುಧ್ದನ ಚಿತ್ರ ಹೇಗೆ ಇದರಲ್ಲಿ ಬಂತು,?ಜಾಬೀರ್ ಕುತೂಹಲದಿಂದ ಕೇಳಿದ ಕಾರಣ ಕಿಶೋರ್ ಯಾವ ದೇವಸ್ಥಾನಕ್ಕೂ ದೇವರಿಗೂ ಕೈ ಮುಗಿಯದವ,
“ಓ ಅದುವ ಈ ಓಮ್ನಿ ಕೊಡಗಿನ ಕುಶಾಲನಗರದಿಂದ ಒಬ್ಬರಿಂದ ಜಪ್ತಿ ಮಾಡಿರೋದು,ನನಗೆ ಆಗ ಹಳೆ ಬೈಕ್ ಇತ್ತು ಅದನ್ನ ಪೈನಾನ್ಸಿನವರಿಗೆ ಕೊಟ್ಟು ಇದನ್ನ ಸ್ವಲ್ಪ ಹೆಚ್ಚು ಹಣ ಕೊಟ್ಟು ತಗೊಂಡೆ,ಅದರಲ್ಲಿ ಫ್ರೀ ಸಿಕ್ಕಿರೋದು,ಇರಲಿ ಬಿಡು ನನಗೇನು ಅಂತ ಇಟ್ಟಿದ್ದೇನೆ,ಅದಿರಲಿ ನೀ ಯಾಕೆ ಕೇಳಿದೆ!?ಅದನ್ನು ತೆಗೆದು ನೀ ಯಾವುದಾದರೂ ದರ್ಗಾ ಪೋಟೋ ಇಡ್ತೀಯಾ?ಎರಡು ಕೈ ಬಿಟ್ಟು ಒಮ್ಮೆ ನಕ್ಕು ಪುನಃ ಯಥಾಸ್ಥಿತಿಗೆ ಬಂದ ಕಿಶೋರ್.
“ಹಾಗಲ್ಲ ಕಿಶೋರ್,ಬುದ್ಧ ಶಾಂತಿ ಅಹಿಂಸೆ ಕಲಿಸಿದವನು,ನಾವು ಹಿಂಸೆ ಮಾಡುವವರು,ನಮ್ಮ ವಾಹನದಲ್ಲಿ ಬುದ್ಧನ ಪೋಟೋ ಸಮಂಜಸವೇ ಅನ್ನೋ ತರ್ಕದಲ್ಲಿದ್ದೆ ..
“ಅಯ್ಯೋ ಹಿಂಸೆ,ಅನ್ಯಾಯನ!?”ಕಿಶೋರ್ ತೊದಲಿದ.
“ಅಲ್ವಾ ಮತೆ,!?”
“ಹೇಗೆ?”
“ಆಲೋಚಿಸು,ಡ್ಯೂ ಕಟ್ಟದೋರನ್ನು,ನಾವೇನು ಮಾಡುತ್ತೇವೆ!?”ಒಂದು ಪ್ರಶ್ನೆ ಕಿಶೋರ್’ಗೆ ಎಸೆದೆ..
ಆಗಷ್ಟೆ ಒಂದು ಸಿಗರೇಟ್ ಮುಗಿಸಿದ ಆಸಾಮಿ ಸ್ವಲ್ಪ ವಿಚಲಿತನಾದವನಂತೆ ಇನ್ನೊಂದು ಹೊತ್ತಿಸಿದ!.
“ಅಲ್ಲ ಮಾರಾಯ,ನೀ ಯಾವುದನ್ನು ಹಿಂಸೆ ಅನ್ನುತ್ತಿದ್ದೀಯಾ!?.ಕಿಶೋರ್ ಏನೋ ವಿಹ್ವಲತೆಯಿಂದ ಕೇಳಿದ,ಕೈಯಲ್ಲಿ ಇರುವ ಸ್ಟೇರಿಂಗ್ ಎಡ ಬಲಕ್ಕೆ ತಿರುಗಿ ಕೊಂಡಿತ್ತು,ಕಲ್ಲಡ್ಕವನ್ನು ದಾಟಿ ಹೋದ್ದರಿಂದ ರಸ್ತೆಯೆನೋ ಚೆನ್ನಾಗಿತ್ತು ಯಾವುದೇ ಹೊಂಡ,ಗುಂಡಿ ಇಲ್ಲದ ರಸ್ತೆಯಾದ್ದರಿಂದ ತೊಯ್ದಾಟಕ್ಕೆ ಅಷ್ಟೇನು ಗಂಭೀರತೆ ಇರಲಿಲ್ಲ,ಪ್ರಶ್ನೆ ಕೇಳಿದ ಕಿಶೋರನ ಕಣ್ಣು ಈಗ ಪೂರ್ಣ ರಸ್ತೆಯಲ್ಲೇ ನೆಟ್ಟಿತ್ತು,ಇನ್ನೊಮ್ಮೆ ಕಳೆದ ಅನುಭವ ಆಗುವುದು ಬೇಡ ಅನ್ನುವ ತೀರ್ಮಾನಕ್ಕೆ ಬಂದಿದ್ದ ಆತ..
“ಅದೇ ನಾವು ಡ್ಯೂ ಕಟ್ಟದ ಜನರಿಗೆ ಮಾಡೋದು ಹಿಂಸೆ ತಾನೆ.”!?
“ಖಂಡಿತಾ ಇಲ್ಲ ಮಾರಾಯ.ಅವರು ಡ್ಯೂ ಬಾಕಿ ಇಟ್ಟು,ಪೈನಾನ್ಸ್ ನೋಟೀಸ್ ಬಿಟ್ಟ ಮೇಲೂ ಕಟ್ಟದಿದ್ದಾಗ ನಾವು ಕಾರ್ಯಪ್ರವೃತ್ತರಾಗೋದು,ಇನ್ನೊಂದು ನಾವು ನಮ್ಮ ಕೆಲಸ ಅಂದರೆ ನಮ್ಮ ಹಸಿವನ್ನು ನೀಗಿಸೋ ಊಟದ ತಟ್ಟೆ ಈ ಕೆಲಸ ಇದನ್ನು ನೀ ಹಿಂಸೆ ಅನ್ನೋದು ಸರಿಯಲ್ಲ,”ಕಿಶೋರ್ ಹೇಳುವುದರಲ್ಲಿ ನ್ಯಾಯ ಇತ್ತು ಆದರೂ ಜಾಬೀರನಿಗೆ ಸ್ಪಷ್ಟ ಸಮಾಧಾನ ಇಲ್ಲ,ಮುಂದುವರಿಯುತ್ತಾ..
“ಸರಿ,ನೀ ಹೇಳೋದು ಸರಿನೇ ಇದೆ,ಅವರು ಕಷ್ಟಕ್ಕೆ ಫೈನಾನ್ಸ್ ಸಾಲ ತೆಗೆದುಕೊಳ್ಳೊತ್ತಾರೆ,ಅಲ್ಲದೇ ಅವರೆಲ್ಲ ತೆಗೆಯುವ ವಾಹನದಲ್ಲಿ ತಮ್ಮ ಹೊಟ್ಟೆ ಹೊರೆಯುವ ಕೆಲಸಾನೇ ಮಾಡೋದು ಅಲ್ವಾ,ಈಗ ಉದಾ:-ರಿಕ್ಷಾ,ಆಪೆ(Ape)ಚಿಕ್ಕ ಗೂಡ್ಸ್ ರಿಕ್ಷಾ,ಈ ತರ ಏನಾದ್ರು ಪೈನಾನ್ಸ್’ಗೆ ತೆಗೆದು ಕೊಂಡು ಅದರಲ್ಲಿ ತಮ್ಮ ಜೀವನದ ಕನಸಕಂಡು,ದಿನಂಪ್ರತಿ ದುಡಿದು,ಎಲ್ಲವೂ ಮನೆಯವರ ಊಟಕ್ಕೆ ಸರಿಯಾಗುವಾಗ ತಿಂಗಳಲ್ಲಿ ಈ ಅಧಿಕ ಬಡ್ಡಿಯ ಡ್ಯೂ ಹೇಗೆ ಕಟ್ಟುತ್ತಾರೆ!?
ಸ್ವಲ್ಪ ಸಾವರಿಸುತ್ತಾ ಮುಂದುವರಿದ ಜಾಬೀರ್”ಅಲ್ಲದೇ,ಈ ಫೈನಾನ್ಸ್’ನವರು ನಮಗೆ ಕೋಡೋ ಕಮಿಷನ್ ಅವರ ಕೈಯಿಂದಾನೆ “ನಿಶ್ಚಿತ ದಿನಾಂಕ ಮೀರಿದ ಮೇಲೆ ಅಧಿಕ ಬಡ್ಡಿ”ಅನ್ನೋ ಅವರ ಕಾನೂನಿನಿಂದ ಕೊಡುವ ದುಡ್ಡು,ಸರಿಯಾಗಿ ಆಲೋಚನೆ ಮಾಡು,ಆ ಮಧ್ಯಮ ವರ್ಗದವ ಮೂವತ್ತೋ ನಲವತ್ತೋ ಸಾವಿರ ಸಾಲ ಶೂಲ ಮಾಡಿ ಡೌನ್ ಪೇಮೆಂಟ್ ಹಾಕಿ ಅದರಲ್ಲಿ ಎರಡು ಮೂರು ತಿಂಗಳು ದುಡಿದು ಏನು ಸಿಗಬಹುದು,ಹೋಗ್ಲಿ ಮೂರು ತಿಂಗಳಲ್ಲಿ ಡೌನ್ ಪೇಮೆಂಟ್ ಹಾಕಿದ ಆ ಮೊತ್ತದಷ್ಟಾದರೂ ಲಾಭ ಗಳಿಸಬಲ್ಲನೇ!?ಇಲ್ಲ,ಖಂಡಿತಾ ಅಸಾಧ್ಯ,ಈ ಎರಡು ಮೂರು ತಿಂಗಳುಗಳಲ್ಲೇ ನಾವು ಅವನ ವಾಹನ ಜಪ್ತಿ ಮಾಡೋದರಿಂದ ಪೈನಾನ್ಸಿನವರಿಗೆ ಎಷ್ಟು ಲಾಭ!?ಲೆಕ್ಕ ಹಾಕು ನನಗಂತೂ ಇದು ಮಾನಸಿಕ ಹಿಂಸೆಯ ಪರಮಾವಧಿಯೆಂದೇ ತೋಚುತ್ತಿದೆ,ನಾವು ಇದ್ಯಾವುದರ ಪರಿವೇ ಇಲ್ಲದೇ ಜಬರದಸ್ತ್ ಮಾಡಿ ಅವರ ಕೈಯಿಂದ ಕಿತ್ತುಕೊಂಡು ಬರುತ್ತೇವೆ ಇಲ್ಲವೇ ಬೆದರಿಸಿ ತಾಕೀತು ಮಾಡಿ,ಅವರ ನೆಮ್ಮದಿಯನ್ನು ಹಾಳು ಮಾಡಿ ಬರುವ ಈ ದುಡಿಮೆ ಹಿಂಸೆಯಲ್ಲದೇ ಮತ್ತಿನ್ನೇನು.!?
ಓಮ್ನಿ ಸೂರಿಕುಮೇರ್ ದಾಟಿರಬಹುದು ಅನಿರೀಕ್ಷಿತ ಬ್ರೇಕ್’ಗೆ ಜಾಬೀರನ ಸ್ಥಾನಪಲ್ಲಟವಾದಂತೆ,ಅಲ್ಲದೇ ದಿಗಿಲುಗೊಂಡವನಂತೆ,.
“ಏನಾಯ್ತು!?”
“ಏನಿಲ್ಲ” ಏನೋ ಅಸ್ತವ್ಯಸ್ತವಾದಂತೆ ಭಾಸವಾಯಿತು ಕಿಶೋರನಿಗೆ,ರಸ್ತೆಯಿಂದ ಓಮ್ನಿಯನ್ನು ಬದಿಗೆ ತಂದು,ಹೊರಗಿಳಿದು ತನ್ನ ದಪ್ಪ ಬೆರಳುಗಳಿಂದ ಓಮ್ನಿಯ ಡೋರ್ ಹಾಕಿದ
“ನೀ ಹೇಳೋದೆಲ್ಲ ಸರಿ ಇದೆ,ಆದರೆ…..!?”
“ಆದರೆ!?”
“ಆದರೆ?”ಕಿಶೋರ್ ಪುನರುಚ್ಚರಿಸಿದ.
“ಏನು ಮತ್ತೆ ಆದರೆ!?ಜಾಬೀರ್ ಕೂಡ ಗೊಂದಲದಲ್ಲಿಯೇ ಇದ್ದಾನೆ.
“ನಾವು ಅವರಿಗೆ ಮಾನಸಿಕ ಹಿಂಸೆಯನ್ನು ಕೊಡುವುದೆಂದು ನನಗೆ ಅನಿಸಿಲ್ಲ,ನನ್ನ ಕೆಲಸ ಮಾತ್ರ ಮಾಡ್ತಿದೀನಿ ಅನ್ನೋದು ನನ್ನ ನಿಲುವಾಗಿತ್ತು,ನಿನ್ನ ಮಾತು ಕೇಳುವಾಗ ಹೌದೆನಿಸಿತು,ಒಂದಿನಿತೂ ಅವರ ಮಾತು ಕೇಳುವ ಸಂಯಮ,ಸಾವಧಾನ ನಮ್ಮಲ್ಲಿರಲ್ಲ,ನಿಜಕ್ಕೂ ಅವರೆಲ್ಲ ಶೋಕಿಗೆ ಪೈನಾನ್ಸ್ ಸಾಲ ಮಾಡುವವರಲ್ಲ,ನಮ್ಮಂತೆಯೇ ಕಷ್ಟ ಜೀವನದ ಬಂಡಿ ದೂಡ ಬೇಕು,ಬಿರುಗಾಳಿ ಬಂದರೂ ಅದಕ್ಕೆ ಒಡ್ಡಿಕೊಂಡು ಸಂಸಾರ ನೌಕೆಗೆ ನಾವಿಕರಾಗಬೇಕು,ಅವರ ಜೀವನದಲ್ಲಿ ನಾವು ವಾಣಿಜ್ಯ ಮಾರುತಗಳಾಗುತ್ತಿದ್ದೆವೋ ಅನ್ನೋ ಕೀಳರಿಮೆ ಕಾಡುತ್ತಿದೆ ಜಾಬೀರ್..!ಆದರೆ,ನಮ್ಮಿಂದ ಏನು ಸಾಧ್ಯ!?ಹೆಚ್ಚೆಂದರೆ ಮನುಷ್ಯತ್ವ,ಮಾನವೀಯತೆ ದೃಷ್ಟಿಯಿಂದ ನಮ್ಮ ಕೆಲಸ ತ್ಯಜಿಸಿ ದೂರ ಹೋಗ್ಬೇಕೆ ವಿನಃ ಫೈನಾನ್ಸ್’ನವರಿಗೆ ಏನೂ ಹೇಳಲಾಗದು,ನಾವಿಲ್ಲಾಂದ್ರೆ ಇನ್ನೊಬ್ಬ ಈ ಕೆಲಸ ಮಾಡೇ ಮಾಡುತ್ತಾನೆ,ಆದರೆ ನೈತಿಕತೆಯನ್ನು ಕತ್ತಲಲ್ಲಿ ದೂಡಿ,ತಿನ್ನುವ ಅನ್ನ ಅರಗಿಸಿದ್ದೇವೆ ಅನ್ನೋದು ನೆನೆಯುವಾಗ ಈಗ ಪಶ್ಚತಾಪ ಟಿಸಿಲೊಡೆಯುತಿದೆ,ಹೇಳು ನಮ್ಮಿಂದ ಏನು ಸಾಧ್ಯ,ಮುಂದೇನು ಮಾಡಬಹುದು..!
ಅವನ ಮಾತುಗಳನ್ನು ತನ್ನ ಕರ್ಣಪಟಲದಲ್ಲಿ ಶ್ರವಿಸುವಾಗ ಜಾಬೀರ್ ಅವನ ಕಣ್ಣಿಗೆ ಕಣ್ಣಿಟ್ಟು ನೇರ ನೋಡಿದ್ದ,ಮಾನವೀಯತೆಯು ನಿಜವಾಗಿ ಕಿಶೋರನಲ್ಲಿ ಭುಗಿಲೆದ್ದಿತ್ತು,ಗಾಂಜ ಹೊಗೆಯನ್ನು ಮೊದಲ ಬಾರಿ ಎಳೆದಾಗ ಮೆದುಳಿನ ಕಾರ್ಯವೈಖರಿ ಒಂದು ಕ್ಷಣಕ್ಕೆ ಸ್ಥಬ್ಧವಾಗಿ ಎಲ್ಲರೂ ವೇದಾಂತಿ ಆಗುತ್ತಾರಂತೆ,ಅದೇ ರೀತಿ ಜಾಬೀರನ ಮಾತು ನೇರ ಮೆದುಳಿಗೆ ನಾಟಿತ್ತು,ಕಿಶೋರ ಈಗ ಅಮಲಿನಲ್ಲಿದ್ದ,ಸಿದ್ಧಾರ್ಥನೂ ಕೂಡ ತನ್ನ ಮನಸ್ಸನ್ನು ಸರಿಯಾದ ರೀತಿಯ ಯೋಚನೆಗೆ ಒರೆಹಚ್ಚಿದ್ದರಿಂದ ಬುದ್ಧನಾದ..!
“ನಾನೇನು ಹೇಳಲಾರೆ,ನನ್ನ ಆರ್ಥಿಕ ಸಮಸ್ಯೆ ನಿನಗಿಂತ ಎಷ್ಟೋ ಮೇಲು ಹದಗೆಟ್ಟಿದೆ,ಆದರೆ ನೈತಿಕತೆ!?ಮಾನಸಿಕ ನೆಮ್ಮದಿ!?ಬರೀ ಹಣದಿಂದ ಇವೆಲ್ಲ ಸಿಗಲಾರದು,ಹಣದ ವ್ಯಾಮೋಹಕ್ಕೆ ಈ ಕೆಲಸ ನನ್ನಿಂದ ಮಾಡಲಾಗದು,ಅದೂ ಬುದ್ಧನಿರುವ ಈ ಗಾಡಿಯಲ್ಲಿ ಕೂತು..! ಕಿಶೋರನಿಗೆ ಇವನಿಗೆಲ್ಲೋ ಜ್ಞಾನೋದಯವಾಯಿತೇ,ಅನ್ನೋ ಸಂಶಯ,ತನಗೂ ಇರುವ ಗೊಂದಲ ಯಾರಲ್ಲಿ ಪರಿಹಾರ ಕೇಳೋದು!? ನಿಜವಾಗಿ ನಾವು ಮಾಡೋ ಕೆಲಸ ವೃತ್ತಿಯೆಂದು ಬಂದರೆ ಸರಿಯಾದರೂ ಮಧ್ಯಮ ವರ್ಗದ ಬಡವರಿಗೆ ಇದು ಖಂಡಿತಾ ಮಾನಸಿಕ ಹಿಂಸೆ,ನಮ್ಮ ಪೋನ್ ಒಂದು ಸಲ ಹೋದರೆ ಹೊಟ್ಟೆ ತೊಳಸಿದಂತೆ ಅನುಭವವಾಗುತ್ತೆ ಅವರಲ್ಲಿ,ಎಲ್ಲವೂ ಸ್ಮೃತಿಪಟಲದಲ್ಲಿ ಒಮ್ಮೆಗೆ ವಿಸ್ಪೋಟಿಸಿತ್ತು,ಏನೋ ಗಟ್ಟಿ ನಿರ್ಧಾರ ಮಾಡಿದವನಂತೆ,
“ಹತ್ತು ಗಾಡಿ,ಇವತ್ತು ಒಂದು ದಿನ ಕೊನೆ ಜಪ್ತಿ,ಇನ್ಯಾವತ್ತೂ ಈ ಕೆಲಸ ಮಾಡಲಾರೆ,ಇಲ್ಲಿಗೆ ಮುಗಿಸಿ, ಎಲ್ಲಾದರೂ ಇಬ್ಬರಿಗೆ ಬೇರೆ ಕೆಲಸ ವ್ಯವಸ್ಥೆ ಮಾಡುವೆ” ಎನ್ನುತ ಓಮ್ನಿ ಡೋರ್ ಓಪನ್ ಮಾಡಿ ಹೋಗಲು ಅನುವಾದ,
ಮುಂದೆಲ್ಲ ಬರೀ ಮೌನ,ಇಬ್ಬರಲ್ಲೂ ಮಾತಿಲ್ಲ,ತರಹೇವಾರಿ ಆಲೋಚನೆಗಳು ಮನುಷ್ಯನಲ್ಲಿ ಅಸಹಜತೆಯ ಗೊಂದಲ ಹುಟ್ಟಿದ ಕೂಡಲೇ ತೆಗೆದುಕೊಳ್ಳುವ ತೀರ್ಮಾನಗಳು ಸರಿಯೋ, ತಪ್ಪೋ,ಕಿಶೋರನಂತೂ ಒಂದು ನಿರ್ಧಾರಕ್ಕೆ ಬಂದಿದ್ದ,ಜಾಬೀರ್ ಕೂಡ ಅದನ್ನು ಅನುಮೋದಿಸಿದ್ದ,ಆದರೂ…..
ಓಮ್ನಿ ಇನ್ನೇನು ಮಾಣಿ ಸರ್ಕಲ್ ಹಾಕಿ ಪುತ್ತೂರು ರಸ್ತೆ ಹಿಡಿಯಬೇಕಿತ್ತು,ಉಪ್ಪಿನಂಗಡಿ ಕಡೆಯಿಂದ ಬಂದ ವೇಗದೂತ ಬಸ್ಸೊಂದು ಜಾಬೀರನ ಸೈಡಿನ ಹಿಂದಿನ ಡೋರಿಗೆ ಡಿಕ್ಕಿಯಾದದ್ದು ಒಂದು ಗೊತ್ತು.
ಹೊಡೆತದ ರಭಸಕ್ಕೆ ಓಮ್ನಿಯ ಎರಡು ಪಲ್ಟಿಯಾಗಿತ್ತು,ಈಗಷ್ಟೇ ಜ್ಞಾನೋದಯವಾಗಿದ್ದ ಇಬ್ಬರು ವಾಹನದೊಳಗೇ ಇದ್ದರು, ಬುದ್ದ ಮಾತ್ರ ಮಂದಸ್ಮಿತ ಚಹರೆಯಿಂದ ಮುಗುಳ್ನಗುತ್ತಿದ್ದ…
–ನಿಝಾಮ್ ಗೋಳಿಪಡ್ಪು
Facebook ಕಾಮೆಂಟ್ಸ್