ಕಳೆದ ದಸರಾದಲ್ಲಿ ಕಾಶೀ ವಿಶ್ವನಾಥನ ದರ್ಶನ ಪಡೆದಿದ್ದ ನಾವು ಈ ಬಾರಿಯ ದಸರಾ ರಜೆಯಲ್ಲಿ ರಾಮೇಶ್ವರ ಹೊರಡುವ ಯೋಜನೆ ಹಾಕಿಕೊಂಡಿದ್ದೆವು. ಕಾಶೀ ಹೋಗಿ ಬಂದ ವರುಷದೊಳಗೆ ರಾಮೇಶ್ವರಕ್ಕೆ ಹೋಗಬೇಕೆಂಬ ಪ್ರತೀತಿ ನಮ್ಮಲ್ಲಿದೆ ಮತ್ತು ಕಾಶೀಯಿಂದ ತಂದ ಗಂಗಾಜಲದಿಂದ ಶ್ರೀ ರಾಮನಾಥನಿಗೆ ಅಭಿಷೇಕ ಮಾಡಿಸಬೇಕೆಂಬ ಪ್ರತೀತಿ ಕೂಡ. ದಸರಾ, ವಾರಂತ್ಯ ಮತ್ತು ಗಾಂಧೀ ಜಯಂತಿಗಳಿಂದ ಸಾಲುಸಾಲು ರಜೆ ದೊರಕಿದ ಕಾರಣ ರಾಮೇಶ್ವರದ ಜೊತೆಗೆ ಮಧುರೈ, ಕನ್ಯಾಕುಮಾರಿ, ತಿರುವನಂತಪುರಂ ಮತ್ತು ಪಳನಿ ನೋಡಿಕೊಂಡು ಬರುವುದಕ್ಕೆ ಯೋಜನೆ ಸಿದ್ಧವಾಗಿತ್ತು.
ನಮ್ಮ ಊರಾದ ದಾವಣಗೆರೆಯಿಂದ ಮಧುರೈಗೆ ವಾರದಲ್ಲಿ 3ದಿನ ರೈಲು ಇದೆ. ಆದರೆ ಒಂದು ತಿಂಗಳ ಮೊದಲೇ ಪ್ರಯತ್ನಿಸಿದರೂ ಟಿಕೇಟ್‍ಗಳು ಸಿಗಲಿಲ್ಲ. ಮಧುರೈವರೆಗೂ ರೈಲಿನಲ್ಲಿ ಹೋಗಿ ಅಲ್ಲಿಂದ ಗಾಡಿ ಮಾಡಿದರೆ ಖರ್ಚು ಉಳಿಯುತ್ತದೆ ಮತ್ತು ಆಯಾಸವೂ ಆಗುವುದಿಲ್ಲ ಎಂದುಕೊಂಡಿದ್ದೆವು. ರೈಲಿನ ಟಿಕೆಟ್‍ಗಳು ಸಿಗದೇ ಇದ್ದಾಗ ಟಿಟಿ ಬುಕ್ ಮಾಡಲು ಶುರು ಮಾಡಿದೆವು. ನಮ್ಮೂರಿನಿಂದ ಮಧುರೈ 750 ಕಿಮೀ ದೂರದಲ್ಲಿದೆ. ತುಂಬಾ ದೂರದ ಪ್ರಯಾಣ, ಇಲ್ಲಿಂದ ಟಿಟಿ ಬೇಡ ಬೆಂಗಳೂರಿನಿಂದ ಟಿಟಿ ಮಾಡಿ ಎಂದು ಹಿರಿಯರು ಸಲಹೆ ಕೊಟ್ಟರು. ಅಳೆದು ತೂಗಿ ಹಣದ ಲೆಕ್ಕಾಚಾರವೆಲ್ಲಾ ಮಾಡಿದ ಮೇಲೆ ಕೊನೆಗೂ ನಮ್ಮೂರಿನಿಂದ ಗಾಡಿ ಮಾಡಿದೆವು. ಅಂದುಕೊಂಡಂತೆ ದಸರಾ ಹಬ್ಬವನ್ನು ಮುಗಿಸಿಕೊಂಡು ಒಂದೇ ಕುಟುಂಬದ 12 ಜನರ ತಂಡ ಶನಿವಾರ ಮಧ್ಯಾಹ್ನ ಹೊರಟೆವು. ಎರಡು ದಿನಕ್ಕಾಗುವಷ್ಟು ರೊಟ್ಟಿ, ಒಣ ಚಪಾತಿ, ಚಟ್ನಿಪುಡಿ, ಅಡಕೆತಟ್ಟೆಯಲ್ಲಿ ಮೊಸರನ್ನ ಮತ್ತಿತರ ಕುರುಕಲು ತಿಂಡಿಗಳನ್ನು ಕಟ್ಟಿಕೊಂಡಿದ್ದೆವು.
ರಾತ್ರಿ ಹೊಸೂರು ರಸ್ತೆ ಬಳಿಯಿರುವ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ರೆಸ್ಟೋರೆಂಟ್ ಹತ್ತಿರ ನಿಲ್ಲಿಸಿ ಊಟ ಮಾಡಿದೆವು. ನಾವು ಊಟ ಮಾಡಿ ಟಿಟಿ ಹತ್ತಿ ನೋಡಿದರೆ ನಮ್ಮ ಚಾಲಕ ಗೊರಕೆ ಹೊಡೆಯುತ್ತಿದ್ದ. ರಾತ್ರಿ ಪ್ರಯಾಣವಾದ್ದರಿಂದ ಮಲಗಲಿ ಪಾಪ ಎಂದು ನಾವು ಒಂದು ಗಂಟೆ ಮಾತನಾಡಿಸಲಿಲ್ಲ. ನಂತರ ವಿಚಾರಿಸಿದರೆ, ಹಿಂದಿನ ದಿನವೂ ಪ್ರವಾಸಕ್ಕೆ ಹೋಗಿದ್ದೆ, ಬಂದ ದಿನ ರಾತ್ರಿ ಕೇವಲ 4 ಗಂಟೆ ನಿದ್ದೆ ಮಾಡಿದ್ದು ಎಂದ! ಅಲ್ಲಿಂದ ಹೊರಟ ಮೇಲೆ ಎಲ್ಲರೂ ನಿದ್ರೆಗೆ ಜಾರಿದ್ದರು, ಅರ್ಧರಾತ್ರಿಯಲ್ಲಿ ಎಚ್ಚರವಾದಾಗ ನೋಡಿದರೆ ರಸ್ತೆ ಬದಿ ಟಿಟಿ ನಿಲ್ಲಿಸಿ ಚಾಲಕ ಮತ್ತೆ ನಿದ್ರಿಸುತ್ತಿದ್ದ, ಅವನು ಎದ್ದ ಮೇಲೆ ಕೇಳಿದರೆ ರಾತ್ರಿ ಮಲಗಿದ್ದು 2 ಗಂಟೆ ಮಾತ್ರ ಅಂದ!! ಬೆಳಗಿನ ಜಾವ ಮತ್ತೊಂದು ಸ್ಥಳದಲ್ಲಿ ಟೀ ಕುಡಿಯಲು ನಿಲ್ಲಿಸಿದಾಗ ಮತ್ತೆ ಮಲಗಿದ, ಕೇಳಿದರೆ ರಾತ್ರಿ ಮಲಗಿಯೇ ಇಲ್ಲವೆಂದು ಹೇಳುತ್ತಾನೆ ಅಂದುಕೊಂಡು ಸುಮ್ಮನಾದೆವು. ದೂರದ ಪ್ರಯಾಣಕ್ಕೆ ಊರಿನಿಂದ ಟಿಟಿ ಬೇಡವೆಂದರೂ ಮಾಡಿದ್ದರಿಂದ ಹಿರಿಯರ ‘ಆಶೀರ್ವಾದ’ ಚೆನ್ನಾಗೇ ಸಿಗುತ್ತಿತ್ತು. ಹೇಗೋ ರಾತ್ರಿಯಲ್ಲಿ ಅವನ ಬಳಿ ಮಾತನಾಡುತ್ತ ಹಾಡಗಳನ್ನು ಕೇಳುತ್ತಾ ಮಧುರೈ ತಲುಪಿದಾಗ ಬೆಳಗ್ಗೆ 6.30.
ಆನ್‍ಲೈನಲ್ಲಿ ಕೊಠಡಿ ಕಾಯ್ದಿರಿಸಲು ತುಂಬಾ ದುಬಾರಿ ಮತ್ತು ದೇವಸ್ಥಾನದ ಬಳಿ ತುಂಬಾ ಲಾಡ್ಜಗಳು ಸಿಗುತ್ತವೆಂದು ತಮಿಳು ಸ್ನೇಹಿತರು ಹೇಳಿದ್ದರಿಂದ ಅಲ್ಲಿಯೇ ಹೋಗಿ ಕೊಠಡಿ ಹುಡುಕಲು ಶುರು ಮಾಡಿದೆವು. ಮೊದಲೇ ಭಾಷೆ ಸಮಸ್ಯೆ, ಜೊತೆಗೆ ಅಲ್ಲಿನ ಸ್ಥಳಿಯರಿಗೆ ಹಿಂದಿ ಮತ್ತು ಇಂಗ್ಲೀಷ್ ಬರುವುದಿಲ್ಲ. ಮೂಗರು ಮತ್ತು ಕಿವುಡರು ಮಾತನಾಡುವ ರೀತಿ ಕೈ ಸನ್ನೆಯಿಂದ ಮಾತನಾಡಲು ಪ್ರಾರಂಭಿಸಿದೆವು! ದೇವಸ್ಥಾನದ ಪಶ್ಚಿಮ ದ್ವಾರದ ಬಳಿಯಿದ್ದ ಬಿರ್ಲಾ ವಿಶ್ರಮದಲ್ಲಿ ಉತ್ತಮವಾದ ಕೊಠಡಿಗಳು ಕಡಿಮೆ ದರಕ್ಕೆ ದೊರಕಿದವು. ವೈಗೈ ನದಿಯ ತಟದಲ್ಲಿದೆ ಈ ಮಧುರೈ ನಗರ, ಮಳೆಯಿಲ್ಲದ ಕಾರಣ ನದಿಯು ಸಂಪೂರ್ಣ ಬತ್ತಿ ಹೋಗಿತ್ತು. ಇಲ್ಲಿರುವುದು ಸುಪ್ರಸಿದ್ಧ ಶ್ರೀ ಮೀನಾಕ್ಷಿ ಅಮ್ಮನವರ ಮಂದಿರ ಮತ್ತು ಶ್ರೀ ಸುಂದರೇಶ್ವರ ಮಂದಿರ. ಈ ದೇವಸ್ಥಾನ ಕ್ರಿಸ್ತಪೂರ್ವದಲ್ಲಿ ಕಟ್ಟಲಾಗಿದ್ದು ನಂತರದಲ್ಲಿ ಅನೇಕ ರಾಜರು ಜೀರ್ಣೋದ್ದಾರ ಮಾಡಿಸಿದ್ದಾರೆ. 14 ನೇ ಶತಮಾನದಲ್ಲಿ ಮುಸ್ಲಿಂ ದೊರೆ ಮಲಿಕ್ ಕಾಫೂರ್ ದೇವಸ್ಥಾನವನ್ನು ಕೊಳ್ಳೆ ಹೊಡೆದ ಮೇಲೆ ಕೊನೆ ಜಿರ್ಣೋದ್ದಾರ ಮಾಡಿಸಲಾಗಿದೆ. ಹತ್ತಾರು ಎಕರೆ ಜಾಗದಲ್ಲಿ ಹರಡಿರುವ ಈ ಮಂದಿರಕ್ಕೆ ನಾಲ್ಕೂ ದಿಕ್ಕುಗಳಲ್ಲಿ ಪ್ರವೇಶವಿದೆ. ಪ್ರತಿಯೊಂದು ಬಾಗಿಲಲ್ಲೂ ಎತ್ತರೆತ್ತರದ ಗೋಪುರಗಳಿವೆ, ಒಳಗಿರುವ ಪುಷ್ಕರಣಿ , ನೂರಾರು ಕಂಬಗಳಲ್ಲಿನ ಅದ್ಭುತ ಶಿಲ್ಪಕಲೆ ನೋಡುಗರನ್ನು ಚಕಿತಗೊಳಿಸುತ್ತದೆ. ದಸರಾ ಹಬ್ಬದ ಪ್ರಯುಕ್ತ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದೆವು. ಸುಂದರೇಶ್ವರ ದೇವಸ್ಥಾನದಲ್ಲೂ ಉದ್ದನೆಯ ಸಾಲಿದ್ದ ಕಾರಣ ಹಣ ಪಾವತಿಸಿ ನೇರ ದರ್ಶನಕ್ಕೆ ತೆರೆಳಿದೆವು. ವಯಸ್ಸಾದವರೂ 50/- ರೂ ಅಥವಾ 100/-ರೂ ಹಣ ಕೊಟ್ಟು ನೇರ ದರ್ಶನಕ್ಕೆ ತೆರಳುವುದು ಒಳ್ಳೆಯದು. ದರ್ಶನ ಮುಗಿಸಿ ಮಧುರೈ ಇಡ್ಲಿ ಸವಿಯೋಣವೆಂದರೆ ಒಳ್ಳೆಯ ಹೋಟೆಲ್ ಸಿಗಲಿಲ್ಲ, ಈರುಳ್ಳಿ ದೋಸೆ ಎಂದಾಗಾ “ಕನ್ನಡದ ಯಜಮಾನ ಚಿತ್ರದ” ದೃಶ್ಯದಂತೆ ಈರುಳ್ಳಿ ಮತ್ತು ದೋಸೆ ತಂದುಕೊಟ್ಟರು, ಅದೃಷ್ಟಕ್ಕೆ ಈರುಳ್ಳಿ ಕತ್ತರಿಸಿದ್ದರು!
ಮಧುರೈನಿಂದ ರಾಮೇಶ್ವರಕ್ಕೆ ತೆರಳಲು ಮೂರುವರೆ ತಾಸು ಬೇಕೆಂದು ನಮ್ಮ ‘ಗೂಗಲ್ ಗುರುಗಳು’ ಹೇಳಿದರೂ ನಮಗೆ ಹೆಚ್ಚಿನ ಸಮಯಬೇಕಾಯಿತು. ಅಲ್ಲಿಂದ ಬೇಗ ಹೊರಟು ಮಧ್ಯಾಹ್ನ ರಾಮೇಶ್ವರ ತಲಪುವ ಯೋಜನೆ ಹಾಕಿಕೊಂಡಿದ್ದೆವು ಆದರೆ ತಮಿಳುನಾಡಿನ ಕಿರಿದಾದ ರಸ್ತೆಗಳು ಮತ್ತು ಪ್ರತಿ ಹಳ್ಳಿಯ ಬಳಿ ರಸ್ತೆ ಮಧ್ಯೆ ಇಟ್ಟಿರುವ ಬ್ಯಾರಿಕೇಡಗಳು ನಮ್ಮನ್ನು ತಡವಾಗಿ ರಾಮೇಶ್ವರಕ್ಕೆ ತಲುಪಿಸಿದವು. ರಸ್ತೆ ಬದಿ ತಡೆಗೋಡೆಗಳನ್ನು ನಿರ್ಮಿಸುವ ಬದಲು ವಾಹನಗಳ ವೇಗ ತಗ್ಗಿಸಲು ಇಟ್ಟಿರುವ ಬ್ಯಾರಿಕೇಡ್‍ಗಳು ಚಾಲಕರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದವು. ಮಧುರೈಯಿಂದ ರಾಮೇಶ್ವರ ಮುಟ್ಟುವ ತನಕ ನಮಗೆ ವೈಗೈ ನದಿಯಲ್ಲಿ ಒಂದೇ ಒಂದು ಹನಿ ನೀರು ಕಾಣಲಿಲ್ಲ, ರಸ್ತೆ ಬದಿಯ ಯಾವುದೇ ಹೊಲಗಳಲ್ಲಿ ಬೆಳೆಗಳಿಲ್ಲ, ಬಾವಿಗಳೆಲ್ಲಾ ಬತ್ತಿ ಹೋಗಿವೆ.
ರಾಮೇಶ್ವರ ಒಂದು ದ್ವೀಪ, ಅಲ್ಲಿಗೆ ಹೋಗಬೇಕಾದರೆ ನಮಗೆ ಮೊದಲು ಸಿಗುವುದು 1988 ನೇ ಇಸವಿಯಲ್ಲಿ ಕಟ್ಟಿದ 2.3 ಕಿಮೀ ಉದ್ದವಿರುವ ಅನ್ನಾಯೈ ಇಂದಿರಾ ಗಾಂಧಿ ಸೇತುವೆ ಮತ್ತು ಅದರ ಪಕ್ಕದಲ್ಲಿರುವ 1915 ನೇ ಇಸವಿಯಲ್ಲಿ ಕಟ್ಟಿದ ಪಂಬಂ ರೈಲ್ವೇ ಸೇತುವೆ. ಸಮುದ್ರ ಮಧ್ಯೆದಲ್ಲಿರುವ ಈ ಎತ್ತರವಾದ ಸೇತುವೆ ಮೇಲೆ ಹೋಗುವಾಗ ಕೆಲವರಿಗೆ ಭಯವಾಗುವುದುಂಟು. ರೈಲ್ವೇ ಹಳಿ ಕಡಿಮೆ ಎತ್ತರವಿದ್ದು, ದೊಡ್ಡ ದೊಡ್ಡ ಹಡಗುಗಳು ಹೋಗಬೇಕಾದರೆ ಒಂದು ಭಾಗ ತೆರೆದುಕೊಳ್ಳುತ್ತದೆ. ರಾಮೇಶ್ವರ ತಲುಪಿದ ನಂತರ ನಾವು ಸೀದಾ ಹೋಗಿದ್ದು ಧನುಷ್‍ಕೋಡಿಗೆ. ರಾಮೇಶ್ವರದಿಂದ 15 ಕಿಮೀ ಎರಡೂ ಬದಿ ಸಮುದ್ರವಿರುವ ನೇರ ರಸ್ತೆಯಲ್ಲಿ ಸಾಗಿದರೆ ನಮಗೆ ಧನುಷ್‍ಕೋಡಿ ಸಿಗುತ್ತದೆ. ಈ ರಸ್ತೆ ನಮಗೆ ದುಬೈನ ಪಾಮ್ ದ್ವೀಪವನ್ನು ನೆನಪಿಸುತ್ತದೆ, ಯಾರೋ ಸಮುದ್ರದಲ್ಲಿ ಕಲ್ಲು ಮಣ್ಣುಗಳನ್ನು ಹಾಕಿ ಮಾಡಿದಂತಿದೆ ಈ ರಸ್ತೆ. ಪ್ರಭು ಶ್ರೀರಾಮ ಕಪಿ ಸೈನ್ಯದೊಂದಿಗೆ ಸೇರಿ ಲಂಕೆಗೆ ತೇಲುವ ಕಲ್ಲುಗಳ ಮೂಲಕ ರಾಮಸೇತು ಕಟ್ಟಿದ್ದು ಇಲ್ಲಿಂದಲೇ. ಮೂರೂ ಕಡೆ ಸಮುದ್ರಿಂದ ಕೂಡಿರುವ ಈ ಜಾಗದಲ್ಲಿ ಗಾಳಿಯ ವೇಗ ಅತೀ ಹೆಚ್ಚು. ಗಾಳಿಯ ಜೊತೆ ಅಲ್ಲಿನ ಮರಳು ಬರುವುದು ‘sand storm’ ನಂತೆ ಕಾಣುತ್ತದೆ. ಕೆಲವೇ ಕ್ಷಣಗಳು ರಸ್ತೆಯಲ್ಲಿ ನಿಂತರೂ ಮೈಮೇಲೆ ಕೇಜಿಗಟ್ಟಲೆ ಮರಳು ಸಂಗ್ರಹವಾಗುತ್ತದೆ. ಬ್ರಿಟೀಷರು ಕಟ್ಟಿದ ಹಳೆಯ ರೈಲ್ವೇ ನಿಲ್ದಾಣ ಮತ್ತು ಪಾಳುಬಿದ್ದ ಚರ್ಚಗಳಿವೆ. ಸೂರ್ಯಾಸ್ತದ ಸಮಯವಾದ್ದರಿಂದ ಆ ವಿಶಿಷ್ಟ ಅನುಭವವನ್ನು ಸವಿಯಲು ನಿಂತರೆ ಸೂರ್ಯ ನಮ್ಮಿಂದ ಮರೆಯಾಗಿ ಮೋಡದಲ್ಲಿ ಅಡಗಿ ಕುಳಿತ. ಮರಳಿ ರಾಮೇಶ್ವರಕ್ಕೆ ಬಂದ ನಾವು ಲಾಡ್ಜಗಳನ್ನು ಹುಡುಕಿದೆವು. ದೇವಸ್ಥಾನದ ಬಳಿ ಸಾಕಷ್ಟು ಲಾಡ್ಜಗಳಿದ್ದು ಎಲ್ಲಾ ಸೌಲಭ್ಯಗಳಿವೆ. ಅಲ್ಲಿನ ಲಾಡ್ಜನವರ ಬಳಿ ಹಣದ ಬಗ್ಗೆ ಚೌಕಾಸಿ ಮಾಡಿದರೆ ಒಪ್ಪುವುದಿಲ್ಲ, ಅದರ ಬದಲಾಗಿ ಇಬ್ಬರಿರುವ ಕೊಠಡಿಯಲ್ಲಿ ಮೂರು ಜನ, ನಾಲ್ಕು ಜನರಿರುವ ಕೊಠಡಿಯಲ್ಲಿ ಆರು ಜನ ಇರುವಂತೆ ಒಪ್ಪಿಸಬಹುದು.
ಬೆಳಗ್ಗೆ ಬೇಗ ಎದ್ದು 4.30 ಕ್ಕೆ ದರ್ಶನಕ್ಕೆ ಅಣಿಯಾದೆವು. ರಾವಣನ್ನ್ನ ಕೊಂದು ಬ್ರಹ್ಮ ಹತ್ಯೆಯ ಪಾಪ ಪರಿಹಾರಕ್ಕೋಸ್ಕರ ಶ್ರೀ ರಾಮನು ಇಲ್ಲಿ ಶಿವಲಿಂಗ ಸ್ಥಾಪಿಸಲು ನಿರ್ಧರಿಸಿದ ಮತ್ತು ಕೈಲಾಸ ಪರ್ವತದಿಂದ ಶಿವಲಿಂಗವನ್ನು ತರಲು ತನ್ನ ಪರಮಭಕ್ತ ಆಂಜನೇಯನಿಗೆ ಅಣತಿಯಿಟ್ಟನು. ಆದರೆ ಹನುಮಂತ ಬರುವುದು ತಡವಾದ್ದರಿಂದ ಸೀತಾ ಮಾತೆಯು ಸಮುದ್ರ ದಡದಲ್ಲಿದ್ದ ಮರಳಿನಿಂದ ಶಿವಲಿಂಗವನ್ನು ಮಾಡಿದಳು ಮತ್ತು ಅದನ್ನೇ ಪ್ರತಿಷ್ಠಾಪಿಸಿದರು. ಇಲ್ಲಿನ ಶ್ರೀ ರಾಮನಾಥ ದೇವಸ್ಥಾನಕ್ಕೂ ನಾಲ್ಕೂ ದಿಕ್ಕುಗಳಲ್ಲಿ ಎತ್ತರವಾದ ಗೋಪುರಗಳಿವೆ ಮತ್ತು ಪ್ರವೇಶವಿದೆ. ದೇವಸ್ಥಾನದ ಎದುರಿಗೆ ಸಮುದ್ರದಲ್ಲಿ ಸ್ನಾನ ಮಾಡಲು ಅಗ್ನಿ ತೀರ್ಥವಿದೆ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ 22 ತೀರ್ಥಗಳಿವೆ. ಬೆಳಗಿನ ಜಾವ 5 ರಿಂದ 6 ರವರೆಗೆ ಮಾತ್ರ ಸ್ಫಟಿಕ ಲಿಂಗದ ದರ್ಶನವಿರುತ್ತದೆ ಮತ್ತು ಇಲ್ಲಿಯೂ ಕೂಡ ವಿಶೇಷ ದರ್ಶನದ ವ್ಯವಸ್ಥೆಯಿದೆ. ಬೆಳಗ್ಗೆ 7 ಗಂಟೆಯ ನಂತರವಷ್ಟೇ ಮುಖ್ಯ ಶಿವಲಿಂಗದ ದರ್ಶನ ದೊರಕುತ್ತದೆ ಮತ್ತು ಗಂಗಾ ಅಭಿಷೇಕ ಮಾಡಿಸಬಹುದು. ದರ್ಶನ ಮುಗಿಸಿ ಬಂದು ತಯಾರಾಗಿದ್ದ ಬಿಸಿಬಿಸಿ ವಾಂಗೀಬಾತ್ ತಿಂದು ಕನ್ಯಾಕುಮಾರಿಗೆ ಪ್ರಯಾಣ ಆರಂಭಿಸಿದೆವು.
ಇಲ್ಲಿಯೂ ಸಣ್ಣ ರಸ್ತೆ ಮತ್ತದೇ ಬ್ಯಾರಿಕೇಡ್‍ಗಳು ನಮ್ಮ ಗೂಗಲ್ ಗುರುವಿನ ಮೇಲಿದ್ದ ಭರವಸೆಗಳನ್ನು ಹುಸಿಗೊಳಿಸಿದವು ☹ ರಾಮೇಶ್ವರದಿಂದ ಕನ್ಯಾಕುಮಾರಿಯವರೆಗೂ ನಾವು ಸಾಗುವುದು ಸಮುದ್ರದ ಜೊತೆಗೆ. ನಾವು ನಮ್ಮ ಪಶ್ಚಿಮ ಕರಾವಳಿ ನೋಡಿ ಈ ಪೂರ್ವ ಕರಾವಳಿಯೂ ಹಾಗೆ ಇರುತ್ತದೆಂದು ಭಾವಿಸಿದ್ದೆವು. ಆದರೇ ಈ ಭಾಗದಲ್ಲೂ ಮಳೆಯ ಅಭಾವ. ಈ ಭಾಗದಲ್ಲಿ ಉಪ್ಪು ತಯಾರಿಕೆ ಒಂದು ಮುಖ್ಯ ಉದ್ಯಮವಾಗಿದೆ. ಕುಡಿಯುವ ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಇದರ ಬಗ್ಗೆ ಊಟಕ್ಕೆ ನಿಲ್ಲಿಸಿದ್ದ ಹಳ್ಳಿಯವರ ಬಳಿ ಕೇಳಿದರೆ ಇಲ್ಲಿ ಮಳೆಯ ಪ್ರಮಾಣ ಕಡಿಮೆ ಜೊತೆಗೆ ಮಳೆಗಾಲ ಶುರುವಾಗುವುದು ತಡ ಎಂದರು. ಕುಡಿಯುವ ನೀರಿಗೆ ಸಣ್ಣ ಸಣ್ಣ ಬಾವಿಗಳನ್ನು ತೋಡಿ ಸುತ್ತಲೂ ಸೀಮೆಂಟಿನ ರಿಂಗುಗಳನ್ನು ಇರಿಸಿದ್ದಾರೆ. ಅದರಲ್ಲಿ ನೀರು ಆಗಾಗ ಬಂದು ಶೇಖರಣೆಗೊಳ್ಳುತ್ತದೆ, ಒಂದು ಬಿಂದಿಗೆ ನೀರಿಗೆ ಗಂಟೆಗಳ ಕಾಲ ಕಾಯಬೇಕು, ಹೀಗಿದೆ ದಕ್ಷಿಣ ತಮಿಳುನಾಡಿನ ಪರಿಸ್ಥಿತಿ. ಹೀಗಾಗಿಯೇ ಅಲ್ಲಿನ ಜನ ಹೆಚ್ಚಾಗಿ ವಲಸೆ ಹೋಗುತ್ತಾರೆ.
ಕನ್ಯಾಕುಮಾರಿ ನೋಡಿಕೊಂಡು ತಿರುವನಂತಪುರಕ್ಕೆ ಹೋಗೋಣ ಎಂದುಕೊಂಡಿದ್ದೆವು ಆದರೆ ತಿರುವನಂತಪುರದಲ್ಲಿ ಬೇಗ ದೇವಸ್ಥಾನ ಬಾಗಿಲು ಹಾಕುತ್ತಾರೆಂದು ಮೊದಲೇ ಅಂತರ್ಜಾಲದಲ್ಲಿ ನೋಡಿದ್ದೆವು. ಆದ್ದರಿಂದ ಕನ್ಯಾಕುಮಾರಿ ತಲುಪಿದ ಮೇಲೆ ಅಲ್ಲಿಂದ ರೈಲಿನಲ್ಲಿ ತಕ್ಷಣ ತಿರುವನಂತಪುರಕ್ಕೆ ಹೊರಟೆವು. ಅರೇ ! ಸ್ವಂತ ವಾಹನವಿದ್ದೂ ರೈಲೇಕೇ ಅಂದಿರಾ? ಅದು ಕೇರಳದ ಎಂಟ್ರೀ ಟ್ಯಾಕ್ಸ್ ಉಳಿಸುವ ಐಡಿಯಾ ! ಜೊತೆಗೆ 100 ಕಿಮೀ ಪ್ರಯಾಣಕ್ಕೆ ರಸ್ತೆ ಮಾರ್ಗದ ತಗಲುವ ಸಮಯ 4 ತಾಸು !! ರೈಲಿನಲ್ಲಿ ಎರಡೇ ಗಂಟೆಗೆ ತಿರುವನಂತಪುರ ತಲುಪಿದೆವು. ಅದು ಕೇರಳದ ರಾಜಧಾನಿಯಾದರೂ ಅಷ್ಟೊಂದು ದೊಡ್ಡ ಊರಲ್ಲ. ರೈಲ್ವೇ ನಿಲ್ದಾಣದಿಂದ ಬಹಳ ಸನಿಹದಲ್ಲಿದೆ ದೇವಸ್ಥಾನ, ಆದ್ದರಿಂದ ಒಬ್ಬರಿಗೆ 10 ರೂ/- ನಂತೆ ಆಟೋದಲ್ಲಿ ತೆರಳಿದೆವು.
ಪ್ರಪಂಚದ ಅತ್ಯಂತ ಶ್ರೀಮಂತ ದೇಗುಲವೆಂಬ ಖ್ಯಾತಿ ಪಡೆದಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನ ನೋಡಲು ನಾವೆಲ್ಲಾ ತುಂಬಾ ಉತ್ಸುಕರಾಗಿದ್ದೆವು. ದೇವಸ್ಥಾನದ ಮುಂದಿರುವ ವಿಶಾಲ ಪುಷ್ಕರಣಿ ಮತ್ತು ದೊಡ್ಡ ರಾಜಗೋಪುರ ನಮ್ಮನ್ನು ಸ್ವಾಗತಿಸುತ್ತದೆ. ದೇವಸ್ಥಾನದ ಒಳಗೆ ಪುರುಷರೆಲ್ಲರೂ ಪಂಚೆ ಧರಿಸಿಯೇ ಹೋಗಬೇಕು, ದೇವಸ್ಥಾನದ ಆವರಣದಲ್ಲಿ ಪಂಚೆಗಳು ದೊರಕುತ್ತವೆ. ದೇವಸ್ಥಾನದ ಒಳಗೆ ಯಾವುದೇ ಮೊಬೈಲ್‍ಗಳು, ಎಲೆಕ್ಟ್ರಾನಿಕ್ ವಸ್ತುಗಳು ಬಿಡುವುದಿಲ್ಲ, ಅವುಗಳನ್ನು ಸಮೀಪದ ಲಾಕರ್‍ಗಳಲ್ಲಿ ಸುರಕ್ಷಿತವಾಗಿಡಬಹುದು. 4000 ಶಿಲ್ಪಿಗಳು, 6000 ಕೆಲಸಗಾರರು, 100 ಆನೆಗಳು ಸೇರಿ ಈ ದೇವಸ್ಥಾನವನ್ನು ಕೇವಲ 6 ತಿಂಗಳಲ್ಲಿ ಕಟ್ಟಿದರು ಎನ್ನುವ ಮಾಹಿತಿ ಫಲಕವಿದೆ ! ಈ ದೇವಸ್ಥಾನದ ಇನ್ನೊಂದು ವೈಶಿಷ್ಟ್ಯವೆಂದರೆ ಇಲ್ಲಿರುವುದು ಸರಿಯಾಗಿ 365 ¼ ಕಂಬಗಳು ! ಅನಂತ ಶಯನಾಸನದಲ್ಲಿರುವ ಶ್ರೀ ವಿಷ್ಣುವನ್ನು ಮೂರು ಬಾಗಿಲುಗಳ ಮೂಲಕ ದರ್ಶನ ಪಡೆಯಬೇಕು. ನೇಪಾಳದ ಗಂಢಕಿ ನದಿಯಿಂದ ತಂದಿರುವ 12008 ಸಾಲಿಗ್ರಾಮಗಳಿಂದ ಈ ಮೂರ್ತಿಯನ್ನು ನಿರ್ಮಿಸಲಾಗಿದೆ. ಮೊದಲನೇ ದ್ವಾರದಲ್ಲಿ ವಿಷ್ಣುವಿನ ಶಿರ ಮತ್ತು ಶಿವಲಿಂಗ, ಎರಡನೇ ದ್ವಾರದಲ್ಲಿ ನಾಭಿದಿಂದ ಹೊರಬಂದಿರುವ ಬ್ರಹ್ಮ, ಶ್ರೀದೇವಿ-ಭೂದೇವಿ ಮತ್ತು ಮೂರನೇ ದ್ವಾರದಲ್ಲಿ ಪಾದದ ದರ್ಶನ ಪಡೆಯಬಹುದು.
ಅನಂತ ಪದ್ಮನಾಭನ ದರ್ಶನದ ನಂತರ ನಾವು ಮರಳಿ ಕನ್ಯಾಕುಮಾರಿಗೆ ಹೊರಡಲು ತಯಾರಾದೆವು, ಆ ಸಮಯದಲ್ಲಿ ರೈಲುಗಳಿಲ್ಲದ ಕಾರಣ ತಮಿಳುನಾಡಿನ ಬಸ್ಸಿನಲ್ಲಿ ಪ್ರಯಾಣಕ್ಕೆ ಸಿದ್ದವಾದೆವು. ಬಸ್ ನಿಲ್ದಾಣದ ಬಳಿ ಗೌರಿ ಲಂಕೇಶ್ ಬ್ಯಾನರ್ ನೋಡಿ ಅಚ್ಚರಿಯಾಯಿತು, ಬಹುಶಃ ಗೌರಿ ಹತ್ಯೆಯ ಕುರಿತಾಗಿ ಇರಬೇಕೆಂದು ಅಂದುಕೊಂಡೆವು. “ಹಳೆಯ ಕಾಲದ ಕಿಟಕಿ ಗಾಜುಗಳಿಲ್ಲದ ಬಸ್ಸಿನಲ್ಲಿ ಪ್ರಯಾಣ” ಎಂದು ಮುಖಪುಟದಲ್ಲಿ ಸ್ಟೇಟಸ್ ಹಾಕಿ ಲೈಕುಗಳು ಗಿಟ್ಟಿಸಿದ ನಂತರ ತಿಳಿಯಿತು ಈ ಬಸ್ಸುಗಳಿಗೂ ಕಿಟಕಿಯಿದೆಯೆಂದು. ರೈಲುಗಳಲ್ಲಿರುವಂತೆ ಆ ಬಸ್ಸುಗಳಲ್ಲಿ ಮೇಲೆ-ಕೆಳಗೆ ತಳ್ಳುವ ಕಿಟಕಿಗಳಿವೆ ! ಕಿಟಕಿಗಳು ಮೇಲಕ್ಕೆ ತೆರೆದಾಗ, ನಾವು ಹೊರಗಿನಿಂದ ನೋಡಿದಾಗ ಅವು ಕಾಣುವುದಿಲ್ಲ. ಕನ್ಯಾಕುಮಾರಿಗೆ ನೇರ ಬಸ್ಸುಗಳು ಕಡಿಮೆ, ಆದ್ದರಿಂದ ನಾಗರಕೋಯಿಲಿಗೆ ಹೋಗಿ ಅಲ್ಲಿಂದ ಬೇರೆ ಬಸ್ ಹಿಡಿಯುವ ಯೋಚನೆ ನಮ್ಮದಾಗಿತ್ತು. ತಿರುವನಂತಪುರದಿಂದ ಕನ್ಯಾಕುಮಾರಿಗೆ ತೆರಳಲು ರಾ.ಹೆ. 66 ಇದೆ. ಆದರೆ ಕೇವಲ 106 ಕಿಮೀ ಚಲಿಸಲು ನಮಗೆ 4 ಗಂಟೆ ಬೇಕಾಗುತ್ತದೆ !! ಅತ್ಯಂತ ಕಿರಿದಾದ ರಸ್ತೆಗಳು, ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಡಗಳು, ಹೆಚ್ಚಿನ ಜನ ಸಂದಣಿ ನಮ್ಮ ವೇಗಕ್ಕೆ ತಡೆಯೊಡ್ಡುತ್ತವೆ. ಅಂತೂ ನಾಗರಕೋಯಿಲ್ ತಲುಪಿದಾಗ ರಾತ್ರಿ 10.30 ಆಗಿತ್ತು. ಬಸ್ ಸ್ಟ್ಯಾಂಡ್ ಸಮೀಪವಿದ್ದ ‘ಉಡುಪಿ ಹೋಟೆಲ್’ನಲ್ಲಿ ಊಟಕ್ಕೆ ತೆರಳಿದರೆ ರಾತ್ರಿ ಊಟ ಸಿಗುವುದಿಲ್ಲ, ಮಧ್ಯಾಹ್ನ ಮಾತ್ರ ಊಟ ಎನ್ನುವ ಉತ್ತರ ಸಿಕ್ಕಿತು! ಅದು ಕೇವಲ ಹೆಸರಿನಲ್ಲಿ ಮಾತ್ರ ಉಡುಪಿ ಹೋಟೆಲ್ ಎಂದು ಗೊತ್ತಾದ ಬಳಿಕ ಅನಿವಾರ್ಯವಾಗಿ ಮತ್ತದೇ ದೋಸೆ ತಿನ್ನಬೇಕಾಯಿತು. ಅನಂತರ ಮತ್ತೊಂದು ಬಸ್ಸಿಡಿದು ತಡರಾತ್ರಿ ಕನ್ಯಾಕುಮಾರಿ ತಲುಪಿ, ಲಾಡ್ಜ್ ಹಿಡಿದೆವು.
ಅಲ್ಲಿನ ಎಲ್ಲಾ ಲಾಡ್ಜ್’ಗಳಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡಲು ಅನುಕೂಲವಾಗುವಂತೆ ‘View Point’ಗಳನ್ನು ನಿರ್ಮಿಸಿದ್ದಾರೆ. ನಾವು ಬೆಳಗ್ಗೆ ಬೇಗ ಎದ್ದು ಸೂರ್ಯೋದಯ ಕಣ್ತುಂಬಿಕೊಳ್ಳಲು ಹೋಟೆಲ್ ಮೇಲ್ಭಾಗಕ್ಕೆ ಹೋದೆವು. ಆ ದೃಶ್ಯ ನಯನ ಮನೋಹರವಾಗಿತ್ತು. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಸಮುದ್ರ, ಮುಂಜಾನೆಯೇ ಮೀನು ಹಿಡಿಯಲು ಸಮುದ್ರಕ್ಕಿಳಿದ ಚಿಕ್ಕ ಚಿಕ್ಕ ದೋಣಿಗಳು, ಸಣ್ಣಗೆ ಬಲ್ಬ್ ಹೊತ್ತಿಸಿದಂತೆ ಉದಯಿಸುತ್ತಿರುವ ಸೂರ್ಯ, ಸೂರ್ಯೋದಯದ ಸಮಯಕ್ಕೆ ಮೊಳಗುವ ದೇವಸ್ಥಾನದ ಶಂಖನಾದ, ಮುಂಜಾನೆಯ ಸೂರ್ಯನ ಕಿರಣಕ್ಕೆ ಕೆಂಪು ಬಣ್ಣದಿಂದ ಕಂಗೊಳಿಸುತ್ತಿರುವ ಆಗಸ, ಸಮುದ್ರದ ನಡುವೆ ಬಂಡೆಯ ಮೇಲಿರುವ ‘ಸ್ವಾಮೀ ವಿವೇಕಾನಂದ’ ಮತ್ತು ‘ಕವಿ ತಿರುವಳ್ಳುವರ್’ ಪ್ರತಿಮೆಗಳು, ಒಂದು ಅದ್ಭುತ ಲೋಕವನ್ನೇ ನಮ್ಮೆದುರಿಗೆ ತೆರೆದಿಡುತ್ತವೆ. ಮೂರು ಸಮುದ್ರಗಳು ಸೇರುವ ಕನ್ಯಾಕುಮಾರಿಯಲ್ಲಿ ಶ್ರೀ ಭಗವತಿ(ಕನ್ಯಾ ಕುಮಾರಿ) ಅಮ್ಮನ ಸುಂದರ ದೇವಾಲಯವಿದೆ. ಸೂರ್ಯೋದಯದ ನಂತರ ದೇವಿಯ ದರ್ಶನ ಪಡೆದು ‘ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್’ ನೋಡುವುದಕ್ಕೆ ಲಾಂಚ್‍ನಲ್ಲಿ ತೆರಳಲು ಹೊರಟೆವು. ಕಿ.ಮೀ ಸಾಲಿನಲ್ಲಿ ಹೇಗೋ ಟಿಕೆಟ್ ಗಿಟ್ಟಿಸಿ ಲಾಂಚ್ ಏರಿದೆವು.
ಚಿಕಾಗೋ ಧರ್ಮಸಮ್ಮೇಳನಕ್ಕೆ ತೆರಳುವ ಮುನ್ನ ಸ್ವಾಮಿ ವಿವೇಕಾನಂದರು ಇಲ್ಲಿನ ಬಂಡೆಯ ಮೇಲೆ ಧ್ಯಾನಕ್ಕೆ ಕುಳಿತು ಜ್ಞಾನೋದಯ ಪಡೆದುಕೊಂಡಿದ್ದರ ಸಲುವಾಗಿ ಇಲ್ಲಿ 1970 ರಲ್ಲಿ ‘ರಾಕ್ ಮೆಮೋರಿಯಲ್’ ನಿರ್ಮಿಸಿದ್ದಾರೆ. ಈ ಮೆಮೋರಿಯಲ್ ನಿರ್ಮಿಸಲು ಅನೇಕರು ಹರಸಾಹಸ ಪಟ್ಟಿದ್ದಾರೆ ! ಈ ಜಾಗದಲ್ಲಿ ಮೆಮೋರಿಯಲ್ ನಿರ್ಮಿಸಬೇಕೆಂದು ನಿರ್ಧರಿಸಿದಾಗ, ಸ್ಥಳಿಯ ಕ್ರಿಶ್ಚಿಯನ್ನರು ವಿರೋಧ ವ್ಯಕ್ತಪಡಿಸಿ ರಾತ್ರೋರಾತ್ರಿ ದೊಡ್ಡ ಪ್ಲಸ್ ಆಕೃತಿ ನಿರ್ಮಿಸಿದ್ದರು. ಕೊನೆಗೆ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಸರ್ಕಾರದ ಅನುಮತಿಯೊಂದಿಗೆ ರಾಮಕೃಷ್ಣ ಆಶ್ರಮದವರು ಅದ್ಭುತವಾದ ವಿವೇಕಾನಂದರ ಪ್ರತಿಮೆ ಸ್ಥಾಪಿಸಿದ್ದಾರೆ. ಜೊತೆಯಲ್ಲಿ ಧ್ಯಾನ ಮಂಟಪ, ವಿವೇಕಾನಂದ ಕೇಂದ್ರ, ಕನ್ಯಾಕುಮಾರಿಯ ಪಾದವೂ ಆ ಬಂಡೆಯ ಮೇಲಿದೆ. ಗಾಳಿಯ ರಭಸಕ್ಕೆ ಬಂಡೆಗೆ ಅಪ್ಪಳಿಸುವ ಅಲೆಗಳನ್ನು ನೋಡುತ್ತಾ ನಿಂತರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಇಲ್ಲಿಂದ ಹೊರಟು ನಾವು ತಲುಪಿದ್ದು ತಮಿಳುನಾಡಿನ ಪ್ರಸಿದ್ದ ಯಾತ್ರಾಸ್ಥಳ ಪಳನಿಗೆ.
ಪಳನಿಯಲ್ಲಿರುವುದು ಸಂತ ಭೋಗಾರ್ ಅವರಿಂದ ಸ್ಥಾಪಿತವಾದ ಅತೀ ದೊಡ್ಡ ಶ್ರೀ ದಂಡಯುತಪಾನಿ(ಮುರುಗನ್) ದೇವಸ್ಥಾನ, ಇದು ಪಳನಿ ಬೆಟ್ಟದ ತುದಿಯಲ್ಲಿದೆ. ಬೆಟ್ಟದ ಮೇಲಿರುವ ದೇವಸ್ಥಾನ ತಲುಪಲು ಮೆಟ್ಟಿಲುಗಳ ಜೊತೆ ವಿಶಿಷ್ಟವಾದ “Winch Train” ಇದೆ. ಇದು ನಮ್ಮ ಭಾರತದಲ್ಲಿ ಬೇರೆಲ್ಲಿಯೂ ಇಲ್ಲ. ವಿಂಚ್ ರೈಲೆಂದರೆ ಹಗ್ಗ ಕಟ್ಟಿ ಎಳೆಯುವ 2 ಬೋಗಿಯ ರೈಲು. ಬೆಟ್ಟದ ಮೇಲೆ ಮೋಟಾರ್‍ಗಳಿವೆ, ಅವುಗಳನ್ನು ಚಾಲು ಮಾಡಿದ ನಂತರ ಅವು ರೈಲನ್ನು ಕೆಳಗಿನಿಂದ ಎಳೆಯಲು ಪ್ರಾರಂಭಿಸುತ್ತವೆ, ಆಗ ರೈಲು ಹಳಿಗಳ ಮೇಲೆ ಚಲಿಸುತ್ತದೆ ಮತ್ತು ಈ ರೈಲಿಗೆ ಇಂಜಿನ್ ಇರುವುದಿಲ್ಲ. ಇಲ್ಲಿ ಇಂತಹ ಒಟ್ಟು ಮೂರು ಹಳಿಗಳಿದ್ದು ಮೂರು ರೈಲುಗಳಿವೆ. ಈ ರೈಲಿನಲ್ಲಿ ಪ್ರಯಾಣಿಸುವುದು ಅವಿಸ್ಮರಣೀಯ ಅನುಭವ ನೀಡುತ್ತದೆ. ಅಲ್ಲಿಂದ ಹೊರಟು ಮರಳಿ ನಮ್ಮ ಊರು ಸೇರಿದಾಗ 4 ದಿನದ ನಮ್ಮ ತಮಿಳುನಾಡಿನ ಪ್ರವಾಸ ನಿರಾಯಾಸವಾಗಿ ಮುಗಿದಿತ್ತು.
-ಸಿದ್ದಲಿಂಗ ಸ್ವಾಮಿ, , M.Tech
swamyjrs@gmail.com
Facebook ಕಾಮೆಂಟ್ಸ್