ಕನ್ನಡ ಚಿತ್ರಗಳ ಸೊಬಗು, ಶೃಂಗಾರ ಎಲ್ಲವೂ ಬದಲಾಗುತ್ತಿದೆ ಮತ್ತು ಸುಂದರವಾಗುತ್ತಿದೆ. ಸದ್ಯಕ್ಕೆ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸಿದ್ದ ಚಿತ್ರಗಳಲ್ಲಿ ರೋಹಿತ್ ಪದಕಿಯವರ ‘ದಯವಿಟ್ಟು ಗಮನಿಸಿ’ ಚಿತ್ರ ಕೂಡ ಒಂದು.ಟ್ರೇಲರ್’ಗಳಿಂದಲೇ ಸದ್ದು ಮಾಡಿದ್ದ ‘ದಯವಿಟ್ಟು ಗಮನಿಸಿ’ಯನ್ನು ನೋಡಿದ ಮೇಲೆ ನನಗನ್ನಿಸಿದ್ದು ಇದೊಂದು ಗಮನಿಸಲೇಬೇಕಾದ ಚಲನಚಿತ್ರ.
ಒಂದು ರೈಲು ಬಂಡಿಯಲ್ಲಿ ಎಷ್ಟೊಂದು ವಿಚಿತ್ರ ವ್ಯಕ್ತಿತ್ವಗಳು ಪಯಣಿಸುತ್ತಿರುತ್ತವೆ. ಅಲ್ಲಿ ಪಯಣಿಸುವ ಪ್ರತಿಯೊಬ್ಬರ ಜೀವನವೂ ಒಂದೊಂದು ಕಥೆ. ಅಲ್ಲಿ ಭಿಕ್ಷೆ ಬೇಡುವ ವ್ಯಕ್ತಿಯಿಂದ ಹಿಡಿದು ಎಸಿ ಕೋಚ್ ಅಲ್ಲಿ ಕುಳಿತು ಸಾಗುವವ್ಯಕ್ತಿಯವರೆಗೆ ಎಲ್ಲರದ್ದೂ ಡಿಫರೆಂಟ್ ಕಥೆ. ಈ ಕತೆಗಳೆಲ್ಲ ಸೇರಿದ್ದು ಅದೇ ರೈಲು ಬಂಡಿಯಲ್ಲಿ ಎಂಬುದೇ ಗಮನಿಸಬೇಕಾದ ಅಂಶ. ಇದೇ ಈ ಚಲನಚಿತ್ರ ಹೇಳಲು ಹೊರಟಿರುವುದು. ನಾಲ್ಕು ಕಥೆಗಳ ಅಧ್ಯಾಯ ನೋಡಿ ಚಿತ್ರದಕೊನೆಗೆ ಬರುವವರೆಗೆ ನನಗಂತೂ ಒಂದೊಳ್ಳೆ ಚಂದದ ಪುಸ್ತಕವನ್ನು ಓದಿ ಬಂದಂತಾಯ್ತು. ಆ ನಾಲ್ಕು ಅಧ್ಯಾಯಗಳಲ್ಲಿ ಪ್ರೀತಿಯಿದೆ, ಧರ್ಮಸೂಕ್ಷ್ಮವಿದೆ, ಕಾರ್ಪೊರೇಟ್ ಜೀವನದ ಕಮರಿದೆ, ಸಂಬಂಧಗಳ ಸೂಕ್ಷ್ಮತೆಯಿದೆ, ನಂಬಿಕೆಅಪನಂಬಿಕೆಗಳ ವಿಮರ್ಶೆಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬದುಕಿನಲ್ಲಿ ಎದುರಿಸಬೇಕಾದ ಹಲವು ಪಾಠವಿದೆ.ಹಾಗಾಗಿ ಇದು ಪಯಣದ ಕಥೆ. ಬದುಕಿನ ಅನೇಕ ಸೂಕ್ಷಗಳನ್ನು ಹೇಳುವ ಕಥೆ.
ಇಲ್ಲಿ ನಾಲ್ಕು ಕಥೆಯಿದೆ. ಮೊದಲನೆಯದು ಮಧ್ಯ ವಯಸ್ಸಿನ ಅವಿವಾಹಿತನೊಬ್ಬನದ್ದು. ಆತನಿಗೆ ಇದ್ದಕಿದ್ದ ಹಾಗೆ ಮದುವೆ ಪ್ರಸ್ತಾಪವೊಂದು ಬರುತ್ತದೆ. ಆಗ ಆತನಲ್ಲಿ ಏಳುವ ಭಾವದ ಒರತೆಯನ್ನು ರೋಹಿತ್ ತೆರೆಯ ಮೇಲೆಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಆ ಬ್ಯಾಚುಲರ್ ಬದುಕು, ಮದುವೆ ಪ್ರಸ್ತಾಪ ಬಂದಾಗ ಬೀಳುವ ಕನಸು ಹೀಗೆ ಎಲ್ಲವನ್ನೂ ನೀಟಾಗಿ ತೋರಿಸಿದ್ದಾರೆ. ಮಧ್ಯವಯಸ್ಕನಾಗಿ ರಾಜೇಶ್ ನಟರಂಗ ಈ ಅಧ್ಯಾಯವನ್ನುಆವರಿಸಿದ್ದಾರೆ. ಹಾಗೆಯೇ ಎಂದಿನಂತೆ ತಮ್ಮ ನೈಜ ಅಭಿನಯದ ಮೂಲಕ ಪ್ರಕಾಶ ಬೆಳವಾಡಿ ತೆರೆಮೇಲೆ ರಾರಾಜಿಸುತ್ತಾರೆ. ಇನ್ನು ಅಶ್ವಿನ್ ಹಾಸನ, ಸುಂದರ್ ವೀಣಾ ಮತ್ತು ಶ್ಯಾಲಿನಿ ಅವರ ಅಭಿನಯ ಕೂಡ ಗಮನಸೆಳೆಯುತ್ತದೆ.
ಎರಡನೇ ಕಥೆ ದಿನನಿತ್ಯದ ಜೀವನ ನಡೆಸುವುದಕ್ಕೂ ಕಷ್ಟಪಡುವ ಒಬ್ಬ ಕಳ್ಳನದ್ದು. ನನಗೆ ಈ ಕಥೆ ಅನವಶ್ಯಕ ಅನ್ನಿಸಿತು. ಆದರೆ ತನಗಿಂತ ಸ್ಟೇಬಲ್ ಆಗಿರುವ ಮನೆತನದ ಹುಡುಗಿಯನ್ನು ಪ್ರೀತಿಸಿ ಕೊನೆಗೆ ಪ್ರೀತಿಯೂ ಸಿಗದೆಪರಿತಪಿಸುವ ಹುಡುಗನಾಗಿ ವಸಿಷ್ಟ ಸಿಂಹ ಚಂದವಾಗಿ ಅಭಿನಯಿಸಿದ್ದಾರೆ. ಸಂಗೀತ ಭಟ್ ತಮ್ಮ ನೈಜ ಸೌಂದರ್ಯದ ಮೂಲಕ ಗಮನಸೆಳೆಯುತ್ತಾರೆ. ಇಲ್ಲಿ ಅರವಿಂದ್ ಪಪ್ಲಿಕರ್ ಎಂಬ ಹೊಸ ಮುಖ ನಿಜಕ್ಕೂ ಇಷ್ಟವಾಗುವಂತೆಅಭಿನಯಿಸಿದ್ದಾರೆ.
ಮೂರನೇ ಕಥೆ ಧರ್ಮದ ಸುತ್ತ ಸುತ್ತುತ್ತದೆ. ಸಂಬಂಧಗಳ ಕೊಂಡಿ ಕಳಚಿಕೊಂಡ ಯುವಕನೋರ್ವ ಧರ್ಮದಿಂದ ಧರ್ಮಕ್ಕೆ ಹೊರಳಿ ಕೊನೆಗೆ ವಿಶ್ವಮಾನವನಾಗುವ ಕಥೆ ಇದು. ಆದರೆ ವಿಶ್ವಮಾನವನಾಗಿ ಆ ವ್ಯಕ್ತಿ ಇರುತ್ತಾನಎನ್ನುವುದೇ ಈ ಕಥೆ. ಇಲ್ಲೊಂದಿಷ್ಟು ಸೂಕ್ಷ ವಿಚಾರಗಳಿವೆ, ಅಧ್ಯಾತ್ಮದ ಸಂಭಾಷಣೆಯಿದೆ, ತಿಳಿ ಹಾಸ್ಯವಿದೆ. ದೇಶ ಸುತ್ತುವ ಆ ಹುಡುಗನಾಗಿ ಹೊಸ ಹುಡುಗ ಅವಿನಾಶ್ ಚೆನ್ನಾಗಿ ಅಭಿನಯಿಸಿದ್ದಾರೆ. ಈ ಕಥೆಯಲ್ಲಿ ಅವರೇ ಪ್ರಮುಖ.ಪೂರ್ಣಚಂದ್ರ ಮೈಸೂರು ಮತ್ತು ಸುಕೃತ ವಾಗ್ಲೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ನಾಲ್ಕನೆಯ ಕಥೆ ಕಾರ್ಪೊರೇಟ್ ವ್ಯವಸ್ಥೆಯಲ್ಲಿ ಕೆಲಸ ಮಾಡುವವನಿಗೆ ಸಂಬಂಧಿಸಿದ್ದು. ಈ ವ್ಯಕ್ತಿಯ ಬಳಿ ಎಲ್ಲವೂ ಇರುತ್ತದೆ. ಆದರೆ ಖುಷಿ ಮಾತ್ರ ಇರುವುದಿಲ್ಲ. ಅವನ ಬದುಕಿನ ಕಥೆ ಈ ಸಿನಿಮಾದಲ್ಲಿ ಇದೆ. ಕಾರ್ಪೊರೇಟ್ಟೆಕಿಯಾಗಿ ರಘು ಮುಖರ್ಜಿ ಆತನ ಹೆಂಡತಿಯಾಗಿ ಭಾವನ ರಾವ್ ಮತ್ತು ಗೆಳತಿಯಾಗಿ ಸಂಯುಕ್ತ ಹೊರನಾಡು ಅಭಿನಯಿಸಿದ್ದಾರೆ. ಈ ಕಥೆ ಮಜಾ ಅನ್ನಿಸುವುದಂತೂ ಹೌದು. ಆ ಮಜಾ ಸಿಗಬೇಕೆಂದರೆ ಈಗಲೇ ಸಿನಿಮಾ ನೋಡಿ.
ಬದುಕಿನ ಬೇರೆ ಬೇರೆ ವಿಭಾಗದ ಈ ನಾಲ್ವರು ಒಂದೇ ಬಂಡಿಯಲ್ಲಿ ಕೊನೆಗೆ ಸೇರುತ್ತಾರಾ ಅಥವಾ ಏನಾಗುತ್ತದೆ? ಇದೆಲ್ಲವನ್ನೂ ನೀವು ನೋಡಿಯೇ ಅನುಭವಿಸಬೇಕು ಹಾಗಾಗಿ ಬೇಗನೆ ಚಿತ್ರಮಂದಿರಕ್ಕೆ ಹೋಗಿ ನೋಡಿಬಿಡಿ.
ಇನ್ನು ಈ ಚಿತ್ರವನ್ನು ನೀವು ನೋಡಲೇಬೇಕು ಏಕೆಂದರೆ ಇದು ನಮ್ಮೆಲ್ಲರ ಕಥೆ. ಅತ್ತ ಪೂರ್ಣ ಕಮರ್ಷಿಯಲ್ ಆಗದಂತೆ ನೋಡಿಕೊಂಡು ಇತ್ತ ಪೂರ್ಣ ಪ್ರಯೋಗಾತ್ಮಕವೂ ಆಗದಂತೆ ಎಚ್ಚರವಹಿಸಿ ಪಕ್ಕಾ ಬ್ಯಾಲೆನ್ಸ್ ಮಾಡಿದ್ದಾರೆನಿರ್ದೇಶಕ ರೋಹಿತ್ ಪದಕಿ. ಚಿತ್ರಕಥೆಗೆ ಹೆಚ್ಚಿನ ಅಂಕ ಕೊಡಬಹುದು. ಹಾಗೆಯೇ ಈ ಚಲನಚಿತ್ರದಲ್ಲಿ, ತಾಂತ್ರಿಕ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿರುವವರು ಅನೂಪ್ ಸೀಳಿನ್. ಗುನುಗುವ ಹಾಡುಗಳನ್ನು ಕೊಟ್ಟಿರುವ ಅನೂಪ್ಹಿನ್ನೆಲೆ ಸಂಗೀತದಲ್ಲಿ ತನ್ನ ನೈಪುಣ್ಯತೆಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಕಾಯ್ಕಿಣಿ ಅವರು ಬರೆದಿರುವ ‘ಮರೆತೇ ಹೋದೆನು…’ ದಿ ಬೆಸ್ಟ್ ಹಾಡು. ಹಾಗೆಯೇ ಉಳಿದ ಎಲ್ಲಾ ಹಾಡುಗಳು ಸಹ ಚೆನ್ನಾಗಿಯೇ ಇವೆ.ಹಾಡೊಂದರಲ್ಲಿ ಬಂದುಹೋಗುವ ಎಲ್. ಎನ್. ಶಾಸ್ತ್ರಿ ಅವರನ್ನು ನೋಡಿ ಖುಷಿಯಾಗಿತ್ತದೆ. ಇನ್ನು ಛಾಯಾಗ್ರಾಹಕ ಅರವಿಂದ್ ಕಶ್ಯಪ್ ತಮ್ಮ ಕೆಲಸವನ್ನು ನೀಟಾಗಿ ಮಾಡಿದ್ದಾರೆ.
ಇದು ನಮ್ಮ ನಿಮ್ಮೆಲ್ಲರ ಕಥೆ. ಹಣವಿದ್ದೂ ಖುಷಿ ಇರದವನೊಬ್ಬ, ಹಣಕ್ಕಾಗಿ ಪರಿತಪಿಸುವವನೊಬ್ಬ, ಕಟ್ಟುಪಾಡುಗಳ ಕರಾಳತೆಯನ್ನು ಅನಿಭವಿಸುವವಳೊಬ್ಬಳು, ತನ್ನ ಕನಸುಗಳನ್ನು ಬದಿಗೊತ್ತಿ ಜೀವನದ ಬಂಡಿಎಳೆಯುವವಳೊಬ್ಬಳು, ತನ್ನ ಹಾದಿಯಲ್ಲಿ ಬೆಳಕಿದೆ ಎಂದು ನಂಬಿದ ಸ್ವಾಮೀಜಿಯೊಬ್ಬ, ಧರ್ಮದ ಹುಳುಕಿಗೆ ಬೇಸತ್ತವನೊಬ್ಬ, ಮದುವೆಯ ಬಂಧಕ್ಕೆ ಅಡಿಯಿಡಲು ತವಕಿಸುವವನೊಬ್ಬ, ಮಗಳ ಮದುವೆ ಮಾಡಬೇಕೆಂದುತಡಕಾಡುವ ತಂದೆಯೊಬ್ಬ ಹೀಗೆ ಬದುಕಿನ ತರಹೇವಾರಿ ಕಥೆಗಳ ಗುಚ್ಚವೇ ‘ದಯವಿಟ್ಟು ಗಮನಿಸಿ’ ಚಲನಚಿತ್ರ. ಹಾಗಾಗಿ ಈ ಚಲಚಿತ್ರವ ಮಿಸ್ ಮಾಡದೆ ನೋಡಿಬಿಡಿ.
ಹೊಸ ನಿರ್ದೇಶಕ ಹೊಸ ವಿಧವಾಗಿ ಕಥೆ ಹೇಳಿದ್ದಾರೆ. ಬದುಕಿನ ಸೂಕ್ಷ್ಮ ಸಂವೇದನಗಳನ್ನು ತೆರೆ ಮೇಲೆ ಚಂದವಾಗಿ ತೆರೆದಿಟ್ಟಿದ್ದಾರೆ. ನಾಲ್ಕು ಕಥೆಯಿದೆ ಎಂದ ಮಾತ್ರಕ್ಕೆ ಇದು ಚೌಕ ಸಿನಿಮಾದ ಹಾಗಿಲ್ಲ. ಅದೇ ಬೇರೆ ತೆರನಾದಸಿನಿಮಾ ಮತ್ತು ಇದೇ ಬೇರೆ ತೆರನಾದ ಸಿನಿಮಾ. ಸುಮ್ಮನೆ ಹೋಗಿ ನೋಡಿಬಿಡಿ. ಇಷ್ಟಪಡುತ್ತೀರಿ.
Facebook ಕಾಮೆಂಟ್ಸ್