X

ಗಾಂಧೀಜಿ ಈಗ ಬದುಕಿದ್ದರೆ ರಾಷ್ಟ್ರ ”ಬಾಬಾ ‘ ಆಗುತ್ತಿದ್ದರೇ ?

ಗಾಂಧೀಜಿಯವರಷ್ಟು ಸಂಕೀರ್ಣ ವ್ಯಕ್ತಿತ್ವದ ಭಾರತದ ಮತ್ತೊಬ್ಬ ರಾಜಕಾರಣಿ ಮತ್ತೆ ಹುಟ್ಟಿಲ್ಲ .ಬೊಗೆದಷ್ಟು ಆಳ .  ಬಿಡಿಸಿದಷ್ಟು ಜಟಿಲ. ಅರಿತಷ್ಟು  ಸಂಕೀರ್ಣ . ಇಂತಹ ಒಬ್ಬ ವ್ಯಕ್ತಿ ಭೂಮಿಯ ಮೇಲೆ ಬದುಕಿದ್ದ ಎಂದು ನಂಬಲು ಇಂದಿನ ಪೀಳಿಗೆಗೆ ಕಷ್ಟ . ಅದೇ ಕಾರಣದಿಂದ ೧೯೮೨ ರಲ್ಲಿ ಬಿಡುಗಡೆಯಾದ ಗಾಂಧಿ ಚಿತ್ರವನ್ನು ನೋಡಿದ ಬಹಳಷ್ಟು ವಿದೇಶಿಗರು ಇದು ಒಂದು ಕಾಲ್ಪನಿಕ ಕಥೆಯೇ  ಅಥವಾ ನೈಜಘಟನೆ ಆಧಾರಿತ ಚಿತ್ರವೇ ಎಂದು ನಿರ್ದೇಶಕರನ್ನು ಕೇಳಿದ್ದರಂತೆ . ವಿದೇಶಿಗರಿಗೆ   ಅಷ್ಟೇ ಅಲ್ಲ ಭಾರತೀಯರಿಗೆ ಕೂಡ ಗಾಂಧಿಜಿ ಅರ್ಥ ಮಾಡಿಕೊಳ್ಳುವುದು ಕಷ್ಟ .

ಭಾರತದ ಇತರ ಮೇರು ನಾಯಕರಿಗಿಂತ , ಗಾಂಧೀಜಿ ಭಿನ್ನವಾಗಿ ನಿಲ್ಲುವುದು ತಮ್ಮನ್ನು ತಾವು ಎಲ್ಲರ ವಿಮರ್ಶೆಗೆ ಒಡ್ಡಿ ಕೊಂಡಿದ್ದು . ಉದಾಹಣೆಗೆ ನೀವು ಅಂಬೇಡ್ಕರ್ ರವರ ಬಗ್ಗೆ ಮುಕ್ತವಾಗಿ ಬರೆಯಲು ಆಗುವುದಿಲ್ಲ . ನೆಹರು  ಅವರ ಬಗ್ಗೆಯೂ ಬರೆಯುವ ವಾತಾವರಣ ತೀರಾ ಇತ್ತೀಚಿನವರೆಗೂ ನಿರ್ಮಾಣವಾಗಿರಲಿಲ್ಲ . ಆದರೆ ಗಾಂಧೀಜಿಯವರ ವಿಷಯದಲ್ಲಿ ಹಾಗಲ್ಲ . ಅವರ ಅಭಿಮಾನಿಗಳು ನಿಮ್ಮ ಮೇಲೆ ದಾಳಿ ನಡೆಸುವುದಿಲ್ಲ . ಅಷ್ಟರ ಮಟ್ಟಿಗೆ ಗಾಂಧಿ ಇನ್ನೂ ತಮ್ಮ ತತ್ವಗಳ ಮೂಲಕ ಜೀವಂತ .

ಬಹಳಷ್ಟು ವೈಯಕ್ತಿಕ ವಿಷಯಗಳನ್ನು ಗಾಂಧೀಜಿಯವರೇ ಬರೆದಿರುವುದರಿಂದ ಅವರ ಜೀವನ ತೆರೆದ ಪುಸ್ತಕ ಎಂದು ಕೊಂಡಿದ್ದರೆ ಅದು ನಮ್ಮ ಅಜ್ಞಾನ . ಅವರ ಬ್ರಹ್ಮಚರ್ಯದ  ಮೇಲಿನ ಪ್ರಯೋಗಗಳೆಲ್ಲ ಆಫ್ ದಿ ರೆಕಾರ್ಡ್ .

ಬ್ರಹ್ಮಚರ್ಯದಲ್ಲಿ ಬಹಳಷ್ಟು ಶಕ್ತಿ ಇದೆ ಎಂಬುದರಲ್ಲಿ ಗಾಂಧೀಜಿಯವರಿಗೆ ಬಲವಾದ ನಂಬಿಕೆಯಿತ್ತು .  ಲೈಂಗಿಕ ಕ್ರಿಯೆಗಳು ದೇಹ ಮತ್ತು ಮನಸ್ಸಿನ ಶಕ್ತಿಯನ್ನು ಕುಗ್ಗಿಸುತ್ತದೆ ಎಂಬುದು ಗಾಂಧೀಜಿಯವರ ಕಲ್ಪಿತ ಸಿದ್ಧಾಂತ (ಹೈಪೊಥೆಸಿಸ್). ಅದರ ಮೇಲೆ ಅವರು ಜೀವನ ಪರ್ಯಂತ ಪ್ರಯೋಗವನ್ನು ನಡೆಸುತ್ತಲೇ ಬಂದರು . ತಮ್ಮ ಹದಿಮೂರನೇ ವಯಸ್ಸಿಗೆ, ಹದಿನಾಲ್ಕು ವಯಸ್ಸಿನ ಕಸ್ತೂರಿ ಭಾರನ್ನು  ಮದುವೆಯಾದ ಗಾಂಧೀಜಿಯ ಲೈಂಗಿಕ ಬದುಕು ಎಲ್ಲರಂತೆಯೇ ಇತ್ತು . ತಮ್ಮ ತಂದೆಯರು ಮರಣ ಹೊಂದಿದ ದಿನ ತಮ್ಮ ಪತ್ನಿಯ ಜೋತೆ ಲೈಂಗಿಕ ಸಂಪರ್ಕ ಸಾಧಿಸಿದ್ದು , ಅವರಿಗೆ ತಪ್ಪಾಗಿ ತೋರಿತ್ತು. ಆ ವಿಷಯಕ್ಕೆ ತಮ್ಮನ್ನು ತಾವು ಕ್ಷಮಿಸಿಕೊಳ್ಳಲು ಗಾಂಧಿಯವರು ಸಿದ್ದರಿರಲಿಲ್ಲ . ತಮಗೆ ನಾಲ್ಕು ಮಕ್ಕಳು ಆದ ನಂತರ , ತಮ್ಮ ೩೮ ನೇ ವಯಸ್ಸಿನಲ್ಲಿ ಲೈಂಗಿಕ ಜೀವನಕ್ಕೆ ಅಂತ್ಯ ಹಾಡಿ , ಸಂಸಾರಿಯಾಗಿ ಇದ್ದುಕೊಂಡೇ ಬ್ರಹ್ಮಚರ್ಯ ಪಾಲಿಸಲು ಪ್ರತಿಜ್ಞೆ ಮಾಡುತ್ತಾರೆ.

ಆದರೆ ವಿಶ್ವಾಮಿತ್ರನನ್ನೇ ಕಾಡಿದ ಕಾಮ, ಗಾಂಧೀಜಿಯವರನ್ನ ಸುಮ್ಮನೆ  ಬಿಡಲಿಲ್ಲ. ಗಾಂಧೀಜಿಯವರು ಕೂಡ ಸುಮ್ಮನೆ ಸೋಲೊಪ್ಪಿಕೊಳ್ಳುವ ಜಾಯಮಾನದವರು ಅಲ್ಲ . ಕ್ರಮೇಣ ಕಾಮದ  ಮೇಲೆ ಹಿಡಿತ ಸಾಧಿಸಿದ ಗಾಂಧಿಯವರು , ಅಷ್ಟಕ್ಕೇ ಸುಮ್ಮನಾಗಲಿಲ್ಲ . ತಮಗೆ ಕಾಮದ ಮೇಲಿನ ಹಿಡಿತವನ್ನು ಪರೀಕ್ಷಿಸಲು ಹಲವಾರು ಪ್ರಚೋದಕಗಳನ್ನೂ ಪ್ರಯೋಗಿಸಲು ನಿರ್ಧರಿಸಿದರು . ಅವುಗಳಲ್ಲಿ ಒಂದು  ಆಶ್ರಮದ ಹುಡುಗಿಯರ ಜೊತೆ ಒಟ್ಟಿಗೆ ಮಲಗುವುದು ಮತ್ತು ಸ್ನಾನ ಮಾಡುವುದು . ಕಸ್ತೂರಿ ಭಾರವರು ಬದುಕಿದ್ದಾಗಲೇ , ಸುಶೀಲ್ ನಾಯರ್ ಎಂಬ ಆಶ್ರಮವಾಸಿ ಗಾಂಧೀಜಿಯವರ ಜೊತೆ ಮಲಗುವುದು ಮತ್ತು ಸ್ನಾನ ಮಾಡುವುದು ನಡೆದಿತ್ತು . ಆಶ್ರಮವಾಸಿಗಳು ಕೂಡ ಓಟ್ಟಿಗೆ ಮಲಗುವುದು ಮತ್ತು ಸ್ನಾನ ಮಾಡುವುದಕ್ಕೆ ಅವಕಾಶವಿತ್ತು . ಆದರೆ ಲೈಂಗಿಕ ಕ್ರಿಯೆ ಮತ್ತು ಅಶ್ಲೀಲ ಚರ್ಚೆಗೆ ಅವಕಾಶ ವಿರಲಿಲ್ಲ .

ಕಸ್ತೂರಿ ಭಾರವರು ತೀರಿಕೊಂಡ ಮೇಲೆ ಗಾಂಧೀಜಿಯವರು ತಮ್ಮ ಪ್ರಯೋಗಗಳನ್ನು ಹಲವಾರು ಆಶ್ರಮವಾಸಿ ಮಹಿಳೆಯ ಮೇಲೆ ಮಾಡಿದರು . ಗಾಂಧೀಜಿಯವರನ್ನು ಪ್ರಚೋದಿಸಲು , ಮಹಿಳೆಯರು ಶೃಂಗಾರದಿಂದ ಬಟ್ಟೆ ಕಳಚುವುದು ಮಾಡುತ್ತಿದ್ದರು . ನಗ್ನವಾಗಿ ಗಾಂಧಿಯವರೊಂದಿಗೆ ಮಲಗುತ್ತಿದ್ದರು . ಆದರೆ ಲೈಂಗಿಕ ಕ್ರಿಯೆ ಮಾಡುವಂತಿರಲಿಲ್ಲ . ೧೮ ವರ್ಷದ ಮನು ಎಂಬ ಸೋದರ ಸಂಬಂಧದಲ್ಲಿ ಮೊಮ್ಮಗಳು ಕೂಡ ಗಾಂಧಿಯವರ ಪ್ರಯೋಗಕ್ಕೆ ಒಪ್ಪಿ , ೭೭ ವಯಸ್ಸಿನ ಗಾಂಧಿಯವರ ಜೊತೆ ನಗ್ನವಾಗಿ ಮಲಗಿದ್ದು ಇದೆ . ರಕ್ತ ಸಂಬಂಧದಲ್ಲಿ , ಮೊಮ್ಮಕಳಿಗೆ ಸಮಾನರಾದ ಮನು ಮತ್ತು ಅಭಾ ಹುಡುಗಿಯರ ಜೊತೆ ತಮ್ಮ ಕೊನೆಯ ದಿನದವರೆಗೂ ಗಾಂಧೀಜಿಯವರು ಒಟ್ಟಿಗೆ ರಾತ್ರಿ ಮಲಗುತ್ತಿದ್ದರು . ದಿನದಲ್ಲಿ ನಡೆದಾಡುವಾಗ ಹೆಗಲಿಗೆ ಇವರ ಸಹಾಯ ಪಡೆದು ಕೊಳ್ಳುತ್ತಿದ್ದರು . ಈ ವಿಷಯದಲ್ಲಿ ಆಸಕ್ತಿ ಇದ್ದವರು Ghandhi: Naked ambition ಪುಸ್ತಕವನ್ನು ಓದಿ ತಿಳಿದುಕೊಳ್ಳಬಹುದು .

ಬ್ರಹ್ಮಚರ್ಯ ಅಪರಿಮಿತ ಶಕ್ತಿಯ ಮೂಲ ಎಂಬುದು ಹಿಂದುಗಳಿಗೆ ಹೊಸದೇನಲ್ಲ .  ಪಾರಂಪರಿಕ ಬ್ರಹ್ಮಚರ್ಯ ಪಾಲಿಸುವರು ಮತ್ತು ಸನ್ಯಾಸಿಗಳು ಪ್ರಚೋದನೆಗಳಿಂದ ದೂರವೇ ಉಳಿಯುತ್ತಾರೆ . ತಮ್ಮ ತಪಸ್ಸಿಗೆ ಅಡ್ಡಬರಬಹುದು ಎಂಬ ಅಂಜಿಕೆಯಿಂದ , ಹಿಂದೂ ಸನ್ಯಾಸಿಗಳು ಮಹಿಳೆಯನ್ನು ಹತ್ತಿರ  ಬಿಟ್ಟುಕೊಳ್ಳುವುದಿಲ್ಲ . ಇನ್ನು ಕೆಲವರು ಮುಖ ನೋಡುವುದು ಇಲ್ಲ . ರಾಮಾಯಣದಲ್ಲಿ ಲಕ್ಷ್ಮಣನು ಸೀತೆಯ ಕಾಲುಗಳನ್ನು ನೋಡಿ ಗುರುತಿಸುತ್ತಿದ್ದ , ಅವನಿಗೆ ಸೀತೆಯ ಮುಖಪರಿಚಯವಿರಲಿಲ್ಲ ಎಂದು ಓದಿದ ನೆನಪು . ಆಹಾರದಲ್ಲೂ ಸನ್ಯಾಸಿಗಳು ಸಾತ್ವಿಕ ಆಹಾರವನ್ನೇ ಸೇವಿಸುತ್ತಾರೆ . ಪ್ರಚೋದಕ ಎಂಬ ಕಾರಣದಿಂದ ಈರುಳ್ಳಿ , ಬೆಳ್ಳುಳಿ , ನುಗ್ಗೆಕಾಯಿಯಂತ ಆಹಾರಗಳು ಕೆಲವರಿಗೆ ನಿಷಿದ್ಧ . ಇನ್ನು ಅತಿರೇಕ ಇಂತಹ ನಂಬಿಕೆ ಇರುವ ಭಾರತದಲ್ಲಿ , ಗಾಂಧೀಜಿಯವರ ಪ್ರಯೋಗಗಳು ವಿಚಿತ್ರ ಎನಿಸುತ್ತವೆ .ಆದರೆ ಗಾಂಧೀಜಿಯವರ ದ್ರಷ್ಟಿಯಲ್ಲಿ , ಬ್ರಹ್ಮಚರ್ಯ ಮೂಲಕ ದೇವರನ್ನು ತಲುಪಲು ಅವರೇ ಕಂಡುಕೊಂಡ ಹೊಸಮಾರ್ಗ. ಯಾರು ಆತ್ಮ ಶುದ್ಧಿಯಿಂದ , ಸುಂದರ ನಗ್ನ ದೇಹದಿಂದಲೂ ಪ್ರಚೋದನೆ ಒಳಗಾಗದೆ , ಬ್ರಹ್ಮಚರ್ಯ ಆಚರಿಸುತ್ತಾರೋ , ಅವರು ದೇವರು ಹತ್ತಿರ ಹೋಗುವ ಹಾದಿಯಲ್ಲಿ ಹೆಚ್ಚು ಸಾಗುತ್ತಾರೆ ಎಂಬುದು ಗಾಂಧಿಯವರ ನಂಬಿಕೆ .

ಗಾಂಧೀಜಿಯರ ಈ ಪ್ರಯೋಗಗಳು ಅವರ ಸುತ್ತಮುತ್ತಲಿನ ನಾಯಕರಿಗೆ ಇರುಸು ಮುರುಸು ಉಂಟು ಮಾಡಿದರೂ , ಅದು ಗಾಂಧೀಜಿಯರನ್ನು ನಾಯಕರನ್ನಾಗಿ ಒಪ್ಪಿಕೊಳ್ಳಲು ಅಡ್ಡಿಯಾಗಲಿಲ್ಲ . ಸರ್ದಾರ್ ಪಟೇಲರು ಗಾಂಧೀಜಿಯವರನ್ನು ಈ ವಿಷಯವಾಗಿ   ವೈಯಕಿವಾಗಿ ಎಚ್ಚರಿಸಿದ್ದರು .ಗಾಂಧೀಜಿಯವರಿಗೆ ತುಂಬಾ ಹತ್ತಿರವಿದ್ದ ನೆಹರುರವರಿಗೆ , ಗಾಂಧೀಜಿಯವರನ್ನು ಈ ಬಗ್ಗೆ ಪ್ರಶ್ನಿಸಲು ನೈತಿಕತೆ ಇರಲಿಲ್ಲವೋ, ಅಥವಾ ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡರೋ ಗೊತ್ತಿಲ್ಲ. ಏಕೆಂದರೆ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ಬಹುಮತ ಪಡೆದು ಪ್ರಧಾನಿಯಾಗಿ ಆಯ್ಕೆಯಾಗಿದ್ದ ಸರ್ದಾರ್ ವಲ್ಲಭ ಬಾಯಿ ಪಟೇಲ್ ರವನ್ನು , ಕಡೆಗಣಿಸಿ ಬೆರಳಣಿಕೆ ಮತವನ್ನು ಪಡೆದ ನೆಹರುರವರನ್ನು ಪ್ರಧಾನಿ ಮಾಡಬೇಕು ಎಂದು ಹಠ ತೊಟ್ಟಿದ್ದರ ಹಿಂದೆ , ಚಿದಂಬರ ರಹಸ್ಯ ಇರುವುದು ಸುಳ್ಳಲ್ಲ .  ಹೆಚ್ಚಿನ ಇತರ ನಾಯಕರಿಗೆ ಗಾಂಧೀಜಿಯವನ್ನು ಪ್ರಶ್ನಿಸುವ ಧೈರ್ಯ ಇರಲಿಲ್ಲವೊ , ಏನೋ .ಸ್ವತಂತ್ರ ಹೋರಾಟದಲ್ಲಿ ಕೆಚ್ಚು ಮೂಡಿಸಿಕೊಂಡಿದ್ದ ಜನರಿಗೂ , ಇದು ದೊಡ್ಡದಾಗಿ ಕಾಣಲಿಲ್ಲ . ಸ್ವತಂತ್ರ ಎಂಬ ದೊಡ್ಡ ಆಸೆ  ಜನರ ಮುಂದಾಗಿ ಇದ್ದಾಗ, ಅವರಿಗೆ ಯಾರು ಬೇಕಾದರೂ ಸ್ವತಂತ್ರ ಕೊಡಿಸುತ್ತಾರೆ ಎಂದರೆ ಅವರನ್ನು ಒಪ್ಪಿಕೊಳ್ಳಲು ಜನರು ಸಿದ್ಧರಿದ್ದಂತೆ ಕಾಣುತ್ತದೆ . ಗಾಂಧೀಜಿ ನಡೆಸುತ್ತಿದ್ದ  ಪತ್ರಿಕೆಯ ಇಬ್ಬರು ಸಂಪಾದಕರು ರಾಜೀನಾಮೆ ನೀಡಿದರೂ , ಸಾವಿರಾರು ಐತಿಹಾಸಿಕ ಘಟನೆ ವರದಿ ಮಾಡುತ್ತಿರುವ ಅಂದಿನ ಪತ್ರಕಾರರಿಗೂ ಇದು ಗೌಣವಾಗಿ ಕಂಡಿದ್ದು ವಿಚಿತ್ರವಾದರೂ ಸತ್ಯ . ಬ್ರಿಟಿಷರು ಕೂಡ ಇದನ್ನು ತಮ್ಮ ಅಸ್ತ್ರವಾಗಿ ಬರಸಿಕೊಳಲಿಲ್ಲ ಎಂಬುದು ಆಶ್ಚರ್ಯವಾದರೂ ಸತ್ಯ . ಬಹುಷಃ ಇದಕ್ಕೆ ಕಾರಣ ಸ್ವತಂತ್ರ ಹೋರಾಟಕ್ಕೆ ಗಾಂದೀಜಿಯವರಲ್ಲಿದ್ದ ಪ್ರಶ್ನಾತೀತ ಬದ್ಧತೆ . ಸ್ವತಂತ್ರ ಹೋರಾಟದಲ್ಲಿ ಮಾತ್ರ ಜನರು ಪಾವಿತ್ರತೆ ಬಯಸಿದ್ದು, ಅಂದಿನ ಪ್ರಜೆಗಳ ಪ್ರೌಢತೆಗೆ ಒಂದು ಸಾಕ್ಷಿ ಎನ್ನಬಹುದು . ಇದು ಕಾಲ ಮಹಾತ್ಮೆಯೋ ಅಥವಾ ಮಹಾತ್ಮ ಗಾಂಧೀಜಿ ಪವಾಡವೋ ಎಂಬುದು ಚರ್ಚೆಯ ವಿಷಯ

ಅದೇ ಗಾಂಧಿ ಈಗ ಬದುಕಿದ್ದರೆ , ನಮಗೆ ಗಾಂಧಿಯವರ ಆಂತರಿಕ ಬದುಕಿನ ಬಗ್ಗೆ ಗೊತ್ತಿದರೆ ನಾವು ಅವರನ್ನು ನಾಯಕ ಎಂದು ಒಪ್ಪಿಕೊಳ್ಳುತ್ತಿದ್ದೆವೇ ? ಇಂದು ಸ್ವತಂತ್ರ ಹೋರಾಟ ನಡೆಯುತಿದ್ದರೆ , ಇಂದಿನ ಪತ್ರಿಕೆಗಳು ನಾಯಕರ ವಿಚಿತ್ರ ಲೈಂಗಿಕ ಪ್ರಯೋಗಳನ್ನು ದೊಡ್ಡದು ಮಾಡಿ, ಪ್ರಮುಖ ಹೋರಾಟಕ್ಕೆ ದಕ್ಕೆ ಮಾಡದೆ ಬಿಡುತ್ತಿದ್ದವೇ ? ಆಶ್ರಮದ  ಬಾಬಾಗಳನ್ನು ನ್ಯಾಯಾಂಗ ಜೈಲಿಗಟ್ಟುತ್ತಿರುವುದನ್ನು ನೋಡಿದರೆ, ಗಾಂಧೀಜಿಯವರ ಆಶ್ರಮದ ಕಾನೂನುಗಳನ್ನು, ನಮ್ಮ ಕೋರ್ಟು ಯಾವ ರೀತಿ ವ್ಯಾಖ್ಯಾನಿಸುತಿತ್ತು ಎಂದು ಎಂದು ಸೋಜಿಗವಾಗುತ್ತದೆ . ಒಟ್ಟಿನಲ್ಲಿ ಸ್ವತಂತ್ರ ಹೋರಾಟ ಈಗ ನಡೆದಿದ್ದರೆ , ನಮಗೆ ಸ್ವತಂತ್ರ ಖಂಡಿತ ಬರುತ್ತಿರಲಿಲ್ಲ. ಪ್ರೌಢತೆಯ ಹೋರಾಟ ನಮ್ಮಲ್ಲಿ ಮರೆಯಾಗಿರುದಂತೂ ಸತ್ಯ .

ಇಂದು ಭಾರತದಲ್ಲಿ ಯಾವುದೇ ರಾಜಕಾರಣಿ ,ನಟರು, ಸನ್ಯಾಸಿಗಳು ಅಥವಾ ದೇವಮಾನರನ್ನು ಇನ್ನಿಲ್ಲದಂತೆ ಮಾಡಲು ಒಂದು ಲೈಂಗಿಕ ಹಗರಣ ಅರೋಪ ಸಾಕು . ಅವರು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳೆನ್ನೆಲ್ಲ ಒಂದೇ ಕ್ಷಣದಲ್ಲಿ ಮರೆತು ಬಿಡುತ್ತೇವೆ. ಆರೋಪಗಳನ್ನು , ಸಾಧನೆಯಿಂದ ಪ್ರತ್ಯೇಕಿಸಿ ನಾವು ನೋಡುವುದೇ ಇಲ್ಲ .ಒಂದು ಕಡೆ ಭಾರತೀಯರು ತಾವು ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಳ್ಳುವುದಿಲ್ಲ ,ಇನ್ನೊಂದು ಕಡೆ  ಸಾರ್ವಜನಿಕರು ಕ್ಷಮಿಸುವುದು ಇಲ್ಲ .ಅಮೇರಿಕಾದ ಮಾಜಿ  ಅಧ್ಯಕ್ಷ   ಬಿಲ್ ಕ್ಲಿಂಟನ್ ನವರು ಲೈಂಗಿಕ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಾಗ , ಅಮೇರಿಕ ಜನತೆ ನಡೆದುಕೊಂಡ ರೀತಿ ನಿಜಕ್ಕೂ ಮೆಚ್ಚಿಕೊಳ್ಳುವಂತದ್ದು . ಕ್ಲಿಂಟನ್ನರು ತಮ್ಮ ತಪ್ಪನ್ನು ಒಪ್ಪಿಕೊಂಡ ಮೇಲೆ, ದೇಶದ ಹಿತವನ್ನು ದೃಷ್ಟಿಯನ್ನು ಇಟ್ಟುಕೊಂಡು, ಜನತೆ ಅದನ್ನು ದೊಡ್ಡದು ಮಾಡಲಿಲ್ಲ . ಅವರ ಅಧ್ಯಕ್ಷ ಪದವಿಗೆ ಯಾವುದೇ ಚುತಿ ಬರಲಿಲ್ಲ .   ಅಂತಹ ಪ್ರೌಢ ನಿರ್ಧಾರ ನಮ್ಮಲ್ಲಿ ಕಾಣ ಬರುವುದಿಲ್ಲ.

ಗಾಂಧಿಯವರು ಮರಣ ಹೊಂದಿ ಕೆಲವು ದಶಕಗಳೇ ಕಳೆದಿವೆ. ದಿನ ಕಳೆದಂತೆ ನಾವು ಬೌತಿಕವಾಗಿ ಮುಂದುವರೆದಿದ್ದೇವೆ .  ಆದರೆ ಮಾನಸಿಕವಾಗಿ ಹಿಂದೆ ಹೋಗುತ್ತಿದ್ದೇವೆ . ಒಟ್ಟಿನಲ್ಲಿ ಗಾಂಧಿಜಿಯವರಿಂದ ಮಾತ್ರವಲ್ಲ , ಸ್ವತಂತ್ರ ಪೂರ್ವ ಭಾರತೀಯರಿಂದ ಬಹಳಷ್ಟು ಪಾಠ ಕಲಿಯುವುದು ಇದೆ .

-ಡಾ ದಯಾನಂದ ಲಿಂಗೇಗೌಡ

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post