ಚಕ್ರವರ್ತಿಯವರಿಗೆ ಈ ಕ್ಷೇತ್ರ ಅನಿವಾರ್ಯ ಆಯ್ಕೆಯಾಗಿರಲಿಲ್ಲ. ಮೂಲತಃ ವಿದ್ಯಾಭ್ಯಾಸದಲ್ಲಿ ಆಸಕ್ತಿಯಿಲ್ಲದ ಕೆಲವು ವಿದ್ಯಾರ್ಥಿಗಳು ಸಂಘಟನೆ ಹೋರಾಟವೆಂಬ ಹಾದಿ ಹಿಡಿಯುವುದು ಸಾಮಾನ್ಯ. ಚಕ್ರವರ್ತಿಯವರಿಗಾವ ಅವಶ್ಯಕತೆಯೂ ಇರಲಿಲ್ಲ. ಇಂಜನೀಯರಿಂಗ್ ಪ್ರಥಮ ಸೆಮಿಸ್ಟರ್ ಪಸ್ಟ್’ಕ್ಲಾಸ್ ಬಂದಿದ್ದು ಬಿಟ್ಟರೆ ಉಳಿದೆಲ್ಲ ಸೆಮಿಸ್ಟರ್ ಡಿಸ್ಟಿಂಕ್ಷನ್ ಫಲಿತಾಂಶ ಪಡೆದ ವಿದ್ಯಾರ್ಥಿಯವರು. ಹಲವಾರು ಕಂಪೆನಿಗಳಲ್ಲಿ ಉದ್ಯೋಗ ಮಾಡುವ ಅವಕಾಶವಿತ್ತು. ಕೈತುಂಬಾ ಸಂಬಳ ತೆಗೆದುಕೊಂಡು ಯಾವುದೋ ವಿದೇಶದಲ್ಲಿ ನೆಲೆಗೊಂಡು ಮದುವೆಯಾಗಿ ತಮ್ಮದೇ ಸ್ವಚ್ಛಂದವಾದ ಕುಟುಂಬ ಕಟ್ಟಿಕೊಳ್ಳಬಹುದಾಗಿತ್ತು.
ಚಿತ್ರ ಸಾಹಿತಿ ಕೆ.ಕಲ್ಯಾಣ್ ಅವರು ಒಂದು ಕಡೆ ಹೇಳುವಂತೆ ಕೆಲಸದಲ್ಲಿ ಮೂರು ಬಗೆ. ಒಂದು ಅನಿವಾರ್ಯತೆಗಾಗಿ, ಮತ್ತೊಂದು ಅವಶ್ಯಕತೆಗಾಗಿ, ಮಗದೊಂದು ಆತ್ಮತೃಪ್ತಿಗಾಗಿ. ಆತ್ಮತೃಪ್ತಿಗಾಗಿ ಆಯ್ದುಕೊಂಡ ಕ್ಷೇತ್ರದಲ್ಲಿ ಎದುರಾಗುವ ಅಪವಾದಗಳು ಆರೋಪಗಳು ಅವಮಾನಗಳಿವೆಯಲ್ಲ ಅದನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಕೆಲವೊಮ್ಮೆ ದೊಡ್ಡ ಕಷ್ಟಗಳು ಎದುರಾದಾಗ ಹಿಂತಿರುಗಿ ಬಂದ ಹಾದಿ ನೋಡಿದಾಗ “ನಂಗಿದೆಲ್ಲಾ ಬೇಕಾಗಿತ್ತಾ?” ಎನಿಸಿ ಹಿಂತಿರುಗಿ ಹೋಗುವಂತೆನಿಸಿ ಬಿಡುತ್ತದೆ. ಎಲ್ಲವನ್ನೂ ಸಹಿಸಿಕೊಂಡು ಇಷ್ಟು ದೂರ ನಡೆದು ಬರಲು ಅದೆಂಥ ಸಂಕಲ್ಪಶಕ್ತಿಯನ್ನು ಚಕ್ರವರ್ತಿಯವರು ಸಿದ್ಧಿಸಿಕೊಂಡಿರಬೇಕು.
ಯುವಕರನ್ನು ಬಳಸಿಕೊಳ್ಳುವ ಬಗೆಯನ್ನು ಬದಲಿಸಿದರೆ ಭಾರತವೇ ಬದಲಾಗುವುದು ಖಚಿತ. ಕಾರಣವಿಷ್ಟೆ ಸದ್ಯದ ಮಟ್ಟಿಗೆ ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿದ ರಾಷ್ಟ್ರ. ಚಕ್ರವರ್ತಿಯವರು ಯುವಕರಲ್ಲಿನ ಪ್ರಚನ್ನ ಶಕ್ತಿಗೆ ಚಾಲನೆ ಕೊಟ್ಟವರು. ತಾವೊಬ್ಬರೆ ಆದರೆ ಸೇವೆಗೊಂದು ಸೀಮಿತತೆ ಬರುತ್ತದೆ, ಹೀಗಾಗಿ ಒಂದು ಬಲಿಷ್ಟ ತರುಣ ಪಡೆಯನ್ನು ಕಟ್ಟಿಕೊಂಡರೆ ಸೇವಾ ಸಂಕಲ್ಪಗಳ ಸಾಕಾರವಾಗುವುದು ಸುಲಭ. ನಮೋಬ್ರಿಗೇಡ್ ನಂತರದಲ್ಲಿ ೨೦೧೪ ರಲ್ಲಿ ಯುವಾಬ್ರಿಗೇಡ್ ಪಡೆ ತಯಾರಾಗಿ ಇಂಥ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಸರ್ಕಾರದ ನಿರ್ಲಕ್ಷ್ಯಕ್ಕೀಡಾದ ಕೆಲಸಗಳನ್ನು ಕೈಗೆತ್ತಿಕೊಂಡು ಮುನ್ನಡೆದಿದೆ. ಗುರುತಿಸುವವರು ಗುರುತಿಸಲಿ,ಬಿಡಲಿ. “ಕರ್ಮಣ್ಯೆ ವಾಧಿಕಾರಸ್ತೆ” ಎಂಬ ಮಾತನ್ನು ಕಾರ್ಯರೂಪಕ್ಕಿಳಿಸಿದೆ. ಅಂಥ ಕೆಲವು ಕೆಲಸಗಳನ್ನು ನಾವು ಗಮನಿಸೋಣ.
ಆಧುನಿಕತೆಗೆ ಒಗ್ಗಿಕೊಂಡ ನಾವು ಪ್ರಕೃತಿಯ ಬಗ್ಗೆ ನಿಷ್ಕಾಳಜಿ ತೋರುತ್ತೇವೆ. ಪ್ರಕೃತಿ ಇದ್ದರೆ ನಾವು, ಇಲ್ಲದಿದ್ದರೆ ಇಲ್ಲ. ಮಳೆಗಾಲದಲ್ಲಿ ಮಳೆ ಅಪರೂಪ ಬೇಸಗೆಯಲ್ಲಿ ನೀರಿಗಾಗಿ ಪರದಾಟ ಪ್ರತಿ ವರ್ಷ ಆಳುವ ಸರ್ಕಾರ ಯಾವುದಾದರೇನು ಬರ ಪರಿಹಾರದ ವಿಚಾರದಲ್ಲಿ ತಟಸ್ಥ. ಅಷ್ಟೋ ಇಷ್ಟೋ ಬಿದ್ದ ಮಳೆಯ ನೀರನ್ನು ಕಾಪಿಟ್ಟುಕೊಳ್ಳಬೇಕಾದದ್ದು ನಮ್ಮ ಕರ್ತವ್ಯವೂ ಹೌದು. ಒಳಿತೂ ಹೌದು. ಇಂಥ ಪರಿಸರ ಸ್ನೇಹಿ ಕೆಲಸವನ್ನು ಕೈಗೆತ್ತಿಕೊಂಡ ಯುವಾಬ್ರಿಗೇಡ್ “ಜಲಜೀವನ” ಎಂಬ ಹೆಸರಿನಡಿಯಲ್ಲಿ ಕರ್ನಾಟಕದ ೯೦ ಮತ್ತು ಗೋವಾ ಕೇರಳದಲ್ಲಿನ ಕೆಲವು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿದ್ದಾರೆ. ಅದರಲ್ಲಿನ ೩೦ ರಿಂದ ೪೦ ಕಲ್ಯಾಣಿಗಳು ಶುದ್ಧ ನೀರಿನಿಂದ ತುಂಬಲ್ಪಟ್ಟಿವೆ. ಮೋದಿಯವರ “ಮನ್ ಕೀ ಬಾತ್” ಭಾಷಣದಲ್ಲಿ ಈ ಕೆಲಸವನ್ನು ಗುರುತಿಸಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
“ಪೃಥ್ವಿ ಯೋಗ” ಎಂಬ ಹೆಸರಿನ ಅಭಿಯಾನದಲ್ಲಿ ಒಂದು ಲಕ್ಷ ಗಿಡನೆಟ್ಟು ಪರಿಸರದ ಶ್ವಾಸಕೋಶಕ್ಕೆ ಪ್ರಾಣವಾಯು ತುಂಬುವ ಕೆಲಸ ಮಾಡಿದ್ದಾರೆ. ಕೆಲವು ಡೋಂಗಿ ಪರಿಸರವಾದಿಗಳು ಗಣೇಶ ವಿಸರ್ಜನೆಯ ಕಾರಣದಿಂದ ನದಿಯ ಮೂಲಗಳು ಹಾಳಾಗುತ್ತವೆ ಎಂಬ ಕಾರಣವೊಡ್ಡಿ ಗಣೇಶ ಚತುರ್ಥಿಯಾಚರಣೆಯನ್ನೇ ನಿಲ್ಲಿಸಿ ಬಿಡಬೇಕು ಎಂಬ ಮಾತಾಡುತ್ತಾರೆ. ಮೂಲತಃ ಇವರಿಗೆ ಹಿಂದೂ ಧರ್ಮದಾಚರಣೆ ತಡೆ ಹಿಡಿವ ಉದ್ದೇಶದ ಹೊಲಸು ಹೂರಣಕ್ಕೆ ಪರಿಸರ ಕಾಳಜಿಯ ಹೊದಿಕೆ ಹೊದಿಸಿರುತ್ತಾರಷ್ಟೆ. ಬೀದಿಗಿಳಿದು ಯಾವ ಪರಿಸರ ಸ್ನೇಹಿ ಕೆಲಸವನ್ನು ಮಾಡಿರುವುದಿಲ್ಲ. ಯುವಾಬ್ರಿಗೇಡ್ ಪ್ಲಾಸ್ಟರ್ ಆಪ್ ಪ್ಯಾರಿಸ್ ಬಳಕೆಯನ್ನು ತಡೆಯಬೇಕೇ ವಿನಃ ಹಬ್ಬದಾಚರಣೆಯನ್ನಲ್ಲ ಎಂದರಿತು. “ಮಣ್ಣಿನ ಗಣಪ ಮಣ್ಣೇ ಗಣಪ” ಎಂಬ ಹೆಸರಿನಡಿಯಲ್ಲಿ ಗಣೇಶನ ನಿರ್ಮಾಣಕ್ಕೆ “ಪ್ಲಾಸ್ಟರ್ ಆಫ್ ಪ್ಯಾರಿಸ್” ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ನೀಡುವುದಲ್ಲದೇ ಮಣ್ಣಿನ ಗಣಪನನ್ನು ನಿರ್ಮಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಂಡಿತು. ಸಾವಿರಾರು ಮಣ್ಣಿನ ಗಣಪನ ಮೂರ್ತಿ ಮಾಡಿ ರಾಜ್ಯಾದ್ಯಂತ ಅವುಗಳನ್ನು ಹಂಚಿತು.
ನಮ್ಮ ಆಚರಣೆಗಳು ಯಾವತ್ತೂ ಪರಿಸರಸ್ನೇಹಿಯೇ ಆಧುನಿಕತೆಯ ಕಾರಣಕ್ಕೆ ಅವು ಅಲ್ಪಸ್ವಲ್ಪ ಕಲಬೆರಕೆಯಾಗಿವೆ ಅಷ್ಟೆ ಮತ್ತೊಮ್ಮೆ ನಮ್ಮತನಕ್ಕೆ ಮರಳುವ ಕೆಲಸವನ್ನು ಯುವಾಬ್ರಿಗೇಡ್ ಮಾಡಿದೆ. ಕಾವೇರಿ ನದಿಯ ದಡಗಳನ್ನು ಕುಶಾಲನಗರದಲ್ಲಿ ಸ್ವಚ್ಛಗೊಳಿಸಿತು. ತಮಿಳುನಾಡಿನ ಕಾರ್ಯಕರ್ತರನ್ನು ನದಿದಡಗಳಲ್ಲಿ ಮರನೆಡುವ ಕಾರ್ಯಕ್ರಮದಲ್ಲಿ ಬಳಸಿಕೊಂಡು ಸೌಹಾರ್ದತೆ ಮೆರೆದಿದ್ದು ಈ ಪಡೆ. ಗಮನಿಸಿ ನೋಡಿ ಈ ಮೇಲಿನ ಎಲ್ಲಾ ಕಾರ್ಯಗಳು ಪರಿಸರ ಇಲಾಖೆ ಅರಣ್ಯ ಇಲಾಖೆಯವರು ಮಾಡಬೇಕು. ಕಾರ್ಯಕರ್ತರು ಚುನಾಯಿತ ಅಭ್ಯರ್ಥಿಗಳು ಅಲ್ಲ. ಯಾವುದೇ ಇಲಾಖೆಯ ನೌಕರರಂತೂ ಅಲ್ಲವೇ ಅಲ್ಲ. ಪರಿಸರದ ಬಗ್ಗೆ ವೇದಿಕೆ ಏರಿ ಭಾಷಣ ಬಿಗಿದು ಸನ್ಮಾನಿತರಾದವರು ಅಲ್ಲ. ಪರಿಸರದೆಡಗಿನ ಕಾಳಜಿಯ ಹೊರತು ಈ ಕೆಲಸ ಮಾಡಲು ಅನ್ಯ ಕಾರಣಗಳಿಲ್ಲ.
“ಸೈನಿಕರು ಗಡಿಯಲ್ಲಿ ಅತ್ಯಾಚಾರದಲ್ಲಿ ತೊಡಗಿದ್ದಾರೆ. ಯುದ್ಧ ಎನ್ನುವುದೊಂದು ಉದ್ಯಮ. ಸೈನಿಕರು ಸತ್ತ ನಂತರ ನರಕಕ್ಕೆ ಹೋಗುತ್ತಾರೆ. ಸೈನಿಕರು ಸಂಬಳಕ್ಕಾಗಿ ದುಡಿಯುತ್ತಾರೆ.” ಈ ತರಹದ ಅವಹೇಳನಕಾರಿ ಮಾತುಗಳನ್ನಾಡುತ್ತಾ ಹೋಗೋರ ಮಧ್ಯೆ ನಾವಿದ್ದೇವೆ. ಸದ್ಯದ ಸೈನಿಕರ ಆತ್ಮಸ್ಥೈರ್ಯ ಕುಸಿಯುವುದಲ್ಲದೇ, ಮಡಿದ ಸೈನಿಕರ ಪಾಲಕರ ಮನಸ್ಸಿಗೆ ಕಸಿವಿಸಿಯಾಗದೇ ಇರದು. ಹೊಸಬರು ಸೈನ್ಯ ಸೇರಲು ಹಿಂದೇಟು ಹಾಕುತ್ತಾರೆ. ಸೈನಿಕರಿಗೆ ಆತ್ಮಸ್ಥೈರ್ಯ ಒದಗಿಸುವ ಕೆಲಸ ನಡೆಯಬೇಕು. ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ನಂಬಿಕೆ ಅವರಲ್ಲಿ ಮೂಡಬೇಕು. ಅವರ ಸಣ್ಣ ಸಣ್ಣ ಗೆಲುವುಗಳನ್ನೂ ನಾವು ಸಂಭ್ರಮಿಸಬೇಕು. ಈ ಕಾರ್ಯವನ್ನು ಕೈಗೆತ್ತಿಕೊಂಡದ್ದು ಯುವಾಬ್ರಿಗೇಡ್.
One rank one pension ,ಸಲುವಾಗಿ online petition ಶುರುಮಾಡಿ ಹಲವು ಸಹಿಗಳನ್ನು ಸಂಗ್ರಹಿಸಲಾಯಿತು. ಮಡಿದ ಸೈನಿಕರ ತಂದೆ ತಾಯಿಗಳೊಂದಿಗೆ ಉತ್ತಮ ಭಾಂದವ್ಯವಿರಿಸಿಕೊಂಡಿತು ಮತ್ತು ಅವರನ್ನು ಸನ್ಮಾನಿಸಲಾಯಿತು. “ಕಾರ್ಗಿಲ್ ವಿಜಯ್ ದಿವಸ್” ಪ್ರಯುಕ್ತ ಎಪ್ಪತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ೧೯೬೫ರ ಯುದ್ಧದಲ್ಲಿ ಭಾರತ ಗೆದ್ದದನ್ನು ನೆನೆದವರೇ ಇಲ್ಲ. ಅದನ್ನು ಮೊದಲ ಭಾರಿಗೆ ಆಚರಿಸಿದ್ದು ಯುವಾಬ್ರಿಗೇಡ್.
ತೆರೆಮರೆಗೆ ಸರಿದು ಹೋದ ಸ್ವಾತಂತ್ರ್ಯ ಹೋರಾಟಗಾರರಾದ ವಿ.ಡಿ ಸಾವರ್ಕರ್ ತ್ಯಾತ್ಯಾ ಟೋಪೆಯಂಥವರ ಸಾಕ್ಷ್ಯಚಿತ್ರಗಳನ್ನು ಮಾಡಿ ಶಾಲಾಕಾಲೇಜುಗಳಲ್ಲಿ ಅವುಗಳ ಪ್ರದರ್ಶನ ಮಾಡಲಾಯಿತು. ಸೋದರಿ ನಿವೇದಿತಾ ಕುರಿತು ಒಂದು ಸಾಕ್ಷ್ಯಚಿತ್ರ ತಯಾರಿಸಿ ಅದರ ಪ್ರದರ್ಶನವನ್ನು ಮಾಡಿದರು. ಮಕ್ಕಳಿಗೆ ಪಠ್ಯದಲ್ಲಿ ಸಿಗದ ದೇಶಪ್ರೇಮದ ಪಾಠಗಳು ಇದರಲ್ಲಿ ಲಭ್ಯವಾಗಿವೆ. ವಿವೇಕಾನಂದರ ಸ್ಮರಣಾರ್ಥ “ವಿವೇಕ ದೃಷ್ಟಿ ನವಭಾರತ ಸೃಷ್ಟಿ” ಅಭಿಯಾನ ಮಾಡಿ ನೇತ್ರದಾನ ಮಾಡುವಂತೆ ಪ್ರೇರೇಪಿಸಿದರು. ಈ ಕೆಲಸ ನಡೆಯಬೇಕಾಗಿದ್ದು ಆರೋಗ್ಯ ಇಲಾಖೆಯಿಂದ ಕೈಗೆತ್ತಿಕೊಂಡದ್ದು ಮಾತ್ರ ಯುವಾಬ್ರಿಗೇಡ್.
ಓಲೈಕೆ ರಾಜಕಾರಣದಿಂದ ಜಾತಿ ಜಾತಿಯ ನಡುವಿನ ತಾರತಮ್ಯ ಸ್ವತಂತ್ರ ನಂತರ ಇಷ್ಟು ವರ್ಷವಾದರೂ ಜೀವಂತವಾಗಿಯೇ ಇದೆ. ಆಳುವ ಸರ್ಕಾರಗಳು ಈ ಒಡಕನ್ನು ಸರಿಪಡಿಸಿ ಒಂದು ಮಾಡುವ ಕೆಲಸ ಮಾಡುವುದೇ ಇಲ್ಲ. ಹಿಂದುಗಳಲ್ಲಿನ ಮೇಲುಕೀಳಿನ ಭಾವ ಹಿಂದು ಮುಸ್ಲಿಂ ನಡುವಿನ ಒಡಕು ಆಗಾಗ ಬುಗಿಲೇಳುತ್ತಲೇ ಇರಬೇಕು. ಅದರಲ್ಲಿ ತಮ್ಮ ರಾಜಕೀಯ ಬೇಳೆ ಬೆಂದರೆ ಸಾಕು. ಮಾಧ್ಯಮಗಳು ಇಂಥ ಒಡಕಿನ ಬೆಂಕಿಗೆ ಹವಿಸ್ಸು ಹಾಕುತ್ತಲೇ ಇರುತ್ತಾರೆ. ಯುವಾಬ್ರಿಗೇಡ್’ನ “ಸದ್ಭಾವನ” ಎಂಬ ವಿಭಾಗ ಸಂಪೂರ್ಣವಾಗಿ ಇಂಥ ಸೌಹಾರ್ದತೆ ತರುವ ಕೆಲಸಕ್ಕೇ ಮೀಸಲಾಗಿದೆ. ಜಾತಿ ಮೇಲು ಕೀಳು ಎಲ್ಲವನ್ನು ಅಳಿಸಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವುದು ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ಒಂದು ಹೆಜ್ಜೆಯೇ ಸರಿ.
೧೪ ಪೆಬ್ರುವರಿ ೨೦೧೬ರಂದು “ಸ್ವಚ್ಛಪ್ರೇಮ” ಹೆಸರಿನಡಿಯಲ್ಲಿ ಕಾರ್ಮಿಕರ ಗಲ್ಲಿಗಳಲ್ಲಿ ಸ್ವಚ್ಛಗೊಳಿಸುವ ಕೆಲಸ ಮಾಡಿದ್ದು ಯುವಾಬ್ರಿಗೇಡ್. “ಕನಕ ನಡೆ” ಉಡುಪಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಾದ ಗೊಂದಲಗಳು ಮತ್ತು ವಿರೋಧಗಳನ್ನು ತಾವು ಕೇಳಿಯೇ ಇರುತ್ತೀರಿ. ಪೇಜಾವರ ಶ್ರೀಗಳು “ತುಂಬಾ ಮೊದಲೇ(ಜನವರಿ) ಈ ಕಾರ್ಯಕ್ರಮದ ಕುರಿತು ನಮಗೆ ತಿಳಿಸಿದ್ದಾರೆ, ಹೀಗಾಗಿ ಇದು ಉಡುಪಿ ಚಲೋ ಕಾರ್ಯಕ್ರಮದ ವಿರೋಧ ನಡೆಯಲ್ಲ” ಎಂದು ಸ್ಪಷ್ಟೀಕರಣಕೊಡುವವರೆಗೆ ಗೊಂದಲಗಳು ನಡೆಯುತ್ತಲೇ ಇದ್ದವು. ಕೊನೆಗೆ ಉಡುಪಿಯನ್ನು ಸ್ವಚ್ಛಗೊಳಿಸಲು ಪೇಜಾವರ ಶ್ರೀಗಳೆ ಚಾಲನೆ ನೀಡಿದರು.
ಆದರೆ ಇದಕ್ಕೂ ತುಂಬಾ ಮೊದಲೇ ಕೆಳವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಯುವಾಬ್ರಿಗೇಡ್ ಕೆಲಸಗಳನ್ನು ಮಾಡಿತ್ತು. ಸಾವರ್ಕರ್ ಜಗಜೀವನ್ ರಾವ್ ಪ್ರೇರಣೆಯಿಂದ ಯಾರು ನೋಡಿಕೊಳ್ಳದಿರುವ ಪಾಳು ಬಿದ್ದ ದೇವಸ್ಥಾನಗಳ ಪುನರುಜ್ಜೀವನ ಮಾಡಿ ಸಮಾಜದಲ್ಲಿ ಹಿಂದುಳಿದ ಜಾತಿಯವರ ಕೈಯಲ್ಲಿ ಪೂಜೆ ಮಾಡಿಸಿದರು. ಸಾವರ್ಕರ್ ಅವರ “ಪತೀತ ಪಾವನ” ಕಲ್ಪನೆಯನ್ನು ಸಾಕಾರಗೊಳಿಸಿದರು. ದೇವಸ್ಥಾನದ ಪೂಜೆ ಎಂಬುದು ಯಾವುದೋ ಸೀಮಿತ ಜಾತಿಯ ಸ್ವತ್ತಲ್ಲ, ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ ಎಂಬ ಭಾವ ತಳೆಯುವಂತೆ ಮಾಡಿದರು.
ಈಶಾನ್ಯ ರಾಜ್ಯಗಳ ಮೇಲೆ ಚೀನಿಯರ ಕಣ್ಣಿಟ್ಟದ್ದು ಮತ್ತು ಅಲ್ಲಿನ ಜನರ ಅಭಿವೃದ್ಧಿಯನ್ನು ಇಲ್ಲಿಯವರೆಗಿನ ಸರ್ಕಾರಗಳು ನಿರ್ಲಕ್ಷ್ಯ ತೋರಿದ್ದು ಗೊತ್ತಿರುವ ವಿಚಾರವೇ. ಕರ್ನಾಟಕದಲ್ಲಿರುವ ಈಶಾನ್ಯ ರಾಜ್ಯದವರಿಗೆ ರಾಕಿ ಕಟ್ಟುವುದರ ಮೂಲಕ “ಈಶಾನ್ಯ ಬಂಧನ” ಎಂಬ ಕಾರ್ಯಕ್ರಮ ಮಾಡಿದರು. ಆ ಮೂಲಕ ಈಶಾನ್ಯ ರಾಜ್ಯಗಳು ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಸಾಂಕೇತಿಕವಾಗಿ ತೋರಿಸಿಕೊಟ್ಟರು.
ರಾಜಕಾರಣ ಯಾವ ಕೀಳುಮಟ್ಟದಲ್ಲಿ ವರ್ತಿಸುತ್ತದೆ ಎಂದರೆ ಗೋವನ್ನು ಒಂದು ಸಾಧು ಪ್ರಾಣಿಯಂತಷ್ಟೇ ಕಾಣದೇ ಅದನ್ನು ಒಂದು ಧರ್ಮದ ಗೂಟಕ್ಕೆ ಕಟ್ಟಿ ಬಿಡುತ್ತಾರೆ. ಮುಸ್ಲಿಂರೆಲ್ಲಾ ಅದರ ಭಕ್ಷಕರು ಹಿಂದುಗಳೆಲ್ಲ ಅವರ ಆಹಾರ ಸ್ವಾತಂತ್ರ್ಯವನ್ನು ಕಸಿಯುತ್ತಿದ್ದಾರೆ ಎಂಬ ವಿಚಾರವನ್ನು ತಲೆಯಲ್ಲಿ ತುಂಬಿದ್ದಾರೆ. ಮಹಮದ್ ಫೈಸ್ ಖಾನ್ ಎಂಬ ಗೋಪ್ರೇಮಿ ದೇಶಾದ್ಯಂತ ಸುತ್ತಾಡಿ ಗೋ ರಕ್ಷಣೆಯ ಬಗ್ಗೆ ಮಾತಾಡುತ್ತಾರೆ. ಗೋವಿನ ಮಹತ್ವವನ್ನು ಬೆಳಕಿಗೆ ತರುತ್ತಾರೆ. ಅಂತವರಿಂದ “ಅಂಬೆಯ ಕೂಗು” ನಾಮದಡಿಯಲ್ಲಿ ಕಸಾಯಿಖಾನೆಗಳನ್ನು ಮುಚ್ಚಿಸುವಂತೆ ಒಟ್ಟು ೩೦ ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದರು. ಇತ್ತೀಚೆಗೆ “ಜಾತಿ ಸಂಕೋಲೆ ಕಳಚೋಣ” ಎಂಬ ವಿಷಯದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.
ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನಗಳಿಗೆ ಮಾದರಿಯಾಗುವಂತೆ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಮಾಡಿ ಯುವಾಬ್ರಿಗೇಡ್ ತೋರಿಸಿತು. ಕಾರ್ಯಕ್ರಮದಲ್ಲಿನ ಸಮಯಪಾಲನೆ, ಗೋಷ್ಟಿಗಳಿಗೆ ಆಯ್ದುಕೊಂಡ ವಿಷಯಗಳು ಎಲ್ಲವೂ ಅನುಕರಣೀಯ. ಸಾಹಿತ್ಯ ಸಮ್ಮೇಳನವೆಂದರೆ ಹೀಗೆ ಇರಬೇಕು ಎಂಬ ಸಾಹಿತ್ಯಾಸಕ್ತರ ನಿರೀಕ್ಷೆಯನ್ನು ಈ ಸಮ್ಮೇಳನ ಮುಟ್ಟಿತು. ಅಲ್ಲಿ ಒಬ್ಬನೇ ಒಬ್ಬ ಸಕ್ರೀಯ ರಾಜಕಾರಣಿ ವೇದಿಕೆ ಏರಲಿಲ್ಲ.. ದೇಶವನ್ನು ಒಡೆಯಬೇಕು ಎಂಬ ಭಾವನೆ ತಳೆಯುತ್ತಿರುವ ಜೆಎನ್’ಯು ಆಜಾದಿ ಗ್ಯಾಂಗ್ ನಡುವೆ ಯುವಕರನ್ನು ಸರಿದಾರಿಗೆ ತರಲು ವಿವೇಕಾನಂದರ ಚಿಂತನೆಗಳನ್ನು ಪುನರ್ಮನನ ಮಾಡುವುದು ತುಂಬಾ ಅವಶ್ಯ. ಅಂತ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿತೋರಿಸಿದ್ದು ಈ ಸಮ್ಮೇಳನಗಳು.
ದೇಶದ ಹಿತಕ್ಕಾಗಿ ಪ್ರಧಾನಿಗಳು ಕೈಗೆತ್ತಿಕೊಳ್ಳುವ ಹಲವು ಯೋಜನೆಗಳಿಗೂ ಕೈಜೋಡಿಸುವ ಕೆಲಸ ಯುವಾಬ್ರಿಗೇಡ್’ನಿಂದ ನಡೆಯುತ್ತಿದೆ. “ಸ್ವಚ್ಛ ಭಾರತ್” ಬೆಂಬಲಿಸಿ “ಸ್ವಚ್ಛಸ್ಮಾರಕ್” ಎಂಬ ಹೆಸರಿನಡಿಯಲ್ಲಿ ಒಟ್ಟು ೫೦ ಕೋಟೆಗಳನ್ನು ಇನ್ನಿತರೆ ಪುರಾತನ ಸ್ಮಾರಕಗಳನ್ನು ಸ್ವಚ್ಛಗೊಳಿಸಿದ್ದು ಯುವಾಬ್ರಿಗೇಡ್. ಇದರಿಂದ ಪ್ರವಾಸೋದ್ಯಮ ಇಲಾಖೆಗೂ ಲಾಭ. ಇದು ಪ್ರವಾಸೋದ್ಯಮ ಇಲಾಖೆ ಮಾಡಬೇಕಾದ ಕೆಲಸ.
ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ದೇಶದ ಒಳಿತನ್ನು ಅರಿತು ಎಲ್ಲ ಪಕ್ಷಗಳು ಒಂದಾಗಿ ಜೊತೆಗೆ ನಿಲ್ಲಬೇಕಿತ್ತು. ಕನಿಷ್ಟಪಕ್ಷ ಇಂಥ ಒಂದು ಸಕಾರ್ಯಕ್ಕೆ ರಾಜ್ಯ ಬಿಜೆಪಿಯಾದರು ಕೈಜೋಡಿಸಬೇಕಿತ್ತು. ತಮ್ಮದೇ ಪಕ್ಷದ ಒಂದು ಒಳ್ಳೆಯ ಯೋಜನೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿಯವರೂ ಮಾಡಲಿಲ್ಲ. ಅಧಿಕಾರದ ಆಸೆಯಲ್ಲಿ ರಾಜ್ಯದಲ್ಲಿ ಕಚ್ಚಾಟಗಳು ಕೆಸೆರೆರೆಚಾಟಗಳು ನಡೆದಿದ್ದವು. “BLACK AND WHITE” ಮತ್ತು “ಕ್ಯಾಶ್’ಲೆಸ್ ದುನಿಯಾ” ಎಂಬ ಹೆಸರಿನಲ್ಲಿ ರಾಜ್ಯದ ಮೂಲೆಮೂಲೆಗೆ ಈ ಯೋಜನೆಯ ಒಳಿತನ್ನು ತಲುಪಿಸಿದ್ದು ಯುವಾಬ್ರಿಗೇಡ್.
ಸದ್ಯಕ್ಕೆ ಯುವಾಬ್ರಿಗೇಡ್ “ನನ್ನ ಕನಸಿನ ಕರ್ನಾಟಕ” ಎಂಬ ಹೊಸ ಕಾರ್ಯಕ್ಕೆ ಕೈಹಾಕಿದ್ದಾರೆ. ರಾಜ್ಯದ ಬಗ್ಗೆ ಪ್ರತಿ ಪ್ರಜೆಗೂ ತನ್ನದೇ ಕನಸುಗಳಿರುತ್ತವೆ. ಆ ಕನಸುಗಳನ್ನು ಕ್ರೋಢೀಕರಿಸಿ ಅವಕ್ಕೊಂದಿಷ್ಟು ಯೋಜನೆಗಳನ್ನು ಹಾಕಿಕೊಳ್ಳುವ ವಿಚಾರದೆಡೆಗಿನ ಹೆಜ್ಜೆ.
ಜಗತ್ತು ಎಷ್ಟೇ ಕೆಟ್ಟದಾದರೂ ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ನಮ್ಮ ಹಕ್ಕನ್ನು ಯಾರೂ ಕಿತ್ತಿಕೊಂಡಿಲ್ಲ. ಯಾವತ್ತಿಗೂ ಒಳ್ಳೆಯವರ ಬೆಂಬಲಕ್ಕೆ ಒಳ್ಳೆಯವರು ನಿಂತೇ ನಿಲ್ಲುತ್ತಾರೆ. ಎಲ್ಲ ಸಮಸ್ಯೆಗಳಿಗೂ ಸಕಾರಾತ್ಮಕ ಪರಿಹಾರ ಸಿಗುತ್ತದೆ. ಹುಡುಕುವ ಇಚ್ಛಾಶಕ್ತಿ ನಮ್ಮಲ್ಲಿರಬೇಕು. ಹಲವು ಯುವಕರ ಸಂಘಟನೆಗಳು ಹುಂಬರ ಪಡೆಗಳಾಗಿ ಬೀದಿಗಿಳಿದು ಅತ್ಯುಗ್ರವಾಗಿ ಪ್ರತಿಭಟಿಸುವ ಕಾಲದಲ್ಲಿ ಸಕಾರಾತ್ಮಕ ಸೇವೆಯೊಂದಿಗೆ ಗುರುತಿಸಿಕೊಂಡ ಯುವಾಬ್ರಿಗೇಡ್ ಅನುಕರಣೀಯ. ಇದಕ್ಕೆ ಕಾರಣ ಅದನ್ನು ಸರಿಯಾದ ಮಾರ್ಗದಲ್ಲಿ ಚಲಿಸುವಂತೆ ಮಾಡುತ್ತಿರುವ ಚಕ್ರವರ್ತಿ ಸೂಲಿಬೆಲೆ ಎಂಬ ಸಾರಥಿಯೇ ಕಾರಣ. ಯುವಾಬ್ರಿಗೇಡಿನ ಅಷ್ಟೂ ನಿರೀಕ್ಷೆಗಳು ಸಾಕಾರವಾಗಲಿ. ನಿಮ್ಮೊಂದಿಗೆ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ನಾವಂತೂ ಇದ್ದೇವೆ. ಒಳಿತಾಗಲಿ.
Facebook ಕಾಮೆಂಟ್ಸ್