ಭಗವದ್ಗೀತೆ ನಾಲ್ಕನೇ ಅಧ್ಯಾಯದ ಕೊನೆಯಲ್ಲಿ ಗೊಂದಲ ಮನಸ್ಠಿತಿಯಲ್ಲಿ ಮುಳುಗಿದ್ದ ಅರ್ಜುನನನ್ನು ಸಂಬೋಧಿಸುತ್ತಾ ಕೃಷ್ಣ ಹೇಳುವ ಮಾತೇ, “ಉತ್ತಿಷ್ಠ ಭಾರತ”. ಸರಳಾರ್ಥದಲ್ಲಿ ಎದ್ದೇಳು ಭಾರತ, ಒಳಗಿನ ಜ್ಞಾನದ ಬೆಳಕನ್ನು ಬೆಳಗಿಸು. ಅಂದರೆ ಅರಿವಿಗೆ ಬಾರದ ಮಂಪರಿನ ಮಗ್ನತೆಯಿಂದ ಜಾಗೃತಾವಸ್ಥೆಗೆ ಮರಳುವ ಎಚ್ಚರಿಸುವ, ಮಲಗಿದ್ದವರನ್ನೂ ಎದ್ದೇಳಿಸುವ ಕರೆಘಂಟೆ. ಕಥೋಪನಿಷದ್ ಇದನ್ನೇ “ಉತ್ತಿಷ್ಠ ಜಾಗೃತಾ ಪ್ರಾಪ್ಯ ವರನ್ನಿಬೋಧತಾ” ಎಂದಿದೆ. ಅಂದರೆ “ಏಳು, ಎದ್ದೇಳು, ಮತ್ತು ಜ್ಞಾನಿಗಳಿಂದ ಈ ಸತ್ಯವನ್ನು ಅರಿ” ಎಂಬುದಾಗಿದೆ.
ತಮ್ಮ ಜವಾಬ್ದಾರಿ, ಸವಾಲುಗಳಿಗೆ ಬೆನ್ನು ತೋರಿಸಿ ತಪ್ಪಿಸಿಕೊಳ್ಳುವುದರಿಂದ ಎಂದಿಗೂ ಪರಿಹಾರ ಒದಗುವುದಿಲ್ಲ. ಸಮಸ್ಯೆಯನ್ನು ಎದುರಿಸಿ ನಿಂತಾಗಲೇ ಪರಿಹಾರ ದೊರಕುವ ಸಾಧ್ಯತೆಯಿರುತ್ತದೆ. ಎಲ್ಲಾ ಕಾಲದಲ್ಲಿಯೂ ಒದಗಿಬರುವ ಸವಾಲಿಗೆ ಕೈಚೆಲ್ಲಿ ನಿಲ್ಲುವ ಮನಸ್ಥಿತಿ ಇದ್ದೇ ಇತ್ತು. ಆಗೆಲ್ಲ ಕೃಷ್ಣನಂತಹ ಗುರುವೊಬ್ಬ ಎದುರುನಿಂತು ಸರಿಯಾದ ದಾರಿಯಲ್ಲಿ ಮುನ್ನಡೆಸುವ, ಆಂತರ್ಯದ ದೀಪ್ತಿಯಿಂದ ಸ್ವಪ್ರಜ್ಞೆಯನ್ನು ಜಾಗೃತಗೊಳಿಸುವ ಕಾರ್ಯಮಾಡಿಕೊಂಡು ಬಂದಿದ್ದಾರೆ. ಚಂದ್ರಗುಪ್ತನ ಕಾಲಕ್ಕೆ ಕೌಟಿಲ್ಯ, ಆಧುನಿಕ ಭಾರತಕ್ಕೆ ವಿವೇಕಾನಂದ, ಸ್ವಾತಂತ್ರ್ಯ ಹೋರಾಟಕ್ಕೆ ಮೊದಲೆಂಬಂತೆ ತಿಲಕರ ಸ್ವರಾಜ್ಯ ಕರೆ.. ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಇವರೆಲ್ಲ ಮಲಗಿದ್ದ ಅಥವಾ ಕರ್ತವ್ಯ ಪ್ರಜ್ಞೆಯನ್ನು ಮರೆತಿದ್ದ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡಿಕೊಂಡು ಬಂದಿದೆ. ಅಂಥ ನಿದ್ರಾವಸ್ಥೆಯತ್ತ ಜಾರುತ್ತಿರುವ ರಾಷ್ಟ್ರೀಯತೆ, ಸಾಮಾಜಿಕತೆ, ನೈಸರ್ಗಿಕತೆ, ಮಾನವೀಯ ಕಳಕಳಿಗಳನ್ನು ಎಚ್ಚರ ಸ್ಠಿತಿಯಲ್ಲಿಡುವ ಪ್ರಯತ್ನದಿಂದ ರೂಪುಗೊಂಡ ಸಮರ್ಪಿತ ಯುವ ಉತ್ಸಾಹಿ ಗುಂಪು. ತಮ್ಮ ಎಚ್ಚೆತ್ತ ಪ್ರಜ್ಞೆಯಿಂದ ತಮ್ಮ ಸುತ್ತಲಿನ ಪರಿಸರವನ್ನು ಜಾಗೃತಗೊಳಿಸುವ ಪ್ರಯತ್ನ ಇವರದ್ದು.
“ಉತ್ತಿಷ್ಠ ಭಾರತ” ಸಮಾನ ಮನಸ್ಕ ಯುವಕರ ಕ್ರಿಯಾತ್ಮಕ ತಂಡ. ಮಾಡುವ ಕಾರ್ಯದಲ್ಲಿ ಸದಾ ಹೊಸತನವನ್ನು ಕಾಯ್ದುಕೊಳ್ಳುವ, ಸಾಮಾನ್ಯರಿಗಿಂತ ವಿಭಿನ್ನವಾಗಿ ಮಾಡಬೇಕೆಂಬ ಹಪಹಪಿ ಹೊಂದಿರುವ ಅಸಾಮಾನ್ಯ ಗುಂಪಿನಂತೆ ತೋರುತ್ತದೆ. ದೇಶ, ಸಮಾಜ, ಪರಿಸರ, ಸಂಸ್ಕೃತಿಯನ್ನು ಕೇಂದ್ರವಾಗಿರಿಸಿಕೊಂಡು ತಮ್ಮ ಕಾರ್ಯಪ್ರವೃತ್ತಿಯನ್ನು ವಿಸ್ತರಿಸುತ್ತಿದೆ. ಮೂರನೇ ವರ್ಷದ ಪ್ರಾರಂಭಿಕ ನಡೆಯಲ್ಲಿಯೇ ಭವಿತ್ಯಕ್ಕೆ ಭದ್ರ ಬುನಾದಿಯನ್ನು ನಿರ್ಮಿಸುವ ಭರವಸೆಯನ್ನು ಮೂಡಿಸಿದೆ.
ಅನೇಕರು ಹೆಸರು, ಖ್ಯಾತಿ, ರಾಜಕೀಯ ಕಾರಣಗಳಿಗೆ ಸಾಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಂಡರೆ, ಉತ್ತಿಷ್ಠ ಭಾರತ ಕರ್ತವ್ಯವನ್ನು ಕಣ್ಣಿಗೊತ್ತಿಕೊಳ್ಳುವಂತೆ ಕಾರ್ಯನಿರ್ವಹಿಸುತ್ತದೆ. ಇಲ್ಯಾರೂ ಪೂರ್ಣಾವಧಿ ಕಾರ್ಯಕರ್ತರಿಲ್ಲ. ತಮ್ಮ ವಾರಾಂತ್ಯಗಳ ಬಿಡುವಿನ ಸಮಯ ತಮಗಾಗಿ ಇರುವುದಲ್ಲ. ಆ ಸಮಯ ದೇಶಕ್ಕಾಗಿ ಬಳಕೆಯಾಗಬೇಕೆಂಬ ಸದಾಶಯ ಸೇವಾA ಭಾವನೆ ಅವರದ್ದು.
ಮುಂಗಾರಿನ ಮುಂಚೆ ಪರಿಸರಕ್ಕೆ ಸೀಡ್ ಬಾಲ್(ಮಣ್ಣಿನ ಬೀಜದುಂಡೆ)ಯೋಜನೆ. ಉನ್ನುಳಿದ ಸಮಯದಲ್ಲಿ ಸೈನಿಕ ನಮನ, ಗೋವಿನ ವಿವಿಧ ಪ್ರಯೋಜನಗಳ ಪ್ರಸರಣೆ, ಯುವ ಸಂಕ್ರಮಣ, ಭಗವದ್ಗೀತಾ ಅಭಿಯಾನ ಸೇರಿದಂತೆ ಹತ್ತು ಹಲವು ವಿಷಯಗಳಲ್ಲಿ ಉಅತ್ತಿಷ್ಠ ಭಾರತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ಆ ಕಾರ್ಯಗಳಿಗೆಲ್ಲ ಮುಕುಟಮಣಿಯ ಹಾಗೆ ಅನೇಕ ದಾರ್ಶನಿಕರ ಕನಸಿನ ಆದರ್ಶ ಕಲ್ಪನೆಯನ್ನು ಹಳೆ ಬೇರು ಹೊಸಚಿಗುರಿನ ಜೀವಂತಿಕೆಯಂತೆ “ಮಣ್ಣಿನ ಗಣಪ” ಯೋಚನೆಯ ಮುಖೇನ ಸಾಕಾರಗೊಳಿಸಿದ್ದಾರೆ.
ಲೋಕಮಾನ್ಯ ಬಾಲಗಂಗಾಧರ ತಿಲಕರ ರಾಷ್ಟ್ರವನ್ನು ಉದ್ದೀಪಿಸುವ “ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಅದನ್ನು ಪಡೆದೇ ತೀರುತ್ತೇನೆ” ಎಂಬ ಹೇಳಿಕೆಯ ಶತಮಾನೋತ್ಸವವನ್ನು ವಿಭಿನ್ನವಾಗಿ ಆಚರಿಸುವ ದಾರಿಯಲ್ಲಿದೆ. ತಿಲಕರು ೧೮೯೫ರಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯನ್ನು ಜನಸಾಮಾನ್ಯರತ್ತ, ಸಮಾಜದತ್ತ ಕೊಂಡೊಯ್ಯುವ ಸಂಘಟನಾತ್ಮಕ ಉದ್ದೇಶದಿಂದ ಮಹಾರಾಷ್ಟ್ರದ ನಾಡಹಬ್ಬದಂತಿದ್ದ ಗಣೇಶ ಚತುರ್ಥಿಯನ್ನು ಸ್ವಾತಂತ್ರ್ಯದ ರಣಕಹಳೆ ಮೊಳಗಿಸಲು, ಸ್ವರಾಜ್ಯದ ಜಾಗೃತಿ ಮೂಡಿಸಲು ಆದರ್ಶ ರೀತಿಯಲ್ಲಿ “ಸಾರ್ವಜನಿಕ ಗಣೇಶೋತ್ಸವ”ವನ್ನು ಪ್ರಾರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ ಭಾರತದಾದ್ಯಂತ ಸಾರ್ವಜನಿಕ ಗಣೇಶೋತ್ಸವ ಕೇವಲ ನಂಬಿಕೆ, ಜೀವನಕ್ರಮದ ಭಾಗವಾಗಿ ಉಳಿಯದೆ ಸಮಾಜದ ಸಮಸ್ತರನ್ನೂ ಬೆಸೆಯುವ ಈ ದೇಶದ ಅನನ್ಯ ಗುರುತಾಗಿ, ಹೆಗ್ಗಳಿಕೆಯಾಗಿ ಬೆಳೆದಿದೆ. ಇತರ ಹಬ್ಬಗಳು ಕೆಲವರಿಗೆ ಮಾತ್ರ ಸೀಮಿತವಾಗಿದ್ದರೆ ಎಲ್ಲ ಸಂಕೋಲೆ, ಚೌಕಟ್ಟುಗಳನ್ನು ಮೀರಿದ ಈ ಉತ್ಸವ ಸೀಮಾತೀತ.
ಆದರೆ ಅನೇಕ ಗಣೇಶ ಉತ್ಸವಗಳಿಂದು ತನ್ನ ಮೂಲಭೂತ “ಸಾವಯವ ಕಲ್ಪ”ವನ್ನು ಕಳೆದುಕೊಂಡು ಭಕ್ತಿ-ಭಾವ-ಪ್ರಸನ್ನತೆಗೆ ಹೊರತಾದ ಯಾಂತ್ರಿಕ, ತಾಂತ್ರಿಕ ಆಚರಣೆಯಾಗಿ ಬದಲಾಗುತ್ತಿರುವ ವರ್ತಮಾನ ಎದುರಾಗುತ್ತಿದೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ತಿಲಕರ ಕಲ್ಪನೆಯ ಗಣೇಶೋತ್ಸವವನ್ನು ಮತ್ತೆ ಪುರ್ನಪ್ರತಿಷ್ಠಾಪಿಸುವ ಉದ್ದೇಶದಿಂದ ಈ ಬಾರಿ “ಸ್ವರಾಜ್ಯ ಗಣಪ” ಎಂಬ ವಿಶಿಷ್ಟ ಸ್ವದೇಶಿ ಗಣೇಶೋತ್ಸವವನ್ನು ಸೆಪ್ಟೆಂಬರ್ ೧ ರಿಂದ ೩ರ ವರೆಗೆ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ಆಚರಿಸಲಾಗಿದೆ.
ಭಕ್ತಿಗೀತೆ, ಭಜನೆ, ರಾಷ್ಟ್ರೀಯ ವಿಚಾರಗಳ ಮಾತಿನ ಮಂಟಪ, ಧಾರ್ಮಿಕ ಚಿಂತನೆ, ನಾಡಿನ ನವಾಲೋಚನೆಗಳಿಂದ ತುಂಬಿಹೋಗಿದ್ದ ಸ್ವರಾಜ್ಯ ಗಣಪ ಎಂಬ ಪರಿಕಲ್ಪನೆ ಮಳೆಗೆ ನೆಂದು ಆಧುನಿಕತೆಯ ಕೂಪದಲ್ಲೇ ತೊಯ್ದು ಹೋಗಿದ್ದ ಬೆಂಗಳೂರಿನ ಮೂಲೆಯೊಂದರಲ್ಲಿ ವಿಶಿಷ್ಟ ಲೋಕವನ್ನೇ ಸೃಷ್ಟಿಮಾಡಿದ ಸಾಧನೆ ಉತ್ತಿಷ್ಠ ಭಾರತದ್ದು. ಸ್ವದೇಶಿ, ಪರಿಸರ ಸ್ನೇಹಿ ಗಣಪನಿಂದ ನಾಡಿನ ಅಸ್ಮಿತೆಯನ್ನು, ದೇವರ ಗರಿಮೆ, ಭಕ್ತಿಯ ಅರ್ಥಪೂರ್ಣತೆಯನ್ನು ಎತ್ತಿ ಹಿಡಿಯುವ ವಿಸರ್ಜನೆಯ ವರೆಗೂ ಎಲ್ಲವೂ ಗಣೇಶೋತ್ಸವದ ಮೆರುಗು, ಉದ್ದೇಶ ಹಾಗೂ ಅನಿವಾರ್ಯತೆಯನ್ನು ನೂರ್ಮಡಿಗೊಳಿಸುವಂತಿತ್ತು. ಯಾವುದೇ ಹಮ್ಮು ಬಿಮ್ಮಿನ ಆಡಂಬರವಿಲ್ಲದೆ, ಕರ್ಕಶ ಡಿಜೆ ಎಂಬ ಪಶ್ಚಿಮದ ಜಂಜಾಟವಿಲ್ಲದೆ, ನಮ್ಮದೇ ನೆಲದ ಜಾನಪದ ದೇಸಿ ಕಲೆಗಳ ಮೇಳೈಸುವಿಕೆಯಿಂದ ರಂಗೇರಿದ ಗಣೇಶ ವಿಸರ್ಜನೆಯ ರೀತಿ ಇತರರಿಗೂ ಮಾದರಿ.
ಇಲ್ಲಿ ಕಾಣುವ ಒಂದು ಮುಖ್ಯ ಲಕ್ಷಣ ಸಾಂಸ್ಥಿಕವಾಗಿ ಕಳೆದುಹೋಗಬಹುದಾದ ಆಚರಣೆಯನ್ನು ಸಾಮಾಜಿಕಗೊಳಿಸುವ, ಸಾರ್ವಜನಿಕ ಗಣೇಶೋತ್ಸವವನ್ನು ಪುನರುತ್ಥಾನಗೊಳಿಸುವ ಆಸ್ಥೆ. ಒಡಕಿನ ಸಮಾಜವನ್ನು ಒಂದುಗೂಡಿಸುವ ಸದಾಶಯದ ಪ್ರಯತ್ನ. ಕೆಲವು ಇತಿಮಿತಿಗಳ ಹೊರತಾಗಿಯೂ ಇಂತಹ ಪ್ರಾಯೋಗಿಕ, ಸವಾಲಿನ ಪ್ರಯತ್ನವೇ ಒಂದು ಸಾಧನೆ. ಪ್ರಾರಂಭ ಸುಲಭ. ಅದನ್ನು ಮುಂದುವರೆಸುವುದೇ ಬಹುದೊಡ್ಡ ಸವಾಲು. ಮುಂದಿನ ವರ್ಷಗಳಲ್ಲೂ ಈ ಪ್ರಾರಂಭಿಕ ದಿನಮಾನದ ಮೂಲಭೂತ ಸ್ವರೂಪವನ್ನು ಇದೇ ರೀತಿ ಮುಂದುವರೆಸಬೇಕಿದೆ. ಇಂತಹ ಅನೂಹ್ಯ ಪ್ರಯತ್ನಗಳಿಗೆ ಸಮಾಜದ ಸಮಸ್ತರ ಬೆಂಬಲ, ಪೋತ್ಸಾಹ ಹಾಗೂ ಪಾಲ್ಗೊಳ್ಳುವಿಕೆಯ ಅವಶ್ಯಕತೆಯಿದೆ. ನಮ್ಮ ನಡುವಿನ ಅನೇಕ ದಿಕ್ಕುತಪ್ಪುತ್ತಿರುವ ಸಾರ್ವಜನಿಕ ಗಣೇಶೋತ್ಸವ ಆಚರಣೆಗಳ ಅರ್ಥಪೂರ್ಣ ಪುನರುತ್ಥಾನಕ್ಕೆ ಪ್ರೇರಣೆ ನೀಡುವಂತಾದರೆ ಉತ್ತಿಷ್ಠ ಭಾರತ ತಂಡದ ವಿಶೇಷ ಪ್ರಯತ್ನ ಗೆದ್ದಂತಾಗುತ್ತದೆ.
ಮನುಕುಲದ ಒಳಿತಿಗಾಗಿ, ದೇಶದ ಉನ್ನತಿಗಾಗಿ, ಸಮಾಜದ ವಿಕಸನಕ್ಕಾಗಿ, ತಾವೂ ಏನನ್ನಾದರೂ ಮಾಡಲಿಚ್ಛಿಸುವ ಯುವಶಕ್ತಿ ಉತ್ತ್ಫಿಷ್ಠ ಭಾರತದಂತಹ ನವ ಚೈತನ್ಯಶಾಲಿ ಸಂಘಟನೆಯ ಜೊತೆ ತೊಡಗಿಸಿಕೊಳ್ಳುವುದು ಸಮಕಾಲೀನ ಅನಿವಾರ್ಯತೆಯೂ ಹೌದು.
ಉತ್ತಿಷ್ಠ ಭಾರತ ತಂಡವನ್ನು ನೀವೂ ತಲುಪಬೇಕೆಂದಿದ್ದರೆ, ಸಂಪರ್ಕಿಸಿ:
ನೀರಜ್ ಕಾಮತ್: +919964142207. kamath.neeraj@gmail.com
ರವಿತೇಜ ಶಾಸ್ತ್ರಿ: +917259800387. rteja27@gmail.com
-ಶ್ರೇಯಾಂಕ ರಾನಡೆ.
shreyanka.sr1857@gmail.com
Facebook ಕಾಮೆಂಟ್ಸ್