X

ಮಹಾನಗರದಲ್ಲಿ ಮಳೆಯೆಂದರೆ ಬರೀ ಕಿರಿಕಿರಿ

ಹೀಗನಿಸೋಕೆ ಶುರುವಾಗಿದ್ದು ತೀರಾ ಇತ್ತೀಚಿಗೆ..ಅತಿಯಾಗಿ ಪ್ರೀತಿಸುತ್ತಿದ್ದ ಮಳೆ, ಅತಿ ಭಯಂಕರವೆನಿಸಿದ್ದು ನಿಮಗೆ ಅಚ್ಚರಿಯೆನಿಸಿದ್ರೂ, ಹಾಗನಿಸೋಕೆ ಬಲವಾದ ಕಾರಣವೂ ಇದೆ. ಮಹಾನಗರದಲ್ಲಿ ಸುರಿಯವುದು ಊರಲ್ಲಿ ಸುರಿಯುವ ಅದ್ಭುತ ಮಳೆಯಲ್ಲ. ಬದಲಾಗಿ ರೇಜಿಗೆ ಹುಟ್ಟಿಸುವ ಅತಿಭಯಂಕರ ಜಲಪ್ರಳಯ..

ಮಳೆಯೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಳೆ ಅದೊಂದು, ಅದ್ಭುತ..ಹನಿ ಹನಿಯಲ್ಲೂ ಸಂತಸ, ಉತ್ಸಾಹ, ಖುಷಿಯನ್ನು ಹೊತ್ತು ತರುವ ಸೋಜಿಗ. ದುಗುಡ, ದುಮ್ಮಾನ ದೂರವಾಗಿಸಿ ಖುಷಿ, ಬತ್ತಿದ ಮನದಲ್ಲಿ ಭಾವನೆ ಮೂಡಿಸುವ ಕೌತುಕ. ಪ್ರಕೃತಿಯ ಈ ರಮಣೀಯತೆಯನ್ನು ಎಲ್ಲರೂ ಮನಸಾರೆ ಆಸ್ವಾದಿಸುವವರೇ. ಬೆಳ್ಳಿ ಮೋಡಗಳ ಸಾಲು, ನಿಧಾನವಾಗಿ ಕಪ್ಪು ಬಣ್ಣಕ್ಕೆ ತಿರುಗುವುದು ನೋಡುವುದೇ ಖುಷಿ. ಕೊನೆಯಿಲ್ಲದ ಆಗಸದಿಂದ ಮುತ್ತುಗಳಾಗಿ ಭೂಮಿಗಿಳಿಯುವ ನೀರ ಹನಿ..ಹನಿ ಹನಿಯಾಗಿ ಸೇರಿ ಸುರಿಯುವ ಜಡಿ ಮಳೆ..ಮಣ್ಣಲ್ಲಿ ಬೆರೆತು ಬೆರಗು ಮೂಡಿಸುವ ಸುವಾಸನೆ. ತಣ್ಣನೆಯ ಗಾಳಿಯಲ್ಲಿ ಹರಡುವ ಕಂಪು. ಎಲ್ಲವೂ ಒಂದಕ್ಕಿಂತ ಒಂದು ಚೆಂದ.

ಮಳೆ ನಿಂತ ಮೇಲೆ ಎಲೆಗಳ ಮೇಲೆ ಮೂಡುವ ಹನಿ..ಚಿಟ್ಟೆಗಳ ಹಾರಾಟ. ಭಾರೀ ಮಳೆಯ ನಂತ್ರ ತುಂಬಿ ಹರಿಯುವ ಹಳ್ಳ-ತೋಡುಗಳು ಎಲ್ಲವೂ ಸುಂದರ. ಭಾವಜೀವಿಗಳಿಗಂತೂ ಮಳೆಗಾಲ ಅಂದ್ರೆ ಭಾವಯಾನದ ಶರದೃತು. ಮಳೆ ಬಂದರೆ, ಅದೆಂಥಾ ನೋವಿದ್ದರೂ ಮರೆತು, ಮುಖದಲ್ಲಿ ಕ್ಷಣಕಾಲ ನಸು ನಗು ಮೂಡುತ್ತದೆ. ಯಾವುದೋ ನೆನಪಿನಿಂದ ಮನಸ್ಸು ಪ್ರಫುಲ್ಲವಾಗುತ್ತದೆ.

ಆದ್ರೆ ಈ ಬೆಂಗಳೂರಿನಲ್ಲಿ ಮಾತ್ರ ಮಳೆಯೆನ್ನುವುದು ಅತಿ ಭಯಂಕರ. ಕಾರ್ಮೋಡ ಕವಿದರೆ ಸಾಕು ಆತಂಕ ಶುರುವಾಗುತ್ತದೆ. ತಣ್ಣನೆ ಗಾಳಿ ಶುರುವಾದರೆ ಮನದೊಳಗೆ ಭೀತಿ. ಮನೆಯೊಳಗಿದ್ದರೂ, ರಸ್ತೆಯಲ್ಲಿದ್ದರೂ, ಆಫೀಸ್​ನಲ್ಲಿದ್ದರೂ ಭಯ. ನಿರಂತರವಾಗಿ ಸುರಿಯೋ ಮಳೆ, ಮನದಲ್ಲಿ ಆಹ್ಲಾದ ಮೂಡಿಸುವ ಬದಲು ಹುಚ್ಚೆಬ್ಬಿಸುತ್ತದೆ. ಧೋ ಎನ್ನುವ ಸದ್ದು ಖುಷಿ ತರುವ ಬದಲು ರೇಜಿಗೆ ಹುಟ್ಟಿಸುತ್ತದೆ. ಧಾರಾಕಾರ ಮಳೆಗೆ ನಿಂತಿರುವ ಬಸ್​ಸ್ಟ್ಯಾಂಡೇ ಕುಸಿಯುತ್ತದೋ, ಹೋಗ್ತಿರೋ ಬಸ್ಸೇ ಮುಳುಗುತ್ತದೆಯೋ, ಇಲ್ಲ ಆರಾಮವಾಗಿದ್ದೀನಿ ಅಂತ ಅಂದ್ಕೊಂಡಿರೋ ಮನೆಯೊಳಗೇ ನೀರು ನುಗ್ಗುತ್ತಾ ಯಾರಿಗೂ ಗೊತ್ತಿಲ್ಲ. ಅದಕ್ಕೆ ಪ್ರತಿ ಬಾರಿ ಮಳೆ ಸುರಿದಾಗಲೂ ಎದೆಯಲ್ಲಿ ಢವಢವ..

ರಸ್ತೆಯ ಉದ್ದಗಳಲ್ಲಿ ಹರಿಯುವ ಕಪ್ಪನೆಯ ಕೊಳಚೆ ನೀರು ಭಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನೀರಲ್ಲಿ ಕಾಲಿಟ್ಟರೆ ಯಾವ ರೋಗ ಹತ್ತಿಕೊಳ್ಳೋತ್ತೋ ಅನ್ನೋ ಅಸಹ್ಯ. ಹೊಳೆಯಾದ ರಸ್ತೆಯಲ್ಲಿ ನೀರಿಗಿಳಿದೇ ರಸ್ತೆ ದಾಟಬೇಕಾದ ಪರಿಸ್ಥಿತಿ. ಟೂ ವೀಲರ್​, ಫೋರ್ ವೀಲರ್​ ಇದ್ದರೆ ಅಲ್ಲೂ ಫಜೀತಿ. ನೀರು ನುಗ್ಗಿ ರಸ್ತೆಯಲ್ಲೇ ಕೆಟ್ಟು ನಿಂತ ವಾಹನಗಳು ಕಂಗೆಡಿಸುತ್ತವೆ.

ಇನ್ನು ಈ ಭೀಕರ ಮಳೆಯಲ್ಲಿ ಮತ್ತಷ್ಟು ಭಯಭೀಕರವೆನಿಸುವುದು ಟ್ರಾಫಿಕ್​ ಜಾಮ್​..ಗಂಟೆಗಟ್ಟಲೆ ನಿಂತಲ್ಲೇ ನಿಲ್ಲುವ ವಾಹನಗಳು, ರಸ್ತೆಯ ಉದ್ದಗಳಲ್ಲಿ ಬಿದ್ದ ಮರಗಳು, ರೋಡ್ ಬ್ಲಾಕ್​. ಇವತ್ತು ಮನೆಗೆ ತಲುಪ್ತಿವೋ ಇಲ್ವೋ ಅನ್ನೋ ಭಯ ಮನದಲ್ಲಿ ಮೂಡದೇ ಇರಲ್ಲ. ಇದ್ರ ಜತೆಗೇ ಗಾಡಾಂಧಾಕಾರ ಮತ್ತಷ್ಟು ಅಸಹನೀಯವೆನಿಸುತ್ತದೆ. ಮನದೊಳಗಿನ ಭಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಗಪ್ಪೆಂದು ಮೂಗಿಗೆ ರಾಚುವ ಚರಂಡಿ ವಾಸನೆ ಇನ್ನೂ ಅಸಹನೀಯ. ರಸ್ತೆಗಿಳಿದರೆ ಎಲ್ಲಿ ಹೊಂಡವೋ..ಎಲ್ಲಿ ರಸ್ತೆಯೋ ಅನ್ನೋ ಗೊಂದಲ. ಒಂದು ತಪ್ಪು ಹೆಜ್ಜೆಯಿಟ್ಟರೂ ಆಳ-ಪಾತಾಳದ ಚರಂಡಿಯಲ್ಲಿ ಬದುಕು ಸ್ವಾಹಾ..ನಗರವನ್ನೇ ಮುಳುಗಿಸಿದ ಮಳೆಯಲ್ಲಿ ನೀರಲ್ಲಿ ಕೊಚ್ಚಿ ಹೋದುದನ್ನು ಯಾರೂ ನೋಡುವವರಿಲ್ಲ. ಹಾಗೋ ಹೀಗೋ ಮನೆ ಸೇರೋಣ ಅಂದ್ರೆ ಬೇಕಾಬಿಟ್ಟಿ ದುಡ್ಡು ಕೇಳೋ ಆಟೋಗಳು. ಆ ರೋಡ್​ ಬ್ಲಾಕ್​, ಈ ರೋಡ್​ ಬ್ಲಾಕ್​ ಅಂತ ಯಾವ್ಯಾವ್ದೋ ರೋಡ್​ನಲ್ಲಿ ಕರೆದೊಯ್ಯೋ ಪರಿ ಮನದಲ್ಲಿ ಹೆದರಿಕೆ ಹುಟ್ಟಿಸದೆ ಇರುವುದಿಲ್ಲ. ಹಾಗೋ ಹೀಗೋ ಮನೆ ಸೇರುವುದೇ ದೊಡ್ಡ ಸಾಹಸ. ಹಾಗೋ ಹೀಗೋ ಮನೆ ಸೇರುವ ಹೊತ್ತಿಗೆ ಸಾಕಪ್ಪಾ ಸಾಕು..ಬೆಂಗಳೂರಲ್ಲಿ ಇಂಥಹಾ ಮಳೆ ಬೇಡವೇ ಬೇಡ ಅನ್ನೋ ಭಾವನೆ ಮನದಲ್ಲಿ ದಟ್ಟವಾಗುತ್ತದೆ.

ಊರಲ್ಲಿ ಪ್ರಕೃತಿಯ ಮಡಿಲ್ಲಲ್ಲಿ ಸುರಿವ ಸುಂದರ ಮಳೆ ಇಲ್ಲಿ ಮರೀಚಿಕೆ. ಮನದಲ್ಲಿ ರೇಜಿಗೆ ಹುಟ್ಟಿಸುವ ಅತಿ ಭಯಂಕರ ಮಳೆ ಎಷ್ಟು ಬೇಕಾದ್ರೂ ಸುರಿಯುತ್ತದೆ. ಬೆಂಗಳೂರಿನ ಮಳೆ ಕನಸಲ್ಲಿ ಅತಿ ಭಯಂಕರವಾಗಿ ಕಾಡಿದ್ರೆ, ಊರಿನ ಜಿಟಿಜಿಟಿ ಮಳೆ ಸುಂದರ ಸ್ವಪ್ನವಾಗಿ ನಗು ಮೂಡಿಸುತ್ತದೆ.

 

Facebook ಕಾಮೆಂಟ್ಸ್

vinutha perla: ವೃತ್ತಿ ಪತ್ರ್ರಿಕೋದ್ಯಮ. ಪ್ರವೃತ್ತಿ ಬರವಣಿಗೆ. ಹಾಗೆಯೇ ಸುಮ್ಮನೆ ಮನದಲ್ಲಿ ಮೂಡಿದ ಭಾವನೆಗಳನ್ನು ಅಕ್ಷರಕ್ಕಿಳಿಸುವುದು ಹವ್ಯಾಸ. ನಿಜವಾದ ಅನುಭವದ ಬುತ್ತಿಯೇ ಕಥೆ, ಕವನ, ಲೇಖನಗಳ ಜೀವಾಳ. ಸದ್ಯಕ್ಕೆ ಇರುವ ಊರು ಸಿಲಿಕಾನ್ ಸಿಟಿ ಬೆಂಗಳೂರು. ಹುಟ್ಟಿ ಬೆಳೆದಿದ ಸ್ಥಳ ದೇವರ ಸ್ವಂತ ನಾಡು.
Related Post