X

ಸಾವೇ ಸರಿದು ನಿಂತ ಸಾಧಕನ ಕತೆಯಿದು.

ಎಲ್ಲರಂತೆಯೇ ಶಾಲೆಗೆ ಹುಡುಗನ ಗತ್ತಿನಿಂದಲೇ ಓಡಾಡಿದವರು ವಿನಾಯಕರು. ಸಹಪಾಠಿಗಳೊಡನೆ ಜಂಗಿ ಕುಸ್ತಿ, ಭವಿತವ್ಯದ ನೂರಾರು ಕನಸು, ಮಳೆಯ ನೀರಿನೊಂದಿಗಿನ ಮಕ್ಕಳಾಟ, ಕಾಲುಹಾದಿಗಳ ನಿತ್ಯದ ಗುಣಾಕಾರ, ಹೀಗೆ ಅವರ ನೆನಪುಗಳೇ ಅನನ್ಯವಾದುದು. ಬಾಲ್ಯವೆಂದರೆ ಎಲ್ಲರಿಗೂ ಬೆಟ್ಟದಷ್ಟು ಕನಸು ತಾನೇ? ದೂರದ ಪರ್ವತ, ಮುಗಿಯದ ಕಾಡು, ಹರಿಯುವ ನೂರಾರು ತೊರೆ, ವರುಷವಾದರೆ ಮುಗಿದು ಮರಳುವ ಹೊಲಗದ್ದೆಯ ಸಾಗುವಳಿ ಎಂತಹವನಿಗೂ ಬದುಕಿನ ಬಗೆಗೆ ಬಣ್ಣ ತುಂಬುತ್ತದೆ. ಇಂತಹದ್ದೇ ಕನಸುಗಳನ್ನು ಹೊತ್ತು  ಡಿಪ್ಲೊಮಾ ಪದವಿ ಪಡೆದು ಊರಿನ ಮದ್ಯದಲ್ಲಿ ಊರಿನ ನಾಗರಿಕರಿಗೇ ಒಳಿತು ಮಾಡಬೇಕೆಂದು ಸ್ವಂತದ್ದೊಂದು ಅಂಗಡಿ ಇಟ್ಟು ಕುಳಿತವರು ವಿನಾಯಕ್ ರಾವ್.

ಚಂದದ ಬದುಕಿನಲ್ಲೊಂದು ಸಿಡಿಲು ಅಪ್ಪಳಿಸಲು ಹೊಂಚು ಹಾಕಿತ್ತು. ಅದು ವಿನಾಯಕರ ಪಾಲಿಗೆ ಅನ್ಯಾಯ ಮಾಡಿ ಹೋಗಿತ್ತು. ಆ ದಿನ ಅನಿರೀಕ್ಷಿತವಾದ ವಿಧ್ಯುತ್ ಅವಘಡದಿಂದ ವಿನಾಯಕರು ಸಾವು ಬದುಕಿನ ಮದ್ಯೆ ಹೋರಾಟ ಮಾಡುತ್ತಿದ್ದರು.  ಉಸಿರಾಡುತ್ತಿದ್ದುದು ಬಿಟ್ಟರೆ ದೇಹದಲ್ಲಿ ಚಲನೆಯೇ ಇರಲಿಲ್ಲ. ಪ್ರಜ್ಞೆ ಮರುಕಳಿಸಿದಾಗ ವಿನಾಯಕರು ಗಾಬರಿಗೊಂಡು ಹತ್ತಿರದ ಮಂಚ, ಬೆಡ್‍ಗಳನ್ನು ತಡಕಿದರು. ದೇಹದ ಕೆಳಗಿನ ಭಾಗ ಸ್ವಾಧೀನ ಕಳೆದುಕೊಂಡಿತ್ತು. ಸ್ಪರ್ಶಜ್ಞಾನ ಮತ್ತು ಸೊಂಟದ ಕೆಳಗಿನ ನಿಯಂತ್ರಣಗಳೆಲ್ಲ ವಿನಾಯಕರ ಕೈಯಿಂದ ವಿಧಿ ಕಸಿದುಕೊಂಡು ಬಿಟ್ಟಿತ್ತು. ಅವರಿಗೆ ಈ ದುರ್ಘಟನೆ ಘಟಿಸಿದಾಗ ವಯಸ್ಸು ಎಲ್ಲವನ್ನೂ ಸಾಧಿಸುವ ಹಸಿ ಹಸಿ ಇಪ್ಪತ್ತಾರು!!

ಎಲ್ಲವೂ ಇಂದಿದ್ದು ನಾಳೆ ಇಲ್ಲವಾದರೆ ಅದೆಂತಹ ಸಂಕಟ ಆವರಿಸುತ್ತದೆ. ಮನಸ್ಸು ಅದೆಷ್ಟು ಮರುಗುತ್ತದೆ?? ಹೊರಟೇ ಬಿಡೋಣ ಬದುಕಿನ ಉಸಾಬರಿಗಳೇ ಬೇಡ ಎನ್ನುವಷ್ಟು ವ್ಯಾಕುಲತೆ ಆವರಿಸುತ್ತದೆ. ವಿನಾಯಕರನ್ನೂ ಈ ಚಿಂತೆಗಳು ಬಾಧಿಸದಿರಲಿಲ್ಲ. ಮಾನಸಿಕ ಹಿಂಸೆ ಅನುಭವಿಸಿದರು. ಏನೂ ಮಾಡಲಾಗುವುದಿಲ್ಲವಲ್ಲ ಎನ್ನುವ ಕೊರಗಿನಲ್ಲಿಯೇ ಮುಳುಗಿದರು.

ಮೊದಮೊದಲು ಮಾನಸಿಕ ತೊಳಲಾಟದಲ್ಲಿ ಕುಸಿಯುತ್ತಿದ್ದ ರಾವ್ ನಿಧಾನಕ್ಕೆ ಏನೂ ಕೈಗೆಟುಕದೆ ಇನ್ನಿಲ್ಲದ ಚಿತ್ತಕ್ಲೇಶಕ್ಕೆ ಒಳಗಾದರು. ಎಲ್ಲವೂ ಮುಗಿದಂತೆ ಅನ್ನಿಸತೊಡಗಿ ಬದುಕೇ ಭ್ರಮನಿರಸನ ಎನ್ನಿಸತೊಡಗಿತು. ಆ ಸಂಧರ್ಭದಲ್ಲಿ ಕೈ ಹಿಡಿದದ್ದು ಕೊಕ್ಕಡದ ಸಂಘದ ಹಿರಿಯರಾದ ಕೃಷ್ಣ ಭಟ್‍ರವರು. ಬೆಳ್ತಂಗಡಿಯ ಇಂದಿನ ನೂರಾರು ಜನರ ಪ್ರೇರಣೆಗಳಲ್ಲಿ ಕೊಕ್ಕಡದ ಹಿರಿಯಜ್ಜನ ಪಾತ್ರವಿದೆ. ಕೊಕ್ಕಡದಂತಹ ಊರಿನ  ಕಾಡನ್ನು ಇಂದು ನೋಡಿದರೇನೆ ಭಯವಾಗುತ್ತದೆ. ಅಂತಹುದರಲ್ಲಿ  ಈ ಹಿರಿಜೀವ ಆಗಿನ ಕಾಲಕ್ಕೇ ನೂರಾರು ಕಿಲೋಮೀಟರುಗಳನ್ನು ಕಾಲ್ನಡಿಗೆಯಲ್ಲೇ ಕ್ರಮಿಸುತ್ತಿತ್ತು. ಬಿದ್ದವರ ಪಾಲಿಗೆ ಬದುಕಿನ ಪ್ರೀತಿ ತುಂಬುತ್ತಿದ್ದ ಭಗೀರಥ ಅವರಾಗಿದ್ದರು. “ನಿಮ್ಮ ಬಗೆಗೆ ಯೋಚಿಸದೆ ಇತರರ ಬಗೆಗೆ ಯೋಚಿಸಿ” ಎನ್ನುವ ಅವರ ಮಾತುಗಳು ವಿನಾಯಕರ ಮನಸ್ಸಿನಾಳದಲ್ಲಿ ನೆಟ್ಟು ಕುಳಿತವು. ಮನಸ್ಸು ಮತ್ತೆ ಪರ್ವತ, ಕಾಡು, ಬೆಟ್ಟ ಗುಡ್ಡಗಳ ಅಗಾಧತೆಯನ್ನು ಬೆನ್ನು ಹತ್ತತೊಡಗಿತು. ನಾಗಾಲೋಟಕ್ಕೆ ಮನಸ್ಸು ತುಡಿಯುತ್ತಿತ್ತು.  

ನಿಂತಿದ್ದ ಊರಿನ ಸತ್ಯನಾರಾಯಣ ಪೂಜೆ ಶುರುವಾಯಿತು, ಅದು ಈಗಲೂ ಎಲ್ಲ ಜನರ ಸಾಂಘಿಕ ಪ್ರಯತ್ನ ಎಂಬಂತೆ ನಡೆಯುತ್ತಿದೆ. ಸೇವಾಭಾರತಿಗೆ 2004ರಲ್ಲಿ ಹೆಗಲೊಡ್ಡಿದ ವಿನಾಯಕರು ನಂತರದ ಜೀವನವನ್ನು ಪೂರ್ತಿ ಸಮಾಜಕ್ಕಾಗಿಯೇ ಮುಡಿಪಿಟ್ಟವರು. ಸ್ವಾವಲಂಭಿ ಶಿಬಿರಗಳು ಬೆಳ್ತಂಗಡಿ ತಾಲೂಕಿನಲ್ಲಿ ಅಡಿಗಡಿಗೆ ಯುವಕರಲ್ಲಿ ಸ್ಪೂರ್ತಿ ತುಂಬಿದವು. ದೇಸೀ ತಳಿಯ ದನಗಳ ಪಾಲನೆ ಪೋಷಣೆ ಜೊತೆಗೆ ಸಾವಯವ ಕೃಷಿಯನ್ನು ತಾನೇ ಸ್ವತಃ ಮಾಡಿ ಇತರರಲ್ಲಿ ಅದರ ಕೆಚ್ಚನ್ನು ಬಿತ್ತಿ ಬೆಳೆಸಿದವರು. ಅದಕ್ಕಾಗಿ ‘ಧರಿತ್ರಿ ಕೃಷಿಕರ ಸಂಘ’ ಎಂಬ ಸಂಸ್ಥೆ ಹುಟ್ಟು ಹಾಕಿದರು. ತೆಂಗು ಬೆಳೆಗಾರರ ಒಕ್ಕೂಟಕ್ಕಾಗಿ ಅಹೋರಾತ್ರಿ ದುಡಿದು ಯಶಸ್ಸು ಗಿಟ್ಟಿಸಿಕೊಂಡವರು ಇವರು. ಊರಿಗಾಗಿ ರಸ್ತೆಯ ಹೋರಾಟಕ್ಕೆ ದೇಹ ಸ್ಪಂದಿಸದ ಹೊರತಾಗಿಯೂ ಧುಮುಕಿದವರು. ಮಳೆಕೊಯ್ಲು, ನೀರು ಇಂಗಿಸುವಿಕೆಗೆ ತಾನೇ ಮೇಲ್ಪಂಕ್ತಿ ಹಾಕಿ ಸೇವಾ ಭಾರತಿ ಮೂಲಕ ಅದನ್ನು ಮನೆಮನೆಗೆ ತಲುಪಿಸಿದವರು. ಜೇನು ಕೃಷಿಯನ್ನು ಮಾಡಿ ಜನರನ್ನು ಲಾಭದಾಯಕ ಉದ್ದಿಮೆಯತ್ತ ಪ್ರೇರೇಪಿಸಿದವರು.

ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಜನರಲ್ಲಿ ಉಳಿತಾಯದ ಮತ್ತು ಸ್ವಾವಲಂಭಿ ಕಲ್ಪನೆಗೆ ಮೂರ್ತರೂಪ ಕೊಟ್ಟವರು ವಿನಾಯಕರು. ಶಿಕ್ಷಣಕ್ಕಾಗಿ ಜ್ಞಾನಭಾರತಿ ಎಂಬ ಯೋಜನೆಗೆ ಜಾರಿಗೆ ತಂದಿರುವ ಈ ಮಹಾನ್ ಚೇತನ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆಗಳನ್ನೂ ಆಯೋಜಿಸಿದ್ದಾರೆ.   ಭಾರತ ಭಾರತಿ ಪುಸ್ತಕಗಳನ್ನು ಉಚಿತವಾಗಿಯೇ ವಿತರಿಸಿ ದೇಶಭಕ್ತಿಯ ಸಿಂಚನ ಮಾಡಿಸಿದ್ದಾರೆ. ಶಾಲೆಗಳಿಗೆ ಕಂಪ್ಯೂಟರ್ ವಿತರಣೆ, ಐದು ಸಾವಿರದ ಸಹಾಯಧನ ಮೊತ್ತ, ಖುದ್ದು ಲೈಬ್ರೆರಿ ನಿರ್ಮಾಣ ಇವರ ಸಾಧನಾಕ್ಷೇತ್ರದ ಹೆಗ್ಗಳಿಕೆಗಳು. ಆರೋಗ್ಯದ ನೆಲೆಗಟ್ಟಿನಲ್ಲಿ ದಿವ್ಯಾಂಗರಿಗೆ ಗಾಲೀ ಕುರ್ಚಿ, ಮತ್ತಿತರ ಸಾಮಾಗ್ರಿಗಳನ್ನು ಇವರು ನೀಡಿದ್ದಾರೆ. ರಕ್ತದಾನ ಶಿಬಿರ, ಕಣ್ಣು ಪರೀಕ್ಷೆ, ಆರೋಗ್ಯ ತಪಾಸಣೆಯಂತಹ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳು ಲೆಕ್ಕವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಡೆದಿದೆ.

ಸೋಲಾರ್ ದೀಪ ಅಳವಡಿಸುವಿಕೆ ಕಾರ್ಯಕ್ರಮ ಕೈಗೆತ್ತಿಕೊಂಡಿರುವ ವಿನಾಯಕರು ಜಿಲ್ಲೆಯ ಅನೇಕ ಮನೆಗಳಿಗೆ ಬೆಳಕು ನೀಡಿದ್ದಾರೆ. ಅನೇಕ ಮಹಿಳೆಯರಿಗೆ ಟೈಲರಿಂಗ್ ತರಬೇತಿಗೆ ಅನುವು ಮಾಡಿಕೊಟ್ಟಿದ್ದಾರೆ. ಹೊಲಿಗೆ ಮಿಷನ್ ವಿತರಣಾ ಕಾರ್ಯಕ್ರಮವೂ ಸದ್ದಿಲ್ಲದೆ ನಡೆದಿದೆ. ಸಮಾಜದಲ್ಲಿ ಜಾಗೃತಿಯ ಸಲುವಾಗಿ ಸೇವಾಪಥ ಎನ್ನುವ ಪತ್ರಿಕೆಯನ್ನೂ ಇವರು ಮುನ್ನಡೆಸುತ್ತಿದ್ದಾರೆ. ಊರಿನ ನಾಗರಿಕರಿಗೆ ಅರ್ಜಿ, ಸವಲತ್ತು ಸಿಗುವಲ್ಲಿನ ಇವರ ಕಳಕಳಿ ನಿಜಕ್ಕೂ ರೋಮಾಂಚನಕಾರಿ.

ದೇಹಕ್ಕೆ ವರ್ಜ್ಯವೆನಿಸಿದ ಮಲಮೂತ್ರಗಳನ್ನೇ ಗಂಟೆಗೊಮ್ಮೆ ಟ್ಯೂಬ್‍ನಿಂದ ತೆಗೆಯುವ ಅನಿವಾರ್ಯತೆ ಹೊಂದಿರುವ ಇವರು ಓಡಾಡಲು ಗಾಲಿ ಕುರ್ಚಿಯನ್ನೇ ನೆಚ್ಚಿಕೊಳ್ಳಬೇಕು. ಇಲ್ಲವಾದಲ್ಲಿ ಯಾರಾದರೂ ಎತ್ತಿಕೊಂಡು ಓಡಾಡಬೇಕು. ಹೆಚ್ಚು ಕುಳಿತರೆ, ಹೆಚ್ಚು ನಿದ್ರಿಸಿದರೆ ಆರೋಗ್ಯ ಹದಗೆಡುವ ಅಪಾಯದ ಮದ್ಯೆಯೇ ವಿನಾಯಕರು ತನ್ನ ದಿನಚರಿ ಬೆಳಗ್ಗಿನ ನಾಲ್ಕು ಗಂಟೆಗೆ ಶುರು ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲೂ ಬಾವಿಯ ರಿಂಗಿನ ಮೋಲ್ಡ್, ಬಾಡಿಗೆ ವಸ್ತುಗಳನ್ನು ಜೀವನೋಪಾಯಕ್ಕಾಗಿ ನೀಡುವ ವಿನಾಯಕರ ಕೆಚ್ಚು ನಿಜಕ್ಕೂ ಎಲ್ಲರ ಕಣ್ತೆರೆಸುತ್ತದೆ. ಅವರಿಂದ ಸ್ಪೂರ್ತಿ ಪ್ರೇರಣೆ ಪಡೆದು ಬದುಕು ಕಟ್ಟಿಕೊಂಡವರು ಅನೇಕರು. ಈ ವಿಷಮ ಪರಿಸ್ಥಿತಿಯಲ್ಲೂ  ತನ್ನ ದೇಹವನ್ನು ದಾನ ಮಾಡುವ ನಿರ್ಧಾರಕ್ಕೆ ಇತ್ತೀಚೆಗೆ ಸಹಿ ಮಾಡುವ  ಮೂಲಕ ಪರೋಪಕಾರಂ ಇದಂ ಶರೀರಂ ಎಂದೇ ಸಾರಿ ವಿನಾಯಕರು ಸ್ಪೂರ್ತಿಯಾಗಿ ನಿಂತಿದ್ದಾರೆ.

ಇವರ ಕೆಚ್ಚಿಗೆ ಸಾವು ಸರಿದು ನಿಂತಿದೆ ಅನ್ನುವಷ್ಟರ ಮಟ್ಟಿಗೆ ಇವರ ಬದುಕೊಂದು ಕಥಾನಕ.

-ಶಿವಪ್ರಸಾದ್ ಸುರ್ಯ

vishwaprasad1990@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post