X

ಜಲಪಾತ

ಧೋ! ಧುಮ್ಮಿಕ್ಕುವ ಜಲಪಾತ

ಧರೆಯ ಎದೆಯೊಳಗೆ

ನವರಸಗಳ ಅಖಂಡ ಜಾತ!

 

ಬಂಡೆ ಎದೆ ಹರವಿಗೆ ಬೆಣ್ಣೆ ತಿಕ್ಕಿ

ಬಿಗಿದಪ್ಪುವ ಬಯಕೆ ಬಿಸುಪಿಗೆ

ಕರಗಿ ಜಾರುವ ಹುಸಿ ನಾಚಿಕೆ ಮಾಟ|

ತೆರೆದ ಹೊಕ್ಕುಳಿಗೆ ಕಚಗುಳಿಯಿಡುವ

ಹನಿಗಳ ಕೂಟ ಸೃಜಿಪ ಮನ್ಮಥ ಚಾಪ

ಉರಿಗಣ್ಣ ತಣಿಪ ಶೃಂಗಾರನೋಟ || ೧ ||

 

ಶತಮಾನಗಳ ಕಂಡಜ್ಜಿಗೆ

ಮುಡಿ ಹರಡಿ ಸಿಕ್ಕು ಬಿಡೀಸುವ ತವಕ ನಿತ್ಯ

ಕಳೆದು ಹೋಗುವ ಋತುಮಾಸ |

ಕವಳ ಜಗಿದು ಕರೆಹಿಡಿದ ಕಲ್ಲು ಹಲ್ಲು

ಎಡೆಯಿಂದ ಸೀರುವ ಹನಿಹನಿ ಜೊಲ್ಲು

ಪ್ರಬುದ್ಧ ನಗೆಯ ನಿಬದ್ಧ ಹಾಸ || ೨ ||

 

ಪತನದರಿವಿಲ್ಲದ ಸ್ರೋತ

ಇನಿಯನೊಲವ ಕಡಲ ಕೂಡುವ ಸೆಳೆತ

ಅನಂಗನ ತೆವಲು ಬೆದೆಯ ಬಿನ್ನಾಣ |

ಪಾಪ ಹರಿದು ಬರುವ ಹೊಸ ಹೊಸ ಕನಸ

ನಿರಂತರ ನುಂಗುವ ಕ್ರೂರ ಪಾತ

ಕರುಳ ಹಿಂಡುವ ಕರುಣ ತಾಣ || ೩ ||

 

ಧೋ! ಧುಮ್ಮಿಕ್ಕುವ ಜಲಪಾತ

ತಲಾತಲ ತಲ ಸೀಳುವ ಛಲ

ಸವ್ಯಸಾಚಿಯ ನಾಚಿಸುವ ವೇಗ ಶರ |

ಬಂಡೆಯೆಡೆ ಹೆಬ್ಬಂಡೆ ಹೆಡೆಮೆಟ್ಟಿ

ಮರ್ದಿಸುವ ಭೀಮ ಬಲ

ರುದ್ರ ರಮಣೀಯ ದೃಶ್ಯಾಗಾರ || ೪ ||

 

ಚಿರಯೌವನದ ಬಿಸಿ ಪೌರುಷ ರಭಸ

ವ್ಯೂಹ ಭೇದಿಸಿ ಮುನ್ನುಗುವ ಸಾಹಸ

ನುಸುಳುವ ತಲೆ ತರಿದುರುಳಿಸುವ ರಚ್ಚು |

ಹರಿತ ಅಲಗು ಚೂಪು ಮೊನೆ ಎದೆ ಗುದ್ದು

ಎದ್ದು ನಿಲ್ಲುವ ಮೊದಲೇ ಮರ್ಮಕೊದ್ದು

ಸತತ ಧಾಳಿಯಿಡುವ ಪರಿ ವೀರ ಕೆಚ್ಚು || ೫ ||

 

ಧೋ! ಧುಮ್ಮಿಕ್ಕುವ ಜಲಪಾತ

ಗುಂಡಿಗೆ ಸದ್ದಡಗಿಸುವ ಭೋರ್ಗರೆತ

ಅಗಾಧ ಜಲರಾಶಿ ಹುಟ್ಟಡಗುವ ಗರ್ಭ |

ಪಾತಾಳ ದಾಳ ಬಾಯ್ದೆರೆದ ವ್ಯಾಪಿ

ಬೀಳುವದೆಲ್ಲವ ಮುಕ್ಕಿ ಡೊರೆಯುವ

ಬಲು ಭೀಕರ ಭಯಾನಕ ಗರ್ತ || ೬ ||

 

ಸುಪ್ತ ವಿಕೃತ ಕೆರಳುವ ವೈಯಾರದೋಕುಳಿ

ಸಂಗಕೆ ಕರೆವ ನೀರ್ಗುಳ್ಳೆ ಗೆಜ್ಜೆ ಕಜ್ಜಿ ತಳಿ

ಸೆರಗು ಜಾರಿಸಿ ಬೀಳಿಸುವ ಸೆಡವು |

ಅತೃಪ್ತ ಬಯಕೆ ಸುಳಿ ಬಿಚ್ಚಿ

ಎಡೆಬಿಡಿಸಿ ನುಗ್ಗುವ ಸೊಕ್ಕು ಸೆಳವು

ನಗ್ನ ಸಂಧಿಕೂಟ ಬೀಭತ್ಸ ಕನವು || ೭ ||

 

ಧೋ! ಧುಮ್ಮಿಕ್ಕುವ ಜಲಪಾತ

ತೃಷೆಯಾರದ ಬೊಗಸೆ ತುಂಬ ಎರೆಯುವ

ನೊರೆಹಾಲ ಧಾರೆ ಅನಾರತ ಅನಂತ |

ಆಹಾ ! ಏನದ್ಭುತ! ಏನದ್ಭುತವಿದು

ಇಳೆ ತಳೆದ ಘನ ಗಾಂಭೀರ್ಯ ಮೂರ್ತ

ಪ್ರಕೃತಿ ಚೇತನ ಮಿಲನ ಸಂಕೇತ || ೮ ||

 

ಮೂಲದಿಂದ ಕಡಲಕಡೆಗೆ ಪಯಣ

ಒಸರಿನೆಡೆಗೆ ಮತ್ತೆ ಸುಪ್ತ ಚಲನ

ಕಾಲ ಮೀಂಟಿದ ಶ್ರುತಿ ಜಗದ ಚೇತನ |

ಬದುಕು ಬಯಲಿನ ಪ್ರಣವ ನಾದ

ದಿವ್ಯ ಸುಳಿಯಲಿ ಲೀನ ನಿನಾದ

ಸತ್ಯ ಶಾಂತ ಆನಂದ ಧಾವನ || ೯ ||

 

ಧೋ ! ಧುಮ್ಮಿಕ್ಕುವ ಜಲಪಾತ

ಧರೆಯ ಎದೆಯೊಳಗೆ

ನವರಸಗಳ ಅನಾಹತ ಜಾತ ||

-ಕೇಶವ ಭಟ್ ಕಾಕುಂಜೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post