X

ಕೇವಲ ಲಕ್ಷದಷ್ಟು ಇಂಗ್ಲಿಷ್ ಸೈನಿಕರು ಇಡೀ ಭರತಖಂಡವನ್ನು ಬುಗುರಿಯಂತೆ ಆಡಿಸಿದ್ದಾದರೂ ಹೇಗೆ?

ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್’ರಾಜ್’ವರೆಗಿನ ನಡೆ

ಬಾಲ ಬಿಚ್ಚಿ ಕುಣಿದಾಡುತ್ತಿದ್ದ ದೇಶಗಳೆಲ್ಲವನ್ನು ಜುಟ್ಟು ಹಿಡಿದು ಟೊಂಕ ಮುರಿದು ಬಡಿದು ಹಾಕಿದ  ದೇಶವದು. ಅಮೇರಿಕ ಆಸ್ಟ್ರೇಲಿಯಾದಂತ  ಬಲಿಷ್ಠ ದೇಶಗಳೇ ಗಪ್ಚುಪ್ ಎನ್ನುತ ಅವರ ಅಧಿಕಾರವನ್ನು ತಮ್ಮ ಮೇಲೆ ಹರಿಯಬಿಟ್ಟುಕೊಂಡಿದ್ದವು. ಪ್ರಸ್ತುತ ಜಗತ್ತಿನ  ಕೇವಲ ಇಪ್ಪತ್ತರಿಂದ ಇಪ್ಪತ್ತೆರಡು ದೇಶಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ದೇಶಗಳು ಒಂದಿಲ್ಲೊಂದು ಇತಿಹಾಸದ ಕಾಲಘಟ್ಟದಲ್ಲಿ  ಈ ಪುಟ್ಟ ದೇಶದಿಂದ ಆಳ್ವಿಕೆಗೊಳಲ್ಪಟ್ಟಿವೆ! ಹೆಚ್ಚೆಂದರೆ ನಮ್ಮ ಉತ್ತರಪ್ರದೇಶ ರಾಜ್ಯದಷ್ಟಿರುವ ದೇಶ ಹೇಗೆ ವಿಶ್ವದ ನಾಲ್ಕನೇ ಒಂದರಷ್ಟು ಭಾಗವನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಂಡಿತ್ತು ಎಂಬುದೇ ಪ್ರೆಶ್ನೆ. ಇನ್ನು ನಮ್ಮ ಭಾರತದ ವಿಷಯಕ್ಕೆ ಬಂದರೆ ಸಾವಿರಾರು ಮೈಲುಗಳ ದೂರ ಹಡಗುಗಳಲ್ಲಿ ಕ್ರಮಿಸಿ ಭರತಖಂಡವೆಂಬ ವಿಶ್ವದ ಏಳನೇ ಅತಿ ದೊಡ್ಡ ದೇಶವನ್ನು ಒಳಹೊಕ್ಕು ಸುಮಾರು ಇಪ್ಪತ್ತೈದು ಕೋಟಿ  ಜನರನ್ನು ಸುಮಾರು ಎರಡು ಶತಮಾನಗಳಿಗೂ ಹೆಚ್ಚಿನ ಕಾಲ ಹಿಂಡಿ ಹಿಪ್ಪೆಮಾಡಿಹಾಕಲು ಕೇವಲ ತೋಳ್ಬಲದ ಶಕ್ತಿಯೊಂದೇ ಸಾಕಾಗಿತ್ತೇ ಅಥವಾ ಕಾಲಕ್ಕೆ ತಕ್ಕಂತೆ ಹಂತ್ಹಂತವಾಗಿ ಉಸಿರುಗಟ್ಟಿಸುವ ಬೇರೊಂದು ಯುಕ್ತಿಯೇ ಬೇಕಿತ್ತೆ? ಅಂತಹದೊಂದು ಕುತಂತ್ರಿ ಯುಕ್ತಿಯ ಪರಿಣಾಮವೇ ಅಂದು ಕೇವಲ ಲಕ್ಷದಷ್ಟು ಇಂಗ್ಲಿಷ್ ಸೈನಿಕರು ಇಡೀ ಭರತಖಂಡವನ್ನು ಬುಗುರಿಯಂತೆ ಆಡಿಸಲು ಸಾಧ್ಯವಾದದ್ದು.

ಮಸಾಲೆ ಪದಾರ್ಥಗಳ ಮೇಲೆ ಕಣ್ಣು

ಕ್ರಿ.ಶ 1600ರ ಹೊತ್ತಿಗೆ ಭಾರತದ ಮಸಾಲೆ ಪದಾರ್ಥಗಳ ರುಚಿಯನ್ನು ಕಂಡುಕೊಂಡ ಇಂಗ್ಲೆಂಡ್ ವರ್ತಕರ ಪಡೆ ಅಲ್ಲಿಯ ರಾಣಿ ಎಲಿಜಬತ್ ಅನುಮತಿಯ ಮೇರೆಗೆ ಈಸ್ಟ್ ಇಂಡಿಯ ಕಂಪನಿ  ಎಂಬ ವರ್ತಕರ ಸಂಘವೊಂದನ್ನು ಕಟ್ಟಿಕೊಂಡು ಭಾರತಕ್ಕೆ ಪ್ರಯಾಣವನ್ನು ಬೆಳೆಸಿತು. ಪುಡಿಗಾಸಿನ ಬಂಡವಾಳವನ್ನು ಹೂಡಿ ಕೋಟ್ಯಧಿಪತಿಗಳಾಗುವ ಕನಸನ್ನು ತವರು ಬಿಡುವಾಗಲೇ ಕಾಣುತ್ತಾ ಬಂದಿದ್ದರು. ಆದರೆ ಆ ವೇಳೆಗಾಗಲೇ ಡಚ್ ಹಾಗು ಪೋರ್ಚುಗಲ್ ಕಂಪನಿಗಳು  ತಮ್ಮ ಬೇರುಗಳನ್ನು ಭಾರತದ ನೆಲದಲ್ಲಿ ಆಳವಾಗಿ ಇಳಿಬಿಟ್ಟಿದ್ದವು. ಅಷ್ಟೂ ವರ್ತಕರಲ್ಲಿ ತಾನೂ ಒಬ್ಬನಾಗಿ ವ್ಯಾಪಾರ ಮಾಡುವ ಜಾಯಮಾನ ಇಂಗ್ಲಿಷರದಲ್ಲ. ತಾನೊಬ್ಬನೇ ಎಲ್ಲವನ್ನು ಬಾಚಿಕೊಳ್ಳಬೇಕೆಂಬ ದುರಾಸೆ ಭಾರತ ತಲುಪಿದ ಮೊದಲ ದಿನದಿಂದಲೇ ಕಂಪನಿಯ ಪ್ರಣಾಳಿಕೆಯಲ್ಲಿ ಸೇರಿಕೊಂಡಿತ್ತು. ಕೆಲವರ್ಷಗಳ ಕಾಲ ಭಾರತದ ವಿಶ್ವಶ್ರೇಷ್ಠ ಮಸಾಲ ಪದಾರ್ಥಗಳು, ಸಕ್ಕರೆ, ವಜ್ರಗಳು ಹಾಗು ಇನ್ನಿತರೇ ಅಮೂಲ್ಯ ಉತ್ಪನ್ನಗಳು ಮೂವರ ಮಧ್ಯೆ ಹರಿದು ಹಂಚಿಹೋಗುವುದನ್ನೇ ಹೊಟ್ಟೆಕಿಚ್ಚಿನ ಜ್ವಾಲೆಯ ಕಣ್ಣುಗಳಿಂದ  ನೋಡತೊಡಗಿದ್ದ ಕಂಪನಿ 1613 ರಲ್ಲಿ ಸೂರತ್’ನ ಸ್ವಾಲಿಯಲ್ಲಿ ಪೋರ್ಚುಗೀಸರನ್ನು ಹೊಡೆದುರುಳಿಸಿತು. ಮುಂದೆ ಈ ಸೋಲು ಭಾರತದಲ್ಲಿ  ಪೋರ್ಚುಗೀಸರ ನಿರ್ನಾಮಕ್ಕೂ ಕಾರಣವಾಯಿತು ಎಂದರೆ ತಪ್ಪಾಗದು.

ವರ್ತಕ ಕಂಪನಿಯಾದರೂ ಹಲವಾರು ವರ್ಷಗಳಿಂದ ನೆಲೆವೂರಿದ್ದ ಪೋರ್ಚುಗೀಸರ ಅರೆ ಸೈನ್ಯವೊಂದನ್ನು ಸೋಲಿಸಿದ್ದು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಆತ್ಮಸ್ಥೈರ್ಯವನ್ನು ಸಾವಿರಪಟ್ಟು ಹೆಚ್ಚಿಸಿತು. ಮೊಗೆದಷ್ಟೂ ಬತ್ತದ ಅಪಾರ ಸಂಪತ್ತನ್ನು ಇಲ್ಲಿಯ ನೆಲದಲ್ಲಿ ಕಾಣತೊಡಗಿದ ಕಂಪನಿಗೆ ಹೇಗಾದರು ಮಾಡಿ ಅಂದಿನ ಮೊಘಲ್ ದೊರೆ ಜಹಾಂಗೀರ್’ನನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಅದರ ಮುಖೇನ ಈಸ್ಟ್ ಇಂಡಿಯ ಕಂಪನಿಯ ಹಾಗು ಬ್ರಿಟಿಷ್ ಸಾಮ್ರಾಜ್ಯದ ಜೋಳಿಗೆಯನ್ನು ತುಂಬಿಸಬೇಕಂಬ ಆಸೆ ಚಿಗುರೊಡೆದು ಹೆಮ್ಮರವಾಗಿ ಬೆಳೆದಿತ್ತು. ಇದಕ್ಕಾಗಿ ಅಂದಿನ ಬ್ರಿಟಿಷ್ ರಾಯಭಾರಿ ಥಾಮಸ್ ರೋನನ್ನು ಜಹಾಂಗೀರ್’ನ ಆಸ್ಥಾನಕ್ಕೆ ಕಳುಹಿಸಿ, ಕಂಪನಿ ಭಾರತದಲ್ಲಿ ವ್ಯಾಪಾರವನ್ನು ಮಾಡುವಾಗ ಯಾವುದೇ ವಿಘ್ನಗಳು ಎದುರಾಗದಂತೆ ಬೆಂಬಲಿಸಬೇಕೆಂದು, ಪರ್ಯಾಯವಾಗಿ ರಾಜನಿಗೆ ಯುರೋಪ್ ಮಾರುಕಟ್ಟೆಯ ರಂಗು ರಂಗಿನ ವಸ್ತುಗಳ ಉಡುಗರೆಯ ರಾಶಿಯನ್ನೇ ತಂದು ಅರಮನೆಯಲ್ಲಿ ಸುರಿಯಲಾಗವುದು ಎಂಬ ಕನಸನ್ನು ಬಿತ್ತಿತು. ಪಾನಮತ್ತ ದೊರೆಯೆಂದೇ ಬಿರುದು ಗಳಿಸಿದ್ದ ಜಹಾಂಗೀರ್ ಬ್ರಿಟಿಷರ ಮತ್ತೇರಿಸುವ ವಸ್ತುಗಳಿಗೆ ಮನಸೋತು ಅಸ್ತು ಎಂದಿದ್ದ. ಆತನ ಈ ಒಂದು ನಿರ್ಧಾರವೇ ಭರತಖಂಡದಲ್ಲಿ ಆಂಗ್ಲರ ಅಧಿಪತ್ಯ ಚಿಗುರಲು ಸಾಧ್ಯವಾಯಿತು ಅಲ್ಲದೆ ಮುಂದೊಂದು ದಿನ ಇದೆ ಕಂಪನಿ ಅದೇ ಮೊಘಲ್ ಸಾಮ್ರಾಜ್ಯವನ್ನು ಗುರುತುಸಿಗದಂತೆ ಹೊಸಕಿಹಾಕಿತು.

ನರಿಬುದ್ಧಿಯ ಬ್ರಿಟಿಷರು

ಮುಂದೆ ಹೀಗೆಯೇ ತನ್ನ ಚಾಣಾಕ್ಷ ಬುದ್ದಿಯನ್ನು ಉಪಯೋಗಿಸಿ ಅಂದಿನ ಬಾಂಬೆ, ಕೋಲ್ಕತ್ತ ಹಾಗು ಚೆನ್ನೈ ನಗರಗಲ್ಲಿ ಶಾಖೆಗಳನ್ನು ಸ್ಥಾಪಿಸಿದ ಕಂಪನಿ ಭಾರತದ ಅತಿ ದೊಡ್ಡ ವರ್ತಕ ಕಂಪನಿಯಾಗಿ ಬೆಳೆಯಿತು. ಫ್ರೆಂಚರ ವಿರುದ್ಧ ಕರ್ನಾಟಿಕ್ ಯುದ್ಧಗಳಲ್ಲಿ ಭಾಗಶಃ ಜಯವನ್ನು ಗಳಿಸಿದ್ದ ಕಂಪನಿಯ ಮುಂದಿನ ನಡೆ ದೇಶೀ ರಾಜರುಗಳ ಆಳ್ವಿಕೆಯಲ್ಲಿದ್ದ ಸಾಮ್ರಾಜ್ಯಗಳನ್ನು ಕಬಳಿಸುವುದು. ಆದರೆ ರಾಜರುಗಳ ಕಾಲ್ದಳ, ಗಜದಳ ಹಾಗು ತಮ್ಮಲ್ಲಿಯ ಸಿಪಾಯಿಗಳ ಹೋಲಿಕೆಯಲ್ಲಿ   ಆನೆ ಇರುವೆಯ ವ್ಯತ್ಯಾಸವಿದ್ದ ಕಾರಣ ನೇರವಾಗಿ ಸೆಣೆಸಾಡುವ ಬದಲು ಹಿತ್ತಲು ಬಾಗಿಲಿನಿಂದ ನುಗ್ಗಿ ಹೊಡೆಯುವ ತಂತ್ರವನ್ನು ಅವರು ರೂಪಿಸಿದರು. ಇದಕ್ಕೆ ಮೊಮ್ಮೊದಲ ಬಲಿಯೇ ಬಂಗಾಲದ ನವಾಬ ಸಿರಾಜ್ಜುದೌಲ.

ಬ್ರಿಟಿಷ್ ಹಾಗು ಫ್ರೆಂಚರ ಕಿತ್ತಾಟದ ಉಪಟಳದಿಂದ ಬೇಸತ್ತಿದ್ದ ನವಾಬ ಬ್ರಿಟಿಷರ ಬೆಳವಣಿಗೆಯ ಹಳ್ಳವನ್ನು ಪ್ರವಾಹವಾಗುವ ಮೊದಲೇ ನಶಿಸಿಹಾಕುವ ಯೋಜನೆಯನ್ನು ಹಾಕಿಕೊಂಡು ಕೋಲ್ಕತ್ತದ ಮೇಲೆ ದಾಳಿ ಮಾಡಿ ಬ್ರಿಟಿಷರ ವಸಾಹತುಗಳನ್ನು ವಶಪಡಿಕೊಳ್ಳುತ್ತಾನೆ. ಪರಕೀಯರ ಮನೆಯೊಂದರಲ್ಲಿ ರೊಟ್ಟಿ ಮುರಿದು ಮನೆಯೇ ನನ್ನದು ಎನ್ನುವ ನಡತೆಯ ಬ್ರಿಟಿಷ್ ಅಧಿಕಾರಿಗಳಿಗೆ ಈ ಅವಮಾನ ನುಂಗಲಾರದ ತುತ್ತಾಯಿತು. ಕೂಡಲೇ ಚೆನ್ನೈನಿಂದ ಒಂದಿಷ್ಟು ಸೈನ್ಯವನ್ನು ತರಿಸಿಕೊಂಡ ಮೇಜರ್ ಜನರಲ್ ರಾಬರ್ಟ್ ಕ್ಲೈವ್ ಸಿರಜ್ಜುದೌಲನ ಮೇಲೆ ಆಕ್ರಮಣವನ್ನು ಮಾಡಲು ಹೊಂಚು ಹಾಕುತ್ತಾನೆ. ಎಷ್ಟೆಲ್ಲಾ ಹೆಣಗಾಡಿದರು ಆತನಿಗೆ ಹೆಚ್ಚೆಂದರೆ ಮೂರು ಸಾವಿರ ಸೈನಿಕರನ್ನು ಮಾತ್ರ ಒಟ್ಟುಗೂಡಿಸಲು ಸಾಧ್ಯವಾಯಿತು ಮತ್ತು  ಸಿರಜ್ಜುದೌಲನ ಐವತ್ತು ಸಾವಿರ  ಸೈನಿಕರ ಮುಂದೆ ಅದು ತೀರಾ ಕನಿಷ್ಠವಾದ ಸಂಖ್ಯೆಯಾಗಿದ್ದಿತು. ಇಂತಹ ಸಂದರ್ಭದಲ್ಲಿ ಆಂಗ್ಲರ ನರಿಬುದ್ದಿ ಮತ್ತೊಮ್ಮೆ ಕೆಲಸಕ್ಕೆ ಅಣಿಯಾಯಿತು. ಸಿರಜ್ಜುದೌಲನ ಸೈನ್ಯನಾಯಕ ಮಿರ್ ಜಾಫರ್’ನನ್ನು ಪುಸಲಾಯಿಸಿದ ಆಂಗ್ಲರು, ಯುದ್ದದ್ದಲ್ಲಿ ಆತ ತಮ್ಮ ಪರವಾಗಿ ಇರಬೇಕೆಂದೂ, ಪ್ರತಿಫಲವಾಗಿ ಯುದ್ಧವನ್ನು ಗೆದ್ದ ನಂತರ ಆತನನ್ನೇ ಬಂಗಾಲದ ನವಾಬನನ್ನಾಗಿ ಮಾಡುವ ಆಸೆಯನ್ನು ಹೊತ್ತಿಸಿ ಬಂದಿದ್ದರು. ಜೂನ್ 23, 1757 ರಂದು 50,000 ಕ್ಕೂ  ಹೆಚ್ಚಿನ ಸಿರಜ್ಜುದೌಲನ ಪಡೆ  ಹಾಗು 3000 ಕ್ಕಿಂತಲೂ ಕಡಿಮೆ ಸಂಖ್ಯೆಯ (ಇದರಲ್ಲಿ ಹೆಚ್ಚಿನ ತಲೆಗಳು ‘ಭಾರತೀಯ’ ಸಿಪಾಯಿಗಳೇ ಎಂಬುದು ಮಹತ್ವದ ವಿಷಯ) ಕಂಪನಿಯ ಪಡೆ ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಎದುರಾದವು. ಅದಾಗಲೇ ಬಂಗಾಳದ  ನವಾಬನ ಕುರ್ಚಿಯ ಹಗಲು ಕನಸ್ಸನ್ನು ಕಾಣುತ್ತಿದ್ದ ಮಿರ್ ಜಾಫರ್ ತನ್ನ ದೊರೆ ಅಕ್ರಮಣವೆಂದರೂ  ದಳಗಳಿಗೆ ಮುನ್ನುಗ್ಗುವ ಸೂಚನೆಯನ್ನು ಕೊಡಲಿಲ್ಲ. ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಬ್ರಿಟಿಷ್ ಪಡೆ ಕೂಡಲೇ ಸಿರಜ್ಜುದೌಲನ ಮೇಲೆ ಮುಗಿಬಿದ್ದು ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಮುಗಿಸಿದವು. ನಂತರದ ಕೆಲವೇ ದಿನಗಳಲ್ಲಿ ‘ಬ್ರಿಟಿಷ್ ಅದಿನದ ಬಂಗಾಳದ ದೊರೆ’ ಎಂಬ ಬಿರುದಿನೊಂದಿಗೆ ಮಿರ್ ಜಾಫರ್ ಸಿಂಹಾಸನವನ್ನೇರುತ್ತಾನೆ. ಈ ಒಂದು ಯುದ್ಧದ ಗೆಲುವು ಬ್ರಿಟಿಷರನ್ನು ವರ್ತಕರು ಎಂಬ ವರ್ತನೆಯಿಂದ ಬೇರ್ಪಡಿಸಿ ರಾಜರು, ಸಾರ್ವಭೌಮರು ಎಂಬೊಂದು ಅಹಂನನ್ನು ಅವರಲ್ಲಿ ಹುಟ್ಟುಹಾಕಿತು. ರಾಬರ್ಟ್ ಕ್ಲೈವ್’ನ ಹೆಸರು ಇತಿಹಾಸದ ಪುಟಗಳಲ್ಲಿ ಅಳಿಸಿಹಾಕದಂತಾಯಿತು.

ಮುಂದೆ 1764 ರಲ್ಲಿ ಮೊಘಲ್(ಷಾ ಆಲಂ) ಹಾಗು ನವಾಬರು (ಮೀರ್ ಖಾಸಿಂ) ಒಟ್ಟುಗೂಡಿ ಬಿಹಾರದ ಬಾಕ್ಸರ್ನಲ್ಲಿ  ಬ್ರಿಟಿಷರ ವಿರುದ್ಧ ಯುದ್ಧ ಸಾರಿದರು. ಆ ಯುದ್ಧದ ಪರಿಣಾಮವೂ ಸಹ ಪ್ಲಾಸಿ ಕದನದ ಪ್ರತಿರೂಪವೇ ಆಗಿದ್ದಿತು. ಅಲ್ಲದೆ ಈ ಸೋಲು ಬಂಗಾಳದಲ್ಲಿ ನವಾಬರ ಆಳ್ವಿಕೆಯ ಅಂತ್ಯಕ್ಕೆ ಕಾರಣವಾಯಿತಲ್ಲದೆ ಕ್ರಮೇಣ ಮೊಘಲರ ಸಂಪೂರ್ಣ ಅವನತಿಗೂ ನಾಂದಿ ಹಾಡಿತು. 40,000 ದಷ್ಟಿದ್ದ  ದೇಶಿ ಪಡೆ ಅದಕ್ಕಿಂತಲೂ ಕಾಲು ಬಾಗದ ಬ್ರಿಟಿಷ್ ಈಸ್ಟ್ ಇಂಡಿಯ ಪಡೆಯಿಂದ ಹೀನಾಯವಾಗಿ ಸೋಲನೊಪ್ಪಿಕೊಂಡಿತ್ತು. ಪ್ಲಾಸಿಯಲ್ಲಿ ಮಿರ್ ಜಾಫರ್’ನನ್ನು ದಾಳವಾಗಿ ಬಳಸಿಕೊಂಡ ಆಂಗ್ಲರ ಪಡೆ, ಬಾಕ್ಸರ್’ನಲ್ಲಿ ಎದುರಾಳಿ ಪಡೆಗಳ ನಡುವೆ ಇದ್ದ ಅಸಹಕಾರತೆಯ ಲಾಭವನ್ನು ಪಡೆಯಿತು.

ಈ ಎರಡು ಯುದ್ಧಗಳು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯನ್ನು ದೇಶದ ರಾಜಕೀಯ ವಲಯಕ್ಕೂ ಕಾಲಿಡಲು ಅನುವುಮಾಡಿಕೊಟ್ಟವಲ್ಲದೆ ಬ್ರಿಟಿಷರ ಹೆಸರೆತ್ತಿದರೆ ಎದೆಯಲ್ಲಿ ನಡುಕವನ್ನು ಹುಟ್ಟಿಸುವ ಸ್ಥಿತಿಯನ್ನು ದೇಶೀ ರಾಜರಲ್ಲಿ ಮೂಡಿಸಿತು. ಮುಂದೆ ಉತ್ತರದ  ಸಿಂಧ್, ಪಂಜಾಬ್ ಹಾಗು ದಕ್ಷಿಣದಲ್ಲಿ ಮೈಸೂರು ಹಾಗು ಮರಾಠರ ಪ್ರಾಂತ್ಯಗಳನ್ನು ಗೆಲ್ಲುತ್ತಾ ಸುಮಾರು 1840 ರಷ್ಟರಲ್ಲಿ ಕಂಪನಿ ಇಡೀ ಭರತ ಖಂಡದಲ್ಲೇ ತನ್ನ ಅಧಿಪತ್ಯವನ್ನು ಸ್ಥಾಪಿಸಿತು ಅಲ್ಲದೆ ರಕ್ತ ಹೀರುವ ಜಿಗಣೆಗಳಂತೆ ಭಾರತದ ಅಮೋಘ ಸಂಪತ್ತನ್ನು ಹೀರಿಕೊಂಡು ಪುಂಖಾನುಪುಂಖವಾಗಿ ಸ್ವದೇಶಕ್ಕೆ ಸಾಗಿಸತೊಡಗಿತು.

ಸಂಪೂರ್ಣ ಭರತಖಂಡದ ಮೇಲಿನ ಆಡಳಿತದ ಚುಕ್ಕಾಣಿಯನ್ನು ಹಿಡಿದ ಕಂಪನಿಗೆ ಅಫಿಮಿನ ಅಮಲೂ ಸಹ ಅತಿಯಾಗಿಯೇ ಇದ್ದಿತು. ಬಡ ರೈತರಿಂದ ಬಲವಂತವಾಗಿ ಅಫಿಮನ್ನು ಬೆಳಸಿ, ಮೂರು ಕಾಸಿನ ಬೆಲೆಗೆ ಅದನ್ನು ಖರೀದಿಸಿ ಪಕ್ಕದ ಚೀನಾದಲ್ಲಿ ಉತ್ತಮ ಬೆಲೆಗೆ ಮಾರಿ ತನ್ನ ಜೋಳಿಗೆಯನ್ನು ಬರಪೂರ ತುಂಬಿಸಿಕೊಳ್ಳುತ್ತಿತ್ತು. ದೇಶದ ಜನತೆಗೆ ಅಫಿಮಿನ ಅಮಲನ್ನು ಹತ್ತಿಸಿದ ಕಂಪನಿಯ ವಿರುದ್ಧ ಸಿಡಿದ್ದೆದ್ದ ಚೀನಾದ ರಾಜ ಆಂಗ್ಲರ ವಿರುದ್ಧ ಯುದ್ಧವನ್ನು ಸಾರಿದ. ವಿಪರ್ಯಾಸವೆಂಬಂತೆ ಅಂತಹ ಯುದ್ಧದ್ದಲ್ಲೂ ಹೋರಾಡಿ ಸಾಯುತ್ತಿದ್ದದ್ದು ಜಮೀನನ್ನು ಕಳೆದುಕೊಂಡು ಆಂಗ್ಲರ ಸೇನೆಯನ್ನು ಸೇರಿದ್ದ ಸಿಪಾಯಿಗಳೆಂದು ಕರೆಸಿಕೊಳ್ಳುತ್ತಿದ್ದ  ಅಮಾಯಕ ಭಾರತೀಯ ನಾಗರಿಕರೇ!  ಹೀಗೆ ಮುಂದೆ ಕಂಪನಿಯ ಉಪಟಳ, ಅನ್ಯಾಯ ಹಾಗು ತಾರತಮ್ಯದಿಂದ ಬೇಸತ್ತು 1857ರಲ್ಲಿ ಉಂಟಾದ ಸಿಪಾಯಿ ದಂಗೆ ಭಾರತೀಯರೆನಿಸಿಕೊಂಡವರಿಗೆಲ್ಲ ತಿಳಿದಿರುವ ವಿಷಯವೇ. ಅಂದಿನ ಸಿಪಾಯಿ ದಂಗೆಯ ಬಿಸಿ ಬ್ರಿಟನ್ ರಾಣಿಯ ಆಸ್ಥಾನವನ್ನು ತಲುಪಿದ ಕೂಡಲೇ ಕಂಪನಿಯ ಆಡಳಿತವನ್ನು ಬದಿಗೊತ್ತಿ ಸಂಪೂರ್ಣ ಭರತ ಖಂಡದ ಅಧಿಕಾರವನ್ನು ಆಕೆಯ ಬಿಗಿ ಹಿಡಿತಕ್ಕೆ ಒಳಪಡಿಸಲಾಯಿತು. ಹೀಗೆ 1858 ರಿಂದ ಈಸ್ಟ್ ಇಂಡಿಯ ಕಂಪನಿಯ ಆಳ್ವಿಕೆ ಕೊನೆಗೊಂಡು  ಬ್ರಿಟಿಷ್ ರಾಜ್ ಆಳ್ವಿಕೆ ಜಾರಿಯಾಗಿ ಅಂಗೈಯಲ್ಲಿ ದೋಚುವ ಕಾರ್ಯಕ್ಕೆ ಜೋಳಿಗೆಯ ಸಹಾಯವನ್ನು ಕರುಣಿಸಲಾಯಿತು.

ಇತಿಹಾಸದ ಕಾಲಘಟ್ಟದಲ್ಲಿ ವೈಜ್ಞಾನಿಕವಾಗಿ, ಶೈಕ್ಷಣಿಕವಾಗಿ, ಅಲ್ಲದೆ ತಾಂತ್ರಿಕವಾಗಿಯೂ ಮುಂಚೂಣಿಯಲ್ಲಿದ್ದ ದೇಶವೊಂದು ಹೀಗೆ ಪರಕೀಯರ ದಾಳಿಗಳಿಗೆ ಅತಿ ಸಲೀಸಾಗಿ ತುತ್ತಾಗಿದ್ದಾದರು ಹೇಗೆ ಎಂಬ ಪ್ರೆಶ್ನೆ ನಮ್ಮಲ್ಲಿ ಮೂಡದೇ ಇರಲಾರದು. ನಮ್ಮಲ್ಲಿದ್ದ ಅದ್ಯಾವ ದೌರ್ಬಲ್ಯ ಪರಕೀಯರನ್ನು ಇಲ್ಲಿಗೆ ಕರೆಕರೆದು ಚಚ್ಚಿಸಿಕೊಂಡಿತು? ಬ್ರಿಟಿಷರ ವಿಷಯಕ್ಕೆ ಬಂದರೆ ಭಾರತದ ಅವರ ಉತ್ತುಂಗದ ಕಾಲದಲ್ಲೂ ಹೆಚ್ಚೆಂದರೆ ಲಕ್ಷದ್ದಷ್ಟಿದ್ದ ಆ ಸೇನಾಪಡೆ ಇತಿಹಾಸದ ಯಾವ ಸಾಮ್ರಾಜ್ಯವೂ ಆಳದ ಮಟ್ಟಿಗೆ ಆಳ್ವಿಕೆ ನಡೆಸಿದ್ದಾದರು ಹೇಗೆ?

ಮೊದಲನೆಯದಾಗಿ ಆಕ್ರಮಣಗಳ ಮೇಲೆ ಆಕ್ರಮಣವನ್ನು ಮಾಡಿಸಿಕೊಂಡು ಹರಿದು ಹಂಚಿ ಹೋಗಿದ್ದ ದೇಶ ಒಗ್ಗಟ್ಟಿಲ್ಲದ ಮದವೇರಿದ ಆನೆಯ ಗುಂಪಿನಂತಾಗಿದ್ದಿತು. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗುತ್ತಿದ್ದ ಕಾಲವದು. ಇಂತಹ ಸಂದರ್ಭವನ್ನು ಸದುಪಯೋಗ ಮಾಡಿಕೊಂಡ ಆಂಗ್ಲರು ಒಂದೊಂದೇ ಆನೆಗಳನ್ನು ತಮ್ಮ ಪರವಾಗಿ ಪಳಗಿಸತೊಡಗಿದರು. ಪಳಗದ ಆನೆಗಳನ್ನು ಪಳಗಿದ ಆನೆಗಳ ಸಹಾಯದಿಂದ ಒಡೆದುರುಳಿದರು. ಹೀಗೆ ಬಲಿಷ್ಟ ಸಾಮ್ರಾಜ್ಯಗಳೊಟ್ಟಿಗೆ ರಾಜಿಯ ಒಪ್ಪಂದ, ಆಟಕುಂಡು ಲೆಕ್ಕಕ್ಕಿಲ್ಲದವರ ಮೇಲೆ ಪೌರುಷದ ನಡೆ, ದುಡಿಯುವ ಕಂಪನಿಯೊಂದನ್ನು ಆಳುವ ಸರ್ಕಾರವನ್ನಾಗಿ ಮಾಡಿತು. ಅಮೆರಿಕದಂತಹ ಬಲಿಷ್ಟ ದೇಶವೇ ಅಂದೊಂದು ದಿನ ವಿಯೆಟ್ನಾಮ್ ನಂತಹ ಅತಿ ಸಣ್ಣ ದೇಶವನ್ನು ಮಣಿಸಲಾಗದಿರುವಾಗ, ಮನಸು ಮಾಡಿದ್ದರೆ ವಿಶ್ವವನ್ನೇ ಗೆಲ್ಲುವ ತಾಕತ್ತಿದ್ದ ಪುರಾತನ ಪ್ರಸಿದ್ಧ ದೇಶವೊಂದು ನೆನ್ನೆ ಮೊನ್ನೆ ಜನಿಸಿದ ದೇಶಗಳ ದಾಳಿಕೋರರಿಂದ ಆಳ್ವಿಕೆಗೊಳಪಟ್ಟದ್ದು  ಮಾತ್ರ ನಮ್ಮ ವಿಪರ್ಯಾಸವೇ ಸರಿ. ಬ್ರಿಟಿಷರ ಅಧಿಕಾರ ವಿಸ್ತರಣೆಗೆ ಮತ್ತೊಂದು ಬಲವಾದ ಕಾರಣ ಅವರ ಬಳಿಯಿದ್ದ ಯುದ್ದೋಪಕರಣಗಳು. ದೇಶೀ ರಾಜರುಗಳ ಸಾಗರ ಸಂಖ್ಯೆಯ ಅಶ್ವದಳ, ಗಜದಳ ಹಾಗು ಕಾಲ್ದಳಗಳನ್ನು ನಿಮಿಷಮಾತ್ರದಲ್ಲಿ ನಿರ್ನಾಮ ಮಾಡುವ ತಂತ್ರಜ್ಞಾನಗಳು ಅವರ ಗೆಲುವುಗಳಿಗೆ ವರದಾನವಾಗಿ ಪರಿಣಮಿಸಿದವು. ಅಲ್ಲದೆ ನಮ್ಮವರನ್ನೇ ಸಿಪಾಯಿಗಳೆಂದು ಸೈನ್ಯಕ್ಕೆ ಸೇರಿಸಿಕೊಂಡು ನಮ್ಮ ವಿರುದ್ಧವೇ ಹೋರಾಡಲು ನಿಲ್ಲುವಂತೆ ಮಾಡಿದ್ದು ಅವರ ನೂರು ತಂತ್ರಗಾರಿಕೆಗಳಲ್ಲೊಂದು. ದೇಶೀ ರಾಜರುಗಳ ಆಳ್ವಿಕೆಯಲ್ಲಿದ್ದ ಲೋಪದೋಷಗಳಿಂದ ಬೇಸತ್ತಿದ್ದ ಜನರೂ ಸಹ ಹೀಗೆ ಬಹುವಾಗಿ ಆಂಗ್ಲರ ಪಡೆಯನ್ನು ಸೇರುತ್ತಿದ್ದರು. ಇಷ್ಟೆಲ್ಲಾ ಕುತಂತ್ರಗಾರಿಕೆಗಳು ಆಂಗ್ಲರನ್ನು ಶತಮಾನಗಳವರೆಗೆ ವಿಶ್ವದ ಮೂಲೆ ಮೂಲೆಗಳಿಗೆ ಪಸರಿಸಿಕೊಳ್ಳಲ್ಲು ಸಾಧ್ಯಗಿಸಿತು.

ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಆಗಮನ ನಮ್ಮ ದೇಶವನ್ನು ಆರ್ಥಿಕವಾಗಿ ಅದೆಷ್ಟೇ ಕುಗ್ಗಿಸಿದರೂ ಅಖಂಡ ಭಾರತವಂಬ ಕಲ್ಪನೆಯನ್ನು ದೇಶೀಯರಲ್ಲಿ ಪುನಃ ಹುಟ್ಟಿ ಹಾಕಿತು. ಒಂದು ಪಕ್ಷ ಬ್ರಿಟಿಷರು ದೇಶದ ಸುತ್ತಲೂ ಗೆರೆಯೊಂದನ್ನು ಎಳೆದು ಇಂತಿಷ್ಟು ಜಾಗವನ್ನು ಇಂಡಿಯ ಎಂದು ಕರೆಯದಿದ್ದರೆ ಅಕ್ಕ ಪಕ್ಕದ ಬಕರಾಕ್ಷಸ ರಾಷ್ಟ್ರಗಳು ಇಷ್ಟರಲ್ಲಾಗಲೇ ನಮ್ಮ ನೆಲವನ್ನು ನುಂಗಿ ನೀರು ಕುಡಿದಿರುತ್ತಿದ್ದವು. ಬ್ರಿಟಿಷರು ಮೇಲಿನಿಂದ ಬಂದ ಆಕ್ರಮಣಕಾರರನ್ನು ಇಲ್ಲಿಂದ ಕಾಲು ಕೀಳಿಸಿದರಲ್ಲದೆ ದೇಶವನ್ನು, ದೇಶೀ ಉತ್ಪನ್ನಗಳನ್ನು ತಿಳಿದೋ ತಿಳಿಯದೆಯೋ ವಿಶ್ವ ಮಾರುಕಟ್ಟೆಯಲ್ಲಿ ತಂದು ನಿಲ್ಲಿಸಿದರು. ಸ್ವಾತಂತ್ರ್ಯ ನಂತರ ದೇಶದ ಬೆಳವಣಿಗೆಯಲ್ಲಿ ಪ್ರತ್ಯಕ್ಷವಲ್ಲವಾದರೂ ಪರೋಕ್ಷವಾಗಿ ಇದು ಸಹಕಾರಿಯಾಯಿತು. ಅದು ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಕಲ್ಪನೆಯಾಗಲಿ ಅಥವಾ ಇದು ನಮ್ಮ ನೆಲವೆಂಬ ಪ್ರೀತಿಯ ಜ್ವಾಲೆಯಾಗಲಿ, ಬ್ರಿಟಿಷರೆಂಬ ಆಸೆಬುರುಕ ಅನ್ಯಾಯಿಗಳಿಂದಲೇ ಸಾಧ್ಯವಾಯಿತು ಎಂಬುದು ಸೋಜಿಗದ ಸಂಗತಿ. ಇಲ್ಲವಾದರೆ ಗುಲಾಮ, ನಿಜಾಮ, ರಜಪೂತ, ಮರಾಠ, ಒಡೆಯ ಎಂಬಿತ್ಯಾದಿ ರಾಜ ಮನೆತನಗಳ ನಡುವೆ ಹರಿದು ಹಂಚಿಹೋಗಿದ್ದ ಇತಿಹಾಸ ಪ್ರಸಿದ್ಧ ನಮ್ಮ ನೆಲ ಇಂದು ಒಂದಾಗಿ ಭಾರತ ಎಂದು ಹೆಮ್ಮೆಯಿಂದ ಕರೆಸಿಕೊಳ್ಳಲು ಸಾಧ್ಯವಾಗದೆ ಇರುತ್ತಿತ್ತೇನೋ, ಯಾರು ಬಲ್ಲರು?!

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post