X

ವಿರೋಧಿಗಳ ನಿದ್ದೆಗೆಡಿಸಿರುವ ಜನರಲ್ ರಾವತ್!  

ಪ್ರಾಯಶಃ ನಮ್ಮ ದೇಶದಲ್ಲೇ ಅನ್ನಿಸುತ್ತದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶವನ್ನು, ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಪ್ರಧಾನಿಯನ್ನು ಮತ್ತು ಸೈನಿಕರನ್ನು   ವಾಚಾಮಗೋಚರ ನಿಂದಿಸಲು ಸಾಧ್ಯವಿರುವುದು. ಎಡ-ಬಲಗಳ ನಡುವಿನ ಸಂಘರ್ಷದಲ್ಲಿ ನಮ್ಮೆಲ್ಲರನ್ನೂ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಸೈನಿಕರ ಮನೋಬಲ ಕುಂದಿಸಲು ಯತ್ನಿಸುವ ವಿಚಿತ್ರ ಚಾಳಿ ಈಗ ಒಂತರಾ ಮಾಮೂಲಿ ಆಗಿ ಬಿಟ್ಟಿದೆ. ಸೈನಿಕರು ಜನಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡಿದರು, ಕಾಶ್ಮೀರ ಕಣಿವೆಯಲ್ಲಿ ಅತ್ಯಾಚಾರ ಮಾಡಿದರು, ಕಾಶ್ಮೀರದ ಇಂದಿನ ಸ್ಥಿತಿಗೆ ಸೈನ್ಯವೇ ಕಾರಣ ಅನ್ನುವ ಆಧಾರ ರಹಿತ ಆರೋಪಗಳು ಹಳೆಯದಾದವು. ಈಗೇನಿದ್ದರೂ ಸೈನ್ಯದ ಮುಖ್ಯಸ್ಥರನ್ನು ಬಾಯಿಗೆ ಬಂದಂತೆ ಜರಿಯುವುದೇ ಭಾರತದಲ್ಲಿರೋ ಪಾಕಿಸ್ತಾನಿ ಆತ್ಮಗಳ ಸಿಂಗಲ್ ಪಾಯಿಂಟ್ ಅಜೆಂಡಾ. ಅದರಲ್ಲೂ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೇ ಈ ಅತೃತ್ಮ ಆತ್ಮಗಳ ಪ್ರಮುಖ ಟಾರ್ಗೆಟ್.!!

ಯಾವ ತರ ನರೇಂದ್ರ ಮೋದಿ ಅಧಿಕಾರ ಹಿಡಿದಾಗ ಮೋದಿ ವಿರೋಧಿಗಳು ಕಂಗಾಲಾಗಿ ಹೋಗಿದ್ದರೋ, ಯಾವ ರೀತಿ ಡಿಮಾನಿಟೈಸೇಶನ್ ಸಂದರ್ಭದಲ್ಲಿ ಕಪ್ಪು ಹಣದ ಕುಳಗಳು ಬೆಚ್ಚಿ ಬಿದ್ದಿದ್ದರೋ ಅದೇ ರೀತಿ ಭಾರತದಲ್ಲಿರುವ ಪಾಕಿಸ್ತಾನಿ ಆತ್ಮಗಳು ಜನರಲ್ ಬಿಪಿನ್ ರಾವತ್ ರನ್ನು ಭೂ ಸೇನೆಯ ಮುಖ್ಯಸ್ಥರನ್ನಾಗಿ ನೇಮಿಸಿದಾಗ ನಖಶಿಖಾಂತ ಕುದಿದಿದ್ದರು. ಇಬ್ಬರು ಸೇನಾಧಿಕಾರಿಗಳ ಸೇವಾ ಹಿರಿತನವನ್ನು ಕಡೆಗಣಿಸಿ ರಾವತ್ ಅವರನ್ನು ನೇಮಕ ಮಾಡಿದ ಕೇಂದ್ರದ ನಿರ್ಧಾರವನ್ನು ಇವರುಗಳು ಪ್ರಶ್ನಿಸಿದ್ದರು. ಆದರೆ ಎಸಿ ರೂಮಿನಲ್ಲಿ ಕುಳಿತು ಪ್ರಶ್ನಿಸಿದವರಿಗೇನು ಗೊತ್ತು ರಾವತ್ ಬಗ್ಗೆ? ‘ಸ್ವಾರ್ಡ್ ಆಫ್ ಹಾನರ್’ ಗೌರವಕ್ಕೆ ಪಾತ್ರರಾಗಿದ್ದ ರಾವತ್ ಉರಿ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಗಡಿಯಲ್ಲಿ ನಡೆಸಲಾಗಿದ್ದ ಸರ್ಜಿಕಲ್ ಸ್ಟ್ರೈಕ್ ಯಶಸ್ವಿಯಾಗಲು ತನ್ನದೇ ಆದ ಕೊಡುಗೆಯನ್ನು ನೀಡಿದ್ದರು. ಭಾರತೀಯ ಸೇನೆ 2015ರಲ್ಲಿ ಮಾಯನ್ಮಾರಲ್ಲಿ ಅಡಗಿ ಕುಳಿತಿದ್ದ ನಾಗಾ ಉಗ್ರರನ್ನು ಹೊಡೆದುರುಳಿಸಿ ಬಂದಿತ್ತಲ್ಲ ಅದರ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದವರು ಇದೇ ರಾವತ್!  ಸದಾ ಉದ್ವಿಗ್ನವಾಗಿರುವ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆ ವಿಷಯದಲ್ಲಿದ್ದ ಅಪಾರ ಅನುಭವ, ಚೀನಾ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಮತ್ತು ಗಡಿ ಪ್ರದೇಶದಲ್ಲಿ ಪಾಕ್ ಮತ್ತು ಚೀನಾದಿಂದ ಎದುರಾಗಬಲ್ಲ ಸೂಕ್ಷ್ಮ ಪರಿಸ್ಥಿತಿ ನಿಭಾಯಿಸಬಲ್ಲರು ಎಂಬ ಕಾರಣಕ್ಕೆ ರಾವತ್ ಹೆಗಲಿಗೆ ಹೊಣೆಗಾರಿಕೆ ನೀಡಿತ್ತು ಕೇಂದ್ರ ಸರಕಾರ. ಸೇವಾಹಿರಿತನವನ್ನು ಕಡೆಗಣಿಸಿ ಸೈನ್ಯದ ಮುಖ್ಯಸ್ಥರ ನೇಮಕವಾದದ್ದು ಇದೇ ಮೊದಲೇನಲ್ಲ. 1983ರಲ್ಲಿ ಇಂದಿರಾ ಗಾಂಧಿ ಸರಕಾರವಿದ್ದಾಗಲೂ ಇದೇ ರೀತಿಯ ನೇಮಕವಾಗಿತ್ತು. ಅಂತೂ ಆಕ್ಷೇಪಗಳ ಮಧ್ಯೆ ರಾವತ್ ಅಧಿಕಾರ ಸ್ವೀಕರಿದ್ದು ಈಗ ಇತಿಹಾಸ.

ಜನರಲ್ ರಾವತ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ `ಮ್ಯಾನ್ ಆಫ್ ಆ್ಯಕ್ಷನ್’ ಎಂದೇ ಪ್ರಸಿದ್ಧರಾದವರು. ರಾವತ್ ಅಧಿಕಾರ ಸ್ವೀಕರಿಸುತ್ತಲೇ ಭಾರತೀಯ ಸೈನ್ಯದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿತು. ಆದರೆ ರಾವತ್ ನೇಮಕಕ್ಕೆ ಇನ್ನಿಲ್ಲದಂತೆ ವಿರೋಧಿಸಿದ್ದ ಅತೃಪ್ತ ಆತ್ಮಗಳು ರಾವತ್ ಪ್ರತೀ ನಡೆಯನ್ನೂ ವಿರೋಧಿಸುತ್ತಲೇ ಬಂದರು. ಕೆಲ ತಿಂಗಳುಗಳ ಹಿಂದೆ ಕಾಶ್ಮೀರ ಕಣಿವೆಯಲ್ಲಿ ಸೇನೆಯ ಕಾರ್ಯಾಚರಣೆ ಸಂದರ್ಭ ಕಲ್ಲು ತೂರುವವರನ್ನು ನಿರ್ದಾಕ್ಷಿಣ್ಯವಾಗಿ ಹೊಡೆದುರುಳಿಸಲಾಗುವುದು ಎನ್ನುವ ರಾವತ್ ಎಚ್ಚರಿಕೆಗೆ ದಶದಿಕ್ಕುಗಳಿಂದಲೂ ವಿರೋಧ ವ್ಯಕ್ತವಾಯಿತು. ಇತ್ತೀಚಿಗೆ ಹೇಳಿಕೆಯೊಂದನ್ನು ನೀಡಿದ್ದ ರಾವತ್  ಕಾಶ್ಮೀರದಲ್ಲಿ ಸೇನಾಪಡೆ ಅತ್ಯಂತ ಕೊಳಕು ಸಮರವನ್ನು ಎದುರಿಸುತ್ತಿದೆ, ಈ ಸಮರದಲ್ಲಿ ಎದುರಾಳಿ ಮುಖಾಮುಖಿಯಾದಾಗ ಸಮಯಕ್ಕೆ ತಕ್ಕಂತೆ ಹೋರಾಡುವುದೇ ನಿಯಮ. ಇಂತಹ ಯುದ್ಧವನ್ನು ಎದುರಿಸಲು ಆವಿಷ್ಕಾರಿ ಕ್ರಮಗಳನ್ನೇ ಅನುಸರಿಸಬೇಕಾಗುತ್ತದೆ ಎಂದು ಹೇಳುವ ಮೂಲಕ ಸೇನೆಯ ಮೇಲೆ ಕಲ್ಲುತೂರಾಟ ನಡೆಸಿದ ಉಗ್ರನನ್ನು ಸೇನಾ ಜೀಪ್ ಗೆ ಕಟ್ಟಿ ಮಾನವ ಗುರಾಣಿಯಂತೆ ಬಳಸಿಕೊಂಡಿದ್ದ ಯುವ ಸೇನಾಧಿಕಾರಿ ಲಿತುಲ್ ಗೊಗೋಯ್ ಕ್ರಮವನ್ನು ರಾವತ್ ಸಮರ್ಥಿಸಿಕೊಂಡಿದ್ದರು. ಬಿಪಿನ್ ರಾವತ್ ಅವರು ಗೊಗೊಯ್ ಅವರ ಕ್ರಮವನ್ನು ಸಮರ್ಥಿಸಿದ ಬೆನ್ನಲ್ಲೇ ತನ್ನ ಮುಖವಾಣಿ ಪೀಪಲ್ಸ್ ಡೆಮಾಕ್ರೆಸಿಯಲ್ಲಿ ಲೇಖನ ಪ್ರಕಟಿಸಿದ್ದ ಸಿಪಿಐ(ಎಂ) ಸೇನಾ ಮುಖ್ಯಸ್ಥರು ಕಾಶ್ಮೀರಿ ಜನತೆಯ ಧ್ವನಿಯನ್ನು ಅಡಗಿಸುವ ಮೋದಿ ಸರ್ಕಾರದ ಉದ್ದೇಶಗಳನ್ನು ಪ್ರತಿಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿತ್ತು. ಪಾರ್ಥ ಚಟರ್ಜಿ ಅನ್ನುವ ಬರಹಗಾರನೊಬ್ಬ ರಾವತ್ರನ್ನು ಜನರಲ್ ಡಯರ್ ಗೆ ಹೋಲಿಕೆ ಮಾಡುತ್ತಾರೆ. ಎಲ್ಲಿಯ ಡಯರ್, ಎಲ್ಲಿಯ ರಾವತ್.! ಒಂದು ವೇಳೆ ರಾವತ್ ಡಯರ್ ತರ ಕಾರ್ಯನಿರ್ವಹಿಸಿದ್ದರೆ ಇವತ್ತು ಪಾರ್ಥ ಪರಿಸ್ಥಿತಿ ಏನಾಗಿರುತ್ತಿತ್ತು?? ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್ ಅನ್ನುವ ತಲೆಹಿಡುಕ ವ್ಯಕ್ತಿ ಸೇನಾ ಮುಖ್ಯಸ್ಥರನ್ನು ಬೀದಿಬದಿಯ ಗೂಂಡಾ ಅನ್ನುವ ಆರೋಪ ಮಾಡುತ್ತಾನೆ! ಭಾರತೀಯ ಸೇನಾ ಮುಖ್ಯಸ್ಥರ ಮೇಲೆ ಭಾರತೀಯರೇ ಕೀಳುಮಟ್ಟದ ಆರೋಪ ಮಾಡಿದರೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಈ ಸುದ್ದಿ ರಾರಾಜಿಸುವುದು

ಸಹಜವಲ್ಲವೇ? ಇವರೆಲ್ಲರ ಉದ್ದೇಶವೂ ಒಂದೇ, ಹೇಗಾದರೂ ನಮ್ಮ ಸೈನಿಕರ ಮನೋಬಲ ಕುಗ್ಗಿಸಬೇಕು ಮತ್ತು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಇದರಿಂದ ಲಾಭವಾಗಬೇಕು!

ಜನರಲ್ ರಾವತ್ ಇತ್ತೀಚಿಗೆ ಒಂದು ಹೇಳಿಕೆ ಕೊಟ್ಟಿದ್ದರು. ಕಾಶ್ಮೀರದ ಮಂದಿ ಸೈನ್ಯದ ಮೇಲೆ ಕಲ್ಲೆಸೆಯುವ ಬದಲು ಗುಂಡಿನ ದಾಳಿಯನ್ನು ಮಾಡಲಿ. ಆಗ ನಮ್ಮ ಕೆಲಸ ಸುಲಭವಾಗುತ್ತದೆ ಅಂದಿದ್ದರು. ಅರುಂಧತಿ ರಾಯ್ ಅನ್ನುವ ಪಾಕಿಸ್ತಾನಿ ಏಜೆಂಟ್ ಇಡೀ ಭಾರತೀಯ ಸೈನ್ಯವನ್ನು ಕಾಶ್ಮೀರದಲ್ಲಿ ನಿಯೋಜನೆ ಮಾಡಿದರೂ ಕಲ್ಲು ತೂರುವವರನ್ನು ನಿಯಂತ್ರಿಸಲಸಾಧ್ಯ ಅನ್ನುವ ಹೇಳಿಕೆ ನೀಡುತ್ತಾಳೆ. ಅರುಂಧತಿ ರಾಯ್ ಹೇಳಿಕೆಯನ್ನು ವಿರೋಧಿಸದ ನಮ್ಮ ಬುದ್ಧಿಜೀವಿಗಳು ರಾವತ್ ಹೇಳಿಕೆಯನ್ನು ಹಿಂದೂ ಮುಂದೂ ನೋಡದೇ ಖಂಡಿಸುತ್ತಾರೆ.! ನೆರೆಯ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನ ಮತ್ತು ಆಂತರಿಕ ಭದ್ರತೆಗೆ ಸವಾಲೊಡ್ಡುತ್ತಿರುವವರ ವಿರುದ್ಧ ಯುದ್ಧ ನಡೆಸಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಕೆಲ ದಿನಗಳ ಹಿಂದೆ ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಜನರಲ್ ರಾವತ್  ಹೇಳಿದ್ದರು. ರಾವತ್ ಭಾರತ ಯದ್ದಕ್ಕೆ ಸನ್ನದ್ಧವಾಗಿದೆ ಅನ್ನುವ ಹೇಳಿಕೆ ನೀಡಿದಾಗ ಪಾಕಿಸ್ತಾನದ ಮುಂದೆ ನಮ್ಮ ರಹಸ್ಯವನ್ನೇಕೆ ಬಿಚ್ಚಿಡಬೇಕು ಎಂದು ವಾದ ಮಾಡುವ ಬುದ್ಧಿಜೀವಿಗಳು ಬರ್ಖಾದತ್ ಅನ್ನುವ ಎಡಬಿಡಂಗಿ ಪತ್ರಕರ್ತೆ ಗಡಿಯಲ್ಲಿ ಯಾವ ತರ ಒಳ ನುಸುಳಬಹುದು ಎಂಬುದನ್ನು ಎಳೆ ಎಳೆಯಾಗಿ ವಿವರಿಸುವ ವಿಡಿಯೋ ಮಾಡಿದ್ದರೂ ಬಾಯಿಗೆ ಮೊಳೆ ಹೊಡೆದು ಕೂತಿದ್ದರು.!

ಗಡಿ ಕಾಯುತ್ತಿರುವ ಸೈನಿಕರಿಗೆ ಅದರಲ್ಲೂ ಮುಖ್ಯವಾಗಿ ಕಾಶ್ಮೀರದಲ್ಲಿರುವ ಸೈನಿಕರಿಗೆ ಜನ ನಿಮ್ಮತ್ತ ಕಲ್ಲು, ಪೆಟ್ರೋಲ್ ಬಾಂಬ್ ಎಸೆದಾಗ ನನ್ನ ಅನುಮತಿ ಪಡೆದೇ ಪರಿಸ್ಥಿತಿಯನ್ನು ಎದುರಿಸಬೇಕಿಲ್ಲ. ನಾನು ನಿಮ್ಮೊಂದಿಗಿದ್ದೇನೆ. ಪರಿಸ್ಥಿತಿಗೆ ತಕ್ಕಂತೆ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ ನಿಮಗಿದೆ ಅನ್ನುವ ಮೂಲಕ ಅಲ್ಲಿ ಕಾದಾಡುತ್ತಿರುವ ತನ್ನ ಯೋಧರ ನೈತಿಕ ಸ್ಥೈರ್ಯ ಕಾಪಾಡುವುದು ತನ್ನ ಆದ್ಯ ಕರ್ತವ್ಯ ಎನ್ನುವುದನ್ನು ರಾವತ್ ಸಾಬೀತು ಪಡಿಸಿದ್ದಾರೆ. ಇದಲ್ಲದೇ ಸೇನಾ ವೇತನ ಆಯೋಗ ಮತ್ತು ಸರಕಾರದ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ವರ್ಷಗಳಿಂದ ಸೇನೆಯಲ್ಲಿ ಜಾರಿಯಲ್ಲಿರೋ ಸಹಾಯಕ್ ಪದ್ಧತಿಯನ್ನು ಕೊಣೆಗಾಣಿಸುವತ್ತ ವಿರೋಧದ ಮಧ್ಯೆಯೂ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಲಿಂಗ ತಾರತಮ್ಯ ನಿವಾರಣೆಗೆ ಕಾರ್ಯಕ್ರಮ ರೂಪಿಸಿರುವ ರಾವತ್, ಸೇನೆಯ ಯುದ್ಧದ ಸಂದರ್ಭಗಳಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಇತ್ತೀಚಿಗೆ ತಿಳಿಸಿದ್ದಾರೆ.

ಭಾರತದಲ್ಲಿದ್ದುಕೊಂಡೇ ಭಾರತದ ಸೈನ್ಯ, ಸಾರ್ವಭೌಮತ್ವದ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕಾದ ನಿಯಮವನ್ನು ಕೇಂದ್ರ ಸರಕಾರ ಆದಷ್ಟು ಬೇಗ ಕಾರ್ಯಗತಗೊಳಿಸಬೇಕಾಗಿದೆ. ನಮ್ಮ ಹೆಮ್ಮೆಯ ಸೈನ್ಯ ಮತ್ತು ಸೈನಿಕರ ಬಗ್ಗೆ ತುಚ್ಚವಾಗಿ ಮಾತನಾಡುವವ ಅದೆಷ್ಟೇ ಪ್ರಭಾವಶಾಲಿಯಾಗಿರಲಿ, ಮುಲಾಜಿಲ್ಲದೇ ಅವರ ಹುಟ್ಟಡಗಿಸಬೇಕು‌. ಭಾರತದಲ್ಲಿ ಕುಳಿತು ಪಾಕಿಸ್ತಾನದ ಪರ ವಕಾಲತ್ತು ವಹಿಸುವವರಿಗೆ ಸ್ಪಷ್ಟ ಸಂದೇಶ ಕಳುಹಿಸಲೇಬೇಕು. ದೇಶದಲ್ಲಿ ಅಸಹಿಷ್ಣುತೆ ಇದೆ, ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಮಾಡಲಾಗುತ್ತಿದೆ, ಪತ್ರಿಕಾ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆ ಅನ್ನುವ ಸಾಲು ಸಾಲು ನಾಟಕಗಳನ್ನು ನೋಡಿದ್ದ ಭಾರತದ ಜನತೆ ನಿಜಕ್ಕೂ ಎದ್ದೇಳಬೇಕಾದ ಕಾಲ ಬಂದಿದೆ ಅನ್ನಿಸುತ್ತದೆ. ಬುದ್ಧಿಜೀವಿಗಳು ಎಷ್ಟೇ ತುಚ್ಛವಾಗಿ ಸೈನ್ಯದ ಮುಖ್ಯಸ್ಥ ಜನರಲ್ ರಾವತ್ ಕುರಿತು ಹೇಳಿಕೆ ಕೊಟ್ಟರೂ ಇವರ್ಯಾರ ಹಾರಾಟಕ್ಕೂ ಜನರಲ್ ರಾವತ್ ಸೊಪ್ಪುಹಾಕದೇ ತನ್ನ ಸೈನಿಕರ ನೈತಿಕ ಮನೋಬಲ ಎಳ್ಳಷ್ಟೂ ಕುಗ್ಗದ ಹಾಗೆ ನೋಡಿಕೊಳ್ಳುತ್ತಿರುವುದು ಖುಷಿಪಡಬೇಕಾದ ಸಂಗತಿ. ದೇಶದ ಹೊರಗಿನ ಮತ್ತು ಒಳಗಿನ ದೇಶ ವಿರೋಧಿಗಳ ನಿದ್ದೆಗೆಡಿಸಿದ್ದಾರೆ ರಾವತ್! ಹಾಟ್ಸ್ ಆಫ್ ಸರ್!

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post