X

ಮೇಜರ್ ಮಡಿದನಂತರ, ಮಡದಿ ಕ್ಯಾಪ್ಟನ್ ಆದ ಒಂದು ಯಶೋಗಾಥೆ !

ಅವಳಿಗೆ ಮದುವೆ ಆದಾಗ ಕೇವಲ ಹತ್ತೊಂಬತ್ತು ವರ್ಷ ವಯಸ್ಸು. ಎಲ್ಲ ಹೆಣ್ಣು ಮಕ್ಕಳಂತೆ ಹಲವಾರು ಕನಸುಗಳನ್ನು ಹೊತ್ತು ಗಂಡನ ಮನೆಗೆ ಬಂದಿದ್ದಳು ಶಾಲಿನಿ. ಗಂಡ ಮೇಜರ್ ಅವಿನಾಶ್, ಭಾರತೀಯ ಸೈನ್ಯದಲ್ಲಿ ಆಫಿಸರ್. ಮದುವೆ ಆದನಂತರದಲ್ಲಿ ಓದುವುದನ್ನು ನಿಲ್ಲಿಸಲಿಲ್ಲ, ಕಾಲೇಜಿಗೆ ಹೋಗುವುದನ್ನು ಮುಂದುವರಿಸಿದಳು. 1999 ರಲ್ಲಿ ದಂಪತಿಗಳಿಗೆ ಮಗುವಾಯಿತು. ತಾಯಿಯಾಗಿ, ಮಡದಿಯಾಗಿ, ಕಾಲೇಜಿನಲ್ಲಿ ನೆಚ್ಚಿನ ವಿದ್ಯಾರ್ಥಿಯಾಗಿ ಬದುಕಿನ ಅತ್ಯಂತ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದವಳು ಶಾಲಿನಿ. ಮೇಜರ್ ಅವಿನಾಶ್ ಅವರನ್ನು ಕಾಶ್ಮೀರದ ಗಡಿಪ್ರದೇಶದಕ್ಕೆ ಪೋಸ್ಟಿಂಗ್ ಮಾಡಲಾಗಿತ್ತು. ಆವಾಗ ಇವತ್ತಿನ ಹಾಗೆ ಎಲ್ಲರ ಹತ್ತಿರವೂ ಮೊಬೈಲ್ ಇರುತ್ತಿರಲಿಲ್ಲ. ಮನೆಗೊಂದು ದೂರವಾಣಿಯ ಕಾಲವೂ ಅದು ಅಲ್ಲ. ಆಗಾಗ ಮೇಜರ್ ಪೋನ್ ಮಾಡುತ್ತಿದ್ದರು, ಅರ್ಥವಾಗದ ಮಗುವಿನ ಮುದ್ದು ಮಾತನ್ನು ಕೇಳಿ ಆನಂದಿಸುತ್ತಿದ್ದರು. ದೂರದ ಟ್ರಂಕ್ ಕಾಲ್, ಸರಿಯಾದ ಇನ್ಸ್ಟ್ರುಮೆಂಟ್ಸ್ ಇಲ್ಲ, ಕನೆಕ್ಷನ್ ಸರಿ ಇಲ್ಲ, ಸರಿಯಾಗಿ ಮಾತನಾಡಿದ್ದು ಕೇಳುವುದಿಲ್ಲ ಆದರೂ ,ಗಂಡ ಹೆಂಡತಿ ಎಷ್ಟೋ ದಿನಕ್ಕೊಮ್ಮೆ ಆಡುವ ಮಾತು, ಅದು ಯುದ್ಧವೊಂದನ್ನು ಜಯಿಸಿದ ಖುಷಿಯನ್ನು ಕೊಡುತ್ತಿತ್ತು. ಆದರೆ ಇದೇ ಕರೆ ಒಂದು ಬೆಳಗಿನ ಜಾವದಲ್ಲಿ ಸಿಡಿಲಾಗಿ ಬಂದು ಬದುಕಿನಲ್ಲಿ ಬಡಿಯಿತು. ಅಂದು ಮುಂಜಾನೆ ಕಾಶ್ಮೀರದ ಸೈನ್ಯದ ಕಚೇರಿಯಿಂದ ಕರೆ ಬಂದಿತ್ತು. “ಮೇಜರ್ ಅವಿನಾಶ್, ಭಯೋತ್ಪಾದಕರ ಜೊತೆ ಹೋರಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ”, ಎಂಬ ಸುದ್ದಿಯನ್ನು ಆ ಕರೆ ತಂದಿತ್ತು. ಚೆಂದದ ಒಂದು ಪುಟ್ಟ ಸಂಸಾರದ ಮೇಲೆ ಅಣು ಬಾಂಬ್ ಒಂದು ಬಿದ್ದಂತಾಗಿತ್ತು. ಶಾಲಿನಿಗೆ ಏನೂ ತೋರಲಿಲ್ಲ, ದೇಹವು ಸಂವೇದನೆಯನ್ನು ಕಳೆದುಕೊಂಡಿತು. ಎರಡು ಗಂಟೆಯ ನಂತರ ಮತ್ತೊಂದು ಕರೆ, ಅದರಲ್ಲಿ ಮೇಜರ್ ಅವಿನಾಶ್ ಶಹೀದ್ ಆದರು ಎಂದು ಹೇಳಿದರು. ಅದನ್ನು ಕೇಳಿ ಶಾಲಿನಿ ನಿಂತಲ್ಲೇ ಕುಸಿದಳು. ಅವಳ ಪಾಲಿಗೆ ಕಾಲವೇ ನಿಂತು ಹೋಯಿತು. 28 ಸೆಪ್ಟೆಂಬರ್ 2001, ಭಾರತೀಯ ಯೋಧನೊಬ್ಬ ತಾನು ಶಹೀದನಾಗುವ ಮೊದಲು ವೀರಾವೇಶದಲ್ಲಿ ಹೋರಾಡಿ ನಾಲ್ಕು ಭಯೋತ್ಪಾದಕರನ್ನು ಸದೆಬಡಿದಿದ್ದ. ಹೋರಾಟದಲ್ಲಿ ಬುಲೆಟ್ ತನ್ನ ದೇಹದೊಳಕ್ಕೆ ನುಗ್ಗಿದ್ದು ತಿಳಿದಿರಲಿಕ್ಕಿಲ್ಲ, ಆರ್ಮಿಯ ಆಸ್ಪತ್ರೆಗೆ ತಂದಾಗ ದೇಹದಲ್ಲಿ ಉಸಿರು ಇರಲಿಲ್ಲ. ಕೀರ್ತಿ ಚಕ್ರ ಮೇಜರ್ ಅವಿನಾಶ್ ಸಿಂಗ್ ಬದುರಿಯಾ ಅವರಿಗೆ ಆಗ ಕೇವಲ 29 ವರ್ಷ ವಯಸ್ಸು. ಅವರನ್ನೇ ನಂಬಿದ್ದ ಇಪ್ಪತ್ತ ಮೂರು ವರ್ಷದ ತರುಣಿ ವಿಧವೆ ಆಗಿದ್ದಳು, ಜಗತ್ತನ್ನೇ ಅರಿಯದ ಎರಡು ವರ್ಷದ ಮುದ್ದು ಬಾಲೆ ಧ್ರುವ ಅಪ್ಪನನ್ನು ಕಳೆದುಕೊಂಡಿದ್ದ!

ಶಾಲಿನಿಯ ಬದುಕಿನ ಜಟಕಾ ಬಂಡಿ ಬೆಳಕು ಕಾಣದ ಸುರಂಗದೊಳಗೆ ನಿಂತು ಹೋಗಿತ್ತು. ದಿನವೆಲ್ಲ ಕತ್ತಲಲ್ಲಿ ಮುಳುಗಿತ್ತು. ಸಂತೈಸಲು ಅದೆಷ್ಟು ಜನ ಬಂದರೋ, ಸಮಾಧಾನಕರ ಮಾತುಗಳು ಅದೆಷ್ಟು ಉದುರಿದವೋ ಯಾವುದರ ಅರಿವೂ ಶಾಲಿನಿಗೆ ಆಗುತ್ತಿರಲಿಲ್ಲ. ತೊಡೆಯ ಮೇಲೆ ಆಡುತ್ತಿರುವ ಪುಟ್ಟ ಮಗುವಿಗೆ ಏನೂ ಅರ್ಥ ಆಗುತ್ತಿರಲಿಲ್ಲ. ಎಲ್ಲರೊಡನೆ ಕಿಲ ಕಿಲ ಎಂದು ನಗುತ್ತಾ ಅಮ್ಮನ ಕೈ ತಪ್ಪಿಸಿಕೊಂಡು ಹೋಗಿ ಅಂಗಳದಲ್ಲಿ ಆಡುತ್ತಿರುತ್ತಿತ್ತು. ಒಮ್ಮೆ ಶಾಲಿನಿ ‘ಈ ಜೀವನವೇ ಬೇಡ, ಇಲ್ಲಿಗೇ ಮುಗಿಸಿಕೊಂಡು ಬಿಡೋಣ’ ಎನಿಸಿದ್ದಳಂತೆ. ಆದರೆ ಅವಳಿಗೆ ಎರಡು ವರ್ಷದ ಕಂದಮ್ಮನನ್ನು ನೋಡಿ ಹಾಗೆ ಮಾಡಲು ಮನಸ್ಸು ಬರಲಿಲ್ಲ. ಹೆತ್ತ ಮಗುವಿನ ಭವಿಷ್ಯದಕ್ಕಾದರೂ ಬದುಕಬೇಕು ಎಂದು ನಿರ್ಧರಿಸಿದಳು. ಈ ನಿರ್ಧಾರದ ಜೊತೆಗೆ ಎಲ್ಲರಿಗೂ ಆಶ್ಚರ್ಯ ಮೂಡಿಸಿದ ಇನ್ನೊಂದು ನಿರ್ಧಾರ ಅಂದರೆ ಅವಳು ‘ತಾನು ಸೈನ್ಯವನ್ನು ಸೇರುತ್ತೇನೆ’ ಎಂದಿದ್ದು. ಸೈನ್ಯ ಸೇರುವುದು ಅಷ್ಟು ಸುಲಭವಲ್ಲ, ಅದೂ ಮಹಿಳೆಗೆ. ದೇಹದಲ್ಲಿ ಕೋಮಲೆಯಾಗಿದ್ದವಳು, ಅಪ್ಪ ಅಮ್ಮನ ಮುದ್ದಿನ ಮಗಳು ಬೇರೆ. ಏನನ್ನೂ ಲೆಕ್ಕಿಸದೆ ಆಗತಾನೇ ಪ್ರವೇಶ ಪಡೆದ ಸ್ನಾತಕೋತ್ತರ ಶಿಕ್ಷಣವನ್ನು ಅಲ್ಲಿಗೆ ನಿಲ್ಲಿಸಿ ಸರ್ವಿಸ್ ಸಿಲೆಕ್ಷನ್ ಬೋರ್ಡ್ ಪರೀಕ್ಷೆಗೆ ತಯಾರಿ ಶುರು ಮಾಡಿಯೇ ಬಿಟ್ಟಳು. ಸೈನ್ಯ ಸೇರುವುದು, ಅದಕ್ಕೆ ತರಬೇತಿ ಪಡೆಯುವುದು ಅಂದರೆ ಮಗುವನ್ನು ಬಿಟ್ಟು ಎಲ್ಲೆಲ್ಲೋ ಅಡ್ಡಾಡಬೇಕು, ಹಗಲು ರಾತ್ರಿ ಎನ್ನದೆ ಸೇವೆ ಮಾಡಬೇಕು. ಆದರೇನಂತೆ? ಅದಕ್ಕೆ ಮಾನಸಿಕವಾಗಿ ಸಿದ್ಧಳಾದಳು ಶಾಲಿನಿ. ಮಗು ಧ್ರುವ ಬದುಕಿನ ದೌರ್ಬಲ್ಯ ಆಗಬಾರದು, ಬದಲಾಗಿ ಅವನೇ ಬದುಕಿಗೆ ಶಕ್ತಿ ತುಂಬಬೇಕು ಎಂದು ಬಯಸಿದಳು. ತಕ್ಷಣವೇ ಎಸ್.ಎಸ್.ಬಿ ಪರೀಕ್ಷೆಗೆ ಹಗಲಿರುಳು ತಯಾರಿ ನಡೆಸಿದಳು. ಗಂಡ ತೀರಿಕೊಂಡ ಮೂರು ತಿಂಗಳಾಗಿತ್ತು ಅಷ್ಟೇ ಅಲಹಾಬಾದ್ ಕೇಂದ್ರದಲ್ಲಿ ಒಂದು ವಾರ ನಡೆಯುವ ಸರ್ವಿಸ್ ಸಿಲೆಕ್ಷನ್ ಬೋರ್ಡ್ ಸಂದರ್ಶನಕ್ಕೆ ಕರೆ ಬಂದುಬಿಟ್ಟಿತು. ಸಂದರ್ಶನದ ಸಮಯದಲ್ಲಿ ಮನೆಯವರು ಯಾರೂ ಒಳಕ್ಕೆ ಬರುವ ಹಾಗಿಲ್ಲ, ಹಾಗಿರುವಾಗ ಎಂದೂ ಅಮ್ಮನನ್ನು ಬಿಟ್ಟಿರದ ಎರಡು ವರ್ಷದ ಮಗುವನ್ನು ಎಲ್ಲಿ ಬಿಟ್ಟು ಬರುವುದು?

ಶಾಲಿನಿಯ ತಂದೆ ತಾಯಿ ಮಗುವನ್ನು ನೋಡಿಕೊಳ್ಳಲು ಬಂದರಂತೆ. ಹಗಲೆಲ್ಲ ಅಲ್ಲೇ ಪಕ್ಕದಲ್ಲಿರುವ ಪಾರ್ಕಿನಲ್ಲಿ ಮಗುವನ್ನು ಆಡಿಸುತ್ತಿದ್ದರು. ಅಜ್ಜ ಹಾಗೂ ಅಜ್ಜಿ ಕೊಡುವ ಆಹಾರವನ್ನು ಪಾಪು ತಿನ್ನುತ್ತಲೇ ಇರಲಿಲ್ಲ. ಅದು ಗೊತ್ತಾದ ಮೇಲೆ ಅನುಮತಿ ಪಡೆದುಕೊಂಡು ವಿರಾಮದ ಸಮಯದಲ್ಲಿ ಶಾಲಿನಿ ಬಂದು ಎದೆಹಾಲು ಕುಡಿಸಿ ಹೋಗುತ್ತಿದ್ದಳಂತೆ. ಅಲ್ಲಿ ಬಂದವರಲ್ಲಿ ಯಾರಿಗೂ ಮದುವೆ ಆಗಿರಲಿಲ್ಲ. ಎಲ್ಲರೂ ಶಾಲಿನಿಗೆ ಕಷ್ಟವನ್ನು ಎದುರಿಸಲು ಶಕ್ತಿ ಕೊಡುವಂತೆ ದೇವರನ್ನು ಬೇಡಿಕೊಳ್ಳುತ್ತಿದ್ದರು. SSB ಆಯ್ಕೆಯ ಪ್ರಕ್ರಿಯೆ ಅಷ್ಟು ಸುಲಭವಲ್ಲ. ದೈಹಿಕ ಹಾಗೂ ಮಾನಸಿಕ ಒತ್ತಡ ತುಂಬಾ ಇರುತ್ತದೆ. ಇದನ್ನೆಲ್ಲ ಎದುರಿಸಿ ನಿಂತಿದ್ದಳು. ಆದರೆ ರಾತ್ರಿ ತನ್ನ ಮಗ್ಗುಲಲ್ಲಿ ಇಲ್ಲದ ಮಗುವನ್ನು ನೆನೆಸಿಕೊಂಡು ಕಣ್ಣೀರು ಉಕ್ಕುತ್ತಿದ್ದವು. ಆದರೆ ಯಾವತ್ತು ಶಾಲಿನಿಗೆ ತನ್ನ ಆಯ್ಕೆ ಆದ ಸುದ್ದಿ ಕಿವಿಗೆ ಬಿತ್ತೋ ಆವಾಗ ಒಂದು ವಾರ ಹರಿದ ಕಣ್ಣೀರಿಗಿಂತ ಹೆಚ್ಚು ಆನಂದಬಾಷ್ಪವು ಕೂಡಿ ಬಂತು. “ಅಪ್ಪ, ಅಮ್ಮ, ಮಗು,ಹಾಗೂ ತಾನು ಎಲ್ಲರೂ ಸೇರಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅತ್ತೆವು”ಎನ್ನುತ್ತಾಳೆ ಶಾಲಿನಿ. ಮೊದಲ ಹಂತದ ಆಯ್ಕೆ ಆದಮೇಲೆ ಎರಡನೇಯದು ಮೆಡಿಕಲ್ ಪರೀಕ್ಷೆ ಆಗಬೇಕಲ್ಲ. ಅದಕ್ಕೆ ಇನ್ನೊಂದು ವಾರ ಅಲ್ಲೇ ಇರಬೇಕಿತ್ತು. ಇನ್ನೂ ಒಂದು ವಾರ ಅಪ್ಪ ಅಮ್ಮನನ್ನು ಪಾರ್ಕಿನ ಸುತ್ತ ಅಡ್ಡಾಡಿಸುವುದು ಬೇಡ ಎಂದು ಏನೂ ಅರಿಯದ ಮಗುವಿನ ಜೊತೆ ಮಾತನಾಡಿ ಅಜ್ಜ ಅಜ್ಜಿಯ ಜೊತೆ ಮನೆಗೆ ಹೋಗುವಂತೆ ಒಪ್ಪಿಸಿದಳು, ಮಗುವೂ ಒಪ್ಪಿತು! ಮಗುವಿಗೆ ಅಜ್ಜ ಅಜ್ಜಿಯ ಜೊತೆ ಅಮ್ಮನನ್ನು ಬಿಟ್ಟು ಹೋಗುವಾಗ ಎಷ್ಟು ಬೇಸರವಾಗಿರಬೇಡ? ತಾಯಿಗೆ ಅದರ ದುಪ್ಪಟ್ಟು. ಕಣ್ಣೀರನ್ನು ಛಲದ ಅಣೆಕಟ್ಟು ಕಟ್ಟಿ ನಿಲ್ಲಿಸಿದಳು. ತಾಯಿ ಹಾಗೂ ಮಗು ಆತ್ಮಗಳ ಜೊತೆ ಸಂಪರ್ಕ‌ ಬೆಳೆಸಿಕೊಂಡರಂತೆ. ಮಗು ಧ್ರುವನಿಗೆ ಒಂದು ವಾರ ತಾಯಿಯನ್ನು ಬಿಟ್ಟಿರಬೇಕಾದದ್ದು ಮುಂದಿನ ದಿನಗಳ ಒಂದು ಝಲಕ್ ಆಗಿತ್ತು ಅಷ್ಟೇ.

ಮಾರ್ಚ್ 2002ರಿಂದ ಶಾಲಿನಿಯ ಬದುಕೇ ಬದಲಾಯಿತು. ಚೈನೈನಲ್ಲಿಯ ಆಫೀಸರ್’ಗಳ ತರಬೇತಿ ಕೇಂದ್ರದಲ್ಲಿ ಕ್ಯಾಪ್ಟನ್ ಆಗಿ ಭರ್ತಿಯಾದರು. ಮೈ ಮೇಲೆ ಸೀರೆ, ಸಲ್ವಾರ್ ಹೋಗಿ ಆರ್ಮಿಯ ಸಮವಸ್ತ್ರ ಹಾಗೂ ಕಾಲಲ್ಲಿ ಮೆದುವಾದ ಸ್ಯಾಂಡಲ್ ಬದಲಾಗಿ ಮಿಲಿಟರಿ ಬೂಟ್ ಬಂದವು. ಶಾಲಿನಿ ಒಂದು ಸಂದರ್ಶನದಲ್ಲಿ “ಆಫಿಸರ್ ತರಬೇತಿ ಕಷ್ಟ ಅಷ್ಟೇ, ಅಲ್ಲ ಕ್ರೂರಾಗಿತ್ತು ಕೂಡ”, ಎನ್ನುತ್ತಾಳೆ. ಅದಕ್ಕೆ ಬೇಕಾದ ಶಕ್ತಿ ಪರಮಾತ್ಮ ಎಲ್ಲಿಂದ ಕರುಣಿಸಿದನೋ? ಮೇಜರ್ ಒಬ್ಬರ ಹೆಂಡತಿಯಾಗಿ ಐಶಾರಾಮಿ ಜೀವನ ನಡೆಸಬೇಕಿದ್ದ ಶಾಲಿನಿ ಈ ತರಹದ ಕಷ್ಟ ನಷ್ಟವನ್ನು ಕನಸಿನ ಯಾವ ಮೂಲೆಯಲ್ಲೂ ಕಂಡಿರಲಿಲ್ಲ. ಅಕಾಡೆಮಿಯಲ್ಲಿ ಅನುಕಂಪ ಹಾಗಿರಲಿ, ಉಳಿದವರಿಗಿಂತ ಹೆಚ್ಚು ಕಷ್ಟ ಇವರಿಗೆ ಕೊಡುತ್ತಿದ್ದರು ಯಾಕೆಂದರೆ ಇವರಲ್ಲಿರುವ ಆ ‘ಹೆಂಡತಿ’ಯನ್ನು ಸಾಯಿಸಿ ಸೈನ್ಯಾಧಿಕಾರಿಯಾಗಿ ಮಾಡಬೇಕಿತ್ತು. “ಅದೆಷ್ಟೋ ಬಾರಿ ನಾನು ನನ್ನ ದುರವ್ಯವಸ್ಥೆಯನ್ನು ಕಂಡು ಮರುಗಿದ್ದು ಇದೆ” ಎನ್ನುತ್ತಾರೆ. ಯಾರಿಗಾದರೂ ಇದು ಸಹಜವೇ! ಆದರೆ ಅಸಹಜ ಅಂದರೆ ಇದನ್ನೆಲ್ಲ ಗೆದ್ದು ಮುಂದೆ ಬರುವುದು. ಅಂದು 2002ರ ಸೆಪ್ಟೆಂಬರ್ ಏಳನೆಯ ತಾರೀಖು, ಆಫಿಸರ್ ಆಗಿ ತೇರ್ಗಡೆ ಆದವರಿಗೆ ಪದಕ ಪ್ರಧಾನ ಸಮಾರಂಭ. ಮೇಜರ್ ಅವಿನಾಶ್ ಅವರು ಅಗಲಿ ಒಂದು ವರ್ಷ ತುಂಬಲು ಇನ್ನೂ ಏಳು ದಿನ ಬಾಕಿ ಇತ್ತು. ಕ್ಯಾಪ್ಟನ್ ಶಾಲಿನಿಯವರ ಭುಜಕ್ಕೆ ಪದಕ ಸಿಕ್ಕಿಸಲು ಅವಳ ಮೂರು ವರ್ಷದ ಮಗು ಬಂದಾಗ ಸಮಾರಂಭದಲ್ಲಿ ಸೇರಿದವರೆಲ್ಲರ ಕಣ್ಣಲ್ಲಿ ನೀರು ತುಂಬಿ ಬಂದಿತ್ತು. ಮೇಜರ್ ಮಡದಿ, ಗಂಡ ಮಡಿದ ನಂತರ ಒಂದೇ ವರ್ಷದೊಳಗೆ ಸೈನ್ಯದಲ್ಲಿ ಕ್ಯಾಪ್ಟನ್ ಆಗಿ ಎಣಿಸಿದ್ದನ್ನು ಸಾಧಿಸಿ ತೋರಿಸಿದ್ದರು! ಮೇಜರ್ ಅವಿನಾಶ್ ಅವರಿಗೆ ಸಿಕ್ಕ ಕೀರ್ತಿ ಚಕ್ರ ಪದಕವನ್ನು ಸ್ವೀಕರಿಸಲು ಕ್ಯಾಪ್ಟನ್ ಶಾಲಿನಿ ಸಮವಸ್ತ್ರ ಧರಿಸಿಯೇ ಹೋಗಿದ್ದರು. ಎಂತಹ ಸಾಧನೆ ಅಲ್ಲವೇ? ಅದಲ್ಲದೆ ಸರ್ವಿಸ್ ಸೇರಿದ ನಂತರ ಪುರುಷರ ಹಿಡಿತ ಇರುವ ಸೈನ್ಯದಲ್ಲಿ ಒಬ್ಬ ಮಹಿಳಾ ಅಧಿಕಾರಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬದುಕಿನಲ್ಲಿ ಬಂದ ಕಷ್ಟವೆಲ್ಲವೂ ತಮ್ಮನ್ನು ಮತ್ತಷ್ಟು ಬಲಿಷ್ಠವಾಗಿಸಲು ಬರುತ್ತವೆ ಎಂಬುದನ್ನು ಅರಿತಿದ್ದಳು ಕ್ಯಾಪ್ಟನ್ ಶಾಲಿನಿ ಸಿಂಗ್.

ಆರು ವರ್ಷದ ಸೇವೆಯ ನಂತರ ಮಗನ ಭವಿಷ್ಯಕ್ಕಾಗಿ ನಿವೃತ್ತಿ ಪಡೆದರು. ಎಂಬಿಎ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಸಿನಿಯರ್ ಮ್ಯಾನೇಜರ್ ಆಗಿ ದೆಹಲಿಯಲ್ಲಿ ಮಗನ ಜೊತೆ ಜೀವನ ಮಾಡುತ್ತಿದ್ದಾರೆ. ಶಾಲಿನಿಯವರ ಮಗ ಧ್ರುವನಿಗೆ ಈಗ ಹದಿನಾರು ವರ್ಷ. ಅವನ ಬದುಕಿನ ಯಶಸ್ಸೇ ಶಾಲಿನಿಯ ಕನಸು. ಕ್ಯಾಪ್ಟನ್ ಶಾಲಿನಿಯ ಸಾಧನೆಯ ಸಾಲು  ಇಲ್ಲಿಗೇ ಮುಗಿಯಿತು ಎಂದುಕೊಳ್ಳಬೇಡಿ. ಈ ವರ್ಷದ ಮಿಸೆಸ್ ಇಂಡಿಯಾ 2017 (ಕ್ಲಾಸಿಕ್ ವಿಭಾಗದಲ್ಲಿ) ಪ್ರಶಸ್ತಿಯನ್ನು ಗೆದಿದ್ದು ಬೇರೆ ಯಾರೂ ಅಲ್ಲ ಇದೇ – ಕ್ಯಾಪ್ಟನ್ ಶಾಲಿನಿ ಸಿಂಗ್! ಅವರ ಸಾಧನೆ ನೋಡಿದಾಗ ರೋಮಾಂಚನವಾಗುತ್ತದೆ. ಒಬ್ಬ ಸೈನಿಕನ ಮಡದಿ ತನ್ನ ಜೀವನದಲ್ಲಿ ಯಾವ ರೀತಿಯ ನೋವನ್ನು ಅನುಭವಿಸಬೇಕಾಗುತ್ತದೆ ಎನ್ನುವುದಕ್ಕೆ ಕ್ಯಾಪ್ಟನ್ ಶಾಲಿನಿ ಒಂದು ಜೀವಂತ ಸಾಕ್ಷಿ! ಆದರೆ ನೋಡಿ, ಒಬ್ಬ ಮಹಿಳೆ ಏನನ್ನಾದರೂ ಮಾಡಬೇಕು ಅಂದು ಸಂಕಲ್ಪ ತೊಟ್ಟುಕೊಂಡರೆ ಎಷ್ಟು ಕಷ್ಟ ಎದುರಾದರೂ  ಅದನ್ನು ಮೀರಿ ನಿಲ್ಲಬಲ್ಲಳು, ಅದನ್ನೂ ಶಾಲಿನಿ ಮಾಡಿ ತೋರಿಸಿದ್ದಾಳೆ. ಕ್ಯಾಪ್ಟನ್ ಶಾಲಿನಿ ಅವರ ಧೈರ್ಯವನ್ನು ನಿಜವಾಗಿಯೂ ಮೆಚ್ಚಲೇ ಬೇಕು, ಯಾಕೆಂದರೆ ಎಲ್ಲಿ ತನ್ನ ಬದುಕನ್ನು ಕಳೆದುಕೊಂಡಳೋ‌ ಅಲ್ಲೆ ಹೋಗಿ ಹುಡುಕಿ ಮತ್ತೆ ಪಡೆದುಕೊಂಡಳು. ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಸಾಮಾನ್ಯವಾಗಿ ಪುರುಷರಿಗೆ ಕೂಡ ಕಷ್ಟ, ಅದರಲ್ಲೂ ಇನ್ನೊಬ್ಬರನ್ನು ಮದುವೆ ಆಗದೆ ಒಂಟಿ ಪಾಲಕಳಾಗಿ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಾ ಮಗನನ್ನು ಬೆಳೆಸಿ, ತಮ್ಮ ಮೂವತ್ತೊಂಬತ್ತನೇಯ ವಯಸ್ಸಿನಲ್ಲಿ ಮಿಸೆಸ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದು ಮಹಾಸಾಧನೆ! ಇವರ ಬದುಕು ಅದೆಷ್ಟೋ ಮಹಿಳೆಯರಿಗೆ ಪ್ರೇರಣೆ ಆಗಬಲ್ಲದು. ಬದುಕು ಒಂದೇ ಒಂದು ಅವಕಾಶವನ್ನು ಕೊಡುತ್ತದೆ. ಅದನ್ನು ಉರುಳಿಸಬೇಕು ಇಲ್ಲವೇ ಉಳಿಸಿ, ಬೆಳೆಸಿ ಜಯಿಸಬೇಕು. ಇದನ್ನೇ ಕ್ಯಾಪ್ಟನ್ ಶಾಲಿನಿಯ ಬದುಕು ಹಾಗೂ ಸಾಧನೆ ಹೇಳುತ್ತದೆ.

 

Facebook ಕಾಮೆಂಟ್ಸ್

Vikram Joshi: ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.
Related Post