ರೇ ಬ್ರಾಡ್ಬರಿಯವರು ೧೯೫೨ರಲ್ಲಿ ಬರೆದ ಸಣ್ಣ ಕಥೆ – ‘A Sound Of Thunder’ನ ಕನ್ನಡ ಭಾವಾನುವಾದ. ಅಮೇರಿಕಾ ಗಣಿತಜ್ಞ ಎಡ್ವರ್ಡ್ ಲೊರೆಂಜರ Chaos ಸಿದ್ಧಾಂತದ, Butterfly effect ಗೆ ಬಹಳ ಹತ್ತಿರದಂತೆ ಕಂಡು ಬರುವ ಇದು, ಲೋರೆಂಜ್ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಮುಂಚೆಯೇ ಬರೆಯಲ್ಪಟ್ಟಿದ್ದಾದರೂ Buttefly effectನ ವಿವರಣೆಗೆ ಇದಕ್ಕಿಂತ ಉತ್ತಮ ಉದಾಹರಣೆ ಪ್ರಾಯಶಃ ಸಿಗಲಾರದು.
ಮಹಾರವ – A Sound of Thunder – 1 (link yesterday’s part)
ಅವರು ಆ ಪ್ರಾಚೀನ ಕಾನನದ ಲೋಹದ ಪಥದ ಕಡೆ ನೋಡುತ್ತಾ ಯಂತ್ರದೊಳಗೆ ಕೂತಿದ್ದರು. ಗಾಳಿಯಲ್ಲಿ ದೂರದಲ್ಲೆಲ್ಲೋ ಹಕ್ಕಿಗಳು ಕೂಗಿದ್ದು ಕೇಳುತ್ತಿತ್ತು, ಸುತ್ತಲೂ ಒಂದು ರೀತಿ ಕಮಟು ವಾಸನೆ, ಯಾವುದೋ ಹಳೆಯ ಸಮುದ್ರದ ಉಪ್ಪಿನ ವಾಸನೆ, ಹಸಿ ಹುಲ್ಲಿನ ವಾಸನೆ, ಮತ್ತು ಸುತ್ತಲೂ ರಕ್ತವರ್ಣದ ಹೂವುಗಳು ತುಂಬಿದ್ದವು.
“ಯಾವುದೇ ಕಾರಣಕ್ಕೂ ನಾವು ಭವಿಷ್ಯವನ್ನು ಬದಲಾಯಿಸಬಾರದು. ನಾವೀ ಭೂತಕಾಲಕ್ಕೆ ಕಣಗಳಲ್ಲ. ಸರ್ಕಾರಕ್ಕೆ ನಾವು ಇಲ್ಲಿ ಬರುವುದು ಇಷ್ಟವಿಲ್ಲ. ಸರ್ಕಾರಕ್ಕೆ ಮಹಾನ್ ಮೊತ್ತದ ಲಂಚಕೊಟ್ಟು ನಾವು ನಮ್ಮ ಕಂಪನಿ ನಡೆಸುತ್ತಿದ್ದೇವೆ. ಟೈಮ್ ಮಷೀನ್ ಒಂದು ಅಪಾಯಕಾರಿ ಕಸುಬು. ಗೊತ್ತಿಲದೇ ನಾವು ಯಾವುದಾದರೂ ಅತಿಮುಖ್ಯ ಪ್ರಾಣಿಯನ್ನು ಕೊಂದು ಹಾಕಬಹುದು, ಒಂದು ಸಣ್ಣ ಹಕ್ಕಿ, ಒಂದು ಜಿರಳೆ, ಒಂದು ಸಣ್ಣ ಹೂವನ್ನು ನಾವು ಹಾಳು ಮಾಡಿದರೂ, ಜೀವಸಂಕುಲದ ಒಂದು ಮುಖ್ಯ ಕೊಂಡಿಯನ್ನೇ ಕತ್ತರಿಸಿದ ಹಾಗಾಗುತ್ತದೆ.”
“ಅರ್ಥವಾಗಲಿಲ್ಲ,” ಎಕೆಲ್ಸ್ ಹೇಳಿದ.
ಅದಕ್ಕೆ ಟ್ರಾವಿಸ್, “ಸರಿ. ಕೇಳಿ. ಅಕಸ್ಮಾತ್ ನಾವು ಒಂದು ಇಲಿಯನ್ನು ಇಲ್ಲಿ ಸಾಯಿಸಿಬಿಟ್ಟೆವು ಅಂತ ಇಟ್ಟುಕೊಳ್ಳಿ, ಅದರರ್ಥ ಭವಿಷ್ಯದಲ್ಲಿ ಆ ಇಲಿಯ ವರ್ಗದ ಎಲ್ಲ ಪೀಳಿಗೆಗಳೂ ನಾಶವಾಯಿತು ಅಂತ ಅಲ್ಲವೇ?”
“ಹೌದು,” ಎಲ್ಲರೂ ಒಕ್ಕೊರಲಿನಿಂದ ಉತ್ತರಿಸಿದರು.
“ಆ ಇಲಿಯ ಭವಿಷ್ಯದಲ್ಲಿ ಆಗಬಹುದಾಗಿದ್ದ ಸಂಸಾರದ, ಅದರ ಸಂಸಾರದ, ಅದರ ಸಂಸಾರದ, ಅದರ ಸಂಸಾರ ಎಲ್ಲವನ್ನೂ ನಾವು ನಾಶ ಮಾಡಿ ಬಿಟ್ಟಿದ್ದೇವೆ. ಈ ಭೂತಕಾಲದಲ್ಲಿ ನಿಮ್ಮ ಕಾಲಡಿಯಲ್ಲಿ ಒಂದು ಇಲಿಯನ್ನು ನೀವು ಹೊಸಕಿ ಹಾಕಿದರೆ, ಅದು ಭವಿಷ್ಯದಲ್ಲಿ ಸಾವಿರ, ಮಿಲಿಯನ್, ಬಿಲಿಯನ್ ಇಲಿಗಳ ಹುಟ್ಟಿಗೇ ಕೊಡಲಿ ಪೆಟ್ಟು ನೀಡುತ್ತದೆ.”
“ಆಯಿತು ಇಲಿಗಳು ಸಾಯ್ತವೆ, ಅದರಿಂದೇನು ಮಹಾ ತೊಂದರೆ ಆಗೋದು?” ಎಕೆಲ್ಸ್ ಕೇಳಿದ.
“ಏನು ಮಹಾ?” ಟ್ರಾವಿಸ್ ಒಂದು ಸಲ ಎಕೆಲ್ಸ್ ನತ್ತ ತೀಕ್ಷ್ಣ ದೃಷ್ಟಿ ಬೀರಿ ಬುಸುಗುಟ್ಟಿ, “ಸರಿ, ಆ ಇಲಿಗಳನ್ನೇ ತಿಂದು ಬದುಕೋ ನರಿಗಳ ಗತಿ ಏನು? ಹತ್ತು ಇಲಿಗಳು ಸಿಗದೇ, ಒಂದು ನರಿ ಸಾಯುತ್ತದೆ. ಹತ್ತು ನರಿಗಳು ಸಿಗದೇ, ಒಂದು ಸಿಂಹ ಹಸಿಯುತ್ತದೆ. ಒಂದು ಸಿಂಹ ಸಿಗದೇ ಎಲ್ಲ ರೀತಿಯ ಕೀಟಗಳು, ಹದ್ದುಗಳು, ಅಸಂಖ್ಯಾತ ಬಿಲಿಯನ್ ಜೀವರಾಶಿಗಳ, ಸೂಕ್ಶ್ಮಾಣು ಜೀವಿಗಳ ಜೀವನ ಪ್ರಕ್ಷುಬ್ಧವಾಗಿ, ಸರ್ವನಾಶವಾಗುತ್ತದೆ. ಕಾಲಕ್ರಮೇಣ ಕಡೆಗೆ ಆಗುವುದು ಇದು: ೫೯ ಮಿಲಿಯನ್ ವರ್ಷಗಳ ನಂತರ, ಇರುವ ಹತ್ತೋ–ಹನ್ನೆರಡೋ ಗವಿಮಾನವರಲ್ಲಿ ಒಬ್ಬ, ಒಂದು ಕಾಡ ಹಂದಿಯೋ ಕತ್ತಿಯ–ದಂತದ ಹುಲಿಯನ್ನೋ ಬೇಟೆಯಾಡಲು ಹೊರಟ ಎಂದಿಟ್ಟುಕ್ಕೊಳ್ಳಿ. ಆದರೆ, ಸಣ್ಣ ಇಲಿಯನ್ನು ಕಾಲಡಿಯಲ್ಲಿ ಹೊಸಕಿ, ನೀವು ಆ ಪ್ರಾಂತ್ಯದಲ್ಲಿರುವ ಎಲ್ಲ ಹುಲಿಗಳ ಮೇಲೂ ಕಾಲಿಟ್ಟುಬಿಟ್ಟಿದ್ದೀರಿ. ಆ ಗವಿಮಾನವ ಉಪವಾಸ ಬೀಳುತ್ತಾನೆ. ಒಂದು ಕ್ಷಣ ಸರಿಯಾಗಿ ಯೋಚನೆ ಮಾಡಿ, ಇವನು ಯಾವನೋ ಉಪಯೋಗವಿಲ್ಲದ ಗವಿಮಾನವನಲ್ಲ, ಅವನು ಭವಿಷ್ಯದ ಒಂದು ಸಂಪೂರ್ಣ ರಾಷ್ಟ್ರ. ಅವನ ವೀರ್ಯದಿಂದ ಹತ್ತು ಮಕ್ಕಳು ಹುಟ್ಟುತ್ತಿದ್ದರು. ಅವರಿಂದ ನೂರು, ಆ ನೂರರಿಂದ ಒಂದು ದೊಡ್ಡ ನಾಗರೀಕತೆ. ಒಬ್ಬ ಗವಿಮಾನವನನ್ನು ನಾಶ ಮಾಡಿ, ನೀವು ಒಂದು ಜನಾಂಗವನ್ನೇ ನಾಶ ಮಾಡುತ್ತೀರಿ, ಜೀವ–ಜೀವನದ ಸಂಪೂರ್ಣ ಇತಿಹಾಸವನ್ನೇ ನಾಶ ಮಾಡುತ್ತೀರಿ. ಬೇಕಾದರೆ ಇದನ್ನು ಆಡಮ್ ನ ಮರಿಮಕ್ಕಳ್ಳನ್ನು ಸಾಯಿಸಿದ್ದಕ್ಕೆ ಸಮ ಎಂದು ತಿಳಿಯಬಹುದು. ಒಂದು ಸಣ್ಣ ಇಲಿಯ ಮೇಲಿನ ನಿಮ್ಮ ಒಂದು ತಪ್ಪು ಹೆಜ್ಜೆಗೆ, ಭೂಕಂಪವನ್ನೇ ಸೃಷ್ಟಿಸುವ, ಭೂಮಿಯನ್ನೇ ಅಲ್ಲೋಲ ಕಲ್ಲೋಲ ಮಾಡುವ, ಕಾಲದೆಲ್ಲೆ ಮೀರಿ ವಿಧಿಯನ್ನೇ ಬದಲಿಸುವ, ಜೀವ ವಿಕಸನದ ಬುಡವನ್ನೇ ಅಲುಗಾಡಿಸುವ ವಿನಾಶಕಾರಿ ಶಕ್ತಿಯಿದೆ. ಒಬ್ಬ ಗವಿಮಾನವನ ಸಾವಿನೊಂದಿಗೆ, ಬಿಲಿಯನ್ ಮಾನವರು ಹುಟ್ಟುವ ಮುಂಚೆ ಭ್ರೂಣದಲ್ಲೇ ನಾಶವಾಗುತ್ತಾರೆ. ರೋಮ್ ಏಳು ಬೆಟ್ಟದ ಮೇಲೆ ಬರದಂತೇ ಆಗಿ ಬಿಡಬಹುದು. ಯುರೋಪ್ ಎಲ್ಲ ಕಾಲಕ್ಕೂ ದಟ್ಟಡವಿಯಾಗೆ ಉಳಿದು ಬಿಡಬಹದುದು, ಏಷ್ಯಾ ಮಾತ್ರ ಸಮೃದ್ಧವಾಗಿ ಬೆಳೆಯಬಹುದು. ನೀವು ಕೇವಲ ಇಲಿಯ ಮೇಲೆ ಕಾಲಿಡುತ್ತಿಲ್ಲ, ಮಹಾನ್ ಪಿರಮಿಡ್ಡುಗಳ ಮೇಲೆ ಕಾಲಿಟ್ಟು ಪುಡಿ ಪುಡಿ ಮಾಡುತ್ತಿದ್ದೀರಿ. ಇಲಿಯ ಮೇಲೆ ಕಾಲಿಡಿ, ಶಾಶ್ವತವಾಗಿ ನಿಮ್ಮ ಗುರುತು ಕಾಲಗಳ ಎಲ್ಲೆ ಮೀರಿ ಗ್ರಾಂಡ್ ಕ್ಯಾನ್ಯನ್ ರೀತಿ ನಿಂತುಬಿಡುತ್ತದೆ. ರಾಣಿ ಎಲಿಜಬೆತ್ ಹುಟ್ಟದೇ ಇರುವ ಹಾಗಾಗಬಹುದು. ವಾಷಿಂಗ್ಟನ್ ಡೆಲಾವೇರ್ ನ ದಾಟದೆ ಇರುವ ಹಾಗಾಗಬಹುದು, ಅಮೇರಿಕ ಅನ್ನೋ ದೇಶವೇ ಇರದೇ ಹೋಗಬಹುದು. ಎಚ್ಚರಿಕೆಯಿಂದಿರಿ. ಪಥದ ಮೇಲೇ ಇರಿ. ಯಾವುದೇ ಕಾರಣಕ್ಕೂ ಅತ್ತ ಇತ್ತ ಹೋಗ ಕೂಡದು.”
“ಓಹ್, ಹಾಗೋ,” ಎಕೆಲ್ಸ್ ಉದ್ಗಾರ ಮಾಡಿ, ” ಹಾಗಾದರೆ ನಾವು ಒಂದು ಹುಲ್ಲು ಕಡ್ಡಿಯನ್ನೂ ಮುಟ್ಟಬಾರದೇ?”
“ಹಾ! ಕೆಲವು ಸಸ್ಯಗಳನ್ನು ತುಳಿದರೂ ಅದು ಅನಂತವಾಗಿ ವಿನಾಶಕ್ಕೆ ನಾಂದಿಯಾಗುತ್ತದೆ. ಇಂದಿನ ಸಣ್ಣ ತಪ್ಪು ಅರವತ್ತು ಮಿಲಿಯನ್ ವರ್ಷದಲ್ಲಿ ಎಲ್ಲ ವರ್ಧನೆಗೊಂಡು ಸರ್ವನಾಶಕ್ಕೆ ಕಾರಣವಾಗುತ್ತದೆ. ಹೇಳುವುದಕ್ಕಾಗುವುದಿಲ್ಲ, ನಮ್ಮ ಸಿದ್ಧಾಂತ ತಪ್ಪಿರಲೂಬಹುದು. ಇಲ್ಲಿನ ನಮ್ಮ ಯಾವುದೇ ಕ್ರಿಯೆಗಳು ಅಲ್ಲಿ ಸಮಯವನ್ನು ಬದಲಾಯಿಸಲು ಸಾಧ್ಯವಿಲ್ಲದೇ ಇರಬಹುದು. ಸಣ್ಣ ಬದಲಾವಣೆಗಳನ್ನು ಮಾತ್ರ ಮಾಡಲು ಸಾಧ್ಯವಿರಬಹುದು. ಇಲ್ಲಿ ಒಂದು ಇಲಿಯ ಸಾವು, ಅಲ್ಲಿ ಒಂದು ಸಣ್ಣ ಕೀಟದ ಸಾವಿನಷ್ಟೇ ಬದಲಾವಣೆ ತರಬಹುದು, ಎಷ್ಟೋ ಸಮಯದ ನಂತರ, ಕೃಷಿಯಲ್ಲಿ ಏರುಪೇರು, ಆರ್ಥಿಕ ಕುಸಿತ, ಬರ, ಕೊನೆಯಲ್ಲಿ ಸಾಮಾಜಿಕ ಅಸಮತೋಲನ ಉಂಟು ಮಾಡಬಹುದು. ಇಂಥ ವಿವರಿಸಲಾಗದಂಥ ಏರುಪೇರಿಗೆ ಕಾರಣವಾಗಬಹುದು. ಅಥವಾ ಮೆಲ್ಲುಸಿರು, ಪಿಸುಮಾತು, ಕೂದಲೆಳೆ, ಗಾಳಿಯಲ್ಲಿನ ಪರಾಗ, ಗಮನವಿಟ್ಟು ನೋಡದಿದ್ದರೆ ಗೊತ್ತೇ ಆಗದಂಥ ಬದಲಾವಣೆಗಳಾಗಬಹದು. ಯಾರಿಗೆ ಗೊತ್ತು? ಖಡಾಖಂಡಿತವಾಗಿ ಯಾರಿಗೆ ಹೇಳಲು ಸಾಧ್ಯ? ನಮಗಂತೂ ಗೊತ್ತಿಲ್ಲ. ಹೀಗಾಗಬಹುದು ಅಂತ ಊಹೆ ಮಾಡುತ್ತಿದ್ದೇವೆ. ಒಂದು ಮಾತ್ರ ಖಚಿತವಾಗಿ ಗೊತ್ತು, ನಾವಿಲ್ಲಿ ಏನಾದರೂ ಸಮಯದ ಜೊತೆ ಆಟವಾಡಿದರೆ ಭವಿಷ್ಯದಲ್ಲಿ ಅದು ಸಣ್ಣ ಪಿಸುಮಾತಾಗಬಹುದು ಅಥವಾ ಮಹಾಘರ್ಜನೆಯಾಗಬಹುದು, ಏನಾದರೊಂದು ಆಗೇ ಆಗುತ್ತದೆ, ಆದ್ದರಿಂದಲೇ ನಾವು ಎಚ್ಚರಿಕೆಯಿಂದ ಇದ್ದೇವೆ. ನಿಮಗೆ ಗೊತ್ತಿರುವ ಹಾಗೆ, ಈ ಯಂತ್ರ, ಈ ಪಥ, ನಿಮ್ಮ ಉಡುಪು ನಿಮ್ಮ ದೇಹ, ಎಲ್ಲದರ ಮೇಲಿನ ಕ್ರಿಮಿಗಳ ನಾಶಗೊಳಿಸಿದ್ದೇವೆ. ಅಪ್ಪಿ ತಪ್ಪಿಯೂ ನಿಮ್ಮ ದೇಹದೊಳಗಿನ ಸೂಕ್ಶ್ಮಾಣು ಜೀವಿಗಳು ಈ ಪ್ರಾಚೀನ ವಾತಾವರಣಕ್ಕೆ ಬಿಡುಗಡೆಯಾಗಬಾರದು ಎಂದೇ ಈ ಆಮ್ಲಜನಕದ ಹೆಲ್ಮೆಟ್ ಎಲ್ಲರೂ ಧರಿಸುವ ಹಾಗೆ ಮಾಡಿರುವುದು.”
“ಯಾವ ಪ್ರಾಣಿಗೆ ಗುಂಡು ಹೊಡೆಯಬೇಕು ಅಂತ ನಮಗೆ ಹೇಗೆ ಗೊತ್ತಾಗುತ್ತದೆ?”
“ಅವುಗಳ ಮೇಲೆ ಕೆಂಪು ಬಣ್ಣದ ಗುರುತಿರುತ್ತದೆ.” ಟ್ರಾವಿಸ್ ಹೇಳಿದ. “ಇವತ್ತು, ನಾವು ಹೊರಡುವ ಮುಂಚೆ, ಲೆಸ್ಪಿರಾನ್ಸ್ ಯಂತ್ರದ ಮೂಲಕ, ಈ ಕಾಲಕ್ಕೆ ಬಂದು, ಆ ಪ್ರಾಣಿಯ ಮೇಲೆ ಬಣ್ಣದ ಬಾಂಬ್ ಎಸೆದು ಬಂದಿದ್ದಾನೆ.”
“ಅವುಗಳ ಅಧ್ಯಯನ ಮಾಡಿದ್ದೀರಿ ಅನ್ನಿ ಹಾಗಾದರೆ.”
“ಹೌದು” ಲೆಸ್ಪಿರಾನ್ಸ್ ಹೇಳಿದ. “ಅವುಗಳ ಜನಾನಾರಭ್ಯ ನಾನು ಅವುಗಳನ್ನು ಹಿಂಬಾಲಿಸುತ್ತೇನೆ, ಯಾವುದು ದೀರ್ಘ ಕಾಲ ಬದುಕುತ್ತವೆ ಎಂಬುದನ್ನು ಗುರುತಿಟ್ಟುಕೊಳ್ಳುತ್ತೇನೆ. ಎಷ್ಟು ಸಲ ಅವು ಸಂಭೋಗಿಸುತ್ತವೆ, ಎಷ್ಟು ಕಾಲ ಬದುಕುತ್ತವೆ, ಪ್ರತಿಯೊಂದು ವಿವರಗಳ ದತ್ತಾಂಶಗಳನ್ನು ನಾನು ಶೇಖರಿಸುತ್ತೇನೆ. ಕೆಲವು ಮಾತ್ರ ಹಲವು ಕಾಲ ಬದುಕುತ್ತವೆ. ಇವುಗಳ ಜೀವನ ಬಹಳ ಸಣ್ಣದು, ಯಾವ ಪ್ರಾಣಿಯು ಮರ ಬಿದ್ದೋ, ಕೆಸರಿನಲ್ಲಿ ಮುಳುಗಿಯೋ ಶೀಘ್ರ ಸಾಯುತ್ತದೆ ಎಂದು ತಿಳಿಯುತ್ತದೋ ನಾನು ಅದರ ಸಾವಿನ ನಿಖರ ಗಂಟೆ, ನಿಮಿಷ, ಮತ್ತು ಸೆಕೆಂಡುಗಳನ್ನು ಗುರುತು ಹಾಕಿಕೊಂಡು ಅದರ ಮೇಲೆ ಬಣ್ಣದ ಬಾಂಬ್ ಎಸೆಯುತ್ತೇನೆ. ಆ ಬಣ್ಣ ಅದರ ಮೈಯ ಮೇಲೆ ಸಣ್ಣ ಕೆಂಪು ಬಣ್ಣದ ಗುರುತನ್ನು ಉಳಿಸುತ್ತದೆ. ನಂತರ ನಾನು ನಮ್ಮ ಆಗಮನವನ್ನು ಅದರ ಸಾವಿನ ಸಮಯದ ಜೊತೆ ತಾಳೆ ಹಾಕಿ ನೋಡಿ ಅದರ ಸಾವಿಗೆ ಕೇವಲ ಎರಡು ನಿಮಿಷಗಳ ಮುಂಚೆ ಮಾತ್ರ ಆ ಜಾಗಕ್ಕೆ ಹೋಗುವ ಹಾಗೆ ಯೋಜಿಸುತ್ತೇನೆ, ಹೇಗಾದರೂ ಸಾಯುವ ಪ್ರಾಣಿಯನ್ನು ನಾವು ಬೇಟೆಯಾಡುತ್ತೇವೆ. ಈ ರೀತಿ, ಕೇವಲ ಭವಿಷ್ಯವಿಲ್ಲದ ಪ್ರಾಣಿಗಳು, ಭವಿಷ್ಯದಲ್ಲಿ ಸಂಭೋಗಿಸುವ ಅವಕಾಶವೇ ಇಲ್ಲದ ಪ್ರಾಣಿಗಳನ್ನು ಮಾತ್ರ ನಾವು ಕೊಲ್ಲುತ್ತೇವೆ. ಗೊತ್ತಾಯ್ತೆ ನಾವೆಷ್ಟು ಎಚ್ಚರಿಕೆಯಿಂದಿದ್ದೇವೆ?”
“ಓಹ್, ಹಾಗಾದರೆ ನೀವು ಇಲ್ಲಿ ಬೆಳಿಗ್ಗೆ ಬಂದಿದ್ದಿರಿ ಎಂದಾದರೆ,” ಎಕೆಲ್ಸ್ ಕೌತುಕದಿಂದ ಕೇಳಿದ, “ನೀವು ನಮ್ಮ ಸಫಾರಿಯನ್ನು ಸಂಧಿಸಿರಲೇಬೇಕು! ನಮ್ಮ ಸಫಾರಿ ಹೇಗೆ ನಡೆಯಿತು? ಸಫಲವಾಯಿತೇ? ನಾವೆಲ್ಲರೂ ಜೀವ ಸಮೇತ ವಾಪಸು ಹೋದೆವೆ?”
ಟ್ರಾವಿಸ್ ಮತ್ತು ಲೆಸ್ಪಿರಾನ್ಸ್ ಒಬ್ಬರ ಮುಖ ಒಬ್ಬರು ನೋಡಿಕೊಂಡರು.
“ಅದು ವಿರೋಧಾಭಾಸವಾಗುತ್ತದೆ (Paradox).” ಲೆಸ್ಪಿರಾನ್ಸ್ ಹೇಳಿದ. “ಒಬ್ಬ ಮನುಷ್ಯ ತನ್ನನ್ನು ತಾನೇ ಸಂಧಿಸುವುದಕ್ಕೆ ಸಮಯ ಅವಕಾಶ ಕೊಡುವುದಿಲ್ಲ. ಒಂದು ವೇಳೆ ಆ ರೀತಿಯ ಘಟನೆಯೇನಾದರೂ ನಡೆದರೆ, ಸಮಯ ಬದಿಗೆ ಸರಿದು ಬಿಡುತ್ತದೆ. ಒಂದು ವಿಮಾನ ಟರ್ಬುಲೆನ್ಸ್ ಮುಟ್ಟಿದ ಹಾಗೆ, ನಾವು ನಿಲ್ಲುವ ಮುಂಚೆ, ಯಂತ್ರ ಒಂದು ರೀತಿ ಕಂಪಿಸಿದ್ದು ನೀವು ಗಮನಿಸಿದಿರಿ ಅಲ್ಲವೇ? ಅದು ನಾವು ಭವಿಷ್ಯದಲ್ಲಿ ವಾಪಸು ಹೋಗುತ್ತಿದ್ದ ಸಮಯ. ನಮಗೇನೂ ಕಾಣಿಸಲಿಲ್ಲ. ಡೈನೋಸಾರನ್ನು ನಾವು ಹೊಡೆದೆವೋ ಇಲ್ಲವೋ, ಈ ಸಫಾರಿ ಸಫಲವಾಯಿತೋ ಇಲ್ಲವೋ, ನಾವೆಲ್ಲರೂ – ಅಂದರೆ ನೀವು – ಮಿ. ಎಕೆಲ್ಸ್ – ಜೀವ ಸಮೇತ ವಾಪಸು ಹೋಗುತ್ತೀರೋ ಇಲ್ಲವೋ, ಯಾವುದೂ ನಾನು ಈಗಲೇ ಹೇಳಲಾಗುವುದಿಲ್ಲ.”
ಎಕೆಲ್ಸ್ ಬಿಳಿಚಿಕೊಂಡು ಪ್ರಯಾಸದಿಂದ ನಕ್ಕ.
“ಎಲ್ಲ ನಿಲ್ಲಿಸಿ.” ಟ್ರಾವಿಸ್ ಹಠಾತ್ತನೆ ಹೇಳಿದ, “ಎಲ್ಲರೂ ಸಿದ್ಧರಾಗಿ.”
ಎಲ್ಲರೂ ಯಂತ್ರವನ್ನು ಬಿಟ್ಟು ಆಚೆ ಹೋಗಲು ಸಿದ್ಧರಾದರು.
ಅತಿ ಎತ್ತರದ ಮರಗಳಿಂದ ಕೂಡಿದ ದಟ್ಟ ಕಾನನ, ಆ ಕಾಡು ಸಂಪೂರ್ಣ ಜಗತ್ತನ್ನೇ ಶಾಶ್ವತವಾಗಿ ತನ್ನ ಒಡಲಲ್ಲಿ ಅಡಗಿಸಿ ಕೊಂಡಂತೆ ಕಾಣುತ್ತಿತ್ತು. ಸಂಗೀತದಂಥ ದನಿಗಳು, ಆಗಸವನ್ನೇ ಬಟ್ಟೆಯಿಂದ ಮುಚ್ಚಿದಂತೆ ಕಾಣುವ, ಭಾವದ್ವೇಗಗೊಳಿಸುವಂತೆ ಹಾರುತ್ತಿರುವ ಬೂದು ಬಣ್ಣದ ಟೆರೊಡಾಕ್ಟಾಯ್ಲ್ ಗಳು ಎಲ್ಲರಿಗೂ ಕಂಡವು.
ಎಕೆಲ್ಸ್, ಆ ಸಣ್ಣ ಪಥದ ಮೇಲೆ ಎಚ್ಚರಿಕೆಯ ಹೆಜ್ಜೆಯಿಡುತ್ತಾ ತನ್ನ ಬಂದೂಕನ್ನು ಸುಮ್ಮನೆ ಗಾಳಿಯಲ್ಲಿ ಗುರಿಯಿಟ್ಟು ನೋಡಿದ.
“ನಿಲ್ಲಿಸಿ!” ಟ್ರಾವಿಸ್ ಕಿರುಚಿದ. “ತಮಾಷೆಗೂ ಕೂಡ ಯಾವುದರ ಕಡೆಗೂ ಗುರಿಯಿಡಬೇಡಿ. ನಿಮ್ಮ ಬಂದೂಕಿನ ಗುಂಡೇನಾದರೂ ಹಾರಿದರೆ ನಾನೇ ನಿಮಗೆ ಗುಂಡಿಡುತ್ತೇನೆ.”
“ಸರಿ” ಎಂದ ಎಕೆಲ್ಸ್ , “ನಮ್ಮ ಟೈರನ್ನೊಸಾರಸ್ ಎಲ್ಲಿ?” ಎಂದು ಕೇಳಿದ.
ಲೆಸ್ಪಿರಾನ್ಸ್ ತನ್ನ ಕೈಗಡಿಯಾರ ನೋಡಿದ. “ಇಲ್ಲೇ ನಮ್ಮ ಮುಂದೇ ಇದೆ, ಇನ್ನೇನು ಅರವತ್ತು ಸೆಕೆಂಡುಗಳಲ್ಲಿ ನಾವು ಅವನ ದಾರಿಗೆ ನಅಡ್ಡಲಾಗಿ ಹೋಗುತ್ತೇವೆ. ಕೆಂಪು ಬಣ್ಣಕ್ಕಾಗಿ ನೋಡಿ! ನಾವು ಹೇಳುವ ತನಕ ಯಾರೂ ಗುಂಡು ಹಾರಿಸಬೇಡಿ. ಪಥದ ಮೇಲಿರಿ. ಪಥದ ಮೇಲಿರಿ!”
ಬೆಳಗಿನ ಗಾಳಿ ಮುಖದ ಮೇಲೆ ಬಡಿಯುತ್ತಿರುವಾಗ ಅವರು ಮುಂದೆ ಸಾಗಿದರು.
“ವಿಚಿತ್ರ“, ಎಕೆಲ್ಸ್ ಪಿಸುಗುಟ್ಟಿದ. “ಅರವತ್ತು ಮಿಲಿಯನ್ ವರ್ಷದ ಮುಂದೆ, ಚುನಾವಣೆಯ ದಿನ ಮುಗಿದಿದೆ. ಕೀತ್ ಅಧ್ಯಕ್ಷನಾಗಿದ್ದಕ್ಕೆ ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ನಾವು ನೋಡಿದರೆ, ಅರವತ್ತು ಮಿಲಿಯನ್ ವರ್ಷಗಳನ್ನು ಕಳೆದುಕೊಂಡು ಬಂದಿದ್ದೇವೆ, ಅವರು ಯಾರೂ ಅಸ್ತಿತ್ವದಲ್ಲೇ ಇಲ್ಲ. ಯಾವ ವಿಷಯಗಳ ಬಗ್ಗೆ ನಾವು ತಿಂಗಳುಗಳ ಕಾಲ, ಜೇವಂಪ್ರತಿ ತಲೆ ಕೆಡಿಸಿಕೊಂಡಿದ್ದೆವೋ ಅವುಗಳು ಯಾವುದೂ ಇನ್ನೂ ಮನದಲ್ಲಿ ಮೂಡಿಲ್ಲ, ಇಲ್ಲವೇ ಜನ್ಮವೇ ತಾಳಿಲ್ಲ.”
“ಬಂದೂಕಿನ ಮೇಲಿನ, ಸುರಕ್ಷಾ ಗುಂಡಿ ಎಲ್ಲರೂ ಒತ್ತಿ.” ಟ್ರಾವಿಸ್ ಆದೇಶ ನೀಡಿದ. “ಎಕೆಲ್ಸ್ ನೀನು ಮೊದಲು ಗುಂಡು ಹಾರಿಸಬೇಕು. ಬಿಲ್ಲಿಂಗ್ಸ್ ನೀನು ಎರಡನೆಯದಾಗಿ. ಕ್ರೇಮರ್ ನೀನು ಮೂರನೆಯದಾಗಿ.”
“ನಾನು ಹುಲಿ, ಕಾಡೆಮ್ಮೆ, ಅಷ್ಟೇ ಯಾಕೆ ಆನೆಯನ್ನೂ ಬೇಟೆಯಾಡಿದ್ದೇನೆ. ಆದರೆ…” ಎಕೆಲ್ಸ್ ಹೇಳಿದ. “ಈಗ, ಇಲ್ಲಿ ಒಂದು ಸಣ್ಣ ಬೆದರಿದ ಹುಡುಗನಂತೆ ಅದುರುತ್ತಿದ್ದೇನೆ.”
“ಆಹ್!” ಟ್ರಾವಿಸ್ ಉದ್ಘಾರ ಮಾಡಿದ.
ಎಲ್ಲರೂ ನಿಂತರು.
ಟ್ರಾವಿಸ್ ತನ್ನ ಕೈಯೆತ್ತಿ. “ಇಲ್ಲೇ ಮುಂದೆ,” ಪಿಸುಗುಟ್ಟಿ, “ಮಂಜಿನ ಹಿಂದೆ. ಆಹ್ ಅಲ್ಲಿದ್ದಾನೆ ನೋಡಿ. ರಾಜಠೀವಿಯಿಂದ ಬರುತ್ತಿದ್ದಾನೆ ನೋಡಿ.”
ಆ ವಿಸ್ತಾರವಾದ ಕಾನನದ ತುಂಬಾ ಚಿಲಿಪಿಲಿ, ಮರ್ಮರ, ಪಿಸುಗುಡುವ ಸದ್ದುಗಳು, ಮತ್ತಿವರ ನಿಟ್ಟುಸಿರೇ ತುಂಬಿದ ಹಾಗೆ ಅನಿಸುತ್ತಿದೆ.
ಹಠಾತ್ತಾಗಿ ಯಾರೋ ಎಲ್ಲ ಸದ್ದಿಗೂ ಬಾಗಿಲು ಜಡಿದ ಹಾಗೆ ಅಲ್ಲಿ ಮಹಾಮೌನ ಆವರಿಸಿತು.
ಮೌನ. ಮಹಾಮೌನ.
ರವ. ಮಹಾರವ.
ಘರ್ಜನೆ. ಮಹಾಘರ್ಜನೆ.
ಮಂಜಿನ ಪರದೆಯನ್ನು ಸೀಳಿ, ಒಂದು ನೂರು ಗಜ ದೂರದಲ್ಲಿ, ಕಂಡಿದ್ದು ಟೈರನ್ನೊಸಾರಸ್ ರೆಕ್ಸ್.
“ಅದು,” ಎಕೆಲ್ಸ್ ಪಿಸುಗುಟ್ಟಿದ. “ಅದು…..”
“ಶ್!!!”
ತೈಲ ಲೇಪನಗೊಂಡಂತೆ ಮಿರಿಮಿರಿ ಮಿಂಚುತ್ತಿರುವ ಬಲಿಷ್ಠ ಕಾಲುಗಳಿಂದ ದಾಪುಗಾಲಿಡುತ್ತಾ ಬರುತ್ತಿತ್ತು. ಅರ್ಧದಷ್ಟು ಮರಗಳಿಗಿಂತ ಮೂವತ್ತು ಅಡಿ ಎತ್ತರದ ಆ ಸರೀಸೃಪ ತನ್ನ ಪಂಜಗಳನ್ನು ಎದೆಗೆ ಹತ್ತಿರ ಇಟ್ಟುಕೊಂಡು ಬಲಿ ತೆಗೆದುಕೊಳ್ಳಲು ಸಿದ್ದನಾದ ಮಹಾದೈತ್ಯನಂತೆ ಕಂಡಿತು. ಅದರ ಎರಡೂ ಹಿಂಗಾಲುಗಳು ಕೇವಲ ಕಾಲುಗಳಲ್ಲ, ಮರದ ತೊಲೆಗಳ ಹಾಗಿದ್ದವು, ದಪ್ಪ ಹಗ್ಗಗಳ ಹಾಗೆ ಭಾಸವಾಗುವ ಸ್ನಾಯುಗಳಿಂದ ಸುತ್ತಲ್ಪಟ್ಟ ಸಾವಿರ ಪೌಂಡುಗಳ ಶ್ವೇತವರ್ಣದ ಮೂಳೆಗಳ ಸುತ್ತಲೂ ಕಾಲಗರ್ಭದಲ್ಲಿ ಕಳೆದು ಹೋದ ವೀರನ, ಹರಳುಗಳನ್ನು ಹೊದಿಸಿದ ಕಾಪನ್ನು ಮೈಯ ಮೇಲೆ ಹಾಕಿದ ಹಾಗೆ ಕಾಣುತ್ತಿತ್ತು. ಎರಡೂ ತೊಡೆಗಳು ಒಂದು ಟನ್ ತೂಗುತ್ತಿದ್ದ ಮಾಂಸ ಪರ್ವತಗಳು, ಅವಶಿಷ್ಟ ದಂತ (Ivory), ಮತ್ತು ಕಬ್ಬಿಣದ ಕಂಬಗಳು. ದೇಹದ ಮೇಲ್ಭಾಗದ ಆ ಮಹಾ ಎದೆಗೂಡುಗಳ ಬದಿಯಿಂದ ಎರಡು ಸಣ್ಣ ಕೈಗಳು ಮುಂದೆ ನೇತಾಡುತ್ತಿದ್ದವು. ಅದರ ಕುತ್ತಿಗೆ ಹಾವಿನ ಮೈಯಂತೆ ಅತ್ತ ಇತ್ತ ತಿರುಗಿಸುತ್ತಿತ್ತು. ಆ ಮುಂಗೈಗಳಿಗೆ ಮನುಷ್ಯರನ್ನು ಗೊಂಬೆಗಳಂತೆ ಎತ್ತಿ ತಿರುಗಿಸುವ ಶಕ್ತಿಯಿತ್ತು. ಅದರ ತಲೆಯಂತೂ ಒಂದು ಟನ್ ತೂಕದ ಕಡೆದ ಬಂಡೆಯಂತಿದ್ದರೂ, ಸುಲಭವಾಗಿ ಆಗಸದತ್ತ ಎತ್ತಿ ನೋಡುತ್ತಿತ್ತು. ಆ ದೈತ್ಯ ಬಾಯಿ ತೆಗೆದಾಗ ಅದರ ಹಲ್ಲುಗಳು ಕತ್ತಿಗಳಿಂದ ಮಾಡಿದ ಬೇಲಿಯ ಹಾಗೆ ಕಾಣುತ್ತಿದ್ದವು. ಮಹಾಹಸಿವನ್ನು ಬಿಟ್ಟು ಬೇರೇನೂ ಕಾಣದ ಆಸ್ಟ್ರಿಚ್ ಮೊಟ್ಟೆಯಷ್ಟು ದೊಡ್ಡದಿರುವ ಅದರ ಕಣ್ಣುಗಳು, ಅತ್ತ ಇತ್ತ ತಿರುಗುತ್ತಿದ್ದವು. ಆ ಮಹಾದೈತ್ಯ ಕಾಲಯಮನ ದೂತನಂತೆ, ಸಾವಿನ ನಗುವನ್ನು ಬೀರುವಂತೆ ತನ್ನ ಬಾಯಿ ತೆರೆಯಿತು. ತನ್ನ ತೂಕವನ್ನೆಲ್ಲಾ ಭೂಮಿಯ ಮೇಲೆ ಹಾಕಿ, ತನ್ನ ಪಂಜದ ಕಾಲುಗಳಿಂದ ಭೂಮಿಯಲ್ಲಿ ೬ ಇಂಚಿನಷ್ಟು ಆಳದ ಹೆಜ್ಜೆಗಳನ್ನು ಮೂಡಿಸುತ್ತಾ, ಪೊದೆಗಳನ್ನು, ಮರಗಳನ್ನು ಬುಡಮೇಲು ಮಾಡುತ್ತಾ, ಅದು ಸಫಾರಿಯತ್ತ ಓದಲು ಎಡೆಯಿಟ್ಟಿತು.
ಹತ್ತು ಟನ್ ಗಳ ತೂಕವಿದ್ದರೂ ಒಬ್ಬ ಬ್ಯಾಲೆ ನರ್ತಕಿಯ ಠೀವಿಯ ಹೆಜ್ಜೆಗಳನ್ನಿಡುತ್ತಾ ಓಡಿಬರುತ್ತಿತ್ತು. ಮರಗಳ ನೆರಳಿನಿಂದ ಸೂರ್ಯನ ಬೆಳಕಿದ್ದ ಜಾಗಕ್ಕೆ ಎಚ್ಚರಿಕೆಯಿಂದ ಬಂದ ದೈತ್ಯನ ಸಣ್ಣ ಮುಂಗಾಲುಗಳು ಗಾಳಿಯಲ್ಲಿ ತೇಲುತ್ತಿರುವ ಹಾಗೆ ಭಾಸವಾಗುತ್ತಿತ್ತು.
“ಏಕೆ, ಏಕೆ,” ಎಕೆಲ್ಸ್ ಬಾಯ ಸ್ನಾಯುಗಳು ಸೆಳೆದುಕೊಳ್ಳುತ್ತಿದ್ದವು, “ಅದು ಎದ್ದು ನಿಂತರೆ, ಚಂದ್ರನನ್ನೂ ಕೂಡ ತನ್ನ ಮುಷ್ಟಿಗೆ ತೆಗೆದುಕೊಂಡುಬಿಡಬಹುದು.”
“ಶ್!” ಟ್ರಾವಿಸ್ ಕೋಪದಿಂದ ಸನ್ನೆ ಮಾಡಿದ. “ಅವನಿನ್ನೂ ನಮ್ಮನ್ನು ನೋಡಿಲ್ಲ.”
“ಅದನ್ನು ಸಾಯಿಸಲು ಸಾಧ್ಯವೇ ಇಲ್ಲ,” ಅದು ವಿವಾದರಹಿತ ವಿಷಯವೆಂಬಂತೆ ತನ್ನ ಮನಸಿಗೆ ಮೂಡಿದ ನಿರ್ಧಾರವನ್ನು ಎಕೆಲ್ಸ್ ಘೋಷಿಸಿಯೇ ಬಿಟ್ಟ. ಅದು ಹೆದರಿಕೆಯ ಬಡಬಡಿಕೆಯಲ್ಲ. ಅವನು ತನ್ನ ಮುಂದಿದ್ದ ಪುರಾವೆಯನ್ನು ನೋಡಿ ಈ ನಿರ್ಧಾರಕ್ಕೆ ಬಂದಿದ್ದ. ಅವನ ಕೈಯಲ್ಲಿದ್ದ ಬಂದೂಕು ಮಕ್ಕಳಾಟಿಕೆಯಂತೆ ಕಾಣ ಹತ್ತಿತು. “ಆ ದೈತ್ಯನನ್ನು ಕೊಲ್ಲುತ್ತೇವೆಂದು ಬಂದ ನಾವು ಮೂರ್ಖರು. ಇದು ಅಸಾಧ್ಯ.”
“ಬಾಯ್ಮುಚ್ಚು!” ಟ್ರಾವಿಸ್ ಬುಸುಗುಟ್ಟಿದ.
“ದುಃಸ್ವಪ್ನ.”
“ಹಿಂದೆ ತಿರುಗಿ ವಾಪಸು ಹೋಗು.” ಟ್ರಾವಿಸ್ ಆದೇಶಿಸಿದ. “ಸದ್ದು ಮಾಡದೆ ಯಂತ್ರಕ್ಕೆ ವಾಪಸು ಹೋಗಿಬಿಡು. ನಿನ್ನ ಅರ್ಧ ದುಡ್ಡನ್ನು ವಾಪಸು ಮಾಡುತ್ತೇವೆ.”
“ಅದು ಇಷ್ಟ್ಟು ದೊಡ್ಡದಿರಬಹುದೆಂದು ನಾನು ಎಣಿಸಿರಲಿಲ್ಲ.” ಎಕೆಲ್ಸ್ ಹೇಳಿದ. “ನನ್ನ ಎಣಿಕೆ ತಪ್ಪಾಯಿತು ಅಷ್ಟೇ. ಈಗ ನಾನು ವಾಪಸು ಹೋಗಬೇಕು.”
“ಅದು ನಮ್ಮನ್ನು ನೋಡಿತು!”
“ಅದರ ಎದೆಯ ಮೇಲೆ ಕೆಂಪು ಬಣ್ಣವಿದೆ!”
ಆ ಕ್ರೂರ ಗೌಳಿ ತನ್ನ ದೈತ್ಯ ದೇಹವನ್ನು ಎತ್ತರಿಸಿತು. ಸಾವಿರ ಹಸಿರು ನಾಣ್ಯಗಳ ಕಾಪು ತೊಟ್ಟಂತಿದ್ದ ಅದರ ದೇಹ ಸೂರ್ಯನ ಬಿಸಿಲಿನಲ್ಲಿ ಹೊಳೆಯುತ್ತಿತ್ತು. ಆ ನಾಣ್ಯಗಳಿಗೆ ಜಿಗುಟನ್ನು ಹಚ್ಚಿ, ಉಗಿಯಿಂದ ಶಾಖ ಕೊಟ್ಟಂತೆ ಕಾಣುತ್ತಿತ್ತು. ಅದರ ದೇಹದ ಜಿಗುಟಿನಲ್ಲಿ, ಸಣ್ಣ ಸಣ್ಣ ಕೀಟಗಳು ಸಿಲುಕಿ ಹೊರಬರಲಾಗದೆ ಸರಿದಾಡಿ, ಆ ದೈತ್ಯ ಅಲ್ಲಾಡದೇ ಇದ್ದರೂ ಅದರ ಸಂಪೂರ್ಣ ದೇಹ ಕಂಪಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಅದರ ಮೈಯ ಹಸಿ ಮಾಂಸದ ವಾಸನೆ ಆ ಕಾನನದ ಗಾಳಿಯಲ್ಲಿ ತೇಲಿ ಬಂದಿತು.
“ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ,” ಎಕೆಲ್ಸ್ ಹೇಳಿದ. “ಈ ರೀತಿ ಯಾವತ್ತೂ ಆಗಿರಲಿಲ್ಲ. ಎಂಥದೇ ಪರಿಸ್ಥಿತಿಯಾಗಲಿ ಜೀವ ಸಮೇತ ವಾಪಸು ಬರುವ ಧೈರ್ಯವಿತ್ತು. ಆ ಸಮಯಗಳಲ್ಲಿ ಒಳ್ಳೆಯ ಮಾರ್ಗದರ್ಶಕರು, ಒಳ್ಳೆಯ ಸಫಾರಿ, ಮತ್ತು ಸುರಕ್ಷತೆಯಿತ್ತು. ಈ ಸಲ, ನನ್ನ ಎಣಿಕೆ ತಪ್ಪಾಯಿತು. ನನ್ನೆದುರಿಗೆ ಅರಿಭಯಂಕರನಿದ್ದಾನೆ, ನಾನು ನನ್ನ ಸೋಲನ್ನು ಒಪ್ಪಿಕೊಳ್ಳುತ್ತಿದ್ದೇನೆ. ನನ್ನ ಹಿಡಿತಕ್ಕೆ ಸಿಗಲಾರದ ಬೇಟೆಯಿದು.”
“ಓಡಬೇಡ.” ಲೆಸ್ಪಿರಾನ್ಸ್ ಹೇಳಿದ. “ಹಿಂದಿರುಗಿ ಹೋಗು. ಯಂತ್ರದಲ್ಲಿ ಅಡಗಿ ಕುಳಿತುಕೋ.”
“ಆಯಿತು.” ಎಕೆಲ್ಸ್ ಗರಬಡಿದವನಂತೆ ಕಾಣುತ್ತಿದ್ದ. ತನ್ನ ಇಚ್ಚಾಶಕ್ತಿಯಿಲ್ಲದೇ ಅವನ ಕಾಲುಗಳು ತಾವೇ ಚಲಿಸುವವೇನೋ ಎಂಬಂತೆ ಅವನು ನೋಡುತ್ತಿದ್ದ. ಹತಾಶೆಯಿಂದ ಅವನ ಬಾಯಿಂದ ಕ್ಷೀಣ ನರಳಾಟ ಕೇಳುತ್ತಿದೆನೋ ಎನಿಸುತ್ತಿತ್ತು..
“ಎಕೆಲ್ಸ್!”
ಅವನು ಕೆಲವು ಹೆಜ್ಜೆ ಮಾತ್ರ ಇಟ್ಟ, ಕಣ್ಣು ಕಣ್ಣು ಬಿಡುತ್ತಾ, ಕಾಲುಗಳನ್ನು ಅಡ್ಡಾದಿಡ್ಡಿಯಾಗಿ ಇಡುತ್ತಾ.
“ಆ ದಾರಿಯಲ್ಲಲ್ಲ!”
ದೈತ್ಯ, ಆ ಸಣ್ಣ ಚಲನೆಗೇ ಕಾಯುತ್ತಿತ್ತೋ ಎಂಬಂತೆ, ಕಿರುಚುತ್ತಾ ರಭಸವಾಗಿ ಮುಂದೆ ನುಗ್ಗಿ ಬಂತು. ನೂರು ಗಜದ ಹಾದಿಯನ್ನು ಅದು ಆರು ಸೆಕೆಂಡುಗಳಲ್ಲಿ ಕ್ರಮಿಸಿತು. ಬಂದೂಕುಗಳು ಮೇಲೆ ಸೆಳೆಯಲ್ಪಟ್ಟು ಬೆಂಕಿ ಉಗುಳಿದವು. ಆ ಮೃಗದ ಬಾಯಿಂದ ಹೊರಟ ಬಿರುಗಾಳಿ ಅವರನ್ನೆಲ್ಲಾ ಜಿಗುಟು ಮತ್ತು ಹಳೆಯ ರಕ್ತದ ಅಸಹ್ಯದ ವಾಸನೆಯಿಂದ ವಾಕರಿಸುವ ಹಾಗೆ ಮಾಡಿತು. ಆ ಕತ್ತಿಯಂತಹ ಹಲ್ಲುಗಳನ್ನು ಸೂರ್ಯನ ಬೆಳಕಿನಲ್ಲಿ ಹಿರಿಯುತ್ತಾ, ಆ ಮಹಾಗೌಳಿ ಘರ್ಜಿಸಿತು.
ಬಂದೂಕುಗಳು ಮತ್ತೆ ಬೆಂಕಿಯುಗುಳಿದವು, ಅವುಗಳ ಸದ್ದು ಆ ಗೌಳಿಯ ಘರ್ಜನೆಯಲ್ಲಿ ಕರಗಿಹೋಯಿತು. ಆ ಸರೀಸೃಪದ ಬಾಲ ಮೇಲೆದ್ದು ಅತ್ತ ಇತ್ತ ಹೊಡೆಯಿತು. ಮರದ ಟೊಂಗೆಗಳು ಮತ್ತು ಎಲೆಗಳು ಉದುರಿ ಹಸಿರು ಮೋಡಕ್ಕೆ ಜನ್ಮಕೊಟ್ಟಂತೆ ಕಾಣುತ್ತಿತ್ತು. ಎರಡೂ ಕೈಗಳಿಂದ ಅವರ ದೇಹವನ್ನು ಹಿಸುಕಿ, ತಿರುಗಿಸಿ, ಕಾಡ ಹಣ್ಣುಗಳನ್ನು ಜಜ್ಜುವಂತೆ ಜಜ್ಜಿ, ತನ್ನ ಹಲ್ಲುಗಳಲ್ಲಿ, ಚೀರುತ್ತಿರುವ ತನ್ನ ಗಂಟಲಿನಲ್ಲಿ ಅವರ ದೇಹವನ್ನು ಸಿಕ್ಕಿಸಿಕೊಳ್ಳಲು ಆ ಮಹಾದೈತ್ಯ ಮಾಂಸಪರ್ವತ ತನ್ನ ದೇಹವನ್ನು ಅವರತ್ತ ತಂದಿತು. ಹೆಬ್ಬಂಡೆಗಳಂತಹ ಅದರ ಕಣ್ಣುಗಳು ಅವರ ಕಣ್ಣುಗಳನ್ನು ಸಂಧಿಸಿದವು. ಅಲ್ಲಿದ್ದವರಿಗೆಲ್ಲ ಆ ಬಂಡೆಗಾತ್ರದ ಕಣ್ಣುಗಳಲ್ಲಿ ತಮ್ಮದೇ ಪ್ರತಿರೂಪಗಳು ಕಂಡವು. ಅದರ ಉರಿಯುವ ಕಣ್ಣ ಪೊರೆಯ ಕಡೆ ಅದರ ಲೋಹದ ಕಣ್ಣ ರೆಪ್ಪೆಗಳ ಕಡೆ ಅವರ ಬಂದೂಕುಗಳು ಬೆಂಕಿಯುಗುಳಿದವು.
ಶಿಲೆಯ ಮಹಾವಿಗ್ರಹದಂತೆ ಕಾಣುತ್ತಿದ್ದ ಟೈರನ್ನೊಸಾರಸ್ ರೆಕ್ಸ್, ಒಂದು ಮಹಾ ಪರ್ವತಪಾತದಂತೆ ನೆಲಕ್ಕುರುಳಿತು.
ಮರಗಳನ್ನು ತನ್ನ ಮುಂಗೈಗಳಲ್ಲಿ ಗಟ್ಟಿಯಾಗಿ ಹಿಡಿದು, ಮಹಾರವದೊಂದಿಗೆ ಬೀಳುವುದಕ್ಕೆ ಶುರುಮಾಡಿತು. ತನ್ನ ಕೈಗಳಿಂದ ತಿರುಚಿ, ಆ ಲೋಹದ ಪಥವನ್ನು ಹರಿದು ಹಾಕಿತು. ಎಲ್ಲರೂ ತಕ್ಷಣ ಹಿಂದೆ ಓಡಿದರು. ಹತ್ತು ಟನ್ನುಗಳ ಆ ಮಾಂಸಪರ್ವತ ನೆಲಕಚ್ಚಿತು. ಬಂದೂಕುಗಳು ತಮ್ಮ ಕೆಲಸ ನಿಲ್ಲಿಸಲಿಲ್ಲ. ತನ್ನ ಕಾಪಿನ ಬಾಲವನ್ನು ನೋವಿನಲ್ಲಿ ತಿರುಗಿಸಿ, ತನ್ನ ದವಡೆಗಳನ್ನು ಕೊನೆಯ ಬಾರಿ ಹಿರಿದು, ಆ ದೈತ್ಯ ಮೌನವಾಯ್ತು. ಅದರ ಗಂಟಲಿನಿಂದ ರಕ್ತದ ಕಾರಂಜಿಯೇ ಶುರುವಾಯ್ತು. ದೇಹದ ಒಳಗೆಲ್ಲೋ ಯಾವುದೋ ಜೀವದ್ರವದ ಕೋಶ ಒಡೆಯಿತು. ಅಸಹ್ಯವೆನಿಸುವಂತೆ ಅದರ ಪ್ರವಾಹ ಆ ಬೇಟೆಗಾರರ ಮೈಯೆಲ್ಲಾ ತೋಯಿಸಿತು. ರಕ್ತವರ್ಣದಲ್ಲಿ ಮಿನುಗುತ್ತಾ ಅವರು ಅರೆಕ್ಷಣ ಮೌನವಾಗಿ ನಿಂತರು.
ಆ ಮಹಾರವ ನಿಧಾನವಾಗಿ ಇಲ್ಲವಾಯ್ತು.
ಮುಂದುವರಿಯುವುದು
-ಶ್ರೀನಿಧಿ
srinidhi1947@gmail.com
Facebook ಕಾಮೆಂಟ್ಸ್