X

ಭಾರೀ “ತೂಕ”ದ ಶಿಕ್ಷಣ!!

ಎರಡು ತಿಂಗಳುಗಳ ಕಾಲ ಹಗಲು ರಾತ್ರಿಯೆನ್ನದೆ ಕುಣಿದು ಕುಪ್ಪಳಿಸಿದ ಮಕ್ಕಳು ಮತ್ತೆ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಹೊರಟಿದ್ದಾರೆ. ರಜಾದಿನಗಳಲ್ಲಿ ಕೇಕೆ ಹಾಕಿ ನಲಿದ ಮಕ್ಕಳು ಅಯ್ಯೋ ಇಷ್ಟು ಬೇಗ ರಜೆ ಮುಗಿಯಿತೇಕೆ ಎಂಬ ಮುಖಮುದ್ರೆಯೊಂದಿಗೆ ಶಾಲೆಯತ್ತ ಹೆಜ್ಜೆಹಾಕುತ್ತಿದ್ದಾರೆ. ಮಳೆ ಹನಿ ಜಿನುಗುವ ಕಾಲವಷ್ಟೇ ಅಲ್ಲ ಇದು ಮಕ್ಕಳ ಕಣ್ಣೀರ ಹನಿ ಜಾರುವ ಸಮಯವೂ ಹೌದು. ಮಕ್ಕಳು, ಪೋಷಕರ ನಿರೀಕ್ಷೆಗಳನ್ನು ತಮ್ಮ  ಹೆಗಲಿಗೇರಿಸಿಕೊಂಡು ಶಾಲೆಯತ್ತ ‘ಭಾರ’ದ ಹೆಜ್ಜೆಗಳನ್ನು ಹಾಕುತ್ತಿದ್ದಾರೆ. ಹಗುರವಾಗಿದ್ದ ಪಾಠೀ ಚೀಲಗಳು ಕಾಲಗರ್ಭದಲ್ಲಿ ಮರೆಯಾಗಿ, ಆ ಜಾಗದಲ್ಲಿ ಮಣಭಾರದ ಬ್ಯಾಗುಗಳು ಬಂದು ಕುಳಿತಿವೆ. ಹೀಗೂ ಮಕ್ಕಳನ್ನು ಸದೃಢರನ್ನಾಗಿ ಮಾಡಬಹುದು ಎಂಬ ‘ಘನ’ ಆಲೋಚನೆ ಆಧುನಿಕ ಶೈಕ್ಷಣಿಕ ವ್ಯವಸ್ಥೆಯ ಬಹುದೊಡ್ಡ ಬಳುವಳಿಯೇ ಆಗಿದೆ.

ಸಾಮಾನ್ಯವಾಗಿ ಹಳೆತಲೆಗಳು ಹಳಹಳಿಸುವುದಿದೆ, “ಏನೇ ಆದರೂ ಇಂದಿನ ಶಿಕ್ಷಣ ಪದ್ಧತಿ ತೂಕ ಕಳೆದುಕೊಂಡಿದೆ” ಎಂದು.  ಆದರೆ ಇದು ಸತ್ಯಕ್ಕೆ ದೂರವಾದ ಮಾತು. ಅಸಲಿಗೆ ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ತನ್ನ ತೂಕವನ್ನು ವಿಪರೀತವೆನಿಸುವಷ್ಟು ಹೆಚ್ಚಿಸಿಕೊಂಡಿದೆ. ಸಂದೇಹವಿದ್ದರೆ ಒಮ್ಮೆ ಶಾಲಾಮಕ್ಕಳ ಬ್ಯಾಗನ್ನು ಎತ್ತಿ ನೋಡಿ. ಇಂದಿನ ಶಿಕ್ಷಣದ ತೂಕ ಅರಿವಿಗೆ ಬರಬಹುದು. ಮಕ್ಕಳನ್ನು ಪುಸ್ತಕದ ಹೊರೆ ಕಾಡುತ್ತಿದ್ದರೆ, ಪೋಷಕರು ಶುಲ್ಕದ ಹೊರೆಗೆ ತತ್ತರಿಸಿ ಹೋಗುತ್ತಿದ್ದಾರೆ. ಆದಾಗ್ಯೂ ಶಿಕ್ಷಣ ತೂಕ ಕಳೆದುಕೊಂಡಿದೆ ಎಂದರೆ ಒಪ್ಪುವುದಾದರೂ ಹೇಗೆ?

ಹೇಗಾದರೂ ತಮ್ಮ ಮಕ್ಕಳನ್ನು ಬಗ್ಗಿಸಬೇಕೆನ್ನುವುದು ಬಹುತೇಕ ಪೋಷಕರ ಧ್ಯೇಯ. “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?” ಎನ್ನುವುದು ಅದರ ಹಿಂದಿನ ಆತಂಕದ ಧ್ವನಿತವೇ ಆಗಿದೆ. ಶಿಕ್ಷಣವ್ಯವಸ್ಥೆಯೂ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿದೆ. ಹೇಗೆಂದೀರಾ? ನೀವೆ ಯೋಚಿಸಿ, ದಿನದಿಂದ ದಿನಕ್ಕೆ ಭಾರೀ ಗಾತ್ರ ಹಾಗೂ ಭಾರದ ಚೀಲವನ್ನು ಮಕ್ಕಳ ಹೆಗಲಿಗೆ ನೇತು ಹಾಕಿದರೆ ಅವರು ಬಗ್ಗದೆ ಎಲ್ಲಿ ಹೋಗುತ್ತಾರೆ ಅಲ್ಲವೇ? ಜಗತ್ತು ಹೊಸ ಹೊಸ ಯೋಚನೆಗಳತ್ತ ಹೊರಳುತ್ತಿದ್ದರೆ ನಾವು ಮಾತ್ರ ನಮ್ಮ ಮಕ್ಕಳನ್ನು ಹೊರೆಯಾಳುಗಳನ್ನಾಗಿಸುತ್ತಿದ್ದೇವೆಯೇ ಎಂಬ ಸಂಶಯ ಮೂಡುತ್ತದೆ. ಪುಸ್ತಕಗಳ ಸಂಖ್ಯೆಯನ್ನು ಬೇಕಾಬಿಟ್ಟಿಯಾಗಿ ಹೆಚ್ಚಿಸುವುದನ್ನು ನೋಡಿದರೆ ಕೆಲವು ಖಾಸಗಿ ಶಿಕ್ಷಣಸಂಸ್ಥೆಗಳು ‘ಹೊತ್ತು ಸಾಗುವುದಕ್ಕೇ ಅದನ್ನು “ಹೊತ್ತಗೆ” ಎನ್ನುತ್ತಾರೆ’ ಎಂದು ಅಪಾರ್ಥ ಮಾಡಿಕೊಂಡಂತಿದೆ!!

ಮಕ್ಕಳಿಗೆ ತಮ್ಮ ಹೆಗಲ ಮೇಲಿರುವ ಜವಾಬ್ದಾರಿಯ ಭಾರವನ್ನು ಪದೇ ಪದೇ ನೆನಪಿಸಲು ಈ ಭಾರವನ್ನು ಹೇರಿದಂತಿದೆ ಸ್ಥಿತಿ. ಮುಂದೊಂದಿನ ಮಕ್ಕಳು ತಮ್ಮ ಬದುಕಿನ ಭಾರಕ್ಕೆ ಹೆಗಲಾಗುತ್ತಾರೆಂಬ ಭರವಸೆಯೊಂದಿಗೆ ಎಷ್ಟೋ ಪೋಷಕರು ಈಗಲೇ ತಮ್ಮ ಮಕ್ಕಳ ಬ್ಯಾಗಿನ ಭಾರಕ್ಕೆ ಹೆಗಲು ಕೊಡಲೂ ಮುಂದಾಗುತ್ತಿರುವುದು. ಮಸ್ತಕದಲ್ಲಿನ ಜ್ಞಾನದ ತೂಕಕ್ಕಿಂತಲೂ, ಪುಸ್ತಕದ ಭಾರದ ಆಧಾರದಲ್ಲೇ ಶಿಕ್ಷಣ ಸಂಸ್ಥೆಯ ಗುಣಮಟ್ಟ ನಿರ್ಧರಿಸುವ ಟ್ರೆಂಡ್ ಎಲ್ಲೆಲ್ಲೂ ತಾಂಡವಾಡುತ್ತಿದೆ. ಪುಸ್ತಕ ಹೊತ್ತು ಹೊತ್ತೇ ಇರಬೇಕು ಕೆಲವು ಮಕ್ಕಳು ಓದೋದರಲ್ಲಿ ‘ವೀಕ್’ ಆಗುವುದು.

ನಿತ್ಯ ಸ್ಕೂಲ್ ಬ್ಯಾಗ್ ಹೊರುವ ಮಕ್ಕಳಿಗೆ ಭಾರ ಎತ್ತುವುದು ಕಷ್ಟವಾಗಲಿಕ್ಕಿಲ್ಲ. ಹಾಗಾಗಿ ಭಾರ ಎತ್ತುವ ಸ್ಪರ್ಧೆಯಲ್ಲಿ ನಮ್ಮ ಮಕ್ಕಳಿಂದ ಮುಂದೊಂದು ದಿನ ಭಾರೀ ಸಾಧನೆಯನ್ನು ನಿರೀಕ್ಷಿಸಲಡ್ಡಿಯಿಲ್ಲ. ಮಕ್ಕಳಿಗೆ ಊಟ, ಹಾಲು, ಮೊಟ್ಟೆ ಕೊಡುವ ಬಗೆಗಿನ ಚರ್ಚೆಗಳೇ ಹೆಚ್ಚು ಮಹತ್ವ ಪಡೆದುಕೊಳ್ಳುವ ಹಿಂದಿನ ಕಾರಣವೂ ಇದೇ ಆಗಿರಬಹುದು. ಹಾಗಂತ ಇವುಗಳ ಭಾರ ಇಳಿಸುವ ಬಗ್ಗೆ ಯಾವುದೇ ಪ್ರಯತ್ನ ಆಗಿಲ್ಲವೆಂದಲ್ಲ. ಅದಕ್ಕೆಂದೇ ಒಂದಷ್ಟು ಸಮಿತಿ, ಅಧ್ಯಯನ, ಸಭೆ ಇತ್ಯಾದಿ ನಡೆದಿವೆ. ಅದರ ವರದಿಗಳನ್ನೂ ಸಲ್ಲಿಸಲಾಗಿದೆ. ಆದರೆ ಆ ವರದಿಯ ಭಾರ ಬ್ಯಾಗಿನ ಭಾರಕ್ಕಿಂತಲೂ ಹೆಚ್ಚಿರುವುದರಿಂದ ಇದನ್ನು ಎತ್ತಿ ತೆರೆಯುವುದಕ್ಕಿಂತ ಮಕ್ಕಳು ಆ ಭಾರ ಹೊರುವುದೇ ಲೇಸೆನಿಸಿ ಅನುಷ್ಠಾನಕ್ಕೆ ತರಲಿಲ್ಲವಷ್ಟೇ!

ಓವರ್ ಡೋಸ್: ದೇವರ ಮೇಲೆ ಭಾರ ಹಾಕುತ್ತಾರೆ. ಹೌದು, ಮಕ್ಕಳೂ ದೇವರಿಗೆ ಸಮಾನ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ!!

Here is a collection of places you can buy bitcoin online right now.

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post