X

ಬಿಸಿಸಿಐ’  ಬೆಳಕ ಹೊತ್ತಿಸದ ಶಶಾಂಕ!

ಕೆಲವಾರಗಳ ಹಿಂದಷ್ಟೆಯೇ ಬಿಸಿಸಿಐ (ಭಾರತೀಯ ಕ್ರಿಕೆಟ್ ಕೌನ್ಸಿಲ್) ಕ್ರಿಕೆಟ್ ಅಭಿಮಾನಿಗಳ ನಿದ್ದೆಗೆಡಿಸುವ ಸುದ್ದಿಯೊಂದನ್ನು ಹೊರ ಹಾಕಿತ್ತು. ‘ಈ ಬಾರಿ ಟೀಮ್ ಇಂಡಿಯ ಚಾಂಪಿಯನ್ಸ್ ಟ್ರೋಪಿಯಲ್ಲಿ ಆಡುವುದು ಅನುಮಾನ’ ಎಂಬ ಹೇಳಿಕೆ ಕೇಳಿಬರತೊಡಗಿತು. ಸುದ್ದಿಯನ್ನು ಕೇಳಿ ಅಭಿಮಾನಿ ಕೆಂಡಮಂಡಲವಾಗತೊಡಗಿದ್ದ. ಮಾಧ್ಯಮಗಳು  ಬಿಸಿಸಿಐಯ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡವು. ಚರ್ಚೆಗಳ ಮೇಲೆ ಚರ್ಚೆಗಳು, ಕವರ್ ಸ್ಟೋರಿಗಳು, ದೋಷಾರೋಪಗಳು ಹೆಚ್ಚತೊಡಗಿದವು. ಬಿಸಿಸಿಐ ಮಾತ್ರ ತನ್ನ ಪಟ್ಟನ್ನು ಸಡಿಲಿಸಲಿಲ್ಲ. ಕೆಲದಿನಗಳ ನಂತರ ಅಸಲಿ ವಿಷಯ ಅಂಕಿ ಅಂಶಗಳ ಸಮೇತ ಹೊರಬರತೊಡಗಿದಾಗ ಬಹುಪಾಲು ಭಾರತೀಯರಿಗೆ ಬಿಸಿಸಿಐಯ ನಿರ್ಧಾರ ಸಮಂಜಸವಾಗಿದೆ ಎನಿಸತೊಡಗಿತು. ಆದರೆ ವಿಷಯವನ್ನು ಅರೆದು ಕುಡಿದ ನೋಡುಗನ ಮನದಲ್ಲಿ ಕೊನೆಗೆ ಒಂದು ಪ್ರಶ್ನೆ ಮಾತ್ರ ಉತ್ತರಿಸಲಾಗದೆ ಮೆತ್ತಗಾಯಿತು. ಬಿಸಿಸಿಐ ವಾದಕ್ಕಿಳಿದಿರುವ ICC  (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಯ ಅಧ್ಯಕ್ಷ ಅಪ್ಪಟ ಭಾರತೀಯ ಹಾಗು ಮಾಜಿ ಬಿಸಿಸಿಐ ಅಧ್ಯಕ್ಷನಾಗಿದ್ದ ಶಶಾಂಕ್ ಮನೋಹರ್.  ದೇಶೀ ಕ್ರಿಕೆಟ್ ಸಂಸ್ಥೆಗೆ ಬಲ ತುಂಬಲೆಂದೇ ಅಂದು ಖುದ್ದು ಬಿಸಿಸಿಐ  ಶಶಾಂಕ್ ರವರನ್ನು ICC  ಯ ಅಧ್ಯಕ್ಷಗಿರಿಗೆ ಹೆಸರಿಸಿ ಆ ಕುರ್ಚಿಯ ಮೇಲೆ ಕೂರಿಸಿಯೂ ಬಂದಿತ್ತು. (ಆತನ ಆಯ್ಕೆ ಇಂಡಿಪೆಂಡೆಂಟ್, ಅಂದರೆ ಯಾವುದೇ ಮಂಡಳಿಯ ಮುಖೇನ ಆರಿಸಿ ಬಂದಿರದಂತಹ ಆಯ್ಕೆ. ಆದರೂ ಒಂದಲ್ಲ ಒಂದು ಬಗೆಯಲ್ಲಿ ಬಿಸಿಸಿಐ ತನ್ನ ಪ್ರಭಾವವನ್ನು ಈ ಆಯ್ಕೆಯಲ್ಲಿ ಬೀರಿತ್ತು ಎಂದರೆ ಸುಳ್ಳಾಗದು) ಅಂತಹ ಒಬ್ಬ ವ್ಯಕ್ತಿ ಇಂದು ದೇಶಕ್ಕೇ ದ್ರೋಹ ಬಗೆಯುವಂತಹ ಕೆಲಸವೇತಕ್ಕೆ ಮಾಡುತ್ತಿದ್ದಾನೆ? ಅಷ್ಟಕ್ಕೂ ಆತನ ಈ ನಿಲವು ದೇಶಕ್ಕೆ ಮಾಡುತ್ತಿರುವ ದ್ರೋಹವೇ ಅಥವಾ ಜವಾಬ್ದಾರಿಯುತ ಸ್ಥಾನದಲ್ಲಿ ಕೂತು ಮಾಡುತ್ತಿರುವ ನಿಷ್ಕಳಂಕ ಕಾರ್ಯವೇ?

ICC  ರೂಪಿಸುವ ತನ್ನ ಆಧಾಯ ಹಂಚಿಕೆ ಮಾದರಿಯೇ (ರೆವೆನ್ಯೂ ಶೇರಿಂಗ್ ಮಾಡೆಲ್) ಸದ್ಯಕ್ಕೆ ಇಷ್ಟೆಲ್ಲಾ ಚರ್ಚೆಗೆ ಕಾರಣವಾಗಿರುವುದು. ಆ ಮಾದರಿಯ ಪ್ರಕಾರ ICC ಯ ಅಧೀನಕ್ಕೊಳಪಡುವ ತಂಡಗಳ ನಡುವಿನ ಅಂತಾರಾಷ್ಟ್ರೀಯ ಪಂದ್ಯ/ಸರಣಿಗಳಿಂದ ಬಂದ ಲಾಭವನ್ನು ತಂಡಗಳಿಗೆಅವುಗಳ ಪ್ರಸಿದ್ಧತೆ ಹಾಗು  ICC ಯ ಜೋಳಿಗೆಗೆ ಆದಾಯವನ್ನು ಗಳಿಸಿ ಕೊಡುವ ಆದರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಪ್ರಸಿದ್ದತೆಯ ವಿಷಯ ಬಂದಾಗ ನೂರಾರು ಧರ್ಮಗಳೊಟ್ಟಿಗೆ ಕ್ರಿಕೆಟ್ ಅನ್ನೂ ತನ್ನ ಇನ್ನೊಂದು ಧರ್ಮವೆಂದೇ ಪರಿಗಣಿಸಿರುವ ಭಾರತವನ್ನು ಹಿಂದಿಕ್ಕುವ ದೇಶ ಮತ್ತೊಂದಿಲ್ಲ. ಪರಿಣಾಮ ಭಾರತ ವಿಶ್ವದ ಅದ್ಯಾವ ಮೂಲೆಗೆ ಹೋದರೂ ಅಲ್ಲಿ ಹಣದ ಹೊಳೆಯನ್ನೇ ಹರಿಸಿಪ್ರೇಕ್ಷಕರನ್ನು ರಂಜಿಸಿಯೇ  ಬರುತ್ತದೆ. ಆದಕಾರಣ ಒಟ್ಟು ಆದಾಯದ ಬಹುಪಾಲು ಹಕ್ಕು ಬಿಸಿಸಿಐ ಎಂಬ ದೈತ್ಯನಿಗೇಸಲ್ಲುತ್ತದೆ ಹಾಗು ಇದು ಸಮಂಜಶವೂ ಕೂಡ. ಉಳಿದಂತೆ ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ತಂಡಗಳು ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿವೆ. 2013 ರಲ್ಲಿ ರೂಪಿಸಲ್ಪಟ್ಟ ಆಧಾಯ ಹಂಚಿಕೆ ಮಾದರಿಯ ಪ್ರಕಾರ  ಭಾರತ, ಇಂಗ್ಲೆಂಡ್ ಹಾಗು  ಆಸ್ಟ್ರೇಲಿಯಾ ತಂಡಗಳನ್ನು ‘ಬಿಗ್ 3’ ತಂಡಗಳೆಂದು ಪರಿಗಣಿಸಿ ICC ತಾನು  ಗಳಿಸಿದ ಬಹುಪಾಲು ಲಾಭವನ್ನುಈ ಮೂರು ತಂಡಗಳಿಗೂ, ಉಳಿದ ಹಣವನ್ನು ಇತರೆಸದಸ್ಯತಂಡಗಳಿಗೂ ಹಂಚಿಕೆ ಮಾಡುತ್ತಿದ್ದರೂ ಯಾವೊಬ್ಬ ದೇಶವೂ ಈ ನಿಯಮದ ವಿರುದ್ಧ ತಕರಾರು ಎತ್ತಲಿಲ್ಲ. ಒಂದು ಪಕ್ಷ ಅಂತಹ ಒಂದು ತಂಡ ಈ ನಿಯಮವನ್ನು ಪ್ರೆಶ್ನಿಸ ಹೊರಟರೂ, ಒಂದೋ ಬಿಸಿಸಿಐ ಗಳಿಸಿ ಕೊಡುತ್ತಿದ್ದ ಆದಾಯದ ಮುಂದೆ ಅಂತಹ ತಂಡದ ಆದಾಯ ಪುಡಿಗಾಸಿಗೂ ಸಮವಿರುತ್ತಿರಲಿಲ್ಲ ಅಥವಾ ಇದರಿಂದ ಬಿಸಿಸಿಐ ಕುಪಿತಗೊಂಡು ಇನ್ನು ಮುಂದೆ ತಾನು ಆ ತಂಡದೊಂದಿಗೆ ಪಂದ್ಯಗಳನ್ನೇ ಆಡದೇ ಬರುವಕಾಸನ್ನೂ ಕೈಚೆಲ್ಲಿ ಕೂರಬೇಕು ಎಂಬ ಒಳಭಯ. ಆ ಮಟ್ಟಿನ ಬಿಗಿಹಿಡಿತ ಅಂದು ಬಿಸಿಸಿಐ ವಿಶ್ವಕ್ರಿಕೆಟ್ ನಲ್ಲಿ ಮೂಡಿಸಿತ್ತು. ಈ ನಿಯಮದ ಹಿಂದಿದ್ದ ಮತ್ತೊಂದು ಬಲವಾದಕಾರಣ ICC ತನ್ನಒಟ್ಟು ಆದಾಯದ ಪ್ರತಿಶತ 80 ರಷ್ಟು ಈ ಮೂರು ತಂಡಗಳಿಂದಲೇ ಗಳಿಸುತ್ತಿರುವುದು. ಅಂದರೆ ಉಳಿದ ಅಷ್ಟೂ ತಂಡಗಳಿಂದ  ICC ಯ ಜೋಳಿಗೆಯ ಭರ್ತಿ ಕೇವಲ 20% ನಷ್ಟು ಮಾತ್ರ.  ಆದ ಕಾರಣ 2015 ರಿಂದ 2023 ರ ವರೆಗೆ ಭಾರತ ಒಟ್ಟು ಆದಾಯದ ನಿಂಹಪಾಲು ಅಂದರೆ ಸುಮಾರು 570 ಮಿಲಿಯನ್ ಡಾಲರ್(20.3%),  ಉಳಿದಂತೆ ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ತಂಡಗಳು ಕ್ರಮವಾಗಿ 143 (4.4%) ಮತ್ತು 132 (2.7%) ಮಿಲಿಯನ್ ಡಾಲರ್ ಹಣವನ್ನು ಪಡೆಯಬೇಕು ಎಂಬುದು ಆ ಮಾದರಿಯ ಒಟ್ಟು ಸಮ್ಮತಿಯಾಗಿದ್ದಿತು. ಒಟ್ಟಿನಲ್ಲಿ ಹೆಚ್ಚು ಅಧಾಯವನ್ನು ಗಳಿಸಕೊಡುವವನು ಹೆಚ್ಚು ಪಡೆದುಕೊಳ್ಳುವನು ಎಂಬ ತಿಳಿಯಾದ ಸೂತ್ರ.

ಏತನ್ಮದ್ಯೆ ಚೆನ್ನೈ ಸೂಪರ್ ಕಿಂಗ್ಸ್ ನ ಒಡೆಯ ಹಾಗು ICCಯ  ಅಂದಿನ ಚೇರ್ಮನ್ಗಿರಿಯನ್ನು ಅಲಂಕರಿಸಿದ್ದ ಶ್ರೀನಿವಾಸನ್ (ಇದೇ ಶ್ರೀನಿವಾಸನ್ ಅಂದಿನ ಬಿಗ್ ೩ ಫಾರ್ಮುಲಾ ದ ಜನಕ ಎಂಬುದು ಮತ್ತೊಂದು ಗಮನಾರ್ಹ ಹಾಗು ಅಷ್ಟೇ ಕುತೂಹಲವಾದ ಸಂಗತಿ) ಅವರು ವಿವಾದಗಳ ಸುಳಿಯಲ್ಲಿ ಸಿಲುಕಿ  ತಮ್ಮ ಸ್ಥಾನದಿಂದ ಕೆಳಗಿಳಿದಾಗ, ಶಾಂತ ಹಾಗು ಅಷ್ಟೇ ಖಡಕ್ ವ್ಯಕ್ತಿತ್ವದ, ಮಾಜಿ ಬಿಸಿಸಿಐ ಅಧ್ಯಕ್ಷರೂ ಆಗಿದ್ದ ಶಶಾಂಕ್ ಮನೋಹರ್ ಅವರನ್ನು ಆ ಸ್ಥಾನಕ್ಕೆ ಆರಿಸಿ ಕಳುಹಿಸಿತು. ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪವಿದ್ದ ಶ್ರೀನಿವಾಸನ್ ಅವರ ತಕರಾರುಗಳ ಹಿನ್ನಲೆಯಲ್ಲಿ ಭಾರತ ವಿಶ್ವ ಕ್ರಿಕೆಟ್ ನಲ್ಲಿ ಎಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತದೆಯೋ ಎನ್ನುವಾಗ ಆಯ್ಕೆಯಾದ  ಶಶಾಂಕ್ ಮನೋಹರ್ ಅವರಿಗೆ  ದೇಶದ ಜೊತೆಗೆ ಅದರ ಕ್ರಿಕೆಟ್ ಮಂಡಳಿಯ ಘನತೆಯನ್ನೂ ಎತ್ತಿ ಹಿಡಿಯುವ ಗುರುತರ ಜವಾಬ್ದಾರಿ ಇದ್ದಿತು. ಅಂತೆಯೇ ಆತ ಆಯ್ಕೆಯಾದ ಕೆಲವೇ ದಿನಗಳಲ್ಲಿ ಅದೇ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿ  ಸ್ವದೇಶ, ಪರದೇಶ ಎನ್ನದೆ ತಾನು ಅಲಂಕರಿಸಿದ್ದ ಸ್ಥಾನಕ್ಕೆ ಪೂರಕವಾಗಿ ಯೋಚಿಸತೊಡಗಿದರು. ಅದರ ಪ್ರತಿಫಲವೇ ಎನ್ನಬಹುದು ಈ ‘ನವೀಕರಿಸಲಾದ’ ರೆವೆನ್ಯೂ ಶೇರಿಂಗ್ ಮಾಡೆಲ್. ಅಲ್ಲಿಯವರೆಗೂ ಸುಖದ ಕನಸನ್ನು ಕಾಣುತ್ತಿದ್ದ ಬಿಸಿಸಿಐ ಒಮ್ಮಿಂದೊಮ್ಮೆಗೆ ಬೆಚ್ಚಿ ಬೀಳುವ ಸುದ್ದಿಯನ್ನು ಕೇಳತೊಡಗಿತು. ಈ ಹೊಸ ಮಾದರಿಯಲ್ಲಿ ICC,  ವಿಶ್ವ ಕ್ರಿಕೆಟ್ ನ ಏಳಿಗೆಯಷ್ಟನ್ನೇ ಗಮನದಲ್ಲಿಟ್ಟುಕೊಂಡು ಹಳೆಯ ಮಾದರಿಗೆ ಹೊಸ ರೂಪವನ್ನು ಕೊಟ್ಟಿತ್ತು. ಅದರ ಪ್ರಕಾರ ಭಾರತದ ಹಿಂದಿನ 20.9 % ಪಾಲನ್ನು ಕುಗ್ಗಿಸಿ 10.3% ನಷ್ಟು ಮಾಡಿದ್ದಿತು. ಸುಮಾರು 570 ಮಿಲಿಯನ್ ಡಾಲರ್ ಬರುವ ಜಾಗಕ್ಕೆ ಭಾರತಕ್ಕೆ ಈಗ ಸಿಗುತ್ತಿರುವು ಕೇವಲ 290 ಮಿಲಿಯನ್ ಡಾಲರ್. ಭಾರತವನ್ನು ಬಿಟ್ಟರೆ ಕೊಂಚ ನಷ್ಟವನ್ನು ಕಂಡ ಮತ್ತೊಂದು ಮಂಡಳಿ ಇಂಗ್ಲೆಂಡ್. ಆದರೆ ಅದರ ನಷ್ಟ ಕೇವಲ 20 ಮಿಲಿಯನ್. ಆದರೆ ಮಿಕ್ಕ ಅಷ್ಟೂ ದೇಶಗಳು ಈ ಹೊಸ ಮಾದರಿಯ ಪ್ರಕಾರ ಯಾವುದೇ ಲೆಕ್ಕಧಾರವಿಲ್ಲದೆಲ್ಲದೆ ಸುಮಾರು 110 ರಿಂದ 140 ಮಿಲಿಯನ್ ಡಾಲರ್ ವರೆಗೂ ಗಳಿಸಿಕೊಳ್ಳುತ್ತವೆ. ಅದೂ ಸಾಲದಕ್ಕೆ ಹೊಸತಾಗಿ ಸುಮಾರು 280 ಮಿಲಿಯನ್ ಡಾಲರ್ ನಷ್ಟು ಹಣವನ್ನು ಇತರೆ ಕ್ರಿಕೆಟ್ ಮಂಡಳಿಗಳ (ಐರ್ಲೆಂಡ್ , ಆಫ್ಘಾನಿಸ್ಥಾನ್ ಇತ್ಯಾದಿ) ಅಭಿವೃದ್ಧಿಗೆ ಇಲ್ಲಿ ಮೀಸಲಿಡಲಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮೇಲಿನ 280 ಮಿಲಿಯನ್ ಡಾಲರ್ ಹಣದ ಸಂಪೂರ್ಣ ಪಾಲು ಭಾರತದ್ದೇ ಆಗಿರುತ್ತದೆ. ಅಂದರೆ ವಿಶ್ವದ ಇತರೆ ಕ್ರಿಕೆಟ್ ಮಂಡಳಿಗಳ ಅಭಿವುದ್ಧಿಗೆ ಬಿಸಿಸಿಐ ತಾನು ಗಳಿಕೊಡುವ ಕೂಳೆ ಬೇಕು ಎಂದಾಯಿತು. ಅಂದರೆ ಉಳಿದ ಏಳೆಂಟು ಕ್ರಿಕೆಟ್ ಮಂಡಳಿಗಳು ಇರುವುದಾದರೂ ಏತಕ್ಕೆ? ಅವುಗಳ ನಯಾ ಪೈಸೆಯೂ ವಿಶ್ವ ಕ್ರಿಕೆಟ್ ನ ಅಭಿವೃದ್ಧಿಗೆ ಖರ್ಚಾಗಬಾರದ್ದೇಕೆ? ಇದ್ಯಾವ ಸೀಮೆಯ ನ್ಯಾಯ?

ಸುಮಾರು ಇದೇ ವೇಳೆಗೆ ಬಿಸಿಸಿಐ ತನ್ನ ಅಂತಃಕಲಹ ಹಾಗು ಅಪಾರದರ್ಶಕ ಆಡಳಿತದಿಂದ ಸುಪ್ರೀಂಕೋರ್ಟಿನ ಚಾಟಿ ಏಟಿನ ಪೆಟ್ಟಿನಿಂದ  ಸುಧಾರಿಸಿಕೊಳ್ಳುತ್ತಿತ್ತು. ಹೊಂಚು ಹಾಕಿ ಗಾಳ ಎಸೆದಂತೆ ಚಾಟಿ ಏಟಿನ ಜೊತೆಗೆ ಹೊಸ ಅಧಾಯದ ಮಾದರಿಯ ವಿಷಯದಲ್ಲಿ ಸಿಲುಕಿ ಅದು ಕಕ್ಕಾಬಿಕ್ಕಿಯಾಗತೊಡಗಿತು. ಆಗ ಅದರ ಮುಂದೆ ಕಂಡ ದೊಡ್ಡ ಅಸ್ತ್ರ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದು. ಕೂಡಲೇ ಆ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಹಣದ ವಿಷಯ ಒಂದೆಡೆಯಾದರೆ ಕಳೆದ ಬಾರಿಯ ಚಾಂಪಿಯನ್ಸ್ ಪಟ್ಟವನ್ನು ಉಳಿಸಿಕೊಳ್ಳುವ ಛಲ ಟೀಮ್ ಇಂಡಿಯ ಹಾಗು ಅದರ ಅಭಿಮಾನಿಗಳದ್ದು. ವಿಶ್ವ ಕ್ರಿಕೆಟ್ ನಲ್ಲಿ ಭಾರತದ ತೂಕವನ್ನು ಅರಿತ್ತಿದ್ದ ICC ಕೂಡಲೇ ದುಬೈನಲ್ಲಿ ಮೀಟಿಂಗ್ ಒಂದನ್ನು ಏರ್ಪಡಿಸಿ ಬಿಸಿಸಿಐ ಯನ್ನು ಮಾತುಕತೆಗೆ ಆಹ್ವಾನಿಸಿತು. ತಕ್ಷಣ ದುಬೈಯ ವಿಮಾನ ಹಿಡಿದವರು ಬಿಸಿಸಿಐ ಯ ಜಂಟಿ ಕಾರ್ಯದರ್ಶಿ ಅಮಿತಾಬ್ ಚೌದರಿ. ಆ ಮೀಟಿಂಗಿಗೂ ಮುನ್ನ ICC ತನ್ನ ಹೇಳಿಕೆಯಲ್ಲಿ ಅಧಾಯದ ಹಿರಿಯನಾದ ಭಾರತಕ್ಕೆ, ಸದ್ಯಕ್ಕೆ ನೀಡುತ್ತಿರುವ 290 ಮಿಲಿಯನ್ ಡಾಲರ್  ಜೊತೆಯಾಗಿ ಇನ್ನೂ 100 ಮಿಲಿಯನ್ ಡಾಲರ್ ಅನ್ನು ಹೆಚ್ಚುವರಿಯಾಗಿ ನೀಡಲಾಗುವ ಒಂದು ಆಫರ್ ಅನ್ನು ಮುಂದಿಟ್ಟಿತ್ತು. ಆದರೆ ಬಿಸಿಸಿಐ ಇದಕ್ಕೆ ಕೊಂಚವೂ ಸಮ್ಮತಿಸದೆ ತನ್ನ ಹಕ್ಕನ್ನು ಪಡೆದೇ ತೀರುತ್ತೇನೆಂದು ಪಟ್ಟು ಹಿಡಿಯಿತು. ಅಲ್ಲದೆ ICCಯ ಇತರೆ ಸದಸ್ಯ ದೇಶಗಳಿಗೆ ಓಟಿನ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಿತು. ಆದರೆ ಓಟಿಂಗ್ ಪ್ರಕ್ರಿಯೆಗೆ ಸುತರಾಂ ಒಪ್ಪದ ICC ಒಂದು ಪಕ್ಷ ಓಟಿಂಗ್ ಆಗಲೇಬೇಕಾದರೆ, ಅದರಲ್ಲಿ ಬಿಸಿಸಿಐ ಕನಿಷ್ಠ ನಾಲ್ಕು ಓಟುಗಳನ್ನಾದರೂ ಪಡೆಯಲೇಬೇಕು. ಅದಕ್ಕಿಂತಲೂ ಕಡಿಮೆ ಓಟುಗಳನ್ನು ಪಡೆದರೆ ಸದ್ಯಕ್ಕೆ ನೀಡಲಾಗುತ್ತಿರುವ 100 ಮಿಲಿಯನ್ ಹೆಚ್ಚುವರಿ ಹಣವನ್ನೂ ವಾಪಾಸ್ ಪಡೆಯಲಾಗುವುದು ಎಂದು ಹೇಳಿಕೆಯನ್ನು ಕೊಟ್ಟಿತ್ತು. ಆಸ್ಟ್ರೇಲಿಯಾ, ಶ್ರೀಲಂಕಾ ಹಾಗು ಜಿಂಬಾಂಬೆ ತಂಡಗಳ ಮೇಲಿದ್ದ ಅತಿಯಾದ ನಂಬುಗೆಯಿಂದ ಅಂದು ಅಭಿಷೇಕ್ ಚೌದರಿ ಓಟಿಂಗ್ ಪ್ರಕ್ರಿಯೆಗೆ ಅಸ್ತು ಎಂದರು. ಆದರೆ ಫಲಿತಾಂಶ ಮಾತ್ರ ಅಕ್ಷರ ಸಹ ಅವರ ನಿಂತ ನೆಲವನ್ನೇ ಅದುರಿಸಿತ್ತು. ಇದ್ದ ಹತ್ತು ಓಟುಗಳಲ್ಲಿ ಭಾರತ ಪಡೆದದ್ದು ಕೇವಲ ಒಂದೇ ಓಟು, ಅದು ತನ್ನದೇ ಓಟು! ‘ಕೆಲಸ ಇರದ ಆಚಾರಿ ಸುಮ್ನೆ ಇರದೇ ಅದೇನೋ ಮಾಡ್ದ’ ಅನ್ನೋ ಹಾಗೆ ಸಿಗುತ್ತಿದ್ದ ಒಂದು ಉತ್ತಮ ಮೊತ್ತವನ್ನೂನಂಬಿಗಸ್ತರೆಂದು ತೋರ್ಪಡಿಸಿಕೊಳ್ಳುವ ಗೆಳೆಯರನ್ನು ನಂಬಿ  ಬಿಸಿಸಿಐ ಕೈ ಚೆಲ್ಲಿ ಕೂತಿತು.

ಪ್ರಸ್ತುತ ಸ್ಥಿತಿಯಲ್ಲಿ  ಶಶಾಂಕ್ ಮನೋಹರ್  ಬಿಸಿಸಿಐಯ ಪಾಲಿಗೆ ತೆರೆಮರೆಯ ವಿಲನ್ ನಂತೆ  ಕಂಡರೂ ವಿಶ್ವ ಕ್ರಿಕೆಟ್ ನ ಭವಿಷ್ಯವನ್ನು ಗಮನದಲ್ಲಿಟ್ಟು ಯೋಚಿಸಿದಾಗ ಅವರ ಆಲೋಚನೆಗಳು ಶುಭ್ರವಾಗಿದೆ ಎನಿಸದಿರುವುದಿಲ್ಲ. 2013 ರ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದ ನಂತರ ಪ್ರತಿ ಐಪಿಎಲ್ ಮ್ಯಾಚ್ ಗಳೂ ಇನ್ನು ಮುಂದೆ ತನಿಖೆಗೆ ಒಳಪಡಬೇಕು ಎಂದು ವಾದಿಸಿದರಲ್ಲದೆ ಅಂದಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್ ಅವರ ಹೆಸರು ಫಿಕ್ಸಿಂಗ್ ಮಾಫಿಯಾ ದಲ್ಲಿ ಕೇಳಿಬಂದಾಗ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಯಾರಿಗೂ ಭಯಪಡದ ಸ್ವಭಾವದ ಮನುಷ್ಯನೀತ. ಅಲ್ಲದೆ 2008 ರಿಂದ 2011 ರ ವರೆಗೆ ಬಿಸಿಸಿಐ ಅಧ್ಯಕ್ಷರಾಗಿ ದೇಶೀ ಕ್ರಿಕೆಟ್ ನ ಉನ್ನತಿಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡ ಕಳಂಕ ರಹಿತ ವ್ಯಕ್ತಿತ್ವ ಅವರದ್ದಾಗಿತ್ತು.  ಅಂತಹ ಒಬ್ಬ ವ್ಯಕ್ತಿ ಯಾವುದೇ ಕಾರಣವಿಲ್ಲದೆ ಕೇವಲ ಒಂದೇ ಮಂಡಳಿಯ ವಿರುದ್ಧ ಹಗೆ ಸಾದಿಸುತ್ತಾನೆಂದರೆ ಅದು ನಂಬುಗೆಗೆ ದೂರವಾದ ಮಾತು . ಆದರೆ ಇವರ ಅಂತಹ ದೃಢ ನಿರ್ಧಾರಗಳೇ ಅವರಿಗೆ ಸಾಕಷ್ಟು ವೈರಿಗಳನ್ನು ಸೃಷ್ಟಿಸಿಕೊಟ್ಟಿತ್ತು. ಈ ಮದ್ಯೆ ಇದೇ ಮಾರ್ಚ್ ನಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟದ್ದೂ ಉಂಟು!. ಆದರೆ ಹಲವರ ಸಂಧಾನದಿಂದ ಪುನ್ಹ ಮತ್ತೊಮ್ಮೆ ಅವರು ಅಧ್ಯಕ್ಷಗಿರಿಯ ಸ್ಥಾನದಲ್ಲಿ ಕೂರಲು ಸಮ್ಮತಿಸಿದ್ದಾರೆ. ಆದರೆ ಹೊಸ ರೆವೆನ್ಯೂ ಮಾಡೆಲ್ ನ ಅವರ ನಿರ್ಧಾರ ಇನ್ನೂ ಅಚಲವಾಗಿಯೇ ಇದೆ ಎಂದರೆ ಆತ ಅದೆಂಥಹ ಗಟ್ಟಿ ಮನುಷ್ಯ  ಎಂದು ಊಹಿಸಬಹುದು. ಸದ್ಯಕ್ಕೆ ಬಿಸಿಸಿಐ ದೊಡ್ಡ ಮನಸ್ಸು ಮಾಡಿ ICC ಯ  ನಿರ್ಧಾರವನ್ನು ಒಪ್ಪಿಕೊಳ್ಳುವುದು ಹಾಗು ವಿಶ್ವ ಕ್ರಿಕೆಟ್ನಲ್ಲಿ ಹಿರಿಯಣ್ಣನೆನಿಸಿಕೊಂಡಿರುವಾಗ ಆ ಅಣ್ಣನ ಸ್ಥಾನದ ಜವಾಬ್ದಾರಿ ಇದೆಂದು ಭಾವಿಸಿ ಎಲ್ಲರೊಟ್ಟಿಗೂ ಮುನ್ನೆಡೆದು ತನ್ನ ದೊಡ್ಡತನವನ್ನು ಸಾರಬೇಕಿದೆ. ಪ್ರತಿ ವರ್ಷ ನೆಡೆಸುವ ಐಪಿಎಲ್ ನಿಂದಲೇ ಅದು ಗಳಿಸಿಕೊಳ್ಳುವ ಲಾಭ ಸುಮಾರು 400 ಮಿಲಿಯನ್ ಡಾಲರ್ ನ ಗಡಿಯನ್ನು ದಾಟುತ್ತದೆ ಎಂದರೆ ತನ್ನ ಅತಿಯಾಸೆಯನ್ನು ಕೊಂಚ ಅದುಮಿಟ್ಟಿಕೊಂಡರೆ ನಷ್ಟವೇನೂ ಇಲ್ಲ, ಎಂದು ಅನಿಸದಿರುವುದಿಲ್ಲ!

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post