X

ಅನ್ನ ಕೊಡೋದು ಇಂಗ್ಲೀಷಂತೆ, ಹಿಂದಿಯ ನಂಟು ಬೇಡವಂತೆ! ನಕಲಿ ಓರಾಟಗಳ ಅಸಲಿಯತ್ತೇನು?

ಹಿಂದಿ ಹೇರಿಕೆ. ಈ ಮಾತುಗಳನ್ನು ಆಗಾಗ ಕೇಳುತ್ತಾ ಬಂದಿದ್ದೇವೆ. ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಮೊದಲ ಪ್ರತಿಭಟನೆಯ ಕೂಗು ಕೇಳಿ ಬಂದದ್ದು ತಮಿಳುನಾಡಲ್ಲಿ. ಅಲ್ಲಿನ ರಾಜಕೀಯ ಪಕ್ಷಗಳು ಆರ್ಯ-ದ್ರಾವಿಡ ಎಂಬ ಖೊಟ್ಟಿ ಸಿದ್ಧಾಂತದ ಮೇಲೆ ತಮ್ಮ ಬೇಳೆ ಬೇಯಿಸಿಕೊಂಡು ಅರಮನೆ ಕಟ್ಟಿಕೊಂಡು ಅಧಿಕಾರ ಹಿಡಿಯಬೇಕಾಗಿದ್ದುದರಿಂದ, ಆರ್ಯರನ್ನು ವಿರೋಧಿಸುವ ಸಲುವಾಗಿ ಉತ್ತರ ಭಾರತೀಯರನ್ನು ಮತ್ತು ಅವರಾಡುವ ಹಿಂದಿಯನ್ನು ವಿರೋಧಿಸಬೇಕಾದ ಅನಿವಾರ್ಯತೆ ಅವರಿಗಿತ್ತು. ಆರ್ಯರನ್ನು, ಸಂಸ್ಕತವನ್ನು, ಬ್ರಾಹ್ಮಣರನ್ನು, ಉತ್ತರ ಭಾರತೀಯರನ್ನು, ಅವರಾಡುವ ಹಿಂದಿಯನ್ನು – ಹೀಗೆ ಆ ಕಡೆಯಿಂದ ಬರುವ ಎಲ್ಲವನ್ನೂ ವಿರೋಧಿಸುವ ಭರದಲ್ಲಿ ತಮಿಳು ಭಾಷಿಕರು ವಿಚಿತ್ರವೆನಿಸುವ ಭಾಷಾಭಿಮಾನ – ಅದನ್ನು ಭಾಷಾಂಧತೆ ಎಂದರೂ ನಡೆಯುತ್ತದೆ – ಬೆಳೆಸಿಕೊಂಡರು. ಬಹುಶಃ ಅದೇ ಕಾರಣಕ್ಕೆ ತಮಿಳರಿಗೆ ತಮಿಳುಪರವಾದ ಸಿನೆಮಾ ಡೈಲಾಗುಗಳು ಆಪ್ಯಾಯಮಾನವಾದವು. ತಮಿಳುದೇಶದ ಪರವಾಗಿ ಉದ್ದುದ್ದದ ಸಂಭಾಷಣೆ, ಭಾಷಣಗಳನ್ನು ಕೊಚ್ಚುತ್ತಿದ್ದ ಎಂಜಿಆರ್ ಮಹಾನಾಯಕರಾಗಿ ಬೆಳೆದರು. ತಮಿಳರು ಹಿಂದಿ ಮತ್ತು ಸಂಸ್ಕತ ಎರಡನ್ನೂ ವಿರೋಧಿಸುವ ಭರದಲ್ಲಿ ತಮ್ಮ ಭಾಷೆಗೇ ವಿಚಿತ್ರ ಸರ್ಜರಿಗಳನ್ನು ಮಾಡಿಕೊಂಡರು. ಶ್ರೀ ಎಂದೊಡನೆ ಅದು ಸಂಸ್ಕತ ಆಗಿ ಬಿಡುತ್ತದೆ ಎಂಬ ಕಾರಣಕ್ಕೆ ಅದನ್ನು ತಿರು ಎಂದು ತಿರುಚಿಕೊಂಡರು. ಕೃಷ್ಣನೆಂದರೆ ಅವರಿಗಲರ್ಜಿ. ಅದನ್ನೇ ಕಣ್ಣನ್ ಎಂದು ಬದಲಾಯಿಸಿಕೊಂಡರೆ, ಅಬ್ಬ ತಮಿಳಾಯಿತೆಂದು ಸಮಾಧಾನ!

ಅವರ ಈ ಹುಚ್ಚುಗಳನ್ನು ನಾವು ಸ್ವಾತಂತ್ರ್ಯ ಬಂದಾಗಿನಿಂದಲೂ ನೋಡುತ್ತ ಬಂದಿದ್ದೇವೆ. ತಮಿಳರ ಭಾಷಾಭಿಮಾನ, ಅಭಿಮಾನ ಎನ್ನುವುದಕ್ಕಿಂತ ಅಂಧತೆ, ಅತಿರೇಕ ಎನ್ನುವುದಕ್ಕೇ ಹತ್ತಿರದ್ದು. ವಿಶ್ವದ ಯಾವುದೇ ಭಾಷೆಯ ಸುದ್ದಿವಾಹಿನಿ ಅಥವಾ ಟಿವಿ ಚಾನೆಲ್ ಇರಲಿ, ಅದನ್ನವರು ತಮಿಳಿಗೆ ಡಬ್ ಮಾಡಿಕೊಂಡೇ ನೋಡುತ್ತಾರೆ. ತಮಿಳರು ಹಿಂದಿಯನ್ನು ವಿರೋಧಿಸುವ ಭರದಲ್ಲಿ ಅತಿಯಾಗಿ ಇಂಗ್ಲೀಷನ್ನು ನೆಚ್ಚಿಕೊಂಡರೂ ಅವರ ಇಂಗ್ಲೀಷು ತಮಿಳಿನ ಛಾಯೆಯಿಂದ ಹೊರ ಬಂದಿಲ್ಲ. ಇಡೀ ದೇಶದಲ್ಲೇ ತಮ್ಮಷ್ಟು ಉತ್ತಮ ಇಂಗ್ಲೀಷ್ ಮಾತಾಡುವ ಮಂದಿ ಬೇರಿಲ್ಲ ಎಂಬ ಹುಸಿ ಭ್ರಮೆಯೊಂದು ತಮಿಳರಿಗಿದೆ. ಬಂಗಾಳಿ, ಗುಜರಾತಿ, ರಾಜಸ್ತಾನಿ, ಮರಾಠಿ, ತೆಲುಗು ಭಾಷಿಕರು ತಮ್ಮ ಭಾಷೆಯ ಕುರಿತು ಅಂಥ ಅಂಧಾಭಿಮಾನ ಬೆಳೆಸಿಕೊಳ್ಳದ್ದರಿಂದಲೇ ದೇಶದ ಉದ್ದಗಲಕ್ಕೆ ಹರಡಿದರು. ಆದರೆ ತಮಿಳರು ಹಾಗಲ್ಲ; ಅವರು ತಮಿಳುನಾಡು, ತಪ್ಪಿದರೆ ಆಗ್ನೇಯ ಏಷ್ಯದ ದೇಶಗಳು – ಮುಖ್ಯವಾಗಿ ಸಿಂಗಾಪುರದಲ್ಲಿ – ಅದೂ ಅಲ್ಲಿ ತಮಿಳು ಕೂಡ ಸಾಂವಿಧಾನಿಕ ಮರ್ಯಾದೆ ಪಡೆದ ಭಾಷೆ ಎಂಬ ಕಾರಣಕ್ಕೆ – ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಭಾರತದಲ್ಲಿ ತಮಿಳುನಾಡನ್ನು ಹೊರತುಪಡಿಸಿದರೆ ಹೊರಗಿನ ರಾಜ್ಯಗಳಲ್ಲಿ ಅವರ ಸಾಂದ್ರತೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಬೆಂಗಳೂರಲ್ಲಿ ನೆಲೆ ನಿಂತ ತಮಿಳರೂ ಮುಂಜಾನೆದ್ದು ದಿನತಂತಿಯನ್ನೇ ಓದುತ್ತಾರೆ. ಟಿವಿ ಹಾಕಿದಾಗೆಲ್ಲ ಅವರ ಕೈ ರಿಮೋಟಿನಲ್ಲಿ ಸನ್ ಟಿವಿ, ಜಯಾ ಟಿವಿಗಳನ್ನೇ ಹುಡುಕಾಡುತ್ತದೆ. ಬೆಂಗಳೂರಲ್ಲಿದ್ದರೂ ತಮಿಳರು ಉಳಿದ ಭಾಷಿಕರ ಜೊತೆ ಬೆರೆಯುವುದು ಕಡಿಮೆಯೇ. ತಮ್ಮ ಭಾಷೆಯ ಜನರನ್ನೇ ಅವರು ಚುನಾವಣೆಯಲ್ಲಿ ಬೆಂಬಲಿಸುತ್ತಾರೆ, ಸಾಧ್ಯವಾದರೆ ಗೆಲ್ಲಿಸುತ್ತಾರೆ. ಅವರಿಗೆ ತಮಿಳು ಎಂಬುದು ಭಾಷೆಯಲ್ಲ; ಅದೇ ಧರ್ಮ. ಅದೇ ಸಂಸ್ಕತಿ. ಅದೇ ಜೀವನಕ್ರಮ.

ಬಹಳ ವರ್ಷಗಳಿಂದ ನಾನೂ ಇದನ್ನೊಂದು ಅನುಸರಿಸಬಹುದಾದ ಮೌಲ್ಯ ಎಂದೇ ತಿಳಿದಿದ್ದೆ. ತಮಿಳರ ಭಾಷಾಭಿಮಾನದಂತೆಯೇ ಫ್ರೆಂಚರ ಅಭಿಮಾನವೂ ಲೋಕವಿಖ್ಯಾತ. ಗ್ರೇಟ್ ಬ್ರಿಟನ್ನಿನಿಂದ ಕೇವಲ ಇಪ್ಪತ್ತು ಮೈಲಿ ದೂರದಲ್ಲಿರುವ ಫ್ರಾನ್ಸ್ ಇದುವರೆಗೂ ತನ್ನ ನೆಲದ ಮೇಲೆ ಬ್ರಿಟನ್ನಿನ ಭಾಷೆ-ಸಂಸ್ಕತಿಗಳು ನೆಲೆಯೂರುವುದಕ್ಕೆ ಆಸ್ಪದವನ್ನೇ ಕೊಟ್ಟಿಲ್ಲ. ಪ್ಯಾರಿಸಿನಲ್ಲಿಳಿದು ತುಟಿಗೆ ಸಿಗರೇಟಿಟ್ಟು ಅಂಗಡಿಯಲ್ಲಿ ಬೆಂಕಿ ಪೊಟ್ಟಣ ಪಡೆಯಬೇಕಾದರೆ, ಮೊದಲು ಪುಸ್ತಕದಂಗಡಿಯಲ್ಲಿ ಇಂಗ್ಲೀಷ್-ಫ್ರೆಂಚ್ ನಿಘಂಟು ಖರೀದಿಸಿ, ಬೆಂಕಿ ಪೊಟ್ಟಣಕ್ಕೆ ಫ್ರೆಂಚ್ ಭಾಷೆಯಲ್ಲಿ ಏನನ್ನುತ್ತಾರೆಂದು ತಿಳಿಯುವುದು ಅನಿವಾರ್ಯ – ಎಂಬ ಕತೆ ಹಿಂದೆ ನನ್ನೊಳಗೂ ರೋಮಾಂಚನ ಹುಟ್ಟಿಸುತ್ತಿತ್ತು. ಫ್ರೆಂಚರು ತಮ್ಮ ಭಾಷೆಯನ್ನು ಪ್ರೀತಿಸುವ ಪರಿಗೆ ರೋಮಹರ್ಷನಾಗುತ್ತಿದ್ದೆ. ಆದರೆ, ಇಂದು ಯೋಚಿಸಿದಾಗ ಅವರ ಭಾಷಾಭಿಮಾನದ ತೊಂದರೆಗಳು ಢಾಳಾಗಿ ಕಣ್ಣಿಗೆ ಹೊಡೆಯುತ್ತವೆ. ಪ್ರತಿ ವರ್ಷ ಆಕ್ಸ್‍ಫರ್ಡ್ ನಿಘಂಟಿನಲ್ಲಿ ನೂರಾರು ಅನ್ಯಭಾಷೆಯ ಪದಗಳನ್ನು ಸೇರಿಸಿಕೊಂಡು ಬೆಳೆಯುತ್ತಿರುವ ಇಂಗ್ಲೀಷು, ಬಹುಶಃ ಅದೇ ಕಾರಣಕ್ಕೆ ಜಗತ್ತಲ್ಲಿ ಇನ್ನಷ್ಟು ಮತ್ತಷ್ಟು ವಿಸ್ತಾರವಾಗಿ ಹರಡಿಕೊಳ್ಳುತ್ತಿದೆ. ಆದರೆ ಫ್ರೆಂಚರು ತಮ್ಮ ಭಾಷೆಯನ್ನು ಪ್ರೀತಿಸುವ ಸಲುವಾಗಿ ಅದನ್ನು ಫ್ರಾನ್ಸಿನ ಗಡಿ ದಾಟಿ ಆಚೆ ಹೋಗಲಿಕ್ಕೇ ಬಿಟ್ಟಿಲ್ಲ! ಇವತ್ತು ಫ್ರೆಂಚ್ ಮಾತಾಡುವ ದೇಶಗಳಾದರೂ ಎಷ್ಟು? ಬೆರಳೆಣಿಕೆಯಷ್ಟು! ಫ್ರಾನ್ಸ್ ಬಿಟ್ಟರೆ ಆ ಭಾಷೆಯನ್ನು ಪ್ರಥಮ ಭಾಷೆಯಾಗಿ ಮಾತಾಡುವ ಯಾವ ದೇಶವೂ ಇಲ್ಲ! ಈ ಎರಡು ವೈರುಧ್ಯಗಳನ್ನು ಗಮನಿಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೇನೆಂದರೆ ಯಾವುದೇ ಭಾಷೆಯನ್ನು, ಇದು ನನ್ನದು ಇದು ನಮ್ಮದು ಎನ್ನುತ್ತ ಹಿಡಿದಿಡಬಾರದು; ಒಂದು ಪ್ರಾಂತ್ಯಕ್ಕೆ ಒಂದು ರಾಜ್ಯಕ್ಕೆ ಒಂದು ದೇಶಕ್ಕೆ ಸೀಮಿತಗೊಳಿಸಬಾರದು. ಭಾಷೆಯನ್ನು ಹೊಸ ಜಾಗಗಳಿಗೆ ಹರಡುವ, ಹೊಸಬರಿಗೆ ಮುಕ್ತವಾಗಿ ಬಿಟ್ಟು ಕೊಡುವ ಮೂಲಕ ಬೆಳೆಸುವ ಯೋಚನೆ ಮಾಡಬೇಕು. ಈ ನಿಟ್ಟಿನಲ್ಲಿ ನಮಗೆ ತಮಿಳರ ಭಾಷಾ ದುರಭಿಮಾನ ಖಂಡಿತವಾಗಿಯೂ ಆದರ್ಶವಾಗತಕ್ಕದ್ದಲ್ಲ.

ಮೆಟ್ರೋ ಮೊದಲ ಹಂತದ ಕೆಲಸ ಮುಗಿದು ಮತ್ತಷ್ಟು ಹೊಸ ಮಾರ್ಗಗಳು ಸಂಚಾರಕ್ಕೆ ಮುಕ್ತವಾಗಿ ವಾರವೂ ಕಳೆದಿಲ್ಲ; ಬೆಂಗಳೂರಲ್ಲಿ ಮೆಟ್ರೋಗಳಲ್ಲಿ ಹಿಂದಿ ಬೇಡ ಎಂಬ ಘೋಷಣೆ ಮೊಳಗುತ್ತಿದೆ. ಬಹುಶಃ ಬೆಂಗಳೂರಿಂದ ಹೊರಗಿರುವ ಜನಕ್ಕೆ, ಇಲ್ಲಿನ ಮೆಟ್ರೋ ರೈಲುಗಳನ್ನೆಲ್ಲ ಹಿಂದಿಮಯ ಮಾಡಲಾಗಿದೆ ಎಂಬ ಭಾವನೆ ಬಂದಿದ್ದರೂ ಆಶ್ಚರ್ಯವಿಲ್ಲ. ಆದರೆ ವಾಸ್ತವ ಇದು: ಮೆಟ್ರೋ ರೈಲುಗಳಲ್ಲಿ ಹಿಂದಿಯ ಬಳಕೆ ಇಂದಿನದಲ್ಲ; ಅದು ಬೆಂಗಳೂರಿಗೆ ಮೊದಲ ಬಾರಿಗೆ ಬಂದ ದಿನದಿಂದಲೂ ಅವ್ಯಾಹತವಾಗಿ ನಡೆದಿದೆ. ಕೇಂದ್ರ ಸರಕಾರದ ತ್ರಿಭಾಷಾ ಸೂತ್ರದ ಪ್ರಕಾರ ಮೆಟ್ರೋ ರೈಲಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ – ಈ ಮೂರು ಭಾಷೆಗಳಲ್ಲಿ ನಡೆಯುತ್ತಿವೆ. ಎಲ್ಲೂ ಕನ್ನಡವನ್ನು ಎರಡನೆ ಅಥವಾ ಮೂರನೇ ಸ್ಥಾನಕ್ಕೆ ತಳ್ಳಲಾಗಿಲ್ಲ. ಎಲ್ಲೆಡೆಯೂ ಅದು ಮೊದಲ ಸಾಲಿನಲ್ಲೇ ಕಾಣಿಸಿಕೊಂಡಿದೆ. ಲಾಗಾಯ್ತಿನಿಂದ ಚಾಲ್ತಿಯಲ್ಲಿರುವ ಒಂದು ಭಾಷಾಕ್ರಮದ ಬಗ್ಗೆ ಈಗ ಇದ್ದಕ್ಕಿದ್ದಂತೆ ದಂಗೆ ಏಳಲು ಕಾರಣ ಏನು? ಅಂಚೆ ಕಚೇರಿ, ಬ್ಯಾಂಕು, ಬಸ್ ನಿಲ್ದಾಣ, ಯಾವುದೇ ಸೂಪರ್ ಮಾರ್ಕೆಟ್ – ಹೀಗೆ ಎಲ್ಲೇ ಹೋದರೂ ನಾವು ತ್ರಿಭಾಷಾ ಸೂತ್ರವನ್ನೇ ಕಾಣುತ್ತೇವೆ. ಭಾರತೀಯ ರೈಲ್ವೇಯಲ್ಲಂತೂ ಹಲವು ದಶಕಗಳಿಂದ ಮೂರು ಭಾಷೆಗಳ ಸೂತ್ರವನ್ನು ಅನುಸರಿಸಿಕೊಂಡು ಬರಲಾಗಿದೆ. ಈಗ ಇದ್ದಕ್ಕಿದ್ದಂತೆ ಮೆಟ್ರೋ ರೈಲಿಗೆ ಮಾತ್ರ ಕೆಲವೊಂದು ಮಂದಿ ಕೆಂಪು ಬಾವುಟ ಪ್ರದರ್ಶನ ಮಾಡುತ್ತಿರುವುದರ ಹಿನ್ನೆಲೆ ಏನು?

ಇವರ ವಾದ ಇರುವುದು ಹೀಗೆ: (1) ಇಂದು ಹಿಂದಿಯನ್ನು ಮೂರನೇ ಭಾಷೆಯಾಗಿ ತೋರಿಸಲಾಗಿದೆ. ಆದರೆ ಕಾಲಕ್ರಮೇಣ ಅದು ಎರಡು ಅಥವಾ ಒಂದನೇ ಸ್ಥಾನಕ್ಕೆ ಜಿಗಿದು ಕನ್ನಡವನ್ನು ಹೊರದಬ್ಬಿ ಬಿಡುತ್ತದೆ. ಆಮೇಲೆ ಎಲ್ಲ ಫಲಕಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರ ಇರಬಹುದು. ಕನ್ನಡವು ಸೂಚನಾ ಫಲಕಗಳಿಂದ ಸಂಪೂರ್ಣ ನಾಪತ್ತೆಯಾಗಬಹುದು. (2) ಸೂಚನಾ ಫಲಕಗಳಲ್ಲಿ ಇಂಗ್ಲೀಷ್ ಓಕೆ. ಯಾಕೆಂದರೆ ಅದು ಜಾಗತಿಕ ಭಾಷೆ. ಹಿಂದಿ ಹಾಗಲ್ಲ. (3) ಬೆಂಗಳೂರು ಒಂದು ಮೆಟ್ರೋ ನಗರವಾದ್ದರಿಂದ ದೇಶ-ವಿದೇಶದ ಮಂದಿ – ಇಂಗ್ಲೀಷ್ ಓದಿ ಬರೆಯಲು ಬಲ್ಲವರು – ಬೆಂಗಳೂರಿಗೆ ಆಗಮಿಸುತ್ತಾರೆ. ಹಾಗಾಗಿ ಫಲಕಗಳಲ್ಲಿ ಇಂಗ್ಲೀಷ್ ಇರುವುದಕ್ಕೆ ನಮ್ಮ ಅಭ್ಯಂತರವಿಲ್ಲ. (4) ಬೆಂಗಳೂರಲ್ಲಿ ಹಿಂದಿ ಭಾಷಿಕರು ಅತ್ಯಲ್ಪ ಸಂಖ್ಯೆಯಲ್ಲಿದ್ದಾರೆ. ಹಿಂದಿಯವರಿಗಿಂತ ತೆಲುಗು, ತಮಿಳಿನ ಮಂದಿಯೇ ಇಲ್ಲಿ ಹೆಚ್ಚು. ಹಾಗಾಗಿ ಹಿಂದಿ ಫಲಕ ಬೇಡ. ಅದು ಇರಬೇಕೆಂದಾದರೆ ತಮಿಳು, ತೆಲುಗು ಭಾಷೆಯ ಫಲಕಗಳನ್ನೂ ಇಡಬೇಕಾಗುತ್ತದೆ. (5) ಹಿಂದಿಯನ್ನು ಮೆಟ್ರೋ ರೈಲುಗಳ ಮೂಲಕ ನಮ್ಮ ಮೇಲೆ ಹೇರುತ್ತಿರುವವರು ಆರೆಸ್ಸೆಸ್ ಸಿದ್ಧಾಂತಿಗಳು. ಭಾಜಪಾ ತತ್ತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟವರು. ಹಾಗಾಗಿ ಮೆಟ್ರೋಗಳಲ್ಲಿ ಹಿಂದೀ ಹೇರಿಕೆ ಕೇಂದ್ರದಲ್ಲಿರುವ ಸರಕಾರದ ಕುತಂತ್ರ.

– ಈ ಐದರಲ್ಲಿ ಒಂದೊಂದನ್ನೂ ವಿಸ್ತಾರವಾಗಿ ನೋಡೋಣ. ಮೊದಲನೆಯದಾಗಿ ಹಿಂದಿ ಮುಂದೊಂದು ದಿನ, ಫಲಕದ ಬಹುಭಾಗವನ್ನು ಆಕ್ರಮಿಸಿಕೊಂಡು ಕನ್ನಡವನ್ನು ಗಡಿಪಾರು ಮಾಡುತ್ತದೆ ಎಂಬ ವಾದ. ಇದು ಕೇವಲ ಅನಾಗತಭಯ ಅಷ್ಟೆ. ನಾಳೆ ಹಾಗೆ ಆದಾಗ ಪ್ರತಿಭಟನೆ ಮಾಡುವುದಕ್ಕೂ ಈಗಲೇ “ಮುಂದೆ ಹಾಗಾಗಲಿದೆ” ಎಂದು ಊಹಿಸಿ ಭಯಪಟ್ಟು ಪ್ರತಿಭಟನೆ ಮಾಡುವುದಕ್ಕೂ ವ್ಯತ್ಯಾಸ ಇದೆ ಅಲ್ಲವೆ? ಈ ಪ್ರತಿಭಟನೆಕಾರರು ಅಂಥ ಭವಿಷ್ಯದ ಬಗ್ಗೆ ಕಾಳಜಿಯುಳ್ಳವರಾಗಿದ್ದರೆ ಕರ್ನಾಟಕದಲ್ಲಿರುವ ಉರ್ದು ಶಾಲೆಗಳನ್ನು ಮುಚ್ಚಿಸಬಹುದಾಗಿತ್ತು. 2014-15ರ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದಲ್ಲಿ 2276 ಪ್ರಾಥಮಿಕ ಉರ್ದು ಶಾಲೆಗಳೂ, 2425 ಮಾಧ್ಯಮಿಕ ಉರ್ದು ಶಾಲೆಗಳೂ, 561 ಉರ್ದು ಹೈಸ್ಕೂಲ್‍ಗಳೂ ಇದ್ದವು. ಇಂದು ಈ ಸಂಖ್ಯೆ ಒಂದಷ್ಟು ಹೆಚ್ಚಿರಬಹುದೇ ಹೊರತು ಕಡಿಮೆಯಾಗಿಲ್ಲ. ಇದು ನಮ್ಮ ರಾಜ್ಯದ ಮುಸ್ಲಿಂ ಸಮುದಾಯದ ಮೇಲೆ ಸರಕಾರ ಮಾಡುತ್ತಿರುವ ಉರ್ದು ಹೇರಿಕೆ ಎಂದು ಈ ಹೋರಾಟಗಾರರು ಯಾಕೆ ಹೋರಾಡಬಾರದು? ಇಷ್ಟೊಂದು ಸಂಖ್ಯೆಯಲ್ಲಿ ಉರ್ದು ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದರೆ ಮುಂದೊಂದು ದಿನ ರಾಜ್ಯದ ಯಾವ ಮುಸ್ಲಿಮನಿಗೂ ಕನ್ನಡವನ್ನು ಓದಲು-ಬರೆಯಲು ಬರದೇ ಹೋಗಬಹುದು; ಸಮಾಜದ ಬಹುದೊಡ್ಡ ಪಂಗಡವೊಂದು ಕನ್ನಡದಿಂದ ದೂರಾಗಬಹುದು ಎಂಬ ಕಾಳಜಿ ಈ ಕನ್ನಡದ ಹುಟ್ಟು ಹೋರಾಟಗಾರರಿಗೆ ಯಾಕೆ ಬಂದಿಲ್ಲ?

ಎರಡನೆಯದಾಗಿ, ಇಂಗ್ಲೀಷ್ ಓಕೆ, ಆದರೆ ಹಿಂದಿ ಬೇಡ ಎಂದು ಈ ಹೋರಾಟಗಾರರು ಯಾಕೆ ಹೇಳುತ್ತಿದ್ದಾರೆಂದರೆ ಈ ಹೋರಾಟಗಾರರ ಪೈಕಿ ಬಹುತೇಕರ ಮಕ್ಕಳು ಕಲಿಯುತ್ತಿರುವುದು ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ. ಕೆಲವು ಹೋರಾಟಗಾರರ ಮಕ್ಕಳಿಗೆ ಕನ್ನಡವನ್ನು ಓದಲು ಬರೆಯಲಿಕ್ಕೂ ಬಾರದು. ಜಾಲತಾಣದಲ್ಲಿ ಅಥವಾ ಟಿವಿಯಲ್ಲಿ ನಾಲ್ಕೈದು ನಿಮಿಷಗಳ ವಿಡಿಯೋ ಮಾಡುವಾಗ ಮಾತ್ರ ಕನ್ನಡವನ್ನು ನೆಚ್ಚಿಕೊಳ್ಳುವ ಸೋಕಾಲ್ಡ್ ಕನ್ನಡ ಹೋರಾಟಗಾರರ ತೆರೆಮರೆಯ ಹೆಚ್ಚಿನ ವ್ಯವಹಾರಗಳು ನಡೆಯುವುದು ಇಂಗ್ಲೀಷಿನಲ್ಲೇ. ಇನ್ನೂ ತಮಾಷೆ ಏನೆಂದರೆ, ಅರಿಶಿಣ-ಕುಂಕುಮ ಬಣ್ಣದ ಶಾಲನ್ನು ಢಾಳಾಗಿ ಮೆರೆಸಿಕೊಂಡು ಕನ್ನಡ ಉಳಿದದ್ದೇ ನಮ್ಮಿಂದ ಎಂದು ಪೋಸು ಕೊಡುವ ಬಹಳಷ್ಟು ಮಂದಿ ಒಂದೋ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಸ್ವತಃ ನಡೆಸುತ್ತಿರುವವರು ಇಲ್ಲವೇ ಅವುಗಳಲ್ಲಿ ಪಾಲುದಾರರು. ವಿಷಯ ಹೀಗಿರುವಾಗ ಇವರು ಇಂಗ್ಲೀಷನ್ನು ಹೇಗೆ ವಿರೋಧಿಸಿಯಾರು! ವಿಕಿಪೀಡಿಯಾ ತೋರಿಸುವ ಲೆಕ್ಕಾಚಾರದ ಪ್ರಕಾರ, ಇಂಗ್ಲೀಷನ್ನು ಪ್ರಥಮ ಭಾಷೆಯಾಗಿ ಆಡುವವರ ಸಂಖ್ಯೆ 50 ಕೋಟಿಯಾದರೆ ಹಿಂದಿಯನ್ನು ಪ್ರಥಮ ಭಾಷೆಯಾಗಿ ಮಾತಾಡುವವರ ಸಂಖ್ಯೆ 44 ಕೋಟಿ.  ಭಾರತದಲ್ಲಿ ಹಿಂದಿ ಭಾಷೆ ಬಲ್ಲವರಾದರೆ ಅರ್ಧಕ್ಕರ್ಧ ದೇಶವನ್ನು ಆರಾಮಾಗಿ ಸುತ್ತಿಕೊಂಡು ಬರಬಹುದು. ಆದರೂ ನಮ್ಮ ಕುರುಡು ಕನ್ನಡ ಹೋರಾಟಗಾರರಿಗೆ ಇಂಗ್ಲೀಷ್ ಮಾತ್ರ ಜಾಗತಿಕ ಭಾಷೆಯಂತೆ! ಹಿಂದಿಯಲ್ಲಿ ಬೋರ್ಡು ಇರಬಾರದಂತೆ! ವಿದೇಶಗಳ ಜನರು ಇಲ್ಲಿಗೆ ಬರುತ್ತಾರೆಂಬ ಕಾರಣಕ್ಕೆ ಇಂಗ್ಲೀಷ್ ಬೇಕು ಎನ್ನುವುದಾದರೆ ದೇಶದ, ಇಂಗ್ಲೀಷು ಓದಲು ಬರದ ಜನ ಬೆಂಗಳೂರಲ್ಲಿ ಏನು ಮಾಡಬೇಕು ಎಂಬ ಪ್ರಶ್ನೆಗೆ ಹೋರಾಟಗಾರರಲ್ಲಿ ಯಾವ ಉತ್ತರವಿದೆ?

ನಮ್ಮ ಈ ಹೋರಾಟಗಾರರು ಇಂಗ್ಲೀಷ್ ಅನ್ನು ಯಾಕೆ ವಿರೋಧಿಸುವುದಿಲ್ಲ ಎಂಬುದನ್ನು ಜಾಲತಾಣದ ಗೆಳೆಯ ಸುನಿಲ್ ಕುಮಾರ್ ರಸವತ್ತಾಗಿ ವರ್ಣಿಸಿದ್ದಾರೆ. ಅವರ ಪ್ರಕಾರ, ಈ ಹುಟ್ಟು ಹೋರಾಟಗಾರರು ಭಸ್ಮಾಸುರನಂಥ ಇಂಗ್ಲೀಷ್ ಅನ್ನು ಪಕ್ಕಕ್ಕಿಟ್ಟು ಬಡಪಾಯಿ ಹಿಂದಿ ಮೇಲೆ ಸವಾರಿ ಮಾಡುತ್ತಿರಲು ಮುಖ್ಯ ಕಾರಣಗಳು ಇವು:

(1) ಇಂಗ್ಲೀಷನ್ನು ವಿರೋಧಿಸುವುದೇ ಆದರೆ ಮೊದಲು ಈ ಹೋರಾಟಗಾರರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗೆ ಕಳುಹಿಸುವುದನ್ನು ಬಿಟ್ಟು ಕನ್ನಡದ ಪರವಾಗಿ ಹೋರಾಡುವುದಕ್ಕೆ ನೈತಿಕತೆ ಬೆಳೆಸಿಕೊಳ್ಳಬೇಕಾಗುತ್ತದೆ. ಅದು ಈ ಆಷಾಢಭೂತಿಗಳ ಕೈಯಲ್ಲಿ ಎಂದೂ ಆಗದ ಕೆಲಸ.

(2) ಇಂಗ್ಲೀಷ್ ಬೋರ್ಡುಗಳು ಹೆಜ್ಜೆಗೊಂದರಂತೆ ಗೋಚರವಾಗುತ್ತವೆ. ಅವನ್ನೆಲ್ಲ ಕಿತ್ತು ಹಾಕುತ್ತೇವೆ ಎಂದು ಹೊರಟರೆ ಜನರೇ ಹೋರಾಟಗಾರರನ್ನು ಪುಕ್ಕ ಕಿತ್ತಿಟ್ಟ ಕೋಳಿಗಳಂತೆ ಚರ್ಮ ಸುಲಿದು ಮನೆಯಲ್ಲಿ ಕೂರಿಸಬಹುದು. ಹಾಗಾಗಿ ಎಲ್ಲೋ ಅಲ್ಲಿಲ್ಲಿ ಕಾಣಿಸುವ ಹಿಂದಿ ಬೋರ್ಡುಗಳನ್ನು ಕಿತ್ತು ಪೌರುಷ ಮೆರೆಯುವುದು ಸೇಫ್ ಆದ ಮಾರ್ಗ. ಅದಕ್ಕೆ ಬರುವ ವಿರೋಧವೂ ಕಡಿಮೆ. ಅಲ್ಲದೆ, ಇಂಗ್ಲೀಷ್ ಬೋರ್ಡು ಕೀಳಲು ಹೋಗುವ ಹೋರಾಟಗಾರರು ತಮ್ಮ ಆಂಗ್ಲಮಯ ಟೀಶರ್ಟುಗಳನ್ನೂ ತಮ್ಮ ಸ್ವಂತ ಆಫೀಸುಗಳ ಬೋರ್ಡುಗಳನ್ನೂ ಕಿತ್ತು ಬದಿಗಿಡಬೇಕಾಗುತ್ತದಲ್ಲ?

(3) ರಾಜ್ಯದ ಬಹುತೇಕ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಗಳ ಒಡೆತನ ಇರುವುದು ಪ್ರಭಾವಿ ರಾಜಕಾರಣಿಗಳ ಕೈಯಲ್ಲಿ. ಅವರನ್ನು ಎದುರು ಹಾಕಿಕೊಂಡರೆ ಸಿಗೋ ಗಂಜಿಗೂ ಕಲ್ಲು ಹಾಕಿಕೊಂಡಂತೆ. ನೀವೇ ಹೇಳಿ, ಹೋರಾಟಗಾರರು ತಮ್ಮ ತಲೆಗೆ ತಾವೇ ಕಲ್ಲುಚಪ್ಪಡಿ ಎಳೆದುಕೊಂಡಾರೇ?

(4) ಈ ದೇಶದಲ್ಲಿ ಇಂಗ್ಲೀಷನ್ನು ವ್ಯಾಪಕವಾಗಿ ಬಳಕೆಗೆ ತಂದವರು ಬ್ರಿಟಿಷರು. ಅಂದರೆ ಕ್ರಿಶ್ಚಿಯನ್ನರು. ಇಂದಿಗೂ ಕುಗ್ರಾಮಗಳಲ್ಲಿರುವ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಇವರ ಕಾನ್ವೆಂಟುಗಳದ್ದೇ ಸಿಂಹಪಾಲು. ಹಾಗಾಗಿ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಹೋಗಿ “ಕ್ರೈಸ್ತ ವಿರೋಧಿ” ಹಣೆಪಟ್ಟಿ ಕಟ್ಟಿಕೊಳ್ಳುವುದಕ್ಕಿಂತ ಹಿಂದಿಯನ್ನಷ್ಟೇ ವಿರೋಧಿಸಿ ಸೆಕ್ಯುಲರ್ ಹೀರೋಗಳಾಗುವುದು ಮೇಲು!

(5) ಇನ್ನು ಇವರ ಇಂಗ್ಲೀಷ್ ವಿರೋಧೀ ಹೋರಾಟಕ್ಕೆ ಮಾಧ್ಯಮದ ಬೆಂಬಲ ಸಿಕ್ಕೀತೇ? ಖಂಡಿತಾ ಇಲ್ಲ. ಯಾಕೆಂದರೆ ಕನ್ನಡದಲ್ಲಿರುವ ಇಪ್ಪತ್ತರ ಪೈಕಿ ಹದಿನೈದು ಚಾನೆಲುಗಳ ಹೆಸರುಗಳಿರುವುದೇ ಇಂಗ್ಲೀಷಿನಲ್ಲಿ. ಇವರು ಮಾಡುವ ಪ್ರೋಗ್ರಾಮುಗಳು ಕೂಡ ಇಂಗ್ಲೀಷ್ ಹೆಸರಿನವು. ಹಾಗಾಗಿ ಟಿವಿ ಚಾನೆಲುಗಳವರು ಇಂಗ್ಲೀಷ್ ವಿರೋಧಿ ಹೋರಾಟಗಾರರನ್ನು ತಮ್ಮ ಪ್ಯಾನೆಲ್ ಡಿಸ್ಕಶನ್‍ಗಳಿಗೆ ಕರೆಯುವುದು ಅನುಮಾನ. ಪ್ರಚಾರಪ್ರಿಯರಿಗೆ ಇದೇ ಒಂದು ದೊಡ್ಡ ಹೊಡೆತ. ಅಲ್ಲದೆ, ರೆಬೆಲ್ ಸ್ಟಾರ್, ಪೆಬೆಲ್ ಸ್ಟಾರ್ ಎನ್ನುತ್ತ ತಮ್ಮ ಸ್ಟಾರ್‍ಗಿರಿಯ ಕಿರೀಟಗಳಿಗೆ ಇಂಗ್ಲೀಷಿನ ಬೇಗಡೆಯೇ ಬೇಕು ಎಂಬ ಚಿತ್ರನಟರ ಸಹಕಾರವಾದರೂ ಸಿಕ್ಕೀತೇ? ಅದೂ ಅನುಮಾನ! ಮೇಲಾಗಿ ಟಸ್‍ಪುಸ್ ಎಂದು ಇಂಗ್ಲೀಷಿನಲ್ಲಿ ಒದರಿದರಷ್ಟೇ ಕಣ್ತೆರೆಯುವ, ಕಿವಿ ಕೊಡುವ, ತುಟಿ ಆಡಿಸುವ ಕಾರ್ಪೊರೇಟ್ ಕಂಪೆನಿಗಳಲ್ಲಿ ಈ ಹೋರಾಟಗಾರರು ತಾವು ಇಂಗ್ಲೀಷ್ ವಿರೋಧಿಗಳೆಂದು ಬಿಂಬಿಸಿಕೊಂಡು ಗಂಜಿ ಸಂಪಾದಿಸಲು ಸಾಧ್ಯವೇ? ಅದೂ ಇಲ್ಲ ನೋಡಿ!

ಹೀಗಾಗಿ ಇವರ ವಿರೋಧವೆಲ್ಲ ಹಿಂದಿಯ ಮೇಲೆ ಮಾತ್ರ!

ಬೆಂಗಳೂರಲ್ಲಿ ಹಿಂದಿ ಭಾಷಿಕರು ಅತ್ಯಲ್ಪ ಮಂದಿ. ಕೇವಲ ಒಂದು ಪರ್ಸೆಂಟ್ ಅಷ್ಟೆ. ಹಾಗಾಗಿ ಮೆಟ್ರೋದಲ್ಲಿ ಹಿಂದಿ ಬೇಡ ಎಂಬುದು ಈ ಹೋರಾಟಗಾರರ ಇನ್ನೊಂದು ವಾದ. ನನ್ನ ಪ್ರಶ್ನೆ – ಬೆಂಗಳೂರಲ್ಲಿ ಹಾಗಾದರೆ ಇಂಗ್ಲೀಷ್ ಭಾಷಿಕರು ಎಷ್ಟು ಜನ? ಬೇರಾವ ಭಾಷೆಯೂ ಗೊತ್ತಿಲ್ಲ, ಇಂಗ್ಲೀಷ್ ಒಂದೇ ಬರೋದು ಎನ್ನಬೇಕಾದರೆ ಅವರು ಬ್ರಿಟಿಷರೇ ಇರಬೇಕು. ಅಂಥ ಬ್ರಿಟಿಷ್ ಮಂದಿ ಬೆಂಗಳೂರಲ್ಲಿ ಎಷ್ಟು ಮಂದಿ ಇದ್ದಾರೆ? “ನೋ! ನೋ! ಹಾಗಲ್ಲಾರೀ! ಇಂಗ್ಲೀಷ್ ಓದಬಲ್ಲ ಅನ್ಯಭಾಷಿಕರಿಗೆ ಆ ಭಾಷೆಯ ಬೋರ್ಡು ಬೇಕಾಗುತ್ತೆ” ಅಂತೀರಾ? ಹಾಗಾದರೆ ಇಂಗ್ಲೀಷ್ ಓದಲು ಬರಬಲ್ಲ ಹೆಚ್ಚಿನವರಿಗೆಲ್ಲ ದೇವನಾಗರಿಯಲ್ಲಿರುವ ಹಿಂದಿಯನ್ನೂ ಓದಲು ಬರಲೇಬೇಕಲ್ಲ? ಇಂಗ್ಲೀಷ್ ನಮ್ಮ ದೇಶದ ನೆಲದಲ್ಲಿ ಕಣ್ಣು ಬಿಟ್ಟದ್ದು 200 ವರ್ಷದ ಹಿಂದೆ ಎಂದಾದರೆ ದೇವನಾಗರಿ ಲಿಪಿ ಕನಿಷ್ಠ ಎರಡು ಸಾವಿರ ವರ್ಷಗಳಿಂದ ಈ ನೆಲದಲ್ಲಿ ಅಸ್ತಿತ್ವದಲ್ಲಿದೆ. ಅದನ್ನೇಕೆ ವಿರೋಧಿಸುತ್ತೀರಿ? ಪರದೇಶೀ ಪರಂಗಿಗಳು ಬಿಟ್ಟು ಹೋದ ಇಂಗ್ಲೀಷ್ ಬೇಕು; ಆದರೆ ನಮ್ಮದೇ ನೆಲದ ಹಿಂದೀ ಬೇಡ ಎಂದಾದರೆ ಈ ಹೋರಾಟಗಾರರ ವಾದದಲ್ಲಿ ಏನೋ ಮಿಸ್ ಹೊಡೆಯುತ್ತಿದೆ ಅನ್ನಿಸೋದಿಲ್ಲವೆ?

ನಾನು ಈ ವಿಷಯದಲ್ಲಿ ಭಾಗವಹಿಸಿದ ಟಿವಿ ಚರ್ಚೆಯೊಂದರಲ್ಲಿ ಜೊತೆಗಿದ್ದ ಒಂದಿಬ್ಬರು ಹಲವು ವಿಚಿತ್ರ ವಾದಗಳನ್ನು ಮುಂದಿಟ್ಟರು. ಅವರ ಪ್ರಕಾರ, ತ್ರಿಭಾಷಾ ಸೂತ್ರಕ್ಕೆ ಸೂಕ್ತ ಕಾನೂನಾತ್ಮಕ ಬೆಂಬಲವೇ ಇಲ್ಲ. ಅದನ್ನು ರಾಜ್ಯಗಳು ಬಳಸಬಹುದು, ಬಿಡಬಹುದು. ಭಾರತದ ಸಂವಿಧಾನವನ್ನು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರ ಬರೆಯಲಾಗಿದೆ. ಕನ್ನಡದಲ್ಲಿ ಬರೆಯಲಾಗಿಲ್ಲ! ಯಾಕೆ? ಹಿಂದೀ ಹೇರಿಕೆ! ಸಂಸತ್ತಿನಲ್ಲಿ ಹಿಂದಿಯಲ್ಲೇ ಚರ್ಚೆಗಳು ನಡೆಯುತ್ತವೆ. ಯಾಕೆ ಕನ್ನಡದಲ್ಲಿ ನಡೆಯಬಾರದು? ತ್ರಿಭಾಷಾ ಸೂತ್ರದ ಪ್ರಕಾರ ಉತ್ತರ ಭಾರತದಲ್ಲಿ ಹಿಂದಿಯ ಜೊತೆಗೆ ದಕ್ಷಿಣ ಭಾರತದ ಭಾಷೆಗಳನ್ನೂ ಅಳವಡಿಸಬಹುದು, ಆದರೆ ಮಾಡಿಲ್ಲ. ಯಾಕೆ? ಹಿಂದೀ ಭಾಷಿಕರ ದಬ್ಬಾಳಿಕೆ! – ಹೀಗೆ ಈ ಪಂಡಿತರ ವಾದಗಳು ಲಂಗುಲಗಾಮಿಲ್ಲದೆ ಹರಿಯುತ್ತಿದ್ದವು. ಭಾರತದ ಸಂವಿಧಾನವನ್ನು ಎರಡೇ ಭಾಷೆಯಲ್ಲಿ ಬರೆಯಬೇಕು; ಬೇರಾವ ಭಾಷೆಯಲ್ಲೂ ಅನುವಾದಿಸಬಾರದು ಎಂದು ಯಾರು ಹೇಳಿದ್ದಾರೆ, ನನಗೆ ಗೊತ್ತಿಲ್ಲ. ಸಂವಿಧಾನವನ್ನು ಹಿಂದಿಯಲ್ಲಿ ಬರೆದರು, ಕನ್ನಡದಲ್ಲಿ ಅಲ್ಲ ಎಂಬುದು ಹಿಂದೀ ಹೇರಿಕೆಗೆ ಉದಾಹರಣೆ ಹೇಗಾಗುತ್ತದೆ? ಸಂಸತ್ತಿನಲ್ಲಿ (ಸಂವಿಧಾನದಲ್ಲಿ ಉಲ್ಲೇಖಿಸಿರುವ) ಯಾವುದೇ ಭಾಷೆಯಲ್ಲಿ ಚರ್ಚೆ-ಸಂವಾದ ನಡೆಸಬಹುದು. ಯಾಕೆ ಪ್ರಯತ್ನಿಸಿಲ್ಲ ಎಂದು ಸಂಸದರನ್ನು ಕೇಳಿದರೆ ಅದನ್ನು ತಾರ್ಕಿಕ ಎಂದು ಒಪ್ಪಬಹುದು. ಆದರೆ ಅದಕ್ಕೂ ಮೆಟ್ರೋ ಬೋರ್ಡುಗಳಲ್ಲಿ ಹಿಂದಿ ಬರುವುದಕ್ಕೂ ಏನು ಸಂಬಂಧ? ಇನ್ನು ತ್ರಿಭಾಷಾ ಸೂತ್ರದ ಪ್ರಕಾರ ಉತ್ತರ ಭಾರತದಲ್ಲಿ ದಕ್ಷಿಣದ ಯಾವುದಾದರೂ ಭಾಷೆಯನ್ನು ಬಳಸಬಹುದು; ಆದರೆ ಉತ್ತರ ಭಾರತಕ್ಕೆ ಹೋಗಿ ಉದ್ಯೋಗ ಹಿಡಿವ, ಬದುಕು ಕಟ್ಟಿಕೊಳ್ಳುವ ಕನ್ನಡಿಗರು ಎಷ್ಟು ಜನ ಎಂಬ ಪ್ರಶ್ನೆಗೆ ಉತ್ತರ ಏನು? ನಮಗೆ ಹಿಂದೀ ಬೇಡ ಎಂದು ಹೇಳುವವರು ಉತ್ತರ ಭಾರತದಲ್ಲಿ ಸನ್ನೆ ಭಾಷೆಯಲ್ಲಿ ಮಾತಾಡುತ್ತಾರೆಯೇ? ಒಟ್ಟಿನಲ್ಲಿ ಈ ಪಂಡಿತರುಗಳು ಮೆಟ್ರೋದಲ್ಲಿ ಹಿಂದಿಯನ್ನು ಹೇರಲಾಗಿದೆ ಎಂಬ ತಮ್ಮ ವಾದವನ್ನು ಪುಷ್ಟೀಕರಿಸಲು ಇಲ್ಲಸಲ್ಲದ ಸಂಗತಿಗಳನ್ನೆಲ್ಲ ಎಳೆದು ತರುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಇವನ್ನೆಲ್ಲ ನೋಡಿದಾಗ ನಮಗೆ ಅನ್ನಿಸುವುದು, ಇಲ್ಲಿ ಮೇಲ್ನೋಟಕ್ಕೆ ಹಿಂದೀ ಹೇರಿಕೆಯ ವಿರುದ್ಧ ಹೋರಾಟ ನಡೆಯುತ್ತಿದೆ ಅನ್ನಿಸಿದರೂ ಇವರ ಟಾರ್ಗೆಟ್ ಕೇಂದ್ರ ಸರಕಾರ, ಆರಸ್ಸೆಸ್ ಮತ್ತು ಭಾಜಪಾ. ಹಿಂದೀ ಪ್ರಬಲವಾದರೆ ಅದು ಆರೆಸ್ಸೆಸ್‍ಗೆ ಲಾಭ ಮಾಡಿಕೊಡುತ್ತದೆ ಎಂಬ ಪೂರ್ವಗ್ರಹವೇ ಇವರಿಂದ ತಲೆಬುಡವಿಲ್ಲದ ತರ್ಕ-ವಾದಗಳನ್ನು ಹುಟ್ಟಿಸಿ ಹೋರಾಟ ಮಾಡಿಸುತ್ತಿದೆ. ನಾನು ಕಳೆದ ಮೂವತ್ತು ವರ್ಷಗಳಿಂದ ಈ ಕನ್ನಡ-ಇಂಗ್ಲೀಷ್-ಹಿಂದೀ ಭಾಷೆಗಳ ತ್ರಿವಳಿ ಸೂತ್ರದ ಬೋರ್ಡುಗಳನ್ನು ನೋಡುತ್ತಾ ಬಂದಿದ್ದೇನೆ. ಆದರೆ ಆ ಬೋರ್ಡುಗಳಿಂದಾಗಿಯೇ ಕನ್ನಡ ಅಳಿವಿನಂಚಿಗೆ ಬಂದು ನಿಂತದ್ದು ನನ್ನ ಅನುಭವಕ್ಕೆ ಬಂದಿಲ್ಲ. ಬೋರ್ಡುಗಳಲ್ಲಿ ಹಿಂದಿ ಇದೆ ಎಂಬ ಕಾರಣಕ್ಕೆ ಹಿಂದಿ ಕಲಿತವರನ್ನೂ ನಾನು ನೋಡಿಲ್ಲ. ಕನ್ನಡಿಗರು ಇಂಗ್ಲೀಷಿನಿಂದ ಪ್ರಭಾವಿತರಾಗಿದ್ದಾರೆಯೇ ಹೊರತು ಹಿಂದಿಯಿಂದ ಅಲ್ಲ ಎಂದೇ ಅನ್ನಿಸಿದೆ. ಇಂಗ್ಲೀಷ್‍ನ ಸಾಹಿತ್ಯ ಓದಿಕೊಂಡಿರುವ ನನಗೆ ಹಿಂದಿಯ ಒಬ್ಬ ಲೇಖಕನ ಹೆಸರು ಹೇಳು ಎಂದರೆ ಪರದಾಡುವಂತಾಗುತ್ತದೆ. ಯಾಕೆಂದರೆ ನಾವು ಶಾಲೆಯಲ್ಲಿ ಅಷ್ಟೋ ಇಷ್ಟೋ ಹಿಂದಿ ಓದಿಕೊಂಡು ಪಾಸು ಮಾಡಿಕೊಂಡು ಮುಂದೆ ಹೋದವರೇ ಹೊರತು ಹಿಂದಿಯನ್ನು ಒಂದು ಸಾಹಿತ್ಯಿಕ ಭಾಷೆಯಾಗಿ ಕಲಿತವರಲ್ಲ. ನಮ್ಮ ಮುಂದಿನ ಭಾಷಾ ಕಲಿಕೆ ನಡೆದದ್ದು ಕ್ರಿಕೆಟ್ ಕಾಮೆಂಟರಿ ಕೇಳುತ್ತ, ಹಿಂದಿಯ ನ್ಯೂಸ್ ನೋಡುತ್ತ, ಬಾಲಿವುಡ್ ಸಿನೆಮಾಗಳನ್ನು ವೀಕ್ಷಿಸುತ್ತ. ಹಾಗೆ ಕಲಿತ ಭಾಷೆಯಿಂದ ಯಾವನಾದರೂ ತನ್ನ ಮಾತೃಭಾಷೆಯನ್ನೇ ಮರೆತು ಬಿಡುವಷ್ಟು ಪ್ರಭಾವಿತನಾಗುತ್ತಾನೆಂದು ನಾನೆಂದೂ ಭಾವಿಸಿಲ್ಲ. ಬಾಲಿವುಡ್ ಸಿನೆಮಾಗಳನ್ನು ನೋಡಿಯೂ ಕನ್ನಡವನ್ನು ನಮ್ಮ ತನು-ಮನಗಳಲ್ಲಿ ಉಳಿಸಿಕೊಂಡಿರುವ ನಾವು ಮೆಟ್ರೋ ಬೋರ್ಡುಗಳಲ್ಲಿ ಇಣುಕಿದ ಹಿಂದಿಯನ್ನು ಕಂಡು ಮೈಲಿಗೆಯಾಗಿ ಜಾತಿ ಕೆಡುತ್ತೇವೆಂದು ಬಗೆಯುವುದು ಹಾಸ್ಯಾಸ್ಪದ.

ನೆನಪಿಡಿ; ಇಂಥ ಬೀದಿ ಹೋರಾಟಗಳೆಲ್ಲ ಶುರುವಾಗುವುದು ಒಂದು ನಿರ್ದಿಷ್ಟ ಅಜೆಂಡಾಗಳನ್ನು ಇಟ್ಟುಕೊಂಡೇ. ಹೀಗೆ ಶುರುವಾದ ಹೋರಾಟಗಳ್ಯಾವುದೂ ತಾತ್ತ್ವಿಕ ಅಂತ್ಯ ಕಾಣುವುದಿಲ್ಲ. ಹೋರಾಟ ಒಂದೆರಡು ದಿನ, ತಪ್ಪಿದರೆ ವಾರದವರೆಗೆ ಮುಂದುವರಿಯುತ್ತದೆ. ಒಂದಷ್ಟು ಮೆರವಣಿಗೆ, ಘೋಷಣೆ ಆಗುತ್ತದೆ. ವಾರದಲ್ಲಿ ಎಲ್ಲವೂ ತಣ್ಣಗಾಗಿ ಜನಜೀವನ ಮತ್ತೆ ಮಾಮೂಲು ಸ್ಥಿತಿಗೆ ಬರುತ್ತದೆ. ಯಾಕೆಂದರೆ ಅಷ್ಟರಲ್ಲಿ ಹೋರಾಟದ ನೇತೃತ್ವ ವಹಿಸಿಕೊಂಡ ಪ್ರಮುಖರು ತಮಗೆ ಆಗಬೇಕಾದ ಕೆಲಸವನ್ನು ಆಗಿಸಿಕೊಂಡು, ತುಂಬಿಸಿಕೊಳ್ಳಬೇಕಾದ್ದನ್ನು ತುಂಬಿಸಿಕೊಂಡು ತೃಪ್ತರಾಗುತ್ತಾರೆ. (ಮೆಟ್ರೋಗಳಲ್ಲಿ ಹಿಂದೀ ಹೇರಿಕೆಯಾಗಿದೆ ಎಂಬ ಗದ್ದಲವನ್ನು ಮೊದಲ ಬಾರಿಗೆ ಎಬ್ಬಿಸಿ ಬೆಂಗಳೂರಲ್ಲಿ ರಾಡಿ ಎಬ್ಬಿಸಿರುವ ಮಹಾನುಭಾವರು ಈಗಾಗಲೇ “ನನಗೆ ಅರ್ಜೆಂಟ್ ಆಗಿ ಫಿಲ್ಮ್ ಸ್ಕ್ರಿಪ್ಟ್ ಮುಗಿಸೋದಿದೆ. ಹಾಗಾಗಿ ಟ್ವಿಟ್ಟರ್, ಫೇಸ್‍ಬುಕ್‍ಗಳಿಗೆ ವಿದಾಯ ಹೇಳುತ್ತೇನೆ” ಎಂದು ಮಾಯವಾಗಿಯೂ ಆಗಿದೆ! ಉಳಿದವರು ಮಾತ್ರ ಸೇನಾಪತಿಯ ನೇಪಥ್ಯದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕತ್ತಿ ಬೀಸುತ್ತಿದ್ದಾರೆ!) ಕರ್ನಾಟಕದ ಪರಿಸ್ಥಿತಿಯನ್ನೇ ತೆಗೆದುಕೊಂಡರೂ ಕಳೆದ ಹಲವು ಸಂದರ್ಭಗಳಲ್ಲಿ ನಿಜವಾಗಿಯೂ ನಡೆಯಬೇಕಿದ್ದ ಹೋರಾಟವನ್ನು ಇವರ್ಯಾರೂ ನಡೆಸಿಯೇ ಇಲ್ಲ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಡದ ಸಚಿವರೊಬ್ಬರು ಒಂದನೇ ತರಗತಿಯಿಂದ ಅರೇಬಿಕ್ ಭಾಷೆಯನ್ನು ಮಕ್ಕಳಿಗೆ ಕಲಿಸುತ್ತೇವೆ ಎಂದಾಗ ಈ ಹೋರಾಟಗಾರರು ಎಲ್ಲಿದ್ದರು? ಕರ್ನಾಟಕದಲ್ಲಿ ಸಮರೋಪಾದಿಯಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿಸಿ ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಸರಕಾರ ಅನುಮತಿ ಕೊಟ್ಟಾಗ ಈ ಹೋರಾಟಗಾರರ ಬ್ರಿಗೇಡ್ ಎಲ್ಲಿತ್ತು? ಕನ್ನಡವನ್ನು ಮೆಟ್ಟಿ ಅರೇಬಿಕ್ ಭಾಷೆಯನ್ನು ರಾಜ್ಯಭಾಷೆಯಾಗಿಸಿದ ಟಿಪ್ಪುವಿನ ಜಯಂತಿಯನ್ನು ಅದ್ದೂರಿಯಾಗಿ ಸರಕಾರ ಹಮ್ಮಿಕೊಂಡಾಗ ಈ ಹೋರಾಟಗಾರರು ಯಾವ ಬಿಲಗಳಲ್ಲಿ ಅಡಗಿ ಕುಳಿತಿದ್ದರು? ಬೆಂಗಳೂರಲ್ಲಿ ಓಡಾಡುವ ಟ್ಯಾಕ್ಸಿ ಕ್ಯಾಬ್‍ಗಳ ಚಾಲಕರಲ್ಲಿ ಹೆಚ್ಚಿನವರು ಅನ್ಯಭಾಷಿಕರು. ಬೆಂಗಳೂರಲ್ಲಿ ಕೆಲಸ ಮಾಡುವ ಸಾವಿರಾರು ಸೆಕ್ಯುರಿಟಿ ಗಾರ್ಡ್‍ಗಳೆಲ್ಲರೂ ಅನ್ಯಭಾಷಿಕರು. ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿಕೊಂಡು ಲಕ್ಷ ಕೋಟಿಗಳನ್ನು ಎಣಿಸುತ್ತಿರುವ ದೊಡ್ಡ ಕುಳಗಳೆಲ್ಲ ಅನ್ಯಭಾಷಿಕರು. ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಪಾನಿಪೂರಿ ಅಂಗಡಿ ತೆರೆದು ಇಡ್ಲಿ-ಬಜ್ಜಿ ಮಾರುವ ಹೊಟೇಲವರಿಗೆ ಹೊಡೆತ ಕೊಟ್ಟಿರುವವರು ಅನ್ಯಭಾಷಿಕರು. ಇವರನ್ನು ಪರಿಹರಿಸುವ, ಇವರ ಸಂಖ್ಯೆಯನ್ನು ಕಡಿಮೆಗೊಳಿಸುವ ಉಪಾಯಗಳನ್ನು ಹುಡುಕುವ ಬದಲು ಮೆಟ್ರೋದಲ್ಲಿ ಹಿಂದಿ ಇರಬಾರದು ಎಂದು ಬೊಬ್ಬೆ ಹೊಡೆಯುವವರಿಗೆ ನೈತಿಕತೆ ಇದೆಯೆಂದು ನಾನಂತೂ ಹೇಳಲಾರೆ.

ಕನ್ನಡವನ್ನು, ತಲೆಬುಡವಿಲ್ಲದ ವಿಷಯವಿಟ್ಟುಕೊಂಡು ನಡೆಸುವ ಬೀದಿ ಹೋರಾಟಗಳಿಂದ ಬೆಳೆಸಲು ಸಾಧ್ಯವಿಲ್ಲ. ಕನ್ನಡ ಬೆಳೆಯಬೇಕಾದ್ದು ಅದನ್ನು ಹೆಚ್ಚು ಹೆಚ್ಚು ಬಳಸುವುದರಿಂದ. ಅನ್ಯಭಾಷಿಕರನ್ನು ಪ್ರೀತಿಯಿಂದ ಕಂಡು ಅವರಿಗೆ ಕನ್ನಡದ ರುಚಿಯನ್ನು ತೋರಿಸುವುದರಿಂದ. ಸಾಧ್ಯವಿದ್ದರೆ ನಮ್ಮ ಭಾಷೆಯ ಒಳ್ಳೊಳ್ಳೆಯ ನಾಟಕ, ಸಂಗೀತ, ಸಿನೆಮಾಗಳನ್ನು ಅನ್ಯಭಾಷಿಕರು ಆಸ್ವಾದಿಸುವ ಹಾಗೆ ಮಾಡೋಣ. ಅನ್ಯಭಾಷಿಕರೂ ನೋಡಬೇಕೆಂದು ಕಾತರಿಸುವಂಥ ನಾಟಕ, ಸಿನೆಮಾಗಳನ್ನು ತರೋಣ. ಕನ್ನಡದ ಡಿಂಡಿಮವೇ ಎಲ್ಲೆಡೆ ಮೊಳಗುವಂತೆ, ಪ್ರತಿಯೊಂದು ಕಂಪೆನಿ/ಫ್ಯಾಕ್ಟರಿಯೂ ಕನ್ನಡ ಸಂಘಗಳನ್ನು ತೆರೆಯುವಂತೆ ಮತ್ತು ಆ ಕನ್ನಡ ಸಂಘಗಳಲ್ಲಿ ನಿರಂತರವಾಗಿ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯುವಂತೆ ಮತ್ತು ಅವುಗಳಲ್ಲಿ ಅನ್ಯಭಾಷಿಕರೂ ಭಾಗವಹಿಸುವಂತೆ ಮಾಡೋಣ. ಮೂವತ್ತು ವರ್ಷಗಳ ಹಿಂದೆ, ಸರಿಯಾಗಿ ನೆನಪಿದೆ, ಮಹಾರಾಷ್ಟ್ರದಲ್ಲಿ “ಕನ್ನಡ ಶಿಕೂಯಾ” (ಕನ್ನಡ ಕಲಿಯುವಾ) ಎಂಬ ಅಭಿಯಾನ ಪ್ರಾರಂಭವಾಗಿತ್ತು, ಬಹಳಷ್ಟು ಯಶಸ್ಸನ್ನೂ ಕಂಡಿತ್ತು. ಅಂಥ ಮುಕ್ತತೆ ನಮ್ಮ ರಾಜ್ಯದ ಹೋರಾಟಗಾರರಿಗೆ ಇದೆಯೇ? ಇವರೇನಾದರೂ ಅನ್ಯಭಾಷಿಕರನ್ನು ಅಂಥ ಪ್ರೀತಿಯಿಂದ ಒಳಗೊಂಡು ಕನ್ನಡ ಕಲಿಸುವ ಕೆಲಸವನ್ನು ಮಾಡಿಯಾರೇ? ನವೆಂಬರ್ ತಿಂಗಳಲ್ಲಿ, ಹಿಂದಿನ ವರ್ಷದ ಹರಿದು ಮುಕ್ಕಾಗಿ ಸುಕ್ಕುಗಟ್ಟಿದ ಕನ್ನಡ ಬಾವುಟವನ್ನು ಬದಲಿಸಿ ಹೊಸ ಬಾವುಟ ಏರಿಸಿದೊಡನೆ ಕನ್ನಡ ಬೆಳೆಯುವುದಿಲ್ಲ. ನವೆಂಬರ್ ಒಂದರಂದು ಐಟಿ ಕಂಪೆನಿಗಳಿಗೆ ನುಗ್ಗಿ ಧಮಕಿ ಹಾಕಿ ದುಡ್ಡು ವಸೂಲು ಮಾಡುವುದರಿಂದ ಅಥವಾ ಅವರ ಕಿಟಕಿ ಗಾಜು ಒಡೆದು ಪುಡಿಗಟ್ಟುವುದರಿಂದ ಕನ್ನಡ ಒಂದಿಂಚೂ ಉದ್ಧಾರವಾಗುವುದಿಲ್ಲ. ಆಂಗ್ಲ ಅಥವಾ ಹಿಂದೀ ಭಾಷೆಯ ಬೋರ್ಡುಗಳಿಗೆ ಮಸಿ ಬಳಿಯುವುದರಿಂದ ಕನ್ನಡದ ಬೆಳವಣಿಗೆ ಖಂಡಿತಾ ಸಾಧ್ಯವಿಲ್ಲ. ಅನ್ಯಭಾಷಿಕರಿಗೆ ತೊಂದರೆ ಕೊಟ್ಟು, ಹಿಂಸಿಸಿ, ಇಲ್ಲವೇ ಅಪಹಾಸ್ಯ ಮಾಡಿ ನಮ್ಮ ಭಾಷೆಯನ್ನು ಬೆಳೆಸುವ, ಉಳಿಸುವ ಧೋರಣೆ ಮುಟ್ಟಾಳತನದ್ದು. ತಮ್ಮ ದೇಶದ ನಾಲ್ಕು ಗಡಿಯೊಳಗೆ ಇಂದಿಗೂ ಬಂಧಿಗಳಾಗಿ ಉಳಿದಿರುವ ಫ್ರೆಂಚರು ಮತ್ತು ಅತಿ ಭಾಷಾಭಿಮಾನದಿಂದ ತಮ್ಮ ಬೆಳವಣಿಗೆಗೆ ಬೇಲಿ ಹಾಕಿಕೊಂಡಿರುವ ತಮಿಳರು ನಮ್ಮ ಭಾಷಾಭಿಮಾನಕ್ಕೆ ಪ್ರೇರಣೆ ಆಗಬಾರದು. ನಮಗೆ ಉದಾಹರಣೆಯಾಗಬೇಕಾದ್ದು ಇಂಗ್ಲೀಷ್ ಭಾಷಿಕರ ವಿಶ್ವದೃಷ್ಟಿ. ಎಲ್ಲ ಆಟಗಳಲ್ಲೂ ನಿಗದಿತ ವೃತ್ತಕ್ಕಿಂತ ಚೆಂಡು ಹೊರ ಹೋದಾಗ ಔಟ್ ಎಂದು ಪರಿಗಣಿಸಿದರೆ ಬ್ರಿಟಿಷರು ಮಾತ್ರ ತಮ್ಮ ಆಟದಲ್ಲಿ ಅದಕ್ಕೆ ಆರಂಕ ಕೊಟ್ಟದ್ದು ನಮಗೆ ಪ್ರೇರಣೆ ಆಗಬೇಕು. ಆದಷ್ಟೂ ಬೆಳೆಯುವ, ವಿಕಾಸ ಪಡೆಯುವ ಕೆಲಸ ಆದಾಗ ಮಾತ್ರ ಭಾಷೆಯೂ ಬೆಳೆಯುತ್ತದೆ. ಈ ಎಲ್ಲ ನಿಟ್ಟಿನಿಂದ ನೋಡಿದಾಗ, ಮೆಟ್ರೋದಲ್ಲಿ ಹಿಂದಿ ಕಾಣಿಸಿಕೊಂಡಿತೆಂದು ಅದಕ್ಕೊಂದು ಹೋರಾಟ ಮಾಡಿ ಹಾರಾಡುತ್ತಿರುವವರನ್ನು ಕಂಡು ನಗು ಬರುತ್ತದೆ. ಪ್ರಚಾರಕ್ಕಾಗಿ ಇಷ್ಟೊಂದು ಬರಗೆಡಬೇಕೇ! ರಾಜಕಾರಣಿಗಳ ಕಣ್ಣಿಗೆ ಮಹಾನ್ ಶಕ್ತಿಗಳಂತೆ ಕಾಣಲು ಇಷ್ಟೆಲ್ಲ ಕಸರತ್ತು ಬೇಕೆ? ಇನ್ನೇನು ನಾಲ್ಕೈದು ತಿಂಗಳು ಹೋದರೆ ನಡೆಯುವ ಚುನಾವಣೆಗೆ ಮಾಡುತ್ತಿರುವ ತಾಲೀಮು ಇದು; ತಮ್ಮ ಶಕ್ತಿ ಪ್ರದರ್ಶನ ಮಾಡಿ ಒಂದಷ್ಟು ಲಾಭ ಗಿಟ್ಟಿಸುವ ಲೆಕ್ಕಾಚಾರ ಇದು ಎಂದು ತಿಳಿಯದಷ್ಟು ಮೂರ್ಖರಾಗಿ ಈಗಿನ ಪ್ರಜ್ಞಾವಂತ ಜನ ಉಳಿದಿಲ್ಲ.

ಹೋರಾಟಗಾರರು (1) ಕನ್ನಡ ಮೊದಲ ಸ್ಥಾನದಲ್ಲಿರುವ ತ್ರಿಭಾಷಾ ಸೂತ್ರದಲ್ಲಿ ಹಿಂದಿ ಕಾಣಿಸಿಕೊಂಡದ್ದರಿಂದಲೇ “ಹಿಂದಿ ಹೇರಿಕೆ” ಆದದ್ದು ಹೇಗೆ ಎಂಬುದನ್ನು ವಿವರಿಸಲಿ. (2) ಹಿಂದಿಯಿಂದ ಆಗುತ್ತಿರುವ ಅಥವಾ ಆಗಲಿರುವ ಅನ್ಯಾಯ ಇಂಗ್ಲೀಷಿನಿಂದ ಯಾಕೆ, ಹೇಗೆ ಆಗಿಲ್ಲ ಎಂಬುದನ್ನು ವಿವರಿಸಲಿ. (3) ಮೆಟ್ರೋದ ಬೋರ್ಡುಗಳಿಂದ ಹಿಂದಿಯನ್ನು ಅಳಿಸಿದೊಡನೆ ಅವರು ವಿವರಿಸುತ್ತಿರುವ ಎಲ್ಲ ಸಮಸ್ಯೆಗಳು ತಟ್ಟನೆ ಪರಿಹಾರವಾಗುತ್ತವೆ ಎಂಬ ಭರವಸೆ ಕೊಡಲಿ. (4) ಹಿಂದಿಯನ್ನು ಮೆಟ್ರೋಗಳಿಂದ ಕೈ ಬಿಟ್ಟೊಡನೆ ಕನ್ನಡದ ಉದ್ಧಾರ ಹೇಗಾಯಿತು ಎಂಬುದನ್ನು ಪುರಾವೆ ಮೂಲಕ ತೋರಿಸಲಿ. (5) ಇಂಗ್ಲೀಷ್ ಅನ್ನ ಕೊಡೋ ಭಾಷೆ; ಉದ್ಯೋಗ ಸೃಷ್ಟಿಸೋ ಭಾಷೆ. ಹಾಗಾಗಿ ಅದನ್ನು ವಿರೋಧಿಸಬಾರದು. ಇಂಗ್ಲೀಷ್ ಯೂನಿವರ್ಸಲಿ ಆಕ್ಸೆಪ್ಟೆಡ್ ಭಾಷೆ. ಹಾಗಾಗಿ ಅದನ್ನು ವಿರೋಧಿಸೋ ತಾಕತ್ತು, ಮೀಟ್ರು ತಮಗಿಲ್ಲ ಎಂದೆಲ್ಲ ವಿಚಿತ್ರ ತರ್ಕ ಹೂಡಿ ಪರಂಗಿ ಭಾಷೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಸೋಕಾಲ್ಡ್ ಹೋರಾಟಗಾರರು ತಾವು ಮಾಡೋ ಹೋರಾಟವೆಲ್ಲ ತಮಾಷೆಗಾಗಿ ಎಂಬುದನ್ನಾದರೂ ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳಲಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬೆಂಗಳೂರಿನ ಮೆಟ್ರೋದಲ್ಲಿ ಹಿಂದಿ ಮತ್ತು ಇಂಗ್ಲೀಷ್ ಎರಡೂ ಬೇಡ; ಕನ್ನಡವೊಂದೇ ಸಾಕು ಎಂದು, ತಾಕತ್ತಿದ್ದರೆ, ಹೋರಾಟವೆಂಬ ನಾಟಕವನ್ನಾದರೂ ಮಾಡಿ ತೋರಿಸಲಿ. ಮೆಟ್ರೋಗಳಲ್ಲಿ ಕನ್ನಡದ ಸೂಚನಾ ಫಲಕವೊಂದೇ ಸಾಕು ಎಂದು ಇವರು ಹೋರಾಟ ಮಾಡಿದರೆ ಅದಕ್ಕೆ ನನ್ನ ಬೆಂಬಲ ಇದೆ. ಹಿಂದಿ ಹೋಗಲಿ, ಇಂಗ್ಲೀಷ್ ಉಳಿಯಲಿ ಎಂದು ಎಲ್ಲಿಯವರೆಗೆ ಈ ಹೋರಾಟಗಾರರು ಆಷಾಢಭೂತಿತನ ಮೆರೆಯುತ್ತಾರೋ ಅಲ್ಲಿಯವರೆಗೆ ಅವರನ್ನು ಕನ್ನಡಪರ ಹೋರಾಟಗಾರರು ಎಂದು ನಾನು ಒಪ್ಪಿಕೊಳ್ಳಲಾರೆ.

ಈಗಾಗಲೇ ಹೇಳಿರುವ ಮಾತನ್ನು ಮತ್ತೊಮ್ಮೆ ಹೇಳಿ ಈ ಬರಹವನ್ನು ಮುಗಿಸುತ್ತೇನೆ: ಕನ್ನಡ ಉಳಿದೆಲ್ಲ ಭಾಷೆಗಳ ಜೊತೆ ಟ್ರ್ಯಾಕಿನಲ್ಲಿ ಓಡಿ ಜೈಸಿ ಸೈ ಅನ್ನಿಸಿಕೊಳ್ಳಲಿ. ಅಂಥ ತಾಕತ್ತು ನನ್ನ ಭಾಷೆಗೆ ಖಂಡಿತಾ ಇದೆ. ಉಳಿದೆಲ್ಲರನ್ನು ಬದಿಯಲ್ಲಿರಿಸಿ ತಾನೊಬ್ಬನೇ ಟ್ರ್ಯಾಕಲ್ಲಿ ಓಡಿ ಚಿನ್ನದ ಪದಕ ಪಡೆಯುವುದರಲ್ಲಿ ಪುರುಷಾರ್ಥವೇನಿದೆಯೋ ನನಗೆ ಗೊತ್ತಿಲ್ಲ.

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post