X

ಹನಿ ಹನಿ ಮಳೆಯ ಕಹಾನಿ

ಮೇ ತಿಂಗಳು ಕಾಲಿಟ್ಟಿತೆಂದರೆ ನೀರೆಲ್ಲಾ ಖಾಲಿ ಖಾಲಿ. ಜಲ ಮೂಲಗಳಾದ ನದಿ, ಕೆರೆ, ಕಟ್ಟೆ, ಕಾಲುವೆಗಳೆಲ್ಲಾ ಒಣಗಿ ಬಿಸಿಲ ತಾಪಕ್ಕೆ ಭಣಗುಡುತ್ತವೆ. ವರುಣದೇವ ಕೃಪೆ ತೋರುವವರೆಗೆ ಬೇಸಿಗೆಯ ರಣ ಬಿಸಿಲನ್ನು ತಡೆದುಕೊಳ್ಳುವುದು ಜೀವ ಸಂಕುಲಗಳಿಗೆ ಪ್ರಾಣಸಂಕಟ! ಬಿಸಿಲ ಬೇಗೆಗೆ ಗಾರು ಬಡಿದು ಹೋಗುವ ಭುವಿಯ ಒಡಲಿಗೆ ತಂಪೆರುವ ಗಾರುಡಿಗನಾರಾದರೂ ಇದ್ದರೆ ಅದು ಮುಂಗಾರು ಮಾತ್ರ. ಹಾಗಾಗಿಯೇ ಮಳೆ ಹಾಗೂ ಇಳೆಯ ನಡುವೆ ಬಿಡಿಸಲಾಗದ ಬಂಧವಿದೆ ಎನ್ನುವುದು. ಆರಂಭದಲ್ಲಿ ಭೂಮಿಯ ಮೇಲೆ ಕಳೆಗಳು ಹುಟ್ಟಿದರೂ ಮತ್ತೆ ಅವು ಕಳೆದು ಹೋಗಿ ಭುವಿ ಹಸುರುಡುಗೆಯ ಕಳೆಯೊಂದಿಗೆ ಕಂಗೊಳಿಸುವಂತೆ ಮಾಡುವುದು ಇದೇ ಮಳೆ.

ಕೆಲವು ಭಾರಿ ಇದ್ದಕ್ಕಿದ್ದಂತೆ ಮಳೆ ಕೈಕೊಡುತ್ತದೆ. ಮಳೆ ಯಾವಾಗ ಬಂದೀತೆಂಬ ಹವಾಮಾನ ಇಲಾಖೆಯ ಲೆಕ್ಕಾಚಾರ ತಲೆಕೆಳಗಾಗಿ ಅದು ‘ಅವಮಾನ’ ಸಮಾಚಾರ ಆಗುವುದೂ ಇದೆ.  ಹಿಂದೆಲ್ಲಾ ಹಾಡಿನ ಮೂಲಕವೇ ಮಳೆ ಸುರಿಸುತ್ತಿದ್ದರಂತೆ. ಆದರೆ ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಮಳೆ ಸುರಿಸುವ ಕಲರ್ ಕಲರ್ ಉಪಾಯಗಳು ಚಾಲ್ತಿಯಲ್ಲಿವೆ ಬಿಡಿ. ಮೋಡ ಬಿತ್ತನೆ ಮಾಡುವ ಮೋಡನಂಬಿಕೆ, ಯಜ್ಞ ಹೋಮ ಹವನಾದಿಗಳೆಂಬ ಮೂಢನಂಬಿಕೆಗಳು ಅದರಲ್ಲಿ ಪ್ರಮುಖ. ಈ ಸಲವಂತೂ ಓರ್ವ ಮಾಜಿ ಮುಖ್ಯಮಂತ್ರಿಗಳು ನಾನು ಮಾಡಿದ ಪೂಜೆಗೇ ಮಳೆ ಬಂದಿದ್ದು ಎಂದು ಘೋಷಿಸಿಕೊಂಡು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ಸುಳ್ಳಲ್ಲ.

ನಮ್ಮ ಜನನಾಯಕರು, ರಾಜಕೀಯ ಪಕ್ಷಗಳು ತಮ್ಮನ್ನು ತಾವು ರೈತಪರ ಎಂದು ಕರೆದುಕೊಂಡು ಬೀಗುವುದಿದೆ. ಅಸಲಿಗೆ ಮಳೆ ನಿಜಾರ್ಥದ ರೈತಪರ. ಆದರೂ ಒಮ್ಮೊಮ್ಮೆ ಮಳೆ ಕೂಡಾ ರೈತರನ್ನು ವಂಚಿಸಿಬಿಡುತ್ತದೆಯೆಂದರೆ ಇನ್ನು ನಮ್ಮ ರಾಜಕಾರಣಿಗಳು ವಂಚಿಸದೆ ಬಿಟ್ಟಾರೇ? ಇನ್ನು ರೈತರನ್ನು ಕೇಳಿದರೆ ಮಳೆ ಬಗ್ಗೆ ಅವರ ಅಭಿಪ್ರಾಯ ಸ್ಥಾಯಿಯಾದದ್ದು. ಪ್ರತೀ ವರ್ಷವೂ ಅವರದು ಒಂದೇ ಮಾತು “ಈ ವರ್ಷಕ್ಕಿಂತ ಕಳೆದ ವರ್ಷವೇ ಮಳೆ ಚೆನ್ನಾಗಿತ್ತು. ಒಳ್ಳೆ ಬೆಳೆ ಕೂಡಾ ಬಂದಿತ್ತು”.

ಹಾಗೆ ನೋಡಿದರೆ ಮಳೆ ಹಾಗೂ ಮಕ್ಕಳ ನಡುವೆಯೂ ಅವಿನಾಭಾವ ಸಂಬಂಧವಿದೆ. ಮಲೆನಾಡು ಮತ್ತು ಕರಾವಳಿ ಭಾಗದ ಮಕ್ಕಳಿಗಂತೂ ಮಳೆಯೆಂದರೆ ಶಾಲೆಗೆ ರಜೆ ಸಿಗಲೊಂದು ಕಾರಣ. ಮಳೆ ರೈತರೊಂದಿಗೆ ಅಷ್ಟೇ ಅಲ್ಲಾ ಮಕ್ಕಳೊಂದಿಗೂ ಕಣ್ಣಾಮುಚ್ಚಾಲೆ ಆಡುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ, ಮಕ್ಕಳು ಶಾಲೆಗೆ ಹೋಗುವ ಮತ್ತು ಶಾಲೆ ಬಿಟ್ಟು ಮನೆಗೆ ಹೊರಡುವ ಸಂದರ್ಭದಲ್ಲೇ ಮಳೆ ಬರುತ್ತದೆ. ಇನ್ನೇನು ಮಳೆ ಹೆಚ್ಚಾಗಿ ರಜೆ ಕೊಟ್ಟಾರು ಎಂಬ ನಿರೀಕ್ಷೆಯೊಂದಿಗೆ ಮಳೆಯಲ್ಲೇ ಪ್ರಯಾಸಪಟ್ಟು ಶಾಲೆಗೆ ಬಂದರೆ, ಮಕ್ಕಳು ತರಗತಿ ಕೊಠಡಿ ಹೊಕ್ಕುತ್ತಿದ್ದಂತೆ ಮಳೆ ನಾಪತ್ತೆ!!

ಅತಿವೃಷ್ಟಿಯೇ ಆಗಲಿ ಅನಾವೃಷ್ಟಿಯೇ ಆಗಲಿ ಕೆಲವರಿಗೆ ಅದೃಷ್ಟ ಖುಲಾಯಿಸಿದಂತೆಯೇ ಸರಿ. ಒಟ್ಟಾರೆಯಾಗಿ ಈ ವೃಷ್ಟಿ ಅಂತವರಿಗೆ ಕೂತಲ್ಲೇ ಒಂದಷ್ಟು ಸಂಪತ್ತನ್ನು ವೃದ್ಧಿಸಿಕೊಳ್ಳಲು ಇಲ್ಲವೇ ಸೃಷ್ಟಿಸಿಕೊಳ್ಳಲು ಒಂದು ದಾರಿ. ಪರಿಹಾರದ ಹೆಸರಲ್ಲಿ ನಡೆಯುವ ‘ಸ್ವಾಹಾ’ಕಾರವೇ ಇದರ ಹಿಂದಿನ ಗುಟ್ಟು. ರಾಜಕಾರಣಿಗಳು ಪರಸ್ಪರ ಕೆಸರೆರಚಿಕೊಳ್ಳುವುದು ಸಾಮಾನ್ಯ. ಚರಂಡಿ ವ್ಯವಸ್ಥೆಯ ವೈಫಲ್ಯತೆಯಿಂದ  ಮಳೆಗಾಲದಲ್ಲಿ ರಸ್ತೆಯಲ್ಲಿ ಹರಡಿಕೊಳ್ಳುವ ಕೆಸರು ನಮ್ಮ ರಾಜಕಾರಣಿಗಳ ಮುಖಕ್ಕೇ ಎರಚಿದ ಕೆಸರೇ ಸರಿ.

ಮಳೆಗಾಲದಲ್ಲಿ ಎಲ್ಲರೂ ಬಲೇ ಛತ್ರಿಗಳೇ! “ಛತ್ರಿ ಇದ್ದರಷ್ಟೇ ಹೊರಗೆ ಕಾಲು ಹಾಕು” ಎನ್ನುವಂತಿರುತ್ತದೆ ಮಳೆಗಾಲದ ಪ್ರಭಾವ. ಮಳೆಯ ರೊಮ್ಯಾಂಟಿಕ್ ವಾತಾವರಣಕ್ಕೂ ಛತ್ರಿಗಳ ಮರೆಯಲ್ಲಿ ನಡೆಯುವ ಕಾರುಬಾರುಗಳಿಗೂ ನೇರ ಸಂಬಂಧವಂತೂ ಇದ್ದೇ ಇದೆ. ಏನೇ ಆದರೂ “ಬಾರಿಷ್” ಹಲವರ ಬದುಕಲ್ಲಿ ‘ಬರೋಸಾ’ ಹುಟ್ಟಿಸುತ್ತದೆ ಎನ್ನುವುದಂತೂ ಸುಳ್ಳಲ್ಲ.

ಓವರ್ ಡೋಸ್: ಮಳೆ ನೀರು ಇಂಗಿಸಲು ಸಾರಿಗೆ ಇಲಾಖೆ ಬಹುದೊಡ್ಡ ಕೊಡುಗೆ ನೀಡುತ್ತಿದೆ, ಗುಂಡಿ ಬಿದ್ದ ರಸ್ತೆಯನ್ನು ರಿಪೇರಿ ಮಾಡದೇ ಇರುವ ಮೂಲಕ!

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post