X

ಚಾರಣದಲ್ಲಿ ಕಂಡ ಬಾನಾಡಿಗಳು – 1

 

ಕಳೆದ ನವೆಂಬರ್ ತಿಂಗಳಲ್ಲಿ (2016) ಯೂತ್ ಹಾಸ್ಟೇಲ್ ಗಂಗೋತ್ರಿ ಘಟಕ, ಮೈಸೂರು ವತಿಯಿಂದ ಶಿವಮೊಗ್ಗ ಜಿಲ್ಲೆಯ ಕೊಲ್ಲೂರು ಸಮೀಪದ ಹಿಡ್ಲುಮನೆ ಜಲಪಾತ ಮತ್ತು ಸಾಗರ ಸಮೀಪದ ದಬ್ಬೆ ಜಲಪಾತಗಳಿಗೆ ಚಾರಣವನ್ನೇರ್ಪಡಿಸಿದ್ದರು. ನಾನು ಸೇರಿ ಐವತ್ತು ಮಂದಿ ಆ ಚಾರಣಕ್ಕೆ ಅಂದು ಸಿದ್ದರಿದ್ದೆವು. ಯೂತ್ ಹಾಸ್ಟೇಲ್‍ನ ಚಾರಣದ ಮಜವೇ ಬೇರೆ. ಅವರುಗಳು ಆಯ್ದುಕೊಳ್ಳುವ ಜಾಗಗಳೇ ಹಾಗೆ, ಅನೇಕರಿಗೆ ನಿಗೂಢ! ಪ್ರವಾಸೀ ತಾಣವೆಂದು ನಾಮಾಂಕಿತವಾಗದ ಜಾಗಗಳಿಗೇ ಅವರ ಪ್ರಾಶಸ್ತ್ಯ. ಸಮಯ ಪಾಲನೆ ಮತ್ತು ಸ್ವಚ್ಛತೆಗೆ ಆದ್ಯತೆ. ನಾವು ಹೋದ ಹಾದಿಯಲ್ಲಿ ಇತರರಿಗೆ ಯಾವ ಕುರುಹೂ ಸಿಗಲಾಗದ ಬಾಧ್ಯತೆ. ಹಾಗಾಗಿ ಪ್ಲಾಸ್ಟಿಕ್ಕ್ ನಿಷಿದ್ಧ. ಸಾಧ್ಯವಾದರೆ ಇತರರು ಎಸೆದ ಪ್ಲಾಸ್ಟಿಕ್ ಕಸವನ್ನೂ ಆಯ್ದುಕೊಳ್ಳಬೇಕೆಂಬ ಆಶಯ. ಮೂವತ್ತು ವರ್ಷಗಳಿಂದ ಇಂಥಾ ಚಾರಿತ್ರ್ಯವುಳ್ಳ ಗಂಗೋತ್ರಿ ಘಟಕ ಸಂಯೋಜಿಸಿದ್ದ ಚಾರಣ ಅಂದು ರಾತ್ರಿ  ಮೈಸೂರಿನ ರೈಲ್ವೇ ನಿಲ್ದಾಣದಿಂದ ಪ್ರಾರಭವಾಯಿತು. ರಾತ್ರಿ 10:00 ಗಂಟೆಗೆ ಹಾಲಕ್ಕಿಯ (ಸಣ್ಣ ಗೂಬೆ) spotted owlet (Athene brama) ಶುಭಶಕುನದ ಹಾಡಿಗೆ ನನ್ನ ಕಿವಿ ಆಲಿಕೆಯಾಗುತ್ತಿರಲು ಬಸ್ ಹೊರಟಿತು. ನಾನೋ ಹಕ್ಕಿ ನೋಡಲೆಂದೇ ಜಲಪಾತಗಳ ಚಾರಣಕ್ಕೆ ಹೊರಟಿದ್ದೆ. ಮಲೆನಾಡಿನ ಹಕ್ಕಿಗಳು ಜಲಸನ್ನಿಧಿಯಲ್ಲಿ ಹೇರಳವಾಗಿ ನೊಡಲು ಸಿಗುತ್ತದೆ ಎಂಬ ನಂಬಿಕೆ ನನ್ನದು. ನನ್ನ ನಂಬಿಕೆಗೆ ಪೂರಕವಾಗಿ ಆ ಗೂಬೆ ಶುಭ ನುಡಿದಿತ್ತು.

ಅಂದು ಬಸ್ಸಿನಲ್ಲಿ ಚಾರಣದ ಉತ್ಸಾಹದಷ್ಟೇ ಮೋದಿಯ ನಗದು ಅಮಾನ್ಯೀಕರಣ (Demonetization) ಪ್ರಭಾವವೂ ಇತ್ತು. 1800ರೂಗಳನ್ನು ನಾವು ತಿಂಗಳು ಮೊದಲೇ ಪ್ರಯಾಣಕ್ಕೆಂದು ಕೊಟ್ಟುದರಿಂದ ಪತ್ತು ಆ 1800ರೂಗಳಲ್ಲಿ 1000 ಮತ್ತು 500ರುಪಾಯಿ ನೋಟುಗಳೇ ಹೆಚ್ಚಿದ್ದುದರಿಂದ, ಮತ್ತು ಅವು ಅಪಮೌಲ್ಯಗೊಂಡುದರಿಂದ ಸಂಘಟಕರಿಗೆ ಬಲು ಕಿರಿಕಿರಿಯಾಗಿತ್ತು. ಹಾಗಾಗಿ ನಾವುಗಳು (51 ಮಂದಿ) 100ರೂಗಳ ನೋಟುಗಳನ್ನು ಸಾಕಷ್ಟು ತಂದು ಅಪಮೌಲ್ಯಗೊಂಡ ನೋಟುಗಳನ್ನು ಬದಲಾಯಿಸಿಕೊಂಡೆವು. ಕೆಲವರು ಆಗ ತಾನೆ ಅನಾವರಣಗೊಂಡಿದ್ದ ನೇರಳೆ ಮೆರುಗಿನ 2000ರೂ ನೋಟನ್ನು ಬಸ್ಸಿನಲ್ಲಿ ಪ್ರದರ್ಶಿಸುತ್ತಿದ್ದರು! ಐವತ್ತೊಂದು ಮಂದಿಗೆ ಬಸ್ ತುಸು ಇಕ್ಕಟ್ಟಾದರೂ, ಪ್ರವಾಸದ ಗುಂಗಿನಲ್ಲಿದ್ದ ನಮಗೆ ಅದರ ಅರಿವಾಗಲಿಲ್ಲ. ಬೆಳಗ್ಗೆ ಸುಮಾರು ನಾಲ್ಕು ಗಂಟೆಗೆ ಶಿವಮೊಗ್ಗ ತಲುಪಿದೆವು. ನಮ್ಮ ಚಾರಣಕ್ಕೆ ಶಿವಮೊಗ್ಗ ಘಟಕದ ಸಹಕಾರವಿತ್ತು. ಹಾಗಾಗಿ ಅಲ್ಲಿಂದ ಗಿರೀಶ್ ಕಾಮತ್ ಎಂಬವರು ನಮ್ಮ ಜೊತೆಯಾದರು. ಎರಡು ಗಂಟೆ ನಮ್ಮ ಪಯಣ ಮುಂದುವರಿಯಿತು. ಹೊಸನಗರದಲ್ಲೊಂದು ವಿರಾಮ. ನಮ್ಮ ಚಾಲಕ ಚಹಾ ಸೇವನೆ ಮಾಡಿದಮೇಲೆ ಹಾಗೆ ಘಾಟಿ ಇಳಿದು ಮುಂಜಾನೆ ಏಳು ಗಂಟೆಗೆ ನಿಟ್ಟೂರು ತಲುಪಿದೆವು. ನಿಟ್ಟೂರಿನಲ್ಲೂ ಯೂತ್ ಹಾಸ್ಟೇಲ್ ಘಟಕವೊಂದಿದೆ. ಅಲ್ಲಿ ತಂಗಲು ಆರು ಭುಜದ ಚಂದದ ಆರು ಬಿದಿರಿನ ಕುಟೀರಗಳಿವೆ. ಸಾಹಸ ಮಾಡಲು ಇಚ್ಛಿಸುವವರಿಗೆ ಅನೇಕ ಸರಕುಗಳು ಅಲ್ಲಿದ್ದವು. ಹಗ್ಗದಲ್ಲಿ ಮೇಲೇರಬಯಸುವವರಿಗೊಂದು ಜಾಗ, ಮರದಿಂದ ಮರಕ್ಕೆ ಹಗ್ಗದಲ್ಲಿ ನೇತು ಸಾಗಬಯಸುವವರಿಗೊಂದು ಜಾಗ.

ನನ್ನಂಥಾ ಚಂಚಲ ಚಿತ್ತದ ಪಕ್ಷಿ ವೀಕ್ಷಕರಿಗಪ್ಪಂಥ ಜಾಗ – ಕೇಳುತ್ತಿತ್ತು ಪಕ್ಷಿಗಳ ಕಲರವ ರಾಗ.

ಕುಟೀರದ ಸುತ್ತೆಲ್ಲ ಸ್ವಾಭಾವಿಕ ಸಸ್ಯ ವೈವಿಧ್ಯಗಳು ಹೇರಳವಾಗಿವೆ. ಅದಲ್ಲದೇ ನಿಸರ್ಗಧಾಮದ ಯಜಮಾನರಾದ ಅಲ್ಲಿನ ಮಂಜಣ್ಣನವರು ಇನ್ನಷ್ಟು ನೆಟ್ಟು ಬೆಳಸಿರುವರು. ಒಟ್ಟಿನಲ್ಲಿ ಮಲೆನಾಡ ಗಿಡಗಳು. ಆ ಗಿಡಮರಗಳ ನಡುವೆ ನಾನು ಸಾಗುತ್ತಿರಲು ಬಜಕ್ಕುರೆ(ತರಗೆಲೆ)ಗಳ ನಡುವೆ ಅರಶಿನ ವರ್ಣದ ಹಕ್ಕಿ ಮೇಯುತ್ತಿತ್ತು. ನನ್ನ ಕಂಡೊಡನೆ ಸುಯ್ಯನೆ ಮೇಲೇರಿತು. ಆಹಾ ಎಂಥಾ ಬಣ್ಣ, ಕಿತ್ತಲೆ ಬಣ್ಣ! Orange-headed thrush (Geokichla citrina). ನನ್ನ ಕ್ಯಮೆರಾಕ್ಕೆ ಪೋಸು ಕೊಟ್ಟು ಹಾರಿ ಬಿಟ್ಟಿತು.

orange headed thrush

ನಿಸರ್ಗಧಾಮದಲ್ಲಿ ಹಾಗೆ ಮುಂದೆ ಸಾಗುವಾಗ ಅಲ್ಲೊಂದು ಕಪ್ಪನೆಯ, ಉದ್ದ ಮತ್ತು ಕವಲು ಬಾಲದ, ಕಾಗೆಯ ತರದ ಹಕ್ಕಿ ಯಾರನ್ನೋ ಅಣಕಿಸುವಂತೆ ಕೂಗುತ್ತಿತ್ತು. ನನ್ನನ್ನಂತೂ ಅಲ್ಲ. ಮತ್ತಿನ್ನಾರನ್ನು? ಅದು ತುರಾಯಿ ಪನ್ನಗಾರಿಯನ್ನು (Crested serpent eagle) ಅಣುಕುಮಾಡುತ್ತಿತ್ತು. ಆ ಹಕ್ಕಿಯ ಹೆಸರು ಭೀಮರಾಜ! Greater racket-tailed drongo (Dicrurus paradiseus). ಇದನ್ನು ಕೊತ್ವಾಲ ಎಂದೂ ಕರೆಯುವರು. ಈ ಹಕ್ಕಿ ಬಲು ಧೈರ್ಯಶಾಲಿ. ಸಣ್ಣ ಪುಟ್ಟ ಹಕ್ಕಿಗಳಿಗೆ ಇದು ಇದ್ದರೇ ಒಂದು ಧೈರ್ಯ. ದೊಡ್ಡ ಹದ್ದುಗಳು ಹಿಡಿದ ಬೇಟೆಯನ್ನು ಕಬಳಿಸುವ ನೈಪುಣ್ಯತೆ ಇದಕ್ಕೆ, ಇದು ಕಾಡಿನ ಜಾಣ! ಹಾಗಾಗಿ ಕಾಜಾಣ.

Greater racket-tailed drongo – ಭೀಮರಾಜ

ಅರೆ ಈ ಕಾಜಾಣ ಯಾಕೆ ಪನ್ನಗಾರಿಯಂತೇ ಕೂಗುತ್ತಿದೆಯೆಂದು ನಾನು ತಿರುಗಿ ನೋಡಿದರೆ, ಅಲೇ ಪಕ್ಕದಲ್ಲಿದ್ದ ಗಾಳಿ ಮರದ ತುದಿಯಲ್ಲಿ ಗರುಡವೊಂದು  Brahminy kite (Haliastur indus) ಇಲಿ ಹಿಡಿದು ಕುಳಿತಿತ್ತು. ಬಹುಶಃ ಆ ಗರುಡನನ್ನು ಈ ಕಾಜಾಣ ಹೆದರುಸುತ್ತಿತ್ತೋ ಏನೋ! ಮುಂದೇನಾಯಿತು ಎಂಬುದನ್ನು ನೋಡುವಷ್ಟು ಸಮಯ ನನ್ನಲ್ಲಿರಲಿಲ್ಲ. ಕನಿಷ್ಠ ಅವಧಿಯಲ್ಲಿ ಗರಿಷ್ಠ ಹಕ್ಕಿ ನೋಡಬೇಕಾದ ಹಂಬಲ ನನ್ನದಾಗಿತ್ತು. ಆ ಸಮಯಕ್ಕೆ ಉಳಿದ ಚಾರಿಣಗರೆಲ್ಲರೂ ಬೆಳಗ್ಗಿನ ತಿಂಡಿಗೆ ಸಿದ್ಧರಾಗಿದ್ದರು. ನನ್ನನ್ನು ತಿಂಡಿಗಾಗಿ ಕರೆಯುವುದು ಕೇಳಿಸಿತು. ತಿಂಡಿ ತಿನ್ನಲು ಅಡುಗೆಕೋಣೆಯತ್ತ ಸಾಗುತ್ತಿದ್ದಾಗ ಅಲ್ಲಿ Y-Y   ಎಂಬ ಕೂಗು, ಅದು ಮಲೆನಾಡಿಗೆ ಮಾತ್ರ ಸೀಮಿತವಾದ ಒಂದು ಪಿಕಳಾರನ ಕೂಗು. ನನ್ನ ಮುಂದೆ ಆ ಹಳದಿ ಹುಬ್ಬಿನ ಪಿಕಳಾರಗಳು – Yellow-browed bulbul (Acritillas indica) ಪ್ರತ್ಯಕ್ಷವಾಗಿದ್ದವು. ಅವನ್ನು ನೋಡುತ್ತಾ ತಿಂಡಿ ತಿನ್ನಲು ಹೋದೆ.

Yellow browed bulbul

ಅಡುಗೆ ಕೊಟ್ಟಿಗೆಯ ಬದಿಯಲ್ಲಿ ಚೆಲ್ಲಿದ ಅನ್ನವನ್ನು ತಿನ್ನಲು ಕಾಡುಕಾಗೆಗಳು / Jungle crow (Corvus macrorhynchos) ಬಲು ಸಂಖ್ಯೆಯಲ್ಲಿ ಕುಳಿತಿದ್ದವು. ತಿಂಡಿ ತಿನ್ನುವಾಗ ಕಾಮಳ್ಳಿಗಳ Southern hill myna (Gracula indica) ಹಿನ್ನಲೆ ಸಂಗೀತ ಕೇಳುತ್ತಿತ್ತು.

ತಿಂಡಿತಿಂದ ನಂತರ ಕೊಡಚಾದ್ರಿ ಪರ್ವತಕ್ಕೆ ಸೇರಿಕೊಂಡಿರುವ ಹಿಡ್ಲುಮನೆ ಜಲಪಾತಕ್ಕೆ ನಮ್ಮ ಪ್ರಯಾಣವೆಂದು ನಿಶ್ಚಯವಾಗಿತ್ತು. ಮಂಜಣ್ಣನವರು ನಮಗೆ ರಮೇಶನೆಂಬವರನ್ನು ಮಾರ್ಗದರ್ಶಿ ಆಗಿ ಕೊಟ್ಟರು. ರಮೇಶಣ್ಣ ಚಾರಣ, ಪರ್ವತಾರೋಹಣ,ಸಾಹಸ ಕ್ರೀಡೆಗಳಲ್ಲಿ ಪರಿಣಿತರು. ಸುತ್ತಲಿನ ಎಲ್ಲಾ ಜಲಪಾತಗಳನ್ನು ಅನೇಕ ಬಾರಿ ನೋಡಿದವರು. ಅವರ ನಿರ್ದೇಶನದಲ್ಲಿ ನಮ್ಮ ಪ್ರಯಾಣ ಹಿಡ್ಲುಮನೆಯತ್ತ ಸಾಗಿತು. ಸುಮಾರು ಐದು ಕಿ.ಮೀ ಬಸ್ಸಿನಲ್ಲಿ ಪ್ರಯಾಣ ಮಾಡಿದ ಅನಂತರ ಎಂಟು ಕಿ.ಮೀ ಕಾಲ್ನಡಿಗೆ ಯಾನ. ದಾರಿಯಲ್ಲಿ ತುರಾಯಿ ಪನ್ನಗಾರಿಯನ್ನು Crested serpent eagle (Spilornis cheela) ಹೆಚ್ಚಿನವರಿಗೆ ತೋರಿಸಿದೆ.

Crested serpant eagle – ತುರಾಯಿ ಪನ್ನಗಾರಿ

ತುರಾಯಿ ಪನ್ನಗಾರಿ ಎಂದರೆ ಒಂದು ಜಾತಿಯ ಹದ್ದು. ಇದಕ್ಕೆ ತಲೆಯಲ್ಲಿ ಸಣ್ಣ ಜುಟ್ಟು. ಹಾವುಗಳಿಗೆ ವೈರಿ, ಹಾಗಾಗಿ ಪನ್ನಗಾರಿ(ಪನ್ನಗ+ಅರಿ). ಹಾಗೆ ಮುಂದೆ ಸಾಗುತ್ತಿರುವಾಗ ಮತ್ತೊಂದು ಜುಟ್ಟಿನ ಹದ್ದಿನ ದರ್ಶನ ನಮಗಾಯಿತು. ಈ ಹದ್ದು ಜೇನ್ನೊಣಕ್ಕೆ ವೈರಿ! ಹೆಸರು ಜೇನು ಗಿಡುಗ Crested honey buzzard (Pernis ptilorhynchus). ದೊಡ್ಡ ಮರದ ತುದಿಯ ಒಣ ರೆಂಬೆಯೊಂದರಲ್ಲಿ ಬಿಸಿಲು ಕಾಯಿಸಿಕೊಳ್ಳುತ್ತಾ ಕುಳಿತಿತ್ತು. ಕೊಂಬೆಯ ಬಣ್ಣವೂ ಹದ್ದಿನ ಬಣ್ಣವೂ ಒಂದೇ ನಮೂನೆ ಇದ್ದುದರಿಂದ ನನ್ನೊಂದಿಗೆ ಬಂದಿದ್ದ ಸಹ ಚಾರಣಿಗರಿಗೆ ಅದನ್ನು ತೋರಿಸಲು ತುಸು ಪ್ರಯಾಸ ಪಟ್ಟೆ.

Crested honey buzzard

ಮುಂದಿನ ಹಾದಿಯಲ್ಲಿ ಪುಟ್ಟ ಹಕ್ಕಿಗಳಾದ ಹಸಿರು ಉಲಿಹಕ್ಕಿ / Greenish warbler (Phylloscopus trochiloides), ಕಪ್ಪು ಕತ್ತಿನ ರಾಟೆವಾಳ Black-throated munia  (Lonchura kelaarti), ಅಲ್ಲಲ್ಲಿ ಬೂದು ಕುಂಡೆಕುಸುಕಗಳು Grey wagtail (Motacilla cinerea)  ಕಂಡವು. ಸುಮಾರು ಐದು ಕಿ.ಮೀ ನಡೆದ ನಂತರ ಅಡವಿ ದಟ್ಟವಾಯಿತು. ದೊಡ್ಡ ದೊಡ್ಡ ಮರಗಳು, ಅದರ ಕೆಳ ಹಂತದಲ್ಲಿ ಸಣ್ಣ ಸಣ್ಣ ಮರಗಳು, ಮತ್ತೂ ಕೆಳಹಂತದಲ್ಲಿ ಬಲ್ಲೆಗಳು, ಬಳ್ಳಿಗಳು. ಈ ದಟ್ಟಣೆಗೆ ಸಾಕ್ಷಿ ಎಂಬಂತೆ ಅಲ್ಲಿ ನನಗೆ ಅಡವಿ ಸಿಪಿಲೆಯ ಕೂಗು ಕೇಳಿಸಿತು. ನನ್ನೆದುರು ನಡೆದು ಹೋಗುತ್ತಿದ್ದವರು ಒಮ್ಮೆಲೆ ಬೆಚ್ಚಿ ಹಾಗೆ ಸ್ಥಬ್ದರಾಗಿ ನಿಂತರು. ಅವರು ಹೋಗುತ್ತಿದ್ದ ಹಾದಿಯಲ್ಲಿದ್ದ ತರಗೆಲೆಗಳ ರಾಶಿಯಿಂದ ಎರಡು ತರಗೆಲೆಗಳು ಹಾರಿದ ಅನುಭವವಾಯಿತಂತೆ. ಹೌದು ಅದುವೇ ಅಡವಿ ಸಿಪಿಲೆ/ಕುಂಡೆಕುಸುಕ / Forest wagtail (Dendronanthus indicus). ಅಂಥಾ ವರ್ಣ ತಾದ್ರೂಪ್ಯ ಅದಕ್ಕೆ. ಅದರ ಗುಣವೈಶಿಷ್ಟ್ಯವನ್ನು ಅವರಿಗೆ ವಿವರಿಸುತ್ತಾ ದಟ್ಟಾರಣ್ಯದಲ್ಲಿ ಮುಂದುವರಿದೆವು.

Forest wagtail – ಅಡವಿ ಸಿಪಿಲೆ

ಅರೆ ಅರೆ ಏನದು? ಎದುರಿಗಿದ್ದ ರೆಂಜೆ ಮರದಲ್ಲಿ ಒಂದು ಮೇಣದ ಗೊಂಬೆ ಭಾಸವಾಯಿತು. ಅದುವೇ ಹಸಿರು ಪಾರಿವಾಳ Green imperial pigeon (Ducula aenea). ನನ್ನ ಆರು ವರ್ಷದ ಪಕ್ಷಿ ವೀಕ್ಷಣೆಯಲ್ಲಿ ಇಷ್ಟು ಹತ್ತಿರದಲ್ಲಿ ಈ ಹಕ್ಕಿ ಕಂಡಿರಲಿಲ್ಲ. ನಾವು ಸುಮಾರು ಹದಿನೈದು ಜನ ಅದರ ಸಮೀಪದಲ್ಲೇ ಇದ್ದೆವು. ಅದು ಮಾತ್ರ ಒಂದು ಚೂರೂ ಜರುಗಲಿಲ್ಲ. ಅದಕ್ಕೆ ಹೆದರಿಕೆ ಆಗಲೇ ಇಲ್ಲವೋ ಅಥವ ಹೆದರಿ ಹಾಗೆ ಮುದುಡಿತೋ ನಾನರಿಯೆ! ನನಗಂತೂ ಬಹಳ ಒಳ್ಳೆಯ ಛಾಯಾಚಿತ್ರ ಲಭಿಸಿತ್ತು. ಚಾರಣದ ದಣಿವು ಇಂಗಿತ್ತು.

Green Imperial Pigeon

ಒಂದು ಕಿ.ಮೀ ಮುಂದೆ ಸಾಗಿದಾಗ ಅಲ್ಲೊಂದು ಭಟ್ಟರ ಮನೆ ಸಿಕ್ಕಿತು. ಅಲ್ಲಿ ನಾವು ಮಜ್ಜಿಗೆ, ತಂಪು ಪಾನೀಯ ಇತ್ಯಾದಿಗಳನ್ನು ಸೇವಿಸಿ, ಮುಂದಿನ ಎರಡು ಕಿ.ಮೀ ಏರಲು ಸಿದ್ಧವಾದೆವು. ಮನೆಯ ಹಿಂಬದಿಯ ಗದ್ದೆಯನ್ನು ದಾಟಿ ಮುಂದೆ ಹೋದೊಡನೆ ನಮಗಲ್ಲಿ ನದಿ ಸಿಗುತ್ತದೆ. ತುಸು ಸಾಗಿದಾಗ ಜಲಪಾತ ಕಾಣಿಸುವುದು ಹಿಡ್ಲುಮನೆ ಜಲಪಾತ, ಏಳು ಹಂತದಲ್ಲಿ ಬೀಳುತ್ತದೆ. ಮೊದಲನೇ ಹಂತದಿಂದ ಏಳನೇ ಹಂತಕ್ಕೆ ಸುಮಾರು ಮುಕ್ಕಾಲು ಕಿ.ಮೀ ಕ್ರಮಿಸಬೇಕು. ಏಳೂ ಹಂತಗಳು ಪೂರ್ತಿ ಕಪ್ಪುಶಿಲೆಯಿಂದ ಕೂಡಿದೆ.

Hidlumane falls

ಮಳೆಗಾಲದಲ್ಲಿ ನೀರ ಹರಿವು ಹೆಚ್ಚಿರುವುದರಿಂದ ಮೇಲೇರುವುದು ಅಸಾಧ್ಯ. ಅದು ನವಂಬರ್ ತಿಂಗಳಾದ್ದರಿಂದ ನೀರ ಪ್ರಮಾಣ ಕಡಿಮೆ ಇದ್ದುದರಿಂದ ನಾವು ಜಲಪಾತದ  ಪಕ್ಕದ ಕಾಡಿನಲ್ಲಿ  ದಾರಿ ಮಾಡಿಕೊಂಡು ಏರಿದೆವು. ಮೊದಲನೇ ಹಂತ ಬಲು ಸೊಗಸಾಗಿದೆ. ಕೊಡಚಾದ್ರಿ ಬೆಟ್ಟದಿಂದ ಇದು ಧುಮುಕುತ್ತದೆ. ಜಲಪಾತದ ನೀರ ಹರಿವಿನಲ್ಲಿ ನಾವುಗಳು ಒಂದು ಗಂಟೆ ಕಾಲ ನಲಿದಾಡಿದೆವು. ನೀರಾಟವಾಡುತ್ತಿರುವಾಗ ಅಲ್ಲೊಂದು ಜಲಪಾತದ ನೀರಿನಷ್ಟೇ ಬಿಳಿಯಾದ, ಬಿಳಿ ಉದ್ದ ಬಾಲದ ಹಕ್ಕಿ ಹಾರಾಡುತ್ತಿತ್ತು. ಅಲ್ಲಿ ವಾಸವಾಗಿದ್ದ ನುಸಿಗಳನ್ನು ಕಬಳಿಸುತ್ತಿತ್ತು. ಅದುವೇ ರಾಜ ಹಕ್ಕಿ / Indian paradise flycatcher (Terpsiphone paradisi). ಪಕ್ಷಿವೀಕ್ಷಣೆಯಲ್ಲಿ ಆಸಕ್ತಿ ಇಲ್ಲದ ಸಹಚಾರಣಿಗರಿಗೂ ಆಸಕ್ತಿಯ ಬೀಜ  ಆ ಹಕ್ಕಿ ಬಿತ್ತಿತು.

ಹಿಡ್ಲುಮನೆಯ ಹಾದಿ ಬಹಳ ಸುಗಮವಾಗಿತ್ತು. ನಮ್ಮ ತಂಡದ ಐವತ್ತು ಮಂದಿಯೂ ಈ ಜಲಪಾತದ ವೈಭವವನ್ನು ಕಂಡರು. ಎಲ್ಲರೂ ಮನಸೋಚ್ಛೆ ನೀರಾಟ ಮುಗಿಸಿ ಬಂದ ದಾರಿಯಲ್ಲೇ ಹಿಂದಿರುಗಿದೆವು.

ImagE:

hidlumane falls

ಹಿಂತಿರುಗುವಾಗ ಈಂದು(ಬೈನೆ) ಮರದ ಹಣ್ಣನ್ನು ತಿನ್ನುತ್ತಿತ್ತು ಆ ಹಸಿರು ಪಾರಿವಾಳ.

green imperial pegion

ಬೇಲಿಯಲ್ಲಿ ನೆಟ್ಟಿದ್ದ ದಾಸವಾಳದ ಹೂವಿಗೆ ಕೆಂಪುಪೃಷ್ಠದ ಸೂರಕ್ಕಿ Crimson-backed sunbird or small sunbird (Leptocoma minima) ಮಕರಂದ ಹೀರಲು ಬಂದಿತ್ತು. ಈ ಸೂರಕ್ಕಿ, ಸೂರಕ್ಕಿಗಳಲ್ಲೇ ಅತಿ ಪುಟ್ಟದು ಮತ್ತು ಪಶ್ಚಿಮಘಟ್ಟಕ್ಕೆ ಮಾತ್ರ ಸೀಮಿತವಾದ ವರ್ಣಮಯ ಪಕ್ಷಿ.

crimson backed sunbird

ಇಂಥಾ ಹಕ್ಕಿಗಳ ಆಟ ನೋಡುತ್ತಾ ಸಾಗಿದಾಗ ಬಸ್ ನಿಲ್ಲಿಸಿದ ಜಾಗ ಬಂದೇ ಬಿಟ್ಟಿತು. ಮಿಕ್ಕವರು ನಿಧಾನವಿದ್ದುದರಿಂದ ಬರಲು ಒಂದು ಗಂಟೆ ಅಧಿಕವಾಗಿ ತೆಗೆದುಕೊಂಡರು. ಆ ಸಮಯವನ್ನು ಸಾರ್ಥಕ ಗೊಳಿಸುವ ಸಲುವಾಗಿ ಅಲ್ಲೇ ಆಸುಪಾಸಿನಲ್ಲಿಹಕ್ಕಿ, ಚಿಟ್ಟೆಗಳನ್ನು ವೀಕ್ಷಿಸತೊಡಗಿದೆ. ಸಮಯ ಮಧ್ಯಾಹ್ನ 2 ಆಗಿದ್ದುದರಿಂದ ಅಂಥಾ ಚಟುವಟಿಕೆಗಳೇನೂ ಇರಲಿಲ್ಲ. ಆದರೂ ಕಂದು ಎದೆಯ ನೊಣಹಿಡುಕ Brown-breasted flycatcher  (Muscicapa muttui) ಹಕ್ಕಿ ಬಂದು ನನ್ನ ಹಕ್ಕಿಗಳ ಪಟ್ಟಿಗೆ ಸೇರಿತು.

brown breasted flycatcher

ಮಧ್ಯಾಹ್ನದ ಊಟವನ್ನು 3-4 ಗಂಟೆ ಮಧ್ಯದಲ್ಲಿ ಮಂಜಣ್ಣನವರ ನಿಸರ್ಗಧಾಮದಲ್ಲಿ ಮುಗಿಸಿ, ಕೊಲ್ಲೂರು ಹಾದಿಯಲ್ಲಿ ಮುಂದೆ ಸಾಗಿ ಬೈಂದೂರು ತಲುಪಿದೆವು. ಅಲ್ಲಿಂದ 4 ಕಿ.ಮೀ ಮುಂದೆ ಕಡಲ ತೀರ, ಸೋಮೇಶ್ವರ ಎಂಬಲ್ಲಿಗೆ ಹೋದೆವು. ಸಮುದ್ರತೀರ ಸೇರುವಾಗ ಸೂರ್ಯಾಸ್ತವಾಗಿತ್ತು, ಕಡಲ ತೀರದ ಹಕ್ಕಿಗಳನ್ನು ನೋಡುವ ನನ್ನ ಆಸೆ ಈಡೇರಲಿಲ್ಲ. ಡಜನ್ ಗಟ್ಟಲೆ ಗರುಡಗಳು ಮಾತ್ರ ಇನ್ನೂ ಎಚ್ಚರವಾಗಿದ್ದವು. ಅಲ್ಲಿಂದ ನೇರ ಕೊಲ್ಲೂರು ದೇವಸ್ಥಾನಕ್ಕೆ ಬಂದು, ಪ್ರಸಾದಕ್ಕಾಗಿ ಒಂದು ಗಂಟೆ ನಿಂತು, ಪ್ರಸಾದ ಸ್ವೀಕರಿಸಿ ನಿಸರ್ಗಧಾಮಕ್ಕೆ ಹಿಂದಿರುಗಿದಾಗ ರಾತ್ರಿ ಹತ್ತಾಗಿತ್ತು. ನಮಗೆ ಮಲಗುವ ಹೊತ್ತಾಗಿತ್ತು.

ಬೆಳಗ್ಗೆ ನಾಲ್ಕರ ಹೊತ್ತಿಗೆ ದೂರದಿಂದ ಕಂದು ಕಾಡುಗುಮ್ಮನ Brown wood owl (Strix leptogrammica) ಸ್ವರ ಕೇಳುತ್ತಿತ್ತು. ಮುಂಜಾನೆ 5:45ಕ್ಕೆ ನನ್ನನ್ನು ಸರಳೆಸಿಳ್ಳಾರ Malabar whistling thrush (Myophonus horsfieldii) ಏಳಿಸಿತು. ಹಕ್ಕಿ ಲೋಕದ ಅತ್ಯುತ್ತಮ ಗಾಯಕ ಇದು ಎಂದರೆ ಅತಿಶಯೋಕ್ತಿಯಲ್ಲ. ಶಿಳ್ಳೆ ಹೊಡೆಯುವ ಪರಿ ಮನುಷ್ಯನಂತೆಯೇ ಇರುವುದರಿಂದ ಇದು ನಮಗೆ ಇನ್ನಷ್ಟು ಹತ್ತಿರವಾಗುತ್ತದೆ.

malabar whistling thrush

ಈ ಹಕ್ಕಿಯ ಶಿಳ್ಳೆ ನನ್ನಂತೆ ಇನ್ನೂ  ಕೆಲವರನ್ನು ಏಳಿಸಿತ್ತು. ಅಲ್ಲೇ ಸುತ್ತಮುತ್ತ ಪಕ್ಷಿವೀಕ್ಷಣೆ ಮಾಡಿದೆವು. ಬೂದು ನೆತ್ತಿಯ ಪಾರಿವಾಳ Grey-fronted green pigeon (Treron affinis), ಹರಳು ಚೋರೆ Asian emerald dove(Chalcophaps indica), ಕೆಂಪುಕತ್ತಿನ ಕಂಚು ಕುಟುಕ Malabar barbet (Psilopogon malabaricus), ಮಲೆ ಮಂಗಟ್ಟೆ Malabar grey hornbill (Ocyceros griseus) ಅಂಥಾ ಪಶ್ಚಿಮ ಘಟ್ಟಕ್ಕೆ ಮಾತ್ರ ಸೀಮಿತವಾದ ಹಕ್ಕಿಗಳನ್ನು ನೋಡಿದೆವು.

ಗಂಟೆ ಏಳು, ಆಗ ತಿಂಡಿಗೆ ಬುಲಾವ್ ಬಂತು. ಅಲ್ಲಿ ಮಾಡಿದ್ದ ಗಟ್ಟಿ / ಕೊಟ್ಟೆ ಕಡುಬನ್ನು, ಖಾರದ ಚಟ್ನಿಯೊಂದಿಗೆ ಬೆರೆಸಿ ತಿಂದು ನಮ್ಮ ಬಿಡಾರ ಕಟ್ಟಿ ಮುಂದಿನ ಪ್ರಯಾಣ ದಬ್ಬೆ ಜಲಪಾತದತ್ತ…

ಮುಂದೇನೆಂದು ಮುಂದಿನವಾರ…

ಚಿತ್ರಗಳು : ಡಾ.ಅಭಿಜಿತ್ ಎ.ಪಿ.ಸಿ.

Facebook ಕಾಮೆಂಟ್ಸ್

Dr. Abhijith A P C: ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .
Related Post