X

ಇನ್ನೂ ಒಂದೆರಡು ದಿನ ದುಬೈಯಲ್ಲಿದ್ದು ಬಿಡೋಣ ಅಂತನಿಸಿದ್ದು ಮಾತ್ರ ಸುಳ್ಳಲ್ಲ

ದುಬೈ ಪ್ರವಾಸ ಶುರುವಾಗುವ ಮುನ್ನವೇ ಪ್ರವಾಸದ ಅನುಭವವನ್ನು ಬರೆಯಬೇಕು ಅಂತ ನಿರ್ಧರಿಸಿಬಿಟ್ಟಿದ್ದೆ. ಆದರೆ ಪ್ರವಾಸ ಮುಗಿಸಿ ಬರುವಷ್ಟರಲ್ಲಿ ಶುರುವಾದ ಕೆಲಸದ ಒತ್ತಡಗಳು ಅನುಭವವನ್ನು ಬರೆಯುವುದಕ್ಕೆ ಅನುಕೂಲ ಮಾಡಿಕೊಟ್ಟಿರಲಿಲ್ಲ. ಇವತ್ತು ಬರೆಯಬೇಕು ನಾಳೆ ಬರೆಯಬೇಕು ಎಂದುಕೊಳ್ಳುತ್ತಲೇ ಎರಡೂವರೆ ತಿಂಗಳು ಕಳೆದು ಹೋಗಿದ್ದೇ ಗೊತ್ತಾಗಲಿಲ್ಲ. ಇನ್ನು ಬರೆಯದಿದ್ದರೆ ದುಬೈಯಲ್ಲಿ ಕಳೆದ ಕ್ಷಣಗಳು   ನೆನಪಿನ ಬುತ್ತಿಯಿಂದ ಅಳಿದುಹೋಗಬಹುದು ಎನ್ನುತ್ತಲೇ ಬರೆಯಹೊರಟ ನನಗೆ ಒಂದೊಂದು ಕ್ಷಣಗಳೂ ಗರಿಗರಿಯಾಗಿ  ನೆನಪಿಗೆ ಬರತೊಡಗಿದವು. ದುಬೈ ಪ್ರವಾಸದ ಕ್ಷಣಗಳು  ಮರೆತುಹೋಗಲು  ಸಾಧ್ಯವೇ? ನೆವರ್!!

ದುಬೈ.. ಜಾಗತಿಕ ಮಟ್ಟದಲ್ಲಿ ಈಗಾಗಲೇ ಬೆಳೆದಿರುವ, ಬೆಳೆದಷ್ಟೂ ತೃಪ್ತವಾಗದೆ ಮತ್ತಷ್ಟು ಬೆಳೆಯುತ್ತಿರುವ ಕೆಲವೇ ಕೆಲವು  ಪ್ರಮುಖ ನಗರಗಳಲ್ಲಿ ಒಂದು. ಒಂದಕ್ಕಿಂತ ಮತ್ತೊಂದು ಮಿಗಿಲು ಎನ್ನುವಂತೆ ಪೈಪೋಟಿಗಿಳಿದಿರುವ ಗಗನಚುಂಬಿ ಕಟ್ಟಡಗಳು, ಇಲ್ಲಿಯೇ ಮಲಗಿ ಬಿಡೋಣ ಅನಿಸುವಂತಹ ವಿಶ್ವದರ್ಜೆಯ ರಸ್ತೆಗಳು, ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಿಬಿಡೋಣ ಅಂತನಿಸುವ  ಪ್ರವಾಸಿ ತಾಣಗಳು ದುಬೈ ನಗರಕ್ಕೆ ವಿಶ್ವಮಾನ್ಯತೆಯನ್ನು ತಂದು ಕೊಟ್ಟಿದೆ. ಅಂತಹಾ ದುಬೈಯಂತಹಾ ದುಬೈಗೆ ಒಂದು ವಾರದ ಪ್ರವಾಸ ಹೋಗುವ ಅವಕಾಶ ನನಗೆ ಲಭಿಸಿತ್ತು. ನನ್ನ ಪ್ರವಾಸದ ಅನುಭವವನ್ನು ದಾಖಲಿಸಿದ್ದೇನೆ, ಓದಿ.

ನಾನು ದುಬೈಗೆ ಹೋಗುತ್ತಿದ್ದೇನೆ ಎಂದಾಗ “ದುಬೈಗಾ….?” ಅಂತ ಹುಬ್ಬೇರಿಸಿದವರೇ ಹೆಚ್ಚು. ಬ್ಯುಸಿನೆಸ್ ಟ್ರಿಪ್ ಹೋಗೋದಕ್ಕೆ ನಾನೇನು ದೊಡ್ಡ ಬ್ಯುಸಿನೆಸ್ ಮ್ಯಾನ್ ಅಲ್ಲ, ಹನಿಮೂನ್ ಹೋಗೋದಕ್ಕೆ ಮದುವೆಯೇ ಆಗಿಲ್ಲ. ಊರಿನಲ್ಲಿಯೇ ಸ್ವಂತ ಉದ್ಯೋಗ ಮಾಡುತ್ತಿರುವುದರಿಂದ ಕೆಲಸಕ್ಕಾಗಿ ದುಬೈಗೆ ಹೋಗುವ  ಚಾನ್ಸೇ ಇಲ್ಲ. ಹಾಗಾಗಿ ‘ನೀನ್ಯಾಕೆ  ದುಬೈಗೆ ಹೋಗ್ತಾ ಇದ್ದಿ?” ಎನ್ನುವುದೇ ಎಲ್ಲರ ಪ್ರಶ್ನೆಯಾಗಿತ್ತು. ಅದರಲ್ಲೂ “ಟೂರ್ ಒಬ್ನೇ ಹೋಗೋದಾ? ಒಬ್ನೇ ಹೋಗಿ ಎಂತ ಮಾಡ್ತಿ ಮಾರ್ರೆ ಅಲ್ಲಿ?” ಅಂತ ಕುಹುಕವಾಡಿದವರೂ ಇದ್ದರು. ನಾನು ಅವೆಲ್ಲವನ್ನೂ ಕೇಳಿಸಿಕೊಂಡೇ ವಿಮಾನ ಹತ್ತಿದ್ದೆ.

ಹೇಳಿಕೇಳಿ ಮೊದಲ ವಿಮಾನ ಪ್ರಯಾಣ, ಮೊದಲ ಅಂತಾರಾಷ್ಟ್ರೀಯ ಪ್ರವಾಸ.. ಒಬ್ನೇ ಹೋಗೋದು ಬೇರೆ.. ನನಗೇನೂ ಭಯವಿಲ್ಲ ಅಂತ ಹೊರಗಿನಿಂದ  ಎಷ್ಟೇ ಪೋಸು ಕೊಟ್ಟರೂ ಒಳಗೊಳಗೇ ಏನೋ ಅಳುಕಿತ್ತು. ಅದೇ ಅಳುಕನ್ನು ಹೊತ್ತುಕೊಂಡೇ ನಾನು ವಿಮಾನವೇರಿದ್ದು. ಬೆಳಗ್ಗೆ 8.45ಕ್ಕೆ ವಿಮಾನ ಮಂಗಳೂರಿನಿಂದ  ಟೇಕ್ ಆಫ್ ಆದಾಗ ಅದೇನೋ ರೋಮಾಂಚನ.. “ದೇವ್ರೇ ಸೇಫಾಗಿ ನೆಲ ಮುಟ್ಟಿಸು” ಎನ್ನುವ ಪ್ರಾರ್ಥನೆಯೊಂದಿಗೆ ಶುರುವಾಗಿತ್ತು ನನ್ನ ಜರ್ನಿ.  ಏರ್ ಇಂಡಿಯಾದ ವಯಸ್ಸಾದ ಗಗನಸಖಿಯರು  ಪಫ್, ಕೇಕ್, ಚಿಪ್ಸ್ ಮತ್ತು ಟೀ ಕೊಟ್ಟು ಮುಗಿಸುವಷ್ಟರಲ್ಲೇ ಅಂದರೆ ಬರೀ ಎರಡೂವರೆ ಗಂಟೆಗಳಲ್ಲಿ ನಮ್ಮ ವಿಮಾನ ಅರಬ್ಬೀ ಸಮುದ್ರವನ್ನು ದಾಟಿ ಅರಬ್ಬರ ನಾಡಿಗೆ ಎಂಟ್ರಿ ಕೊಟ್ಟಿತ್ತು.  ವಿಮಾನ ಲ್ಯಾಂಡ್ ಆದ ಬಳಿಕ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದೆ. ವಿಮಾನ ನಿಲ್ದಾಣದಲ್ಲಿನ ಎಲ್ಲಾ ಅಧಿಕಾರಿಗಳು ದುಬೈಯ ನಿವಾಸಿಗಳು ಧರಿಸುವಂತಹ ಸಾಂಪ್ರದಾಯಿಕ ಬಟ್ಟೆಯನ್ನೇ ಉಟ್ಟುಕೊಂಡಿರುತ್ತಾರೆ. (ಪುರುಷರು ಬಿಳಿ ಬಣ್ಣದ ಗೌನ್, ಮಹಿಳೆಯರು ಬುರ್ಖಾ). ಇಮಿಗ್ರೆಶನ್’ನಲ್ಲಿ ನನಗೆ ಸಿಕ್ಕ ಅಧಿಕಾರಿಯಂತೂ ಮಹಾ ಮುಂಗೋಪಿ, ಸದಾ ಸಿಡುಕು ಮುಖವನ್ನೇ ಹೊತ್ತುಕೊಂಡಿದ್ದ ಆತ ಸಿಕ್ಕ ಸಿಕ್ಕ ಪ್ರಯಾಣಿಕರ ಮೇಲೆ ಅಕಾರಣವಾಗಿ ರೇಗಾಡುತ್ತಿದ್ದ. ಅವನನ್ನು ಸಂಭಾಳಿಸಿಕೊಂಡು ನಿಲ್ದಾಣದಿಂದ ಹೊರ ಬರುವಷ್ಟರಲ್ಲಿ ನನ್ನ ಕಾರು ಚಾಲಕ ಅದಾಗಲೇ ನನ್ನ ಹೆಸರಿನ ಬೋರ್ಡನ್ನು ಹಿಡಿದುಕೊಂಡು ನಿಂತಿದ್ದ.

ಮೊದಲ ದಿನದಲ್ಲಿ Dhow Cruise ಅಂದರೆ  ಸಮುದ್ರದ ಹಿನ್ನೀರಿನ ಮೇಲಿನ ಬೋಟ್’ನಲ್ಲಿ ಸುತ್ತಾಡಿಸುವುದು, ಬೋಟಿನೊಳಗೆಯೇ  ವಿಧವಿಧವಾದ ಖಾದ್ಯಗಳನ್ನು ಉಣಬಡಿಸುವುದು ಇತ್ಯಾದಿಗಳಷ್ಟೇ ಇತ್ತು. ಅದರಲ್ಲಿ ಹೇಳುವಂತಹಾ ವಿಶೇಷವೇನೂ ಇರಲಿಲ್ಲ. ಎರಡನೇ ದಿನ ಮೊದಲಿಗೆ ದುಬೈ ಸಿಟಿ ಟೂರ್ ಇತ್ತು. ಅದರಲ್ಲೂ ಹೆಚ್ಚೇನೂ ಇರಲಿಲ್ಲ. ಕಾರ್’ನೊಳಗೆ ಕುಳ್ಳಿರಿಸಿ ದುಬೈ ಪೇಟೆಗೆ ಒಂದು ಸುತ್ತು ಹೊಡೆಸುತ್ತಾರೆ. ಕೆಲವೊಂದು ಸ್ಥಳಗಳನ್ನು ಕಾರ್’ನೊಳಗಿನಿಂದಲೇ ತೋರಿಸುತ್ತಾರೆ. ಹೀಗೆಯೇ ಸಾಗುತ್ತಿರುವಾಗ ಕಾರ್ ಡ್ರೈವರ್ ತನಗೆ ಗೊತ್ತಿರುವ ಇತಿಹಾಸವನ್ನೆಲ್ಲಾ ಹೇಳುತ್ತಾ ಸಾಗುತ್ತಾನೆ. ಮಧ್ಯಾಹ್ನದ ಹೊತ್ತಿಗೆ ದುಬೈ ಮಾಲ್’ನಲ್ಲಿ ನಮ್ಮನ್ನು  ತಂದು ಬಿಡುತ್ತಾನೆ.  ಆ ದಿನ ಸಂಜೆ ಬುರ್ಜ್ ಖಲೀಫಾ ಭೇಟಿಯಿತ್ತು.

Dhow Cruise

ದುಬೈಯ ಬಗ್ಗೆ ಬರೆಯುವಾಗ ಬುರ್ಜ್ ಖಲೀಫಾದ ಬಗ್ಗೆ ಒಂದು ಪಾರಾಗ್ರಾಫ್ ಬರೆಯದೇ ಇದ್ದರೆ ಹೇಗೆ ಹೇಳಿ??

ನೀವು ದುಬೈ ಸಿಟಿಯನ್ನು ಸುತ್ತುವಾಗ 360 ಡಿಗ್ರಿ ಕೋನದಲ್ಲೊಮ್ಮೆ ನಿಮ್ಮ ತಲೆಯನ್ನು ತಿರುಗಿಸಿದರೆ ಯಾವುದಾದರೂ ಒಂದು ಕೋನದಲ್ಲಿ ನಿಮಗೆ ವಿಶ್ವದ ಅತ್ಯಂತದ ಎತ್ತರದ ಈ ಕಟ್ಟಡ ಕಾಣಸಿಗುತ್ತದೆ. ಅರಬ್ಬರು “ನಮ್ಮ ದೇಶದ ಹೆಮ್ಮೆ” ಎಂದು ಭಾವಿಸಿರುವ ಈ ವಿಸ್ಮಯದೊಳಗೆ ದುಬೈಯ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮುಕ್ತಮ್ ಅವರ ಹೇಳಿಕೆಯೊಂದನ್ನು ಕೆತ್ತಲಾಗಿದೆ. ಆ ಹೇಳಿಕೆ ಹೀಗಿದೆ-  “The World impossible is not in the leaders’ dictionaries, No matter how big the challenges, strong faith, determination and resolve will overcome them”. ಬುರ್ಜ್ ಖಲೀಫಾದ ಮೊದಲನೇ ಮಹಡಿಹಲ್ಲಿ ಹಾಕಿರುವ ಈ ಹೇಳಿಕೆಯನ್ನು ಓದಿ 124ನೇ ಮಹಡಿಯನ್ನು ಹತ್ತಿ ಇಳಿಯುವಾಗ ದುಬೈಯ ಸಕಾರ, ಅಲ್ಲಿನ ಜನ ಮೇಲಿನ ಹೇಳಿಕೆಯನ್ನು ಅದೆಷ್ಟು ಸಿರಿಯಸ್ಸಾಗಿ ತೆಗೆದುಕೊಂಡಿದ್ದಾರೆ, ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಲು ಅವರೆಷ್ಟು ಶ್ರಮ ಪಟ್ಟಿದ್ದಾರೆ ಎಂಬುದರ ಸ್ಪಷ್ಟ ಅರಿವು ನಮಗಾಗುತ್ತದೆ. ಬರೀಯ ಬುರ್ಜ್ ಖಲೀಫಾ ಮಾತ್ರವಲ್ಲ, ಇಡೀ ದುಬೈ ನಗರವನ್ನೇ ಜಗತ್ತಿನಲ್ಲಿ ಲಭ್ಯವಿರುವ ಎಲ್ಲಾ ಅತ್ಯಾಧುನಿಕ  ತಂತ್ರಜ್ಞಾನಗಳನ್ನು ಬಳಸಿ, ಅದಕ್ಕಿಂತ ಹೆಚ್ಚು ಸುಂದರವಾಗಿ ಕಾಣುವಂತೆ ಮಾಡಲು ಸಾಧ್ಯವಿಲ್ಲವೇನೋ ಎಂಬಂತೆ well planned ಆಗಿ ಡಿಸೈನ್ ಮಾಡಿದ್ದಾರೆ.

ಬುರ್ಜ್ ಖಲೀಫಾದ ನೆಲಮಹಡಿಯಲ್ಲಿ ಕೆತ್ತಲಾಗಿರುವ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮುಕ್ತಮ್ ಅವರ ಹೇಳಿಕೆ

ಬುರ್ಜ್ ಖಲೀಫಾಕ್ಕೆ ಹೋಗುವ ಮೊದಲು ದುಬೈ ಮಾಲ್’ಗೆ ಹೋಗಿದ್ದೆ ಅಂದೆನಲ್ಲಾ, ಅಲ್ಲಿ ನಾನು ಒಂದೊಳ್ಳೆ ಫಜೀತಿಗೆ ಸಿಲುಕಿದ್ದೆ. ಅದೇನೆಂದರೆ, ವಿಸ್ತೀರ್ಣದಲ್ಲಿ ನನ್ನ ಹುಟ್ಟೂರು ಪುತ್ತೂರು ಪೇಟೆಯನ್ನೇ ಮೀರಿಸುವಂತಿರುವ ದುಬೈ ಮಾಲ್’ನೊಳಗೆ ಅಲೆದಾಡಿ ಅಲೆದಾಡಿ  ಸುಸ್ತಾಗಿದ್ದೆ. ಹೀಗಾಗಿ ಮಧ್ಯಾಹ್ನದ ಊಟವಾದ ಮೇಲೆ ನನ್ನನ್ನು ನಿದ್ರಾದೇವಿ  ಆವಾಹಿಸಲು  ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಳು. ಮಾಲ್’ನ ಕಾರಿಡಾರ್ ಒಳಗೆ ಇಟ್ಟಿರುವ ಸೋಫಾದಲ್ಲಿ ಹೋಗಿ ಕೂತೆ. ಇಂತಹಾ ಓಪನ್ ಏರಿಯಾದಲ್ಲಿ ಯಾರಾದರೂ ನಿದ್ದೆ ಮಾಡುತ್ತಾರಾ ಎಂಬ ಅಳುಕಿನಂದಲೇ ಅತ್ತಿತ್ತ ನೋಡಿದ ನನಗೆ ಪರಮಾಶ್ಚರ್ಯವಾಯ್ತು, ಏಕೆಂದರೆ ಅಲ್ಲಿ ಕೂತಿದ್ದವರಲ್ಲಿ ತೊಂಬತ್ತು ಶೇಕಡಾ ಜನ ಹೊರಜಗತ್ತಿನ ಪರಿವೆಯೇ ಇಲ್ಲದೆ ನಿದ್ದೆ ಹೊಡೆಯುತ್ತಿದ್ದರು. ಸಿಕ್ಕಿದ್ದೇ ಚಾನ್ಸ್ ಎನ್ನುತ್ತಾ ನಾನೂ ನಿದ್ದೆಗೆ ಶರಣಾದೆ. ಅದೇ ಸಮಯಕ್ಕೆ  ಮೈಕಿನಲ್ಲಿ  ಸುಶ್ರಾವ್ಯವಾಗಿ ಮೂಡಿ ಬರುತ್ತಿದ್ದ ಅಲ್ಲಾಹ್ ಅಕ್ಬರ್…. ಎನ್ನುವ  ಮುಸ್ಲಿಂರ ಪ್ರಾರ್ಥನೆ ನನಗೆ ಚೆನ್ನಾಗಿ ಜೋಗುಳ ಹಾಡಿದಂತೆ ಭಾಸವಾಗುತ್ತಿತ್ತು. ಮುಕ್ಕಾಲು ಘಂಟೆಯ ಬಳಿಕ ಎಚ್ಚರಗೊಂಡಾಗ ನನಗೆ ಬರಸಿಡಿಲು ಬಡಿದಂತಾಗಿತ್ತು. ಯಾಕೆ ಗೊತ್ತಾ? ಬುರ್ಜ್ ಖಲೀಫಾದ 124ನೇ ಮಹಡಿಗೆ ತೆರಳುವುದಕ್ಕಾಗಿ ಖರೀದಿಸಿದ್ದ ಟಿಕೇಟ್ ಕಳೆದು ಹೋಗಿತ್ತು. ಕದ್ದರೋ? ಇಲ್ಲಾ ನಾನೇ ಎಲ್ಲೋ ಕಳೆದುಕೊಂಡೆನೋ? ಆ ಅಲ್ಲಾಹನಿಗೇ ಗೊತ್ತು.. ಸಕ್ಕತ್ ಸುಸ್ತಾಗಿದ್ದರೂ ಸಹ ದುಬೈ ಮಾಲ್’ಗೆ ಎರಡೆರಡು ಭಾರಿ ಸುತ್ತು ಹೊಡೆದು ಹುಡುಕಿದರೂ ಟಿಕೇಟ್ ಸಿಗಲಿಲ್ಲ. ಕೌಂಟರಲ್ಲಿ ಹೋಗಿ ರಿಕ್ವೆಸ್ಟ್ ಮಾಡಿಕೊಂಡರೆ ಅವರುಗಳು ಕ್ಯಾರೇ ಅನ್ನಲಿಲ್ಲ. ಆದರೇನು ಮಾಡುವುದು? ಅಷ್ಟು ದೂರದ ದುಬೈಗೆ ಹೋಗಿ ಬುರ್ಜ್ ಖಲೀಫಾದ ಮೇಲೆ ಹೋಗದೆ ವಾಪಾಸ್ ಬರುವುದುಂಟೇ? ಇಲ್ಲವೇ ಇಲ್ಲ  ಎನ್ನುತ್ತಾ ಹ್ಯಾಪು ಮೋರೆ ಹಾಕಿಕೊಂಡು 450 ಧಿರಮ್ಸ್ (ಸುಮಾರು 8500 ರೂಪಾಯಿ) ತೆತ್ತು ಮತ್ತೊಂದು ಟಿಕೇಟ್ ಖರೀದಿಸಿದೆ. 124ನೆ ಮಹಡಿಗೆ ಹೋಗಿ ಬರುವಾಗ ಟಿಕೇಟ್ ಕಳೆದು ಹೋಗಿದ್ದರಿಂದ ಆದ  ಬೇಸರ ಎಲ್ಲವೂ  ತನ್ನಿಂತಾನೇ ಕಳೆದು ಹೋಗಿತ್ತು!

ಬುರ್ಜ್ ಖಲೀಫಾ

ಹ್ಹ… ಬುರ್ಜ್ ಖಲೀಫಾ ಅಥವಾ ದುಬೈ ಮಾಲ್ ಎನ್ನುವಾಗ ದುಬೈ ಫೌಂಟೇನ್ ಬಗ್ಗೆ ಹೇಳದಿರಲಾಗದು. ದಿನಾಲು ಸಂಜೆ 6 ಘಂಟೆಯಿಂದ ರಾತ್ರಿ 11 ಗಂಟೆಯವರೆಗೆ ದುಬೈ ಫೌಂಟೈನ್ ಅಂತಾನೇ ಫೇಮಸ್ಸ್ ಆಗಿರುವ ಈ ಸಂಗೀತ ಕಾರಂಜಿಯ ಪ್ರದರ್ಶನವಿರುತ್ತದೆ. ಅರ್ಧ ಗಂಟೆಗೊಮ್ಮೆ  ನಡೆಯುವ ಈ ಐದು ನಿಮಿಷದ ಕಾರಂಜಿಯನ್ನು ನೋಡುವುದಕ್ಕೆ ಸಾವಿರಾರು ಜನ ಅಲ್ಲಿ ಸೇರಿರುತ್ತಾರೆ. ನೀರು ಚಿಮ್ಮುವ ಸ್ಟೈಲ್, ಆ ಮ್ಯೂಸಿಕ್ ಎಲ್ಲವೂ ಕೂಡ ಕೆಲವು ಕ್ಷಣ ನಮ್ಮೆಲ್ಲ ಬೇಸರ, ನೋವುಗಳೆಲ್ಲವನ್ನು ಮರೆಸಿಬಿಡುತ್ತದೆ.

ದುಬೈ ಫೌಂಟೈನ್

ದುಬೈಯಲ್ಲಿ ನೀವು ಮಿಸ್ ಮಾಡಲೇಬಾರದಂತಹ ಮತ್ತೊಂದು ಈವೆಂಟ್ ಅಂದರೆ ಅದು  ಡೆಸರ್ಟ್ ಸಫಾರಿ. ಮರಳುಗಾಡಿನ ಮೇಲೆ ಲ್ಯಾಂಡ್ ಕ್ರೂಸರ್ ಕಾರಿನೊಳಗೆ ಕುಳ್ಳಿರಿಸಿ ಎತ್ತರ ತಗ್ಗುಗಳನ್ನೆಲ್ಲ ಕ್ಯಾರೇ ಮಾಡದೇ  ಕರೆದುಕೊಂಡು ಹೋಗುವಾಗ, ಆಡು ಭಾಷೆಯಲ್ಲಿ  “ಬೀಜ ಬಾಯಿಗೆ ಬಂದ ಹಾಗಾಯಿತು” ಎನ್ನುತ್ತಾರಲ್ಲ, ಅಂತಹಾ ಅನುಭವ.. ಆದರೂ ಯಾವ ಕಾರಣಕ್ಕೂ ಅದನ್ನು  ಮಿಸ್ ಮಾಡಿಕೊಳ್ಳಲೇಬಾರದು!

ಡೆಸರ್ಟ್ ಸಫಾರಿ

ದುಬೈ ಸುತ್ತುವಾಗಲೆಲ್ಲಾ ನನಗೆ ಜಾಸ್ತಿ ಹೈಲೈಟ್ ಆಗಿ ಕಂಡಿದ್ದು “WORLD EXPO 2020”ಯ ಜಾಹೀರಾತುಗಳು.  2013ರಲ್ಲಿ  “WORLD EXPO 2020”ದ ಬಿಡ್ಡನ್ನೇ ಅತ್ಯಂತ ಪ್ರತಿಷ್ಠಿತವಾಗಿ ತೆಗೆದುಕೊಂಡು ಅದನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ದುಬೈ ಈಗ ಅದನ್ನು ಸಾಕಾರಗೊಳಿಸುವುದನ್ನು ಮತ್ತಷ್ಟು ಪ್ರತಿಷ್ಠಿತವಾಗಿ ತೆಗೆದುಕೊಂಡಿದೆ. ಮತ್ತೊಮ್ಮೆ ಜಗತ್ತು ತಮ್ಮತ್ತ ನಿಬ್ಬೆರಗಾಗಿ ನೋಡುವಂತೆ ಮಾಡುವುದಕ್ಕಾಗಿ  ದುಬೈಗೆ ದುಬೈಯೇ ಸಜ್ಜಾಗುತ್ತಿದೆ. ದುಬೈಯನ್ನು ಮತ್ತಷ್ಟು ಸುಂದರಗೊಳಿಸುವುದಕ್ಕಾಗಿ ಇನ್ನಿಲ್ಲದ ಪ್ರಯತ್ನಗಳು ಸಾಗುತ್ತಿದೆ. ಮೂಲಗಳ ಪ್ರಕಾರ  “Connecting Minds, Creating the Future” ಎಂಬ ಥೀಮ್’ನೊಂದಿಗೆ ನಡೆಯುತ್ತಿರುವ ಈ “WORLD EXPO 2020” ಈಗಾಗಲೇ ದುಬೈನಲ್ಲಿ ಮೂರು ಲಕ್ಷಕ್ಕೂ ಅಧಿಕ ಉದ್ಯೋಗವನ್ನು ಸೃಷ್ಠಿಸಿದೆ. ದುಬೈಯನ್ನು ಎಷ್ಟು ಅತ್ಯಾಧುನಿಕಗೊಳಿಸಬಹುದೋ ಅಷ್ಟು ಅತ್ಯಾಧುನಿಕಗೊಳಿಸುವುದಕ್ಕಾಗಿ ಅಲ್ಲಿನ ಸರಕಾರ ಕ್ಷಣ ಕ್ಷಣಕ್ಕೂ ಶ್ರಮಿಸುತ್ತಿದೆ. ಹೋಟೆಲ್ ಸರ್ವರ್’ನಿಂದ ಹಿಡಿದು ಕಾರ್ ಡ್ರೈವರ್’ನವರೆಗೂ “WORLD EXPO 2020”ಯ ಮಾತು ಹರಿದಾಡುತ್ತಿದೆ. ಕನ್’ಸ್ಟ್ರಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ.  ನಿಜ ಹೇಳಬೇಕೆಂದರೆ “WORLD EXPO 2020”ಯನ್ನು ಚಾಲೆಂಜ್ ಆಗಿ ತೆಗೆದುಕೊಂಡಿರುವ ದುಬೈ ಅದರ ಸಾಕಾರಕ್ಕಾಗಿ ನಿದ್ದೆಗೆಟ್ಟು ಕೆಲಸ  ಮಾಡುತ್ತಿದೆ.

ದುಬೈಯಲ್ಲಿ  ಪ್ಯೂರ್ ವೆಜಿಟೇರಿಯನ್ ಹೋಟೇಲನ್ನು ಹುಡುಕುವುದೇ ದೊಡ್ಡ ತ್ರಾಸದಾಯಕ ಕೆಲಸ. ನನ್ನಂತ ಟಿಪಿಕಲ್ ಭಟ್ಟನಂತೂ veg/non veg ಎಂಬ ಬೋರ್ಡ್ ಕಂಡರೆ ಮತ್ತೆ ಅಲ್ಲಿಗೆ ಕಾಲಿಡಲಾರ. ಪ್ಯೂರ್ ವೆಜ್ಜೇ ಆಗ್ಬೇಕು.   ದುಬೈಯಲ್ಲಿ ವೆಜ್ ಹೋಟೇಲ್ ಸಿಗುವುದುಂಟೆ ಅಷ್ಟು ಈಸಿಯಾಗಿ? ಆದರೇನು ಮಾಡುವುದು,  ಏನಾದರೂ ತಿನ್ನಲೇ ಬೇಕಿತ್ತಲ್ಲಾ? ಬೆಳಗ್ಗಿನ ಬ್ರೇಕ್ ಫಾಸ್ಟ್ ತಂಗಿದ್ದ ಹೋಟೇಲಿನಲ್ಲಿಯೇ ನೆರವೇರುತ್ತಿತ್ತು. ಮಧ್ಯಾಹ್ನ ಎಲ್ಲಿ ತಿರುಗಲು ಹೋಗಿದ್ದೆನೋ ಅಲ್ಲಿ ವೆಜ್ ಪಿಜ್ಜಾನೋ ಇಲ್ಲಾ ಬರ್ಗರ್ರೋ, ರಾತ್ರಿ 1ಕೆಜಿ ಫಿಲಿಪೈನ್ಸ್ ದ್ರಾಕ್ಷಿ, ಇದು ನನ್ನ ಮೊದಲ ನಾಲ್ಕು ದಿನದ ಮೆನು ಆಗಿತ್ತು. ದುಬೈಯಲ್ಲಿ ನಾನು ಎಲ್ಲೇ ಹೋಗಲಿ, ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದಕ್ಕಿಂತಲೂ, ಇಲ್ಲಿಂದ ಯಾವ ವಸ್ತುಗಳನ್ನು ಖರೀದಿಸಬಹುದು ಅನ್ನುವುದಕ್ಕಿಂತಲೂ ಎಲ್ಲಿ ಪ್ಯೂರ್ ವೆಜ್ ಫುಡ್ ಸಿಗುತ್ತದೆ ಎನ್ನುವುದೇ ನನಗೆ ಬಹುದೊಡ್ಡ ಚಿಂತೆಯಾಗಿತ್ತು.

ಒಂದು ದಿನ ಸರಿ.. ಎರಡು ದಿನ ಸರಿ.. ಎಷ್ಟು ದಿನ ಅಂತ ದ್ರಾಕ್ಷಿ ಹಣ್ಣು, ಪಿಜ್ಜಾ ಬರ್ಗರ್ ತಿಂದು ಬದುಕುವುದು ಹೇಳಿ. ಮನೆಯಲ್ಲಿ ದಿನವೂ ಬಾಯಿಲ್ಡ್ ರೈಸ್, ಮೇಲಾರ(ಮಜ್ಜಿಗೆ ಹುಳಿ), ಮಜ್ಜಿಗೆ, ಉಪ್ಪಿನಕಾಯಿ, ತಿನ್ನುತ್ತಿದ್ದ ನನಗೆ ನಾಲ್ಕನೇ ದಿನವೇ ಬಾಯಿ ತುರಿಸಲು ಶುರುವಾಗಿತ್ತು. ಇವತ್ತು ಹೇಗಾದರೂ ಮಾಡಿ ಒಂದು ಒಳ್ಳೆ ವೆಜ್ ಹೋಟೇಲನ್ನು ಹುಡುಕಿಯೇ ಸಿದ್ಧ ಅಂತ ಬೆಳ್ಳಂಬೆಳಗ್ಗೆಯೇ ಎದ್ದು ಪಾದಯಾತ್ರೆ ಹೊರಟಿದ್ದೆ. ಇಲ್ಲೇ ಇರುವುದು ಗಮ್ಮತ್ತು, ಇನ್’ಫ್ಯಾಕ್ಟ್ ದುಬೈ ಟೂರ್ ಅಂದಾಕ್ಷಣ ನನಗೆ ಮೊದಲು ನೆನಪಿಗೆ ಬರುವ, ನಗು ತರಿಸುವ  ಘಟನೆಯೇ ಇದು. ಹಿಂದಿನ ದಿನ ಕಾರಿನಲ್ಲಿ ಸುತ್ತಾಡುವಾಗ “ಪ್ಯೂರ್ ಇಂಡಿಯನ್ ವೆಜ್ ರೆಸ್ಟೋರೆಂಟ್” ಎನ್ನುವ ಬೋರ್ಡ್ ನೋಡಿದ್ದ ನಾನು ಅದರ ಜಾಡು ಹಿಡಿದು ಹೊರಟಿದ್ದೆ. ಆದರೆ ನನಗೇನು ಗೊತ್ತು, ಆ ರೆಸ್ಟೋರೆಂಟ್ ಇರುವುದು ವೇಶ್ಯೆಯರು ಇರುವ ಏರಿಯಾದಲ್ಲಿ ಅಂತ. ಆ ರಸ್ತೆಯಿಡೀ ಅವರದ್ದೇ ಸಾಮ್ರಾಜ್ಯವಾಗಿತ್ತು. ದೊಡ್ಡ ದೊಡ್ಡ ಕಟ್ಟಡಗಳ ಸಂದಿಗೊಂದಿಗಳನ್ನು ಆಕ್ರಮಿಸಿಕೊಂಡಿದ್ದ ಆ ಲಲನೆಯರು ಅಲ್ಲಿ ಹೋಗಿ ಬರುವ ಪ್ರತಿಯೊಬ್ಬ ಪುರುಷರನ್ನು ವಿಚಿತ್ರ ಸನ್ನೆಗಳನ್ನು ಮಾಡುತ್ತಾ ತಮ್ಮತ್ತ ಬರಸೆಳೆಯುತ್ತಿದ್ದರು. ಅವುಗಳಿಗೇನು ಗೊತ್ತು, ನಾನೊಬ್ಬ ಅಮಾಯಕ ಅಂತ! ನಾನು ಸಹ ಅವರದ್ದೇ ಜಾಡು ಹಿಡಿದು ಹೊರಟವನೆಂದು ಭಾವಿಸಿ  ನನ್ನತ್ತಲೂ ಬಲೆ ಬೀಸಿದವು ಕೆಲವು. ಆ ಅರೆಬರೆ ಬಟ್ಟೆ, ಸಿಗರೇಟು ಸೇದುತ್ತಿದ್ದ ಶೈಲಿ, ಆ ಹಾವಭಾವ.. ಒಮ್ಮೆ ನೋಡಿದರೆ ಎಂಥಹಾ ಹುಡುಗನೂ ಸಹ ಕ್ಲೀನ್ ಬೌಲ್ಡ್ ಆಗಬೇಕು.. ಅಂತಹಾ ಮಾದಕ ಸೌಂದರ್ಯ ಕೆಲವರದ್ದು!

ಒಬ್ಬಳಂತೂ ನನ್ನ ಹಿಂದೆಯೇ ಬಂದು ಕಾಡಲು ಶುರು ಮಾಡಿದಳು. ಅವಳು ಅಷ್ಟು ಮಾತನಾಡುವಾಗ ನನಗೂ ಆಕೆಯನ್ನು ಸ್ವಲ್ಪ ಕೆರಳಿಸೋಣ ಅನಿಸಿತು. ರೇಟ್ ಎಷ್ಟು ಅಂತ ಕೇಳಿದೆ. 20 ಧಿರಮ್ಸ್ ಅಂದಳು. ಅರೆ!! ಬರೀ ನಾಲ್ಕುನೂರು ರೂಪಾಯಿ…! ಏನೆಲ್ಲಾ ಇದೆ ಅಂತ ಕೇಳಿದೆ… “ ಒಂದು ಗಂಟೆ ಡ್ಯುರೇಶನ್… ಏನ್ ಬೇಕಾದ್ರೂ ಮಾಡ್ಬಹುದು” ಅಂತ ನನ್ನನ್ನೇ ಕೆರಳಿಸಲು ಪ್ರಯತ್ನಿಸಿದಳು. ಆದರೆ ಅವಳಿಗೇನು ಗೊತ್ತು ನಾನು ಸುಮ್ನೆ ಕೆರಳಿಸೋಕೆ ಅಷ್ಟೆಲ್ಲಾ ವಿಚಾರಿಸಿದ್ದು ಅಂತ, ನಾನು ಬರುತ್ತೇನೆ ಅಂತ ಅವಳು ನಂಬಿದ್ದಳು. ಆದರೆ ನಾನು ಹೋಗಲು ನಿರಾಕರಿಸಿದಾಗ ಹಿಡಿಶಾಪ ಹಾಕುತ್ತಾ ಹೋದಳು. ಒಟ್ಟಿನಲ್ಲಿ ಆಕೆ ನನಗೆ ಆ ಅನುಭವ ಕೊಡದಿದ್ದರೂ ಮರೆಯಲಾಗದ ಮತ್ತೊಂದು ಅನುಭವನ್ನು ಕೊಟ್ಟಿದ್ದಳು!!

ಇಲ್ಲಿ ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು, ದುಬೈಯಲ್ಲಿ ವೇಶ್ಯಾವಾಟಿಕೆ ಬ್ಯಾನ್ ಆಗಿದೆ ಅಲ್ವಾ?? ದುಬೈಗೆ ಹೊರಡುವ ಮೊದಲೇ ಅಲ್ಲಿನ ಕೆಲವೊಂದು ವಿಷಯಗಳನ್ನು ಅಧ್ಯಯನ ಮಾಡಿದ್ದ ನನಗೆ ಮೊದಲು ತಿಳಿದಿದ್ದೇ ಅಲ್ಲಿ ವೇಶ್ಯಾವಾಟಿಕೆ ಬ್ಯಾನ್ ಎನ್ನುವ ವಿಷಯ. ಮತ್ತೆ ಹೇಗೆ ಇಲ್ಲಿ ಇಷ್ಟೊಂದು ರಾಜಾರೋಷವಾಗಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಪ್ರಶ್ನೆ ನನಗೂ ಕಾಡಿತ್ತು.  ಕುತೂಹಲ ಕೆರಳಿ ನನ್ನ ಕಾರ ಡ್ರೈವರನ್ನು ಕೇಳಿಯೇ ಬಿಟ್ಟೆ. ಅದಕ್ಕವನು ಹೇಳಿದ್ದೇನು ಗೊತ್ತಾ? “ಇಲ್ಲಿ ಕೆಲವೊಂದು ಕಾನೂನು ನಿಮ್ಮ ಇಂಡಿಯಾದ ಥರ, ಹೇಳುವುದಕ್ಕೆ ಮಾತ್ರ, ಕೇಳುವವರು ಯಾರೂ ಇಲ್ಲ, ಕಣ್ಣಿದ್ದೂ ಕಾಣದಂತೆ ಇದ್ದು ಬಿಡುತ್ತಾರೆ, ಎಷ್ಟಾದರೂ ಟೂರಿಸಮ್ ಪ್ಲೇಸ್ ಅಲ್ವಾ.. ಸೋ…” ಅಷ್ಟು ಹೇಳಿದ ಮೇಲೆ ಇನ್ನು ನಾನೆಂತ ಹೇಳುವುದು ಅಂತ ಸುಮ್ಮನಾದೆ!

ಶೇಕ್ ಝಯೀದ್ ಗ್ರಾಂಡ್ ಮೋಸ್ಕ್

ದುಬೈ ಅಂದರೆ ಇವಷ್ಟೇ ಅಲ್ಲ. ಮೈನವಿರೇಳಿಸುವ ಬೆಲ್ಲಿ ಡ್ಯಾನ್ಸ್, ಅಬುದಾಭಿ ಸಿಟಿ ಟೂರ್, ಫೆರಾರಿ ವರ್ಲ್ಡ್’, ಜುಮೆರಾಹ್ ಬೀಚ್, ಅತ್ಯಪೂರ್ವ ವಾಸ್ತುಶಿಲ್ಪವುಳ್ಳವಂತಹಾ ಶೇಕ್ ಝಯೀದ್ ಗ್ರಾಂಡ್ ಮೋಸ್ಕ್’ನಂತಹ ಹತ್ತು ಹಲವಾರು ಸ್ಥಳಗಳಿವೆ. ಪ್ರೇಕ್ಷಣೀಯ ಸ್ಥಳಗಳು ಮಾತ್ರವಲ್ಲದೇ,  ಅಲ್ಲಿನ ಸ್ವಚ್ಛತೆ, ಸರಕಾರದ ಆಡಳಿತ, ಜನರ ಜೀವನ ಶೈಲಿ ಪ್ರತಿಯೊಂದರಲ್ಲೂ ನಾವು ಕಲಿಯುವಂತಹ, ನಮ್ಮಲ್ಲೂ ಅಳವಡಿಸಿಕೊಳ್ಳಲೇಬೇಕಾದಂತಹಾ  ವಿಷಯಗಳು ಬಹಳಷ್ಟಿವೆ. ವೈಯಕ್ತಿಕವಾಗಿ ನನಗೆ ಸ್ವಲ್ಪ ಆಹಾರದ ಸಮಸ್ಯೆಯಾಗಿದ್ದು ಬಿಟ್ಟರೆ ಉಳಿದಂತೆ ದುಬೈ ಈಸ್ ಅಮೇಝಿಂಗ್.. ಇದ್ದದ್ದು ಒಂದೇ ವಾರವಾದರೂ ಒಂದು ಜನ್ಮಕ್ಕಾಗುವಷ್ಟು ನೆನಪುಗಳನ್ನು ದುಬೈ ನನಗೆ ಕೊಟ್ಟಿದೆ. ದುಬೈಯನ್ನು ನಾನೆಷ್ಟು ಎಂಜಾಯ್ ಮಾಡಿದ್ದೇನೆಂದರೆ ವಾಪಾಸ್ ಬರುವಾಗ “ಇನ್ನೂ ಒಂದೆರಡು ದಿನ ಅಲ್ಲೇ ಇದ್ದು ಬಿಡೋಣ ಅನಿಸುತ್ತಿತ್ತು”. ಆದರೇನು ಮಾಡುವುದು, ದುಬೈ ಹೋಗು ಅನ್ನುತಿತ್ತು, ಭಾರತ ಬಾ ಅಂತ ಕರೀತಿತ್ತು!

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post