X

ಸತ್ಯದ ಬೇರುಗಳ ಅನ್ವೇಷಣೆಯ ನಡುವೆ

ಹೊಸ ವರ್ಷ ಬಂದಾಗ ಹಲವರು ಹೊಸ ಪ್ರತಿಜ್ಞೆ ಮಾಡುತ್ತಾರೆ. ಹಳೆಯದನ್ನು ಮರೆಯುತ್ತಾರೆ. ಅಲ್ಲೇ ಸುಳ್ಳಿನ ಮೂಟೆಯೊಂದನ್ನು ಕಟ್ಟುವ ಕಾರ್ಯ ಆರಂಭಗೊಳ್ಳುತ್ತದೆ. ಸತ್ಯದ ಬೇರುಗಳು ಎಲ್ಲೆಲ್ಲೋ ಹುದುಗಿಕೊಂಡಿರುತ್ತದೆ. ಹುಡುಕುತ್ತೀರಾ?

ಇಬ್ಬರಿಗೂ ಗೊತ್ತು. ನಾವು ಹೇಳುತ್ತಿರುವುದು ಅಪ್ಪಟ ಸುಳ್ಳು. ಆದರೆ ಇಬ್ಬರೂ ನಾವಿಬ್ಬರು ಗಳಸ್ಯ ಕಂಠಸ್ಯ ಎನ್ನುತ್ತಾರೆ. ನಾವಿಬ್ಬರೂ ಜೊತೆಯಾಗಿ ದುಡಿಯುತ್ತೇವೆ ಎನ್ನುತ್ತಾರೆ. ಯಾರಾದರೂ ಆ ಇಬ್ಬರನ್ನೂ ಪ್ರಾಮಾಣಿಕತೆಯ ಮೂರ್ತಿ, ಸಜ್ಜನಿಕೆಯ ಪ್ರತಿರೂಪ ಎಂದು ಭಾವಿಸಿದರೆ ಶುದ್ಧ ತಪ್ಪು. ಏಕೆಂದರೆ ಒಬ್ಬರನ್ನು ನೋಡಿದರೆ ಮತ್ತೊಬ್ಬರಿಗೆ ಆಗುವುದಿಲ್ಲ. ಆದರೂ ಭ್ರಮಾಲೋಕವೊಂದನ್ನು ಕಟ್ಟಿಕೊಂಡು ನಾವು ಬದುಕುತ್ತೇವೆ. ಕೆಲ ರಾಜಕೀಯ ಪಕ್ಷಗಳಲ್ಲಿ ಸದ್ಯ ನಡೆಯುತ್ತಿರುವ ವಿದ್ಯಮಾನ ಇವು. ಕಳೆದೊಂದು ತಿಂಗಳಿಂದ ನೀವು ಪತ್ರಿಕೆಯ ಪುಟಗಳನ್ನು ತಿರುವಿದರೆ ದೇಶೋದ್ಧಾರದ ಮಾತುಗಳನ್ನು ರಾಜಕೀಯದವರು ಆಡಿದರೆ, ಅದನ್ನು ನಿಷ್ಠಾವಂತರಾಗಿ ಪಾಲಿಸುತ್ತೇವೆ ಎಂಬುದನ್ನು ಅಧಿಕಾರಿಗಳು ಉಲಿಯುತ್ತಾರೆ. ಪರಮಸತ್ಯ ಇದಲ್ಲ ಎಂದು ಗೊತ್ತಿದ್ದರೂ ನಾಗರಿಕರು ಅಹುದಹುದು ಎಂದು ತಲೆದೂಗುತ್ತಾರೆ.

ಸುಮ್ಮನೆ ತಣ್ಣಗೆ ಕುಳಿತು ಯೋಚಿಸಿ. ಮೊನ್ನೆ ತಾನೇ ಹುಟ್ಟಿದ ಮಗುವಿಗೆ ನೀವು ಯಾರನ್ನು ಆದರ್ಶ ಎಂದು ತೋರಿಸುತ್ತೀರಿ, ಯಾರ ಹಾಗೆ ಮಗು ಬೆಳೆಯಬೇಕು ಎಂದು ಹರಸುತ್ತೀರಿ?

ಇಲ್ಲೊಂದು ಪುಟ್ಟ ಕತೆ ಹೇಳುತ್ತೇನೆ.

ಇಬ್ಬರು ಸರಕಾರಿ ನೌಕರಿಗೆ ಸೇರಿದರು. ಇಬ್ಬರಿಗೂ ಸಮಾನ ಅಂಕ. ಇಬ್ಬರೂ ಬುದ್ಧಿವಂತರು. ಸಮಾಜಸೇವೆಯ ಕಾಳಜಿ ಇಬ್ಬರಿಗೂ ಇತ್ತು. ಆದರೆ ಬರಬರುತ್ತಾ ಒಬ್ಬನಿಗೆ ಮೇಲು ಸಂಪಾದನೆಯ ರುಚಿ ಹತ್ತಿತು. ಮತ್ತೊಬ್ಬನಿಗೆ ಅದು ಸಹ್ಯವೇ ಆಗಲಿಲ್ಲ. ಸರಕಾರ ಇಬ್ಬರಿಗೂ ಸಂಬಳ ಕೊಡುತ್ತಿತ್ತು. ಆ ಸಂಬಳದಲ್ಲಿ ಮೇಲುಸಂಪಾದನೆ ತೆಗೆದುಕೊಳ್ಳದಾತನೂ ಯಾವ ತಾಪತ್ರಯಗಳಿಲ್ಲದೆ ಬದುಕಿದ. ಆದರೆ ಮೇಲು ಸಂಪಾದನೆ ಮಾಡುವಾತ ವೈಭವದ ಬದುಕನ್ನು ಆಯ್ಕೆ ಮಾಡಿಕೊಂಡ. ಆತ ಐಶಾರಾಮೀ ವಾಹನದಲ್ಲಿ ಹೋದರೆ, ಈತ ತಾನೇ ಸಾಲ ಮಾಡಿ ಖರೀದಿಸಿದ ವಾಹನದಲ್ಲಿ ಹೋಗಲು ಆರಂಭಿಸಿದ. ಒಂದು ದಿನ ಇಬ್ಬರೂ ತಮ್ಮ ಕಚೇರಿಯ ಮೊಗಸಾಲೆಯಲ್ಲಿ ಹರಟುತ್ತಾ ಕುಳಿತಿದ್ದರು. ಅಲ್ಲಿಗೆ ಬಂದ ಸಾರ್ವಜನಿಕನೊಬ್ಬ ಮೇಲು ಸಂಪಾದನೆ ಮಾಡುವಾತನನ್ನು ಅತಿ ವಿನಯದಿಂದ ಭಾರೀ ಗೌರವದಿಂದ ಕಂಡ. ಲಂಚ ಪಡೆಯದ ಅಧಿಕಾರಿಯನ್ನು ಪುಟ್ಟ ನಮಸ್ಕಾರವೊಂದನ್ನಷ್ಟೇ ಪಡೆದ. ಸರಿ, ಇಬ್ಬರೂ ನಿವೃತ್ತಿ ಹೊಂದಿದರು. ನಿವೃತ್ತಿ ಹೊಂದಿದಾತನಿಗೆ ಪುಟ್ಟ ಸನ್ಮಾನವೊಂದು ನಡೆದರೆ, ಮೇಲು ಸಂಪಾದನೆ ಮಾಡಿದಾತನಿಗೆ ಸಾರ್ವಜನಿಕ ಸನ್ಮಾನವೇ ನಡೆದವು.

ಈಗ ಹೇಳಿ, ಈ ಕತೆಯಲ್ಲಿ ಬರುವ ಯಾವ ಪಾತ್ರವಾಗಲಿ ಎಂದು ನೀವು ಬಯಸುತ್ತೀರಿ?

ಇಂದು ಲಂಚ ಪಡೆದರೂ ಅಡ್ಡಿ ಇಲ್ಲ, ಆತ ಕೆಲಸ ಮಾಡಿಕೊಡುತ್ತಾನೆ, ಇನ್ನೊಬ್ಬ ಬರೀ ರೂಲ್ಸ್ ಮಾತನಾಡುತ್ತಾ ಕಾಲಹರಣ ಮಾಡಿಕೊಡುತ್ತಾನೆ. ಹೀಗಾಗಿ ಲಂಚ ಕೊಟ್ಟರೂ ಕೆಲಸ ಆದರೆ ಸಾಕು ಎಂಬ ಜನರ ಮನೋಭಾವನೆಗೆ ಪೂರಕವಾಗಿಯೇ ವ್ಯವಸ್ಥೆ ಇದೆ. ಅದು ಸರಿಯಲ್ಲ ಎಂದು ಹೇಳಿದರೆ, ಆತ ಸಮಾಜದ ಮುಖ್ಯವಾಹಿನಿಯಿಂದ ಹೊರ ಬೀಳಬೇಕಾಗುತ್ತದೆ.

ಯಾವುದು ಸರಿ, ಯಾವುದು ತಪ್ಪು?

ಯಾರೋ ಒಬ್ಬ ಹೇಳುತ್ತಿದ್ದ. ಕೇವಲ ವರದಿಗಳನ್ನು ಬರೆದರೆ ಪತ್ರಕರ್ತ ಎನಿಸಿಕೊಳ್ಳುವುದಿಲ್ಲ. ವರದಿಗಳನ್ನು ಯಾರು ಬೇಕಾದರೂ ಬರೆಯಬಹುದು. ನಾಲ್ಕು ಜನರ ಸಂಪರ್ಕ ಹೊಂದಿದಾತನೇ ನಿಜವಾದ ಪತ್ರಕರ್ತ. ಇದನ್ನು ಪತ್ರಿಕೆಯ ಸಂಪಾದಕೀಯ ವಿಭಾಗದವರೇನಾದರೂ ಓದಿದರೆ ಏನನ್ನಬೇಕು? ವಿಶೇಷ ಎಂದರೆ ಕಲೆ, ಸಾಂಸ್ಕೃತಿಕ, ರಾಜಕೀಯ, ಕ್ರೀಡೆ, ಅಷ್ಟೇ ಏಕೆ ಶಾಲಾ ಕಾಲೇಜುಗಳಲ್ಲೂ ಕೆಲವೊಮ್ಮೆ ಅಪಾತ್ರರನ್ನು ಗುರುತಿಸಿ ಅವರನ್ನು ಅಟ್ಟಕ್ಕೇರಿಸಿ ಸನ್ಮಾನ, ಗೌರವ, ಹುದ್ದೆ, ಸ್ಥಾನಮಾನಗಳನ್ನು ನೀಡಿದರೆ ತಪ್ಪು ಸಂದೇಶವೊಂದು ರವಾನೆಯಾಗುವುದಂತೂ ಸತ್ಯ. ಸಮಾಜಕ್ಕೆ ನಾವು ಹೇಗಿರಬೇಕು ಎಂಬುದರ ಪ್ರಸ್ತುತಿಯೇ ಗೊಂದಲಕಾರಿ.

ವ್ಯವಸ್ಥೆಯ ವಿಶಾಲ ಅರ್ಥದಲ್ಲಿ ಹೇಳುವುದಾದರೆ ಸರಕಾರ ಮತ್ತು ಸಮಾಜದ ಒಟ್ಟು ಸ್ವರೂಪ ನಮ್ಮ ವರ್ತನೆಗಳ ಪ್ರತಿಬಿಂಬ. ನಾವು ಹೇಗಿದ್ದೇವೋ ಹಾಗೆ ಸಮಾಜ ಇರುತ್ತದೆ. ಇಂದು ಜನರು ನಮ್ಮ ಮಕ್ಕಳು ಬೇಗನೆ ದೊಡ್ಡವರಾಗಬೇಕು ಎಂದು ಬಯಸುತ್ತಾರೆ. ಆ ದೊಡ್ಡವರು ಎಂಬ ಪದಕ್ಕೆ ಹಲವಾರು ಅರ್ಥಗಳು ಇರುತ್ತವೆ. ಸರಕಾರಿ ಕಚೇರಿ ಸೇರಿದರೆ ಬೇಗ ಭಡ್ತಿ ದೊರಕಬೇಕು. ಸರಕಾರಿ ವಾಹನಗಳು ತಮ್ಮ ಮನೆ ಅಡುಗೆ ಮನೆಯ ಕೊತ್ತಂಬರಿ ಸೊಪ್ಪು ತರಲೂ ಬಳಕೆಯಾಗಬೇಕು ಎಂದು ಅಪೇಕ್ಷೆ ಪಡುವವರೂ ಇದ್ದಾರೆ. ಪ್ರೊಮೋಶನ್ ಪಡೆದು ಅಧಿಕಾರಿಯಾದ ವ್ಯಕ್ತಿಗಳು ತಮ್ಮ ‘ಸ್ಟೇಟಸ್’ ಬದಲಾಯಿಸಿಕೊಂಡದ್ದನ್ನೂ ನಾವು ಗಮನಿಸುತ್ತೇವೆ. ಕಚೇರಿಯೊಂದರಲ್ಲಿ ಏಳೆಂಟು ಸಿಬ್ಬಂದಿ ಇದ್ದರು. ಅದರಲ್ಲಿ ಸೀನಿಯರ್ ಹುದ್ದೆಯಲ್ಲಿದ್ದವರಿಗೆ ಪ್ರತ್ಯೇಕ ಚೇಂಬರ್ ಏನೂ ಇರಲಿಲ್ಲ. ಎಲ್ಲರೊಂದಿಗೆ ಬೆರೆಯುತ್ತಿದ್ದರು. ಒಂದು ದಿನ ಮ್ಯಾನೇಜ್’ಮೆಂಟ್ ಆ ಸೀನಿಯರ್’ಗೆ ನೀವು ಎಲ್ಲರೊಂದಿಗೆ ಕುಳಿತುಕೊಳ್ಳುವುದನ್ನು ನಾವು ಗಮನಿಸಿದ್ದೇವೆ. ಹಾಗೆ ಮಾಡಬಾರದು, ನಿಮಗೊಂದು ಪ್ರತ್ಯೇಕ ಚೇಂಬರ್ ಮಾಡುತ್ತೇವೆ ಅಲ್ಲೇ ಕುಳಿತುಕೊಳ್ಳಿ. ನಿಮ್ಮೊಂದಿಗೆ ಇರುವವರು ಸಹೋದ್ಯೋಗಿಗಳಲ್ಲ. ಅವರು ನಿಮ್ಮ ಕೈಕೆಳಗೆ ಕೆಲಸ ಮಾಡುವವರು. ಅವರನ್ನು ಚೆನ್ನಾಗಿ ದುಡಿಸಿ, ನಗಬೇಡಿ, ಮುಖ ಗಂಟಿಕ್ಕಿಕೊಂಡು ಕೂತುಕೊಳ್ಳಿ ಎಂದು ಟ್ರೈನಿಂಗ್ ಕೊಟ್ಟಿತು.

ಮುಂದಿನ ವಾರದಲ್ಲೇ ಚಿತ್ರಣ ಬದಲಾಯಿತು. ಸೀನಿಯರ್’ಗೆ ಬೇರೆಯ ಛೇಂಬರ್ ಒಂದು ರಚನೆಯಾಯಿತು. ಸೀನಿಯರ್ ಉಳಿದವರೊಂದಿಗೆ ಅಂತರ ಕಾಯ್ದುಕೊಂಡರು. ಇದರಿಂದ ಅವರ ಸಹೋದ್ಯೋಗಿಗಳು ಪ್ರತ್ಯೇಕವಾಗಿ ಕಾಫಿ ಕುಡಿಯಲು ಹೋಗಲಾರಂಭಿಸಿದರು. ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಸೀನಿಯರ್ ಉಳಿದವರೆಲ್ಲರೂ ತನ್ನ ಆದೇಶ ಪಾಲನೆ ಮಾಡತಕ್ಕದ್ದು, ಇಷ್ಟವಿಲ್ಲದವರು ಬಿಟ್ಟು ಹೋಗಬಹುದು ಎಂಬಂತೆ ವರ್ತಿಸಲು ಆರಂಭಿಸಿದರು. ಇದು ಒಟ್ಟು ವಾತಾವರಣವನ್ನೇ ಕುಲಗೆಡಿಸಿತು. ಮ್ಯಾನೇಜ್ಮೆಂಟ್ ತನ್ನ ಕೆಲಸ ಸಾಧಿಸಿತ್ತು. ಇಂದು ಸಾಮಾನ್ಯವಾಗಿ ನಾವು ಕಾಣುತ್ತಿರುವುದೂ ಹಾಗೆಯೇ. ಕಚೇರಿಯಲ್ಲಿ ತಮ್ಮ ಸಿಬ್ಬಂದಿ ಯಾವ ಪ್ರೊಟೋಕಾಲ್ ಅನುಸರಿಸಬೇಕು ಎಂಬುದನ್ನು ಮ್ಯಾಜೇಜ್ಮೆಂಟ್ ನಿರ್ಧರಿಸುತ್ತದೆ. ಯಾರೂ ಸ್ನೇಹಿತರಂತೆ ಇರಬಾರದು ಎಂಬುದನ್ನು ಪರೋಕ್ಷವಾಗಿ ಹೇಳುತ್ತದೆ. ಹೀಗಾದಾಗಲಷ್ಟೇ ಸ್ಪರ್ಧಾ ಭಾವನೆ ಮೂಡಿ ಉತ್ತಮ ಪ್ರೊಡಕ್ಟಿವಿಟಿ ಲಭಿಸುತ್ತದೆ ಎಂಬ ಟ್ರೈನಿಂಗ್ ನೀಡಲಾಗುತ್ತದೆ.

ಶಾಲಾ, ಕಾಲೇಜುಗಳಲ್ಲೂ ಹಾಗೆಯೇ. ಬೆಸ್ಟ್ ಸ್ಟುಡೆಂಟ್ ಆಫ್ ದಿ ಇಯರ್, ಕ್ಲಾಸ್ ಎಂದೆಲ್ಲ ಆಯ್ಕೆ ಮಾಡಿ, ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ ಮೂಡಿಸುವ ಪ್ರಯತ್ನಗಳು ಆಗುತ್ತವೆ. ಇವೆಲ್ಲವೂ ಸಂಘಟಿತವಾಗುವ ಬದಲು ವಿಘಟನೆಯತ್ತ ಮತ್ತು ಮನಸ್ಸನ್ನು ಕುಗ್ಗಿಸುವ ಯತ್ನಗಳು ಎಂಬುದು ಅರಿವಿಗೆ ಬರುವುದೇ ಇಲ್ಲ.

ಹೀಗಾಗಿಯೇ ಹುಟ್ಟಿದ ಮಗುವಿಗೆ ಆತ/ಆಕೆ ಮುಂದೆ ಏನಾಗಬೇಕು ಎಂಬ ಗೊಂದಲ ಹೆತ್ತವರಲ್ಲಿ ಕಾಡುತ್ತದೆ. ಆದರ್ಶನಾಗಿ ಬಾಳಬೇಕು, ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದೆಲ್ಲಾ ನಾವು ಭಾಷಣಗಳಲ್ಲಿ ಹೇಳುವವರು ಎಷ್ಟರಮಟ್ಟಿಗೆ ಪ್ರಾಕ್ಟಿಕಲ್ ಆಗಿ ಹಾಗೆ ಮಾಡುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು.

ಯಾರೋ ಹೇಳಿದ ಈ ಕತೆ ನೆನಪಿಗೆ ಬಂತು.

ಒಂದು ರಾಜಕೀಯ ಪಕ್ಷ ದುರಾಡಳಿತ ನಡೆಸಿದೆ, ನಮಗೆ ಅಧಿಕಾರ ಕೊಡಿ ಅವರು ಮಾಡದ್ದನ್ನು ನಾವು ಇಷ್ಟು ವರ್ಷಗಳಲ್ಲಿ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂತು. ಹಾಗೆ ಅಧಿಕಾರ ಪಡೆಯುವ ವೇಳೆ ಅವರ ಜೊತೆ ನಿಸ್ವಾರ್ಥವಾಗಿ ಕೆಲಸ ಮಾಡುವ ಕೆಲವರು ಒಂದು ರೂಪಾಯಿಯನ್ನೂ ತೆಗೆದುಕೊಳ್ಳದೆ ಪ್ರಾಮಾಣಿಕವಾಗಿ ದುಡಿದರು. ಅಧಿಕಾರ ಬಂದ ಮೇಲೆ ಕತೆಯೇ ಬೇರೆಯಾಯಿತು. ಪರಿಸ್ಥಿತಿ ಮೊದಲಿನಂತೆ ಆಯಿತು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗೆದ್ದವರ ಪಕ್ಷದ ನಿಕಟವರ್ತಿಗಳು ಜಾಗ ರಿಜಿಷ್ಟ್ರೇಶನ್’ಗೆಂದು ಬರತೊಡಗಿದರು. ದಿಢೀರನೆ ಕೆಲವರಲ್ಲಿ ಐಶಾರಾಮಿ ಕಾರುಗಳು ಕಾಣ ಸಿಕ್ಕವು. ಪ್ರಾಮಾಣಿಕವಾಗಿ ಬೀದಿ, ಗಲ್ಲಿಯಲ್ಲಿ ದುಡಿದವರು ಹಾಗೆಯೇ ಉಳಿದರು. ಚುನಾವಣೆ ಬಂತು. ಜನರು ಆ ಪಕ್ಷವನ್ನು ಕಿತ್ತೆಸೆದು ಮತ್ತೆ ಇನ್ನೊಂದು ಪಕ್ಷವನ್ನು ಅಧಿಕಾರಕ್ಕೆ ತಂದರು. ಹಳೇ ಕತೆ ರಿಪೀಟ್…

ಹೌದು. ಕಾಗೆ ಬಣ್ಣ ಬಿಳಿ ಎಂದು ಯಾರಾದರೊಬ್ಬ ಪ್ರಭಾವಿ ಹೇಳಿದರೆ, ಹೌದೌದು ಎನ್ನುವ ತಂಡವೇ ಸೃಷ್ಟಿಯಾಗುತ್ತದೆ. ಆ ಕಾಗೆ ಬಿಳಿಯಾಗಿದೆ ಎಂದು ದಪ್ಪ ಅಕ್ಷರಗಳಲ್ಲಿ ಪತ್ರಿಕೆಗಳಲ್ಲಿ ಪ್ರಿಂಟ್ ಆಗುತ್ತದೆ. ಅದು ಬಿಳಿಯಲ್ಲ, ಕಪ್ಪು ನಿಮಗೆ ಗೊತ್ತಲ್ವಾ ಸುಮ್ಮನೆ ಹೇಳ್ತಾರೆ ಎಂದು ವಿರೋಧಿಸುವಾತ ಪತ್ರಕರ್ತರ ಪಕ್ಕ ಬಂದು ಹೇಳುತ್ತಾರೆಯೇ ವಿನ: ಪತ್ರಿಕಾಗೋಷ್ಠಿ ಮಾಡು ಅಧಿಕಾರಸ್ಥ ಹೇಳಿದ್ದೆಲ್ಲವೂ ಸುಳ್ಳು ಎಂಬ ಧೈರ್ಯ ಮಾಡುವುದಿಲ್ಲ. ಮತ್ತೆ ಅದೇ ವಿರೋಧಿಸುವಾತ ಪ್ರಭಾವಿಯ ಜಾಗಕ್ಕೆ ಬಂದಾಗ ವಿಷಯ ಗೊತ್ತುಂಟಾ ಕಾಗೆ ಬಣ್ಣ ಬಿಳಿ ಎನ್ನುತ್ತಾರೆ. ಮೊದಲು ಪ್ರಭಾವಿಯಾಗಿದ್ದಾತ ಅದನ್ನು ವಿರೋಧಿಸುತ್ತಾನೆ. ಆಗ ಇಬ್ಬರದ್ದೂ ಸಮಾನ ಹೇಳಿಕೆ ಬರುತ್ತದೆ. ಅದೇನೆಂದರೆ

ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯಬೇಡಿ.

ಆಗ ತಾನೇ ಹುಟ್ಟಿದ ಮಗುವನ್ನು ಪ್ರಭಾವಶಾಲಿಯನ್ನಾಗಿ ಹೇಗೆ ಮಾಡುವುದು ಎಂದು ಹೆತ್ತವರು ಯೋಚಿಸುತ್ತಾ, ಡೊನೇಶನ್ ಗೆ ಎಷ್ಟು ಅಟ್ಟಿ ನೋಟು ಸಂಗ್ರಹ ಮಾಡುವುದು ಎಂಬುದನ್ನು ಯೋಚಿಸುತ್ತಾರೆ. ಇದೇ ಸರಿಯಾದ ವ್ಯವಸ್ಥೆ ನೀವು ಕಂಡುಕೊಂಡದ್ದೆಲ್ಲವೂ ಇಲ್ಯೂಷನ್ ಎಂದು ಹೇಳುವ ತಂಡವೊಂದು ಸಿದ್ಧವಾಗುತ್ತದೆ.

ಹೀಗಾಗಿ ಯಾರಾದರೂ ಸತ್ಯದ ಬೇರುಗಳ ಅನ್ವೇಷಣೆಗೆ ತೊಡಗಿದರೆ ಆತ ಅಪ್ರಸ್ತುತನಾಗುತ್ತಾನೆ. ಇದು ವಾಸ್ತವ.

Facebook ಕಾಮೆಂಟ್ಸ್

Harish mambady: ಕಳೆದ ಹದಿನಾರು ವರ್ಷಗಳಿಂದ ಹೊಸ ದಿಗಂತ, ಉದಯವಾಣಿ, ತರಂಗ, ಕನ್ನಡಪ್ರಭ ಹಾಗೂ ವಿಜಯವಾಣಿಯಲ್ಲಿ ಉಪಸಂಪಾದಕ, ವರದಿಗಾರ ಹಾಗೂ ಮುಖ್ಯ ಉಪಸಂಪಾದಕನ ಜವಾಬ್ದಾರಿ ನಿಭಾಯಿಸಿರುವ ಹರೀಶ ಮಾಂಬಾಡಿ ಸದ್ಯ ಫ್ರೀಲ್ಯಾನ್ಸ್ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಸಮಕಾಲೀನ ವಿದ್ಯಮಾನ,  ಸಿನಿಮಾ ಕುರಿತ ಲೇಖನಗಳು, ಬರೆಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿವಾಸಿ.
Related Post