ಇಂದು ಜ್ಯಾಕ್ ಸೊಬಿಯಾಕ್ ನೆನಪಾಗುತ್ತಿದ್ದಾನೆ. ಇಂದು ಮಾತ್ರವಲ್ಲ ‘ಆಸ್ಟಿಯೋಸರ್ಕೋಮ’ ಎಂದಾಗ, ಗಿಟಾರ್’ನ್ನು ಕಂಡಾಗ, ಧೈರ್ಯ ಹಾಗೂ ಆತ್ಮವಿಶ್ವಾಸಗಳ ಮಾತುಗಳು ಬಂದಾಗೆಲ್ಲಾ ಆತ ನೆನಪಾಗುತ್ತಾನೆ. ಜ್ಯಾಕ್ ಬಗ್ಗೆ ಈ ಹಿಂದೆಯೂ ಹೇಳಿದ್ದೆ. ಕೆಲ ವ್ಯಕ್ತಿಗಳು ನಮಗೆ ಹತ್ತಿರದಿಂದ ಪರಿಚಯವಿಲ್ಲದಿದ್ದರೂ, ಮುಖಾಮುಖಿಯಾಗಿ ಭೇಟಿಯಾಗಿಲ್ಲದಿದ್ದರೂ, ಅವರೊಂದಿಗೆ ಮಾತನಾಡದಿದ್ದರೂ ಕೂಡ ಮನಸ್ಸಿಗೆ ಅದೇನೊ ಒಂದು ರೀತಿ ಹತ್ತಿರವಾಗಿರುತ್ತಾರೆ. ಅವರ ಬದುಕು ನಮ್ಮನ್ನ ಸ್ಪರ್ಶಿಸಿರುತ್ತದೆ. ನಮಗೇನೋ ಹೇಳಿಕೊಟ್ಟಿರುತ್ತದೆ. ಹಾಗಾಗಿಯೇ ಅವರು ನೆನಪಾದಾಗೆಲ್ಲ ಏನೋ ಒಂದು ಆಪ್ತಭಾವ. ಸಾವು ಎನ್ನುವುದು ಸೋಲಲ್ಲ ಎಂದು ನನಗೆ ಹೇಳಿಕೊಟ್ಟ ಮೊದಲ ವ್ಯಕ್ತಿ ಜ್ಯಾಕ್. ಸಾವು ಮತ್ತು ಬದುಕಿನೆಡೆಗಿನ ನನ್ನ ದೃಷ್ಟಿಕೋನವನ್ನು ಬದಲಿಸಿತ್ತು ಆತನ ಬದುಕು. ಕೆಲ ವ್ಯಕ್ತಿಗಳೇ ಹಾಗೆ. ಅವರ ಆತ್ಮವಿಶ್ವಾಸ ಯಾರನ್ನಾದರೂ ಆಕರ್ಷಿಸುವಂತಿರುತ್ತದೆ. ಅವರ ಛಾಪು ಮನಸ್ಸಿನಲ್ಲಿ ಅಚ್ಚಳಿಯದೆ ನಿಂತು ಬಿಡುತ್ತದೆ. ಅಂತಹದೇ ಇನ್ನೋರ್ವ ವ್ಯಕ್ತಿಯ ಬಗ್ಗೆ ಹೇಳ ಹೊರಟಿದ್ದೇನೆ. ಆಕೆಯ ಹೆಸರು ಸಾರಾ ಖಾತಿಬ್.
೨೦೦೮ರಲ್ಲಿ ಸಾರಾಳ ಬಲಗೈಯಲ್ಲಿ ಟ್ಯೂಮರ್ ಕಾಣಿಸಿಕೊಂಡಿತ್ತು, ಅದರೆ ಅದು ಕ್ಯಾನ್ಸರಸ್ ಆಗಿರಲಿಲ್ಲ. ಹಾಗಾಗಿ ಸರ್ಜರಿ ಮಾಡಿ ತೆಗೆಯಲಾಗಿತು. ನಂತರ ೨೦೧೨ರಲ್ಲಿ ಮತ್ತೆ ಅದೇ ಜಾಗದಲ್ಲಿ ಟ್ಯೂಮರ್ ಕಾಣಿಸಿಕೊಂಡಿತ್ತು. ಯಥಾಪ್ರಕಾರ ಸರ್ಜರಿ ಮಾಡಿ ಅದನ್ನ ತೆಗೆಯಲಾಯಿತು. ೨೦೧೪ರ ಒಂದು ದಿನ ಕಾಗದದ ಚೂರೊಂದನ್ನು ಕಸದಬುಟ್ಟಿಗೆ ಎಸೆಯುವಾಗ ಆಕೆಯ ಬಲಗೈಗೆ ಫ್ರಾಕ್ಚರ್ ಆಯಿತು. ನಿಜ, ಅಷ್ಟು ಸಣ್ಣ ಕೆಲಸ ಮಾಡುವಾಗ! ಡಾಕ್ಟರ್ ಮತ್ತೆ ಟ್ಯೂಮರ್ ಎಂದರು. ಮತ್ತೆ ಸರ್ಜರಿ ಏನೋ ಆಯಿತು, ಆದರೆ ಈ ಬಾರಿ ಆ ಟ್ಯೂಮರ್ ಕ್ಯಾನ್ಸರಸ್ ಆಗಿತ್ತು. ತಕ್ಷಣವೇ ಟ್ಯೂಮರ್’ನ್ನು ತೆಗೆಯಲಾಯಿತು. ಆದರೆ ಸರ್ಜರಿ ಮಾಡಿದ ಗಾಯದ ಬಳಿ ಇನ್’ಫೆಕ್ಷನ್ ಕಾಣಿಸಿಕೊಂಡಿತ್ತು. ಡಾಕ್ಟರ್ ಸುಮಾರು ಆರು ವಾರಗಳ ಕಾಲ ಪ್ರಯತ್ನಪಟ್ಟರೂ ಕೂಡ ಪರಿಣಾಮ ಶೂನ್ಯ. ನಂತರ ವಿಧಿಯಿಲ್ಲದೆ ಆಕೆಯ ಬಲಗೈಯನ್ನು ತೆಗೆಯಬೇಕಾಯಿತು. ಸಾರಾ ಮನದಲ್ಲಿ ಆಗ “ನನಗೆ ಏಕೆ” ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು, ಆದರೆ ಕ್ರಮೇಣ “ನಾನೇ ಏಕೆ?”, “ನನಗೇ ಏಕೆ” ಎನ್ನುವಂತಹ ಪ್ರಶ್ನೆಗಳು ಉಪಯೋಗಕ್ಕೆಬಾರದ್ದು ಎನಿಸಿತಂತೆ. ‘ನಾನೆ ಏಕೆ?’ ಎಂದು ಪ್ರಶ್ನಿಸಿಕೊಳ್ಳುವ ಪ್ರತಿಯೊಬ್ಬನಿಗೂ ಸಿಗುವ ಉತ್ತರವೇ ಇದು! ಆ ಪ್ರಶ್ನೆಯೇ ಕೆಲಸಕ್ಕೆಬಾರದ್ದು ಎನ್ನುವ ಅರಿವು ಎಲ್ಲರಿಗೂ ಉಂಟಾಗುತ್ತದೆ.
ಸಾರಾ ತನ್ನ ಸಮಸ್ಯೆಗಳು ತನ್ನನ್ನ ವ್ಯಾಖ್ಯಾನಿಸುವಂತಿರಬಾರದು ಎಂದು ಬಯಸಿದ್ದಳು ಆ ಕಾರಣಕ್ಕಾಗಿಯೇ ಆಕೆ ಕೀಮೋ ಮಧ್ಯೆ ಕೂಡ ಕಾಲೇಜಿಗೆ ಹೋಗುವುದನ್ನ ಬಿಡುತ್ತಿರಲಿಲ್ಲ. ಇನ್’ಫೆಕ್ಷನ್’ಗಳಿಂದ ದೂರವಿರಬೇಕೆಂದು ಹೇಳಿದ್ದರೂ ಮಾಸ್ಕ್ ಹಾಕಿಕೊಂಡು ಕ್ಲಾಸಿನಲ್ಲಿ ಕೂರುತ್ತಿದ್ದಳು. ಆಕೆ ಎಡಗೈಯ್ಯಲ್ಲಿ ಬರೆಯುವುದನ್ನ ಆರಂಭಿಸಿದಳು. ಒಂದೊಂದೆ ಅಕ್ಷರದಿಂದ ಆರಂಭಿಸಿ ಕೊನೆಗೆ ಎಡಗೈಯ್ಯಲ್ಲೇ ತನ್ನ ಪರೀಕ್ಷೆಗಳನ್ನು ಕೂಡ ಬರೆಯುವಂತಾಗುತ್ತಾಳೆ.
“Pain is inevitable; suffering is optional.” ಎನ್ನುತ್ತಾಳೆ ಸಾರಾ. ಆ ರೀತಿಯೇ ಬದುಕಿದವಳು ಸಾರಾ. ಆಂಪ್ಯೂಟೇಶನ್ ಎಂಬ ಸವಾಲನ್ನು ಎದುರಿಸುವ ಆಯ್ಕೆ ಮಾಡಿಕೊಂಡಿದ್ದಳು ಆಕೆ. ಕ್ಯಾನ್ಸರ್’ನೊಂದಿಗೆ ಬದುಕುವುದನ್ನ ಆಯ್ಕೆ ಮಾಡಿಕೊಂಡಿದ್ದಳು. ಆಕೆ ಪ್ರತಿನಿತ್ಯ ನೋವಿನಲ್ಲಿದ್ದಳು. ಪ್ರತಿದಿನ ಮಾರ್ಫಿನ್, ಸೊಲ್ಪಡೈನ್, ನ್ಯೂರೋಂಟಿನ್ ಟ್ರಿಪ್ಟಿಜೋಲ್, ಫೆಂಟಾನಿಲ್ ಎಂಬ ನೋವುನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಲೇ ಇರಬೇಕು. ಹಾಗಂತ ಅದಕ್ಕೇ ಹೆಚ್ಚು ಪ್ರಾಮುಖ್ಯತೆ ಕೊಡಲಿಲ್ಲ. ಬದಲಾಗಿ ತನ್ನದೊಂದು ‘ಬಕೆಟ್ ಲಿಸ್ಟ್’ ತಯಾರಿಸಿಕೊಂಡು ಅದನ್ನು ಸಾಕಾರ ಮಾಡಿಕೊಳ್ಳುವುದಕ್ಕೆ ಹೆಚ್ಚು ಒತ್ತು ನೀಡಿದಳು. ಸಾರಾ ತನ್ನ ಇಷ್ಟದ ಕೋಲ್ಡ್’ಪ್ಲೇ ಬ್ಯಾಂಡ್ ಅವರು ಲಂಡನ್ನಿನಲ್ಲಿ ನಡೆಸಿದ ಲೈವ್ ಕಾನ್ಸರ್ಟ್’ನ್ನು ಹೋಗಿ ನೋಡಿಬಂದಳು. ಪ್ಯಾರಿಸ್’ನಲ್ಲಿ ಮಧ್ಯರಾತ್ರಿ ಚಳಿಯಲ್ಲಿ ೫೪ ನಿಮಿಷಗಳ ಕಾಲ ಕಾದು ನಿಂತು ಐಫೆಲ್ ಟವರ್ ಝಗಮಗಿಸುವುದನ್ನು ನೋಡಿದಳು. ಗ್ರೀಸ್’ನಂತಹ ಸುಂದರ ನಗರಕ್ಕೆ ಭೇಟಿ ಇತ್ತು ತನ್ನ ಕಣ್ತುಂಬಿಕೊಂಡಳು. ಜೊತೆಗೆ ಬೆಳಗಿನ ಜಾವ ೩ ಗಂಟೆಗೆ ಎದ್ದು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಕ್ಲಬ್’ಗೆ ಹೋಗಿದ್ದಳು ಆ ರೀತಿಯ ಜೀವನಶೈಲಿಯನ್ನು ಅನುಭವಿಸುವುದಕ್ಕೆ ಹಾಗೂ ಮೈಕೊನೊಸ್’ನ (ಗ್ರೀಸ್’ನ ಒಂದು ದ್ವೀಪ) ರಾತ್ರಿಯನ್ನು ನೋಡಲು. ಆಕೆ ಮೆಡಿಕೇಶನ್’ನಲ್ಲಿ ಇದ್ದರೂ ಕೂಡ ವಿಸ್ಕಿ ಟೂರ್’ಗೆ ಹೋಗಿದ್ದಳು. ಇವೆಲ್ಲವು ಆಕೆಯ ಬಕೆಟ್ ಲಿಸ್ಟ್’ನಲ್ಲಿದ್ದದ್ದಾಗಿತ್ತು. ಇದೆಲ್ಲದರ ಜೊತೆ ಇನ್ನೊಂದು ಆಸೆ ಆಕೆಯ ಬಕೆಟ್ ಲಿಸ್ಟ್’ನಲ್ಲಿತ್ತು. ಅದೇ ಟೆಡ್ ಟಾಕ್!!
ಆಗಸ್ಟ್ ೨೩, ೨೦೧೪ರಲ್ಲಿ ಲೆಬನೀಸ್ ಅಮೆರಿಕನ್ ಯೂನಿವರ್ಸಿಟಿಯಲ್ಲಿ ನಡೆದ ಟೆಡ್ ಟಾಕ್’ನಲ್ಲಿ ಭಾಗವಹಿಸಿ ಇಡೀ ವಿಶ್ವಕ್ಕೆ ತನ್ನ ಸಂದೇಶವನ್ನು, ಜೀವನದಲ್ಲಿ ತಾನು ಕಲಿತ ನಾಲ್ಕು ಬಹು ಮುಖ್ಯ ಪಾಠಗಳನ್ನು ನೀಡಿದಳು. ತಂದೆ ತಾಯಿ ಆಕೆಗೆ ಹೇಳಿಕೊಟ್ಟಿದ್ದರಂತೆ, ಸುಳಿಯಲ್ಲಿ ಸಿಕ್ಕಿಹಾಕಿಕೊಂಡಾಗ ಹೆಚ್ಚು ಹೋರಾಡಬೇಡ. ಅದು ನಿನ್ನನ್ನ ಸೆಳೆದುಕೊಳ್ಳಲಿ ಬಿಡು, ತೀರಾ ಕೆಳಗೆ ಹೋದಂತೆ ಅದರ ಶಕ್ತಿ, ಒತ್ತಡ ಕಡಿಮೆಯಾಗುತ್ತದೆ ಆಗ ನಿನ್ನ ಶಕ್ತಿಯನ್ನ ಸಮರ್ಥವಾಗಿ ಬಳಸಿ, ಈಜಿ ಮೇಲೆ ಬಾ ಎಂದು. ಕೀಮೊ, ರೇಡಿಯೇಷನ್, ಆಂಪ್ಯೂಟೇಷನ್ ಇವೆಲ್ಲ ಒಂದು ಸುಳಿಯಂತೆ ಸಾರಳನ್ನು ತನ್ನೊಳಗೆ ಸೆಳೆಯುತ್ತಿತ್ತು, ಅದನ್ನೆಲ್ಲ ಪ್ರತಿರೋಧಿಸದೇ, ಕಾದು ಅವುಗಳ ಶಕ್ತಿ ಕುಂದಿದಾಗ ತಾನು ಮೇಲೆ ಬಂದಿದ್ದಳು. ಇದು ಆಕೆ ಹೇಳಿದ ಮೊದಲ ಪಾಠ. ಆಕೆ ತನ್ನ ಬದುಕಿನಲ್ಲಿ ಕಲಿತ ಮೊದಲ ಪಾಠ. ಎರಡನೆಯದು, “ನಮ್ಮ ನ್ಯೂನತೆಗಳು ನಮ್ಮನ್ನ ವ್ಯಾಖ್ಯಾನಿಸದಿರಲಿ” ಎನ್ನುವ ಪಾಠ ಹೇಳುತ್ತಾಳೆ. ಆಂಪ್ಯೂಟೇಷನ್ ಆಕೆಯ ಪಾಲಿಗೆ ದೊಡ್ಡ ಸವಾಲಾಗಿತ್ತು. ಆದರೆ ಅದನ್ನ ಅಷ್ಟೇ ಧೈರ್ಯವಾಗಿ ಎದುರಿಸಿ ನಿಂತು, ಬಲಗೈ ಇಲ್ಲದೇ ತನ್ನೆಲ್ಲ ಕೆಲಸಗಳನ್ನ ಮಾಡಿಕೊಳ್ಳಲು ಕಲಿತಳು. ಮೂರನೇ ಪಾಠವೇ ನೋವಿನ ಬಗ್ಗೆ ಆಕೆ ಹೇಳಿದ್ದು. ನೋವು ಬದುಕಿನಲ್ಲಿ ಸಹಜ ಆದರೆ ಅದನ್ನು ಅನುಭವಿಸುವುದು ಮಾತ್ರ ನಮ್ಮ ಆಯ್ಕೆ ಎಂದು. ಇನ್ನು ನಾಲ್ಕನೇ ಪಾಠ “ನಿಮ್ಮ ಕನಸುಗಳನ್ನ ಮುಂದೂಡಬೇಡಿ” ಎನ್ನುವುದು. ಭವಿಷ್ಯ ನಾವಂದುಕೊಂಡ ಹಾಗೆಯೇ ಇರುವುದಿಲ್ಲ. ಹಾಗಾಗಿ ಕನಸುಗಳನ್ನ ಮುಂದೂಡಬೇಡಿ ಎನ್ನುತ್ತಾಳೆ. ಇವೆಲ್ಲ ಆಕೆಗೆ ಕ್ಯಾನ್ಸರ್ ಹೇಳಿಕೊಟ್ಟ ಪಾಠ.
ಅಂದು ಆ ಟೆಡ್ ಟಾಕ್’ನ ಮೂಲಕ ತಾನು ತನ್ನ ಬದುಕಿನಿಂದ ಕಲಿತ ಪಾಠವನ್ನು ಸಾರಿದಳು. ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದಂತಹ ಪಾಠಗಳು ಅವು. ಅಂದು ಆಕೆಯ ಮಾತುಗಳನ್ನ ಕೇಳಿ ಅಲ್ಲಿ ನೆರೆದಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು. ಆದರೆ ವಿಪರ್ಯಾಸ ನೋಡಿ ಆಕೆ ಹೇಳಿದ ‘ಭವಿಷ್ಯ ನಾವಂದುಕೊಂಡಂತೆ ಇರುವುದಿಲ್ಲ’ ಎಂಬ ಮಾತು ಬಹಳ ಬೇಗ ನಿಜವಾಗಿತ್ತು. ಈ ಟೆಡ್ ಟಾಕ್ ನಡೆದು ಎರಡು ವಾರವಷ್ಟೇ ಆಗಿತ್ತು, ಸಾರಾ ಕ್ಯಾನ್ಸರ್’ನಿಂದಾಗಿ ಇಹಲೋಕವನ್ನು ತ್ಯಜಿಸಿದ್ದಳು!!
ನಮ್ಮಲ್ಲಿ ಸಾವು ಎಂದರೆ ಸೋಲು ಎಂಬ ಭಾವ ಇದೆ. ಸಾವು ಸೋಲು ಎನ್ನುವುದನ್ನು ಪ್ರತಿನಿಧಿಸುವುದಾಗಿದ್ದರೆ ನಮ್ಮೆಲ್ಲರ ಪಯಣವೂ ಸೋಲಿನೆಡೆಗೆ ಆಗುತ್ತಿರಲಿಲ್ಲವೇ?! ಜ್ಯಾಕ್ ಸಾವನ್ನಪ್ಪಿದಾಗ ದುಃಖವಾಗಿದ್ದು ನಿಜ, ಆದರೆ ಅದು ಸೋಲು ಎನಿಸಲಿಲ್ಲ. ಯಾಕೆಂದರೆ ಬದುಕು ಒಡ್ಡಿದ ನೋವಿನ ಎದುರು ಆತ ತೋರಿದ ಆತ್ಮವಿಶ್ವಾಸ ಇವೆಲ್ಲವನ್ನೂ ಮೀರಿದ್ದು. ಹಾಗೆಯೇ ಸಾರಾ ಕೂಡ. ಸಾರ ಖಾತಿಬ್ ಎಂಬ ೨೨-೨೩ ವರ್ಷದ ಹುಡುಗಿ ತನ್ನ ಸಮಸ್ಯೆಗಳನ್ನ ತೆಗೆದುಕೊಂಡು ರೀತಿ, ಅವೆಲ್ಲದರ ನಡುವೆ ಬದುಕನ್ನ ಆಸ್ವಾದಿಸಿದ ರೀತಿ, ಜನರಿಗೆ ಸ್ಪೂರ್ತಿ ತುಂಬಿದ ರೀತಿ, ಆಕೆಯ ಧೈರ್ಯ, ಆತ್ಮವಿಶ್ವಾಸ, ನೋವಿನಲ್ಲೂ ಮುಕ್ತವಾಗಿ ನಗುವ ಕಲೆ ಇವೆಲ್ಲವನ್ನೂ ಮೀರಿದ್ದು. ಲೆಬನೀಸ್ ಅಮೇರಿಕನ್ ವಿಶ್ವವಿದ್ಯಾನಿಲಯದಲ್ಲಿ ಈಗ ಸಾರಾ ಹೆಸರಲ್ಲಿ ಸ್ಕಾಲರ್’ಶಿಪ್ ನೀಡಲಾಗುತ್ತಿದೆ. ಸಾವಿನ ನಂತರವೂ ಜನರಿಗೆ ತನ್ನ ಪಾಠಗಳಿಂದ ಸ್ಫೂರ್ತಿ ತುಂಬುತ್ತಿರುವುದನ್ನ ಸೋಲು ಎಂದು ಹೇಳುವುದಾದರೂ ಹೇಗೆ?!
ನನ್ನ ಪ್ರಕಾರ ಸಾವು ಎನ್ನುವುದನ್ನ ಸೋಲು ಗೆಲುವಿನ ತಕ್ಕಡಿಯಲ್ಲಿ ಇಟ್ಟು ನೋಡುವುದೇ ತಪ್ಪು. ಬದುಕಿನಲ್ಲಿ ಎಲ್ಲ ಘಟನೆಗಳನ್ನು ಸೋಲು, ಗೆಲುವು ಎನ್ನುವ ತಕ್ಕಡಿಯಲ್ಲಿಡುವುದರ ಬದಲು ಅನುಭವಗಳಾಗಿ ಸ್ವೀಕರಿಸಲಾರಂಭಿಸಿದರೆ ಅದೇ ಒಳಿತು. ಆಗಲೇ ಇವನ್ನೆಲ್ಲಾ ಮೀರಿ ಬದುಕಲು ಸಾಧ್ಯ. ಆಸ್ವಾದಿಸಲು ಸಾಧ್ಯ..
Facebook ಕಾಮೆಂಟ್ಸ್