ಅದು ಆಸ್ಸಾಂ ರಾಜ್ಯದ “ಜತಿಂಗಾ” ಎಂಬ ಸಣ್ಣ ಹಳ್ಳಿ. ಅಲ್ಲಿನ ಜನಸಂಖ್ಯೆ ಸುಮಾರು 2500ರಷ್ಟಿರಬಹುದು. ಆಗಷ್ಟೆ ಮಾನ್ಸೂನ್ ಅವಧಿ ಮುಗಿದು ಚಳಿಗಾಲದ ಪ್ರಾರಂಭ. ಅಂದರೆ ಸಪ್ಟೆಂಬರ್ ದಿಂದ ನವೆಂಬರ್ ನಡುವಣದ ದಿನಗಳು. ಸಂಜೆ ಸುಮಾರು 7 ರಿಂದ ರಾತ್ರಿ 10 ಗಂಟೆಯ ನಡುವಿನ ಅವಧಿ. ಆಗ ಪ್ರಾರಂಭವಾಗುತ್ತದೆ, ಪಕ್ಷಿಗಳ ಸಾಮೂಹಿಕ ಆತ್ಮಹತ್ಯೆಯ ಮಾರಣಹೋಮ. ಆಶ್ಚರ್ಯವಾಗುತ್ತಿದೆಯೇ? ನಂಬಲು ಕಷ್ಟವಾದರೂ ಇದು ನಿಜ.
ಮನುಷ್ಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದು ಸಾಮಾನ್ಯ ವಿಷಯ. ಆದರೆ ಇಲ್ಲಿ ವಿಚಿತ್ರವೆನಿಸುವಂತೆ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಅದೂ ಪ್ರತೀ ವರ್ಷ ಸಪ್ಟೆಂಬರ್’ನಿಂದ ನವೆಂಬರ್ ತಿಂಗಳ ನಡುವೆ. ಸೂರ್ಯಾಸ್ತವಾದ ನಂತರ 7 ಗಂಟೆಯಿಂದ 10 ಗಂಟೆಯ ಸಮಯದ ನಡುವೆ ಅವು ಆತ್ಮಹತ್ಯೆ ಮಾಡಿಕೊಳ್ಳುವ ಸಮಯ. ಅದೂ ಸಾಮೂಹಿಕವಾಗಿ ನೂರಾರು ಪಕ್ಷಿಗಳು ಹೀಗೆ ಅಸಹಜ ರೀತಿಯಲ್ಲಿ ಸಾವನ್ನಪ್ಪುತ್ತವೆ.
ಜಗತ್ತಿನ ಹಲವಾರು ವಿಚಿತ್ರ ಸಂಗತಿಗಳಲ್ಲಿ ಇದೂ ಒಂದು. ಆ ಚಳಿಗಾಲದ ಸಮಯದಲ್ಲಿ ಸಾಮಾನ್ಯವಾಗಿ ಬೇಗ ಕತ್ತಲಾವರಿಸುವ ಜೊತೆಗೆ, ಇಬ್ಬನಿ ಮಸುಕಿ ಏನೂ ಕಾಣದಂತಾಗುತ್ತದೆ, ಚಂದ್ರನ ಬೆಳದಿಂಗಳೂ ಇರುವುದಿಲ್ಲ. ಈ ಸಂದರ್ಭದಲ್ಲಿ ಆ ಪಕ್ಷಿಗಳಿಗೆ ಏನನ್ನಿಸುತ್ತದೋ ಏನೋ? ರಾತ್ರಿಯಾಗುತ್ತಿದ್ದಂತೆ, ಹೆಚ್ಚಿನ ಪಕ್ಷಿಗಳು ಹೊರಗಡೆ ಹಾರಾಡುವುದು ವಿರಳ. ಆದರೆ ಇಲ್ಲಿ ರಾತ್ರಿಯಾಗುತ್ತಿದ್ದಂತೆ ಹಲವಾರು ಪಕ್ಷಿಗಳು ಬೆಟ್ಟದ ತುದಿಯಿಂದ ಹಾರಾಡುತ್ತಾ ಕೆಳಗೆ ಬಿದ್ದು ಸಾಯುತ್ತವೆ.
ಇದಕ್ಕೆ ಅಲ್ಲಿನ ಜನ ಹೇಳುವುದೇನೆಂದರೆ, ಯಾವುದೋ ಕಣ್ಣಿಗೆ ಕಾಣದ ಶಕ್ತಿ ಅಥವಾ ದೆವ್ವ-ಭೂತದ ಶಕ್ತಿಯಿಂದ, ಪಕ್ಷಿಗಳು ಹೀಗೆ ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎಂದು. ಆದರೆ ಇದು ಕೇವಲ ಕಲ್ಪನೆ ಮತ್ತು ಅಲ್ಲಿನ ಜನರ ನಂಬಿಕೆ ಮಾತ್ರ. ಇದಕ್ಕೆ ವೈಜ್ಞಾನಿಕ ಕಾರಣ ಬೇರೆಯದೇ ಇದೆ. ಇದರ ಕುರಿತು ಹಲವಾರು ವೈಜ್ಞಾನಿಕ ತನಿಖೆಗಳಾಗಿವೆ. ಹಲವಾರು ಪಕ್ಷಿ ತಜ್ಞರು, ಇದರ ಕುರಿತು ಅಧ್ಯಯನ ನಡೆಸಿದ್ದಾರೆ. ಇದಕ್ಕೆ ವಿವಿಧ ರೀತಿಯ ಕಾರಣಗಳನ್ನೂ ಕೊಟ್ಟಿದ್ದಾರೆ. ಆದರೆ ಅವುಗಳು ಸತ್ಯಕ್ಕೆ ಹತ್ತಿರವಾದವುಗಳೆಂದು ಊಹಿಸಬಹುದಾಗಿದೆಯೇ ಹೊರತು, ನಿಖರವಾಗಿ ಹೀಗೆ ಎಂದು ಹೇಳುವಲ್ಲಿ ಸೋತಿದ್ದಾರೆ. ಇಂದು ಮನುಷ್ಯ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದಿದ್ದರೂ, ಪಕೃತಿಯಲ್ಲಿ ನಡೆಯುವ ಇಂತಹ ಹಲವಾರು ವಿಚಿತ್ರ ಸಂಗತಿಗಳಿಗೆ ನಿಖರವಾದ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಕೃತಿಯೆಂಬುದು ಹಲವಾರು ವಿಸ್ಮಯಗಳ ತವರು ಎಂದೇ ಹೇಳಬಹುದು. ಇಲ್ಲಿ ನಡೆಯುವ ಅದೆಷ್ಟೋ ಸಂಗತಿಗಳು ಮನುಷ್ಯನ ಊಹೆಗೂ ಮೀರಿದ್ದಾಗಿರುತ್ತದೆ. ಉತ್ತರ ಕಂಡುಕೊಳ್ಳಲಾಗದ ಇಂತಹ ಹಲವು ವಿಚಿತ್ರ ಸಂಗತಿಗಳಿಗೆ ಮನುಷ್ಯ ಕೊನೆಗೆ, ‘ಇದೊಂದು ವಿಸ್ಮಯ ಅಥವಾ ಪವಾಡ’ ಎಂದು ಹೆಸರಿಸಿ ಸುಮ್ಮನಾಗಿ ಬಿಡುತ್ತಾನೆ.
ಇಲ್ಲೂ ಈ ಪಕ್ಷಿಗಳ ಆತ್ಮಹತ್ಯೆಯ ಹಿಂದೆ ಹಲವು ತಜ್ಞರು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಕಂಡುಕೊಂಡ ವಿಷಯಗಳು ಈ ರೀತಿ ಇವೆ. ಪಕ್ಷಿ ತಜ್ಞರು, ಹೇಳುತ್ತಾರೆ, ಸಪ್ಟೆಂಬರ ದಿಂದ ನವೆಂಬರ್ ತಿಂಗಳಲ್ಲಿ ಆಗುವ ಹವಾಮಾನ ಬದಲಾವಣೆ, ಅಲ್ಲಿ ಬರುವ ಪಕ್ಷಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಅಂದರೆ ಆ ಸಮಯದಲ್ಲಿ ಅಂತರ್ಜಲದ ಆಯಸ್ಕಾಂತ ಶಕ್ತಿ ಅಧಿಕವಾಗಿದ್ದು, ಅದರ ಪರಿಣಾಮದಿಂದ ಪಕ್ಷಿಗಳು ಮೇಲಿಂದ ಕೆಳಗೆ ಬಿದ್ದು ಸಾಯುತ್ತವೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಹೀಗೆ ಇಲ್ಲಿ ಸಾಯುವ ಪಕ್ಷಿಗಳು ಇಂತಹ ಜಾತಿಯವೇ ಅಂತೇನಿಲ್ಲ, ವಿವಿಧ ಜಾತಿಯ ಪಕ್ಷಿಗಳು ಇಲ್ಲಿ ಈ ರೀತಿ ಸಾವನ್ನಪ್ಪುತ್ತವೆ. ಹವಾಮಾನ ಬದಲಾವಣೆ, ಅದರಲ್ಲೂ ರಾತ್ರಿ ಮಂಜು ಮುಸುಕಿದಂತೆ ಇರುವುದು, ಅಂತರ್ಜಲದ ಆಯಸ್ಕಾಂತೀಯ ಸೆಳೆತ ಅಧಿಕವಾಗಿರುವುದು, ಈ ಎಲ್ಲಾ ರೀತಿಯ ಹವಾಮಾನ ವೈಪರೀತ್ಯಗಳೇ ಪಕ್ಷಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತವೆ. ಇದರಿಂದ ಅವುಗಳು ತಮ್ಮ ನೈಸರ್ಗಿಕ ಹವ್ಯಾಸಗಳನ್ನು ಕಳೆದುಕೊಳ್ಳುತ್ತವೆ, ಇದರಿಂದ ಆತ್ಮಹತ್ಯೆ ಎಂದು ಅನಿಸುವಂತಹ ಅಸಹಜ ಸಾವಿಗೆ ಪಕ್ಷಿಗಳು ಈಡಾಗುತ್ತವೆ ಎಂದು ಪಕ್ಷಿ ತಜ್ಞರು ಅಭಿಪ್ರಾಯ ಪಡುತ್ತಾರೆ.
ಈ ಅಧ್ಯಯನ, ಈ ಹೇಳಿಕೆ ಇಷ್ಟಕ್ಕೆ ನಿಲ್ಲದೇ, ಮತ್ತೆ ಕೆಲವು ಅಧ್ಯಯನಕಾರರು ಇದನ್ನು ಇನ್ನೂ ಆಳವಾಗಿ ಅಧ್ಯಯನ ಮಾಡಿದಾಗ ಅವರಿಗೆ ಮತ್ತಷ್ಟು ಹೊಸ ವಿಷಯಗಳು ಗೋಚರಿಸಿದವು. ಅವರ ಪ್ರಕಾರ, ಪಕ್ಷಿಗಳಿಗೆ ಆ ಸಮಯದಲ್ಲಿ ಕವಿಯುವ ಮಂಜಿನಿಂದ ಹಾಗೂ ಚಂದ್ರನ ಬೆಳದಿಂಗಳಿಲ್ಲದೇ, ಒಂದು ರೀತಿಯ ವಿಚಿತ್ರ ಪರಿಣಾಮವುಂಟಾಗುವುದಲ್ಲದೇ, ಹತ್ತಿರದ ಹಳ್ಳಿಯಲ್ಲಿ ಹಾಕಿರುವ ಬೀದಿ ದೀಪಗಳ ದೊಡ್ಡ ಬೆಳಕಿಗೆ ಆಕರ್ಷಣೆಗೊಂಡು ಎತ್ತರದ ಬೆಟ್ಟದಿಂದ ಜಿಗಿದು ಅತೀ ವೇಗದಲ್ಲಿ ಬರುವ ಧಾವಂತದಲ್ಲಿ, ಮರಗಳಿಗೆ ಇಲ್ಲವೇ ಅಲ್ಲಿರುವ ಗೋಡೆಗಳಿಗೆ ಡಿಕ್ಕಿ ಹೊಡೆದು ಗಾಯಗೊಂಡು ಸಾಯುತ್ತವೆ ಎಂಬುದು ಆ ಅಧ್ಯಯನಕಾರರ ಅಭಿಪ್ರಾಯ. ಅವರ ಪ್ರಕಾರ, ಪಕ್ಷಿಗಳ ಮೇಲೆ ಈ ಸಮಯದಲ್ಲಿ ಉಂಟಾಗುವ ವ್ಯತಿರಿಕ್ತ ಪರಿಣಾಮವನ್ನು ಆ ಊರಿನ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಂಡು ಅವುಗಳನ್ನು ಬೇಟೆಯಾಡುತ್ತಾರೆ ಎಂದೂ ಹೇಳುತ್ತಾರೆ. ಅಂದರೆ ದೊಡ್ಡ-ದೊಡ್ಡ ಸರ್ಚ ಲೈಟ್‍ಗಳನ್ನು ಹಾಕಿ ಪಕ್ಷಿಗಳನ್ನು ಅದರತ್ತ ಆಕರ್ಷಿಸಿ, ಅವು ಬರುವ ದಾರಿಯಲ್ಲಿ ಅಲ್ಲಲ್ಲಿ ಚೂಪಾದ ಆಯುಧಗಳನ್ನು ಇಟ್ಟು, ಅವುಗಳನ್ನು ಬೇಟೆಯಾಡುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಸರಿಯಾದ ಸಾಕ್ಷಿ ಚಿತ್ರಣ ದೊರೆಯದ ಕಾರಣ, ಇದನ್ನು ಹೀಗೂ ಇರಬಹುದೆಂದು ಊಹಿಸಬಹುದೇ ವಿನಃ, ಹೀಗೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಗೂಬೆಗಳನ್ನು ಹೊರತುಪಡಿಸಿ, ರಾತ್ರಿಯ ವೇಳೆಯಲ್ಲಿ ಎಲ್ಲ ಪಕ್ಷಿಗಳು ತಮ್ಮ ಗೂಡಿನಲ್ಲಿ ವಿಶ್ರಾಂತಿ ಪಡೆಯುತ್ತವೆ. ಹೊರಗಡೆ ಹಾರಾಡುವುದಿಲ್ಲ, ಆದರೆ ಜತಿಂಗದಲ್ಲಿ ಮಾತ್ರ ಚಳಿಗಾಲದ ಸಮಯದಲ್ಲಿ ರಾತ್ರಿ ಪಕ್ಷಿಗಳು ತಂಡ-ತಂಡವಾಗಿ ಹಾರಾಡಿ ಹೀಗೆ ಸಾವನ್ನಪ್ಪುತ್ತವೆ, ಅದೂ ಪ್ರತೀ ವರ್ಷ ಈ ಪ್ರದೇಶದಲ್ಲಿ ಮಾತ್ರ ಈ ವಿಚಿತ್ತ ಸಂಭವಿಸುವುದು ಬಿಟ್ಟರೆ, ಬೇರೆಲ್ಲೂ ಪಕ್ಷಿಗಳ ಆತ್ಮಹತ್ಯೆಯಂತಹ ವಿಚಿತ್ತ ಸಂಭವಿಸುತ್ತಿಲ್ಲ, ಇದೆಲ್ಲಾ ಏಕಿರಬಹದೆಂಬುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇಂದಿಗೂ ಅಲ್ಲಿ ಬೇರೆ-ಬೇರೆ ಅಧ್ಯಯನ ತಂಡದವರು, ಬೇರೆ-ಬೇರೆ ರೀತಿಯಲ್ಲಿ ಅಧ್ಯಯನ ನಡೆಸಿ, ಒಂದೊಂದು ರೀತಿಯ ಅಭಿಪ್ರಾಯ ನೀಡುತಿದ್ದಾರೆ. ಮೇಲೆ ಹೇಳಿದ ಕಾರಣ ಸತ್ಯಕ್ಕೆ ಹತ್ತಿರವಾಗಿದ್ದು, ಅದೇ ಸರಿಯೆಂದು ಪ್ರಸ್ತುತ ಎಲ್ಲರೂ ನಂಬಿದ್ದಾರೆ. ಆದರೆ ಒಂದಂತೂ ಸತ್ಯ ಅಲ್ಲಿ ಪ್ರತೀ ವರ್ಷ ಸಪ್ಟೆಂಬರ ದಿಂದ ನವೆಂಬರ ನಡುವೆ ಸಂಭವಿಸುವ ಪಕ್ಷಿಗಳ ಈ ಅಸಹಜ ರೀತಿಯ ಸಾವು, ನಿನ್ನೆ-ಮೊನ್ನೆಯದಲ್ಲ, ಹಲವಾರು ವರ್ಷಗಳಿಂದ ಇಲ್ಲಿ ಸಂಭವಿಸುತ್ತಲೇ ಇದೆ.
ಒಟ್ಟಿನಲ್ಲಿ ಹೇಳಬೇಕೆಂದರೆ, ಆತ್ಮಹತ್ಯೆಯಂತಹ ಯೋಚನೆ ಬರುವ ಪ್ರಾಣಿಯೆಂದರೆ, ಭೂಮಿಯ ಮೇಲೆ ಮನುಷ್ಯ ಪ್ರಾಣಿ ಮಾತ್ರ. ಉಳಿದಂತೆ, ಎಲ್ಲ ಪಕ್ಷಿ, ಪ್ರಾಣಿ, ಸಣ್ಣ ಕ್ರಿಮಿ-ಕೀಟಗಳೂ ಸಹ ತಾವು ಹೇಗಿದ್ದೆವೋ ಹಾಗೇ ಬದುಕಲು ಇಷ್ಟಪಡುತ್ತವೆಯೇ ಹೊರತು, ಆತ್ಮಹತ್ಯೆಯಂತಹ ವಿಚಾರ ಅವುಗಳಲ್ಲಿರುವುದಿಲ್ಲ. ಯಾಕೆಂದರೆ ಮನುಷ್ಯನಷ್ಟು ಮುಂದಾಲೋಚನೆ ಮಾಡುವುದಾಗಲೀ, ಅದರ ಪರಿಣಾಮ ಊಹಿಸುವುದಾಗಲೀ, ಯಾವ ಪ್ರಾಣಿ-ಪಕ್ಷಿಯಲ್ಲೂ ಇರುವುದಿಲ್ಲ. ಆದರೂ ಜತಿಂಗದಲ್ಲಿ ಪಕ್ಷಿಗಳು ಹೀಗೆ ಸಾಯುತ್ತಿವೆಯೆಂದರೆ, ಮೇಲೆ ಹೇಳಿದ ವೈಜ್ಞಾನಿಕ ಕಾರಣಗಳೇ ಇರಬಹುದೇ ಹೊರತು ಮತ್ತೇನೂ ಆಗಲು ಸಾಧ್ಯವಿಲ್ಲ. ಹಾಗಾಗಿ ನಾನು ಮೊದಲೇ ಹೇಳಿದಂತೆ, ಪಕೃತಿಯ ಮಡಿಲು ಹಲವಾರು ನಿಗೂಢಗಳನ್ನು, ವಿಸ್ಮಯಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಅದರಲ್ಲಿ ಮನುಷ್ಯನ ತರ್ಕಕ್ಕೆ ನಿಲುಕದ್ದು ಬಹಳಷ್ಟಿವೆ. ಅದರಲ್ಲಿ ಇಂತಹ ವಿಚಿತ್ರಗಳೂ ಸೇರಿರುತ್ತವೆಂದು ನಾವು ತಿಳಿದುಕೊಳ್ಳಬೇಕಷ್ಟೆ.
Facebook ಕಾಮೆಂಟ್ಸ್