ಘಟನೆ ೧: ಗೂಂಡಾ ರಾಜಕಾರಣಿ ಎಂದೇ ಹೆಸರುವಾಸಿಯಾಗಿರುವ ಸಮಾಜವಾದಿ ಪಕ್ಷದ ಆಜಂ ಖಾನ್ ಅಧಿಕಾರ ಕಳೆದುಕೊಂಡು ಮಾಜಿ ಸಚಿವನಾಗಿದ್ದರೂ ನೂತನ ಸರಕಾರ ಅಸ್ತಿತ್ವಕ್ಕೆ ಬರುವ ವರೆಗೆ ತನ್ನ ಅಧಿಕಾರ ಚಲಾವಣೆ ಮಾಡಬಹುದು ಅನ್ನುವ ಅಧಿಕಾರದ ಮದದಲ್ಲಿ ವಿಭಾಗೀಯ ಅಧಿಕಾರಿಯೊಬ್ಬರಿಗೆ ಆವಾಜ್ ಹಾಕುತ್ತಾರೆ. ರಸ್ತೆಯ ಗುಣಮಟ್ಟ ಕಳಪೆಯಾಗಿದ್ದರಿಂದ ಸಿಡಿಮಿಡಿಗೊಂಡು ಈ ರೀತಿಯ ರಸ್ತೆಗಳಲ್ಲಿ ನನ್ನನ್ನು ಪ್ರಯಾಣ ಮಾಡಿಸಲು ನಿನ್ನನ್ನು ಇಲ್ಲಿಗೆ ವರ್ಗಾಯಿಸಿದ್ದಾ ಎಂದು ಧಮ್ಕಿ ಹಾಕುತ್ತಾರೆ. ಸಾಮಾಜಿಕ ಜಾಲತಾಣ ಮತ್ತು ಸುದ್ದಿ ವಾಹಿನಿಗಳಲ್ಲಿ ಈ ವಿಡಿಯೋ ವೈರಲ್ ಆದರೂ ತಮ್ಮ ಈ ವರ್ತನೆಯ ಬಗ್ಗೆ ಕಿಂಚಿತ್ತೂ ವಿಷಾದ ವ್ಯಕ್ತಪಡಿಸಲ್ಲ ಆಜಂ ಖಾನ್.!
ಘಟನೆ ೨: ಬಿಸ್‘ನೆಸ್ ಕ್ಲಾಸ್ ಸೀಟುಗಳು ಇರದೇ ಇದ್ದುದರಿಂದ ಇಕಾನಮಿ ಕ್ಲಾಸ್‘ನಲ್ಲಿ ಪ್ರಯಾಣಿಸುವಂತಾಗಿದ್ದಕ್ಕೆ ಏರ್ ಇಂಡಿಯಾ ಮ್ಯಾನೇಜರ್ ಒಬ್ಬರಿಗೆ ಚಪ್ಪಲಿಯಲ್ಲಿ ೨೫ ಬಾರಿ ಹೊಡೆಯುತ್ತಾರೆ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್. ಮಾಧ್ಯಮಗಳು ಈ ಕುರಿತಾಗಿ ಪ್ರಶ್ನಿಸಿದ್ದಕ್ಕೆ ತಾನೊಬ್ಬ ವಿವಿಐಪಿ, ತಾನು ಕೇಳಿದ ಸೀಟ್ ಕೊಡದ ಸಿಬ್ಬಂದಿಯದ್ದೇ ತಪ್ಪು. ಅಷ್ಟೇ ಅಲ್ಲದೇ ತಾನೊಬ್ಬ ಶಿವಸೇನಾ ಸಂಸದ, ಬಿಜೆಪಿ ಸಂಸದನಲ್ಲ. ನಾನು ಆತನನ್ನು ಮೇಲಿಂದ ಕೆಳಕ್ಕೆ ಎಸೆಯಲೂ ಸಿದ್ಧನಾಗಿದ್ದೆ. ನನ್ನ ಈ ಕೃತ್ಯಕ್ಕೆ ಯಾವುದೇ ವಿಷಾದವಿಲ್ಲ, ಬದಲಾಗಿ ಏರ್ ಇಂಡಿಯಾದ ಉನ್ನತ ಅಧಿಕಾರಿಗಳು ನನ್ನ ಬಳಿ ಕ್ಷಮೆ ಕೇಳಬೇಕು. ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಉಡಾಫೆಯ ಉತ್ತರ ನೀಡುತ್ತಾರೆ!
ಘಟನೆ ೩: ಕಾಂಗ್ರೆಸ್ ಪಕ್ಷ ಸೇರಿ ಶಾಸಕರಾಗಿ ಆಯ್ಕೆಯಾಗಿ, ನಂತರ ಪಂಜಾಬಿನ ಮಂತ್ರಿಯೂ ಆಗಿರುವ ನವ್ಜೋತ್ ಸಿಂಗ್ ಸಿದ್ದು ತಾನು ಕಾಮಿಡಿ ನೈಟ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಶತಸಿದ್ಧ. ಮಂತ್ರಿಯಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ಯನಿರ್ವಹಿಸಿದ ಮೇಲೆ ನನ್ನ ಸಂಪಾದನೆಗಾಗಿ ನಾನು ಕಾಮಿಡಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸುತ್ತಾರೆ. ನಾನು ಬಾದಲ್ ಕುಟುಂಬದ ತರ ಭ್ರಷ್ಟಾಚಾರ ಮಾಡಬೇಕೇ?? ನನ್ನ ಸೈಡ್ ಬಿಸ್ ನೆಸ್ ಮಾಡೋದ್ರಲ್ಲಿ ತಪ್ಪೇನಿದೆ ಅಂತ ಪ್ರಶ್ನೆ ಮಾಡುತ್ತಾರೆ!
ಇತ್ತೀಚಿಗೆ ನಡೆದ ಈ ಮೂರು ಘಟನೆಗಳು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಮ್ಮ ಕೆಲವು ಸೋಕಾಲ್ಡ್ ಜನನಾಯಕರು ಪ್ರಜಾತಂತ್ರ ವ್ಯವಸ್ಥೆಯ ಅಣಕನ್ನು ಯಾವೆಲ್ಲ ಮಟ್ಟದಲ್ಲಿ ಮಾಡುತ್ತಿದ್ದಾರೆ ಅನ್ನುವುದಕ್ಕೆ ಕೈಗನ್ನಡಿಯಂತಿದೆ. ಚುನಾವಣೆಯ ಹೊತ್ತಲ್ಲಿ ಜನಸಾಮಾನ್ಯರ ಮುಂದೆ ಮಂಡಿಯೂರಿ ವೋಟ್ ಗಳಿಸೋ ಇಂತಹ ನಾಯಕರು ಚುನಾವಣೆ ಮುಗಿದ ನಂತರ ಅಧಿಕಾರದ ಅಮಲಲ್ಲಿ ತಾವೇನು ಮಾಡುತ್ತಿದ್ದೇವೆ ಅನ್ನುವುದನ್ನೇ ಮರೆತು ಬಿಡುತ್ತಾರೆ. ರಾಜಕಾರಣಿಗಳಿಂದಾಗಿ ವಿಮಾನ, ರೈಲುಗಳನ್ನು ತಡವಾಗಿ ಓಡಿಸಿದ ಎಷ್ಟೋ ಉದಾಹರಣೆಗಳಿವೆ. ಮುಖ್ಯಮಂತ್ರಿ ಮತ್ತಿತರ ಮಂತ್ರಿಗಳ ಕಾರಿಗಾಗಿ ಸಾಮಾನ್ಯ ಜನರನ್ನು ಟ್ರಾಫಿಕ್ ನಲ್ಲಿ ಕೊಳೆಯುವಂತೆ ಮಾಡಿದ್ದು, ವಿವಿಐಪಿಗಳಿಗೆ ಟ್ರಾಫಿಕ್ ಮುಕ್ತ ರಸ್ತೆಗಾಗಿ ಆಂಬ್ಯುಲೆನ್ಸ್ ತಡೆಹಿಡಿದ ದೃಷ್ಟಾಂತವೂ ನಮ್ಮ ಮುಂದಿದೆ. ವ್ಯಕ್ತಿಯೊಬ್ಬ ರಾಜಕಾರಣಿಯಾಗಿದ್ದರೆ ಟೋಲ್ ಪ್ಲಾಜಾ, ಧಾರ್ಮಿಕ ಸ್ಥಳಗಳು, ವಿಮಾನ, ರೈಲು, ಬಸ್ಸು ನಿಲ್ದಾಣಗಳಲ್ಲಿ ವಿವಿಐಪಿ ಕೋಟಾದಲ್ಲಿ ಆತನಿಗೆ ಜನಸಾಮಾನ್ಯರಿಗಿಂತ ಭಿನ್ನವಾದ ಸೌಲಭ್ಯಗಳು ದೊರೆಯುತ್ತದೆ. ಸಂಬಳ, ಪೆನ್ಶನ್, ಫೋನ್, ಗ್ಯಾಸ್, ನೀರು ಮತ್ತು ವಿದ್ಯುತ್ ಬಿಲ್ಲಿನಲ್ಲಿ ಸಬ್ಸಿಡಿ, ಸಂಸತ್ತು ಅಧಿವೇಶನಗಳಲ್ಲಿ ಭಾಗವಹಿಸಲು ವಿಮಾನ, ರೈಲು ಟಿಕೆಟ್ ಗಳೂ ದೊರೆಯುತ್ತವೆ. ಇನ್ನು ಸಂಸದರಿಗೆ, ಶಾಸಕರಿಗೆ ಸಂಸತ್ತು, ವಿಧಾನಸಭೆಯಲ್ಲಿ ಊಟ ತಿಂಡಿಗಳು ಬಹಳ ಕಡಿಮೆ ದರದಲ್ಲಿ ದೊರೆಯುತ್ತದೆ. ನೆನಪಿಡಿ ಇಷ್ಟೆಲ್ಲಾ ಅನುಕೂಲ, ಸೌಲಭ್ಯಗಳು ದೊರೆಯುವುದು ನಮ್ಮ ಟ್ಯಾಕ್ಸ್ ಹಣದಲ್ಲಿ.!! ಇಷ್ಟೆಲ್ಲಾ ಸೌಲಭ್ಯಗಳು ದೊರೆಯುತ್ತಿದ್ದರೂ ಹೆಚ್ಚಿನ ಸಂಸದರು ಹಾಜರಾತಿ ಕೊರತೆಯನ್ನೂ ಅನುಭವಿಸುತ್ತಿದ್ದಾರೆ. ಇತ್ತೀಚಿಗೆ ಅಧಿವೇಶನಕ್ಕೆ ಚಕ್ಕರ್ ಹಾಕುವ ತಮ್ಮ ಪಕ್ಷದ ಸಂಸದರಿಗೆ ಪ್ರಧಾನಿ ಮೋದಿಯವರು ಖಡಕ್ ಎಚ್ಚರಿಕೆ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೇಲೆ ಪ್ರಸ್ತಾಪಿಸಿದ ಘಟನೆಗಳನ್ನೇ ಪರಿಗಣಿಸುವುದಾದರೆ ರಸ್ತೆ ಗುಣಮಟ್ಟ ಕಳಪೆಯಾಗಿದ್ದರೆ ಅದಕ್ಕೆ ಆ ವಿಭಾಗೀಯ ಅಧಿಕಾರಿಗಿಂತಲೂ ಆಜಂ ಖಾನ್ ಜಾಸ್ತಿ ಜವಾಬ್ದಾರರಲ್ಲವೇ? ಅವರದ್ದೇ ಪಕ್ಷದ ಸರಕಾರವಿದ್ದರೂ ರಸ್ತೆಗಳ ಗುಣಮಟ್ಟದ ಬಗ್ಗೆ ಗಮನ ಹರಿಸಲಿಲ್ಲವೇಕೆ?? ಇಂಡಿಯನ್ ಏರ್ ಲೈನ್ಸ್ ಅಧಿಕಾರಿಗಳ ಪ್ರಕಾರ ಆ ವಿಮಾನದಲ್ಲಿ ಬಿಸ್ ನೆಸ್ ಕ್ಲಾಸ್ ಲಭ್ಯವಿಲ್ಲದ ಕಾರಣ ಗಾಯಕ್ವಾಡ್ ಇಕಾನಮಿ ಕ್ಲಾಸ್ ನಲ್ಲಿ ಪ್ರಯಾಣಿಸಬೇಕಾಯಿತು. ಇದರಲ್ಲಿ ಸಿಬ್ಬಂದಿ ತಪ್ಪೇನಿದೆ? ಆತ ಕೇವಲ ಒಬ್ಬ ಸಂಸದನಾಗಿದ್ದ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಬಿಸ್ ನೆಸ್ ಕ್ಲಾಸ್ ಸೀಟುಗಳೇ ಇಲ್ಲದ ವಿಮಾನದಲ್ಲಿ ಬಿಸ್ ನೆಸ್ ಕ್ಲಾಸ್ ಸೀಟುಗಳನ್ನು ಸೃಷ್ಟಿ ಮಾಡಿ ಕೊಡಬೇಕಿತ್ತೇ? ಹೊಡಿ ಬಡಿ ರಾಜಕಾರಣದಿಂದಲೇ ಪ್ರಸಿದ್ಧಿಗೆ ಬಂದಿದ್ದು ಶಿವಸೇನೆ. ಆದರೆ ಬಾಳಾ ಥಾಕ್ರೆ ನಿಧನದ ನಂತರ ಗೂಂಡಾ ಪಕ್ಷದ ಇಮೇಜ್ ನಿಂದ ಹೊರಬರಲು ಉದ್ದವ್ ಥಾಕ್ರೆ ಪ್ರಯತ್ನಿಸುತ್ತಿರುವಾಗ ಪಕ್ಷದ ಸಂಸದನೊಬ್ಬನ ಗೂಂಡಾ ವರ್ತನೆ ನಿಜವಾಗಿಯೂ ಪಕ್ಷವನ್ನು ಮುಜುಗರಕ್ಕೀಡುಮಾಡಿದೆ. ಶಿವಸೇನೆ ಅಂದರೆ ಗೂಂಡಾ ಪಾರ್ಟಿ ಅನ್ನುವ ಭಾವನೆ ಜನರಲ್ಲಿ ಅದಾಗಲೇ ಮನೆಯಾಗಿದೆ. ಅದಕ್ಕೀಗ ಬಹಿರಂಗವಾಗಿ ಅಧಿಕೃತ ಮೊಹರು ಒತ್ತಿದ್ದಾರೆ ಗಾಯಕ್ವಾಡ್.! ಇನ್ನು ಲಾಫಿಂಗ್ ಬುದ್ದ ನವ್ಜೋತ್ ಸಿಂಗ್ ಸಿಧು ವಿಷಯಕ್ಕೆ ಬಂದರೆ, ಅವರಿಗೆ ಕಾಮಿಡಿ ಶೋ ಮಂತ್ರಿ ಪದವಿಗಿಂತ ಹೆಚ್ಚು!! ಹಾಗಾದರೆ ರಾಜಕೀಯಕ್ಕೇಕೆ ಬಂದರು?? ಚುನಾವಣೆಗೆ ಮುನ್ನ ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಇದ್ದ ಕಾಳಜಿ ಮಂತ್ರಿಯಾದ ಮೇಲೆ ಎಲ್ಲಡಗಿ ಹೋಯಿತು?? ಮಂತ್ರಿಗಿರಿಯೆಂದರೆ ದುಡ್ಡು ತೆಗೆದುಕೊಂಡು ಸುಮ್ಮನೇ ನಕ್ಕಷ್ಟು ಸುಲಭ ಅಂದುಕೊಂಡರೇ?? ಹಾಗಾದರೆ ಸಿದ್ದು ಪ್ರಕಾರ ಮಂತ್ರಿಯೊಬ್ಬನಿಗೆ ಸೈಡ್ ಬಿಸ್ ನೆಸ್ ಇಲ್ಲವೆಂದರೆ ಆತ ಭ್ರಷ್ಟಾಚಾರ ಮಾಡಲೇ ಬೇಕು ಎಂದಲ್ಲವೇ?? ಸಧ್ಯ ಸಮಾಧಾನ ಪಡುವ ವಿಷಯ ಎಂದರೆ ನವ್ಜೋತ್ ಸಿಂಗ್ ಸಿಧು ಪಂಜಾಬಿನ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಆಗದೇ ಇದ್ದದ್ದು. ಒಂದು ವೇಳೆ ಆಗಿದ್ದರೆ ಪಂಜಾಬ್ ತುಂಬೆಲ್ಲಾ ಕಾಮಿಡಿ ನೈಟ್ಸ್ ನೋಡಿಯೇ ಜನಗಳು ಹೊಟ್ಟೆ ತುಂಬಿಸಕೊಳ್ಳಬೇಕಾಗಿತ್ತು.!
ಮಹಾರಾಜರ ಆಡಳಿತಕ್ಕೆ ಒಳಪಟ್ಟಿದ್ದ ಭಾರತ ಸ್ವಾತಂತ್ರ್ಯ ನಂತರ ಜನರಿಂದ ಆಯ್ಕೆ ಮಾಡಲ್ಪಟ್ಟ ಮಹಾರಾಜರ ಆಳ್ವಿಕೆಗೊಳಪಟ್ಟಿತು ಅಂದರೆ ತಪ್ಪಾಗಲಾರದು. ವಿದೇಶಗಳಲ್ಲಿ ರಾಜಕಾರಣಿಗಳು ಜನಸಾಮಾನ್ಯರಂತೆಯೇ ಜೀವನ ನಡೆಸುತ್ತಿರುವಾಗ ನಮ್ಮ ರಾಜಕಾರಣಿಗಳಿಗೇಕೆ ಆಗುವುದಿಲ್ಲ. ದೆಹಲಿಯಲ್ಲಿ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಾಗ ಎಲ್ಲೋ ಒಂದೆಡೆ ನಮ್ಮ ದೇಶದಲ್ಲಿ ವಿವಿಐಪಿ ಸಂಸ್ಕೃತಿಗೆ ಆಪ್ ಪಕ್ಷ ಒಂದು ಗತಿ ಕಾಣಿಸಬಹುದು ಎಂದು ಜನ ಸಾಮಾನ್ಯರು ಭಾವಿಸಿದ್ದರು. ಆದರೆ ಆಮ್ ಆದ್ಮಿಗಳ ನಡತೆ ನೋಡಿ ಜನ ಅವಾಕ್ಕಾಗಿದ್ದರು. ಹಳೆಯ ಪಕ್ಷಗಳನ್ನು ನಾಚಿಸುವಂತೆ ಆಮ್ ಆದ್ಮಿಗಳು ವಿವಿಐಪಿ ಸೌಲಭ್ಯಗಳನ್ನು ಬಳಸುತ್ತಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಆಯ್ಕೆಯ ಬಗ್ಗೆ ಬುದ್ಧಿಜೀವಿಗಳೆಲ್ಲ ಭೇದಿ ಮಾಡುತ್ತಿದ್ದರೂ ಯೋಗಿಯವರು ವಿವಿಐಪಿ ಸಂಸ್ಕೃತಿಯನ್ನು ತೊಡೆದು ಹಾಕುವ ಮೊದಲ ಅಂಗವಾಗಿ ಗೂಟದ ಕಾರಿನ ಉಪಯೋಗವನ್ನು ಮಾಡದೇ ಮಾದರಿಯಾಗಿದ್ದಾರೆ. ಮನೋಹರ್ ಪಾರಿಕ್ಕರ್ ಅಂತವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇಕಾನಮಿ ಕ್ಲಾಸಿನಲ್ಲಿ ಪ್ರಯಾಣಿಸುತ್ತಿರುವಾಗ ಉಳಿದವರೂ ಯಾಕೆ ಇದನ್ನು ಅನುಸರಿಸಬಾರದು? ವಿವಿಐಪಿ ಸಂಸ್ಕೃತಿಯನ್ನು ತೆಗೆದು ಹಾಕಲು ಮತ್ತು ಗೂಂಡಾ ರಾಜಕಾರಣಿಗಳನ್ನು ಮಟ್ಟಹಾಕಲು ಒಂದು ಬಿಗಿ ಕಾನೂನು ಬರುವ ಅವಶ್ಯಕತೆ ಇಲ್ಲವೇ?? ನಮ್ಮಿಂದಲೇ ಆರಿಸಿ ಹೋಗಿ ನಮ್ಮ ಟ್ಯಾಕ್ಸ್ ಹಣದಿಂದಲೇ ಎಲ್ಲ ಸೌಲಭ್ಯಗಳನ್ನು ಪಡೆದು ಆಮೇಲೆ ಅಧಿಕಾರದ ಮದದಲ್ಲಿ ತೇಲುವ ಇಂತಹ ರಾಜಕಾರಣಿಗಳು ವ್ಯವಸ್ಥೆಗೇ ಕಳಂಕ. ಅತ್ತ ಪ್ರಧಾನಿ ಮೋದಿ ನವ ಭಾರತದ ನಿರ್ಮಾಣ ಮಾಡಿಯೇ ಸಿದ್ಧ ಎಂದು ಟೊಂಕ ಕಟ್ಟಿ ನಿಂತಿದ್ದರೆ ಇತ್ತ ಇಂತಹ ಕೆಲವು ಲಾಲಸಿ, ವಿಲಾಸಿ, ಅಧಿಕಾರ ಮತ್ತು ಹಣ ಬಲದ ದರ್ಪಗಳಿಂದ ಮೆರೆಯುತ್ತಿರೋ ಚಿಲ್ಲರೆ ರಾಜಕಾರಣಿಗಳು ನಿಜವಾಗಿಯೂ ನಮ್ಮ ವ್ಯವಸ್ಥೆಗೇ ಧಕ್ಕೆ ತರುತ್ತಿದ್ದಾರೆ. ಪಕ್ಷ ಯಾವುದಾಗಿದ್ದರೂ ಇಂತಹವರನ್ನು ಪಕ್ಷಭೇದ ಮರೆತು ಖಂಡಿಸಬೇಕಾಗಿದೆ. ರಾಜಕಾರಣಿಗಳ ದುಂಡಾವರ್ತನೆಗಳಿಗೆ ಕೊನೆ ಎಂದು ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ
Facebook ಕಾಮೆಂಟ್ಸ್