ಕಲ್ಲಳ್ಳಿ ನೂರು ಮನೆಗಳಿರುವ ಪುಟ್ಟ ಹಳ್ಳಿ..ಮಾದಿಗ,ಉಪ್ಪಾರ,ಲಂಬಾಣಿ,ಕೊರವ,
ಭೋವಿ..ಹೀಗೆ ಇವರೆಲ್ಲರದೊಂದು ಕೇರಿ..ಇನ್ನುಳಿದ ಎರಡು ಕೇರಿಗಳು ಗೌಡರು,ಹಿರೇಮಠರು,ಲಿಂಗಾಯಿತರು ಬ್ರಾಹ್ಮಣರ ಒಂದೆರಡು ಮನೆಗಳು.. ಹೀಗೆ ಜಾತಿಯಲ್ಲಿ ಮೇಲು ಅನ್ನಿಸಿಕೊಂಡವರವು..
ಆ ಚಿಕ್ಕ ಹಳ್ಳಿಯಲ್ಲಿ ಈ ಪ್ರೀತಿ-ಪ್ರೇಮದ ಪ್ರಕರಣಗಳು ಈ ಹಿಂದೆ ನಡೆದದ್ದಿಲ್ಲ..ಹಿಂದಿನಿಂದ ಬಂದ ಹಿರಿಯರಿಗೆ ಅಂಜಿ ನಡೆಯುವ ಪದ್ಧತಿಯನ್ನು ಯುವಕ ಯುವತಿಯರೂ ಮುಂದುವರೆಸಿದ್ದರು..ಎಲ್ಲೊ ಒಂದೆರಡು ಅಪರೂಪದ ಪ್ರೇಮಪತ್ರದ ಪ್ರಕರಣಗಳು ನಡೆದದ್ದುಂಟು..ಹೀಗೊಂದು ಪ್ರೇಮ ಪತ್ರದ ಪ್ರಕರಣ ನಡೆದಾಗ ಹುಡುಗಿಯ ಮನೆಯವರು ಹುಡುಗನಿಗೆ ಹಿಗ್ಗಾ ಮುಗ್ಗಾ ತದಕಿದ್ದಾಗಿತ್ತು..ನಂತರ ದೊಡ್ಡ ಪ್ರಮಾಣದಲ್ಲಿ ಗಲಾಟೆಯಾಗಿ ಊರ ಪಂಚರೆನ್ನಿಸಿಕೊಂಡವರು ( ಹಳ್ಳಿಯಲ್ಲಿ ನ್ಯಾಯ ತೀರ್ಮಾನ ಮಾಡುವ ಐದು ಮಂದಿ ಹಿರಿಯರು..ಇದು ಹಿಂದಿನಿಂದ ಹಳ್ಳಿಗಳಲ್ಲಿ ನ್ಯಾಯ ತೀರ್ಮಾನ ಮಾಡಲು ನಡೆಸಿಕೊಂಡ ಪದ್ದತಿ)ಎರಡು ಮನೆಯವರನ್ನು ಕೂರಿಸಿಕೊಂಡು ನ್ಯಾಯ ಬಗೆಹರಿಸಿ ಆ ಹುಡುಗಿಗೆ ಎರಡು ತಿಂಗಳೊಳಗೆ ಗಂಡು ಹುಡುಕಿ ಮದುವೆ ಮಾಡಿದ್ದಾಗಿತ್ತು.ಪಾಪ ಹುಡುಗ ಒಂದು ವರ್ಷ ಹುಡುಗಿಯ ನೆನಪಿನಲ್ಲಿ ಹತ್ತಿರದ ಪೇಟೆಯ ಬಾರಿನಲ್ಲಿಯೇ ಕುಡಿದು ಮಲಗುತ್ತಿದ್ದ..ಮನೆ ಹಿರಿಯರು ಕೊನೆಗೆ ಅವನಿಗೊಂದು ಹುಡುಗಿಯನ್ನು ತಂದು ಗಂಟು ಹಾಕಿ ತಮ್ಮ ಕರ್ತವ್ಯ ಮಾಡಿ ಮುಗಿಸಿ ಕೈ ತೊಳೆದುಕೊಂಡಿದ್ದರು.ಇವನೂ ನೆಟ್ಟಗೆ ಸಂಸಾರ ನಡೆಸಿಕೊಂಡು ಹೋದ.ಆಗ ಆ ಪ್ರೇಮಕಥೆಗೆ ನಿಜವಾದ ಅಂತ್ಯವಾಗಿತ್ತು.ಆದರೂ ಊರ ಜಾತ್ರೆಗೆ ಅವಳು ಬಂದಾಗ ಇಬ್ಬರೂ ಕದ್ದು ಮುಚ್ಚಿ ಭೇಟಿಯಾಗುವುದು ಉಳಿದವರಿಗೆ ತಿಳಿದ ವಿಷಯ…ಅವರವರ ಸಂಸಾರದ ವಿಷಯ ನಮಗೇಕೆಂದು ಒಂದು ನವಿರು ಪ್ರೇಮಕ್ಕೆ ಅಂತ್ಯ ಹಾಡಿದವರು ಸುಮ್ಮನಿರುತ್ತಿದ್ದರು.ಅಸಲಿಗೆ ಅವರಿಬ್ಬರದೇನು ಬೇರೆ ಬೇರೆ ಜಾತಿಗಳಾಗಿರಲಿಲ್ಲ..ಸ್ವಲ್ಪ ಅಂತಸ್ತು ಹೆಚ್ಚು ಕಡಿಮೆಯಿತ್ತು..
ಇಂತಹ ಒಂದು ಹಳ್ಳಿಯಲ್ಲಿ ಅಯ್ಯನವರಾದ (ಹಿರೇಮಠ ಸ್ವಾಮಿಗಳು) ಶಾಂತಸ್ವಾಮಿಯವರ ಮಗ ಮಹದೇವಸ್ವಾಮಿಯದೂ ಮಾದಿಗ ದುರಗಪ್ಪನ ಮಗಳು “ಪಾರಿ”ಯ ಪ್ರೇಮಕಥೆ ಮದುವೆಯಲ್ಲಿ ಅಂತ್ಯವಾಗಿತ್ತು.ಕೂಲಿ ಹೆಂಗಸರ ಬಾಯಿಯಲ್ಲಿ “ಪಾರಿ”ಯಾಗಿದ್ದ ಪಾರ್ವತಿಗೆ ತನ್ನ ಹೆಸರನ್ನು ಯಾರಾದರೂ ಕೇಳಿದರೆ ಪಾರಿ ಎನ್ನುವಷ್ಟೇ ಹತ್ತಿರವಾಗಿತ್ತು ಆ ಹೆಸರು.ಇವರಿಬ್ಬರೂ ಯಾರಿಗೂ ಚೂರೂ ಸುಳಿವು ಕೊಡದಂತೆ ರಾತ್ರೋ ರಾತ್ರಿ ಬೆಂಗಳೂರಿಗೆ ಪಲಾಯನಗೈದರೆ ಹಳ್ಳಿಯಲ್ಲಿ ಏನಾಗಿರಬೇಡ..? ಅಸಲಿಗೆ ಕೆಲವರಿಗೆ ಅವರಿಬ್ಬರ ಪ್ರೀತಿಯ ವಿಷಯ ಗೊತ್ತಿದ್ದರೂ ಕಂಡವರ ಮನೆ ವಿಷಯ ನಮಗೇಕೆಂದು ಸುಮ್ಮನಿದ್ದರು..ಹಾಗೆ ಸುಮ್ಮನಿರಲು ಇನ್ನೊಂದು ಕಾರಣ ಮಹದೇವಸ್ವಾಮಿ ಪೋಲಿತನಕ್ಕೆ ಹೆಸರಾಗಿದ್ದ.ಏನೋ ಆಕರ್ಷಣೆ..ಮದುವೆಯಾಗುವ ತನಕ ಅಂದುಕೊಂಡಿದ್ದರು.ಅದು ಹೀಗೆ ಊರು ಬಿಟ್ಟು ಓಡಿ ಹೋಗಿ ಮದುವೆಯಾಗುವವರೆಗೂ ಬರುತ್ತದೆಂದು ಯಾರೂ ಎಣಿಸಿರಲಿಲ್ಲ.ಕೂಲಿ ಕೆಲಸಕ್ಕೆ ಬರುತ್ತಿದ್ದ ಮೈ ಕೈ ತುಂಬಿಕೊಂಡಿದ್ದ ಪಾರಿಯ ಮೇಲೆ ಮಹದೇವಸ್ವಾಮಿ ಆಕರ್ಷಿತನಾಗಿದ್ದ.ಆಗಾಗ ಬೋರಿನ ಮನೆಯಲ್ಲಿ ಭೇಟಿಯಾಗುವುದೂ ಇತ್ತು.ಪಾರಿಯ ಸೋದರಮಾವನಿಗೆ ಪಾರಿಯನ್ನು ಕೊಟ್ಟು ಮದುವೆ ಮಾಡಲು ದುರಗಪ್ಪ ತೀರ್ಮಾನಿಸಿದ ದಿನ ಇವರಿಬ್ಬರೂ ಊರು ಬಿಟ್ಟಾಗಿತ್ತು.ಶಾಂತಸ್ವಾಮಿಯವರು ಮಗನ ಮೊಬೈಲ್ ಗೆ ಕರೆ ಮಾಡಿದರಾರದರೂ ಮೊಬೈಲ್ ಸ್ವಿಚ್ ಆಫ್ ಆಗಿತ್ತು.ಅವರಿಬ್ಬರೂ ದೇವಸ್ಥಾನದಲ್ಲಿ ಮದುವೆಯಾದ ಸುದ್ದಿಯನ್ನು ಬೆಂಗಳೂರಿನಲ್ಲಿರುವ ಅವನ ಗೆಳೆಯ ಯಲ್ಲಪ್ಪ ಶಾಂತಸ್ವಾಮಿಯವರಿಗೆ ಕರೆ ಮಾಡಿ ತಿಳಿಸಿದ್ದ..
ಊರಿನ ದೇವಿಯ ಗುಡಿಯ ಪೂಜಾರಿ ಶಾಂತಸ್ವಾಮಿಯವರು.ತಂದೆಯಿಂದ ಬಂದ ಆಸ್ತಿ ಜೋರಾಗಿಯೇ ಇತ್ತು.ತುಂಬಾ ಹಿಂದಿನಿಂದ ಹಿರಿಯರು ನಡೆಸಿಕೊಂಡ ಊರ ದೇವಿಯ ಪೂಜೆಯ ಕಾಯಕ ಬರೀ ಹೆಸರಿಗೆ ಮಾತ್ರ ಅನ್ನುವಂತಿತ್ತು.ಊರಿನಲ್ಲಿ ಮಲ್ಲಪ್ಪಗೌಡರನ್ನು ಬಿಟ್ಟರೆ ಶ್ರೀಮಂತಿಕೆಯಲ್ಲಿ ಎರಡನೆ ದೊಡ್ಡ ಕುಳ ಶಾಂತಸ್ವಾಮಿಯವರು.ಈಗ ಮಗ ಮಾಡಿದ ಕೆಲಸದಿಂದ ಮೂರ್ನಾಲ್ಕು ದಿನ ಶಾಂತಸ್ವಾಮಿಯವರು ಏನು ಮಾಡಬೇಕೋ ತಿಳಿಯದೇ ಮೌನಿಯಾಗಿದ್ದರು.
ಆ ದಿನ ಸಂಜೆ ಊರಿನ ಹಿರಿ ಜೀವಗಳಾದ ಬಾಳಮ್ಮ,ಗೌರಮ್ಮನ ಮಾತುಗಳು ಮನೆಯ ಸಂದಿಯ ದಾರಿಯಿಂದ ನಡೆದು ಹೋಗುತ್ತಿದ್ದ ಶಾಂತಸ್ವಾಮಿಯವರ ಪತ್ನಿ ಸಾವಿತ್ರಮ್ಮನವರನ್ನು ತಡೆದು ನಿಲ್ಲಿಸಿದವು.ಶಾಂತಸ್ವಾಮಿಯವರ ಮನೆಗೆ ಬಾಳಮ್ಮ ಗೌರಮ್ಮನ ಮನೆಯ ನಡುವಿನ ಸಂದಿಯಿಂದಲೇ ನಡೆದು ಹೋಗಬೇಕಿತ್ತು.
ಸಂಜೆ ಹೊತ್ತಿನಲ್ಲಿ ಮನೆ ಮುಂದಿನ ಕಟ್ಟೆಯಲ್ಲಿ ಕುಳಿತುಕೊಳ್ಳುವ ಗೌರಮ್ಮನಿಗೆ ಕುಟಾಣಿಯಲ್ಲಿ ಒಂದು ದಿನಕ್ಕೆ ತಿನ್ನುವುದಕ್ಕಾಗುವಷ್ಟು ಅಡಿಕೆ ಕುಟ್ಟುವುದು ದಿನನಿತ್ಯದ ರೂಢಿ..ಕುಟಾಣಿಯ ಕಣ್ ಕಣ್ ಶಬ್ದದ ಸಂಗೀತದೊಂದಿಗೆ ಗೌರಮ್ಮನ ಹಳೆಯ ಹಾಡುಗಳೂ ಜೊತೆಯಾಗುತ್ತಿದ್ದವು.ಕೆಲವೊಮ್ಮೆ ಬೇರೆಯವರ ಮನೆಯ ಅತ್ತೆ-ಸೊಸೆ ಜಗಳ,ಅಣ್ಣ-ತಮ್ಮಂದಿರ ಆಸ್ತಿ ಜಗಳ, ಅವಳು ಅವನ್ನ ಇಟ್ಕೊಂಡಿದಾಳಂತೆ,ಇವನು ಅವಳ ಜೊತೆ ಮರೆಲಿ ನಿಂತು ಮಾತಾಡ್ತಿದ್ನಂತೆ..ಹೀಗೇ ಅವರಿವರ ಮನೆಯ ಸುದ್ದಿಗಳು ತುಸು ಒಗ್ಗರಣೆಯೊಂದಿಗೆ ಬಾಳಮ್ಮನಿಗೆ ವರ್ಗಾವಣೆಯಾಗುತ್ತಿದ್ದವು.ಮಾತನಾಡಲು ವಿಷಯ ಸಿಗದಿದ್ದಾಗ ಏನಾದರೊಂದು ಸುದ್ದಿ ಸೃಷ್ಟಿಸಿ ಹೇಳುವುದು ಗೌರಮ್ಮನ ಖಯಾಲಿ.ಅಸಲಿಗೆ ಬೇರೆಯವರ ಮನೆಯ ದೋಸೆ ತೂತಾಗಿದ್ದರೆ ಗೌರಮ್ಮನ ಮನೆಯ ಕಾವಲಿಯೇ ತೂತಾಗಿತ್ತು.ಗೌರಮ್ಮನ ಗಂಡ ಬದುಕಿದ್ದಾಗ ಮೂರು ಹೆಂಗಸರ ಸಹವಾಸ ಮಾಡಿ ಗುಪ್ತಾಂಗದ ರೋಗಕ್ಕೆ ತುತ್ತಾಗಿ ಆರೈಕೆಯಿಲ್ಲದೇ ನರಳುತ್ತಲೆ ಉಸಿರು ನಿಲ್ಲಿಸಿದ್ದ.ಅವನ ಕಚ್ಚೆಹರುಕುತನದ ಅರಿವಿದ್ದ ಗಟ್ಟಿಗಿತ್ತಿ ಗೌರಮ್ಮ ಅವನಿಗೆ ಕ್ಯಾರೆ ಅನ್ನಲಿಲ್ಲ.ಅವನು ಇದ್ದರೂ ಒಂದೇ,ಸತ್ತರೂ ಒಂದೇ ಎಂದು ಅವನು ಬದುಕಿದ್ದಾಗಲೇ ತೀರ್ಮಾನಿಸಿದ್ದಳು.ಮಗ ಒಳ್ಳೆಯವನು,ತಾಯಿಯ ಮಾತು ಮೀರುತ್ತಿರಲಿಲ್ಲ.ಸೊಸೆ ಸ್ವಲ್ಪ ಜೋರಾದರೂ ಈ ಕಾರಣಕ್ಕೆ ಬಾಯ್ಮುಚ್ಚಿಕೊಂಡಿರುತ್ತಿದ್ದಳು.ಪಕ್ಕದ ಮನೆಯ ಬಾಳಮ್ಮ ಗೌರಮ್ಮನ ಜೊತೆಗಾತಿ..
ಪಕ್ಕದಲ್ಲಿ ಕುಳಿತಿದ್ದ ಬಾಳಮ್ಮನತ್ತ ನೋಡುತ್ತ ಗೌರಮ್ಮ ಲೋಕಾಭಿರಾಮವಾಗಿ ಮಾತನಾಡುತ್ತ ಊರಿನಲ್ಲಿ ನಾಲ್ಕು ದಿನಗಳಿಂದ ಅವಾಂತರ ಸೃಷ್ಟಿ ಮಾಡಿದ್ದ ಪ್ರಸಂಗದ ಬಗ್ಗೆ ಮಾತಿಗೆ ಶುರುವಿಟ್ಟುಕೊಂಡಳು.. “ಅವ್ಕೇನ್ ಬಂದಿತ್ತಂತ ದೊಡ್ರೋಗ..?ಹಿಂಗ್ ಓಡಿಹೋಗ್ಯಾವ..ಒಂದು ಜಾತ್ಯಾ-ನೀತ್ಯಾ…ಕಾಲಾ ಕೆಟ್ ಕುಂತತಿ ನೋಡ ಬಾಳವ್ವ..ನಮ್ ಕಾಲ್ದಾಗ ಹಿರ್ಯಾರು ನೋಡಿದ್ ಗಂಡ್ನ ತುಟಿ ಪಿಟಕ್ ಅನದಂಗ ಮದುವಿ ಆಗ್ತಿದ್ವಿ…ಅದೂ ಗಂಡಿನ್ ಮಕ ಸರಿತ್ನಂಗ ನೋಡಾಕು ಬಿಡ್ತಿರ್ಲಿಲ್ಲ..ಈಗಿನ್ ಕಾಲ್ದ ಮಕ್ಳು ಭಾಳ ಕುಲಗೆಟ್ಟಾವ ಬಾಳವ್ವ..ಇನ್ನೂ ಮೀಸಿ ಮೂಡಿರಂಗಿಲ್ಲ..ಹುಡುಗಿ ಹಿಂದ್ ಹೊಂಡ್ತಾವು.. ಈ ಹೆಣ್ಮಕ್ಕಳೇನ್ ಕಡಿಮಿಲ್ಲ ಬಿಡು..ಅವು ಹಂಗ ಅದಾವ..ಅದೇನ್ ಹುಡುಗ್ರನ್ ನೋಡಿ ಹಲ್ ಕಿಸಿತಾವ..ಅದ್ಕ ಹಿಂಗ ಆಗ್ಬಾರದ್ದ ಆಗ್ತತಿ..ಆ ಹುಚ್ ಭಾಡ್ಯಾಗ ಏನ್ ಕಡಮಿ ಮಾಡಿದ್ ಅವರಪ್ಪ..ಒಬ್ಬವ್ನ ಮಗ..ಆಸ್ತಿ-ಪಾಸ್ತಿ ಎಲ್ಲಾ ರಗಡು ಬಿದೈತಿ..ಹೋಗಿ ಹೋಗಿ ಆ ಹರ್ಜನ್ರ(ಹರಿಜನರ-ಮಾದಿಗರ) ಪಾರಿ ಕಟ್ಕೊಂಡ್ ಓಡಿ ಹೋಗೇತಂತ ಬೆಂಗ್ಳೂರ್ಗೆ..ಆ ಕಲ್ಲವ್ವಗರ ಒಂಚೂರು ಬುದ್ದಿ ಬ್ಯಾಡನು..? ಮಗಳ್ನ ಇಷ್ಟ್ ಸಡ್ಲು ಬಿಡ್ಬಾರ್ದಿತ್ತು..ಆ ಪಾರೀ ಹುಚ್ಚಪ್ಯಾಲಿ..ಹೋಗಿ ಹೋಗಿ ಇಂತವ್ನ ಹಿಂದ ಓಡಿ ಹೋಗೇತಿ..ಪಾಪ ಕೂಲಿ ಮಾಡ್ಕಂಡ್ ತಿನ್ನ ಬದ್ಕು..ಈ ಸ್ವಾಮೇರ ಏನ್ ಸುಮ್ನ ಬಿಡ್ತಾರಂತ ನಾ ಹೇಳಾಕೊಲ್ನೆವ..” ಅಂತ ಹೇಳುತ್ತ ಕುಟ್ಟಿದ್ದ ಅಡಕಿಯನ್ನು ಬಾಳಮ್ಮನ ಕೈಗೊಂದಿಷ್ಟು ಹಾಕಿದಳು..
ಬಾಳಮ್ಮ ಕುಟ್ಟಿದ್ದ ಅಡಿಕೆ ಪುಡಿಯ ಜೊತೆ ಚೂರು ಸುಣ್ಣ,ವಿಳೆದೆಲೆಯನ್ನು ಬಾಯಿಗೆ ಹಾಕಿಕೊಂಡು ಕಟ್ಟೆಯ ಮೂಲೆಯತ್ತ ಪಿಚಕ್ ಅಂತ ಉಗಿದು ಮಾತಿಗೆ ಶುರುವಿಟ್ಟುಕೊಂಡಳು..”ಕಂಡೋರ್ ಮನಿ ಸುದ್ದಿ ನಮಗ್ಯಾಕ ಬಿಡವ್ವ..ಸ್ವಾಮೇರ್ ಏನ್ ಕಡಮಿ..? ಕಚ್ಚೆ ಹರಕ ಭಾಡ್ಯಾ..ಅವ್ನ ಹೊಲಕ ಕೆಲ್ಸಾ ಮಾಡಾಕ ಬರು ಹೆಂಗಸ್ರನ ಮ್ಯಾಲಿಂದ ಕೆಳಗ ತಿನ್ನುವಂಗ ನೋಡ್ತಾನಂತ..ಮಗ ಅವ್ನ ಮೀರಿಸ್ಯಾನ ಅಷ್ಟ..ಅದೇನಂತ ಊರ್ ದ್ಯಾಮವ್ವನ್ ಪೂಜೆ ಮಾಡ್ತಾನೋ ಕಾಣೆ..ಈ ಊರಿನ ಗಂಡ್ಸರಿಗೆ ಬುದ್ದಿಲ್ಲ..ಅಂತವ್ನ ತಂದ ಊರ್ ದ್ಯಾಮವ್ವನ್ ಪೂಜೆ ಮಾಡಾಕ್ ಬಿಟ್ಟಾವ..”ಅಂತ ಗೌರಮ್ಮನ ಮಾತು ಸಮರ್ಥಿಸುತ್ತ ನುಡಿದಳು.ಗೌರಮ್ಮ ಸುಮ್ಮನೇ ನಿಟ್ಟುಸಿರು ಬಿಟ್ಟು”ಈಗರ ಏನಾಗೇತಿ ಬಿಡು..ಈ ಸ್ವಾಮೇರು ಮಲ್ಲಪ್ಪಗೌಡನ ಮನಿಗೆ ಸಂಜಿಮುಂದ ಹೊಕ್ಕಾರಂತ ಸುದ್ದಿ..ಅದೇನ ಪಂಚಾಯ್ತಿ ಮಾಡಿ ಅವರಿಬ್ರನೂ ಒದ್ದು ಎಳ್ಕಂಡು ಬರ್ತಾರಂತ..ಹಂಗಂತ ಊರಾಗಿನ ಗಂಡಸ್ರು ಒಂದೆಲ್ಡು ಜನ ಮಾತಾಡ್ಕೊಂತ ಹೊಂಟಿದ್ರಂತ.ಮಗ ಹೇಳ್ದ…ಮಲ್ಲಪ್ಪಗೌಡ ಮನಸು ಮಾಡಿದ್ರ ಎಲ್ಲಾ ನೆಟ್ಟಗ ಮಾಡ್ತಾನ..ನಮ್ಮೂರಾಗ ಹಿಂಗ ಆಗಿದ್ ಮೊದ್ಲ ನೋಡವ್ವಾ..ಹಿಂಗಾಗಿರ್ಲಿಲ್ಲ..” ಅನ್ನುತ್ತಾ ಸುಮ್ಮನೇ ತನಗೆ ಬಾಯಿಗೆ ಬಂದ ಸುಳ್ಳನ್ನು ಬಾಳಮ್ಮನಿಗೆ ಹೇಳಿದಳು.ಹೀಗೆ ಸುಳ್ಳುಗಳನ್ನು ತನಗೆ ಬಂದಂತೆ ಸೃಷ್ಟಿಸುವುದರಲ್ಲಿ ಗೌರಮ್ಮ ಎತ್ತಿದ ಕೈ.ಸೊಸೆ ಚಹಾ ಕುಡಿಯಲು ಒಳಗೆ ಕರೆದಾಗ ಗೌರಮ್ಮ ಬಾಳಮ್ಮನಿಗೆಗೆ “ನಡೀ ಬಾಯ್ತೊಳ್ಕಾ..ಚಾ ಕುಡಿಯೋನು”ಅನ್ನುತ್ತ ಅವಳನ್ನೆಬ್ಬಿಸಿಕೊಂಡು ಮನೆಯೊಳಗೆ ನಡೆದಳು..
ಗೌರಮ್ಮ ಸೃಷ್ಟಿಸಿದ್ದ ಆ ಒಂದು ಪಂಚಾಯ್ತಿಯ ಸುಳ್ಳಿನಿಂದ ಮಂಕು ಕವಿದಿದ್ದ ಸಾವಿತ್ರಮ್ಮನ ತಲೆಯಲ್ಲಿ ಒಂದೇ ಬಾರಿಗೆ ಸಾವಿರ ಕರೆಂಟು ಒಮ್ಮೆಲೇ ಹತ್ತಿದಂತೆ ಭಾಸವಾಗಿತ್ತು.ಸಂಜೆಗತ್ತಲು ಆವರಿಸುತ್ತಿತ್ತಾದ್ದರಿಂದ ಸಾವಿತ್ರಮ್ಮ ಬೆಳೆದ ಹೂವಿನಗಿಡಗಳ ಮಧ್ಯದಿಂದ ಹೊರಬಂದರು.ನಾಲ್ಕು ದಿನದಿಂದ ಮಗನ ಘನಕಾರ್ಯದಿಂದ ನೊಂದಿದ್ದ ಅವರು ಸ್ವಲ್ಪ ನಿರಾಳರಾದಂತೆ ಕಂಡರು.
(ಕೆಲವು ಪದದ ಅರ್ಥಗಳು..
ಕುಟಾಣಿ-ಅಡಿಕೆ ಕುಟ್ಟಿ ಪುಡಿ ಮಾಡಲು ಹಿರಿಯರು ಬಳಸುತ್ತಿದ್ದ ಸಾಧನ,ರಗಡು-ಹೆಚ್ಚು,ಹೇಳಾಕೊಲ್ನೆವ-ಹೇಳುವುದಕ್ಕಾಗುವುದಿಲ್ಲ,ಸಡ್ಲು-ಸಡಿಲ)
ಮುಂದುವರಿಯುತ್ತದೆ..
Facebook ಕಾಮೆಂಟ್ಸ್