ಸರಿಸುಮಾರು ಹತ್ತೋ ಹನ್ನೆರಡು ವರ್ಷದ ಹಿಂದಿನ ನೆನಪಿನ ಬುತ್ತಿಯನ್ನು ಬಿಚ್ಚಿಡಹೊರಟಿದ್ದೇನೆ ಇಂತಿ ನಿಮ್ಮ ಪ್ರೀತಿಯ ಗೆಳೆಯ ಪ್ರಮೋದ. ಬನ್ನಿ ಬುತ್ತಿಯನ್ನು ಹಂಚಿತಿನ್ನೋಣವಂತೆ!
ವರ್ಷ 2005 ಇರಬೇಕು. ಅದೊಂದು ದಿನ ಸರಿಯಾಗಿ ಘಂಟೆ 4:30 ಕ್ಕೆ ನಮ್ಮ ಕನ್ನಡ ಶಾಲೆಯ ದಿನಚರಿ ಮುಗಿದಿತ್ತು. ನಾನು ಮತ್ತು ನನ್ನ ಜೀವದ ಗೆಳೆಯ ಊರ ಸುತ್ತಮುತ್ತಲಿನ ಗುಡ್ಡ ಬೆಟ್ಟ ಅಲೆದಾಡಿ ಸರಿಸುಮಾರು 6 ಘಂಟೆಗೆ ಮನೆಯ ಕಡೆ ಸುಸ್ತಾಗಿ ಬಂದೆವು. ಅದೇ ದಿನ ಶಿರಸಿ ಪಟ್ಟಣದಲ್ಲಿ ಯಕ್ಷಗಾನ ಬಯಲಾಟ. ನಮ್ಮೂರಿನ ಒಬ್ಬ ಮೇಷ್ಟ್ರು ಒಂದು ಒಮಿನಿ ಬಾಡಿಗೆ ಮಾಡಿಸಿಕೊಂಡು ನಾನು ಹಾಗೂ ನನ್ನ ಗೆಳೆಯನನ್ನೂ ಸೇರಿಕೊಂಡು ಯಕ್ಷಗಾನಕ್ಕೆ ಹೂರಡುತ್ತಾರೆ. ನಾನೇನೊ ಆಗ ಯಕ್ಷಗಾನದ ಆರಾಧಕನಲ್ಲ. ಸುಮ್ಮನೇ ಅಂಗಡಿ ಸುತ್ತಲು ಹೋದದ್ದಿರಬೇಕು.
ಆ ದಿನದ ಪ್ರಸಂಗ ” ಸುಧನ್ವಾರ್ಜುನ “. ಅತಿಥಿ ಕಲಾವಿದರು ಹೊನ್ನಾವರದ ಮುಗ್ವಾ ಗ್ರಾಮದ ಮುದ್ದಿನ ಮಾಣಿ ಕಣ್ಣೀಮನೆ. ನಮ್ ಮೇಷ್ಟ್ರಿಗೆ ಕಣ್ಣೀಮನೆಯ ಆರ್ಭಟ ಗೊತ್ತಿತ್ತು. ಆದರೆ ನಮ್ ಜೂತೆ ಬಂದಿದ್ದ ಯಾರಿಗೂ ಕೂಡಾ ಈ ಕೋಲ್ಮಿಂಚಿನ ಬಗ್ಗೆ ಗೊತ್ತಿರಲಿಲ್ಲ. ಆಟದ ಮಂಚೆ ಚೌಕಿಗೆ ಹೋಗಾಗಲೂ ಈ ಪುಟ್ಟ ಮಾಣಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ನಾವೆಲ್ಲರು.
ನೆರೆದಿದ್ದ ಬಹುತೇಕ ಶಿರಸಿಯ ಜನರಿಗೆ ಕಣ್ಣೀಮನೆ ಹೊಸ ಪರಿಚಯ. ಹೆಚ್ಚೇನೂ ನಿರಿಕ್ಷೆಯಿಲ್ಲದೇ ಬಯಲಾಟ ನೋಡ್ಕೊಂಡ ಹೋಗೋಣ ಅಂತಾ ಬಂದವರೇ ಹೆಚ್ಚು. ಪ್ರಸಂಗ ಶುರುವಾಗಿ ಸ್ವಲ್ಪ ಹೊತ್ತಿನ ನಂತರ ಒಬ್ಬ ಪುಂಡು ವೇಷಧಾರಿ ಹಿಂಬದಿಯ ಪರದೆ ಸರಿಸಿ ಏನೋ ಭಾಗವತರ ಕಿವಿಯಲ್ಲಿ ಉಸುರುತ್ತಾನೆ. ಆಗ ಇದ್ದಕ್ಕಿದ್ದಂತೆ ಕೆಲವು ಜನರು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತಾರೆ. ನನಗೆ ಅವರ ಮಾತುಗಳು ಅರ್ಥವಾಗದಿದ್ದರೂ ಒಂದು ಶಭ್ದವಂತು ಸರಿಯಾಗಿ ಕೇಳಿಸಿತು. ಅವರೆಲ್ಲರೂ ಮಾತಿನ ಮಧ್ಯದಲ್ಲಿ ಹೇಳುತ್ತಿದ್ದುದು ಒಂದೇ ಮಾತು ” ಈಗಾ ಕಣ್ಣೀಮಾಣಿ ಬರ್ತಾ “.
ಆಗ ಆದದ್ದೇ ಸುಧನ್ವನಾ ಮಿಂಚಿನ ಪ್ರವೇಷ. ಅಬ್ಬಾ …ಒಬ್ಬ ಚಿಕ್ಕ ಮಾಣಿಯೂಬ್ಬ ಮಣ್ಣಿನ ರಂಗಸ್ಥಳವನ್ನು ಧೂಳೆಬ್ಬಿಸುತ್ತಾನೆ. ಪ್ರೇಕ್ಷಕ ವರ್ಗ ಕೆಲಕ್ಷಣದಲ್ಲಿ ಮೂಕವಿಸ್ಮಿತವಾಗುತ್ತದೆ. ” ನಳಿನಾಕ್ಷಿ ಕೇಳೇ ” ಪದದ ಎತ್ತುಗಡೆಯ ,ಸುಧನ್ವ- ಪ್ರಭಾವತಿಯ ಆಲಿಂಗನದ ಪರಿಯ ನೋಡಿ ನೆರೆದಿದ್ದ್ಗ ಜೋಡಿಗಳಿಗೂ ನಾಚಿಕೆಯಾಗಿರಸಾಕು. ಸೃಷ್ಟಿಗರ್ಜುನ ಎಂಬ ಪದಕ್ಕೆ 15 ನಿಮಿಷ ಕುಣಿದ ಪರಿ ಅತ್ಯಧ್ಭುತ.
ಮುಂಡಾಸನ್ನು ಬಾಗಿಸಿ ಕುಣಿಯುವ ನೂತನಪರಿಯು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಇವನಾವ ಮಾಣಿ ಎಂದು ಬಗೆದಿದ್ದ ಹಲವರು ಪಕ್ಕದಲ್ಲಿರವವರ ಜೊತೆ ಕಣ್ಣೀಮನೆಯ ಪರಿಚಯ ಕೇಳಿ ತಿಳಿಯತೂಡಗುತ್ತಾರೆ. ಸುಧನ್ವನ ಮನೋಜ್ಞ ಅಭಿನಯಕ್ಕೆ ಶಿರಸಿಯ ಜನರೂ ತಲೆದೂಗುತ್ತಾರೆ.
ಅದೊಂದು ರಾತ್ರಿಯಲ್ಲಿ ಕಣ್ಣೀಮನೆ ಸಾವಿರಾರು ಅಭಿಮಾನಿಗಳ ಮನಸ್ಸಿಗೆ ಲಗ್ಗೆ ಇಡುತ್ತಾರೆ. ಅಂದಿನಿಂದ ಕಣ್ಣೀಮನೆಗೆಂದೇ ಒಂದು ಪ್ರಸಂಗ ಖಾಯಮ್ ಆಗಿ ಇಡುವ ಅಘೋಷಿತ ರೂಢಿ ಶಿರಸಿಯ ಸಂಘಟಕರಲ್ಲಿ ಬೆಳೆಯುತ್ತದೆ.
ಪ್ರಸಂಗದ ಕೊನೆಗೆ ಸುಧನ್ವನು ಶ್ರೀ ಹರಿಯಲ್ಲಿ ಲೀನವಾಗಿ ರಂಗದಿಂದ ನಿರ್ಗಮಿಸಿಯಾಗಿರತ್ತದೆ. ರಂಗನಾಯಕ ಪದವು ಮಂಗಳಪದ್ಯವಾಗಿ ಹೊರಹೂಮ್ಮುತ್ತಿರುವಾಗ ಮತ್ತೆ ಆಗುತ್ತದೆ ಸುಧನ್ವನ ಪ್ರವೇಷ!!!!!??? ಮಂಗಳಪದ್ಯ ಮುಗಿದ ಮೇಲೆ ಮತ್ಯಾಕೆ ಸುಧನ್ವನ ಪ್ರವೇಶ ಅಂತಾ ಯೋಚ್ನೇನಾ!?
ಮತ್ತೇನಕ್ಕೂ ಅಲ್ಲ ಆ ಪ್ರೇಕ್ಷಕವರ್ಗಗಲ್ಲಿ ಕಣ್ಣೀಮನೆಯವರ ಧರ್ಮಪತ್ನಿಯವರೂ ಇದ್ದರು. ಕಣ್ಣಿಯ ಮೊದಲಮಗು ಅಪ್ಪನನ್ನು ಬಿಟ್ಟಿದ್ದು ಅಳುತಿತ್ತು. ಮಗುವಿಗೆ ಬೆಚ್ಚನೆಯ ಅಪ್ಪುಗೆ ಕೊಡಲು ತೊಟ್ಟ ವೇಷದಲ್ಲೇ ಕಣ್ಣಿ ಮುಂದೆಬಂದಿದ್ದರು. ಸುಧನ್ವನಾಗಿ ಮನಗೆದಿದ್ಗ ಕಣ್ಣಿ ಅಪ್ಪನಾಗಿ ಕಣ್ಮನಸೂರೆಗೊಂಡರು.
ಆ ಪ್ರಸಂಗದ ಕಣ್ಣಿಯ ಸುಧನ್ವ ಬಿಟ್ಚರೆ ಬೇರಾವ ಕಲಾವಿದರ ಹೆಸರುಗಳು ನೆನಪಿಲ್ಲ . ಕ್ಷಮೆ ಇರಲಿ. ಯಾರಾದರೂ ಅಂಬಾಗಿರಿ ಬಯಲಲ್ಲಿ ನಡೆದ ಅಂದಿನ ಆಟಕ್ಕೆ ಸಾಕ್ಷಿಯಾಗಿದ್ದರೆ ತಿಳಿಸಿ.
ಒಂದು ಕ್ಷಣವೂ ಕಣ್ಣುಮಿಟುಕಿಸದೇ ಯಕ್ಷಗಾನ ನೋಡುವಂತೆ ಮಾಡಿದ ಕಲಾವಿದ ನಮ್ ಕಣ್ಣೀಮನೆ. ನನ್ನಂತೇ ಯಕ್ಷಗಾನದ ಗಂಧಗಾಳಿ ಗೂತ್ತಿಲ್ಲದ ಸಾವಿರಾರು ಜನರಿಗೆ ಯಕ್ಷಗಾನದ ಹುಚ್ಚು ಹಿಡಿಸಿದ್ದು ಕಣ್ಣೀಮನೆಯ ನಾಟ್ಯ.
ಅಂದಹಾಗೇ ವರಶರಾವತೀ ತೀರದ ನಕ್ಷತ್ರ ಮಿಂಚಿ ಮರೆಯಾಗಿ ಅದಾಗಲೇ ಒಂದು ವರ್ಷ ಕಳೆಯಿತು. ಮುಗ್ವಾ ಗ್ರಾಮದ ಮುದ್ದಿನ ಮಾಣಿ ನೆನಪಾಗದ ದಿನಗಳಿಲ್ಲ. ಯಕ್ಷನಾಟ್ಯಮಯೂರನಾ ನೆನಪು ಅಜರಾಮರ. ಕಣ್ಣೀಮನೆಯ ನೆನಪಲ್ಲಿ ನಿಮ್ಮ ಕಣ್ಣು ತುಂಬಿಬಂದಿದ್ದರೆ ದಯಮಾಡಿ ತಡೆಹಿಡಿಯಬೇಡಿ…
ಹರಿಯಬಿಡಿ ಕಣ್ಣೀರನ್ನಾ ನಮ್ಮ ಕಣ್ಣೀಮನೆಯ ನೆನಪಲ್ಲಿ…
-ಪ್ರಮೋದ್ ಹೆಗಡೆ.
pramodhegde04@gmail.com
Facebook ಕಾಮೆಂಟ್ಸ್